೧. ಪೂರ್ವಕಥೆಗಳು

ಗಿಳಿಗೆ ಅಗ್ನಿಯ ಶಾಪ : ೧ – ೫೬

ಹಿಂದೆ ತಾರಕನೆಂಬ ಒಬ್ಬ ರಾಕ್ಷಸನು ದೇವತೆಗಳನ್ನು ಬಹಳವಾಗಿ ಪೀಡಿಸುತ್ತಿದ್ದನು. ಅವನ ಹಾವಳಿಯನ್ನು ತಾಳಲಾರದೆ ದೇವತೆಗಳು ಬ್ರಹ್ಮನಲ್ಲಿ ಮೊರೆಯಿಟ್ಟರು. ಆಗ ಬ್ರಹ್ಮನು “ದೇವತೆಗಲಿರಾ, ಈಗ ಪರಮೇಶ್ವರನು ಪಾರ್ವತಿಯನ್ನು ಮದುವೆಮಾಡಿಕೊಂಡು ಅವಳೊಂದಿಗೆ ಸಂಸಾರಸುಖವನ್ನು ಅನುಭವಿಸುತ್ತಿದ್ದಾನೆ. ನೀವು ಅವನನ್ನು ಪ್ರಾರ್ಥಿಸಿದರೆ ಆತನು ತನ್ನ ವೀರ್ಯವನ್ನು ಹೊರಗೆ ಬಿಡುತ್ತಾನೆ. ಅದನ್ನು ಅಗ್ನಿಯು ಧರಿಸಿದರೆ ಆಗ ಕುಮಾರನು ಹುಟ್ಟುತ್ತಾನೆ, ಅವನು ತಾರಕನನ್ನು ವಸುತ್ತಾನೆ” ಎಂದನು. ದೇವತೆಗಳು ಅಗ್ನಿಯನ್ನು ಈ ಕೆಲಸಕ್ಕೆ ಪ್ರೇರಿಸಲು ಅವನ ಬಳಿಗೆ ಬರುತ್ತಿದ್ದರು. ಅಗ್ನಿಗೆ ಇದು ತಿಳಿಯಿತು. ಈ ಕೆಲಸಕ್ಕೆ ಕೈಹಾಕಿದರೆ ತನಗೆ ಪಾರ್ವವತಿಯು ಶಾಪಕೊಟ್ಟಾಳೆಂಬ ಭೀತಿಯಿಂದ ಅವನು ಓಡಿಹೋಗಿ ಎಲ್ಲೋ ಅಡಗಿಕೊಂಡುಬಿಟ್ಟನು. ದೇವತೆಗಳು ಹುಡುಕಿಕೊಂಡು ಹೊರಟರು. ದಾರಿಯಲ್ಲಿ ಅವರು ಒಂದು ದೊಡ್ಡ ಆನೆಯನ್ನು ಕಂಡು “ನೀನು ಅಗ್ನಿಯನ್ನು ಕಂಡೆಯಾ?” ಎಂದು ಕೇಳಿದರು. ಅದು ಈ ಅರಳಿಮರದಲ್ಲಿ ಅಡಗಿಕೊಂಡಿದ್ದಾನೆಂದು ಅದನ್ನು ತೋರಿಸಿತು. ಅಗ್ನಿಯು ಅಲ್ಲಿಂದ ಓಟಕಿತ್ತು ಒಂದು ಬನ್ನಿಮರದಲ್ಲಿ ಅಡಗಿಕೊಂಡನು. ದೇವತೆಗಳು ಅವನನ್ನೇ ಹಿಂಬಾಲಿಸಿ ದಾರಿಯಲ್ಲಿ ಕಂಡ ಒಂದು ಗಿಳಿಯನ್ನು “ಅಗ್ನಿಯನ್ನು ನೀನು ಕಂಡೆಯಾ?” ಎಂದು ಕೇಳಿದರು. ಅದು “ಈ ಬನ್ನಿಮರದಲ್ಲಿದ್ದಾನೆ” ಎಂದು ಹೇಳಿತು. ದೇವತೆಗಳು ಅಲ್ಲಿ ಅಗ್ನಿಯನ್ನು ಕಂಡುಹಿಡಿದು ಅವನನ್ನು ತಮ್ಮ ಸಹಾಯಕ್ಕೆ ಕರೆದೊಯ್ದರು. ಅಗ್ನಿಯು ತಾನು ಅಡಗಿದ್ದನ್ನು ತಿಳಿಸಿದ ಆನೆಯ ಕುಲಕ್ಕೆ ಜಿಹ್ವಾಪರಿವೃತ್ತಿ (ನಾಲಿಗೆಯು ಹಿಂದಕ್ಕೆ ತಿರುಗುವಿಕೆ)ಯುಂಟಾಗಲಿ ಎಂದೂ, ಗಿಳಿಯ ಕುಲಕ್ಕೆ ಅಸುಟಾಲಾಪ (ಸ್ಪಷ್ಟವಾಗಿ) ಮಾತನಾಡಲು ಆಗದಿರುವಿಕೆ)ವುಂಟಾಗಲಿ ಎಂದೂ ಶಾಪವಿತ್ತನು.

