೧) ಅಡಛೇಡಾ ಯುವತಿಯರು ತಲೆಯ ಮೇಲೆ ಹೊದೆಯುವ ಪಲ್ಲು (ಮೇಲು ಹೊದಿಕೆ). ಬಲತುದಿಗೆ ಜಾರದಂತೆ ಕಸೂತಿ ಹಾಕಿ ಕಾಜಿನ ಬಿಲ್ಲೆ (ಈ ಅಡಛೇಡಾದ ಒಳಗಡೆ ಐದು ಬಗೆಯ ಧಾನ್ಯ ಮತ್ತು ಒಂದು ಪಾವಲಿ ಹಾಕಿರುತ್ತಾರೆ). ಜೋಡಿಸಿ ಚೌಕಾಕಾರದಲ್ಲಿ ಹೊಲಿದಿರುತಾರೆ.
೨) ಅಂಟಿರಟೋಪ ಹೆಣ್ಣು ಮಕ್ಕಳು ಕವಡೆ ಹಾಗೂ ಗೊಂಡೆಗಳಿಂದ ಸಿದ್ಧಪಡಿಸಿ ತುರುಬಿಗೆ ಕಟ್ಟಿ ಇಳಿಬಿಟ್ಟಿರುತ್ತಾರೆ.
೩) ಅಂಬಳ್ಯಾ ಸಣ್ಣ ಮಕ್ಕಳ ಕಾಲಿಗೆ ಹಾಕಿರುವ ತಾಮ್ರದೆಳೆಯ ಸುತ್ತಾಕಾರದ ಆಭರಣ.
೪) ಉಗಡಿ ತಿಂದೋಡಿ, ಲಜ್ಜೆಗೆಟ್ಟವಳು.
೫) ಏಲ ಹೆಣ್ಣು ಮಕ್ಕಳು ತೊಡುವ ಲಂಗದ ಒಂದು ಗೇಣು ಅಗಲವಿರುವ ಸೊಂಟಪಟ್ಟಿಯ ಮೇಲೆ ತೆಗೆದಿರುವ ವಿವಿಧ ಬಗೆಯ ಕಸೂತಿಗಳಲ್ಲಿ  ಇದೊಂದು ಪ್ರಕಾರ. 
೬. ಕಟೇರಿಯಾ ಹೆಣ್ಣು ಮಕ್ಕಳು ತೊಡುವ ಫೇಟಿಯಾ (ಲಂಗ)ದ ಸೊಂಟದ ಮೇಲೆ ಒಂದು ಗೇಣು ಅಗಲ ಅಳತೆ ಬಟ್ಟೆಯಲ್ಲಿ ವಿವಿಧ ಬಗೆಯ ಕಸೂತಿಗಳ ಪ್ರಕಾರದಲ್ಲಿ ಇದೊಂದು ಬಗೆ.
೭. ಕಲಣಿ ಕಾಂಚಳಿ (ಕುಪ್ಪಸ)ಯ ಕೆಳಗಡೆ ಚೌಕಾಕಾರದಲ್ಲಿ ಹೊಲೆದಿರುತ್ತಾರೆ. 
೮. ಕಟ್ಟಾ ಕಾಂಚಾಳಿ (ಕುಪ್ಪಸ)ಯ ಹಾಗೂ ಛಾಂಟಿಯಾ (ಮೇಲು ಹೊದಿಕೆ) ಮೇಲೆ ತ್ರಿಕೋನಾಕಾರದ ಸಣ್ಣ ಪ್ರಮಾಣದಲ್ಲಿ ಕಸೂತಿಯಿಂದ ತೆಗೆದಿರುತ್ತಾರೆ. 
೯. ಕನಿಯಾ ಹೆಣ್ಣು ಮಕ್ಕಳು ಕಿವಿಯಲ್ಲಿ ಧರಿಸಿ ಇಳಿಬಿಟ್ಟಿರುವ ಸರ (ಆಭರಣ) 
೧೦. ಕಸ್‌ ಹೆಣ್ಣು ಮಕ್ಕಳು ಕಾಲಲ್ಲಿ ಹಾಕುವ ಬೆರಳಾಕಾರದ ಬಟ್ಟೆ ವಸ್ತು. ಇದನ್ನು ಕಸೂತಿಯಿಂದ ಸಿದ್ಧಪಡಿಸಿ ಹೊಲೆದಿರುತ್ತಾರೆ. ಈ ಆಭರಣ ಕೆಳಗಿಳಿಯದಂತೆ ಜಾಗರೂಕತೆ ವಹಿಸಿರುತ್ತಾರೆ. 
೧೧. ಕಸೋಟಿಯಾ ಮಹಿಳೆಯರು ತೋಳಲ್ಲಿ ಹಾಕಿರುವ ಚೊಡೋ (ಹಸ್ತದಂಥ.) ಮುಂಗೈಗೆ ತಾಕದಂತೆ ರಕ್ಷಣೆಗೆಂದು ಬಟ್ಟೆಯಿಂದ ಸಿದ್ಧಪಡಿಸಿ ಅದರ ಮೇಲೆ ವಿವಿಧ ಕಸೂತಿ ಮತ್ತು ಬೆಸೆದ ನಾಣ್ಯಗಳನ್ನು ಹಾಕಿ ಸಿದ್ಧಪಡಿಸಿರುತ್ತಾರೆ. ಇದಕ್ಕೆ ಮಧ್ಯದಲ್ಲಿ ಸಣ್ಣ ಸಣ್ಣ ಗೆಜ್ಜೆಗಳನ್ನು ಹಾಕಿರುತ್ತಾರೆ. 
