“ಅಸಫ್‌ ಜಾಹಿ” ಮನೆತನದ ನಿಜಾಮರ ಕಾಲದಲ್ಲಿ ಆಂಧ್ರಪ್ರದೇಶದ ಹೈದರಾಬಾದಿನ ಸಮೀಪದಲ್ಲಿ, ಆರುನೂರು ಗುಡಿಸಲು (ಝೂಪಡಾ) ಮನೆಗಳಿದ್ದ ಲಂಬಾಣಿಗರ ಒಂದು ದೊಡ್ಡ ತಾಂಡಾ ಇತ್ತು. ಆ ತಾಂಡಾದಲ್ಲಿ “ಜಗ್ಗು” ಎನ್ನುವ ಪ್ರಸಿದ್ಧ ನಾಯಕನಿದ್ದನು. ಆ ಕಾಲದಲ್ಲಿ ನಿಜಾಮರ ಆಳ್ವಿಕೆ, ಎಲ್ಲಿ ನೋಡಿದಲ್ಲಿ ಯುದ್ಧ, ಕೊಲೆ, ಸುಲಿಗೆ ಎಷ್ಟೋ ಹಿಂದೂಗಳನ್ನು ಬಲತ್ಕಾರದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಿಸಿದ್ದರು. ಒಮ್ಮೆಗೆ ಮುಗ್ಧ ಲಂಬಾಣಿ ಯುವತಿಯರನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಎಸಗುತ್ತಿದ್ದರು. ನಿಜಾಮರ ಆಳ್ವಿಕೆಯಲ್ಲಿದ್ದುದರಿಂದ ಅವರ ಕಪಿಮುಷ್ಟಿಯಲ್ಲಿಯೇ ಎಲ್ಲರೂ ನಡೆಯಬೇಕಾಗಿತ್ತು. ಅಂಥ ಸರಹದ್ದಿನಲ್ಲಿಯೂ “ಜಗ್ಗು ನಾಯಕ” ತನ್ನ ತಾಂಡಾದ ನ್ಯಾಯ ಪಂಚಾಯತ್, ಮದುವೆ ಸಂಪ್ರದಾಯ, ಹಬ್ಬ ಹರಿದಿನ, ಧಾರ್ಮಿಕ ಆಚರಣೆ ಮುಂತಾದ ಆಗು- ಹೋಗುಗಳನ್ನು ಸಮರ್ಥವಾಗಿಯೇ ನಡೆಸುತ್ತಿದ್ದನು. “ಜಗ್ಗು ನಾಯಕ ” ದೊಡ್ಡ ಶ್ರೀಮಂತ. ಎಲ್ಲವೂ “ಜಗ್ಗು ನಾಯಕ”ನ ಅಧೀನದಲ್ಲಿಯೇ ನಡೆಯುತ್ತಿತ್ತು. ಆದ್ದರಿಂದ ಸುತ್ತ ಮುತ್ತಲಿನ ಪ್ರದೇಶದ ಬಡ ಜನರಿಗೆ ಅನೇಕ ಸಹಾಯ, ಸಹಕಾರಗಳನ್ನು ಮಾಡುತ್ತಿದ್ದನು. ಅಷ್ಟೇ ಅಲ್ಲ ಆತ ದುಷ್ಟರಿಗೆ ಸಿಂಹಸ್ವಪ್ನವಾಗಿದ್ದ. ಆದ್ದರಿಂದ ಆತನ ತಂಟೆಗೆ ಯಾರು ಬರುತ್ತಿರಲಿಲ್ಲ.

ಲಂಬಾಣಿ “ನ್ಯಾಯ ಪಂಚಾಯತ” ಎಂದರೆ ಬಾರೀ ಕಂಟಿಯಲ್ಲಿ ಕೈ ಸಿಗಿಸಿಕೊಂಡಂತೆ. ಬಾರೀ ಕಂಟೆಯಿಂದ ಕೈ ಹೊರ ತೆಗೆಯುವುದು ಎಷ್ಟೂ ಕಷ್ಟವೋ, ಅಷ್ಟೇ ಕಠಿಣವೂ ಕೂಡ. ಲಂಬಾಣಿಗರ “ನ್ಯಾಯ ಪಂಚಾಯತ” ಸಂಬಂಧ ಕೋರ್ಟ ಕಚೇರಿಗಳ ಮೆಟ್ಟಿಲು ಹತ್ತಿದವರಿಗೆ ಸಮಾಜದಲ್ಲಿ ಬಹಿಷ್ಕಾರ. ಏನಿದ್ದರೂ ತಾಂಡಾದ ನಾಯಕನೇ ಅವರಿಗೆ ಮುಖ್ಯ ನ್ಯಾಯಾಧೀಶ ! ಲಂಬಾಣಿಗಳು ತಮ್ಮಲ್ಲಿ ರೂಢಿಯಲ್ಲಿರುವ ಹಸಾಬ, ನಸಾಬ, ಮತ್ತು ಮುಳಾವೋ

[1] ಈ ಮೂರು ಬಗೆಯ ಪಂಚಾಯರಗಳಲ್ಲಿಯೇ ನ್ಯಾಯ ಬಗೆಹರಿಸಿಕೊಳ್ಳಬೇಕು. ಹೀಗಾದುದರಿಂದ ಎಷ್ಟೋ ಸಲ ಬೇರೆ ತಾಂಡಾದ ಜನ “ಜಗ್ಗು ನಾಯಕನಿಗೆ” ಆಹ್ವಾನಿಸಿ, ನ್ಯಾಯ ಬಗೆಹರಿಸಿಕೊಳ್ಳುತ್ತಿದ್ದರು. “ಜಗ್ಗು ನಾಯಕ” ಕುದುರೆ ಹತ್ತಿ ಹೊರಟರೆ ಅವರ ಎದುರಿಗೆ ಜನ ನಿಲ್ಲಲು ಹಿಂಜರಿಯುತ್ತಿದ್ದರು. ಅಷ್ಟೊಂದು ದರ್ಪವೇ ಅವರಲ್ಲಿ ಅಡಗಿತ್ತು. ಈ ಕಾರಣದಿಂದ ಅವರನ್ನು ಮೀರಿ ಹೋಗುವ ಧೈರ್ಯ ಯಾವ ತಾಂಡಾದವರಿಗೂ ಇರಲಿಲ್ಲ. “ಜಗ್ಗು ನಾಯಕ” ನೋಡಲು ಹಾಗೆ ಇದ್ದರು. ಎತ್ತರದ ವ್ಯಕ್ತಿ, ದೇಹಕ್ಕೆ ತಕ್ಕ ಮೈಕಟ್ಟು, ತಲೆಗೆ ಪಾಗಡಿ, ಲಾಡಿ ಅಂಗಿ, ಧೋತರ, ಕೋರೆಮೀಸೆ, ಕೆಂಪು ಮೈಬಣ್ಣ, ಹೆಗಲ ಮೇಲೊಂದು ಶಾಲು. “ಜಗ್ಗು ನಾಯಕ”ನಿಗೆ ಸಾಠಿ “ಜಗ್ಗು ನಾಯಕ”ನೇ. ನಾಯಕ ಹೀಗಿದ್ದ ಎಂದ ಮೇಲೆ ಅವನ ಅರ್ಧಾಂಗಿ ಹೇಗಿರಬೇಕು? ಇದನ್ನು ಊಹಿಸುವುದು ಕಷ್ಟ. “ಜಗ್ಗು ನಾಯಕ”ನ ಅರ್ಧಾಂಗಿ “ಜಮಣಿ ನಾಯಕಣ” ನಾಯಕನಿಗಿಂತ ಚತುರಳಿದ್ದಳು. ಒಟ್ಟಾರೆ ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗುವ ಸ್ವಭಾವದವರಿದ್ದರು.

ಒಂದು ದಿನ “ಜಗ್ಗು ನಾಯಕ” ತಾಂಡಾದ “ಸೇವಾಲಾಲ ಗುಡಿ”ಯ ಹತ್ತಿರವಿದ್ದ, ಬೇವಿನ ಮರದ ಕೆಳಗಡೆ ಕುಳಿತುಕೊಂಡು, ತಾಂಡಾದಲ್ಲಿ ನಡೆದ “ಕೋಳಿ” ಕಾಳಗದ ಸಂಬಂಧ ನ್ಯಾಯ ಬಗೆಹರಿಸುತ್ತಿದ್ದರು. ಆ ಸಂದಭದಲ್ಲಿ “ಜಗ್ಗು ನಾಯಕ” ಹೃದಯಾಘಾತದಿಂದ ಸಾವನ್ನಪ್ಪಿದ. ಧರ್ಮಾತಿ ನಾಯಕ ಮರಗೋ ( ಧರ್ಮವಂತ ನಾಯಕ ತೀರಿಕೊಂಡ) ಎಂದು ತಾಂಡಾದ ಜನ ದುಃಖದಲ್ಲಿ ಮುಳುಗಿದರು. ಸುತ್ತಮುತ್ತಲಿನ ಪ್ರದೇಶದ ಜನರಿಗೆ ಆ ಆಘಾತದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಸುತ್ತಮುತ್ತಲಿನ ತಾಂಡಾದ ಜನ ಮತ್ತು ಬೇರೆ ಊರಿನ ಜನ “ಜಗ್ಗು ನಾಯಕ” ನ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ತಮ್ಮ “ಧರ್ಮಾತಿ ನಾಯಕ”ನಿಗೆ ಅಂತಿಮ ನಮನ ಸಲ್ಲಿಸಿದರು.

“ಜಗ್ಗು ನಾಯಕ” ಅಗಲಿದ ನೋವು ತಾಂಡಾದ ಜನರಿಗೆ ಹಲವಾರು ದಿನಗಳವರೆಗೆ ಮರೆಯಲಾಗಲಿಲ್ಲ. ನಿಂತಲ್ಲಿ, ಕುಂತಲ್ಲಿ, ಜನರ ಬಾಯಲ್ಲಿ ನಾಯಕನದೇ ಮಾತು, ಅವರು ಜನಮನದಲ್ಲಿ ದಂತಕಥೆಯಾಗಿ ಹೋದರು.

