ಆರೆಂಟು ಆಟಗಾರರು ಸಾಲಾಗಿ ಕುಳಿತಿರುತ್ತಾರೆ. ಇವರೇ ಗೊವೆ ಬೀಜ. ಬೇರೆ ಇಬ್ಬರಲ್ಲಿ ಒಬ್ಬನು ರಾಜ. ಇನ್ನೊಬ್ಬ ಅಜ್ಜಿ.

ರಾಜ ಕುಳಿತವರ ತಲೆ ಮುಟ್ಟುತ್ತಾ ಸುತ್ತಿರುಗುತ್ತಾನೆ. ಅಷ್ಟರಲ್ಲಿ ಅಜ್ಜಿ ಬಂದು “ರಾಜಾ ರಾಜಾ ಗೊವೆ ಬೀಜಾಯ್ದೇನೋ” ಎಂದು ಕೇಳುವಳು. ಆಗ ರಾಜ ಈಗ್ ಮಾತ್ರ ಬೀಜಾ ಹಾಕಿದ್ದೆ: ಇನ್ನೂ ಹುಟ್ಟಿದ್ದಿಲ್ಲೆ ಅನ್ನುವನು. ರಾಜ ಗೊಬ್ಬರ ನೀರು ಹಾಕಿ ಗಿಡಗಳನ್ನು ಸಲಹುತ್ತಿದ್ದಾಗ ಅಜ್ಜಿ ಬಂದು “ರಾಜಾ ರಾಜಾ ಗೊವೆ ಬೀಜಾಯ್ದೇನೋ” ಎನ್ನುವಳು. “ಈಗ್ ಮಾತ್ರ ಇಷ್ಟಿಷ್ಟ ಶಶಿ ಆಯ್ದು” ಅನ್ನುತ್ತಾನೆ. ಆಗ ಅಜ್ಜಿ “ನೀ ಸತ್ತೆಬಂದಿ” ಎಂದು ಬಯ್ದು “ನಾಕ್ ದಿನ್ನ ಮೆನಬತ್ತೆ” ಎಂದು ಹೇಳಿ ಮತ್ತೆ ಬಂದು, ಹಾಗೆಯೇ ರಾಜನನ್ನು ಪ್ರಶ್ನಿಸುವಳು. ರಾಜ ಗಿಡದ ಬೆಳವಣಿಗೆಯ ಒಂದೊಂದೇ ಹಂತವನ್ನು ತೋರುತ್ತಾ ಇನ್ನೂ ಬೀಜವಾಗಿಲ್ಲ – ಎನ್ನುವನು. ಕೊನೆಯ ಬಾರಿಗೆ ರಾಜ “ಆಯ್ದು ತಕ್ಕಂಡ್ ಹೋಗು” ಎನ್ನುವನು. ಮೊದಲು ಒಂದು ಸಣ್ಣ ಬೀಜ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದ ಅಜ್ಜಿ ಒಂದೊಂದಾಗಿ ಎಲ್ಲ ಬೀಜಗಳನ್ನೂ ಒಯ್ಯುವಳು.

ಅನಂತರ ರಾಜನ ಹತ್ತರ ಬಂದು “ಗೊವೆ ಬೀಜಾ ಕಡ್ಕಂಡು ತಿಂಬಾ” ಎನ್ನುತ್ತಾ ಬರುತ್ತಾಳೆ. “ನಿಂಗಿಷ್ಟು ನಂಗಿಷ್ಟು ತಂಗ್ ದೊಡ್ಡು ಎಂಗ್ ದೊಡ್ದು” ಎಂದು ಜಗಳವಾಡಿ, ಅಜ್ಜಿ ತಾನೇ ದೊಡ್ಡ ಪಾಲು ಇಟ್ಟುಕೊಂಡು ಕಡಿದು ತಿನ್ನುವಳು. ಇದೆಲ್ಲವನ್ನೂ ಕ್ರಿಯಾತ್ಮಕವಾಗಿ ನಟಿಸುತ್ತಾ ಆಟವಾಡುವರು.