೧೨.ಕಣದೋರೋ ಗಂಡಸರು ಸೊಂಟಕ್ಕೆ ಕಟ್ಟಿಕೊಳ್ಳುವ ಉಡದಾರ. ಇದನ್ನು ಎರಡು ಅಥವಾ ಮೂರು ಕಾಶಿದಾರದ ಎಳೆಗಳನ್ನು ಜೋಡಿಸಿ ಹೊಲೆದು ಕಸೂತಿ ತೆಗೆದಿರುತ್ತಾರೆ. ಮಧ್ಯ ಮಧ್ಯದಲ್ಲಿ ಸಣ್ಣ ಸಣ್ಣ ಗೊಂಡೆಗಳಿಂದ ಶೃಂಗರಿಸುತ್ತಾರೆ.  ಎರಡೂ ಬದಿಗೆ ಹಾಕಿಕೊಣ್ಣಲು ಕೊಂಡಿ ಮಾಡಿರುತ್ತಾರೆ. 
೧೩. ಕಚೋಟಿ ಗಂಡಸರು ಧರಿಸುತ್ತಿದ್ದ ಲಂಗೋಟಿ.
೧೪. ಕಾಂಚಳಿ ಹೆಂಗಸರು ಧರಿಸುವ ಕಾಂಚಳಿ(ಕುಪ್ಪಸ). ಇದನ್ನು ಅಂದ ಚೆಂದದ ಕಸೂತಿಗಳಿಂದ ಮತ್ತು ರಂಗು ರಂಗಿನ ಬಟ್ಟೆಗಳಿಂದ ಹಾಗೂ ಅಲ್ಲಲ್ಲಿ ಕಾಜಿನ ಬಿಲ್ಲೆಗಳಂದ ಶೃಂಗರಿಸಿರುತ್ತಾರೆ. ಬೆನ್ನು ಭಾಗ ಖಾಲಿ ಬಿಟ್ಟಿರುತ್ತಾರೆ. (ಹೆಚ್ಚಿನ ಮಾಹಿತಿಗಾಗಿ ಕೃತಿಯಲ್ಲಿಯ ಚಿತ್ರವನ್ನು ನೋಡಿರಿ.
೧೫. ಕಾಳೋಘೇರೋ ಫೇಟಿಯಾ(ಲಂಗ)ದ ಸೊಂಟಪಟ್ಟಿಯ ಕೆಳಗಡೆ ಕರಿ ಬಟ್ಟೆಯಿಂದ ಹೊಲೆದಿರುವ ಒಂದು ಅಂಗುಲ ಅಗಲವಾಗಿರುತ್ತದೆ.
೧೬. ಕಾಳಪತಡಿ ಫೇಟಿಯಾ(ಲಂಗ)ದ ಸೊಂಟಪಟ್ಟಿಯ ಮಧ್ಯ ಮಧ್ಯದಲ್ಲಿ ಕರಿ ದಾರದಿಂದ ತೆಗೆದಿರುವ ಚೌಕಾಕಾರದ ಕಸೂತಿ.
೧೭. ಕುತರಾರ ನಕ ಫೇಟಿಯಾ(ಲಂಗ)ದ ಸೊಂಟಪಟ್ಟಿಯಲ್ಲಿ ತೆಗೆದಿರುವ ಕಸೂತಿಗಳಲ್ಲಿ ಇದು ಒಂದು. ಇದು ನಾಯಿ ಉಗರಿನ ಆಕಾರದಲ್ಲಿರುತ್ತದೆ.
೧೮. ಕೋತಳಿ ಇದನ್ನು ಮದುವೆಯ ಸಂದರ್ಭದಲ್ಲಿ ಮದುವಣಗಿತ್ತಿಗೆ ಉಡುಗರೆ ಮತ್ತು ಬಟ್ಟೆ-ಬರೆ ಹಾಕಿಕೊಳ್ಳಲು ಕೊಡುತ್ತಾರೆ. ಇದು ಒಂದು ಬಗೆಯ ಕಸೂತಿಯಿಂದ ಮತ್ತು ಕಾಜಿನ ಬಿಲ್ಲೆಗಳಿಂದ ಸಿದ್ಧಪಡಿಸಿರುವ ಒಂದು ಚೀಲ. 
೧೯. ಖವಿಯಾ ಕಾಂಚಳಿ(ಕುಪ್ಪಸ)ಯ ಎಡತೋಳಿನ ಮೇಲೆ ಚೌಕಾಕಾರವಾಗಿ ಸಿದ್ಧಪಡಿಸಿರುತ್ತಾರೆ. ಇದನ್ನು ಅಲ್ಲಲ್ಲಿ ಕಸೂತಿ ಮತ್ತು ಹನ್ನೆರಡು ಕಾಜಿ ಬಿಲ್ಲೆಗಳನ್ನು ಹಾಕಿ ಸಿದ್ಧಪಡಿಸಿ ಕಾಂಚಳಿಗೆ ಹೊಲೆದಿರುತ್ತಾರೆ.
೨೦. ಖಾಂಪಲಿ ಹೆಂಗಸರು ತೊಡುವ ಫೇಟಿಯಾ(ಲಂಗ)ದ ಕೆಳಭಾಗದಲ್ಲಿ ತ್ರಿಕೋನಾಕಾರದಲ್ಲಿ ಫೇಟಿಯಾ ಸುಂದರವಾಗಿ ಕಾಣುವಂತೆ ಹೊಲಿದಿರುತ್ತಾರೆ. ಸುಮಾರು ಒಂದು ಫೇಟಿಯಾದಲ್ಲಿ ೧೫ ರಿಂದ ೨೦ ರಷ್ಟು ವಿವಿಧ ಬಣ್ಣದ ಖಾಂಪಲಿಗಳಿರುತ್ತವೆ. 
೨೧. ಖಿಲಣ ಲಂಬಾಣಿ ಸ್ತ್ರೀಯರು ತೊಡುವ ಕಾಂಚಳಿಯ ಖವಿಯಾ (ಎಡತೋಳಿನ ಮೇಲೆ ಬಿಟ್ಟಿರುತ್ತಾರೆ)ದ ಮೇಲೆ, ಕಾಂಚಳಿಯ ಎದೆ ಭಾಗದ ಮೇಲೆ ಹೊಲೆದಿರುವ ಚೋಟಿಯಾದಲ್ಲಿಯ “ಖಲಣ” (ಕಸೂತಿ) ಮತ್ತು ಫೇಟಿಯಾದ ಸೊಂಟಪಟ್ಟಿಯಲ್ಲಿರುವ “ಲೇಪೋ” ದ ಮೇಲೆ ಕಸೂತಿ ತೆಗೆದಿರುತ್ತಾರೆ. 
