ಸ್ವಪ್ನದಲಿ ನಾನೊಮ್ಮೆ ಸತ್ತಿದ್ದೆ —
ಥೂ ಹಾಳುಬಾಯಿ! —
ಅಲ್ಲ, ಸತ್ತಿರಲಿಲ್ಲ, ಸ್ವರ್ಗಸ್ಥನಾಗಿದ್ದೆ!
ಆದರೂ ಎಚ್ಚರಿದ್ದೆ!
ಮುಂದೆ, ಮುಂದೆ, ಮುಂದೆ,
ರೆಕ್ಕೆ ಬಂದವನಂತೆ ಹೋಗುತ್ತಿದ್ದೆ:
ಅಂಥ ನಿದ್ದೆ!


ಹಾದಿಯಲಿ ಏನೇನೊ ಬೋರ್ಡಗಳ ಕಂಡೆ;
ಏನೇನೊ ಲಿಪಿಗಳು, ಚಿತ್ರ ವಿಚಿತ್ರ.
ಯಾವುದೊಂದನು ನನಗೆ ಓದಲಾಗಲಿಲ್ಲ;
ಯಾವುದೂ ನನಗರ್ಥವಾಗಲಿಲ್ಲ.
ಕಡೆಗೆ, ಅಲ್ಲೊಂದು ಕಡೆ, ಕಂಡೆ ಕನ್ನಡ ಲಿಪಿಯ:
ಕೈಮರದ ಬೋರ್ಡಿನಲಿ ಇತ್ತು — ‘ನರಕಕ್ಕೆ ದಾರಿ!’
ನನ್ನ ಕನ್ನಡ ಮಮತೆ ಬಂತು ಉಕ್ಕಿ,
ಕಡೆಗಾದರೂ
ಅರ್ಥವಾಗುವುದೊಂದು ದಾರಿ ಸಿಕ್ಕಿ.
ಅರ್ಥವಾಗದ ಸಗ್ಗ ಎನಿತಿದ್ದರೇನು?
ಅರ್ಥವಾದರೆ ಸಾಕು, ನರಕವೂ ಜೇನು!
ನುಗ್ಗಿದೆನು ಆ ದಾರಿಯಲಿ ನಾನು.


ಇದ್ಕಕಿದ್ದಂತೆ ತಡೆಗಟ್ಟಿತೊಂದು ಕೈ;
ಗರ್ಜಿಸಿತ್ತೊಂದು ದನಿ, ಅಶನಿ:
“ನಿನಗಿಲ್ಲಿ ಹುಗಲಿಲ್ಲ. ಹಿಂತಿರುಗು ನಾಕಕ್ಕೆ.”

ನಾನೆಂದೆ:
“ನಾಕವಾದರು ಬಾಯಿಪಾಠದ ಬದುಕು ಸಪ್ಪೆ;
ಅರ್ಥವಾಗುವ ನರಕ ಲೇಸೆಂದು ಬಂದೆ.”
ಮರುನುಡಿಯನೀಯದಾ ದಾರಿ ಕಗ್ಗಲ್ಲಾಗಿ ಮುಚ್ಚಿತ್ತು.
ಅನ್ಯಾಯಕವಚತ್ತು
ಹಿಂತಿರುಗಿದೆ. ಬೆಪ್ಪಮರಿ ನಾಕಮಾರ್ಗದಿ ನಡೆದೆ ಮುಂದೆ.
ಕಾಣಿಸಿತು ದೂರದಲಿ ಮುಚ್ಚಿದ ಮಹಾದ್ವಾರ!
ಸ್ವರ್ಗಪ್ರವೇಶದಾವೇಶ ಚಿಂತೆ
ಮೆಯ್ವೆತ್ತಂತೆ
ಬಳಿಸಾರಿ ನಿಂತೆ.


