ಕವಿ ಲಕ್ಷ್ಮೀಶನ ಕೀರ್ತನೆಗಳನ್ನು ಕುರಿತು

ಕನ್ನಡ ಜೈಮಿನಿ ಭಾರತದ ಕವಿ ಲಕ್ಷ್ಮೀಶನಿಂದ ವಿರಚಿತವಾದ ಹಲವು ಕೀರ್ತನೆಗಳು ಉಂಟೆಯ ಕರ್ಣಾಕರ್ಣೆಯಾಗಿ ನಮಗೆ ತಿಳಿದುಬಂದಿದ್ದಿತು.  ನಾವು  ಈ ಬಗ್ಗೆ  ಪರಿಶೀಲನೆ ನಡೆಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ (೧೯೨೨ನೇ ಜನವರಿ ಸಂಚಿಕೆಯಲ್ಲಿ ) “ದೇವನೂರು ಲಕ್ಷ್ಮೀಕಾಂತ ಹೆಬ್ಬಾರರು ಮಾಡಿದ ಕೀರ್ತನೆಗಳು” ಎಂಬ ಹೆಸರಿನಿಂದ ಪ್ರಕಟವಾಗಿರುವ ಹಾಡುಗಳ ವಿಚಾರ ನಮ್ಮ ಅವಗಾಹನೆಗೆ ಬಂದಿತು. ಅದೇ ಸಂಚಿಕೆಯಲ್ಲಿ ಈ ಹಾಡುಗಳನ್ನು ಸಂಗ್ರಹಿಸಿ ಪ್ರಕಟಸಿರುವ ಶ್ರೀ ಕುಮಾಂಡೂರು ರಾಮಸ್ವಾಮಯ್ಯಂಗಾರ‍್ಯರು ಕವಿಯ ವಿಚಾರವಾಗಿಯೂ, ದೇವನೂರಿನ ವಿಚಾರವಾಗಿಯೂ ಬರೆದಿರುವ ಕೆಲವು ಸಂಗತಿಗಳು ನಮವಮ ಗಮನಕ್ಕೆ ಬಂದುವು. ವಾಚಕರ ಅವಗಾಹನೆಗಾಗಿ ಆ ವಿಷಯಗಳನ್ನು ಇಲ್ಲಿ ಸಂಗ್ರಹಿಸಿ ಕೊಟ್ಟಿರುತ್ತೇವೆ .

೧. “ಕಡೂರು ತಾಲ್ಲೂಕು, ದೇವನೂರು ಲಕ್ಷ್ಮೀಕಾಂತ ದೇವಾಲಯದಲ್ಲಿ ಈ ಕವಿಯು ಜೈಮಿನಿಯನ್ನು ಬರೆದ ಹಜಾರ ಮಂಟಪವು ಈತನಿಂದಲೇ ಕಟ್ಟಿಸಲ್ಪಟ್ಟಿತು. ಇವನೂ, ಇವನ ಮಗನೂ ಕಟ್ಟಿಸಿದ ಮಂಟಪಗಳ ಲೆಕ್ಕವು ಈಚೆಗೆ ದೊರೆತ ಒಂದು ಓಲೆಯಲ್ಲಿ ಬರೆಯಲ್ಪಟ್ಟಿದೆ. ಅದರ ಯಥಾಪ್ರತಿಯನ್ನು ಇಲ್ಲಿ ತಿಳಿಸಿದೆ:

೨. ಲಕ್ಷ್ಮೀಕಾಂತ ಹೆಬ್ಬಾರರು (ಕವಿ ಲಕ್ಷ್ಮೀಶ)ದೇವರ ಸಾಕ್ಷಾತ್ಕಾರವನ್ನು ಹೊಂದಿದ ಮೇಲೆ ಜನರು ಈತನ ವಿಗ್ರಹವನ್ನು ಮಾಡಿಸಿ ಇತರ ಆಳ್ವಾರು ವಿಗ್ರಹಗಳ ಜತೆಯಲ್ಲಿ ಈ ದೇವಾಲಯದಲ್ಲಿಯೇ ಪ್ರತಿಷ್ಠಿಸಿ ಅಂದಿನಿಂದ ಇತರ ವಿಗ್ರಹಗಳಂತೆ ಇದಕ್ಕೂ ಪೂಜೆಯನ್ನು ನಡೆಸುತ್ತಿರುವರು. ಪ್ರತಿವರ್ಷವೂ ಚೈತ್ರಶುದ್ಧ ಪೂರ್ಣೆಮೆಯ ದಿನ ಈ ಕವಿಯ ತಿರುನಕ್ಷತ್ರವು ದೇವಸ್ಥಾನದಲ್ಲಿ ನಡೆಸಲ್ಪಡುತ್ತಿರುವುದು.