೨೨. ಖಾಂಪಲಿ ಮುದುವಣಗಿತ್ತಿಗೆ ವಸ್ತು, ಒಡವೆ ಹಾಕಲು ಕೊಡುವ “ಕೋತಳಿ” (ಒಂದು ಬಗೆಯ ಚೀಲ)ಯ ಮೇಲ್ಭಾಗದಲ್ಲಿರುತ್ತದೆ.
೨೩. ಗರತಣಿ ಯುವತಿಯರು ಕಾಲಿಗೆ ಕಟ್ಟಿಕೊಳ್ಳುವ ಕರಿಮಣಿ ಸರ. 
೨೪. ಗುಣಿ ಇದನ್ನು ಸೆಣಬಿನಿಂದ ತಯಾರಿಸುವ ಚೀಲ. ಮದುವಣಗಿತ್ತಿಗೆ ಬೀಳ್ಕೋಡುವ ಸಂದರ್ಭದಲ್ಲಿ ಸಾಮಾನುಗಳನ್ನು ಹಾಕಲು ಕೊಡುತ್ತಾರೆ.
೨೫. ಗೋಟ ಹೆಂಗಸರು ತೊಡುವ ಛಾಂಟಿಯಾ (ಮೇಲ್ಮುಸುಕು)ದ ತಲೆ ಭಾಗದ ಕೆಳಗಡೆ ಕರಿ ಬಟ್ಟೆಯಿಂದ ಹೊಲಿದಿರುತ್ತಾರೆ. ಇದು ಸುಮಾರು ನಾಲ್ಕು ಬಟ್ಟ ಅಗಲವಾಗಿರುತ್ತದೆ.
೨೬. ಘುಗರಿ ಇದನ್ನು ಹೆಂಗಸರು ಮುಂಗೂದಲಿಗೆ ಇಳಿಬಿಟ್ಟಿರುತ್ತಾರೆ. ಸುಮಂಗಲೆಯ ಸಂಕೇತ. ಕೆಲಭಾಗದಲ್ಲಿ ಸಣ್ಣ ಸಣ್ಣ ಗೆಜ್ಜೆಗಳಿರುತ್ತವೆ. 
೨೭. ಘುಂಗಟೋ ಹೆಣ್ಣು ಮಕ್ಕಳು ಹೊದ್ದಿಕೊಳ್ಳುವ ಮೇಲ್ಮು ಸುಕು ಜಾರದಂತೆ ಅದಕ್ಕೆ ಕಾಜಿನ ಬಿಲ್ಲೆಗಳಿಂದ ಸಿದ್ಧಪಡಿಸಿರುತ್ತಾರೆ. 
೨೮.  ಘೇರಲಾ ಫೇಟಿಯಾ (ಲಹಂಗ)ದ ಕೆಳಭಾಗದಲ್ಲಿ ಒಂದು ಗೇಣು ಅಗಲವಿರುವ ಉದ್ದನೆಯ ಬಟ್ಟೆ. ಇದಕ್ಕೆ ಯಾವುದೇ ಕಸೂತಿ ತೆಗೆದಿರುವುದಿಲ್ಲ.
೨೯) ಘೋಡೇರ ನಳಿ ಅಂಗೈ ಅಕಾರದ ಸಣ್ಣ ಚೀಲ. ಇದನ್ನು ಮಹಿಳೆಯರು ಕಸೂತಿಯಿಂದ ಸಿದ್ಧಪಡಿಸಿರುತ್ತಾರೆ. ಚೀಲದ ಸುತ್ತ ರಿಬ್ಬನ್‌ದಿಂದ ಹೊಲೆದು ಅದರ ಮದ್ಯದಲ್ಲಿ (ಕುದುರೆ ನಳಿ) ಕಸೂತಿ ಹಾಕಿರುತ್ತಾರೆ.
೩೦)  ಚಟಕಿ ಹೆಂಗಸರು ಕಾಲಲ್ಲಿ ಹಾಕುವ ಬೆಳ್ಳಿಯ ಕಾಲ್ಬೆರಳು. 
೩೧)  ಚಿಣಗಿ ಫೇಟಿಯಾ (ಲಂಗ)ದ ಮೇಲೆ ಅಲ್ಲಲ್ಲಿ “ಚಿಣಗಿ” ಕಸೂತಿ ತೆಗೆಯುತ್ತಾರೆ.
೩೨)  ಚುಡೋ ಸುಮಂಗಲೆಯರು ಎರಡು ತೋಳಿಗೆ ಹಾಕಿಕೊಳ್ಳುವ ಹಸ್ತದಂತಿಯ ಬಳೆ. ಇದು ಸೌಭಾಗ್ಯದ ಸಂಕೇತ.
೩೩) ಚುಡಿ ಹೆಂಗಸರು ಅಂಗೈಯಿಂದ ಮುಂಗೈದವರೆಗೆ ಹಾಕಿಕೊಳ್ಳುವ ಹಸ್ತದಂರಿಯ ಒಡವೆ(ಬಳೆ)ಗಳು.
೩೪) ಚೋಟಿ ಮುದುವೆಯ ಸಂದರ್ಭದಲ್ಲಿ ಮದುಮಗನಿಗೆ ಕೊಮ್ಮಣಗಿಯ ಮೇಲೆ ಕೂರಿಸಿ ಅರಿಷಿಣ ಎಣ್ನೆ ಹಚ್ಚಿ ಎರೆಯುತ್ತಿದ್ದರು. ಆ ಸಂದರ್ಭದಲ್ಲಿ ಸಾಸು  (ಅತ್ತೆಯಾದವಳು) ಮದುಮಗನ ಚೋಟಿ (ಚಂಡಕಿ)ಗೆ ತೊಳೆಯುವ ಸಂದರ್ಭದಲ್ಲಿ ಬರುವ ನೀರನ್ನು ಒಂದೆರಡು ಬಾರಿ ಕೈಯಲ್ಲಿ ತೆಗೆದುಕೊಂಡು ಕುಡಿಯುತ್ತಿದ್ದಳು.
