ಶುಭಾರಂಭ :

ಮಾರ್ಚ ೯-೧೦ ಎರಡು ದಿನ ದಾವಣಗೆರೆಯಲ್ಲಿ ಹಬ್ಬದ ವಾತಾವರಣ. ಕಾರಣ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠ ಕಳೆದ ೧೩ ವರ್ಷಗಳಿಂದ ನಿರಂತರವಾಗಿ, ಯಶಸ್ವಿಯಾಗಿ ನಡೆಸುತ್ತ ಬಂದ ಅಖಿಲ ಕರ್ನಾಟಕ ಜಾನಪದ ಸಮ್ಮೇಲನದ ೧೪ನೆಯ ಅಧಿವೇಶನ ಖ್ಯಾತ ವಿದ್ವಾಂಸರಾದ ಡಾ. ಹಾ. ಮಾ. ನಾಯಕ ಅವರ ಅರ್ಥಪೂರ್ಣ ಅಧ್ಯಕ್ಷತೆಯಲ್ಲಿ ಅಲ್ಲಿ ವೈಭವದಿಂದ ನೇರವೇರಿತು. ಮಾರ್ಚ ೯ ಬೆಳಗಿನ ೧೦ ಗಂಟೆಗೆ ಬಾಪೂಜಿ ವಿದ್ಯಾಸಂಸ್ಥೆಯ ಎ. ವಿ. ಕೆ. ಮಹಿಳಾ ಕಾಲೇಜಿನ ವಿಶಾಲವಾದ ಆವರಣದಲ್ಲಿ ಹಾಕಿದ ಅಲಂಕೃತ ಸುಂದರ ಹಂದರದಲ್ಲಿ ಕಿಕ್ಕಿರಿದು ತುಂಬಿದ ಜಾನಪದ ಪ್ರೇಮಿಗಳ ಮಧ್ಯದಲ್ಲಿ ಸಮ್ಮೇಲನದ ಶುಭಾರಂಭ. ಶ್ರೀಮತಿ ಶಾಮಲಾಂಬಿಕೆ ಮತ್ತು ಕು. ಇಂದುಮತಿ ಅವರ ಜಾನಪದ ಪ್ರಾರ್ಥನೆ; ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ಜಿ. ದೇಸಾಯಿಯವರಿಂದ ಜ್ಯೋತಿ ಬೆಳಗಿಸುವುದರ ಮೂಲಕ ಸಮ್ಮೇಲನದ ಉದ್ಘಾಟನೆ. ಕೊಡಗಿನ ೧೪ ಜನ ಬೆಡಗಿಯರಿಂದ ಹೂಮಳೆಗರೆತ. ವಾಲಗದ ಮಂಗಲಧ್ವನಿ; ನೆರೆದ ಜನಸ್ತೋಮದ ಹರ್ಷೊದ್ಗಾರದ ಕರತಾಡನ; ಜನಪದಸಾಹಿತ್ಯ ಕಲೆ-ಸಂಸ್ಕೃತಿಗಳಿಗೆ, ಜಾನಪದರ ಹೃದಯ ಸಿರಿವಂತಿಕೆಗೆ ಎಲ್ಲಿಲ್ಲದ ಗೌರವ; ಸನ್ಮಾನ.

ಕನ್ನಡ ಅಧ್ಯಯನಪೀಠದ ಮುಖ್ಯಸ್ಥರೂ ಈ ಸಮ್ಮೇಲನದ ನಿರ್ದೇಶಕರೂ ಆಗಿದ್ದ ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ ಅವರು ಹಿಂದೆ ನಡೆದ ಸಮ್ಮೇಲನಗಳ ವೈಶಿಷ್ಟ್ಯ, ವೈವಿಧ್ಯ, ವೈಭವಗಳನ್ನು, ಇಂದಿನ ಸಮ್ಮೇಲನದ ಅಪೂರ್ವತೆಯನ್ನು ವಿವರಿಸುತ್ತ ಸರ್ವರಿಗೂ ಹೃದಯ ತುಂಬಿ ‘ಹೊಸ್ತಿಲ ನಮಸ್ಕಾರ’ವನ್ನು ಮಾಡಿ ಸ್ವಾಗತಿಸಿದರು. ಡಾ. ಎಸ್. ಜಿ. ದೇಸಾಯಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ‘ಈ ಸಮ್ಮೇಲನಗಳು ವಿಶ್ವವಿದ್ಯಾಲಯಕ್ಕೂ ಗ್ರಾಮೀಣ ಪರಿಸರಕ್ಕೂ ನೆರವಾದ ಸೇತುವೆಯಂತಿವೆ’ ಎಂದು ಹೇಳುತ್ತ, ಈ ಕ್ಷೇತ್ರದಲ್ಲಿ ಕನ್ನಡ ಅಧ್ಯಯನ ಪೀಠ ಸಾಧಿಸಿದ ಗಣನೀಯ ಸಾಧನೆಯನ್ನು ಶ್ಲಾಘಿಸಿದರು.

ಸಮ್ಮೇಲನವ ಸರ್ವಾಧ್ಯಕ್ಷರಾದ ಡಾ. ಹಾ. ಮಾ. ನಾಯಕ ಅವರು ವಿಚಾರ ಪ್ರಚೋದಕ ಹಾಗೂ ಚಿಂತನಪರವಾದ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಮಗೂ- ಜಾನಪದಕ್ಕೂ ಇರುವ ಸಂಬಂಧ, ತಾವು ಜನಪದದಲ್ಲಿ ಮಾಡಿದ ಕಾರ್ಯ, ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠಕ್ಕೂ ತಮಗೂ ಇರುವ ಸ್ನೇಹ, ಅದು ಮಾಡುತ್ತಿರುವ ಜಾನಪದ ಕಾರ್ಯ, ಜಾನಪದದ ಸ್ವರೂಪ, ಅದರ ವೈಶಿಷ್ಟ್ಯ, ವೈವಿಧ್ಯ, ಅದರ ಅಧ್ಯಯನದ ಪ್ರಾರಂಭದ ದೆಸೆ, ಇಂದು ಅದನ್ನು ಅಧ್ಯಯನ ಮಾಡಬೇಕಾದ ವಿಧಾನ; ಈ ವರೆಗೆ ಆದ, ಇನ್ನು ಮುಂದೆ ಆಗಬೇಕಾದ ಕಾರ್ಯಗಳ ಬಗೆಗೆ ವಿವರವಾಗಿ ನಿರೂಪಿಸಿದರು. ‘ಜಾನಪದದ ದಾರಿ’ಯಲ್ಲಿ ಅವರು ಗುರುತಿಸಿದ ಕೆಲವು ಅಂಶಗಳು ಹೀಗಿವೆ :

