ಏನು ಆನಂದವನು ತುಂಬಿಟ್ಟುಕೊಂಡಿರುವೆ
ನಿನ್ನೆದೆಯ ಹೊಂಬೆಳ್ಳಿಗಿಂಡಿಯಲ್ಲಿ?
ಕೈಲಾಸ ವೈಕುಂಠಗಳೆ ಕರಗಿ ಹರಿದುವೈ
ಕ್ಷೀರಾಬ್ಧಿಯಂತೆ ಮೈಕಂಡಿಕಂಡಿಯಲ್ಲಿ,
ನನ್ನ ಕೈ ಸೋಂಕಿದಲ್ಲಿ!

ಶ್ವೇತ-ಶಶ ಶರೀರ ಸದೃಶ
ನಿನ್ನ ವಕ್ಷದಮೃತ ಕಲಶ!
ಅಧರಕದರ ಮೃದಲ ಸ್ಪರ್ಶ
ದಿವ್ಯ ಕೃಪಾ ಮಧುರಹರ್ಷ!
ನಿಮಿಷವೊಂದೆ ಆಯ್ತು ವರ್ಷ!
ಒಂದೆ ನಿಮಿಷವಾಯ್ತೆ ವರ್ಷ?