ಕೆಲವು ದಿನಗಳವರೆಗೆ “ಜಗ್ಗು ನಾಯಕ”ನ ತಾಂಡಾದಲ್ಲಿ ಗರಬಡಿದಂತೆ ಆಯಿತು. “ನಾಯಕ” ತೀರಿಕೊಂಡ ಮೇಲೆ ತಾಂಡಾದ ಆಂತರಿಕ ವ್ಯವಹಾರಗಳಿಗೂ ಸಮಸ್ಯೆ ಆಗತೊಡಗಿತು. “ವಾಗಛೇನಿರ ವಾಗೇರೋ ಜಾಳಾ ಠಾಲೋರ” (ಹುಲಿ ಇಲ್ಲದ ಖಾಲಿ ತಾಂಡಾ) ಎಂದು ತಾಂಡಾದ ಜನ, “ಜಗ್ಗು ನಾಯಕ”ನಿಗೆ ಹುಲಿಯಂತಿದ್ದ ನಮ್ಮ “ನಾಯಕ”ನೆಂದು ಗುಣಗಾನ ಮಾಡತೊಡಗಿದರು. ಎಷ್ಟು ದಿನಗಳವರೆಗೆ “ನಾಯಕ”ನಿಲ್ಲದೆ ದಿನಗಳನ್ನು ನೂಕುವುದೆಂದು ತಾಂಡಾದ ಕಾರಭಾರಿ, ಡಾವ, ಪಂಚರು “ಸೇವಾಲಾಲನ ಗುಡಿ”ಯ ಮುಂದೆ ಸೇರಿಕೊಂಡು ಚರ್ಚೆ ಮಾಡಿದರು. “ತಾಂಡಾದ ನಾಯಕ”ನ ಸ್ಥಾನ ಪ್ರತಿಷ್ಠೆಯದ್ದು ಮತ್ತು ಅಷ್ಟೇ ಜವಾಬ್ದಾರಿಯುತವಾದದ್ದು. ಈ ಪರಂಪರೆ ತಲೆಮಾರಿನಿಂದ ತಲೆಮಾರಿಗೆ ಸಾಗಿಬಂದದ್ದು. ಅಜ್ಜನಿಂದ ಹಿರಿಮಗನಿಗೆ, ಮಗನಿಗೆ ಮೊಮ್ಮಗನಿಗೆ, ಒಂದು ವೇಳೆ ಮಕ್ಕಳಿಲ್ಲದಿದ್ದರೆ ಅವರ ಸೋದರ ಸಂಬಂಧಿಗಳಿಗೆ “ನಾಯಕ” ಸ್ಥಾನ ಬಿಟ್ಟುಕೊಡುವ ಸಂಪ್ರದಾಯ. ಆದರೆ “ಜಗ್ಗು ನಾಯಕ”ನಿಗೆ ಮದುವೆ ಆಗಿ ಕೆಲವೇ ತಿಂಗಳುಗಳಾಗಿದ್ದರಿಂದ, ವಿಧಿವಶ ಮಕ್ಕಳಾಗುವ ಪೂರ್ವದಲ್ಲಿಯೇ ತೀರಿಕೊಂಡರು. ತಾಂಡಾದ ಜನರಿಗೆ “ನಾಯಕ” ಪಟ್ಟ ಯಾರಿಗೆ ಕೊಡಬೇಕೆನ್ನುವುದು ಅಷ್ಟೇ ಸಮಸ್ಯೆ ಆಯಿತು. ಆಗ ಜನ ತಮ್ಮ “ನಾಯಕ”ನ ಮತ್ತು ಮನೆತನದ ಮೇಲೆ ಇಟ್ಟ ಭಕ್ತಿ ಗೌರವಕ್ಕೆ ತಲೆಬಾಗಿ ಒಮ್ಮನಸ್ಸಿನಿಂದ ನಾಯಕನ ಹೆಂಡತಿ “ಜಮಣಿ”ಗೆ ತಾಂಡಾದ ಆಗು ಹೋಗು ಆಂತರಿಕ ವ್ಯವಹಾರ, ನ್ಯಾಯ ಪಂಚಾಯತ, ಧಾರ್ಮಿಕ ಆಚರಣೆ ಮುಂತಾದ ಜವಾಬ್ದಾರಿಯುತ “ನಾಯಕ” ಸ್ಥಾನದ ಹೊಣೆಗಾರಿಕೆ ವಹಿಸಿದರು. “ಜಮಣಿ ನಾಯಕಣ” “ಸೇವಾಲಾಲ ಗುಡಿ”ಯ ಸಭಾಂಗಣದಲ್ಲಿ ಜರುಗಿದ ಜನರ ಮುಂದೆ ಕೈಜೋಡಿಸಿ, ತನ್ನ ಗಂಡನ ಮೇಲೆ ಮತ್ತು ಮನೆತನದ ಮೇಲೆ ಇಟ್ಟಿರುವ ಭಕ್ತಿ ಗೌರವಗಳಿಗೆ ತಲೆಬಾಗಿ, ತಾವು ವಹಿಸಿದ ಕೆಲಸವನ್ನು ಜವಾಬ್ದಾರಿಯಿಂದ ಮಾಡುತ್ತೇನೆಂದು ದುಃಖತಪ್ತಳಾಗಿದ್ದ ಅವಳು, ಸಂತೋಷದಿಂದಲೇ ಆ ಕಾರ್ಯವನ್ನು ಒಪ್ಪಿಕೊಂಡಳು. ಆ ಸಂದರ್ಭದಲ್ಲಿ ಜಮಣಿಯ ಕಣ್ಣುಗಳಿಂದ ಧಾರಾಕಾರವಾಗಿ ಕಂಬನಿ ಉದುರಿದವು. ಗದ್ಗದಿತ ಕಂಠದಿಂದ ಮಾತು ಹೊರಬರಲಿಲ್ಲ. ಜನ “ಜಮಣಿ ನಾಯಕಣ” ಹೆಸರಿನ ಮೇಲೆ ಜೈಕಾರ ಹಾಕಿದರು.

ದಿನ ಕಳೆದಂತೆ ತಾಂಡಾದ ಮತ್ತು ಹೊರಗಿನ ಒಂದೊಂದು ಸಮಸ್ಯೆಗಳು ಬರಹತ್ತಿದವು. ಅಂಥ ಸಮಸ್ಯೆಗಳನ್ನು ತಾಂಡಾದ ಕಾರಭಾರಿ (ಕಾರ್ಯದರ್ಶಿ) ಡಾವ (ಸಹ ಕಾರ್ಯದರ್ಶಿ) ಮತ್ತು ಅನುಭವಿ ಪಂಚರ ಸಮ್ಮುಖದಲ್ಲಿ “ಜಮಣಿ ನಾಯಕಣ” ಜೇರಜೇನ ಕೇಣು, ಪಾಪೇತಿ ಭಾರ ರೇಣು (ಅವರವರಿಗೆ ಸ್ಪಷ್ಟ ಹೇಳಿ, ಪಾಪದಿಂದ ಮುಕ್ತರಾಗಬೇಕು) ಎನ್ನುವಂತೆ, ಯಾರಿಗೂ ಅನ್ಯಾಯ ಮಾಡದೆ ನ್ಯಾಯ ನಿರ್ಣಯಗಳನ್ನು ಖಂಡತುಂಡಾವಾಗಿ ಬಗೆಹರಿಸುತ್ತಿದ್ದಳು. ಈ ಸಂದರ್ಭದಲ್ಲಿ ಒಂದು ಮಾತನ್ನು ನೆನಪಿಸಬಹುದು “ಜಮಣಿ”ಯ ನ್ಯಾಯ ಪ್ರದಾನದ ನಿಷ್ಪಕ್ಷಪಾತ ರೀತಿ ನೀತಿಗಳು. ಹೀಗಾಗಿ “ಜಗ್ಗು ನಾಯಕ”ನ ಪ್ರಭಾವ “ಜಮಣಿ”ಯ ಮೇಲೆ ಸಾಕಷ್ಟು ಕಂಡು ಬರುತ್ತಿತ್ತು. “ತಾಂಡಾ ಎಂದರೆ “ಜಗ್ಗು”ನ ತಾಂಡಾನೇ ಎಂದು ಪ್ರಸಿದ್ಧಿಗೆ ಬಂದಿತ್ತು. ಏಕೆಂದರೆ ಅಲ್ಲಿ ಎಲ್ಲ ರೀತಿಯಿಂದಲೂ ಪಂಚಕಟ್ಟೆ ನಡೆಯಿತ್ತಿತ್ತು. ಆದ್ದರಿಂದ “ಜಮಣಿ ನಾಯಕಣ”ಳ ಪ್ರಭಾವ ದೂರದವರೆಗೂ ಹಬ್ಬಿತ್ತು.