“ಒಂದು ಜನಾಂಗದ ತಲೆಮಾರುಗಳಿಂದಲೂ ಅಲಿಖಿತವಾಗಿ ಉಳಿದುಕೊಂಡು ಬಂದ ಪರಂಪರೆಗಳೆಲ್ಲವನ್ನೂ ಜಾನಪದ ಒಳಗೊಂಡಿರುತ್ತದೆ. ಈ ಪರಂಪರೆಯನ್ನು ದಾಖಲಿಸುವುದು ವಿಶ್ಲೇಷಿಸುವುದು ಜಾನಪದ ಅಧ್ಯಯನದ ಕೆಲಸ… ಇವತ್ತು ಜಾನಪದ ಒಂದು ವೈಜ್ಞಾನಿಕ ವಿಷಯವಾಗಿದೆ. ಅದರ ಸೂತ್ರಗಳು ಸಿದ್ಧವಾಗಿವೆ. ಆ ಸೂತ್ರಗಳಿಗೆ ನಮ್ಮ ಸಾಮಗ್ರಿಯನ್ನು ಅಳವಡಿಸುವುದು ನಾವು ಮಾಡಬೇಕಾಗಿರುವ ಕೆಲಸ… ನಮ್ಮ ಈಗಾಗಲೇ ಸಂಗ್ರಹವಾಗಿರುವ ಸಾಮಗ್ರಿಯ ಗಾತ್ರವನ್ನು ನೋಡಿದರೆ ನಡೆದಿರುವ ವಿಶ್ಲೇಷಣೆಯ ಕೆಲಸ ಏನೂ ಸಾಲದೆಂಬುದು ದೃಢವಾಗುತ್ತದೆ… ಕರ್ನಾಟಕ ಜಾನಪದ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಮ್ಮ ದಾರಿಯನ್ನು ನಿಚ್ಚಳವಾಗಿ ಕಂಡುಕೊಳ್ಳಬೇಕಾಗಿದೆ. ಜಾನಪದ ಇನ್ನೂ ಇಲ್ಲಿ ಕನ್ನೆ ಕ್ಷೇತ್ರ. ನೀವು ಮಾಡುವ ಪ್ರತಿಯೊಂದು ಕೆಲಸವೂ ಈ ಕ್ಷೇತ್ರದ ದಿಗಂತಗಳನ್ನು ವಿಸ್ತರಸುವುದಾಗಬೇಕು. ಅದೇ ಹೊತ್ತಿನಲ್ಲಿ ಜ್ಞಾನದ ಕ್ಷೇತ್ರಕ್ಕೆ ನಾವು ಕೊಡುತ್ತಿರುವುದೇನು ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳುತ್ತಿರಬೇಕು… ಇಂದು ಕನ್ನಡದ ಜಾನಪದ ಸಾಮಗ್ರಿಯನ್ನು ಜಗತ್ತಿನ ಅಧ್ಯಯನಕ್ಕೆ ಒದಗಿಸಬೇಕಾದುದೂ ನಮ್ಮ ಕರ್ತವ್ಯವೇ ಆಗಿದೆ. ಇದು ಸದ್ಯಕ್ಕೆ ಇಂಗ್ಲೀಷಿನ ಮೂಲಕ ಮಾತ್ರ ಆಗುವಂಥದು….. ನಶಿಸುವ ಜನಪದ ಕಲೆಗಳನ್ನು ಸಂಗ್ರಹಿಸಿ ಉಳಿಸಿಕೊಳ್ಳುವ ಕೆಲಸ ಹೇಗೂ ನಡೆದೀತು. ಆದರೆ ಈ ಕಲೆಗಳನ್ನು ಅವುಗಳ ಪರಂಪರೆಯನ್ನು ಮೂಲರೂಪದಲ್ಲಿ ಉಳಿಸಿಕೊಳ್ಳುವುದು ಹೇಗೆಂಬುದು ಮಾತ್ರ ಮಹತ್ವದ ಪ್ರಶ್ನೆಯಾಗಿದೆ….ಚಂದ್ರಗುತ್ತಿಯ ಬೆತ್ತಲ ಸೇವೆಯಂಥ ಮೂಢನಂಬಿಕೆಯು ನಮ್ಮ ಸಮಾಜದ ಜೀವನದಲ್ಲಿ ಶತಮಾನಗಳಿಂದ ಅಂಟಿಕೊಂಡು ಬಂದಿದೆ. ಇವುಗಳನ್ನು ಸರ್ಕಾರೀ ಆಜ್ಞೆಗಳ ಮೂಲಕ ಒಮ್ಮೆಲೆ ಹೋಗಲಾಡಿಸಲು ಸಾಧ್ಯವಿಲ್ಲ. ಅದಕ್ಕೆ ಹಿಂದಿದ್ದ ಕಾರಣಗಳನ್ನು ಹುಡುಕಿ ಸಾವಧಾನವಾಗಿ ಪರಿಹಾರ ಕಂಡ ಹಿಡಿಯಲು ಪ್ರಯತ್ನಿಸಬೇಕು… ಒಟ್ಟಿನಲ್ಲಿ ಜಾನಪದ ಒಂದು ಜೀವನ ವಿಧಾನವಾಗಿ. ಒಂದು ಅಧ್ಯಯನ ವಿಷಯವಾಗಿ ನಿರ್ದಿಷ್ಟವಾಗಿದೆ; ಖಚಿತವಾಗಿದೆ. ಅದರ ದಾರಿ ಸ್ಪಷ್ಟವಾಗಿದೆ. ನಮ್ಮ ದೇಶದ ವಿಶೇಷವಾದ ಪರಿಸ್ಥಿತಿಯಲ್ಲಿ ಮಾತ್ರ ಅದು ಹಲವು ಕವಲುಗಳ ದಾರಿಯಲ್ಲಿ ನಿಂತಿದೆ. ಮುಂದಿನ ದಾರಿಯನ್ನು ಕಂಡು ಕ್ರಮಿಸಬೇಕಾಗಿದೆ.”

