ಆಟಗಾರರಲ್ಲಿ ಕೆಲವರು ಸಾಲಾಗಿ ಕುಳಿತುಕೊಳ್ಳುವರು. ಕೆಲವರು ಒಂದೆಡೆ ಅವಿತುಕೊಳ್ಳುವರು. ಸಾಲಾಗಿ ಕುಳಿತವರು ಬೆಳೆ. ಅವಿತುಕೊಂಡವರು ಕಳ್ಳರು, ಮತ್ತೊಬ್ಬಳು ಅಜ್ಜಿ.

ಅಜ್ಜಿ ಕುಳಿತುಕೊಂಡವರ ಸುತ್ತ ಕುಂಟಿಕೊಂಡು ತಿರುಗುತ್ತಾ “ಬೇಲಿ ಕಟ್ದೆ, ಬೇಲಿ ಕಟ್ದೆ” ಎನ್ನುತ್ತಾ ಒಂದು ಬಾರಿ ಸುತ್ತುವಳು. “ಗೊಬ್ಬರ ಹಾಕ್ದೆ, ಗೊಬ್ಬರ ಹಾಕ್ದೆ” ಎನ್ನುತ್ತ ಗೊಬ್ಬರ ಹಾಕಿದ್ದನ್ನೂ, ನೆಲಾ ಕೊಚ್ದೆ” ಎನ್ನುತ್ತ ನೆಲ ಅಗೆದದ್ದನ್ನೂ ಹೇಳುತ್ತಾ ಅದೇ ರೀತಿಯಾಗಿ ನಟಿಸುವಳು. ಇದೇ ರೀತಿ ತಾನು ಮಾಡಿದ ಕಾರ್ಯವನ್ನು ಬಾಯಲ್ಲಿ ಹೇಳುತ್ತಾ ಹಾಗೂ ಅದನ್ನು ನಟಿಸುತ್ತಾ ಒಂದು ಸುತ್ತು ತಿರುಗುವಳು. ಗೊಬ್ಬರ, ನೀರು, ಬೀಜ ಹಾಕಿದ್ದನ್ನು ನಟಿಸಿದ ಮೇಲೆ, ಕುಂಬಳ ಬಳ್ಳಿ ಹೂ, ಕಾಯಿ, ಇದು ಹಣ್ಣು (ಬಲಿತಿದ್ದು) ಬಿಟ್ಟುದನ್ನು ತೋರಿಸುತ್ತಾ ಸುತ್ತುವಳು. ಇದು ಹೂ, ಇದೆ ಕಾಯಿ, ಇದು ಹಣ್ಣು ಇದು ಹಂಪಲ” ಎನ್ನುವಳು. ಇದಾದ ಮೇಲೆ ಅಜ್ಜಿ ಕೆಲಸಕ್ಕೆ ಹೋಗುವಳು. ಕಳ್ಳರು ಬೆಳೆದ ಕುಂಬಳವೊಂದನ್ನು ಒಯ್ಯುವರು, ಅಜ್ಜಿ ಬಹಳ ಮರುಗಿ ಮತ್ತೆ ಕೆಲಸಕ್ಕೆ ಹೋಗುವಳು. ಮತ್ತೆ ಕುಂಬಳ ಮಾಯವಾಗುವದು. ಪ್ರತಿಬಾರಿಗೂ ಕುಂಬಳವೆಂದು ಒಬ್ಬೊಬ್ಬ ಆಟಗಾರರನ್ನು ಕಳ್ಳರು ಒಯ್ಯುವರು. ಕಲ್ಳ ಕುಂಬಳ ಒಯ್ಯಲು ಬಂದಾಗ ಪ್ರತಿಬಾರಿಗೂ ಉಳಿದ ಕುಂಬಳಗಳೆಲ್ಲ “ಚಿಂವ್ ಚಿಂವ್” ಎಂದು ಒದರುತ್ತಾರೆ. ಎಲ್ಲ ಕುಂಬಳಗಳನ್ನು ಕಳ್ಳರು ಕದ್ದುಕೊಂಡು ಹೋದ ಮೇಲೆ ಅಜ್ಜಿ ಕಳ್ಳನಲ್ಲಿಗೆ ಹೋಗಿ ನಮ್ಮ ಮನೆಯಲ್ಲಿ “ಸಮಾರಾಧನೆ” ಊಟ ಇದೆ, ಒಂದು ಕುಂಬ್ಳಾ ಕೊಡು” ಎನ್ನುವಳು, ಕಳ್ಳ ಕೊಡುತ್ತಾನೆ. ಕಳ್ಳನನ್ನೂ ಊಟಕ್ಕೆ ಕೆರೆದು ಬರುವಳು. ಅಜ್ಜಿಗೆ ಕಳ್ಳ ಕೊಟ್ಟಿದ್ದು ತನ್ನ ಕುಂಬಳವೇ ಎಂದು ಗುರುತು ಹಿಡಿಯುತ್ತಾಳೆ. ಊಟಕ್ಕೆ ಬಂದ ಎಲ್ಲರಿಗೂ ಇದು ಅನ್ನ, ಇದು ಪಲ್ಯ, ಎನ್ನುತ್ತಾ ಎಲ್ಲ ಅಡಿಗೆಯ ಹೆಸರನ್ನು ಹೇಳುತ್ತ ಬಡಿಸುತ್ತಾಳೆ. ಕಳ್ಲನಿಗೆ ಮಾತ್ರ ಚರಟೆ (ಮಳೆಗಾಲದ ಹುಳು) ಹಾಕುತ್ತಾಳೆ.