ಅಗಸ್ತ್ಯಮಹರ್ಷಿಯು ವಾತಾಪಿಯನ್ನು ನಿಗ್ರಹಿಸಿದುದು: ೧ – ೮೬

ಇಲ್ವಲ, ವಾತಾಪಿ ಎಂಬ ಇಬ್ಬರು ಅಣ್ಣತಮ್ಮಂದಿರಾದ ರಾಕ್ಷಸರಿದ್ದರು. ಅವರು ಋಷಿಗಳಿಗೆ ಬಹಳ ಬಾಧೆಯನ್ನು ಕೊಡುತ್ತಿದ್ದುರ. ಅವರು ಬ್ರಾಹ್ಮಣರನ್ನು ಊಟಕ್ಕೆ ಕರೆಯುತ್ತಿದ್ದರು. ಇಲ್ವಲನು ವಾತಾಪಿಯನ್ನು ಮೇಕೆಯನ್ನಾಗಿ ಮಾಡಿಕೊಂಡು ಆ ಮಾಂಸವನ್ನು ಆಹ್ವಾನಿತರಾದ ಬ್ರಾಹ್ಮಣರಿಗೆ ಬಡಿಸುತ್ತಿದ್ದನು. ಭೋಜನವಾದ ಮೇಲೆ “ವಾತಾಪೇ ಆಗಚ್ಛ” (ವಾತಾಪಿಯೇ ಹೊರಕ್ಕೆ ಬಾ) ಎಂದು ಕೂಗುತ್ತಿದ್ದನು. ಕೂಡಲೆ ವಾತಾಪಿಯ ಬ್ರಾಹ್ಮಣರ ಹೊಟ್ಟೆಯನ್ನು ಸೀಳಿಕೊಂಡು ಹೊರಕ್ಕೆ ಬರುತ್ತಿದ್ದನು. ಬಳಿಕ ಅವರು ಸತ್ತ ಆ ಬ್ರಾಹ್ಮಣರ ಧನ ಧಾನ್ಯಾದಿಗಳನ್ನು ಅಪಹರಿಸುತ್ತಿದ್ದರು. ಹೀಗೆ ಅನೇಕ ಮಂದಿ ಬ್ರಾಹ್ಮಣರು ಕೊಲೆಗೀಡಾದರು. ಒಮ್ಮೆ ಅಗಸ್ತ್ಯನಿಗೆ ಇದೇ ಗತಿಯೊದಗಿತು. ಇಲ್ವಲನು ವಾತಾಪಿಯನ್ನು ಅದೇ ರೀತಿ ಆಡನ್ನಾಗಿ ಮಾಡಿ ಅವರಿಗೆ ತಿನ್ನಿಸಿ ಹಿಂದಿನಂತೆಯೆ

೧. ಪೂರ್ವ ಕಥೆಗಳು

“ವಾತಾಪೇ ಆಗಚ್ಛ” ಎಂದು ಕೂಗಿದನು. ಕೂಡಲೆ ಅಗಸ್ತ್ಯ ಮಹರ್ಷಿಯು “ವಾತಾಪೇ ಜೀರ್ಣೋಭವ” (ವಾತಾಪಿಯೇ ಅರಗಿಹೋಗು) ಎಂದು ಹೊಟ್ಟೆಯ ಮೇಲೆ ಕೈಯಾಡಿಸಿದನು. ವಾತಾಪಿಯು ಆ ಮುನಿಯ ಜಠರಾಗ್ನಿಗೆ ಆಹುತಿಯಾದನು. ಕೋಪಗೊಂಡ ಇಲ್ವಲನು ಅಗಸ್ತ್ಯನ ಮೇಲೆ ಎರಗಲು ಧಾವಿಸಿ ಬಂದನು. ಮಹರ್ಷಿಯು ಅವನನ್ನು ಕ್ರೂರದೃಷ್ಟಿಯಿಂದ ನೋಡಿದ ಕೂಡಲೆ ಅವನು ಸುಟ್ಟು ಬೂದಿಯಾದನು.