ದಾವಣಗೆರೆ ಡಿ. ಆರ್. ಎಂ. ಕಾಲೇಜಿನ ಪ್ರಾಚಾರ್ಯ ಶ್ರೀ ಬಿ.ಜಿ. ನಾಗರಾಜರ ವಂದನಾರ್ಪಣೆಯೊಂದಿಗೆ ಉದ್ಘಾಟನ ಸಮಾರಂಭ ಮುಕ್ತಾಯ. ಈ ಮಧ್ಯ ಡಾ. ಬಿ. ವಿ. ಶಿರೂರ ಸಂದೇಶವಾಚನ ಮಾಡಿದರು. ಜಾನಪದ ಗಾಯಕ ಯುಗಧರ್ಮ ರಾಮಣ್ಣ ಲಾವಣಿ ಹಾಡಿದರು. ಕಾರ್ಯಕ್ರಮ ನಿರ್ವಹಣೆಯನ್ನು ಈ ಸಮ್ಮೇಲನದ ಕಾರ್ಯದರ್ಶಿ ಡಾ. ವೀರಣ್ಣ ರಾಜೂರ ಮಾಡಿದರು.

ಜನಪದ ಕುಣಿತ :

ಈ ಸಮ್ಮೇಲನಕ್ಕೆ ಎರಡು ಆಯಾಮಗಳು: ಒಂದು ವಿಚಾರ ಸಂಕಿರಣ ; ಮತ್ತೊಂದು ರಂಗದರ್ಶನ. ವಿಚಾರ ಸಂಕಿರಣದಲ್ಲಿ ನಿರೂಪಿಸಿದ, ಚರ್ಚಿಸಿದ ವಿಷಯಗಳ ಪ್ರಾತ್ಯಕ್ಷಿಕೆಯೇ ರಂಗದರ್ಶನ. ಎರಡರ ಸಂಗಮದಿಂದ ಸಮ್ಮೇಲನಕ್ಕೆ ಒಂದು ಸಮಗ್ರತೆ.

“ಜನಪದ ಕುಣಿತ-ವಾದ್ಯ-ಸಂಗೀತ” ಈ ಸಮ್ಮೇಲನದ ವಿಷಯ. ಅದು ಮೂರು ಗೋಷ್ಠಿಗಳಲ್ಲಿ ಚರ್ಚಿತವಾಯಿತು. ಮೊದಲಗೋಷ್ಠಿ ಅಂದೇ ಮಧ್ಯಾಹ್ನ ೩ ಗಂಟೆಗೆ ಆರಂಭ. ವಿಷಯ : ಜನಪದ ಕುಣಿತಗಳು. ಇದರಲ್ಲಿ ನಾಲ್ಕುಜನ ವಿದ್ವಾಂಸರು ಪ್ರಬಂಧ ಮಂಡಿಸಿದರು. ಡಾ. ಎಂ. ಜಿ. ಬಿರಾದಾರ ಈ ಗೋಷ್ಠಿಯ ಅಧ್ಯಕ್ಷರು.

ಮೊದಲನೆಯದಾಗಿ ಡಾ. ದೇವೇಂದ್ರಕುಮಾರ ಹಕಾರಿ ಅವರು ‘ಆಚರಣೆಯ ಕುಣಿತಗಳು’ ವಿಷಯ ಕುರಿತು ಪ್ರಬಂಧ ಮಂಡಿಸಿದರು. ‘ಆಚರಣೆ ಪುರಾಣೀ ಕೃತ ವ್ಯಕ್ತಿಯ ಸಂಸ್ಮರಣೆಯ ಕಲಾರೂಪ. ಆಚರಣೆಗೂ-ಆರಾಧನೆಗೂ ಇರುವ ಗಾಢ ಸಂಬಂಧವೆಂದರೆ ಪುರಾಣದ ಘಟನೆಗಳ ನಾಟ್ಯಾಭಿನಯ. ಅಂದರೆ ಪೌರಾಣಿಕ ಘಟನೆಗಳ ಅಭಿನಯವೇ ಆಚರಣೆ. ಇದು ಆಚರಣೆಯ ಕುಣಿತಗಳ ಜೀವಾಳ’ ಎಂದು ಹೇಳುತ್ತ ಪುರವಂತರ ಕುಣಿತವನ್ನು ವಿಶೇಷವಾಗಿ ಆಯ್ಕೆ ಮಾಡಿಕೊಂಡು ವಿವರಿಸಿದರು.

ಅನಂತರ ‘ಜನರಂಜನೆಯ ಕುಣಿತ’ಗಳನ್ನು ಕುರಿತು ವಿವೇಚಿಸಿದವರು ಡಾ. ಎಚ್. ಎಸ್. ರಾಮಚಂದ್ರೇಗೌಡ ಅವರು. ಜನಪದ ಕುಣಿತಗಳಲ್ಲಿ ರಂಜನೆ ಏಕೆ? ರಂಜನೆಯ ಸ್ಥಾನ, ರಂಜನೆಗೆ ಕಾರಣ, ರಂಜನೆಯ ಸ್ವಭಾವ, ಜನರಂಜನಾ ಕುಣಿತಗಳ ಬಗೆಗಳು, ಸರಳಾರ್ಥದಲ್ಲಿ ಪ್ರಾಣಿಸಂಬಂಧಿ-ಮಾನವಸಂಬಂಧಿ-ದೇವಸಂಬಂಧಿ ಕುಣಿತಗಳು, ಶಾಸ್ತ್ರೀಯ ದೃಷ್ಟಿಯಲ್ಲಿ ಸಾಮ್ಯಸಂಬಂಧಿ, ಜನಾತ್ಮಕ ಸಂಬಂಧಿ ಕುಣಿತಗಳು ಎಂದು ವಿಭಜಿಸಿ, ಒಂದೊಂದು ಕುಣಿತಗಳ ಹೆಸರು-ವಸ್ತು, ವೇಷ, ಕುಣಿತ-ನಡೆವಳಿ-ಮುನ್ನಡೆಗಳನ್ನು ಹೆಚ್ಚು ವೈಜ್ಞಾನಿಕವಾಗಿ ವಿಶ್ಲೇಷಿಸಿದರು.

