ಈ ಆಟವನ್ನು ಹೆಣ್ಣು ಮತ್ತು ಗಂಡು ಮಕ್ಕಳು ಕೂಡಿ ಆಡಬಹುದು. ಆರೆಂಟು ಆಟಗಾರರು ನೆಲದ ಮೇಲೆ ಕುಳಿತು ತಮ್ಮ ಎರಡೂ ಹಸ್ತಗಳನ್ನು ಅಂಗೈ ಕೆಳಗೆ ಮಾಡಿ ನೆಲದ ಮೇಲೆ ಇಡುವರು. ಅವರಲ್ಲಿ ಆಟ ಬಲ್ಲವರೊಬ್ಬರು ಮಾತ್ರ ಒಂದೇ ಹಸ್ತವನ್ನು ನೆಲದ ಮೇಲಿಡಬೇಕು. ಇವರೇ “ಅಜ್ಜಿ” ಎಲ್ಲರೂ ಹಸ್ತಗಳನ್ನು ಒಂದರೆಡೆ ಇನ್ನೊಂದರಂತೆ ಸಮೀತ ಸಮೀಪ ಇಡಬೇಕು. ಅಜ್ಜಿ ತನ್ನ ಬಲ ಹಸ್ತವನ್ನು ಎಲ್ಲರ ಹಸ್ತದ ಬೆನ್ನ ಮೇಲೆ (ಬೆಂಗೈ ಮೇಲೆ) ಆಡಿಸುತ್ತ _______

“ಅಂಜಂಜೇ ಬೆಳೆ
ಬೋಳ್ ಬೋಳ್ ಕಂಟೆ
ಮಕ್ಳ ದೆವ್ರ ಹಳ್ಳ
ನಾನೆಟ್ಟಾ ಪಚ್ಚೇ ಕದ್ರಾಗ”

ಎಂದು ಹಾಡುವಳು. ಹಾಡು ಮುಗಿದ ಕೂಡಲೇ ಪ್ರತಿಯೊಬ್ಬರ ಬೆಂಗೈ ಯನ್ನು ಚಿವುಟಿ ಹಿಡಿದು ಎತ್ತಿ ಪ್ರತಿ ಬಾರಿಯೂ ಸೂಜ್ಯೊ? ದಬ್ಬಣವೊ? ಎಂದು ಕೇಳುವಳು. ಚಿವುಟಿಸಿಕೊಂಡವರು “ಸೂಜ” ಎಂದರೆ ಸಾವಕಾಶವಗಿಯೂ “ದಬ್ಬ” ಎಂದರೆ ಜೋರಾಗಿಯೊ ಚಿವುಟಿಕೊಂಡು ಹಾಗೆಯೇ ಎತ್ತಿ ಅವರ ಮತ್ತೊಂದು ಕೈಯ ತೋಳಿನ ಮೇಲೆ ಇಡುವಳು. ಪ್ರತಿಯೊಬ್ಬರ ಎರಡೂ ಕೈಗಳನ್ನು ಸೂಜ್ಯೊ? ದಬ್ಬಣವೊ? ಎಂದು ಕೇಳುತ್ತ ಕತ್ತರಿಯಾಕಾರದಲ್ಲಿ ಎತ್ತಿಟ್ಟ ಮೇಲೆ ಪ್ರತಿಯೊಬ್ಬರೂ ತಮ್ಮ ತಮ್ಮ ತೋಳುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಮೊಂಡುಗೈಯಲ್ಲಿ ಒಬ್ಬರಿಗೊಬ್ಬರು ಕುಳಿತಲ್ಲಿಂದಲೇ ತಿವಿದುಕೊಳ್ಳುತ್ತ___

“ಕೊ ಕೊ ಕನ್ಹೆಟಿ
ಉಕ್ದ ಬತ್ತಾ ತಿನ್ಹೆಟೀ
ನಿಮ್ಮಪ್ನ ಮನೆವಲ್ಲೆ
ಹಕ್ಕಿದೋರ್ ಬೆಟ್ಟಾ
ಸಾತ್ ನಾಯ್ಕನ ಗದ್ದೀಲೇ
೧ ಕದ್ರಾಗ್ಲೆ           ಗುಲ್ಲೂ ಗೊಬ್ಬೀ ಬಿದ್ದೀದ
ಹತ್ ನನ್ನ ರಂಡೇರಾ”

ಎಂದು ಎಲ್ಲರೂ ಹಾಡುತ್ತ ಹೊಡೆದಾಟ ಮುಗಿಸಿ ಕೈಬಿಡುವರು. ಹೀಗೆಯೇ ಆಟ ಮುಂದುವರಿಯುತ್ತದೆ.

