ಜಗವನಾಳುವ ತಾಯೆ ನನ್ನನಾಳುವ ಮಾಯೆ
ತಾನಾಗಿ ಬಂದಿಹಳು ನನ್ನ ಜಾಯೆ!
ಭೂಮೆ ತಾನಾಗಿಯೂ ಅಲ್ಪೆ ತಾನೆನುವೋಲು
ಒಲಿದಪ್ಪಿ ಮಲಗಿಹಳು ಈ ಕೃಪಾಲು!

ಸೂರ್ಯ ನಕ್ಷತ್ರಾದಿ ಭೂವ್ಯೋಮ ಸಾಗರವ
ಮಾಡಿ ಆಡಿಪ ದಿವ್ಯೆ ಆ ಸರ್ವಶಕ್ತೆ
ಇಲ್ಲಿ ಅಬಲೆಯೆ ಆಗಿ, ಒಲಿದ ಹೆಂಡತಿಯಾಗಿ,
ಮಕ್ಕಳೊಂದಿಗೆ ಚಿಕ್ಕ ಸಂಸಾರಾನುರಕ್ತೆ!

ಸರ್ವಾಂತಾತ್ಮೆ ಆ ಮುಕ್ತೆ, ಭಕ್ತಿಗೆ ಸಿಲುಕಿ,
ತೋಳ್ಸೆರೆಗೆ ಇಳಿದಿಹಳು ತನ್ನ ತಾಂ ತೆತ್ತು;
ಅಲ್ಲಿ ಸಿರಿಯಡಿಗೆರಗಿ ಪೂಜಿಸುವ ನನಗಿಲ್ಲಿ
ಚೆಂದುಟಿಯ ಜೇನೀಂಟುವವಕಾಶವಿತ್ತು!

ಅದು ಪೂರ್ಣ; ಇದು ಪೂರ್ಣ; ಪೂರ್ಣದಂಶವು ಪೂರ್ಣ;
ಪೂರ್ಣವೆರಡರ ನಡುವೆ ನಾನೂ ಸುಪೂರ್ಣ ಪೂರ್ಣ!