ಹಕ್ಕಿಗಳ ಸಂಗದಲಿ
ರೆಕ್ಕೆ ಮೂಡುವುದೆನಗೆ;
ಹಾರುವುದು ಹೃತ್ಪಕ್ಷಿ
ಲೋಕಗಳ ಕೊನೆಗೆ!

ಹಾರಿ ಲೋಕದ ಕೊನೆಗೆ,
(ರಸದ ಪೈರಿನ ಮನೆಗೆ,)
ಬಾಣದಂತೆರಗುವುದು
ಹಾಲು ಜೇನ್ದೆನೆಗೆ!

ಅಲ್ಲಿ ಮೂಡುವನು ರವಿ:
ಆದರೀ ರವಿಯಲ್ಲ!
ಅಲ್ಲಿ ಹಾಡುವನು ಕವಿ:
ಈ ಕವಿಯು ಅಲ್ಲ!

ಕೇಳಿದರೆ, ಹೃತ್ಪಕ್ಷಿ
ಮೌನವನೆ ಹಾಡುವುದು!
ಮೂಕ ಸುಂದರ ಅಕ್ಷಿ
ಎದೆಯ ಕಾಡುವುದು!

೧೮-೯-೧೯೩೭