ಡಾ. ರಾಮಕೃಷ್ಣ ಜೋಶಿ ‘ಯಕ್ಷಗಾನ ಕುಣಿತಗಳ’ನ್ನು ಕುರಿತು ವಿವೇಚಿಸುತ್ತ “ಯಕ್ಷಗಾನ ಪ್ರದರ್ಶನದಲ್ಲಿ ಕುಣಿತಕ್ಕೆ ಅದರದ್ದೇ ಆದ ಪ್ರತ್ಯೇಕ ಸ್ಥಾನವಿಲ್ಲ. ಸಮಷ್ಟಿಕಲೆಯಾದ ಅದರಲ್ಲಿ ಮೇಳಕ್ರಿಯೆ ಮುಖ್ಯ. ಭಾಗವತ ಕಥೆಯ ಸನ್ನಿವೇಶವನ್ನು ಹಾಡಿನ ಮೂಲಕ ಮೂಡಿಸಲು ತೊಡಗುತ್ತಿದ್ದಂತೆ ಕುಣಿತಕ್ಕೆ ಇಂಬು ದೊರೆಯುತ್ತದೆ. ಪ್ರದರ್ಶನದ ಸನ್ನಿವೇಶಕ್ಕನುಗುಣವಾಗಿ ಒಂಟಿ ಕುಣಿತ, ಜೋಡಿ ಕುಣಿತ, ಗುಂಪು ಕುಣಿತಗಳಿವೆ… ಇಂದು ಯಕ್ಷಗಾನ ವಲಯದಲ್ಲಿ ವ್ಯವಸಾಯೀ ಭಾವ ಹೆಚ್ಚಾಗುತ್ತಲಿದೆ. ಹೊಸ ಹೊಸ ಆಕರ್ಷಣೆಗಳು ಸೇರತೊಡಗಿವೆ. ವಸ್ತುನಿಷ್ಠತೆ ಮಾಯವಾಗಿ, ವ್ಯಕ್ತಿನಿಷ್ಠತೆ ಜೋರಾಗಿ ಬೆಳೆಯತೊಡಗಿದೆ. ಇದು ಹೀಗೇ ಮುಂದುವರಿದರೆ ಯಕ್ಷಗಾನ ಕುಣಿತವನ್ನು ಹುಡುಕಬೇಕಾದ ಪರಿಸ್ಥಿತಿ ಬರಬಹುದೇನೊ?” ಎಂದು ಮುಂತಾಗಿ ಹೇಳಿದರು.

ಕೊನೆಯಲ್ಲಿ ಡಾ. ಎಂ. ಜಿ. ಬಿರಾದಾರ ಅವರು ಬಯಲಾಟದ ಕುಣಿತಗಳು ಎಂಬ ವಿಷಯದ ಮೇಲೆ ಮಾತನಾಡುತ್ತ – ಬಯಲಾಟದ ಧರ್ಮಮೂಲ, ಅನುಕರಣಮೂಲ ಸಿದ್ಧಾಂತಗಳು, ಅವುಗಳ ಪ್ರಕಾರಗಳು, ಒಂದೊಂದು ಪ್ರಕಾರದ ಕುಣಿತಗಳ ವೈವಿಧ್ಯ ವೈಶಿಷ್ಟ್ಯಗಳು, ಒಂದೊಂದು ಪಾತ್ರಗಳ ಕುಣಿತಗಳ ರೀತಿ-ನೀತಿಗಳನ್ನು ಗುರುತಿಸಿ, “ಬಯಲಾಟಗಳಲ್ಲಿ ಕುಣಿತ ಸಾಕಷ್ಟು ಇದ್ದರೂ ಅವು ಶಾಸ್ತ್ರೋಕ್ತವಾಗಿಲ್ಲ. ಅವು ತಾಳಗತ್ತಿನ ಸಹಚರ್ಯೆಯಾಗಿ ಮೂಡಿಬರುತ್ತವೆ. ಉತ್ತರ ಕರ್ನಾಟಕದ ಬಯಲಾಟಗಳ ಕೂಲಂಕಷ ಅಧ್ಯಯನ ನಡೆದಿಲ್ಲವೆಂದೇ ಹೇಳಬೇಕು. ಅವು ನಶಿಸಿ ಹೋಗುವ ಮೊದಲು ಅದಕ್ಕೊಂದು ಶಾಸ್ತ್ರೀಯ ಸ್ವರೂಪ ಕೊಡುವ ಪ್ರಯತ್ನ ಮಾಡಬೇಕಾದ ಕಾಲ ಇದು” ಎಂದು ತಿಳಿಸಿದರು. ಜೊತೆಗೆ ಅಧ್ಯಕ್ಷೀಯ ಸಮಾರೋಪವನ್ನೂ ಮಾಡಿದರು. ಈ ಗೋಷ್ಠಿಯ ನಿರ್ದೇಶಕರು ಪ್ರೊ. ಬಿ. ವಿ. ವೀರಭದ್ರಪ್ಪ. ವಂದನಾರ್ಪಣೆ ಪ್ರೊ. ಎಸ್. ಎಸ್. ಭೂಸರಡ್ಡಿ ಅವರಿಂದ.

ಜನಪದ ಗೀತಗೋಷ್ಠಿ :

ಮೊದಲ ಗೋಷ್ಠಿಗೆ ಹೊಂದಿಕೊಂಡೇ ‘ಜನಪದ ಗೀತಗೋಷ್ಠಿ’ ಯೊಂದು ಡಾ. ದೇವೇಂದ್ರಕುಮಾರ ಹಕಾರಿ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಮಾತುಕತೆ ಒಂದೂ ಇಲ್ಲದೆ, ಜನಪದ ಗೀತೆಗಳನ್ನು ಮೂಲ ಧಾಟಿ, ಲಯಗಳಲ್ಲಿ ಹಾಡಿ ತೋರಿಸುವುದೇ ಈ ಗೋಷ್ಠಿಯ ವೈಶಿಷ್ಠ್ಯ. ಶ್ರೀ ಕೆ. ಯುವರಾಜ, ಯುಗಧರ್ಮ ರಾಮಣ್ಣ, ಶ್ರೀಮತಿ ಗುಣಸಾಗರಿ ಎಲಿಸವ್ವ ಮತ್ತು ಸಂಗಡಿಗರು ಹಾಗೂ ಡಾ. ಬಸವರಾಜ ಮಲಶೆಟ್ಟಿ ಇದರಲ್ಲಿ ಭಾಗವಹಿಸಿದ್ದರು. ಶ್ರೀಮತಿ ಗುಣಸಾಗರಿ ಎಲಿಸವ್ವ ಮತ್ತು ಸಂಗಡಿಗರು ಹಾಡಿದ ‘ಕಾಳಿಂಗರಾಯ ಅಥವಾ ಗುಣಸಾಗರಿ’ ಎಂಬ ಕಥನಗೀತ, ಜಾನಪದ ಕಥೆ, ಧಾಟಿ, ಲಯ ಗತ್ತುಗಳನ್ನು ಅಳವಡಿಸಿಕೊಂಡು ಎಲ್ಲರ ಮೆಚ್ಚುಗೆಯನ್ನು ಗಳಿಸಿತು. ಕೊನೆಗೆ ಡಾ. ಹಕಾರಿಯವರು ಜನಪದ ಗೀತೆಗಳನ್ನು ಹಾಡುವುದರ ಮೂಲಕ ತಮ್ಮ ಅಧ್ಯಕ್ಷೀಯ ಕಾರ್ಯವನ್ನು ಪೂರೈಸಿದರು. ಪ್ರೊ. ಎಂ. ಜಿ. ಈಶ್ವರಪ್ಪ ಇದರ ನಿರ್ದೇಶನ ಮಾಡಿದರು.