ಎಲ್ಲರೂ ಕುಳಿತಲ್ಲಿಯೇ ತಮ್ಮ ಕೈಗಳನ್ನು ಮುಷ್ಠಿ ಕಟ್ಟಿ ಒಂದೆ ಮೇಲೊಂದರಂತೆ ಇಡುವರು. ಜನ ಹೆಚ್ಚಾದಷ್ಟು ಮುಷ್ಠಿಯ ಕಂಬ ಎತ್ತರಕ್ಕೆ ಬೆಳೆಯುತ್ತದೆ. “ಅಜ್ಜಿ” ಮಾತ್ರ ಒಂದೇ ಮುಷ್ಠಿಯನ್ನು ಕಂಬದ ಮೇಲಿಟ್ಟಿರುತ್ತಾಳೆ. ಅವಳು ಕೆಳಗಿನಿಂದ ಒಂದೊಂದೇ ಮುಷ್ಠಿಯನ್ನು ತೋರಿಸುತ್ತ “ಎದೆಂಥಾ ಕೊಡಾ”? ಎಂದು ಕೇಳುವಳು. ಉಳಿದವರು ಪ್ರತಿಬಾರಿಯೂ ಹಾಲಿ ಕೊಡಾ, ತುಪ್ಪದ ಕೊಡಾ, ಬೆಲ್ಲದ ಕೊಡಾ, ಕಾಯಿ ರಾಶಿ, ಅಕ್ಕಿಮುಡೆ ಎಂದು ಮುಂತಾಗಿ ಉತ್ತರಿಸುವರು. ಎಲ್ಲ ಮುಷ್ಟಿಗಳಿಗೂ ಹೆಸರು ಕೇಳಿದ ಮೇಲೆ ಅಜ್ಜಿ “ಓ ಅಲ್ ನೋಡಿ ನಿಮ್ಮಪ್ಪ ಬಂದಾ ಅಥವಾ ನಿಮ್ಮಣ್ಣ ಬಂದಾ” ಎಂದು ಸುಳ್ಳು ಹೇಳಿ ಅವರೆಲ್ಲ ಅಜ್ಜಿ ತೋರಿದತ್ತ ನೋಡುತ್ತಿದ್ದಾಗ, ಬಲಗೈ ಹಸ್ತವನ್ನು ಕತ್ತಿಯಂತೆ ನಟಿಸಿ “ಕಟ್ ಕಟೋಲ್” ಎನ್ನುತ್ತ ಕಡಿಯುವಳು. “ನನ್ ತಲಿಯೇ ದೊಡ್ಡಾ, ನನ್ನ ತಲಿಯೇ ದೊಡ್ಡಾ” ಎನ್ನುತ್ತಾ ತನ್ನ ತಲೆಯನ್ನು ತನ್ನ  ಎರಡೂ ಕೈಗಳಿಂದ ನೇವರಿಸುವಳು. ಉಳಿದವರೂ ಅಜ್ಜಿ ಹೇಳಿದಂತೆಯೇ ಹೇಳುತ್ತಾ ಅವಳಂತೆಯೇ ತಮ್ಮ ತಲೆ ನೇವರಿಸಿಕೊಳ್ಳುವರು.

ಹೀಗೆಯೇ ಆಟ ಇನ್ನೂ ಮುಂದುವರಿಯುತ್ತದೆ.