೩೫) ಚೋಟಿಯಾ ಕಾಂಚಳಿಯ ಎದೆಭಾಗದಲ್ಲಿ ಒಂದು ಗೇಣು ಅಗಲವಿರುವ ಬಟ್ಟೆ, ಇದನ್ನು ಅಂದವಾದ ಕಸೂತಿ ಮತ್ತು ಮಧ್ಯ ಮಧ್ಯದಲ್ಲಿ ಕಾಜಿನ ಬಿಲ್ಲೆಗಳು ಅಥವಾ ತಗಡು ತವರಿಯಿಂದ ಸಿದ್ಧಪಡಿಸಿರುತ್ತಾರೆ.
೩೬) ಚೋಕಡಿ ಸುಮಂಗಲೆಯರು ತುರುಬದ ಮೇಲಿಂದ ಇಳಿಬಿಟ್ಟಿರುವ ವಸ್ತು. ಇದನ್ನು ರಿಬ್ಬನ್‌ದಿಂದ ತಯಾರಿಸಿ ಮಧ್ಯ ಮಧ್ಯದಲ್ಲಿ ಕವಡೆಗಳನ್ನು ಹಾಕಿ ಹೊಲಿದಿರುತ್ತಾರೆ. 
೩೭) ಛಾಟಿ ಗಂಡಸರು ತೊಡುವ ಬನಿಯನ್.
೩೮)  ಛಾಂಟಿಯಾ ಸುಮಂಗಲೆಯರು ಹೊದ್ದು ಕೊಳ್ಳುವ ಮೇಲ್ಮುಸುಕು. ಇದರಲ್ಲಿ ಅಂದ ಚಂದದ ಕಸೂತಿ ರಂಗುರಂಗಿನ ಚೌಕಾಕಾರದ ಮತ್ತು ತ್ರಿಕೋನಾಕಾರದ ಬಟ್ಟೆಯ ತುಂಡುಗಳು ಹಾಗೂ ಕಾಜಿನ ಬಿಲ್ಲೆಗಳನ್ನು ಹಚ್ಚಿ ಸಿದ್ಧಪಡಿಸಿರುತ್ತಾರೆ. (ಹೆಚ್ಚಿನ ವಿವರಣೆಗೆ ಚಿತ್ರ ನೋಡಿ). 
೩೯) ಛುಂಗಾ ಗಂಡಸರು ತಲೆಗೆ ಸುತ್ತುವ ಪಾಗಡಿ (ರುಮಾಲು) ಮೇಲ್ಭಾಗದಲ್ಲಿ ಒಂದು ಗೇಣು ಉದ್ದವಾಗಿ ಬಿಟ್ಟಿರುವ ಭಾಗ.
೪೦) ಜೀವಲ್ಯಾ ಕಸೂತಿ ಇದನ್ನು ಖವ್ಯಾ ಮತ್ತು ಚೋಟಿಯಾದ ಮೇಲೆ ಅಂದವಾಗಿ ತೆಗೆದಿರುವ ಒಂದು ಪ್ರಕಾರದ ಕಸೂತಿ.
೪೧) ಝಾಮರಾ ಹೆಂಗಸರು ಕಾಲಿಗೆ ಹಾಕುವ ಆಭರಣ.
೪೨) ಝಾಂಡಿ ಬಿಳಿ ಉಣ್ಣೆಯಿಂದ ತಯಾರಿಸಿ ಅದಕ್ಕೆ ಗುಲಾಬಿ ಬಣ್ಣ ಹಾಕುತ್ತಾರೆ. ಗಂಡಸರ ಉಡದಾರಕ್ಕೆ ಮತ್ತು ಹೆಣ್ಣು ಮಕ್ಕಳ ವಿವಿಧ ಒಡವೆಗಳಿಗೆ ಉಪಯೋಗಿಸುತ್ತಾರೆ.
೪೩) ಝೋಣ್ಣಾ ಮದುವೆಯ ಸಂದರ್ಭದಲ್ಲಿ ಮದುಮಗನಿಗೆ ಎಲೆ, ಅಡಿಕೆ, ಸುಣ್ಣ , ಕಾಂಚ, ಯಾಲಕ್ಕಿ , ಅಡಕೊತ್ತು ಇತ್ಯಾದಿ ವಸ್ತುಗಳನ್ನು ಹಾಕಲು ಕೊಡುವ ಚೀಲ ಇದನ್ನು ಕಸೂತಿ ಹಾಕಿ ಅಲ್ಲಲ್ಲಿ ಕಾಜಿನ ಬಿಲ್ಲೆ ಮತ್ತು ಬದಿಗೆ ಕವಡೆಗಳನ್ನು ಹಾಕಿರುತ್ತಾರೆ. ಹೆಗಲಿಗೆ ಹಾಕಿಕೊಳ್ಳಲು ಉದ್ದನೆಯ ಪಟ್ಟಿಯನ್ನು ಹೊಲಿದಿರುತ್ತಾರೆ.
೪೪) ಟಿಕಿಯಾ ಪೂರ್ವದಲ್ಲಿ ಮದಲಿಂಗಿಗೆ ಬೀಳ್ಕೊಡುವ ಸಂದರ್ಭದಲ್ಲಿ ಕಂಟ್ಲೆತ್ತಿನ ಹಣೆಗೆ ಹಾಕುತ್ತಿದ್ದರು. ಇದನ್ನು ಅಂದವದ ಕಸೂತಿಯಿಂದ ಮತ್ತಿ ವಿವಿಧ ಬಟ್ಟೆಗಳಿಂದ ಶೃಂಗರಿಸುತ್ತಿದ್ದರು
೪೫) ಟೇಕಾ ಬಟ್ಟೆಗಳನ್ನು ಹೊಲಿಯುವಾಗ ಸಹಜವಾಗಿ ಉಪಯೋಗಿಸುವ ಕಸೂತಿ.
