ನಿನ್ನ
ಮೆಯ್ಯ ಮೈದಾನದಲಿ ನಾನು ಕ್ರೀಡಾಪಟು;
ನಿನ್ನ
ವಕ್ಷಶೃಂಗಾಶ್ರಮದಿ ನಾ ತಪಂಗೈವ ವಟು;
ನಿನ್ನ
ಒಂದೊಂದು ಅಂಗವೂ ನನ್ನ ಆನಂದಕುಟಿ;
ಅಲ್ಲಿ
ಹಾಲುಜೇನನೆ ಹೀರಿ ಮೈಮರೆವುದೆನ್ನ ತುಟಿ!

ಎಲ್ಲಿ ಆಸ್ವಾದಿಸಿದರಲ್ಲಿ ಸಕ್ಕರೆ;
ಎಲ್ಲಿ ಆಘ್ರಾಣಿಸಿದರಲ್ಲಿ ಮಲ್ಲಿಗೆ;
ಸರೋಜಕ್ಕೆ ಸೆಣಸುತಿರೆ ಚಕ್ರವಾಕ
ಪುಂಡರೀಕವನೇರೆ ಚಂಚರೀಕ,
ನೀ
ರಕ್ತಕೋಕನದ ಮಕರಂದ ಕೋಶ!
ನಾ
ಪ್ರೇಮದ್ವಿರೇಫ ಹೇಮೋಜ್ವಲಾವೇಶ!