ಇಂದಿಗೈವತ್ತುಮೂರು ವರುಷಗಳಾಚೆ ಅಲ್ಲಿ,
ಹಿರಿಕೊಡಿಗೆಯಲ್ಲಿ,
ಸಹ್ಯಾದ್ರಿಯ ಕಾನ್ಮಲೆಗಳ ಮಡಿಲೊಳಗಿದ್ದ
ಆ ಕುಗ್ರಾಮದಲ್ಲಿ,
ಒಂದೆಮನೆ ಹಳ್ಳಿಯಲ್ಲಿ:
ನೆತ್ತಿಮೇಲೆ ಶಿಖರಪಂಕ್ತಿ ಪರಿಧಿಯಾದ ನೀಲಶರಧಿ —
ಬಾನು;
ಸುತ್ತಮುತ್ತ ಕಾಫಿಕಾನು;
ಮತ್ತೆ, ಬತ್ತದ ಗದ್ದೆ, ಅಡಕೆ ಬಾಳೆಯ ತೋಟ:
ಗುಡ್ಡ ಬೆಟ್ಟ ಕಾಡು ತೆರೆಬಿದ್ದು ಎದ್ದ ಚೆಲ್ವುನೋಟ:
ನಾಗರಿಕತೆಗತಿದೂರದ ಅಜ್ಞಾತದ
ಆ ಹಿರಿಕೊಡಿಗೆಯಲ್ಲಿ
ನನ್ನಮ್ಮ, ದೇವಿ ಸೀತಮ್ಮ, ಚೊಚ್ಚಲೆನ್ನಂ ಪಡೆವ
ತಪದೊಳಿರೆ:


ಓ ಆ ದೂರದ, ಬಹುದೂರದ, ಬಂಗಾಲದ,
ಕಲ್ಕತ್ತದ ದಕ್ಷಿಣೇಶ್ವರದಿಂದ ಹುಟ್ಟಿ,
ಬಾನ್ಗೇರಿ ಬಾಗಿ,
ಯೋಜನಂಗಳ ಮೀಟಿ, ದಾಟಿ,
ಕುಪ್ಪಳಿಯಾಚೆಯ ಕೊಪ್ಪದೆಡೆಯ ಹಿರಿಕೊಡಿಗೆಯ ಮುಟ್ಟಿ
ನಿಂದುದೊಂದು ಮಹಾ ಮಳೆಬಿಲ್ಲು, ಕಮಾನು ಕಟ್ಟಿ,
ಶ್ರೀಗುರುವಿನ ಕೃಪೆಯ ಬರವಿಗೊಂದು ದೇವಸೇತುವಾಗಿ,
ಅಲ್ಲಿಂದಿಲ್ಲಿಗೆ ಬೀಸಿದೊಂದೆ ರುಂದ್ರ ಕಮಾನು ಬಾಗಿ!


ಅಮ್ಮ ನೋವಿನ ಸಮಾಧಿಯೊಳಿರೆ
ಕೇಳಿಸಿತ್ತೊಂದು ಇಂಪಿನ ಕರೆ,
ಆಕಾಶದಿಂದಿಳಿದಾ ಗಂಗೆಯ ಮೊರೆ:

“ಆರಮ್ಮಾ ನೀನು?”

“ಶ್ರೀಗುರುಕೃಪೆ ನಾನು!”

“ಎಲ್ಲಿಂದ ಬಂದೆ?”

“ದಕ್ಷಿಣೇಶ್ವರದಿಂದಲೈತಂದೆ. . . . . .
ನೀನಾರಮ್ಮ, ಇಲ್ಲಿ ಸಂಭ್ರಮಿಸುತಿರ್ಪೆಯಲ್ಲಾ?”

“ಅಕ್ಕ, ನಾನ್‌ ಸಹ್ಯಾದ್ರಿಯ ಅಧಿದೇವಿ.
ನನ್ನ ಗರ್ಭದೊಳೊಂದು
ದಿವ್ಯಕೃತಿ ಆವಿರ್ಭವಿಪುದೆಂದು
ಆಕಾಶದಾದೇಶವನು ಆಲಿಸಿದೆನಿಂದು.
ಅದಕಾಗಿ ಅರಸಿ ಬಂದು
ನೋಡುತಿಹೆನಿಲ್ಲಿ ನಿಂದು.”

