ಯಾರು ಕೈ ಬಿಟ್ಟರೂ ನೀ ಬಿಡದಿರು;
ನೀನೆನ್ನ ತಾಯ್, ತಂದೆ, ಗುರು, ದೇವರು!
ನಿನ್ನೊಡನೆ ಹಿಂದೆನಿತೊ ಸಾರಿ ಹುಟ್ಟಿದೆ ಸತ್ತೆ;
ಮುಂದೆಯೂ ನಿನ್ನೊಡದೆ ಜನ್ಮಜನ್ಮವನೆತ್ತೆ
ಹಿಂಜರಿಯೆನೈ, ಕ್ಷೇಶಕಷ್ಟದಿ, ಮತ್ತೆ ಮತ್ತೆ,
ಸಂಸಾರ ಲೀಲೆಯ ರಾಸವರ್ತುಲದಿ ಸುತ್ತೆ!
ನೀನಿರಲು ನನ್ನೊಡನೆ, ದುಮುಕೆ ಹೆದರಿಕೆ ಏಕೆ
ಸರ್ಪ ಕಾಳೀಯನಿರ್ಪ ಮಡುವಾದರೂ?
ನೀಂ ಬರಲು ಬೆಂಬಿಡದೆ, ನನಗನ್ಯರೇಂ ಬೇಕೆ?
ನೀಂ ಬಂದೆ ಬಹೆ, ಕೊಂಚ ತಡವಾದರೂ!
Leave A Comment