ವಿಂಧ್ಯದಮನ : ೧ – ೮೬

ಹಿಂದೊಮ್ಮೆ ನಾರದಮಹರ್ಷಿಯು ವಿಂಧ್ಯಪರ್ವತದ ಸಮೀಪಕ್ಕೆ ಬಂದನು. ವಿಂಧ್ಯಾದೇವನು ಬಹಳ ಭಕ್ತಿಯಿಂದ ಅವನನ್ನು ಸ್ವಾಗತಿಸಿದನು. ಕುಶಲ ಸಂಭಾಷಣೆಯಾದ ಮೇಲೆ ನಾರದನು ಅವನನ್ನು ಕುರಿತು “ವಿಂಧ್ಯದೇವ, ಸೂರ್ಯನು ಪ್ರತಿನಿತ್ಯವೂ ಮೇರುಪರ್ವತವನ್ನು ಪ್ರದಕ್ಷಿಣೆ ಮಾಡುತ್ತಾನೆ. ಹಾಗೆಯೇ ನಿನಗೇಕೆ ಮಾಡಬಾರದು. ನೀನೇನೂ ಮೇರುಪರ್ವತಕ್ಕಿಂತ ಕಮ್ಮಿಯಲ್ಲ.

ಇದು ನನಗೆ ಬಹಳ ಖೇದವನ್ನುಂಟುಮಾಡುತ್ತಿದೆ. ಅವನು ನಿನಗೂ ಪ್ರದಕ್ಷಿಣೆ ಮಾಡುವಂತೆ ಏಕೆ ಮಾಡಿಕೊಳ್ಳಬಾರದು?” ಎಂದು ಹೇಳಿ ಹೊರಟುಹೋದನು. ಬಳಿಕ ವಿಂಧ್ಯನು ಸೂರ್ಯನನ್ನು ತನಗೂ ಪ್ರದಕ್ಷಿಣೆ ಹಾಕಬೇಕೆಂದು ಕೇಳಿದನು. ಅವನು ಒಪ್ಪಲಿಲ್ಲ. ವಿಂಧ್ಯನಿಗೆ ಕೋಪಬಂತು. ಸೂರ್ಯನ ಗತಿಗೆ ಭಂಗಬರುವಂತೆ ಆಕಾಶದಲ್ಲಿ ಎತ್ತರವಾಗಿ ಬೆಳೆದನು. ಸೂರ್ಯನ ಗತಿಗೆ ತಡೆಯುಂಟಾಯಿತು. ಭೂಮಿಯ ಮೇಲೆ ಒಂದು ಕಡೆ ಬರಿಯ ಹಗಲು ಮತ್ತೊಂದು ಕಡೆ ರಾತ್ರಿಯುಂಟಾಯಿತು. ಇದರಿಂದ ಜನರಿಗೆ ಬಹಳ ತೊಂದರೆಯಾಯಿತು. ಆದ ದೇವತೆಗಳು ಕಾಶಿಯಲ್ಲಿದ್ದ ಅಗಸ್ತ್ಯಮಹರ್ಷಿಗೆ ಮೊರೆಯಿಟ್ಟರು. ಆಗ ಆ ಮಹರ್ಷಿಯು ಪತ್ನೀಸಮೇತನಾಗಿ ದಕ್ಷಿಣ ದಿಕ್ಕಿಗೆ ಹೊರಟನು. ವಿಂಧ್ಯಪರ್ವತದ ಹತ್ತಿರಕ್ಕೆ ಬಂದಾಗ ವಿಂಧ್ಯನು ತನ್ನ ಎತ್ತರವನ್ನು ತಗ್ಗಿಸಿ ನಮಸ್ಕರಿಸಿದನು. ಅಗಸ್ತ್ಯನು “ವತ್ಸ, ನಾನು ಮರಳಿ ಬರುವವರೆಗೂ ಹೀಗೆಯೇ ಇರು” ಎಂದು ಕಟ್ಟಾಜ್ಞೆಮಾಡಿ ದಕ್ಷಿಣದೇಶಕ್ಕೆ ಬಂದುಬಿಟ್ಟನು. ಮತ್ತೆ ಅವರು ಉತ್ತರದೇಶಕ್ಕೆ ಮರಳಿ ಹೋಗಲಿಲ್ಲ. ವಿಂಧ್ಯಪರ್ವತವು ಈಗಲೂ ಹಾಗೆಯೇ ನಿಂತಿದೆ. ಸೂರ್ಯನು ಎಂದಿನಂತೆ ಚಲಿಸತೊಡಗಿದನು.