ಜನಪದ ವಾದ್ಯಗಳು :

ಎರಡನೆಯ ಗೋಷ್ಠಿ ಮಾರ್ಚ ೧೦, ಬೆಳಗಿನ ೯ ಗಂಟೆಗೆ ‘ಜನಪದ ವಾದ್ಯಗಳು’ ಎಂಬ ವಿಷಯದ ಮೇಲೆ ಆರಂಭ. ಇದರ ಅಧ್ಯಕ್ಷತೆಯನ್ನು ಡಾ. ಬಿ.ವಿ. ಮಲ್ಲಾಪೂರ ವಹಿಸಿದ್ದರು. ಪ್ರೊ. ಎಂ.ಎಂ. ಪಡಶೆಟ್ಟಿ ‘ಚರ್ಮ-ಕಾಷ್ಠ ವಾದ್ಯಗಳ’ ಮೇಲೆ ಪ್ರಬಂಧಮಂಡಿಸುತ್ತ ವಿವಿಧ ಚರ್ಮವಾದ್ಯಗಳ ಸ್ವರೂಪ. ರಚನಾವಿಧಾನ, ವೈಶಿಷ್ಟ್ಯ. ಬಳಕೆಗೊಳ್ಳುವ ಕಲೆಗಳು ಇತ್ಯಾದಿ ವಿವರಗಳನ್ನು ನೀಡಿದರು. ಡಾ. ಎಂ. ಎನ್. ವಾಲಿ ‘ತಂತಿ ವಾದ್ಯಗಳನ್ನು’ ಕುರಿತು ಇದುವರೆಗೆ ಬಂದ ಸಾಮಗ್ರಿಯ ಹಿನ್ನೆಲೆಯಲ್ಲಿ ವರ್ಣನಾತ್ಮಕವಾಗಿ ನಿರೂಪಿಸಿದರು.

ಡಾ. ಶ್ರೀಕಂಠ ಕೂಡಿಗೆ ‘ಲೋಹವಾದ್ಯಗಳ’ ಮೇಲೆ ಮಾತನಾಡುತ್ತ ‘ಚಾರಿತ್ರಿಕವಾಗಿ ನೋಡಿದರೆ ಲೋಹವಾದ್ಯಗಳು ವಾದ್ಯಸಂಸ್ಕೃತಿಯ ಕೊನೆಯ ಘಟ್ಟದಲ್ಲಿ ವಿಕಾಸಗೊಂಡವು. ಉಸಿರು, ಚರ್ಮ, ಕಾಷ್ಠ ಮತ್ತು ತಂತಿವಾದ್ಯಗಳು ಮೊದಲು ಬಂದವು. ಪ್ರಕೃತಿದತ್ತ ಸಾಮಾನ್ಯ ವಸ್ತು ಮತ್ತು ನೈಸರ್ಗಿಕ ಸರಳ ಸಿದ್ಧಾಂತದ ಹಿನ್ನೆಲೆಯಲ್ಲಿ ಇವು ಹುಟ್ಟಿದ್ದರೆ, ಲೋಹವಾದ್ಯಗಳು ಲೋಹಸಂಸ್ಕೃತಿ ಮನುಷ್ಯ ನಾಗರಿಕತೆಯನ್ನು ಪ್ರವೇಶಿಸಿದ ನಂತರ ಹುಟ್ಟಿವೆ’ ಎಂದು ಹೇಳಿ ತಾಳ ವಾದ್ಯಗಳು, ರಣವಾದ್ಯಗಳು, ಅರೆಲೋಹವಾದ್ಯಗಳು ಎಂದು ವಿಭಜಿಸಿ ಅವುಗಳ ಸ್ವರೂಪ, ತಯಾರಿಸುವ ರೀತಿ, ಬಳಸುವ ಕಲೆಗಳೊಡನೆ ಪರಿಚಯಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಾ. ಬಿ. ವಿ. ಮಲ್ಲಾಪೂರ ಅವರು ‘ಉಸಿರ ವಾದ್ಯಗಳ’ ಮೇಲೆ ಐತಿಹಾಸಿಕ ಪ್ರಬಂಧವನ್ನು ಮಂಡಿಸಿದರು. ಅವರು ಕನ್ನಡ ಶಾಸನ-ಕಾವ್ಯಗಳಲ್ಲಿ ದೊರೆವ ವಾದ್ಯಗಳ ಉಲ್ಲೇಖದಿಂದ ಆರಂಭಿಸಿ, ವಿವಿಧ ವಾದ್ಯಗಳ ಸೃಷ್ಟಿ-ಬೆಳವಣಿಗೆ, ಬಳಕೆ, ಸ್ವರೂಪ-ಲಕ್ಷಣಗಳನ್ನು ವಿವರಿಸಿದರು. ಉಸಿರವಾದ್ಯಗಳ ವೈಶಿಷ್ಟ್ಯಗಳನ್ನು ಎತ್ತಿತೋರಿಸಿದರು, ಈ ಗೋಷ್ಠಿಯ ನಿರ್ವಹಣೆಯ ಹೊಣೆ ಎಂ. ಜಿ. ಈಶ್ವರಪ್ಪ ಅವರದಾಗಿತ್ತು.

