ಹಸುಮಗುವನ್ನು ತಾಯಿ ಇಲ್ಲವೆ ಹಿರಿಯರೊಬ್ಬರು ತೊಡೆಯ ಮೇಲೆ ಕುಳ್ಳಿರಿಸಿಕೊಂಡು ಆನೆ ಆಡಿಸುತ್ತಾರೆ. ಆಡಿಸುವವರು ನೆಲದ ಮೇಲೆ ಕುಳಿತುಕೊಂಡು ಕಾಲು ನೀಡಬೇಕು. ನೀಡಿದ ಬಲಗಾಲ ಮೇಲೆ ಎಡಗಾಲನ್ನು ಎತ್ತಿಟ್ಟು, ಮಗುವನ್ನು ತೊಡೆಯ ಮೇಲೆ ಕುಳ್ಳಿರಿಸಿ, ಬಲಗೈ ಹಸ್ತವನ್ನು ಮಗುವಿನ ಎದೆಯ ಮೇಲೆಯೂ ಎಡಗೈ ಹಸ್ತವನ್ನು ತಲೆಯ ಬದಿಗೂ ಇಟ್ಟುಕೊಂಡು ಆಚೆ ಈಚೆ ಜೋಲಿ ಬಿಡುತ್ತಾ

“ಆನೇ ಆನೇ
ಯಾವೂರಾನೇ
ಕೊಲ್ಲಾಪೂರಾನೆ
ಇಲ್ಲಿಗೆಕ್ ಬಂತ
ಹಾದಿ ತಪ್ಪೇ ಬಂತ
ಬೀದಿ ತಪ್ಪೇ ಬಂತ
ಆನೀ ಕೊಟ್ಟೊಕ್ ಕಂಬಿಲ್ಲಾ
ಆನೀ ಕಟ್ಟೊಕ್ ಬಳ್ಳಿಲ್ಲಾ
ಆನೀ ಕಟ್ಟರೆರಿಲ್ಲಾ
ಬಚ್ಲ ಬಳ್ಳಿ ಉಗ್ತನ್ನಿ
ತೇಗ್ನ ಕಂಬಾ ಕಡ್ತನ್ನಿ
ಹಾದೀ ಲಾಡೂ ಬಾಲಯ್ನಾ ಉಗ್ತನ್ನಿ” ಎನ್ನುವರು.

ಮಗು ನಕ್ಕು ನಲಿಯುವದು. ಆಟದ ಮೋಡಿಯಲ್ಲಿ ಮುಳುಗಿ ಮತ್ತೆ ತಾನೇ ಆನೆಯಾಡಲು ಹವಣಿಸುವದು.

ಆನ್ಯೋ ಆಆ ಆನ್ಯೋ

“ಆನ್ ಬಂತಾನೆ
ಆನೀ ಕಟ್ಟೊಕ್ ಕಂಬಿಲ್ಲೆ
ತೊಟ್ಳ ಬಳ್ಳೀಗ್ ನೇಣಿಲ್ಲೆ
ರಾಮದೇವ್ರ ಮರಿಯಾನೆ
ಆನ್ಯೋ ಆನ್ಯೋ”

ಎಂಬ ಹಾಡು ಹೇಳುತ್ತ ಮೇಲಿನಂತೆ ಆನೆಯಾಡಿಸುವರು.

ಕೆಲವರು ಕೆಳಗಿನಂತೆ ಆನೆಯ ವರ್ಣನೆ ಮಾಡುತ್ತ ಮಗುವನ್ನಾಡಿಸುವರು:

ಆನ್ ಬಂತಾನೆ
ಗೆರ್ ಶಿ ಕೆಂವಿ ಹೊತ್ಕೊಂಡು
ಅಂಬೆಗಾಲಿಕ್ಕುತ
ಆನ್ ಬಂತಾನೆ…………………………….