ಸಮುದ್ರಪಾನ : ೧ – ೮೬

ಕಾಲೇಯರೆಂಬ ರಾಕ್ಷಸರ ತಂಡವೊಂದು ತಪಸ್ವಿಗಳಿಗೆಲ್ಲ ಬಹಳ ಹಿಂಸೆಯನ್ನು ಕೊಡುತ್ತಿತ್ತು. ರಾತ್ರಿಯ ವೇಳೆಯಲ್ಲಿ ಋಷ್ಯಾಶ್ರಮಗಳಿಗೆ ಮುತ್ತಿಗೆ, ಹಾಕಿ, ಋಷಿಗಳನ್ನು ಕೊಂದು ತಿಂದು ಓಡಿಹೋಗಿ ಸಮುದ್ರದ ಮಡುವಿನಲ್ಲಿ ಅಡಗಿಕೊಳ್ಳುತ್ತಿದ್ದರು. ಇದರಿಂದ ಋಷಿಗಳು ಕಂಗೆಟ್ಟು ತಪಸ್ಸನ್ನು ಬಿಟ್ಟು ದಿಕ್ಕುಪಾಲಾಗಿ ಓಡಿಹೋದರು. ಇಂದ್ರನೇ ಆಗಲಿ ಯಾರೇ ಆಗಲಿ ಅಟ್ಟಿಸಿಕೊಂಡು ಬಂದರೆ ಓಡಿಹೋಗಿ ಸಮುದ್ರದಲ್ಲಿ ಮುಳುಗಿ ಕಣ್ಮರೆಯಾಗಿಬಿಡುತ್ತಿದ್ದರು. ದೇವತೆಗಳು ಶ್ರೀಮನ್ನಾರಾಯಣನನ್ನು ಮರೆಹೊಕ್ಕರು. ಶ್ರೀಮನ್ನಾರಾಯಣನು “ಸಮುದ್ರದ ನೀರನ್ನು ಖಾಲಿ ಮಾಡಿದರೆ ಅವರನ್ನು ಅನಾಯಾಸವಾಗಿ ಹಿಡಿದು ಕೊಲ್ಲಬಹುದು. ಸಮುದ್ರದ ನೀರನ್ನು ಕುಡಿಯಲು ಮಹಾತ್ಮನಾದ ಅಗಸ್ತ್ಯನೇ ಸಮರ್ಥನು” ಎಂದನು. ಆಗ ದೇವತೆಗಳೆಲ್ಲರೂ ಈ ಮಹಾಕಾರ್ಯವನ್ನು ಸಾಸಲು ಅಗಸ್ತ್ಯಮುನಿಯನ್ನು ಬೇಡಿಕೊಂಡರು. ಅಗಸ್ತ್ಯಮಹರ್ಷಿಯು ದೇವತೆಗಳಿಗೆ ಅಭಯವನ್ನು ಕೊಟ್ಟು, ಅವರೊಂದಿಗೆ ಸಮುದ್ರತೀರಕ್ಕೆ ಹೋಗಿ ಸಮುದ್ರದ ನೀರನ್ನೆಲ್ಲ ಏಕಾಪೋಷನವಾಗಿ ಕುಡಿದುಬಿಟ್ಟನು. ಸಮುದ್ರವು ಖಾಲಿಯಾಯಿತು. ಒಳಗೆ ಅಡಗಿದ್ದ ಕಾಲೇಯರು ದೇವತೆಗಳ ಕಣ್ಣಿಗೆ ಬಿದ್ದರು. ದೇವತೆಗಳು ಅವರೊಂದಿಗೆ ಕಾದಾಡಿ ಅವರನ್ನು ನಾಮಾವಶೇಷರನ್ನಾಗಿ ಮಾಡಿದರು.