೩. ಪ್ರತಿವರ್ಷವೂ ಕೊಟ್ಟಾರೋತ್ಸವದಲ್ಲಿ ಇತರ ಕಡೆಗಳಲ್ಲಿಲ್ಲಿದ ಒಂದು ಹೊಸ ಪದ್ಧತಿಯು ಇಲ್ಲಿ ಪೂರ್ವದಿಂದಲೂ ಆಚರಣೆಯಲ್ಲಿ ಬಂದಿದೆ. ಉತ್ಸವ ಕಾಲದಲ್ಲಿ ವೇದ ಪಾರಾಯಣ, ದ್ರಾವಿಡ, ಪ್ರಬಂಧ ಇವುಗಳ ತರುವಾಯ ಈ ಲಕ್ಷ್ಮೀಶನಿಂದ ರಚಿತವಾದ ಜೈಮಿನಿಯಲ್ಲಿ ಹೇಳಲ್ಪಟ್ಟಿರುವ ದೇವತಾಸ್ತುತಿಯ ಕೆಲವು ಪದ್ಯಗಳನ್ನು ದೇವರ ಸಾನ್ನಿಧ್ಯದಲ್ಲಿ ಓದುವರು. ದೇವಾಲಯದ ಧರ್ಮಕರ್ತರೂ ಆಧಿಕಾರಿಗಳೂ ಪೂರ್ವದಿಂದ ಅನುಸರಿಸಿ ಬಂದ ಈ ಪದ್ಧತಿಯನ್ನು ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.

೪. ಈ ದೇವನೂರು ಸ್ಥಳ ಪುರಾಣದಲ್ಲಿ ಇದಕ್ಕೆ ಗೀರ‍್ವಾಣಪುರ, ಸುರಪುರ ಮುಂತಾದ ಹೆಸರುಗಳು ಪ್ರಯೋಗಿಸಲ್ಪಡುತ್ತಿದೆ. ಈ ಕವಿಯು ಹಾಡುಗಳಲ್ಲಿಯೂ ಈ ಅಂಕಿತವೇ ಕಂಡುಬರುತ್ತಿದೆ. ಈ ಕವಿಯು ಹೆಬ್ಬಾರ ಶ್ರೀವೈಷ್ಣವರ ಪಂಗಡಕ್ಕೆ ಸೇರಿದವನೆಂತಲೂ, ಈತನ ಜ್ಞಾತಿಗಳೂ ಬಂಧುಗಳೂ ಈ ಪ್ರಾಂತದಲ್ಲಿ ವಾಸವಾಗಿರುವರೆಂತಲೂ ತಿಳಿಯಬಂದಿರುವುದರಿಂದಲೂ, ಈತನ ಮನೆಯಿದ್ದ ಪಾಳು ನಿವೇಶನವು ಈಗಲೂ ಜನರಿಂದ ತೋರಿಸಲ್ಪಡುವುದರಿಂದಲೂ ಈ ಲಕ್ಷ್ಮೀಶ ಕವಿಯು ದೇವನೂರಿನವನಲ್ಲವೆಂದು ಸ್ಥಾಪಿಸಲು ಯಾರೂ ಸಾಹಸಗೊಳ್ಳಬೇಕಾಗಿಲ್ಲ.