ಒಂದು ದಿನ ಬೇರೆ ತಾಂಡಾದಲ್ಲಿ ಟಗರು ಕದ್ದೊಯ್ದು ಕತ್ತರಿಸಿ ತಿಂದ ಪ್ರಸಂಗದ ನ್ಯಾಯ ನಡೆಯುತ್ತಿತ್ತು. ಆದರೆ ಟಗರು ಕದ್ದೊಯ್ದು ಭೂಪ ತಾಂಡಾದ ಜನರಿಗೆ ಹೆದರಿಸಿ, ತಾನು ಕಳ್ಳತನ ಮಾಡಿಲ್ಲ ಎಂದು ಸಬೂಬು ಹೇಳಿ ಪಾರಾಗುತ್ತಿದ್ದ. ಈ ಸಂಬಂಧ ಹಲವಾರು ಬಾರಿ ತಾಂಡಾದಲ್ಲಿ ನ್ಯಾಯ ನಡೆದರೂ ಟಗರು ಕದ್ದೊಯದ್ದವನಿಗೆ ಶಿಕ್ಷೆ ವಿಧಿಸುವ ಧೈರ್ಯ ಯಾರಿಗೂ ಬರಲಿಲ್ಲ. ಆಗ ಜನ ಬೇಸತ್ತು. “ಮಳಾವೋ” ಕೂಡಿಸುವುದು ಮತ್ತು ಈ ನ್ಯಾಯ ತೀರ್ಮಾನಕ್ಕೆ “ಜಮಣಿ ನಾಯಕಣ”ಳಿಗೆ ಕರೆಸುವುದು ಎಂದು ನಿರ್ಧಾರ ಮಾಡಿದರು. ಜನ ಹಲವಾರು ತಾಂಡಾದ ನಾಯಕರಿಗೆ ಮತ್ತು “ಜಮಣಿ ನಾಯಕಣ”ಳಿಗೆ ನ್ಯಾಯ ಬಗೆಹರಿಸಲು ಬರಬೇಕು ಎಂದು ಢಾಲ್ಯಾ(ತಳವಾರ)ನ ಮುಖಾಂತರ ಸುದ್ದಿ ಮುಟ್ಟಿಸಿದರು. “ಜಮಣಿ ನಾಯಕಣ” ತಾಂಡಾ ಕಾರಭಾರಿ, ಡಾವ ಮತ್ತು ಕೆಲವು ಪಂಚರ ಜೊತೆಗೆ ನ್ಯಾಯ ತೀರ್ಮಾನಕ್ಕೆ ಹೋಗಲು ನಿರ್ಧರಿಸಿದಳು. ಆಗ ತನ್ನ ಗಂಡ ಕುಳಿತುಕೊಂಡು ಸವಾರಿ ಮಾಡುತ್ತಿದ್ದ “ಬಾಳಿಯಾ ಘೋಡೋ” (ಬಿಳಿ ಕುದುರೆ) ಮೇಲೆ ಕುಳಿತು ಹೊರಟಳು. ಉಳಿದವರು ಬೇರೆ ಬೇರೆ ಕುದುರೆಗಳ ಮೇಲೆ “ನಾಯಕಣ”ಳ ಜೊತೆ ಹೊರಟರು. ತಾಂಡಾದ ಜನ ಇವರ ಬರುವಿಕೆಯನ್ನೇ ಕಾಯುತ್ತಿದ್ದರು. ಅದರಲ್ಲಿ ಹೆಣ್ಣು ಮಕ್ಕಳಿಗಂತೂ ಅತೀವ ಸಂತೋಷ. ಸರಿಯಾದ ಹೊತ್ತಿಗೆ “ಜಮಣಿ ನಾಯಕಣ” ಮತ್ತು ಸಂಗಡಿಗರು ತಾಂಡಾ ಪಂಚಕಟ್ಟೆಗೆ ಬಂದರು. ಜನ ನಾಯಕತಿಯ ರಂಗು ರಂಗಿನ ವೇಷ ಭೂಷಣ, ಸುಂದರ ರೂಪ ನೋಡೊ ಬೆರಗಾದರು. ಸರಿಯಾದ ಹೊತ್ತಿಗೆ ನ್ಯಾಯ ಆರಂಭಸಿದಳು. ಆಗ “ಜಮಣಿ ನಾಯಕಣ” ಟಗರಿನ ಕಳ್ಳತನದ ಒಂದೊಂದೆ ಎಳೆಯನ್ನು ಜಾಲಾಡಿಸುತ್ತ ನ್ಯಾಯ ಆರಂಭಿಸಿದಳು. ಕೊನೆಗೆ ಕಳ್ಳನಿಗೆ ಬಾಯಿಂದ ಮಾತೇ ಬರದಂತಾಯಿತು. ಕಳ್ಳ ತಪ್ಪೊಪ್ಪಿಕೊಂಡು ಸಭೆಯಲ್ಲಿ ಕೈ ಮುಗಿದು, ಸಭೆ ಕೊಡುವ ಶಿಕ್ಷೆಗೆ ಗುರಿಯಾಗಿದ್ದೇನೆ. ಎಂದು ಹೇಳಿದ. ಪಂಚಾಯತದವರ ಖರ್ಚಿಗೆಂದು ದಂಡ ವಿಧಿಸಿದಳು. ಜನ “ಜಮಣಿ ನಾಯಕಣ”ಳ ಹೆಸರಿನ ಮೇಲೆ ಉದ್ಘೋಷ ಹಾಕುತ್ತ “ವ್ಹಾರೆ ಜಗ್ಗೂರ ಜಮಣಿ ನಾಯಕಣ” ಎಂದು ಸಂತೋಷದಿಂದ “ಜಮಣಿ ನಾಯಕಣ”ಳಿಗೆ “ಮರ್ದ ನಾಯಕಣ” ಎಂದು ಬೆಳ್ಳಿ ಖಡೆ ತೊಡಿಸಿಯೇ ಬಿಟ್ಟರು.

ನ್ಯಾಯ ಪಂಚಾಯತ ಮುಗಿಸಿ “ಜಮಣಿ ನಾಯಕಣ” ತನ್ನ ಸಂಗಡಿಗರೊಂದಿಗೆ ತಾಂಡಾದ ದಾರಿ ಹಿಡಿದಳು. ಕುದುರೆ ಮೇಲೆ ಕುಳಿತು ಹೊರಟರೆ ಅವಳಿಗೆ ಸರಿ ಸಾಠಿ ಯಾರು ಇಲ್ಲ ಎನ್ನುವಂತೆ ಕಾಣುತ್ತಿದ್ದಳು. ಹದಿಹರೆಯದ ವಯಸ್ಸು ನೋಡಲು ತಟ್ಟನೆ ಜನರ ಕಣ್ಣು ಕುಕ್ಕುವಷ್ಟು ಸುಂದರಿಯಾಗಿದ್ದಳು. ಇವಳ ಹಾವಭಾವ ಎಲ್ಲವನ್ನೂ ಬಾದಶಹಾ(ಬಾಷ್ಯಾ) ಆಗಲೇ ತಿಳಿದುಕೊಂಡಿದ್ದ. ತನ್ನ ಸೈನಿಕರಿಗೆ ಇವಳ ಮೇಲೆ ನಿಗಾ ಇಡಲು ಹೇಳಿದ್ದ. ಬಹಳ ದಿನಗಳಿಂದ ಹೊಂಚುಹಾಕಿದ್ದ ಬಾದಶಹಾನಿಗೆ ಆಗಲೇ “ನಾಯಕಣ” ತನ್ನ ಸಂಗಡಿಗರೊಂದಿಗೆ ನ್ಯಾಯ ಪಂಚಾಯತಿಗೆ ಹೋದ ವಿಷಯ ಗೊತ್ತಾಗಿತ್ತು. ತಕ್ಷಣವೇ ತನ್ನ ಸೈನಿಕರಿಗೆ ಕಾರ್ಯಪ್ರವೃತ್ತರಾಗಿ ತಾಂಡಾದ ಕಡೆ ಬರುವ ದಾರಿಯಲ್ಲಿ ನಿಲ್ಲಿಸಿ ಅವಳನ್ನು ದರ್ಬಾಕ್ಕೆ ಕರೆತರಲು ಕಳಿಸಿದ್ದ. ಬಾದಶಾಹನ ತಲೆಯಲ್ಲಿ ಒಂದೇ ಗುಂಗು. ಹೇಗಾದರೂ ಮಾಡಿ “ನಾಯಕಣ”ಳಿಗೆ ಬಲೆ ಬೀಸಿ, ತನ್ನ ವಶ ಮಾಡಿಕೊಳ್ಳಬೇಕೆಂದು.

ಸೈನಿಕರು ಕಾರ್ಯಪ್ರವೃತ್ತರಾಗಿ ಕಣಿವೆ ಮಾರ್ಗದಲ್ಲಿ ಬಂದು ಜಮಣಿಯನ್ನು ಅಡ್ಡಗಟ್ಟಿದರು. ಎಲ್ಲರಿಗೂ ಆಶ್ಚರ್ಯ, ಯಾರು? ಏನು? ಯಾಕೇ? ಎನ್ನುವಷ್ಟರಲ್ಲಿ ಒಬ್ಬ ಸೈನಿಕನ ಬಾಯಿಂದ “ಜಮಣಿ ನಾಯಕನ್” ಅಪಕೋ ಬಾದಶಹಾ ಕಾ ಬುಲಾವ್‌ ಹಯ್ ಎಂದನು. ಗುಂಪಿನ ಜನ ಗಾಬರಿಯಾದರು, ಬಾದಶಹಾನ ದರ್ಬಾರಕ್ಕೆ ಹೋಗುವುದೆಂದರೇನು, ಗುಂಪಿನಲ್ಲಿ ಕೆಲವರು ಗಡ ಗಡ ನಡುಗಿದರು, ಮತ್ತೇ ಕೆಲವರು ವಲ್ಲಿಯಲ್ಲಿಯೇ ಉಚ್ಚೆ ಹೊಯ್ದರು. ಇವರ ಅಂಜುಗುಳಿತಕ್ಕೆ ಕಸಿವಿಸಿಯಾದ ನಾಯಕಣ “ಕಾಂಯಿ ಮರ್ದರೇ ತಮ್‌” ( ಏನು ಗಂಡಸರೋ ನೀವು) ತಮಾರ ಮುಚ್ಚೇಪರ ಧೋಬೋ ಭರ ಚಾವಳ ಬೇಸಚ, ತಮ ದರ್ಮ ಕಾಂಯಿ ( ಹಿಡಿ ಅಕ್ಕಿ ಕೂಡ್ರುವಷ್ಟು ಕೋರೆ ಮೀಸೆ ಬಿಟ್ಟಿರುವ ನೀವು ಗಂಡಸರಾ?) ಎಂದು ತನ್ನ ಜೊತೆಗಿದ್ದ ಸಂಗಡಿಗರಿಗೆ ಸವಾಳು ಹಾಕಿದಳು. “ಆ ಬಾಷ್ಯಾ ನಮಗ ಏನ್‌ ತಿಂದ ಹಾಕ್ತಾನೇನು. ಅವನೇನ ಹುಲಿನಾ, ಸಿಂಹನಾ. ನಾನ್ ಇದ್ದೀನಿ ನಡ್ರಿ” ಎಂದು ಹುರಿದುಂಬಿಸಿದಳು. ಆಗಲೇ ಸೈನಿಕರು ತಮ್ಮ ಹಿಂಬಾಲು ಬರುವಂತೆ ಸನ್ನೆ ಮಾಡಿ, ಸರ್ಪಗಾವಲಿನಲ್ಲಿ ಬಾದಶಹಾನ ದರ್ಬಾರದ ಕಡೆ ಕುದುರೆ ಸವಾರಿ ಮಾಡಿದರು. “ನಾಯಕಣ” ದಾರಿಯುದ್ದಕ್ಕೂ ತನ್ನ ಸಂಗಡಿಗರಿಗೆ ಧೈರ್ಯ ಹೇಳುತ್ತ, ಮಧ್ಯ ಮಧ್ಯದಲ್ಲಿ ಬಂಜಾರಾ ವೀರ ಪುರುಷರಾದ ಅಲಾ ಉದಲ್‌, ಜಯಮಲ್, ಫತಮಲ್, ವೀರ ಹರಿದಾಸ ಮುಂತಾದವರ ವೀರಗಾಥೆಗಳನ್ನು ಹೇಳುತ್ತ ಸಂಗಡಿಗರಿಗೆ ಬಾದಶಹಾನ ದರ್ಬಾರ ಬರುವವರಿಗೆ ಮನೋಸ್ಥೈರ್ಯ ಗಟ್ಟಿ ಮಾಡಿದಳು.