“ಇಲ್ಲಿಲ್ಲಿಯೊ ಹುಟ್ಟಿಹನಂತಮ್ಮಾ ಅವನು.
ಕಳುಹಿದಳೆನ್ನನು ಭವತಾರಿಣಿ ಜಗದಂಬೆ.
ಆಶೀರ್ವಾದವ ತಂದಿಹೆನು.
ತೋರುವೆಯೇನ್‌, ಅಮ್ಮಾ?”

“ತೋರುವೆ, ಬಾರಮ್ಮಾ . . . . .
ಅವನಾರೌ, ತಾಯೀ?”

“ಶ್ರೀಗುರು ಕೃಪೆಮಾಡಿಹ ವಾಗ್ದೇವಿಯ ಹೃದಯ ಶಿಶು;
ಯುಗಯುಗವೂ ದೇಶದೇಶದಲಿ ಸಂಭವಿಸುವ
ಆವೇಶದ ಯಜ್ಞಪಶು:
ಇವನ ಗುರುವಹನಿಹನು ಕಾಶಿಯಲಿ,
ಭೀಷಣ ತಪೋಮಗ್ನ.
ಗುರುವಿನೆಡೆಗೊಯ್ವಾತನಿಹನು
ಮಲೆಯಾಳದಾ ಕೊಚ್ಚಿಯಲಿ,
ಅರಮನೆಯೊಳೂ ಅಣುಗ ಚಿಂತಾನಿಮಗ್ನ.
ಇವನ ಕೈಹಿಡಿದು ನಡಸೆ,
ಆಲಿಸಮ್ಮಾ,
ನನಗಿಹುದು ಇವನೊಡನೆ ಸಹಧರ್ಮಿಣಿಯ
ಯೋಗಲಗ್ನ!”

“ಎಲ್ಲಿಂದೆಲ್ಲಿಗೆ, ತಾಯಿ?
ಜನವಿಲ್ಲದ ಈ ಕಾಡಿನ ಕೊಂಪೆಯೊಳೇಕೊ
ಆ ಕವಿಯವತಾರ?”

“ಓಃ! ಆ ಚೇತನಕೀ ಸಹ್ಯಾದ್ರಿಯ ಲಿಂಗಶರೀರ!
ಮಂದವನಿಂದಾಗುವ ಕಜ್ಜಕೆ ಇಂದೀ
ಕಾಡೇ
ಹಾಡುತ್ತಿದೆ ನಾಂದಿ!
ಶಕ್ತಿಯ ವಿಕಸನಕಾವಶ್ಯಕವೀ ಸಂಸ್ಕಾರ:
ಹುಲಿಯಾರ್ಭಟೆ, ಹಕ್ಕಿಯ ಇಂಚರ, ಮೋಡದ ಸಂಚಾರ,
ದುಮುದುಮುಕುವ ಹೊಳೆನಿರಾಟ.
ಹಸುರಿನ ಹೂವಿನ ಹಣ್ಣಿನ ರಸದೂಟ! . . . .
ನೀನ್‌ ಅವನೊಡನಾಡಿ;
ನೀ ದಾದಿ;
ಅವನರಳುವ ಸಿರಿನೋಟವೆ ನಿನಗೊದಗುವ ಔತಣವಾಗಿರೆ,
ಅದನಿಂದೇ ಅರಿಯುವ ಅವಸರವೇಕಮ್ಮಾ? —
ಈ ಸಹ್ಯಾದ್ರಿಯ ಘೋರಾರಣ್ಯದ ಮರೆಯ
ಬಾಹುರಕ್ಷೆಯಲಿ
ತನ್ನಾ ಮಾತೃವಕ್ಷದೊಳಿರ್ಪಾತನನು ನನಗೆ ತೋರಮ್ಮಾ,
ಬೇಗ ತೋರಮ್ಮಾ!”

“ತೋರುವೆ, ಬಾರಮ್ಮಾ . . . .
ನಾ ಧನ್ಯೆ! . . . . ಬಾರಮ್ಮಾ! . . . .
ಅದೊ ಓ ಕಾಣಮ್ಮಾ!”