೪೬) ಟೋಪಲಿ ಸುಮಂಗಲೆಯರು ಮುಂಗೂದಲಿಗೆ ಇಳಿ ಬಿಟ್ಟಿರುವ ಆಭರಣ. ಇದನ್ನು ತವರು ತಗಡಿನಿಂದ ತಯಾರಿಸಿರುತ್ತಾರೆ. ಅದಕ್ಕೆ ಸಣ್ಣ ಗೆಜ್ಜೆ ಜೋಡಿಸಿ ಇಳಿ ಬಿಟ್ಟಿರುತ್ತಾರೆ. 
೪೭) ಢುಂಗೋ ಫೇಟಿಯಾ (ಲಂಗ) ಅಥವಾ ಗಗ್ಗರಿಯ ಎಡಬದಿಗೆ ಕಾಲುಭಾಗ ಹೊಲಿಯದೆ ಖಾಲಿ ಬಿಟ್ಟಿರುವ ಜಾಗಕ್ಕೆ ಢುಂಗೋ ಎನ್ನುತ್ತಾರೆ.
೪೮) ಧೋಳಮಾಕಿ ಚೋಲಿಯ ಎದೆಯ ಮೇಲಿರುತ್ತದೆ. ಮತ್ತು ಖವಿಯಾ ಎಡತೋಳಿನ ಮೇಲಿರುವ ತೋಡಗೆ. ಇವುಗಳಲ್ಲಿ ಸಣ್ಣ ನೊಣಗಳ ಹಾಗೆ ಬಿಳಿ ದಾರದಿಂದ ಕಸೂತಿ ಚಿತ್ರ ತೆಗೆದಿರುತ್ತಾರೆ. ಆದ್ದರಿಂದ ಈ ಕಸೂತಿಗೆ ಧೋಳಮಾಕಿ(ಬಿಳಿ ನೊಣ) ಎಂದು ಕರೆಯುತ್ತಾರೆ.  
೪೯) ನಕರಾ ಲಂಬಾಣಿ ಮಹಿಳೆಯು ಉಡುವ ಫೇಟಿಯಾ (ಲಂಗ) ಕಾಂಚಳಿ (ಕುಪ್ಪಸ ಅಥವಾ ಚೋಲಿ) ಹಾಗೂ ಛಂಟಿಯಾ (ಮೇಲ್ಮು ಸುಕು) ಪಾಂಬಡಿ (ಪಲ್ಲು)ಗಳ :ಮೇಲೆಯೂ ಈ ಬಗ್ಗೆ ಕಸೂತಿ ತೆಗೆಯುತ್ತಾರೆ. ನಕರಾ ಕಸೂತಿಯ “ಕಟ್ಟಾ” ಬಗೆಯ ಕಸೂತಿಯನ್ನು ತೆಗೆಯುತ್ತಾರೆ. ಒಮ್ಮೊಮ್ಮೆ “ಪೋಟೆ” ಈ ಚಿತ್ರದಲ್ಲಿ ತೋರಿಸಿರುವಂತೆ ಕಸೂತಿ ತೆಗೆಯುತ್ತಾರೆ. 
೫೦) ಪಾರಿಹಾರ ಹೆಂಗಸರ ಮುಂಗೈಗಳಿಗೆ ಕಟ್ಟಿರುವ “ಕಸೋಟಿಯಾ” ಗಳ ಮೇಲೆ ಪಾರಿ (ತಗಡು, ತವರು)ಗಳನ್ನು ಅಲ್ಲಲ್ಲಿ ಜೋಡಿಸಿ ಶೃಂಗರಿಸುತ್ತಾರೆ.
೫೧) ಪಾವಲಾ ಹೆಂಗಸರ ಮೇಲ್ಮುಸುಕಾದ ಛಾಂಟಿಯಾ ಮುಂಭಾಗದಲ್ಲಿ ಪಾವಲಾ (೨೫ ಪೈಸೆ ನಾಣ್ಯ)ಗಳನ್ನು ಸನಾರ(ಪತ್ತಾರ)ರ ಕಡೆಯಿಂದ ಬೆಸೆದು ಮಾಡಿಸಿರುತ್ತಾರೆ. ಸುಮಾರು ೫೦ರಷ್ಟು ಬೆಸೆದ ನಾಣ್ಯಗಳನ್ನು ದಪ್ಪನೆಯ ದಾರದಲ್ಲಿ ಪೋಣಿಸಿ ಛಾಂಟಿಯ ಅಥವಾ ಪಾಂಬಡಿಯ ಘುಂಗಟೋದಲ್ಲಿ ಜೋಡಿಸಿರುತ್ತಾರೆ. ಮತ್ತು ಎದೆಭಾಗದ ಮೇಲಿರುವ ಚೋಟಿಯಾದ ಮೇಲೆಯೂ ದಾರದಲ್ಲಿ ಪೋಣಿಸಿ ಹಾಕಿರುತ್ತಾರೆ.
೫೨) ಪಾಂಬಡಿ ಲಂಬಾಣಿ ಹೆಂಗಸರು ತಲೆಯ ಮೇಲೆ ಹೊದೆಯುವ ತೊಡುಗೆ. ಇದು ಬೇರೆ ಬೇರೆ ಬಣ್ಣಗಳಿಂದ ಕೂಡಿರುತ್ತದೆ. ಇದನ್ನು ಪಾಂಬಡಿ ಅಥವಾ ಪಲ್ಲು ಎಂದು ಕರೆಯುತ್ತಾರೆ.
೫೩) ಪಾಂಚಫೂಲ ಛಾಂಟಿಯಾದಲ್ಲಿ ಈ ಆಕಾರದ ಒಟ್ಟು ಐದು ಬೇರೆ ಬೇರೆ ಕಸೂತಿ ಕಲೆಗಳಲ್ಲಿ ತೆಗೆದಿರುತ್ತಾರೆ. ಆದ್ದರಿಂದ ಇದನ್ನು ಪಾಂಚಫೂಲ (ಐದು ಹೂವುಗಳು)ಎಂದು ಕರೆಯುತ್ತಾರೆ. 