ಇತ್ತ ಬಾದಶಹಾ ದರ್ಬಾರದ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡು “ಜಮಣಿ ನಾಯಕಣ”ಳ ಬರುವಿಕೆಯನ್ನು ಕಾಯುತ್ತಿದ್ದ. ಆಗಲೇ ಸೈನಿಕರು “ಜಮಣಿ ನಾಯಕಣ”ಳಿಗೆ ದರ್ಬಾರದ ಹತ್ತಿರ ಕರೆತಂದಿರುವ ಸುದ್ದಿ ಬಾದಶಹಾನಿಗೆ ತಲುಪಿತು. ದರ್ಬಾರದೊಳಗೆ ಸರ್ಪಗಾವಲಿನ ಮಧ್ಯೆ ಮಹಾರಾಣಿಯನ್ನು ಕರೆತರುವಂತೆ ರಾಜಮರ್ಯಾದೆಯಿಂದ “ಜಮಣಿ ನಾಯಕಣ”ಳಿಗೆ ಕರೆತಂದರು. ಇವಳ ಚಲುವಿಗೆ ಮನಸೋತ ಬಾದಶಹಾ, ಕಾಮುಕ ದೃಷ್ಟಿಯಿಂದ “ನಾಯಕಣ”ಳ ಕಡೆಯೇ ದಿಟ್ಟಿಸಿ ನೋಡುತ್ತಿದ್ದ. ಅಷ್ಟರಲ್ಲಿಯೇ ರಾಂ.. ರಾಂ.. ಬಾದಶಹಾ ಎಂದು ಜಮಣಿ ನಾಯಕಣ ಹೇಳಿ ಹುಲ್ಲು ಹಾಸಿನ ಮೇಲೆ ಕುಳಿತುಕೊಂಡಳು. “ನಾಯಕಣ” ತೊಟ್ಟಿರುವ ಫೇಟಿಯಾ(ಲಂಗ)ದ ಎಡಭಾಗದ ಢುಂಗೋ (ಕಾಲುಭಾಗದಷ್ಟು ಹೊಲಿಯದೆ ಖಾಲಿ ಬಿಟ್ಟ ಭಾಗ)ದ ಮೇಲೆ ಹದ್ದುಗಣ್ಣಿನಿಂದ ನೋಡಿದವನೇ….

“ಸಮಾಲಕು ಬೈಟ ಜಮಣಿ ನಾಯಕನ್
ನಿಛೇ ಖರಗೋಸ ಘುಸ ಜಾಯೇಗಾ”

ಅರ್ಥ: ಲಂಗ ಸರಿಪಡಿಸಿಕೊಂಡು ಕೂಡ್ರು ಜಮಣಿ ನಾಯಕತಿ, ಕೆಳಗಡ ಮೊಲ ಸೇರಿಕೊಂಡಿತು.

ಬಾದಶಾಹನ ಇಂಥ ಲಂಪಟತನದ ಮಾತನ್ನು ಕೇಳಿದ ನಾಯಕತಿ, ಹರಾಮಖೋರನಿಗೆ ತಕ್ಕ ಪಾಠ ಕಲಿಸಬೇಕೆಂದು.

“ಕುತ್ತಾ ಜೈನಾ ಮನ್‌ ರಹೇಗಾತೋ
ಖರಗೋಸ್ ಅಂದರ ಘುಸ್‌ ಜಾಯೇಗಾ”

ಅರ್ಥ: ನಾಯಿಯಂತ ಮನಸ್ಸಿದ್ದರೆ ಮೊಲ ಒಳಗಡೆ ಅಡಗಿಕೊಳ್ಳುತ್ತದೆ.

“ಜಮಣಿ ನಾಯಕಣ”ಳ ಮಾತು ಕೇಳಿ ಕಸಿವಿಸಿಯಾದ ಬಾದಶಹಾ “ಇಂಗು ತಿಂಗ ಮಂಗನಂತೆ” ಮೈ ಪರಚಿಕೊಳ್ಳ ತೊಡಗಿದ. ಸೇರಿಗೆ ಸವ್ವಾಸೇರು ಇವಳ ಜವಾಬು ಎಂದು ಮನಸ್ಸಿನಲ್ಲಿ ದುಷ್ಟ ವಿಚಾರ ಮಾಡಿದ. ಹೇಗಾದರೂ ಮಾಡಿ ಇವಳನ್ನು ಭೋಗಿಸಬೇಕು ಎಂದು ನಿರ್ಧಾರ ಮಾಡಿ, ಅರಮನೆಯೊಳಗಡೆ ಬರಲು ಹೇಳಿದ. ಬಾದಶಹಾ ಮೋಸ ಮಾಡತ್ತಾನೆ ಎಂದು “ನಾಯಕಣ”ಳಿಗೆ ಸೂಕ್ಷ್ಮವಾಗಿ ಗೊತ್ತಾಯಿತು. ಅಷ್ಟರಲ್ಲಿಯೇ “ಜಮಣಿ ನಾಯಕಣ” ಗಂಡು ಕುದುರೆ, ಅರಮನೆಯ ವಟಾರದಲ್ಲಿ ಕಟ್ಟಿದ್ದ ಸೈನಿಕರ ಹೆಣ್ಣು ಕುದುರೆಯನ್ನು ನೋಡಿ, ಹೂಂಕರಿಸಿ ಮರ್ಮಾಂಗ ನಿಮರಿಸಿಕೊಂಡು ಹೆಣ್ಣು ಕುದುರೆ ಕಡೆ ನೋಡತೊಡಗಿತು. ಈ ಬಂಜಾರನ್‌ಳಿಗೆ ಸೇಡು ತೀರಿಸಿಕೊಳ್ಳಲು ಇದು ಒಳ್ಳೆಯ ಅವಕಾಶವೆಂದವನೇ..

” ಕ್ಯಾ ಜಮಣಿ ನಾಯಕನ್‌
ಕ್ಯಾ ಮಾಂಗರಾ ಹಯ್‌ ತೇರಾ ಘೋಡಾ ”

ಅರ್ಥ: ಏನು ಜಮಣಿ ನಾಯಕತಿ ನಿನ್ನ ಕುದುರೆ ಏನು ಬೇಡುತ್ತಿದೆ ?

“ಜಮಣಿ ನಾಯಕಣ”ಳಿಗೆ ಬಾದಶಹಾನ ಅಶ್ಲೀಲ ಮಾತುಗಳನ್ನು ಕೇಳಿ ಪಿತ್ತ ನೆತ್ತಿಗೇರಿತು. ಅದೇನು ಮಹಾ ಈ ಮೊಗಲಾಯಿ ಹಿಜಡಾ (ಭ್ಯಾಡ್ಯಾ) ಎಂದವಳೇ,

“ಜಗ್ಗುರ ಜಮಣಿ ಘೋಡಾರ ಬೈಟಕರ ಜಾನೇವಾಲಿ ಹಯ್‌
ಘೋಡಾ ಬಾದಶಹಾ ಕೋ ಲಂಡ ಪಕಡಕರ ಬೋಲ ರಹಾ ಹಯ್”

ಅರ್ಥ: “ಜಗ್ಗುರ ಜಮಣಿ” ಕುದುರೆ ಮೇಲೆ ಕುಳಿತುಕೊಂಡು ಹೋಗುವವಳಿದ್ದಾಳೆ. ಕುದುರೆ ನಿಮರಿಸಿಕೊಂಡ ಮರ್ಮಾಂಗ ಬಾದಶಹಾನಿಗೆ ಹಿಡಿ ಎನ್ನುತ್ತಿದೆ.

“ರಂಡೆ ಆದವಳು ನನಗೆ ಅವಮಾನ ಮಾಡಿದಳು” ಎಂದು ರೋಷಾವೇಶದಿಂದ ನಿಜಾಮ ಕುದಿದ ತಕ್ಷಣವೇ, ಬಂಜಾರನ್‌ಳನ್ನು ಕಟ್ಟಿ ಹಾಕಲು ತನ್ನ ಸೈನಿಕರಿಗೆ ಆ‌ಜ್ಞಾಪಿಸಿದ. ನಿಜಾಮನ ಮಾತು ಕೇಳಿದೊಡನೆ “ಜಮಣಿ ನಾಯಕಣ” ತನ್ನ ಸಂಗಡಿಗರೊಂದಿಗೆ ಆಗಲೇ ಅರ್ಧ ಫರ್ಲಾಂಗ ಕುದುರೆ ಸವಾರಿ ಮಾಡಿದ್ದಳು. ನಿಜಾಮನ ಸೈನಿಕರು ಬೆನ್ನಟ್ಟಿದ್ದರು. “ಜಮಣಿ ನಾಯಕಣ” ಗುಡ್ಡ-ಗಾಡು, ಹಳ್ಳ-ಕೊಳ್ಳ ಎನ್ನದೆ ಶರವೇಗದಲ್ಲಿ ತನ್ನ ಸಂಗಡಿಗರೊಂದಿಗೆ “ತಾಂಡಾ” ಸೇರಿದ್ದಳು.

