ನಮ್ಮ ಈ ಸುಖವೆಲ್ಲ ಹೂವಾಗಿ ಮೇಲೇರಿ
ನಿನ್ನಡಿಯೆ ಗುಡಿಯಾಗೆ ಪುಷ್ಪರಾಶಿ
ಭಕ್ತಿಯೀ ಆನಂದಬಾಷ್ಪಭಾಗೀರಥಿಯ
ಮಿಂದು ಹರಸಲಿ ನಿನ್ನ ಚರಣಕಾಶಿ!

ಚೆಲುವನವಲೋಕಿಸುವ ರಸಸುಖವೆ ತಾನೊಂದು
ಮಲ್ಲಿಗೆಯ ಹಿಂಡು ಬೆಳ್ಳಕ್ಕಿಗೊಂಡಂತೆ
ಸಾಲಾಗಿ ಹಾಲಾಗಿ ಪಂಕ್ತಿ ಪಂಕ್ತಿಯೆ ಹಾರಿ
ಏರಿ ಎರಗಲಿ ಪದಕೆ ಸೊದೆವೊನಲಿನಂತೆ!

ಸರ್ವಾನುರಾಗದಾ ಚುಂಬನಾಲಿಂಗನದ
ಭೋಗಯೋಗಾಸನದ ಔತಣಾಗ್ನಿ
ಮಂತ್ರ ಪಂಚಾಕ್ಷರ ಜಪಜ್ವಲದ ಘೃತವೇರೆ
ಯಜ್ಞದೀಕ್ಷಿತ ಪ್ರಣಯ ರಾಜರಾಜ್ಞಿ
ನಕ್ಷತ್ರ ರಾತ್ರಿಯಲಿ ಕೈಲಾಸ ಯಾತ್ರಿ!