೫೪) ಪಾಗಡಿ ಮದುವೆಯ ಸಂದರ್ಭದಲ್ಲಿ ಮದಲಿಂಗನು ತಲೆಗೆ ಸುತ್ತುವ ಪಟಗಾ, ಪಾಗಡಿ (ರುಮಾಲು) ಎನ್ನುತ್ತಾರೆ.
೫೫) ಪಿಲಿಯಾ ಮಹಿಳೆಯರು ಎಡಗೈ ನಾಲ್ಕು ಬೆರಳುಗಳಲ್ಲಿ ಹಾಕಿಕೊಳ್ಳುವ ಆಭರಣ. ಐವತ್ತು ಪೈಸೆಗಳ ನಾಲ್ಕು ನಾಣ್ಯಗಳಿಂದ ಪತ್ತಾರರ (ಸನಾರ) ಕಡೆಯಿಂದ ಬೆಸುಗೆ ಮಾಡಿಸಿ ನಾಲ್ಕು ನಾಣ್ಯಕ್ಕೆ ಮೇಲಭಾಗದಲ್ಲಿ ಗೆಜ್ಜೆಗಳು ಹಾಗೂ ಉದ್ದನೆಯ ಸರದಿಂದ ಪೋಣಿಸುತ್ತಾರೆ. 
೫೬) ಪಿಸಾರ ಹಾರ ಪತ್ತಾರ (ಸನಾರ)ರ ಕಡೆಯಿಂದ ಪಾವಲಿ, ಚವಲಿ, ಒಂದು ರೂಪಾಯಿಯ ನಾಣ್ಯಗಳಿಂದ ಸಿದ್ಧಪಡಿಸಿರುವ ಪಿಸಾರ ಹಾರ (ನಾಣ್ಯಗಳ ಸರ) ಇದನ್ನು ದಪ್ಪನೆಯ ದಾರದಲ್ಲಿ ಪೋಣಿಸಿ ಮಧ್ಯದಲ್ಲಿ ಕೆಂಪು ಮಣಿಗಳನ್ನು ಹಾಕಿ ತಯಾರಿಸಿರುತ್ತಾರೆ. ಇದನ್ನು ಹೆಣ್ಣು ಮಕ್ಕಳ ಕೊರಳಲ್ಲಿ ಹಾಕಿ ಕೊಳ್ಳಲು ಉಪಯೋಗಿಸುತ್ತಾರೆ. 
೫೭) ಪೋಟೆ ಛಾಂಟಿಯ, ಕಾಂಚಳಿ, ಹಾಗೂ ಫೇಟಿಯಾ ಉಡುಗೆಗಳ ಮೇಲೆ ಅಲ್ಲಲ್ಲಿ ತೆಗೆದಿರುವ ಕಸೂತಿಯ ಒಂದು ಪ್ರಕಾರ.
೫೮) ಫಡಕಿ ಯುವತಿಯರು ಹೊದ್ದು ಕೊಳ್ಳುವ ಒಂದು ಬಗೆಯ ಬಟ್ಟೆ.
೫೯) ಫೇಟಿಯಾ ಲಂಬಾಣಿ ಹೆಣ್ಣು ಮಕ್ಕಳು ಉಟ್ಟು ಕೊಳ್ಳುವ ಫೇಟಿಯಾ (ಲಂಗ). ಇದನ್ನು ಬಹಳಷ್ಟು ಕಲಾತ್ಮಕವಾಗಿ ಅಂದಚೆಂದದ ,ಕಸೂತಿ ರಂಗು ರಂಗಿನ ಬಟ್ಟೆ ಮುಂತಾದವುಗಳಿಂದ ತಯಾರಿಸುತ್ತಾರೆ. (ಉದಾ :ಚಿತ್ರ ನೋಡಿ)
೬೦) ಫೂಲಿ ಕಿವಿಯಲ್ಲಿ ಹಾಕಿಕೊಳ್ಳುವ ಫೂಲಿ(ಓಲೆ) ಆಭರಣ.  
೬೧) ಬಟವಾ ಗೇಣು ಉದ್ದ, ಕಾಲು ಭಾಗ ಅಗಲವಿರುವ ಬಟವಾ(ಎಲೆ ಅಡಿಕೆ ಚೀಲ) ಇದನ್ನು ಲಂಬಾಣಿ ಗಂಡಸರು ಮತ್ತು ಹೆಂಗಸರು ಎಲೆ ಅಡಿಕೆ ಹಾಕಲು ಉಪಯೋಗಿಸುತ್ತಾರೆ. ಇದಕ್ಕೆ ವಿವಿಧ ಬಗೆಯ ಕಸೂತಿ ಬದಿಗೆ ಚೈನು, ಸಣ್ಣ ಗೆಜ್ಜೆಗಳು ಹಾಕಿರುತ್ತಾರೆ.
೬೨)ಬಲಿಯಾ ಹೆಣ್ಣು ಮಕ್ಕಳು ಕೈಯಲ್ಲಿ ಹಾಕಿಕೊಳ್ಳುವ ಆಭರಣ.
೬೩) ಬಾಳಿಗಾಡ್ರೆ ಫೇಟಿಯಾ (ಲಂಗ)ದ ಪಟ್ಟಿ ಲೇಪೊ(ಪೋಲಪಟ್ಟಿ) ಮೇಲೆ ತೆಗೆದಿರುವ ಕಸೂತಿಯ ಹೆಸರು. ಇದನ್ನು ಬೇರೆ ಬೇರೆ ಬಣ್ಣದ ದಾರಗಳಿಂದ ತೆಗೆದಿರುತ್ತಾರೆ. 