” ತಾಂಡಾ ಜನರಿಗೆ ಇಂಥ ವಿಷಯ ಹೊಸದೇನಲ್ಲ. “ಜಗ್ಗು ನಾಯಕ” ಇದ್ದಾಗಲೂ ಈ ಬಗೆಯ ಕೆಲವು ಘಟನೆಗಳು ನಡೆದಿದ್ದವು. ಒಂದು ಸಲ “ಹೋಳಿ ಹುಣ್ಣಿಮೆ”ಯ ಸಂದರ್ಭದಲ್ಲಿ, ಸಂಜೆ ಊಟವಾದ ಬಳಿಕ ಯುವತಿಯರ ಒಂದು ಗುಂಪು ಬೆಳದಿಂಗಳ ರಾತ್ರಿಯಲ್ಲಿ ಸೇವಾಲಾಲನ ಗುಡಿಯ ಮುಂದೆ ಸೇರಿದ್ದರು. ಆಗ ಸೋನಿ ಮತ್ತು ಚಾಂದಿ “ಭೀಲ್ಯಾ ಢಾಲ್ಯಾ” (ತಳವಾರ)ನಿಗೆ ಕರೆದು, ಹಲಿಗೆ ಬಾರಿಸು ಹಾಡಿ ಕುಣಿಯುತ್ತೇವೆ ಎಂದು ಹುರಿದುಂಬಿಸಿದರು. ಆಗ “ಗಾಂಜಾ ತಂಬಾಕದ” ನಶೆಯಲ್ಲಿ ಕುಳಿತಿದ್ದ ಢಾಲ್ಯಾನಿಗೆ ಅಷ್ಟೇ ಬೇಕಾಗಿತ್ತು. ಎದ್ದವನೇ ಹಲಿಗೆ ಬಗಲಿಗೆ ಹಾಕಿಕೊಂಡ ಕಡ.. ಕಡ.. ಕಡ.. ಎಂಬ ಬಾರಿಸತೊಡಗಿದ. ಢಾಲ್ಯಾನ ಹಲಿಗೆ ಸದ್ದು ಕೇಳಿದ ಜನ “ಸೇವಾಲಾಲನ ಗುಡಿ”ಯ ಮುಂದೆ ಸೇರಿಕೊಂಡರು. ಅಲ್ಲಿ ನೆರೆದಿದ್ದ ಯುವತಿಯರು ಗುಂಪು ಕಟ್ಟಿಕೊಂಡು ವರ್ತುಳಾಕಾರದಲ್ಲಿ ನಿಂತು “ಸೇವಾಲಾಲ”ನನ್ನು ಕುರಿತು “ಹೋಳಿ ಹಾಡು” ಹಾಡತೊಡಗಿದರು.

“ಉಂಚಾಲ ದೇಸೇತಿ ಆಯೋರ ಮಳಾವ
ವೋಯಿ ಮಳವೇಮ ಭಾಯಾ ಡಗರೋ ಆವ
ಭಾಯಾರೋ ಹಾತೇಮ ಛೆತರಿರೀ ಛಾಂಯಾ
ಛತರಿರೋ, ಛಾಂಯಾ ಬೇಟೋರ ಸೇವಾ ಭಾಯಾ
ಸಿಳಾಕೇಮ ಬಾಯಿ ಭಾಯಿರೇ “..

ಅರ್ಥ: ಮೇಲಿನ ಪ್ರದೇಶದಿಂದ ಜನರ ಗುಂಪು ಬರುತ್ತಿದೆ. ಆ ಗುಂಪಿನಲ್ಲಿ ಸೇವಾಭಾಯಾ ಬರುತ್ತಿದ್ದಾನೆ. ಅವನ ಕೈಯಲ್ಲಿ ಕೊಡೆಯಿದೆ. ಕೊಡೆಯ ನೆರಳಲ್ಲಿ ಸೇವಾಭಾಯಾ ಬರುತ್ತಿದ್ದಾನೆ. ತಂಗಾಳಿಯಲ್ಲಿ ಸೇವಾಭಾಯಾ ಕುಳಿತಿದ್ದಾನೆ.

ವರ್ತುಳಾಕಾರದಲ್ಲಿ ನಿಂತುಕೊಂಡು ಹಾಡುತ್ತಿದ್ದ ಯುವತಿಯರು, ಹಲಿಗೆಯ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಕುಣಿಯುತ್ತಿದ್ದರು. ಹುಣ್ಣಿಮೆಯ ಚಂದಿರನ ಬೆಳಕಿನಲ್ಲಿ ಯುವತಿಯರು ತೊಟ್ಟಿದ್ದ ಚುನರಿಯ ಕಾಜಿನ ಬಿಲ್ಲೆಗಳು, ನಕ್ಷತ್ರದಂತೆ ಘಳ ಘಳನೆ ಹೊಳೆಯುತ್ತಿದ್ದವು. ಆ ನೋಟ ಕಣ್ಣಾರೆ ನೋಡಿಯೇ ಆನಂದ ಪಡುವಂತಿತ್ತು. ಆದರೆ ಅಂಥ ಸುಂದರೆ ಸಂಜೆಯ ನೃತ್ಯ ಗಾಯನದಲ್ಲಿ “ಜಗ್ಗು ನಾಯಕ” ಇರಲಿಲ್ಲ. ಕಾರಣ ಪರ ತಾಂಡಾದಲ್ಲಿ ಅವರ ಸಂಬಂಧಿಕರು ತೀರಿಕೊಂಡಿದ್ದರಿಂದ ಅಂತ್ಯ ಸಂಸ್ಕಾರಕ್ಕೆಂದು ಹೋಗಿದ್ದರು.

ಇತ್ತ ನಿಜಾಮನ ಸೈನಿಕರು ಬೇರೆ ಊರಿಗೆ ಲೂಟಿ ಮಾಡಲು ಹೊರಟಿದ್ದರು. ತಾಂಡಾದಲ್ಲಿ ಬಂಜಾರಾ ಯುವತಿಯರು ಸುಶ್ರಾವ್ಯವಾಗಿ ಹಾಡಿ ಕುಣಿಯುತ್ತಿರುವುದು, ಕೇಕೆ ಶಬ್ದ, ಹಲಿಗೆ ನಾದ, ಐದು ಫರ್ಲಾಂಗ ದೂರದಲ್ಲಿ ಹೋಗುತ್ತಿದ್ದ ಅವರ ಕಿವಿಗೆ ಬಿತ್ತು. ಇದನ್ನು ಕೇಳಿದ ಸೈನಿಕರು ಒಂದು ನಿಮಿಷ ಕುದರೆಯನ್ನು ನಿಲ್ಲಿಸಿ “ಬಂಜಾರಾ ತಾಂಡಾ”ಕ್ಕೆ ಕೊಳ್ಳೆ ಹೊಡೆಯೋಣ ಎಂದು, ಕುದುರೆಗಳನ್ನು ತಾಂಡಾದ ಕಡೆ ತಿರುಗಿಸಿದರು. ತಾಂಡಾ ಸಮೀಪ ಬಂದೊಡನೆ ಸೈನಿಕರು, ಅವರು ಹಾಡುತ್ತಿರುವ ಜಾಗದ ಕಡೆ ಬಂದು, ಅವರ ಚಲನವಲನವನ್ನು ಗುಪ್ತವಾಗಿಯೇ ವೀಕ್ಷಿಸಿದರು. ಸೈನಿಕರು ಗುಪ್ತವಾಗಿಯೇ ಸಮಾಲೋಚಿಸಿ, ಒಮ್ಮಿಂದೊಮ್ಮೆಲೆ “ಕುರಿ ಹಿಂಡಿನಲ್ಲಿ ತೋಳ ಹೊಕ್ಕಂತೆ: ನುಗ್ಗಿ ಬಿಟ್ಟರು. ಸೈನಿಕರು ಝಪಾಟಿನಲ್ಲಿ (ರಂಪಾಟದಲ್ಲಿ) ಸೋಮ್ಯಾನ ಮಗಳಾದ ಗೋಮ್ಲಿ, ಭೀಮ್ಯಾನ ಮಗಳಾದ ಪೇಮ್ಲಿ ಮತ್ತು ಪೋಮ್ಯಾನ ಮಗಳಾದ ಸೋಮ್ಲಿ, ಯಾಡಿ (ತಾಡಿ) ಬಾಪು (ತಂದೆ) ಅನ್ನುವಷ್ಟರಲ್ಲಿಯೇ ಜನರ ಮಧ್ಯದಿಂದ ಯುವತಿಯರನ್ನು ಅಪಹರಿಸಿಕೊಂಡು ಹೋದರು.