ಜನಪದ ಸಂಗೀತ :

ಮೂರನೆಯ ಹಾಗೂ ಕೊನೆಯ ಗೋಷ್ಠಿ ಅಂದೇ ಮಧ್ಯಾಹ್ನ ೩ ಗಂಟೆಗೆ ಖ್ಯಾತ ಸಂಗೀತಗಾರರೂ ನಾಟಕಕಾರರೂ, ಆಕಾಶವಾಣಿ ನಾಟಕ ನಿರ್ದೇಶಕರೂ ಆದ ಡಾ. ವಸಂತ ಕವಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ‘ಜನಪದ ಸಂಗೀತ’ ಈ ಗೋಷ್ಠಿಯ ವಿಷಯ. ಪ್ರೊ. ಎ. ಯು. ಪಾಟೀಲ ‘ವಾದ್ಯರಹಿತ ಜನಪದ ಸಂಗೀತ’ ಕುರಿತು ಮಾತನಾಡುತ್ತ “ವಾದ್ಯರಹಿತ ಸಂಗೀತ ಪ್ರಣಾಲಿಯು ಅನಾಹತ ನಾದಮೂಲವನ್ನು ಹೊಂದಿದ್ದು, ಜನಪದ ಸಂಗೀತಕ್ಕೆ ಮೂಲದ್ರವ್ಯವಾಗಿವೆ. ವಾದ್ಯಸಹಿತ ಸಂಗೀತ ಆಹತ ನಾದಪ್ರಣಾಲಿಗೆ ಸೇರುತ್ತದೆ. ಇವುಗಳನ್ನು ಶಾಸ್ತ್ರೀಯ ಸಂಗೀತದಲ್ಲಿ ‘ಅನಿಬದ್ದ’ ‘ನಿಬದ್ಧ’ ಸಂಗೀತ ಪ್ರಕಾರಗಳೆಂದು ಗುರುತಿಸಲಾಗುತ್ತದೆ. ವಾದ್ಯರಹಿತ ಜನಪದ ಸಂಗೀತಪ್ರಣಾಲಿಯಲ್ಲಿ ಕುಟ್ಟುವ ಬೀಸುವ ಹಾಡು, ಭಲೋರಿ, ಹೋಳಿ, ಯಾತ, ಹಂತಿ, ಜೋಕುಮಾರ, ಸೋಬಾನ ಇತ್ಯಾದಿ ಹಾಡುಗಳು ಸೇರುತ್ತವೆ…ವಾದ್ಯರಹಿತ ಸಂಗೀತವು ವಾದ್ಯರಹಿತವಾದರೂ ಅದು ನಾದಪ್ರಧಾನವಾದ ಸಂಗೀತಪ್ರಣಾಲಿಯಾಗಿದೆ. ಇದು ಯಾವ ಬಗೆಯ ಬಂಧನಕ್ಕೂ ಒಳಗಾಗದೆ ತನ್ನತನವನ್ನು ಕಾಯ್ದುಕೊಂಡು ಬಂದಿದೆ” ಎಂದು ಉದಾಹರಣೆಗಳೊಂದಿಗೆ ವರ್ಣಿಸಿದರು.

ಡಾ. ಗುಂಡ್ಮಿ ಚಂದ್ರಶೇಖರ ಐತಾಳ ‘ಯಕ್ಷಗಾನ ಸಂಗೀತ’ದ ಬಗ್ಗೆ ಪ್ರಬಂಧ ಮಂಡಿಸಿದರು. ಅದರಲ್ಲಿ ಅವರು ‘ಯಕ್ಷಗಾನದಲ್ಲೇ ಸಂಗೀತವಿದೆ. ಯಕ್ಷಗಾನ ಹಾಡುಗಾರಿಕೆ, ನೃತ್ಯ, ವೇಷಗಾರಿಕೆ, ಸಾಹಿತ್ಯ, ಅಭಿನಯವೆಂಬ ಪಂಚಾಂಗದಿಂದ ಕೂಡಿದೆ. ಈ ಐದೂ ಅಂಗಗಳು ಸಮತೋಲನದಲ್ಲಿದ್ದರೆ ಮಾತ್ರ ಅದು ನಿಜವಾದ ಯಕ್ಷಗಾನ. ಯಕ್ಷಗಾನ ಪ್ರಸಂಗದ ರಾಗತಾಳಗಳಿಗೆ ದಾಸರ ಹಾಡುಗಳೇ ಮೂಲ. ಅದನ್ನು ಅತ್ಯಂತ ಪೂರ್ವಕ್ಕೆ ಕೊಂಡು ಹೋಗುವುದರಲ್ಲಿ ಅರ್ಥವಿಲ್ಲ” ಎಂದು ತಿಳಿಸಿದರು.

ಡಾ. ಬಸವರಾಜ ಮಲಶೆಟ್ಟಿ ‘ಉತ್ತರ ಕರ್ನಾಟಕದ ಬಯಲಾಟಗಳ ಸಂಗೀತ’ ಕುರಿತು ಮಾತನಾಡುತ್ತ “ಉತ್ತರ ಕರ್ನಾಟಕದ ಬಯಲಾಟಕ್ಕೆ-ದೊಡ್ಡಾಟ-ಸಣ್ಣಾಟ ಶ್ರೀಕೃಷ್ಣಪಾರಿಜಾತ ಎಂಬ ಮೂರು ಮುಖಗಳು. ಈ ಮೂರೂ ಪ್ರಕಾರಗಳು ಭಿನ್ನ ಭಿನ್ನ ಸಂಗೀತ ಶೈಲಿಯನ್ನು ಒಳಗೊಂಡಿವೆ. ದೊಡ್ಡಾಟಕ್ಕೆ ಮೂಡಲಪಾಯ ಎಂಬ ಹೆಸರುಂಟು. ಅದು ಬಹುಶಃ ಮೂಡಲದಿಕ್ಕಿನಿಂದ ಬಂದ ಸಂಗೀತ ಶೈಲಿಗೆ ಸಂಬಂಧಿಸಿರಬಹುದು. ಸಣ್ಣಾಟಸಂಗೀತ ಜಾನಪದ ಮೂಲದ್ದು. ರಾಗತಾಳಗಳ ಜಂಜಡವಿಲ್ಲದೆ ಸರಾಗವಾಗಿ ಸರಳ ಸುಂದರವಾಗಿ ವ್ಯಕ್ತವಾಗುವಂಥದು. ಶ್ರೀ ಕೃಷ್ಣಪಾರಿಜಾತ ಮೂಲತಃ ಹಾಡುಗಬ್ಬ. ಈ ಹಾಡುಗಬ್ಬವನ್ನು ಕರ್ನಾಟಕ ಸಂಗೀತದ ರಾಗಗಳಲ್ಲಿ ಹಾಡುತ್ತಿದ್ದರು” ಎಂದು ಮುಂತಾಗಿ ಹೇಳಿದರು.