೬೪) ಬಾಜರಬಟ್ಟೋ ಫಾಸ ಪಾದರಿ, ಅಥವಾ ಬೇರೆ ಅಲೆಮಾರಿ ಗುಂಪಿನ ಹೆಣ್ಣು ಮಕ್ಕಳಿಂದ ಪಡೆದಿರುವ “ಬಾಜರ ಬಟ್ಟೋ” ಸಣ್ಣಮಕ್ಕಳಿಗೆ ಹೆದರಿಕೆ ಮತ್ತು ಗಾಳಿಶಕಾ ಆಗದಿರಲೆಂದು ಕರಿದಾರದಲ್ಲಿ ಕೊರಳಲ್ಲಿ ಅಥವಾ ಮುಂಗೈ ತೋಳಿಗೆ ಕಟ್ಟುತ್ತಾರೆ.
೬೫) ಬಿಚವಾ ಹೆಣ್ಣು ಮಕ್ಕಳು (ನಾಲ್ಕನೆಯ) ಕಾಲ್ಬೆರಳುಗಳಲ್ಲಿ ಹಾಕಿಕೊಳ್ಳುವ ಒಂದು ಬಗೆಯ ಆಭರಣ. ಇದರ ಮೇಲೆ ಮೀನಿನ ಚಿತ್ರಿ ಇರುತ್ತದೆ. 
೬೬) ಧೋಳ ಏಲ ಹೆಣ್ಣು ಮಕ್ಕಳ ಉಡುವ ಛಾಂಟಿಯಾ ಘುಂಗಟೋದ ಮುಂಭಾಗದಲ್ಲಿ ಬಿಳಿ ದಾರದಿಂದ ಸಣ್ಣನೆಯ ಕಸೂತಿ ತೆಗೆದಿರುತ್ತಾರೆ. ಖವಿಯಾ ಮತ್ತು ಚೋಟಿಯಾ ಈ ಉಡುಗೆಗಳ ಮೇಲೆಯೂ ಈ ಕಸೂತಿ ತೆಗೆಯುತ್ತಾರೆ. 
೬೭) ಬೋದ್ಲು ಹೆಣ್ಣು ಮಕ್ಕಳು ಇದನ್ನು ಅಂಗೈಯಲ್ಲಿ ಚುಡಿ (ಹಸ್ತ ದಂತಿ)ಯ ಮೊದಲಿಗೆ ಹಾಕಿಕೊಳ್ಳುತ್ತಾರೆ. ಇದನ್ನು ಕಟ್ಟಿಗೆಯಿಂದ ತಯಾರಿಸುತ್ತಾರೆ.
೬೮) ಮಂದಳ್ಯಾ ಭಗತ(ಪೂಜಾರಿ) ಮಂತ್ರವಾದಿ ಮುಂತಾದವರಿಂದ ಮಂತ್ರಿಸಿ ಪಡೆದಿರುತ್ತಾರೆ. ಇದನ್ನು ಸೊಂಟದಲ್ಲಿ, ಕೊರಳಲ್ಲಿ ಅಥವಾ ಮುಂಗೈಯಲ್ಲಿ ಕಟ್ಟಿ ಕೊಳ್ಳುತ್ತಾರೆ.
೬೯) ಮಾಕಿ ಖವಿಯಾ, ಚೋಟಿಯಾ ಇವುಗಳ ಮೇಲೆ ಬಿಳಿ ದಾರದಿಂದ ನೊಣದ ಹಾಗೆ ಕಸೂತಿ ತೆಗೆಯುತ್ತಾರೆ. ಆದ್ದರಿಂದ ಈ ಕಸೂತಿಗೆ “ಮಾಕಿ” (ನೋಣ) ಎಂದು ಕರೆಯುತ್ತಾರೆ. ದಾರದಿಂದ ನೊಣದ ಹಾಗೆ ಕಸೂತಿ ತೆಗೆಯುತ್ತಾರೆ. ಆದ್ದರಿಂದ ಈ ಕಸೂತಿಗೆ ಮಾಕಿ (ನೊಣ) ಎಂದು ಕರೆಯುತ್ತಾರೆ. 
೭೦) ಮೋಚಡಿ ಮದುವೆ ಸಂದರ್ಭದಲ್ಲಿ ಮದಲಿಂಗನ ಕಡೆಯವರು ಕಾಲಲ್ಲಿ ಹಾಕಲು ತಂದಿರುವ ಬುಟಿನಾಕಾರದ (ಮೋಚಡಿ, ಜೂತೆ) ಚಪ್ಪಲಿ.
೭೧) ಮೇಕಳ್ಯಾ ಒಂದು ತಿಂಗಳ ಮಗುವಿನ ಕೊರಳಲ್ಲಿ  ಕಟ್ಟಲು ಸಂಯೋಜಿಸುವ “ಕರಿಮಣಿ” ಯಾಕಾರದ ಒಡವೆಗೆ “ಮೇಕಳ್ಯಾ” ಎನ್ನುತ್ತಾರೆ. ಇದರಿಂದ ಮಗುವಿಗೆ ಅಂಜಿಕೆ ಇತ್ಯಾದಿ ದೋಷಗಳು ಆಗದಿರಲೆಂಬ ಭಾವನೆಯಿಂದ ಕರಿದಾರದಲ್ಲಿಯೇ ಕಟ್ಟುತ್ತಾರೆ.
೭೨)ಮಾಟಲಿ ಬೆಳ್ಳಿಯಿಂದ ಮಾಡಿಸಿರುವ ಈ ಆಭರಣವನ್ನು  ದಂತಿಯ ಬಳೆ (ಚೂಡಿ) ಗಳ ಮುಂಭಾಗದಲ್ಲಿ  ಹಾಕಿಕೊಳ್ಳುತ್ತಾರೆ. ಇದಕ್ಕೆ ಅಲ್ಲಲ್ಲಿ ಸಕ್ಕರೆ ಗೆಜ್ಜೆಗಳನ್ನು ಹಾಕಿರುತ್ತಾರೆ. 
೭೩) ರೇಲಾ ಮಾಕಿ ಛಾಂಟಿಯ (ಮೇಲು ಹೊದಿಕೆ)ದ ಮೇಲೆ ಸಾಲು ಸಾಲಾಗಿ ನೊಣಗಳ ಹಾಗೆ ತೆಗೆದಿರುವ ಕಸೂತಿಗೆ ” ರೇಲಾ ಮಾಕಿ ” ಎಂದು ಹೆಸರು.