ಇತ್ತ ಹನುಮರೆಡ್ಡಿಯ ಎರೆಹೊಲದಲ್ಲಿ ಭರಪೂರ ಹತ್ತಿ ಪೀಕ ಬಂದಿರುವುದನ್ನು, ಕುರಿ ಕಾಯಲು ಹೋಗಿದ್ದ ಭೋಜ್ಯಾ ನೋಡಿ, ಅದನ್ನು ತಾಂಡಾದ ಕೆಲವು ಪುಂಡ, ಪೋಕರಿಗಳ ಮುಂದೆ ಹೇಳಿದ್ದ, ಅವರೆಲ್ಲರೂ ಸೇರಿಕೊಂಡು ಅಂದಿನ ರಾತ್ರಿ ಕಳ್ಳತನದಿಂದ ಹತ್ತಿ ಬಿಡಿಸಿಕೊಂಡು ಬರಲು ಭೋಜ್ಯಾನ ಜೊತೆ ಹೋಗಿದ್ದರು. ಬೆಳದಿಂಗಳ ರಾತ್ರಿಯಲ್ಲಿ ಹತ್ತಿ ಬಿಡಿಸುವ ಗುಂಗಿನಲ್ಲಿ ರಾತ್ರಿ ಹೋದದ್ದೇ ಗೊತ್ತಾಗಲಿಲ್ಲ. ಹತ್ತಿ ಬಿಡಿಸುವುದರಲ್ಲಿ ಮಗ್ನನಾಗಿದ್ದ ಭೋಜ್ಯಾನಿಗೆ ಒಮ್ಮಿಂದೊಮ್ಮೇಲೆ ಕಣಿವೆ ದಾರಿ ಕಡೆಗೆ ಒಂದು ಬಗೆಯ ಭಯಾನಕ ಧ್ವನಿಯಲ್ಲಿ ಯಾಡಿ.. ಬಾಪು.. ಬಚಾವೋ… ಎಂದು ಚೀರಾಡುವ ಧ್ವನಿ ಕೇಳಿಸಿತು. ಒಮ್ಮಿಂದೊಮ್ಮೇಳೇ ಹತ್ತಿ ಬಿಡಿಸುವುದನ್ನು ಅಲ್ಲಿಗೆ ಬಿಟ್ಟ ಭೋಜ್ಯಾ, ಬಲಗೈಯಲ್ಲಿ ಕುಡಗೋಲು ಹಿಡಿದವನೇ “ಮೊಲ ನೋಡಿ ನಾಯಿ ಜಿಗಿದಂತೆ” ಘಾತಾಯ್ತು ಧಾಸೋ (ಓಡಿರಿ) ಎಂದವನೇ, ಚಂಗನೆ ಹಾರಿಬಿಟ್ಟ. ಭೋಜ್ಯಾನ ಪಕ್ಕದಲ್ಲಿ ಹತ್ತಿ ಬಿಡಿಸುತ್ತಿದ್ದ ಪುನ್ಯಾ, ಚೀಲ ತುಂಬಾ ಹತ್ತಿ ಬಿಡಿಸಿದ್ದೇವು. ಹತ್ತಿ ಮಾರಿ ಬಂದ ಹಣದಿಂದ ಭರ್ಜರಿಯಾಗಿ “ಹೋಳಿ ಹಬ್ಬ” ಆಚರಿಸಬೇಕು ಎಂಬ ಕನಸು ಕಾಣುತ್ತಿದ್ದೆ; ಇದೇನು ಫಜಿತಿ ಆಯ್ತೆಂದು ಬೇರೆಯವರ ಮುಂದೆ ಗೊಣಗಿದ. ಇವರ ಸ್ವಾರ್ಥದ ಮಾತು ಕೇಳಿ ಕಸಿವಿಸಿಯಾದ “ಮಾನ್ಯಾ” ಹರಾಮಖೋರ” ಹೋಳಿ ಹಬ್ಬಕ್ಕ ಬೆಂಕಿ ಹಾಕ. ತಾಂಡಾದೊಳಗ ಘಾತ ಆಗೈತಿ, ಮೊದಲೇ “ಜಗ್ಗು ನಾಯಕ” ಇಲ್ಲ, ಎಂದು ಜಬರಿಸಿ ಭೋಜ್ಯಾ ಹೋದ ಕಡೆ ಓಡತೊಡಗಿದ.

ಕಣಿವೆ ದಾರಿ ಕಡೆ ಓಡಿ ಬಂದ ಭೋಜ್ಯಾ, ದಾರಿ ಮೇಲಿನ ಗಿಡದ ಮೇಲೆ ಅಡಗಿ ಕುಳಿತುಕೊಂಡನು. ಆಗಲೆ ಒಬ್ಬ ಸೈನಿಕ ತಾಂಡಾದ ಬೆನ್ನಟ್ಟಿದ್ದನ್ನು ನೋಡಿ, ಗಾಬರಿಯಿಂದ ಉಳಿದ ಸೈನಿಕಗಿಂತ ಮುಂದೆ ಜೋರಾಗಿ ಕುದುರೆ ಓಡಿಸಿಕೊಂಡು ಬರುತ್ತಿದ್ದ. ಸೈನಿಕರನ್ನೇ ಕಾಯುತ್ತಿದ್ದ ಭೋಜ್ಯಾ, ತಾನು ಕುಳಿತಿದ್ದ ಗಿಡದ ಕೆಳಗಡೆಯಿಂದ ಅವನ ರುಂಡ ಚಂಚಾಡಿಬಿಟ್ಟನು. ದೂರದಲ್ಲಿ ಓಡಿ ಬರುತ್ತಿದ್ದ ಧನ್ಯಾನಿಗೆ ಸೈನಿಕರು ಯುವತಿಯರನ್ನು ಅಪಹರಿಸಿಕೊಂಡು ಬರುತ್ತಿರುವುದು ಗೊತ್ತಾಯಿತು. ಆಗ ತನ್ನ ಹಿಂದೆ ಬರುತ್ತಿದ್ದವರಿಗೆ, ಸೈನಿಕರು ಕುದುರೆ ಮೇಲೆ ಬರುತ್ತಿದ್ದಾರೆ ಅಡಗಿಕೊಳ್ಳಿರಿ ಎಂದು ಪಿಸುಮಾತಿನಲ್ಲಿ ಹೇಳಿದ. ಅವನ ಹಿಂದಿದ್ದವರು ಗಿಡ-ಗಂಟಿಗಳ ಮರೆಯಲ್ಲಿ ಅಡಗಿಕೊಂಡರು. ಕುದುರೆ ಮೇಲೆ ಜೋರಾಗಿ ಬರುತ್ತಿದ್ದ ಸೈನಿಕರು ಸಮೀಪದ ಬಂದೊಡನೆ “ಮಾನ್ಯಾ” ಛೋಡೋಮತ್‌ ಚಪರಾಶಿವನೇನ (ಸಿಪಾಯಿಗಳಿಗೆ ಬಿಡಬ್ಯಾಡರಿ) ಎಂದವನೇ, ಅವರ ಮೇಲೆ ಹರಿ ಹಾಯ್ದು ಕುದುರೆ ಮೇಲಿಂದ ಕೆಳಗೆ ಕೆಡವಿಬಿಟ್ಟನು. ಮತ್ತೊಬ್ಬ ಸೈನಿಕ ಶರವೇಗದಲ್ಲಿ ಕುದುರೆ ಓಡಿಸಿಕೊಂಡು ಹೋಗಿಬಿಟ್ಟನು. ಮೂವರು ಸೈನಿಕರು ಇವರ ಕೈಗೆ ಸಿಕ್ಕಿ ಬಿದ್ದರು. ಅವರನ್ನು ಹಿಗ್ಗಾ ಮುಗ್ಗಾ ಥಳಿಸಿ ಮೆತ್ತಗೆ ಮಾಡಿದರು. “ಭಾಷ್ಯಾರ ಕೋತರಾವನೇತಿ ಬಚಾವ” “ವೇಗೆ” (ಬಾದಶಹಾನ ನಾಯಿಗಳಿಂದ ಉಳಿದೆವು) ಎಂದು ಯುವತಿಯರು ಮನದಲ್ಲಿ ಸೇವಾಲಾಲನ್ನು ಸ್ಮರಿಸಿಕೊಂಡರು.

ಪೋಮ್ಮಾನ ಮಗಳಾದ ಸೋಮ್ಲಿ, ತನ್ನ ಕಾಕಾ ಧನ್ಯಾನ ಮುಂದೆ ನಡುಗುತ್ತಲೇ, “ಭಾಡಖಾವು ಚಪರಾಶಿ ಕುದ್ರಿ ಮೇಲೆ ಕೂಡ್ರಿಸಿ ಅಟ್ಟಿಸಿಕೊಂಡು ಬರುತ್ತಿರುವಾಗ, ಚುಂಬನ ಕೊಡುವಂತೆ ಮತ್ತು ಏನೇನೋ ಮಾಡುವಂತೆ ತನಗೆ ಒತ್ತಾಯಿಸುತ್ತಿದ್ದ ಕಾಕಾ ಎಂದು ಹೇಳಿದಳು. ಸೋಮ್ಲಿಗೆ ಕೊಟ್ಟ ಕಿರುಕುಳವನ್ನು ಸಹಿಸದ ಧನ್ಯಾನ ಪಿತ್ತ ನೆತ್ತಿಗೇರಿತು. ಸಿಟ್ಟಿನ ಆವೇಶದಲ್ಲಿ ಬೇರೆಯವರ ಕೈಯಲ್ಲಿಯ ಭರ್ಚಿ ಕಸಿದುಕೊಂಡು “ಏ ಭಾಷ್ಯಾರ ಕುತ್ರಾ ” ( ಏ ಬಾದಶಹಾನ ನಾಯಿ) ಎಂದವನೇ ಸೈನಿಕನ ಹೊಟ್ಟೆಯೊಳಗೆ ಚುಚ್ಚಿಬಿಟ್ಟನು. ಸೈನಿಕ ಒಮ್ಮೇಲೆ ಅಲ್ಲಾ…. ಎಂದು ಚೀರಾಡಿ ಧರೆಗುರಳಿನು. ಅವನ ಆಕ್ರಂದನ ಮುಗಿಲು ಮುಟ್ಟಿತು. ಗೋಳಾಡಿ ಕೊನೆಯುಸಿರೆಳೇದನು. ಆಮೇಲೆ ಧನ್ಯಾ ಉಳಿದಿಬ್ಬರ ಸೈನಿಕರ ಕಡೆ ನೋಡುತ್ತ “ತುಮಾರಾ ಭೀ ಹಾಲತ್ ಅಹಿಸೆ ಹೋಗಾ” ಎಂದು ಭರ್ಚಿ ನೆಲಕ್ಕೆ ಚುಚ್ಚಿದನು. ಅವನ ಮಾತನ್ನು ಕೇಳಿ ಒಬ್ಬ ಸೈನಿಕ ಗಡಗಡ ನಡುಗುತ್ತ ವಲ್ಲಿ (ಪಂಚೆ)ಯಲ್ಲಿ ಉಚ್ಚೆ ಹೊಯ್ದುಕೊಂಡನು.

ತಾಂಡಾದ ಕಡೆಯಿಂದ ಗುಂಪು ಹಾ.. ಹೋ.. ಧಾಸೋ ಎನ್ನುತ್ತ ಇವರ ಕಡೆ ಓಡಿಬರುತ್ತಿದ್ದರು. ಮಾನ್ಯಾ ದೂರದಿಂದಲೇ ಅವರನ್ನು ನೋಡಿದವನೆ, “ಸೂ.. ಮಕ್ಕಳು, ಎಲ್ಲ ಮುಗದ ಮ್ಯಾಲ ಬರ್ತಾರ, ಎಂದು ರೇಗಾಡಿದನು. ಗುಂಪಿನವರು ಒತ್ತಟ್ಟಿಗೆ ಕೂಡಿಕೊಂಡರು. ಭೀಮ್ಯಾನ ಮಗಳಾದ ಪೇಮ್ಲಿ, ತನ್ನ ತಂದೆಯ ಕಡೆ ಓಡಿಬಂದು “ಬಾಪು” ಎಂದು ಕೊರಳು ತಬ್ಬಿಕೊಂಡು ಭೋರ‍್ಯಾಡಿ ಅಳತೊಡಗಿದಳು. ಅಲ್ಲಿಂದ ಎಲ್ಲರೂ ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಳ್ಳುತ್ತ ತಾಂಡಾದ ಕಡೆ ನಡೆದರು.