“ಯಾರು?” — ಮೊಳಗಿದುದು ದೌವಾರಿಕನ ವಾಣಿ.
“ನಾನು!” — ಅಷ್ಟು ಕೆಚ್ಚಿತ್ತೆನ್ನ ನನ್ನತನದಲ್ಲಿ!
“ನೀನು ನಿಜವಾಗಿ ಯಾರಾಗಿಹೆಯೊ,
ನೀನು ನಿಜದಲ್ಲಿ ಏನಾಗಿಹೆಯೊ,
ಆ ಹೆಸರ ಹೇಳಿದರೆ ತೆರೆವುದೀ ದ್ವಾರ.
ಇಲ್ಲಿ ನಡೆಯದು ನಿನ್ನ ಭೂಲೋಕದವತಾರ,
ಲೋಕ ಮೆಚ್ಚಿದ ಬರಿಯ ಹುಸಿ ಹೆಸರು:
ಅಂತರಾತ್ಮದ ನಿನ್ನ ನಿಜನಾಮವನು ಉಸಿರು!
“ಪು . . . ಟ್ಟ . . . ಪ್ಪ!”
ಅಕ್ಕರಕ್ಕರವನೊತ್ತಿ ನುಡಿದು
ಹೆಮ್ಮೆಯಲಿ ಹೆಸರೊರೆದು ನಿಮಿರಿ ನಿಂತೆ,
ಇನ್ನೇನು ಸ್ವರ್ಗದ್ವಾರ ಹೆದರಿ ಹಿಂಜರಿವುದೆಂದು.
ದೌವ್ವಾರಿಕನು ನಕ್ಕು “ಏನದು? ಟ ಟ್ಟ ಟ್ಟ!
ನಿಜವನೊರೆಯದೆ ಬಾಗಿಲಿದು ತೆರೆವುದಿಲ್ಲ.”
ಮನದೊಳೆಂದುಕೊಂಡೆ:
“ಇವನಿಗೇನಿದು ಸೊಕ್ಕು? ಅಮೃತಪಾನದ ಮಹಿಮೆ!
ನನ್ನಾ ಹೆಸರು ಪ್ರಸಿದ್ಧ. ಸುಪ್ರಸಿದ್ಧ, ಜಗತ್‌ಪ್ರಸಿದ್ಧ!

ಅದನಿವನು ಟ ಟ್ಟ ಟ್ಟ ಎಂದಣಕಿಸುವನಲ್ಲ? —
ಓವೊ, ನಾನೆ ತಪ್ಪಿದೆ.
ಪುಟ್ಟಪ್ಪ ಎಂಬುವರು ಎಷ್ಷೆಷ್ಟೂ ಇರುವರಲ್ತೆ?
ಪ್ರಥಮಾಕ್ಷರವನೂ ಸೇರಿಸಿದರೀ ದ್ವಾರ ತೆರೆಯದೇನೋಳದೆ?
ಎಂದುಕೊಳ್ಳುತೆ ಮತ್ತಮ್ಮೊಮ್ಮೆ ಕೂಗಿದೆನು ನನ್ನ ಹೆಸರ:
“ಕೆ . . . ವಿ . . . ಪು . . . ಟ್ಟ . . . ಪ್ಪ!” —
ಬಾಗಿಲು ತೆರೆಯಲಿಲ್ಲ. ಬಿಮ್ಮನಿತ್ತಾ ದ್ವಾರ ……
ದೌವಾರಿಕನ ಕಣ್ಣಲ್ಲಿ ಮಿಂಚಿತು ತಿರಸ್ಕಾರ!
ಆಂಗ್ಲೇಯ ಅಕ್ಷರದ ಮಿಶ್ರಣವೆ ತಪ್ಪಾಯಿತೆಂದು,
ನನ್ನ ನಿಜಜೀವ ಕಾವ್ಯ, ನಿಜನಾಮ ಕಾವ್ಯನಾಮ ಎಂದು,
ಕೂಗಿದೆನು ಮತ್ತೊಮ್ಮೆ, ತಿದ್ದಿಕೊಳುವಂತೆ ತಪ್ಪ!
“ಕು ವೆಂ ಪು!”