ಎಲ್ಲರೂ ತಮ್ಮ ಬಲಪಾದಗಳನ್ನು ಮೇಟ್ ಗತ್ತಿಯಂತೆ ನೆಟ್ಟಗೆ ನಿಲ್ಲಿಸಿ ಎರಡೂ ಕೈಬೊಗಸೆಗಳನ್ನು “ಕಾಯಿಕಡಿ” ಯಂತೆ ಹಿಡಿದು ತೆಂಗಿನಕಾಯಿ ಕಿರಿ (ತುರಿ) ಯುವುದನ್ನು ನಟಿಸುವರು. ನಂತರ ಅಜ್ಜಿಯ ಹೇಳಿಕೆಯಂತೆ ಎಲ್ಲರೂ ಹಿಟ್ಟು ಕಲಸಿದಂತೆ ನಟಿಸುವರು. ಅಜ್ಜಿ ಸ್ವಲ್ಪ ಸ್ವಲ್ಪ ಹಿಟ್ಟು ತೆಗೆದು ಪ್ರತಿಯೊಬ್ಬರ ಎರಡೂ ಅಂಗೈ ಮೇಲೆ ರೊಟ್ಟಿ ಬಡಿದಂತೆ ನಟಿಸಿ, “ಮುಚ್ಕೊ” “ಮುಚ್ಕೊ” ಎನ್ನುತ್ತ ಅವರ ಕೈಗಳನ್ನು ಬೆನ್ನ ಹಿಂದೆ ಅಡಗಿಸಿಕೊಳ್ಳಲು ಹೇಳುವಳು. ಹೀಗೆ ಎಲ್ಲರೂ ರೊಟ್ಟಿ ಬಡಿದ ಕೈಗಳನ್ನು ಅಡಗಿಸಿಕೊಂಡ ಮೇಲೆ “ರೊಟ್ಟಿ ಬೇಯಲಿ” ಎಂದು ಹೇಳಿ ತಾನು ಮಲಗಿದಂತೆ ನಟಿಸುವಳು. ತುಸು ಹೊತ್ತಿನ ಮೇಲೆ ಉಳಿದವರು “ಅಜ್ಜಿ ಅಜ್ಜಿ ರುಟ್ಟೆ ಬೆಂತ” ಎನ್ನವರು. ಅವರು ಮೂರು ಸಾರೆ ಹಾಗೆ ಹೇಳಿದ ಮೇಲೆ, ಅಜ್ಜ ಕಣ್ಣು ತಿಕ್ಕುತ್ತಾ ಎದ್ದು ಮಕ್ಕಳ ಒಂದೊಂದೇ ಕೈ ಹಿಡಿದು ಬೆರಳು ಬಿಡಿಸಿ ಅಂಗೈಯಲ್ಲಿದ್ದ ರೊಟ್ಟಿಯನ್ನು ಮುರಿದು ತಿಂದು, ರುಚಿ ನೋಡಿದಂತೆ ನಟಿಸಿ, ಪ್ರತಿಯೊಬ್ಬರ ರೊಟ್ಟಿಯ ಬಗ್ಗೆಯೂ ಒಂದೊ ಂದು ಮಾತು ಹೇಳುವಳು “ನಿನ್ ತಲೆ ಕುಟ್ಟೇ ಹೋಗ್ಲೆ” ಎನ್ನುತ್ತ ಪ್ರತಿಯೊಬ್ಬರ ಹಣೆಯ ಮೇಲೆಯೊ ಚಿಟಿಕೆ ಹೊಡೆಯುವಳು. ಮತ್ತೆ ಸ್ವಲ್ಪ ಹೊತ್ತು ರೊಟ್ಟಿ ಬೇಯಲು ಬಿಟ್ಟು ಮಲಗುವಳು. ಮತ್ತೆ ಎದ್ದು ಎಲ್ಲರ ಕೈ ರೊಟ್ಟಿಗಳನ್ನೂ ನೋಡಿ ಸಂತೋಷ ವ್ಯಕ್ತಪಡಿಸುವಳು. “ಗನಾ ಗಂಡ ಸೆಕ್ಲೆ” ಆಯ್ದಾಗ್ಲೆ ಎಂದೆಲ್ಲಾ ಹೇಳುತ್ತ ಹಣೆಯ ಮೇಲೆ ಚಿಟಿಕೆ ಹಾಕಿ ಹರಸುವಳು. ಎಲ್ಲ ರೊಟ್ಟಿಗಳನ್ನು ತೆಗೆದು ಅಜ್ಜಿ ಸಿಕ್ಕದ ಮೇಲೆ ಇಟ್ಟು, ಉಳಿದವರನ್ನು ಸೊಪ್ಪು, ಹುಲ್ಲು ತರಲು ಅಜ್ಜಿ ಬೆಟ್ಟಕ್ಕೆ ಕಳಿಸುವಳು. ಹುಲ್ಲು ಸೊಪ್ಪು ತಂದು ದಣಿದು ಬಂದ ಅವರು “ಅಜ್ಜೀ ಅಜ್ಜೀ ರುಟ್ಟಿ ಕುಡ” ಎನ್ನುವರು. ಆದರೆ ಅಜ್ಜಿ “ದನೂ ಕಟ್ಟೀಕ್ ಬರಿ, ಹಾಲ್ ಹಿಂಡ್ಕಾ ಬರಿ” “ನೀರಾ ತಕಾ ಬರಿ”, ಎಂದು ಒಂದರ ಹಿಂದೊಂದರಂತೆ ಕೆಲಸ ಹೇಳುವಳು. ಅಜ್ಜಿ ಹೇಳಿದ ಎಲ್ಲ ಕೆಲಸವನ್ನೂ ಪೂರೈಸಿ ಬಂದು, ಅಜ್ಜಿ ಹತ್ತರ ರೊಟ್ಟಿ ಕೇಳುವರು. ಅಜ್ಜಿ “ಓ ಅಲ್ಲೆ ಸಿಕ್ದ್ ಮೆನೀದ, ತಕ್ಕಾ ತಿನ್ನಿ” ಎನ್ನುವಳು. ಎಲ್ಲರೂ ಆಶೆಯಿಂದ ಹೋಗಿ ನೋಡುವರು. ಅಲ್ಲೇನಿದೆ? “ಅಜ್ಜೀ ಅಜ್ಜೀ ರುಟ್ಟಿಲ್ಲಾ” ಎನ್ನುತ್ತಾ ಹಿಂತಿರುಗುವರು. “ಅಯ್ಯೋ ಮಗ್ನೆ ಅಜ್ಜ ಗೌಡ್ನ ಬಿಕ್ ತಿಂದ್ಕಾ ಹೋಯ್ತು” ಎನ್ನುವಳು ಅಜ್ಜಿ. ಇಲ್ಲಿಗೆ ಆಟ ಮುಗಿಯಿತು.