೭೪) ರಾತಡೋ ಛಂಟಿಯಾ ಹೆಣ್ಣು ಮಕ್ಕಳು  ಹೊದ್ದು ಕೊಳ್ಳುವ ಛಾಂಟಿಯಾಗಳು ಕೆಲವು ಕರಿ, ನೀಲಿ, ಹಸಿರು ಬಣ್ಣದ್ದು ಇರುತ್ತವೆ. ಕೆಂಪು ಬಣ್ಣದ ಹೊದಿಕೆಗೆ “ರಾತಡೋ ಛಾಂಟಿಯಾ” (ಕೆಂಪು ಓಡನಿಣಿ, ಮೇಲ್ಮುಸುಕು) ಎಂದು ಕರೆಯುತ್ತಾರೆ.
೭೫) ಲಾವಣಿ ಫೇಟಿಯಾ (ಲಹಂಗ)ದ ಕೆಳಭಾಗದಲ್ಲಿರುವ ” ಘೇರೋ”ದ ಮೇಲೆ ಇರುತ್ತದೆ. ಇದನ್ನು ಬಿಳಿ ಬಣ್ಣದ ದಾರದಿಂದ ಕಸೂತಿ ತೆಗೆಯುತ್ತಾರೆ. 
೭೬)ಲೇಪೋ ಫೇಟಿಯಾ(ಲಹಂಗ)ದ ಸೊಂಟಪಟ್ಟಿ. ಇದನ್ನು ಒಂದು ಗೇಣು ಅಗಲ, ನಾಲ್ಕು ಅಥವಾ ಐದು ಗೇಣು ಉದ್ದ ಇರುತ್ತದೆ. ಇದನ್ನು ದಪ್ಪನೆಯ ಬಟ್ಟೆಯ ಮೇಲೆ ವಿವಿಧ ಕಸೂತಿಗಳನ್ನು ತೆಗೆದು ಅಂದ ಚಂದ ಕಾಣುವಂತೆ ಹೊಲಿದಿರುತ್ತಾರೆ.
೭೭) ವಾಂಕಿಯಾ ಹೆಣ್ಣು ಮಕ್ಕಳ ಕೊರಳಲ್ಲಿ ಹಾಕುವ ಈ ಆಭರಣಕ್ಕೆ ವಾಂಕಿಯಾ ಎನ್ನುತ್ತಾರೆ. ಇದನ್ನು ಬೆಳ್ಳಿಯಿಂದ ಮಾಡಿಸಿರುತ್ತಾರೆ. ಮೇಲ್ಭಾಗದಲ್ಲಿ ಸರ, ಕೆಳಗಡೆ ಚಂದ್ರಾಕಾರದಲ್ಲಿರುತ್ತದೆ. ಕೆಳಭಾಗದಲ್ಲಿ ಬೆಸೆದ ಚವಲಿ, ಪಾವಲಿ ನಾಣ್ಯಗಳಿರುತ್ತವೆ. ನಾಣ್ಯದ ಕೆಳಗಡೆ ಕರಿಮಣಿಗಳನ್ನು ಪೋಣಿಸಿದ ಸಣ್ಣ ಗೆಜ್ಜೆಗಳಿರುತ್ತವೆ. 
೭೮) ವಿಂಟಿ ಗಂಡಸರು, ಹೆಂಗಸರು ಕೈಬೆರಳುಗಳಲ್ಲಿ ಹಾಕಿಕೊಳ್ಳುವ ಆಭರಣ (ಉಂಗುರ). 
೭೯) ವಾಗೇರ ಘರ ಹುಲಿ ಮನಿ ಎನ್ನುವ ಒಂದು ಕಸೂತಿ.
೮೦) ವಾಂಸಳಿ ಸೆಣಬಿನಿಂದ ತಯಾರಿಸಿದ ಸೊಂಟಪಟ್ಟಿ. ಗಂಡಸರು ಇದರಲ್ಲಿ ಬೆಳ್ಳಿಯ ನಾಣ್ಯಗಳನ್ನು ಹಾಕಿ ರಕ್ಷಣೆಗೆಂದು ಸೊಂಟಕ್ಕೆ ಕಟ್ಟಿಕೊಳ್ಳುತ್ತಿದ್ದರು.
೮೧) ಸಡಕ ಹೆಣ್ಣು ಮಕ್ಕಳು ತೊಡುವ ಫೇಟಿಯಾ(ಲಂಗ)ದ ಬಲಬದಿಗೆ ಸೊಂಟದಿಂದ ಮುಂಗಾಲಿನವರೆಗೆ ಕವಡೆ ಸರಗಳಿಂದ ತಯಾರಿಸಿದ ಉದ್ದನೆಯ ಕವಡೆ ಸರಕ್ಕೆ   “ಸಡಕ” ಎಂದು ಕರೆಯುತ್ತಾರೆ.
೮೨) ಸಾಂಕ ಪುರೇರೋ ಮದಲಿಂಗ ಮದಲಿಂಗಿಗೆ ಸ್ನಾನ ಮಾಡಿಸಲು ಮನೆಯಿಂದ ಹೊರತರುವ ಪೂರ್ವದಲ್ಲಿ ಮನೆಯ ಜಗಲಿಯ ಮೇಲೆ ಸ್ವಸ್ತಿಕ ಆಕಾರದಿಂದ ಚಿತ್ರ ತೆಗೆಯುತ್ತಾರೆ.
೮೩) ಸಾಡಿಬಟ್ಟೆ ಮದಲಿಂಗಿಗೆ ಹಸೆಮಣಿಯ ಮೇಲೆ ಅರಿಷಿಣ ಹಚ್ಚುವ ಸಂದರ್ಭದಲ್ಲಿ ಹಳದಿ ಸೀರೆ ತೊಡಿಸುತ್ತಿದ್ದರು. ಇದಕ್ಕೆ “ಸಾಡಿಬಟ್ಟೆ” ಎನ್ನುತ್ತಾರೆ.