ತಾಂಡಾದಲ್ಲಿಯ ಜನ ಗರಬಡಿದವರಂತೆ ಕುಳಿತಿದ್ದರು. ಅಷ್ಟರಲ್ಲಿ ಚಪರಾಶಿಗಳನ್ನು ಎಳೆದು ತಂದದ್ದನ್ನು ನೋಡಿ ಜನ ಒಮ್ಮೇಲೆ ಕೇಕೆ ಹಾಕತೊಡಗಿದರು. ಅಪಹರಣಕ್ಕೊಳಗಾದ ಯುವತಿಯರ ಪಾಲಕರು, ಚಪರಾಶಿಗಳ ಮುಖದ ಮೇಲೆ ಕ್ಯಾಕರಿಸಿ ಉಗಳಿದರು. ಪೇಮ್ಲಿಯ ತಾಯಿ ರಮಕಿ, ಸಿಟ್ಟು ತಾಳದೆ ಚಪರಾಶಿಗಳ ಮುಖದ ಕಡೆ ಹಿಡಿ ಮಣ್ಣು ತೂರುತ್ತ, ಹೆಂಡತಿ ಮಕ್ಕಳಿಲ್ಲೇನೋ ಭಾಡ ಖಾವುಗೋಳ, ನಮ್ಮ ಹೆಣ್ಣಮಕ್ಕಳ ಹಾಂಟ ಕುಡ್ಯಾಕ ಬರ್ತಾರ, ಎಂದು ತನ್ನ ಮಗಳಾದ ಪೇಮ್ಲಿಯನ್ನು ತಬ್ಬಿಕೊಂಡು ಸಂತೈಸತೊಡಗಿದಳು. ಜನ ಈ ಮೂವರು ಸಿಪಾಯಿಗಳನ್ನು ಸೇವಾಲಾಲನ ಗುಡಿಯ ಮುಂದಿರುವ, ದೊಡ್ಡ ಬೇವಿನಗಿಡಕ್ಕೆ ಎಳೆದು ಕಟ್ಟಿ ಹಾಕಿದರು. ಕೆಲವರು ಇವರಿಗೆ ಹೀಗೇ ಬಿಟ್ಟರೆ ಸರಿ ಆಗುವುದಿಲ್ಲವೆಂದು ಹೇಳಿ ತಾಂಡಾದ “ಸಾಂಕ್ರ್ಯಾ ನಾವಿ”ಗೆ ಕರೆಸಿ ಅವನಿಂದ ಅರ್ಧತೆಲೆ, ಅರ್ಧಮೀಸೆ ಇರುವಂತೆ ಬೋಳಿಸಲಿಕ್ಕೆ ಹೇಳಿದರು. ನಾವಿ ತನ್ನ ಕಾರ್ಯ ಮುಗಿಸಿದನು.ಜನ ಥೂ.. ಛೀ.. ಹೇಳಿ ಸೈನಿಕರಿಗೆ ಇಡೀ ರಾತ್ರಿ ಬೇವಿನ ಗಿಡಕ್ಕೆ ಕಟ್ಟಿ ಹಾಕಿದರು.ಮಾರನೆ ದಿನ ಬೆಳಗ್ಗೆ ಹೆಂಗಸರು ತೊಟ್ಟು ಕೊಳ್ಳುವ ಚೂಡಿ(ದಂತದ ಬಳೆ)ಗಳನ್ನು ಸಿಪಾಯಿಗಳ ಕೈಗೆ ತೊಟಿಸಿ, ಕಸಬರಿಗೆಯಿಂದ ಮಂಗಳಾರತಿ ಮಾಡಿ ಬರಿಮೈಮೇಲೆ ಓಡಿಸಿದರು.”

ಅಂಥ ಒಂದು ಭಯಾನಕ ಘಟನೆ ನಡೆದು ಸುಮಾರು ಎಂಟ್ಹತ್ತು ವರ್ಷಗಳಾದವು ಎಂದು, ಅಂಗಳದ ಹೊರಸಿನ ಮೇಲೆ ಕುಳಿತುಕೊಂಡು ಹೋಕಾ ಸೇದುತ್ತ ಕುಳಿತಿದ್ದ ಎಂಭತ್ತು ವರ್ಷದ “ಭೀಕಾದಾದಾ” ತನ್ನ ಜೊತೆ ಹೋಕಾ ಸೇದಲು ಬಂದು ಕುಳಿತಿದ್ದ ಜಾಟೋತ ಧರ್ಮಾ, ಥಾವರ‍್ಯಾ ಢಾಡಿ, ಕೊಡಪಲ್ಲಿ ತಾಂಡಾದಿಂದ ಮೊಮ್ಮಗನ  “ಧೂಂಡ” (ಹೋಳಿ ಸಂದರ್ಭದ ನಾಮಕರಣ ಕಾರ್ಯ) ಕಾರ್ಯಕ್ಕೆಂದು ಬಂದಿದ್ದ  ನಾಥಾನಾಯಕ ಮತ್ತು ಹೋಕಾದ ಆಸೆಗೆ ದುಪ್ಪಾಟಿ ಹೊದ್ದು ಕೊಂಡು ಕಟ್ಟೆ ಆಸರೆಗೆ ಕುಳಿತಿದ್ದ “ಸಿಂಗಾಳಿರ ನಂದ್ಯಾನ” ಮುಂದೆ ಹೇಳಿದನು. ಊರು ಇದ್ದ ಮೇಲೆ ಹೊಲಗೆರಿ, ತಾಂಡಾ ಇದ್ದ ಮೇಲೆ ತಂಟೆ, ತಕರಾರು, ಇರೂದೇ ಎನ್ನುತ್ತ ಗುಡಗುಡಿ ಜೋರಾಗಿ ಜಗ್ಗಿದ ಭೀಕಾದಾದಾ”. ಆಕಾಶದ ಕಡೆ ನೋಡಿ ಏನೋ ಯೋಚಿಸುತ್ತ ಹೊಗೆ ಹೊರಹಾಕಿದನು. ವಯಸ್ಸಾದಂತೆ ಶಕ್ತಿ ಕಡಿಮೆ ಆಯ್ತು. ತನ್ನ ಪ್ರಾಯದಲ್ಲಿ ನಾಯಿ ಇಲ್ಲದೇ ಬ್ಯಾಟಿಗೆ ಹೋಗಿ ಮೊಲ ಹಿಡಕೊಂಡು ಬರ್ತಿದ್ದೆ, ತಾಕತ್ತಿದ್ದಿದ್ದರೆ ಆ ಚಪರಾಶಿಗಳಿಗೆ ಮುಷ್ಟಿಯಿಂದ ಗುದ್ದಿ ರಕ್ತ ಕಾರಸ್ತಿದ್ದೆ. ಎಂಥಾ ದಿನಮಾನಗಳು ಹ್ವಾದವು, ಎನ್ನುತ್ತ ಭೀಕಾದಾದ ಕೋರೆಮೀಸೆ ಮೇಲೆ ಕೈ ತಿರುವುತ್ತ, ಗೇಣುದ್ದ ಬೆಳ್ಳಿ ಬಣ್ಣದ ಗಡ್ಡದ ಮೇಲೆ ಕೈ ಆಡುಸುತ್ತ, ಉಳಿದವರ ಕಡೆ ನೋಡಿ, ಮತ್ತೊಂದು ದಮ್ ಹೊಕ್ಕಾ ಜಗ್ಗಿ  ಜಾಟೋತ ಧರ್ಮಾನ ಕೈಗೆ ಕೊಟ್ಟನು. ಅಷ್ಟರಲ್ಲಿ “ಸಿಂಗಾಳಿರ ನಂದ್ಯಾ” ಹೌದು ದಾದಾ ಎನ್ನುತ್ತ ಭೀಕಾದಾದಾ ಮಾತಿಗೆ ದನಿಗೂಡಿಸಿದನು.

ಬೇರೆ ಕೆಲಸದಲ್ಲಿ ತೊಡಗಿದ್ದ ಟೋಪ್ಯಾ “ಚಿಂಗಾರ್ಯಾ” ಮಂಗಲ್ಯಾ, ಭಾಣಿಯಾ ಮುಂತಾದವರು ತಮ್ಮ “ನಾಯಕಣ” ಳಿಗೆ ಗಂಡಾಂತರ ಬಂತೆಂದು ಜೀವನ ಹಂಗು ತೊರೆದು ತಾಂಡಾದ ಸಂದಿಗೊಂದಿಗಳನ್ನು ಬಿಡದೇ, ಸುದ್ದಿ ಮುಟ್ಟಿಸಿದನು. ಜನರು ಕೈಗೆ ಸಿಕ್ಕ ಬಡಿಗೆ, ಹಾರಿ, ಕೊಡ್ಲಿ, ಹತಾರ, ಜಂಬೆ, ತಲವಾರ ಮುಂತಾದ ಆಯುಧಗಳನ್ನು ತೆಗೆದುಕೊಂಡು ಓಡಿ ಬಂದರು. ಅದೇ ವೇಳೆಗಯಲ್ಲಿ ಹಾಂಡಿ(ಗಡಿಗೆ) ತೊಳೆಯುತ್ತಿದ್ದ ಹಾಂದಲಿ, ಕಟ್ಟಿಗೆ ಕಡೆಯುತ್ತಿದ್ದ ಕಮಲಿ, ಮನೆ ಅಂಗಳ ಕಸಗೂಡಿಸುತ್ತದ್ದ ಮಂಗಲಿ, ಫೇಟಿಯಾ(ಲಂಗ) ಹೊಲೆಯುತ್ತಿದ್ದ ಪೇಮಲಿ, ಆಕಳ ಹಾಲು ಹಿಂಡುತ್ತದ್ದ ಅಂಕಲಿ ಮುಂತಾದ ಹೆಂಗಳೆಯರು ಕೈಯಲ್ಲಿದ್ದ ಕೆಲಸವನ್ನು ಅರ್ಧಕ್ಕೆ ಬಿಟ್ಟು ಕುಡಗೋಲು ಒನಕೆ, ಜಂಬೆ, ಛರಿ, ಕತ್ತಿ, ಕೈಗೆ ಸಿಕ್ಕ ಮುಂತಾದ ಆಯುಧಗಳನ್ನು ಹಿಡಿದು ಕೊಂಡು ಓಡೋಡಿ ಬಂದು “ನಾಯಕ” ಣಳ ಸಹಾಯಕ್ಕೆಂದು ನಿಂತು ಕೊಂಡರು. ಈ ರಂಪಾಟವನ್ನು ಕೇಳಿಸಿಕೊಂಡು ಹೇಮ್ಲ್ಯಾ, ಕೈಯಲ್ಲಿ ಕವಣೆ ಹಿಡಿದು ಧೋತರದ ಚೋಳಿನಲ್ಲಿ ಕಲ್ಲು ತುಂಬಿ ಕೊಂಡು, ಮಾಳಿಗೆ ಮನೆ ಹತ್ತಿ ಕವಣೆ ಬೀಸತೊಡಗಿದನು.

