ಮಳೆ ಬಿದ್ದು ಒಂದೆರಡು ದಿನ ಕಳೆದು ಬಿಸಿಲು ಬಿದ್ದಾಗ ಅಥವಾ ಮಳೆಗಾಲ ತೀರಿದ ನಂತರ ಮಣ್ಣಿನಲ್ಲಿ ತೇವಾಂಶ ಇನ್ನೂ ಇರುತ್ತದೆ. ಅಂತಹ ಮಣ್ಣನ್ನು ಗರಟೆಯಿಂದ ಕೆರೆದು ಮಕ್ಕಳು ಕೂಡಿಸಿಕೊಳ್ಳುವರು. ಒಂದು ಗರಟೆ ತುಂಬ ಆ ಮಣ್ಣನ್ನು ಒತ್ತಿ ಒತ್ತಿ ತುಂಬಿಕೊಳ್ಳುವರು. ತುಂಬಿದ ಆ ಗರಟೆಯನ್ನು ನೆಲದ ಮೇಲೆ ಡಬ್ಬು ಹಾಕಿ ಇನ್ನೊಂದು ಬರಿದಾದ ಗರಟೆಯಿಂದ ಡಬ್ಬು ಹಾಕಿದ ಗರಟೆಯ ಮೇಲೆ ಬಡಿಯುತ್ತ:

“ಕುಪ್ಪಾ ಕುಪ್ಪಾ ಕೊಳಿಗ್ (ಕುಳಿಗ್) ಬಾ
ನಿತ್ತಲೆದ್ರಿ ನೀರಿಗೆ ಬಾ
ಕಾಯ್ ಕಡಿ ಕಚ್ಕಾ ಬಾ”

ಎಂದು ಹಲವಾರು ಬಾರಿ ಅದನ್ನೇ ಹೇಳಿ ಚೆನ್ನಾಗಿ ಬಡಿದು ಸಾವಕಾಶವಾಗಿ ಗರಟೆಯನ್ನು ಎತ್ತುತ್ತಾರೆ. ಒಳಗೆ ಒಂದು ಸುಂದರ ಮಣ್ಣಿನ ಗುಮ್ಮಟ ತಯಾರಾಗುತ್ತದೆ. ಅಂತಹ ಹಲವಾರು ಕುಪ್ಪಗಳನ್ನು ಮಾಡಿ ಅವುಗಳ ಸುತ್ತಲೂ ಮಣ್ಣಿನ ಪಾಗಾರ ಕಟ್ಟಿಕೊಳ್ಳುವರು.