ಕೆಲವು ಕಾಲವು ಕಳೆದ ಮೇಲೆ ಖಾಲಿ ಬಿದ್ದ ಸಮುದ್ರವು ಭಗೀರಥನು ಭೂಮಿಗೆ ಇಳಿಸಿದ ಗಂಗಾನದಿಯಿಂದ ಮತ್ತೆ ತುಂಬಿಕೊಂಡಿತು.

ರಾವಣನು ಕೈಲಾಸವನ್ನು ಕಿತ್ತುದು : ೧ – ೧೮, ೫ – ೪೨

ಲಂಕಾಪತಿಯಾದ ರಾವಣನು ದಿಗ್ವಿಜಯಕ್ಕಾಗಿ ಹೊರಟು ಕುಬೇರನನ್ನು ಗೆದ್ದು ಅವನಲ್ಲಿದ್ದ ಪುಷ್ಪಕವೆಂಬ ವಿಮಾನವನ್ನು ಕಿತ್ತುಕೊಂಡನು. ಅದು ಬೇಕಾದ ಕಡೆಗೆ ಹೋಗಬಲ್ಲ ಅದ್ಭುತವಾದ ಶಕ್ತಿಯುಳ್ಳದ್ದು. ರಾವಣನು ಅದರಲ್ಲಿ ಕುಳಿತು ಮುಂದೆ ಹೋಗುತ್ತಿರುವಲ್ಲಿ ಇದ್ದಕ್ಕಿದಂತೆ ಅದು ನಿಂತುಬಿಟ್ಟಿತು. ಕಾರಣವನ್ನು ವಿಚಾರಿಸುವಲ್ಲಿ ಇದು ಕೈಲಾಸಪರ್ವತದ ಮೇಲುಭಾಗವೆಂದೂ ಇಲ್ಲಿ ಯಾವ ವಿಮಾನವೂ ಹಾರಾಡಬಾರದೆಂದೂ ತಿಳಿಯಿತು. ರಾವಣನಿಗೆ ಕೋಪ ಬಂದು ಆ ಬೆಟ್ಟವನ್ನು ಕಿತ್ತೊಗೆಯಬೇಕೆಂದು ಮನಸ್ಸುಮಾಡಿ ಕೆಳಗಿಳಿದು ತನ್ನ ತೋಳುಗಳಿಂದ ಕಿತ್ತು ಎತ್ತಿದನು, ಬೆಟ್ಟದ ಮೇಲಿದ್ದ ಶಿವನ ಪರಿವಾರವೆಲ್ಲ ಗಾಬರಿಗೊಂಡರು. ಪಾರ್ವತಿಯು ಹೆದರಿ ಪರಮೇಶ್ವರನನ್ನು ತಬ್ಬಿಕೊಂಡಳು. ಪರಮೇಶ್ವರನು ತನ್ನ ಹೆಬ್ಬೆರಳಿನಿಂದ ಬೆಟ್ಟವನ್ನು ಒಮ್ಮೆ ಅಮುಕಿದನು. ಪರ್ವತವು ತನ್ನ ಸ್ಥಳದಲ್ಲಿ ಮತ್ತೆ ತಳವೂರಿತು. ರಾವಣನ ತೋಳುಗಳು ಪರ್ವತದ ಅಡಿಯಲ್ಲಿ ಸಿಕ್ಕಿಕೊಂಡು ಬಿಟ್ಟುವು. ರಾವಣನು ಗಟ್ಟಿಯಾಗಿ ಕಿರುಚುತ್ತಾ ಎಳೆದುಕೊಳ್ಳಲು ಪ್ರಯತ್ನಿಸಿದನು. ಸಾಧ್ಯವೇ ಆಗಲಿಲ್ಲ. ಬಳಿಕ ಪರಮೇಶ್ವರನನ್ನು ಪರಿಪರಿಯಾಗಿ ಸ್ತೋತ್ರಮಾಡಲುಪಕ್ರಮಿಸಿದನು. ಬಹಳ ಕಾಲದ ಮೇಲೆ ಪರಮೇಶ್ವರನಿಗೆ ಕನಿಕರವುಂಟಾಗಿ ತೋಳುಗಳನ್ನು ಬಿಡಿಸಿ ವಿಮಾನವು ಮುಂದಕ್ಕೆ ಚಲಿಸಲು ಅನುಮತಿಯನ್ನು ಕೊಟ್ಟನು.