ಕೊನೆಯಲ್ಲಿ ‘ಜಾನಪದ ಮತ್ತು ಅಭಿಜಾತಸಂಗೀತ’ಗಳ ಮೇಲೆ ಪ್ರಬುದ್ಧವೂ, ಪಾಂಡಿತ್ಯಪೂರ್ಣವೂ ಆದ ಉಪನ್ಯಾಸ ನೀಡಿದವರು ಡಾ. ವಸಂತ ಕವಲಿ. ಅವರು ಸಂಗೀತದ ಉಗಮ, ಅಭಿಜಾತಸಂಗೀತಕ್ಕೆ ಮೂಲವಾದ ದೇಶೀ ಸಂಗೀತ, ಜಾನಪದಸಂಗೀತ ಶಾಸ್ತ್ರೀಯಸಂಗೀತವಾದ ಬಗೆ, ಜಾನಪದ ಧಾಟಿಗಳೇ ಶಾಸ್ತ್ರೀಯ ರಾಗಗಳಾಗಿ ರೂಪುಗೊಂಡ ರೀತಿಗಳನ್ನು ವಿವರಿಸುತ್ತ ಜಾನಪದರಿಂದ ಅರಸರ ವರೆಗೆ ಎಲ್ಲರೂ ಹಾಡುವದು ದೇಶೀಸಂಗೀತ. ದೇಶೀ ಸಂಗೀತವೇ ಆಸ್ಥಾನಗಳಲ್ಲಿ ಬೆಳೆದು ಶಾಸ್ತ್ರೀಯ ಸಂಗೀತವೆನಿಸಿಕೊಂಡಿತು” -ಎಂದು ಜಾನಪದ ಧಾಟಿಗಳು ಹೇಗೆ ಅಭಿಜಾತವಾದವು ಎಂಬುದನ್ನು ಅನೇಕ ಉದಾಹರಣೆಗಳೊಂದಿಗೆ ಹಾಡಿ ವಿವರಿಸಿ ಸ್ಪಷ್ಟಪಡಿಸಿದರು. ಜೊತೆಗೆ ಅಧ್ಯಕ್ಷೀಯ ಸಮಾರೋಪವನ್ನೂ ಮಾಡಿದರು. ಇವರ ಆಳವಾದ ಅಧ್ಯಯನ, ಅನುಭವ, ಪಕ್ವಶೈಲಿ ಪ್ರೇಕ್ಷಕರ ಮೇಲೆ ಹೆಚ್ಚು ಪ್ರಭಾವ ಬೀರಿದವು. ಈ ಗೋಷ್ಠಿಯನ್ನು ನಿರ್ವಹಿಸಿದವರು ಶ್ರೀಮತಿ ಪ್ರೇಮಕುಮಾರಿ ಮತ್ತು ಪ್ರೊ. ಬಿ. ವಿ. ಯಕ್ಕುಂಡಿಮಠ ಅವರು.

ಪ್ರತಿ ಪ್ರಬಂಧದ ಮೇಲೆ ನಡೆದ ತುರುಸಿನ ಚರ್ಚೆಯಲ್ಲಿ ಹೆಚ್ಚಿನ ಸಂಖ್ಯೆಯ ಸಹೃದಯ ವಿದ್ವಾಂಸರು ಭಾಗವಹಿಸಿ ವಿಚಾರ ಸಂಕಿರಣಕ್ಕೆ ಜೀವಂತಿಕೆಯನ್ನು, ಅರ್ಥವಂತಿಕೆಯನ್ನು ತಂದುಕೊಟ್ಟರು.

ಸಮಾರೋಪ :

