ಮಳೆಗಾಲದಲ್ಲಿ ಇಲ್ಲವೆ ಮಳೆ ಇಲ್ಲದಾಗ, ತೇವಾಂಶ ಮಣ್ನನ್ನಾಗಲೀ, ಅಥವಾ ಸಮುದ್ರದ ದಂಡೆಯ ಮೇಲೆ ಇರುವ ಮರಳನ್ನಾಗಲೀ ಉಪಯೋಗಿಸಿ ಮಕ್ಕಳು ಹಕ್ಕಿ ಗೂಡು ಕಟ್ಟುವರು. ಅಂತಹ ಮಣ್ಣನ್ನೆಲ್ಲ ಒಂದೆಡೆ ತಂದು ತಮ್ಮ ಒಂದು ಪಾದದ ಮೇಲೆ ಆ ಮಣ್ಣನ್ನು ಪೇರಿಸುವರು. ಅದು ಪಾದದ ಮೇಲ್ಭಾಗದ ಮೇಲೆಲ್ಲಾ ಸರಿಯಾಗಿ ಕುಳಿತುಕೊಳ್ಳುವಂತೆ ಅದನ್ನು ಕೈಯಿಂದ ಸಾವಕಾಶವಾಗಿ ತಟ್ಟುವರು. ಅನಂತರ ಸಾವಕಾಶವಾಗಿ ಕಾಲನ್ನು ಹಿಂದಕ್ಕೆ ಎಳೆಯುವರು. ಆಗ ಪಾದದ ಘನದಷ್ಟು ಭಾಗ ಪೊಳ್ಳಾಗುವದು. ಅದೇ ಹಕ್ಕಿ ಗೂಡು. ಹಕ್ಕಿ ಗೂಡಿನ ಬಾಗಿಲನ್ನು ತುಸು ಬೆಳೆಸಿ ಗೂಡಿನ ಸುತ್ತ ಮಣ್ಣಿನ ಪಾಗಾರ ಹಾಕಿ ಅಂಗಳ ಮಾಡಿ ಚಿಕ್ಕ ಚಿಕ್ಕ ಕೋಲುಗಳನ್ನು ನೆಟ್ಟು ಚಿಕ್ಕ ಚಪ್ಪರ ಹಾಕುವರು. ಗೂಡು ಕಟ್ಟಿದವರು ಆ ಗೂಡಿನಲ್ಲಿ ರಾತ್ರಿಯ ಹೊತ್ತಿಗೆ ಹಕ್ಕಿ ಬಂದು ವಾಸಿಸಿ ಮೊಟ್ಟೆ ಇಟ್ಟು ಮರಿ ಮಾಡುವದು ಎಂದು ಮುಂತಾಗಿ ಕಲ್ಪಕತೆಕಟ್ಟಿ ಕುತೂಹಲದಿಂದ ಬಾಯಿಕಳೆದು ಕುಳಿತ ಮಕ್ಕಳಿಗೆ ವಿವರಿಸುವರು