ನೀ ಆರು ಕಾಸು, ನಾ ಮೂರು ಕಾಸು:
ಕೂಡಿದರೆ ನಮ್ಮ, — ರೂಪಾಯಿ ಕೋಟಿ!
ನೀ ತರುವೆ ಸ್ವಲ್ಪ, ನಾ ತರುವುದಲ್ಪ:
ಸೇರಿದರೆ ನಾವು, — ನಾಚುವುದು ಕಲ್ಪ!
ನಿಂದೊಂದು ಮುತ್ತು, ನಂದೊಂದು ಮುತ್ತು;
ಅಪ್ಪಿದರೆ, ಮೊತ್ತ? — ವಿತ್ತೇಶನೆತ್ತ!
ನಾನೊಂದು ಬೇಸರ, ನೀನೊಂದು ಆಸರ:
ಸಂಗಮಿಸೆ ನಾವು, — ಆನಂದ ಕಾಸಾರ!
ನಾನೊಂದು ಕ್ಷುದ್ರ, ನೀನೋ ದರಿದ್ರ:
ಒಟ್ಟಾದರಾಹಾ, — ಸಂಪತ್ಸಮುದ್ರ!
ನೀನೊಂದು ಪೂಜ್ಯ, ನಾನೊಂದು ತ್ಯಾಜ್ಯ:
ಒಂದಾಗಲೆರಡೂ, — ಪೂರ್ಣತಾ ರಾಜ್ಯ!
Leave A Comment