ಹೂವು! ಹೂವು! ಹೂವು! ಹೂವು!
ಮೇರುದಂಡದೆನ್ನ ಸಾವು
ಸುರುಳಿ ಬಿಚ್ಚಿತೆನಲು ಹಾವು,
ಅರಳುವಂತೆ ಸೊಗದ ನೋವು
ಅಲರುತಿಹುದು ಮಿದುಳ ಹೂವು!
ಅತ್ತಲಿತ್ತ ಸುತ್ತಲೆತ್ತ
ಹೂವು! ಹೂವು! ಹೂವು! ಹೂವು!
ಉಸಿರು ಒಡಲು ಎಲ್ಲ ಹೂವು!

ಕೆಂಪಿನೆಡೆಯೊಳಾನು ಕೆಂಪು;
ನೀಲಿಯೆಡೆಯೊಳಾನು ನೀಲಿ;
ಬಣ್ಣ ಬಣ್ಣವೀ ಕುವೆಂಪು
ತಾನೆ ನೋಳ್ಪ ನೋಟವಾಗಿ
ಹೂವಿನೊಂದು ತೋಟವಾಗಿ
ವರ್ಣ ಜಲಧಿಯಲ್ಲಿ ತೇಲಿ
ಮುಳುಗಿ ರಸ ಸಮಾಧಿಯಲ್ಲಿ
ಮೃತವ ದಾಂಟಿ ಅಮೃತವೀಂಟಿ
ಹೂವು! ಹೂವು! ಹೂವು! ಹೂವು!
ಹೂವು! ಹೂವು! ಹೂವು!…….

೨೨-೯-೧೯೫೦