ಏನಿಂಪು! ಎನಿತು ಪೆಂಪು! ಕನ್ನಡದ ಕಂಪು!
ಕುವೆಂಪು! . . . . .
ಮಾನಪತ್ರಗಳ ರಾಶಿಯೊಳೆ ಬೆಳೆದ ನಾಮ!
ಪುಷ್ಪಹಾರಗಳ ಗೋಪುರವ ತಳೆದ ನಾಮ!
ಸ್ವರ್ಗದ್ವಾರ ಕವಾಟ ಪಾಟನಕರಿ ಅದಾಗದೇನು?
ಕೂಗಿದೆನು ನಾನು:
ಕುವೆಂಪು!”

ನಕ್ಕನಾ ದೌವಾರಿಕಂ ನಾಮದಾ ವಿಕೃತನೂತ್ನತೆಗೆ,
ಗಹಗಹಿಸಿ, ತಡೆಯಲಾರನೆಂಬಂತೆ:
ಸ್ವರ್ಗದ್ವಾರವೊ? . . . . .
ಹುಬ್ಬುಗಂಟಿಕ್ಕಿ ಬಿಮ್ಮಗಿತ್ತು!


ಗಾಯಗೊಂಡಭಿಮಾನ ಕೆರಳಿದಂತಾಯ್ತು.
ಇದಕ್ಕಿಂತ ನಿಜನಾಮ ಎಲ್ಲಿಂದ ತರಲಿ?
ಹುಚ್ಚು ಹುಚ್ಚಾದೆ.

ಸ್ವರ್ಗದಾ ಹೆಬ್ಬಾಗಿಲಿನ ಕಿವುಡುಗಿವಿಗೆ
ಏನೇನೊ ಹೆಸರುಗಳನೊರಲುತ್ತ ನಿಂತೆ,
ಉನ್ಮತ್ತನಂತೆ.
‘ಲೆಕ್ಷರ್’ ಎಂದೆ;
‘ಅಸಿಸ್ಟೆಂಟ್‌ ಪ್ರೊಫೆಸರ್!’ ಎಂದೆ;
‘ಪ್ರೊಫೆಸರ್!’ ಎಂದೆ; — ಕಡೆಗೆ,
‘ವೈಸ್‌ ಛಾನ್ಷಲರ್!’ ಎಂದೆ!
‘ಪದ್ಮಭೂಷಣ!’ ಎಂದೆ. ಕೊಟ್ಟ ಕೊನೆಗೆ
‘ರಾಷ್ಟ್ರಕವಿ!’ ಎಂದೂ ಅಂದೆ!


ಒಂದಕೂ ಜಗ್ಗಲೊಲ್ಲದೆ ಹೋಯ್ತು
ಸಗ್ಗದಾ ಹೆಬ್ಬಾಗಿಲು.
ಕಡೆಗೆ, ನಾ ತಿಳಿದ ಮಟ್ಟಿಗೆ, ನಾನ್‌ ಗೆಯ್ದ
ಪುಣ್ಯ ಪಾಪದ ಹೊರೆಯ ಪಟ್ಟಿಯನೂ ಒದರಿದೆ!
ನನ್ನ ದುಃಸ್ಥಿತಿಗಿನಿತು ಮನಗರಗಿ ದೌವಾರಿಕಂ:
“ನರಲೋಕ ಮನ್ನಣೆಯ ಆ ಹೆಸರುಗಳಿಗಿಲ್ಲಿ
ಬೆಲೆಯಿಲ್ಲ.
ಅಲ್ಲಿಯ ಮೊದಲಿಗಿಲ್ಲಿ ತುದಿ;
ಅಲ್ಲಿಯ ತುದಿಗೆ ಇಲ್ಲಿ ಮೊದಲು;
ಎಲ್ಲ ತಲೆಕೆಳಗು.
ಆವುದಿದೆ ನಿನ್ನೊಳಗು,
ನಿನ್ನೊಳಿಗನಾ ಬೆಳಗು, —
ನಿನ್ನ ಹಮ್ಮಿನದಲ್ಲ;
ನಿನ್ನ ಬಿಮ್ಮಿನದಲ್ಲ;
ಲೋಕಕೀರ್ತಿಯದಲ್ಲ;
ಮರ್ತ್ಯಗೌರವದ್ದಲ್ಲ;
ಮತಗಿತದ ಧರ್ಮಗಿರ್ಮದ ಆತ್ಮವಂಚಕದ್ದಲ್ಲ; —
ನಿನ್ನ ಹೃದಯದ ಹೃದಯದಾತ್ಮದೊಲವಿನ ಹೆಸರನುಸಿರು.”


