ಒಬ್ಬನು ಸಂಗಡಿಗರ ಜೊತೆಗೆ ಹರಿಗೆ ಬಿತ್ತುತ್ತಾನೆ,. ಅವನ ಸಂಗಡಿಗರಲ್ಲಿ ಕೆಲವರು ಕಳ್ಳರಿರುತ್ತಾರೆ. ಹರಿಗೆಯನ್ನು ನೆಲ ಅಗೆದು, ಗೊಬ್ಬರ ಹಾಕಿ, ನೀರು ಹನಿಸಿ ಬಿತ್ತುತ್ತಾನೆ. ಅದು ಬೆಳೆದ ಬಗೆಯನ್ನು ಜೊತೆಗಾರರಿಗೆ ತೋರಿಸಿ, ಇಷ್ಟು ದೊಡ್ಡವಾಯಿತು ಕೊಯ್ಯಲೋ, ಇಷ್ಟು ದೊಡ್ಡವಾಯಿತು ಕೊಯ್ಯಲೋ, ಎಂದು ಕೇಳುತ್ತಾನೆ. ಅವನ ಸಂಗಡಿಗರು ಪ್ರತಿಬಾರಿಗೂ ಈಗ ಬೇಡ, ಈಗ ಬೇಡ ಅನ್ನುತ್ತಾರೆ.

ಒಂದು ಸಾರೆ ಹುಳಿಗೆಂದು ಸ್ವಲ್ಪ ಹರಿಗೆಯನ್ನು ಆತನು ಮನೆಗೆ ಒಯ್ಯುತ್ತಾನೆ. ಇದನ್ನು ನೋಡಿ ಸಂಗಡಿಗರು ಆತನು ಇಲ್ಲದಾಗ ಹರಿಗೆ ಕೊಯ್ದು ಒಯ್ಯುತ್ತಾರೆ. ಬಿತ್ತಿದವನು ಓಡಿಬಂದು ಹರಿಗೆ ಕೈಯಲ್ಲಿದ್ದಾಗಲೇ” ಕಳ್ಳರನ್ನು ಹಿಡಿಯುತ್ತಾನೆ. ಹೆಚ್ಚು ಜನರನ್ನು ಹಿಡಿದರೆ ಗಡಿ ಆರಿಸುವ ವಿಧಾನದಿಂದ ಕಳ್ಳನನ್ನು ಆರಿಸುತ್ತಾರೆ. ಬಿತ್ತಿದವನು ಯಾರನ್ನೂ ಹಿಡಿಯಲು ಶಕ್ಯನಾಗದೇ ಹೋದರೆ ಅವನೇ ಮತ್ತೆ ಹರಿಗೆ ಬಿತ್ತಬೇಕು. ಇಲ್ಲವಾದರೆ ಕಳ್ಳ ಹರಿಗೆ ಬಿತ್ತಬೇಕು.