ಚುಂಗಾಹೀರ್ಯಾ ತನ್ನ ಅರ್ಧಾಂಗಿ, ಲಂಗಡಿ(ಕುಂಟಿ) ಸಕ್ರಿ ಇಬ್ಬರೂ ಹಳ್ಳದ ಸಮೀಪ, ಒಂದು ಗುಡಿಸಲು ಹಾಕಿಕೊಂಡು, ವಾರದಲ್ಲಿ ಒಂದೆರಡು ಸಲ ಒಂದಿಷ್ಟು ಭಟ್ಟಿ ದಾರು ಇಳಿಸುತ್ತಿದ್ದರು. ಪರ ಊರಿಗೆ ಹೋಗಿ, ಸೋಹಿ ದರದಲ್ಲಿ  ಹಾಳಾದ ಬೆಲ್ಲ ತರುವ ಕೆಲಸ ಸಕ್ರಿಯದಿದ್ದರೆ, ಗುಡ್ಡಕ್ಕೆ ಹೋಗಿ ದಾರು ಇಳಿಸಲು ಬೇಕಾದ ಗಿಡದ ಹೂ-ಕಾಯಿ, ತೊಗಟೆಗಳನ್ನು ತರುವ ಕೆಲಸ ಚುಂಗಾಹಿರ‍್ಯಾನದಾಗಿತ್ತು. ಇವರಿಬ್ಬರ ಧಂದೆ ತಾಂಡಾದಲ್ಲಿ ಗುಪ್ತವಾಗಿಯೇ ನಡೆಯುತ್ತಿತ್ತು. ಹೀರ‍್ಯಾ ಮತ್ತು ಸಕ್ರೀ ಆಗಲೇ ಒಲೆಹಚ್ಚಿ ಭಟ್ಟಿ ಇಳಿಸುತ್ತಿದ್ದರು. ಬೆಂಕಿಯ ಝಳದಿಂದ ಸುಸ್ತಾದ ಹೀರ‍್ಯಾ, ತನ್ನ ಅರ್ಧಾಂಗಿಗೆ ನೋಡುವಂತೆ ಹೇಳಿ ಹೊರ ಬಂದನು. ಅಷ್ಟರಲ್ಲಿ “ಢಾಲ್ಯಾರ ಜಗನ್ಯಾ” ಗುಳ್ಳೇ ನರಿಯಂತೆ ಬಂದು ಗುಡಿಸಲು ಸೇರಿಕೊಂಡನು. ಸಕ್ರೀ ಕಡೆಯಿಂದ ಒಂದು ಸೀಸೆ ದಾರು ಪಡೆದು, ಒಂದೇ ಹೊಡೆತದಲ್ಲಿ ಗಟಗಟನೆ ಕುಡಿದು ಸೀಸೆ ಖಾಲಿ ಮಾಡಿಬಿಟ್ಟನು. “ಅಂದಂಗ ಇವತ್ತು ಗಿರಾಕಿನೇ ಭಾಳ ಕಮ್ಮಿ ಐತಿ ಜಗನ್ಯಾ ಅಂದ್ಲು”, ಒಂದಿಷ್ಟು ಚಟ್ನಿ ಕೊಡು ಭೋಜಾಯಿ(ವೈನಿ) ಅಂದನು. ಪಕ್ಕದಲ್ಲಿದ್ದ ಕರಿಕಲ್ಲಿನ ಮೇಲೆ ಒಂದೆರಡು ಹಸಿಮೆಣಸಿನಕಾಯಿ ಸ್ವಲ್ಪ ಉಪ್ಪು ಹಾಕಿ ಕಚಾ..ಪಚಾ ಕಟ್ಟಿ ಕೊಟ್ಲು. “ಸಾವಕಾಶ ತಿನ್ನು ಸತ್ತ ಹ್ವಾದಿ” ಎಂದು ಹೇಳಿದ್ಲು. ಆಗ ಭೋಜಯಿ ನಾನೇನ ಸತ್ತರ ನಡಿತೈತಿ ನಮ್ಮ “ಜಮಣಿ ನಾಯಕಣ” ಸಾಯಬಾರದೆಂದು ನಡೆದ ಘಟನೆಯ ಸುರಳಿಯನ್ನೇ ಬಿಚ್ಚಿದ. ಇದನ್ನು ಕೇಳಿದೊಡನೆ ಗಾಬರಿಯಾದ ಹೀರ್ಯಾ ಮತ್ತು ಸಕ್ರೀ, ಒಲೆಯೊಳಗಿನ ಬೆಂಕಿಯ ಕೊಳ್ಳಿಯನ್ನು ಕೈಯಲ್ಲಿ ಹಿಡಿದು ಕೊಂಡು, ಜನರ ಗುಂಪಿನ ಕಡೆಗೆ ಧಾವಿಸಿ ಬಂದರು. ತಾಂಡಾದಲ್ಲಿ ಒಂದು ಬಗೆಯ ಭಯದ ವಾತಾವರಣ ಮೂಡಿತ್ತು. ಯಾವ ಕ್ಷಣದಲ್ಲಿ ಏನಾಗುತ್ತದೋ ಎನ್ನುವಷ್ಟರ ಮಟ್ಟಿಗೆ ಜನ ಭಯಭಿತರಾಗಿದ್ದರು.

ಅಷ್ಟರಲ್ಲಿ ಆವೇಶದಿಂದ ಟೋಪ್ಯಾ, ಸೈನಿಕರೇ… ಒಂದು ವೇಳೆ ತಾಂಡಾ ಪ್ರವೇಶಿಸಿದರೆ, ತಮ್ಮ ತಲೆ ಮೇಲೆ ಬಿಸಿ ನೀರು ಸುರಿಯುತ್ತೇವೆ, ಕಣ್ಣಲ್ಲಿ ಖಾರಾಪುಡಿ ಹಾಕಿ ಬೇವಿನಗಿಡಕ್ಕೆ ಕಟ್ಟಿ ಹಾಕುತ್ತೇವೆ ಎಂದು ಗದರಿಸಿದನು. ಅಷ್ಟರಲ್ಲಿ “ಜಮಣಿ ನಾಯಕಣ”  “ಏ ಚಪರಾಶಿ ತುಮ್ ಅಗರ ಮರ್ದ ಹೋತೋ, ತಾಂಡಾ ಮೇ ಘೂಸೋ, ನಹೀ ತೋ ಇದರ ಸೇ ಹಟ್ ಜಾವೋ” ಎಂದು ಸವಾಲು ಹಾಕಿದಳು. ಮತ್ತೆ ಕೆಲವರು, ಒಂದು ಕೈ ನೋಡಿಯೇ ಬಿಡೋಣ ಎಂದರು. ಇನ್ನುಳಿದವರು ಪಂಜಿಯೊಳಗೆ ಉಚ್ಚೆ ಹೊಯ್ದರು. ಉಚ್ಚೆ ಹೊಯ್ದ ಒಬ್ಬ ಸೈನಿಕನು ಈ “ನಾಯಕನ್” ಳ ಉಸಾಬರಿ ಬೇಡವೆಂದು ಓಡಿದನು. ಅಷ್ಟರಲ್ಲಿಯೇ ತಾಂಡಾದ ಜನ ಕಣವೆಯಲ್ಲಿ ಕಲ್ಲು ಹಾಕಿ ಬೀಸಲಾರಂಭಿಸಿದರು. ಹೋ…….. ಎಂದು ಜನ ಸೈನಿಕರ ಮೇಲೆ ಮುತ್ತಿಬೀಳಲು ಮುಂದಾದರು. ಅಷ್ಟೋತ್ತಿಗೆ ಸೈನಿಕರು “ಬಂದ ದಾರಿಗೆ ಸುಂಕ ಇಲ್ಲ” ಎನ್ನುವಂತೆ ಬಾದಶಹಾನ ದರ್ಬಾರದ ಕಡೆ ಹಿಂತಿರುಗಿದರು. ಬಾದಶಹಾನಿಗೆ ಹೇಗೆ ಮುಖ ತೋರಿಸುವುದೆಂದು ಸೈನಿಕರು ನಡಗುತ್ತಿದ್ದರು. ಬಾದಶಹಾನ ಹತ್ತಿರ ಹೋಗಿ ನಡೆದ ಘಟನೆ ಹೇಳಿದರು. ಅದನ್ನು ಕೇಳಿದ ಬಾದಶಹಾ “ಅಚ್ಛಾ ಅಹೀಸಾ ಹುವಾ ಕಲ್ ದೇಖೆಂಗೆ” ಎಂದು ಸೈನಿಕರಿಗೆ ಗದರಿಸಿ ಕಳಿಸಿದ. ಅಂದಿನ ಘಟನೆಯಿಂದ ಬಾದಶಹಾ “ಜಮಣಿ ನಾಯಕಣ” ಳ ತಂಟೆಗೆ ಹೋಗಲಿಲ್ಲ.


[1]     ಹಸಾಬ – ಹೊಲಮನೆ ವಿಷಯ ಬರೆಹರಿಸುವ ನ್ಯಾಯ ಪದ್ಧತಿ.
ನಸಾಬ – ತಂಟೆ, ತಕರಾರು, ವ್ಯಾಜ್ಯ.