ನರ್ಮದಾನದಿಯ ಆವಿರ್ಭಾವ : ೨ – ೧೬ ವ

ಭರತಖಂಡದ ಸಪ್ತಮಹಾನದಿಗಳಲ್ಲಿ ಒಂದಾದ ನರ್ಮದಾನದಿಯು ಅಮರ ಕಂಟಕ ಅಥವಾ ಮೇಖಲಕವೆಂಬ ಪರ್ವತದಲ್ಲಿ ಹುಟ್ಟುತ್ತದೆ. ಅದು ಅಲ್ಲಿ ದೊಡ್ಡ ಬಿದಿರು ಹಿಂಡಲಿನಿಂದ ಹೊರಕ್ಕೆ ಬರುತ್ತದೆ ಎಂದು ಹೇಳಲ್ಪಟ್ಟಿದೆ.

೧. ಪೂರ್ವ ಕಥೆಗಳು

ಮಹರ್ಷಿಯ ಪುತ್ರನಾದ ಋಷ್ಯಶೃಂಗನೆಂಬ ಮಹರ್ಷಿಯನ್ನು ಬರಮಾಡಿಕೊಂಡು, ಅವನ ಪೌರೋಹಿತ್ಯದಲ್ಲಿ “ಪುತ್ರಕಾಮೇಷ್ಟಿ” ಎಂಬ ಯಾಗವನ್ನು ಮಾಡಿದನು. ಯಾಗವು ಮುಗಿಯುತ್ತಿರುವಲ್ಲಿ ಅಗ್ನಿಕುಂಡದಿಂದ ದೇವಪುರುಷನೊಬ್ಬನು ಆವಿರ್ಭವಿಸಿ ಚಿನ್ನದ ಪಾತ್ರೆಯಲ್ಲಿ ತುಂಬಿದ್ದ ಪಾಯಸವನ್ನು ದಶರಥನಿಗೆ ಕೊಟ್ಟನು. ರಾಜನು ತನ್ನ ಮೂವರು ರಾಣಿಯರಿಗೆ ಅದನ್ನು ಕುಡಿಸಿದನು. ಅವರು ಗರ್ಭವತಿಯರಾಗಿ ನಾಲ್ವರು ಪುತ್ರರನ್ನು ಪಡೆದರು. ಅವರೇ ರಾಮ ಲಕ್ಷ ಣ ಭರತ ಶತ್ರುಘ್ನರು. (ಇಲ್ಲಿ ವಿಭಾಂಡಕನೆಂದರೆ ವಿಭಾಂಡಕನ ಮಗನಾದ ಋಷ್ಯಶೃಂಗನೆಂದು ಅರ್ಥಮಾಡಬೇಕು).