ಇದ್ದಕಿಂದ್ದಂತೆ
ಒಳಗೇನೊ ಒಂದು ತಿಳಿವಿನ ಬೆಳಕು ಮಿಂಚಿದಂತಾಯ್ತು.
ಜಗದ ಕಣ್ಣೆಂದಿಗೂ ಇಣುಕದಿರುವೊಂದು
ಗೂಢನಾಮವು ನಾಲಗೆಯ ತುದಿಗೆ ನೆಗೆದು ಬಂತು.
ನಾಚಿ ನಿಂತುದನರಿತು ಇಂತೆಂದನಾ ದೇವದೂತ:
“ಬಾಗಿಲದೊ ಮಿನುಗುತಿದೆ!
ಅದರ ಆನಂದವಾ ಕಾಂತಿ!
ಮುಗಿಯಲಿಲ್ಲಿಗೆ — ಸಾಕು ಬಿಡು,
ಹುಸಿ ಹೆಸರುಗಳ ಆ ಭ್ರಾಂತಿ:
ನಾಚಿಗೆಯನಾಚೆಗಿಡು;
ನಿಜದ ನಿಜನಾಮವನು ಹೆದೆಗೆ ತೊಡು;
ಎದೆ ತೆರೆಯುವುದು ನಿನಗೆ ಶಾಂತಿ!”

ಕೈ ಮುಗಿದು,
ನಿಜಕಾಗಿ ನಾಚಿಕೆಯನಾಚೆ ತಳ್ಳಿ,
ನಾನೆಂದೆ ತೊದಲಿ ತೊದಲಿ:
“ನನ್ನನುದ್ಧರಿಸೆ
ಶ್ರೀ ಗುರುಕೃಪೆಯೆ ಮೆಯ್ವೆತ್ತು ಬಂದಿರುವ
ಶ್ರೀ ಮಹಾಮಾತೆಯಡಿದಾವರೆಯೆ ಆಗಿರುವ
ಸತಿಯ ಒಲವಿನ ಸೆರೆಯೆ ನಾನು . . . .
ನಾ . . . . ನು, ನಾ . . . . ನು, ನಾ . . . . ನು
ಹೇ . . . ಮೀ . . . ಗಂ . . . ಡ!” —
ಪದ್ಮದಲವೆನೆ ಬಿರಿದು ತೆರೆದ ಸಗ್ಗವಾಗಿಲ ಕಂಡು ಆತ
ಬಂಡುಂಡ ದುಂಬಿಯಂದದಿ ಸೊಗಸಿದನು ದೇವದೂತ! . . .

ಕಂಡೆ! . . .
ಒಳನುಗ್ಗಿದೆ! . . . .

ಸಜ್ಜೆಮಂಚದ ಮೇಲೆ ಚಾಚಿದೆನ್ನಯ ತೋಳ
ತಲೆದಿಂಬಿನಲಿ, ಬಾಳಸಗ್ಗದ ಮೊಗವ ಕಂಡೆ! —
ಎ, ಚ್ಚ, ತ್ತಿ, ದ್ದೆ!