ಅಂದೇ ಸಂಜೆ ೫ ಗಂಟೆಗೆ ಸಮಾರೋಪ ಸಮಾರಂಭ, ಜಾನಪದ ಸಾಹಿತ್ಯ ರತ್ನ ಕೆ. ಆರ್. ಲಿಂಗಪ್ಪ ಅವರು ಮುಖ್ಯ ಅತಿಥಿ. ಅಧ್ಯಕ್ಷತೆ ಡಾ. ಎಂ. ಎಂ. ಕಲಬುರ್ಗಿ ಅವರದು. ಶ್ರೀ ಸಿ. ಕೆ. ರಾಜನ್ ಮತ್ತು ಶ್ರೀ ಭರತಾದ್ರಿ ಸಮ್ಮೇಲನದ ಬಗೆಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕೆ. ಆರ್. ಲಿಂಗಪ್ಪ ಅವರು ತಮ್ಮ ಸಮಾರೋಪ ಭಾಷಣದಲ್ಲಿ ಜಾನಪದ ಸಾಹಿತ್ಯದ ಸತ್ವ, ಶ್ರೀಮಂತಿಕೆ, ಹೃದಯವಂತಿಕೆಗಳನ್ನು ಕೆಲವು ತ್ರಿಪದಿಗಳ ಮೂಲಕ ಹಾಡುತ್ತ ವಿವರಿಸಿದರು. ಜೊತೆಗೆ ರಂಗದರ್ಶನದಲ್ಲಿ ಪ್ರದರ್ಶನ ನೀಡಿದ ಕಲಾವಿದರಿಗೆ ಪ್ರಶಸ್ತಿಪತ್ರ ವಿತರಣೆ ಮಾಡಿ ಗೌರವಿಸಿದರು. ಅಧ್ಯಕ್ಷತೆ ವಹಿಸಿದ್ದ ಡಾ. ಎಂ. ಎಂ. ಕಲಬುರ್ಗಿ ಅವರು “ಜನಪದ ಹಾಡುಗಳನ್ನು ಛಂದಸ್ಸಿನ ಮಾನದಂಡದಿಂದ ಅಳೆದು ಬೋಧಿಸದೆ ಅವುಗಳ ಮೂಲಧಾಟಿಯನ್ನು ಹಿಡಿದು ಲಯಾನುರೂಪದಲ್ಲಿ ಬೋಧಿಸುವದು ಹೆಚ್ಚು ಸಮರ್ಪಕವೆನಿಸುತ್ತದೆ. ಅಂದಾಗ ಮಾತ್ರ ಅವುಗಳ ನಿಜವಾದ ಅರ್ಥವಂತಿಕೆ ತಿಳಿಯಲು ಸಾಧ್ಯ” ಎಂದು ಹೇಳಿದರು. ಸರ್ವಾಧ್ಯಕ್ಷರಾದ ಡಾ. ಹಾ. ಮಾ. ನಾಯಕ ಅವರು ‘ಜಾನಪದ ಸಾಹಿತ್ಯದರ್ಶನ-೧೦’ಗ್ರಂಥ ಬಿಡುಗಡೆ ಮಾಡಿ ಎರಡು ದಿವಸ ವಿಚಾರಸಂಕಿರಣಗಳಲ್ಲಿ ವ್ಯಕ್ತವಾದ ವಿಚಾರಗಳ ಹಿನ್ನೆಲೆಯಲ್ಲಿ “ಜಾನಪದವನ್ನು ವೈಜ್ಞಾನಿಕವಾಗಿ ನೋಡಿ ಅರ್ಥಮಾಡಿಕೊಳ್ಳಬೇಕು; ಜಾನಪದವನ್ನು ಕುರಿತ ಅನೇಕ ಸಮಸ್ಯೆಗಳನ್ನು ನಾವೆಲ್ಲ ಕೂಡಿ ಬಗೆಹರಿಸುವ ದೆಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು” ಎಂದು ನುಡಿದರು. ಕೊನೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವತಿಯಿಂದ ಡಾ. ಎಸ್. ಎಂ. ವೃಷಭೇಂದ್ರಸ್ವಾಮಿ ಅವರು ಉಪಕಾರಸ್ಮರಣೆ ಮಾಡಿದರೆ, ಬಾಪೂಜಿ ವಿದ್ಯಾಸಂಸ್ಥೆಯ ಪರವಾಗಿ ಪ್ರಿ. ಬಿ. ಜಿ. ನಾಗರಾಜ ಅವರು ಕೃತಜ್ಞತೆ ಸಲ್ಲಿಸಿದರು. ಡಾ. ಎಸ್. ಎಸ್. ಕೋತಿನ ಈ ಕಾರ್ಯಕ್ರಮದ ನಿರ್ವಹಣೆ ಮಾಡಿದರು.

ಎರಡೂ ದಿವಸ ರಾತ್ರಿ ನಡೆದ ರಂಗದರ್ಶನದಲ್ಲಿ ಕೊಡಗಿನ ಉಮ್ಮತ್ತಾಟ, ಚೌಡಕಿ ಕುಣಿತ, ತೊಗಲುಗೊಂಬೆಯಾಟ, ಕಿನ್ನರಿಜೋಗಿ ಕುಣಿತ, ವೀರಭದ್ರ ತಾಂಡವ, ದೊಡ್ಡಾಟ ಕುಣಿತ, ಸಿಂಹನೃತ್ಯ-ಮೊದಲಾದ ವಿಶಿಷ್ಟ ಕಲೆಗಳು ಪ್ರದರ್ಶನಗೊಂಡು ಜನಮನವನ್ನು ರಂಜಿಸಿದವು. ಜನಪದ ಕಲೆಗಳ ವೈಶಿಷ್ಟ್ಯ ವೈಭವಗಳನ್ನು ಎತ್ತಿತೋರಿಸಿದವು.

ಈ ಸಮ್ಮೇಲನದ ಕೆಲವು ವೈಶಿಷ್ಟ್ಯಗಳನ್ನು ಹೀಗೆ ಗುರುತಿಸಬಹುದು :

*        ಕರ್ನಾಟಕ ವಿಶ್ವವಿದ್ಯಾಯದ ಕಕ್ಷೆಯನ್ನು ದಾಟಿ ಪ್ರಥಮಬಾರಿಗೆ ಹೊರಗೆ ಹೋಗಿ ಸಮ್ಮೇಲನವನ್ನು ಯಶಸ್ವಿಯಾಗಿ ನಡೆಸಿದ್ದು.
*        ಜಾನಪದಕ್ಕೆ ಹೊಸ ದಿಕ್ಕನ್ನು ತೋರಿಸಿದ ಡಾ. ಹಾ.ಮಾ. ನಾಯಕ ಅವರು ಅಧ್ಯಕ್ಷತೆವಹಿಸಿದ್ದು.
*        ಎಲ್ಲ ವಿದ್ವಾಂಸರು ಅಭ್ಯಾಸಪೂರ್ಣ ಪ್ರಬಂಧಗಳನ್ನು ಮಂಡಿಸಿ ಹೊಸ ಅಂಶಗಳನ್ನು ಪ್ರಕಟಿಸಿ, ಈ ದಿಶೆಯಲ್ಲಿ ಅಭ್ಯಾಸ ಮಾಡುವವರಿಗೆ ಮಾರ್ಗದರ್ಶಿಯಾದದ್ದು.
*        ಅಧಿಕ ಸಂಖ್ಯೆಯಲ್ಲಿ ಜಾನಪದ ಪ್ರೇಮಿಗಳು ಸೇರಿ ಯೋಗ್ಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು.
*        ವಿಶಿಷ್ಟ ಜಾನಪದ ಕಲೆಗಳು ಪ್ರದರ್ಶನಗೊಂಡು ಜನಮನ ತಣಿಸಿದ್ದು.
*        ಅಚ್ಚುಕಟ್ಟಾದ ವೇದಿಕೆ, ವಸತಿ, ಶುಚಿ-ರುಚಿಯಾದ ಊಟ-ಉಪಹಾರದ ವ್ಯವಸ್ಥೆ ಮಾಡಿದ್ದು.
*        ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಬಂದ ವಿದ್ವಾಂಸರು, ಕಲಾವಿದರನ್ನು ದಾವಣಗೆರೆಯ ಜನ ತೆರೆದ ಹೃದಯದಿಂದ ಸ್ವಾಗತಿಸಿ, ಪ್ರೀತಿ-ವಿಶ್ವಾಸ, ಗೌರವಾದರಗಳಿಂದ ನೋಡಿಕೊಂಡದ್ದು.
ಡಾ. ವೀರಣ್ಣ ರಾಜೂರ