ರಂಭೆಯು ಕುದುರೆಯಾದುದು: ೩ – ೧೩ ವ

ಹಿಂದೆ ಸ್ಥೂಲಶಿರಸ್ಸು ಎಂಬ ಮಹರ್ಷಿಯು ದರ್ಭೆ ಸಮಿತ್ತುಗಳನ್ನು ತರುವುದಕ್ಕಾಗಿ ಕಾಡಿನಲ್ಲಿ ತಿರುಗಾಡುತ್ತಿರುವಲ್ಲಿ “ಅಯ್ಯೋ, ನಾವು ಹಳ್ಳಕ್ಕೆ ಬೀಳುತ್ತಿದ್ದೇವೆ. ನಮ್ಮನ್ನು ಕಾಪಾಡು” ಎಂಬ ಆರ್ತನಾದವನ್ನು ಕೇಳಿ ಅಲ್ಲಿಗೆ ಬಂದನು. ಒಂದು ಬಳ್ಳಿಯನ್ನು ಹಿಡಿದುಕೊಂಡು ಜೋಲಾಡುತ್ತಾ ಇನ್ನೇನು ದೊಡ್ಡ ಹಳ್ಳಕ್ಕೆ ಬಿದ್ದು ಹೋಗುವ ಸ್ಥಿತಿಯಲ್ಲಿದ್ದ ಪುರುಷರನ್ನು ಕಂಡು ನೀವು ಯಾರು? ಎಂದು ಕೇಳಿದನು. ಅವರು “ನಾವು ಸ್ಥೂಲಶಿರಸ್ಸಿನ ಪಿತೃಗಳು. ಅವರು ಬ್ರಹ್ಮಚಾರಿಯಾಗಿದ್ದು ಸಂತಾನವನ್ನು ಮಾಡಿಕೊಳ್ಳಲಿಲ್ಲ. ಅವನ ಕಾಲಾನಂತರದಲ್ಲಿ ನಾವೆಲ್ಲರೂ ನರಕದಲ್ಲಿ ಬೀಳುತ್ತೇವೆ” ಎಂದರು. ಸ್ಥೂಲಶಿರಸ್ಸು ಅದನ್ನು ಕೇಳಿ ವಂಶವೃದ್ಧಿಗಾಗಿ ತನ್ನನ್ನು ವರಿಸುವಂತೆ ರಂಭೆಯನ್ನು ಕೇಳಿದನು. ಅವಳು “ನನಗೀಗ ದೇವತೆಗಳ ಕೆಲಸವೊಂದಿದೆ. ಅದನ್ನು ಮಾಡಿ ಮುಗಿಸಿ ಬಂದುಬಿಡುತ್ತೇನೆ” ಎಂದು ಹೇಳಿ ಹೊರಟುಹೋದವಳು ಎಷ್ಟು ಹೊತ್ತಾದರೂ ಬರಲೇಇಲ್ಲ. ಕೋಪಗೊಂಡ ಮಹರ್ಷಿಯು “ಹೆಣ್ಣು ಕುದುರೆಯಾಗು” ಎಂದು ಶಪಿಸಿದನು. ನರನಾರಾಯಣರ ಅವತಾರದವರೆಗೆ ಆ ಶಾಪವು ನಡೆಯತಕ್ಕುದಾಗಿತ್ತು.

ಅಷ್ಟವಸುಗಳಿಗೆ ಶಾಪ: ೮ – ೮೮

ಧರ್ಮಪ್ರಜಾಪತಿಯಿಂದ ದಕ್ಷಪುತ್ರಿಯಾದ ವಸು ಎಂಬುವಳಲ್ಲಿ ಆಪ, ಧರ, ದ್ರುವ ಸೋಮ, ಅನಿಲ, ಅನಲ, ಪ್ರತ್ಯೂಷ, ಪ್ರಭಾಸ ಎಂಬ ಎಂಟು ಮಕ್ಕಳು ಹುಟ್ಟಿದರು. ಇವರಿಗೆ ಅಷ್ಟವಸುಗಳೆಂದು ಹೆಸರು.

ಒಮ್ಮೆ ಇವರು ಎಂಟು ಮಂದಿಯೂ ತಮ್ಮ ಮಡದಿಯರೊಂದಿಗೆ ಸಂಚರಿಸುತ್ತಾ ವಸಿಷ್ಠಮಹರ್ಷಿಯ ಆಶ್ರಮದ ಸಮೀಪದಲ್ಲಿ ನಂದಿನೀಧೇನುವನ್ನು ಕಂಡು ಅದನ್ನು ಅಪಹರಿಸತೊಡಗಿದರು. ವಸಿಷ್ಠನು ಭೂಲೋಕದಲ್ಲಿ ಹುಟ್ಟುವಂತೆ ಅವರಿಗೆ ಶಾಪವನ್ನು ಕೊಟ್ಟನು. ಅದರಿಂದ ಅವರು ಆಗ ಶಂತನುಚಕ್ರವರ್ತಿಯ ಹೆಂಡತಿಯಾಗಿದ್ದ ಗಂಗಾದೇವಿಯಲ್ಲಿ ಮಾನವರಾಗಿ ಜನಿಸಿದರು, ಹಿರಿಯವನಾದ ಆಪನು ವಸಿಷ್ಠಶಾಪಕ್ಕೆ ಮೂಲಕಾರಣನಾದುದರಿಂದ ಭೀಷ್ಮನಾಗಿ ಹುಟ್ಟಿ ಬಹುಕಾಲ ಭೂಮಿಯಲ್ಲಿರಬೇಕಾಯಿತು. ಮಿಕ್ಕ ಏಳುಮಂದಿಯೂ ಹುಟ್ಟಿದ ಕೂಡಲೆ ಸತ್ತು ಶಾಪವನ್ನು ನೀಗಿಕೊಂಡು ತಮ್ಮ ಹಿಂದಿನ ದೇಹವನ್ನು ಪಡೆದರು.