೫. ಮಾಗಡಿ ತಾಲ್ಲೂಕು, ಸೋಲೂರು, ಸ್ಥಳದ ಕರನಿಕ ಚಿಕ್ಕಣ್ಣನಿಗೆ ಈತನ ಧರ‍್ಮಪತ್ನಿಯಾದ ಚಿನ್ನಮ್ಮನ ಗರ್ಭದಲ್ಲಿ ಜನಿಸಿದ ಹುಚ್ಚಕವಿಯು ತಟ್ಟೇಕೆರೆಯ ರಂಗನಾಥದೇವರ ಅಂಕಿತದಿಂದ ರಚಿರುವ ‘ಯಾಗ ಚರಿತ್ರೆ’ ಎಂಬ ಯಕ್ಷಗಾನ ಕೃತಿಯು ಜೈಮಿನಿ ಭಾರತದ ಆಧಾರದ ಮೇಲೆಯೇ ಬರೆಯಲ್ಪಟ್ಟುದು ಈಚೆಗೆ ಸಿಕ್ಕಿರುವುದು. ಲಕ್ಷ್ಮೀಶನ ಜೈಮಿನಿಯು ಈ ದೇಶದಲ್ಲಿ ಬರೆಯದೆ ಬಹುದೂರ ಪ್ರಾಂತದಲ್ಲಿ ರಚಿತವಾಗಿದ್ದರೆ ಅಂತಹ ಪ್ರತಿಯು ಮೈಸೂರು ದೇಶದ ಪ್ರತಿ ಗ್ರಾಮದಲ್ಲಿಯೂ ಅಷ್ಟು ಬೇಗ ಪ್ರಸಿದ್ದಿಗೆ ಬರುವುದು ಅಸಂಭವವು.

೬. ದೇವನೂರಿನಲ್ಲಿ ದೊರೆತ ಒಂದೆರಡು ಓಲೆಯ ಪ್ರತಿಗಳಲ್ಲಿ ಅಣ್ಣಮಾಂಕನ ಸುತಎಂದು ಬರೆದಿದೆ. ಕವಿ ಲಕ್ಷ್ಮೀಕಾಂತನ ಮಗನಿಗೆ ಅಣ್ಣಯ್ಯ (ಹೆಬ್ಬಾರ)ನೆಂಬ ಹೆಸರಿರುವುದರಿಂದಲೂ ಕನ್ನಡ ಬರೆಹದಲ್ಲಿ ‘ಮ’ ಕಾರ ‘ಯ’ ಕಾರಗಳಿಗೆ ಹೆಚ್ಚು ವ್ಯತ್ಯಾಸವಿಲ್ಲದೆ ಹೋಲಿಕೆ ಸರಿಯಾಗಿರುವುದರಿಂದಲೂ ಈ ಕವಿಯ ತಂದೆಯ ಹೆಸರು ಅಣ್ಣಯ್ಯನೆಂದಿರಬಹುದೇ ಹೊರತು ಅಣ್ಣಮನಾಗಿರಲಾರದು. ಅಚ್ಚಿನ ಪುಸ್ತಕಗಳಲ್ಲಿ ಅಣ್ಣಮಾಂಕನೆಂದಿರುವುದು ಲೇಖಕ ಪ್ರಮಾದ ಜನಿತ ದೋಷವೆಂದು ಭಾವಿಸಬೇಕಾಗಿದೆ.

….ಇಲ್ಲಿ ಹೇಳಿರುವ ಕಾರಣಗಳಿಂದ ಲಕ್ಷ್ಮೀಕಾಂತನೆಂಬ ಕವಿಯ ಜನ್ಮಭೂಮಿಯು ಕಡೂರು ತಾಲ್ಲೂಕು, ದೇವನೂರೇ ಎಂತಲೂ ಈತನು ಹೆಬ್ಬಾರ ಶ್ರೀವೈಷ್ಣವನೆಂತಲೂ ಮುನ್ನೂರು ವರ್ಷಗಳ ಹಿಂದಿನವನೆಂತಲೂ ನಿರ್ಧರಸಲಿಕ್ಕೆ ಅಡ್ಡಿಯಿಲ್ಲ.

ದೇವನೂರು ದೇವಾಲಯದಲ್ಲಿ ೧೯ ಅಂಕಣಗಳ ಹಜಾರ ಲಕ್ಷ್ಮೀಕಾಂತ ಹೆಬ್ಬಾರು ಕಟ್ಟಿಸಿದ್ದು. ೧೧ ಅಂಕಣಗಳು ವಿಷ್ಣುವರ್ಧನರಾಯರು ಕಟ್ಟಿಸಿದ್ದು. ಪ್ರಾಕಾರ, ಧಾರಾಮಂಟಪ ಲಕ್ಷ್ಮೀಕಾಂತನ ಮಗ ‘ಅಣ್ಣಯ್ಯ’ ಹೆಬ್ಬಾರರು ಕಟ್ಟಿಸಿದ್ದು.”

ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ೧೯೨೧, ಏಪ್ರಿಲ್ ಸಂಚಿಕೆಯಲ್ಲಿ ಕವಿ ಲಕ್ಷೀಶನ ಬಗ್ಗೆ ಈ ಮುಂದೆ ಹೇಳುವ ಸಂಗತಿಗಳನ್ನು ತಿಳಿಸಲಾಗಿದೆ.

೧. ಕಡೂರು ತಾ|| ಹನ್ನೆರಡನೆಯ ನಂ. ಶಾಸನವು ಶಕೆ ೧೪೪೦ನೆಯ ಬಹುಧಾನ್ಯ ಸಂವತ್ಸರದಲ್ಲಿ ಬರೆಯಲ್ಪಟ್ವುದು. ಅದರಿಂದ ದೇವನೂರಿಗೆ ಲಕ್ಷೀನಾರಾಯಣ ಪುರವೆಂಬ ಹೆಸರಿತ್ತೆಂತಲೂ, ಲಕ್ಷ್ಮೀಕಾಂತ ದೇವರಿಗೆ ಕೆಲವು ದಾನಗಳು ಕೊಟಲ್ಪಟ್ಟವೆಂತಲೂ ತಿಳಿದುಬರುವುದು; ಮತ್ತು ಅದೇ ಗ್ರಾಮದ ಬಳಿಯಿರುವ ೧೪೮೧ರಲ್ಲಿ ಬರೆಯಲ್ಪಟ್ಟ ಶಾಸನದಲ್ಲಿ ಇದಕ್ಕೆ ‘ದೇವನೂರು’ ಎಂಬ ಹೆಸರು ಉಪಯೋಗಿಸಲ್ಪಟ್ಟಿದೆ.

ಈ ಮೇಲೆ ಕಂಡ ಬರಹವು-

(೧) ಕವಿ ಲಕ್ಷ್ಮೀಶನಿಗೆ ‘ಅಣ್ಣಯ್ಯ’ ಎಂಬ ಮಗನಿದ್ದನು. ತಂದೆ, ಮಗ ಇಬ್ಬರೂ ದೇವಾಲಯದ   ಕೆಲವು ಭಾಗ ಕಟ್ಟಿಸಿದ್ದಾರೆ.

(೨) ದೇವರ ಪೂಜಾಕಾಲದಲ್ಲಿ ಜೈಮಿನಿ ಭಾರತದ ಪದ್ಯಗಳನ್ನು ಪಠಿಸುತ್ತಾರೆ.

(೩) ದೇವನೂರು ಸ್ಥಳ ಪುರಾಣದಲ್ಲಿ ಗೀರ‍್ವಾಣಪುರ, ಸುರಪುರ ಎಂಬ ಹೆಸರುಗಳಿವೆ.

(೪) ಸೋಲೂರು ಹುಚ್ಚಕವಿ ರಚಿಸಿರುವ “ಯಾಗ ಚರಿತ್ರೆ” ಎಂಬ ಯಕ್ಷಗಾನ ಕೃತಿಗೆ ಜೈಮಿನಿ ಆಧಾರ.

(೫) ಕವಿ ತಂದೆ ಹೆಸರು ಅಣ್ಣಯ್ಯನೆಂದಿರಬಹುದೇ ಹೊರತು ಅಣ್ಣಮನಾಗಿರಲಾರದು.

(೬) ಶಾಸನಗಳಲ್ಲಿ ಕೂಡ ‘ದೇವನೂರು’ ಎಂಬ ಹೆಸರಿದೆ. ಲಕ್ಷ್ಮೀನಾರಾಯಣಪುರ ಎಂಬ ಹೆಸರು ಕೂಡ ಶಾಸನದಲ್ಲಿದೆ.

ಎಂಬ ವಿಷಯಗಳು  ಹೊಸದಾಗಿ ನಮ್ಮ ಮುಂದೆ ಕಾಣಿಸಿಕೊಂಡಿವೆ. ವಿದ್ವಾಂಸರು ಈ ವಿಷಯಗಳನ್ನೆಲ್ಲಾ ಪರಿಶೀಲಿಸಬೇಕು.

ಈಗ ನಾವು ಹತ್ತು ಹಾಡುಗಳನ್ನು ಕನ್ನಡಿಗರ ಅವಗಾಹನೆಗಾಗಿ ಪ್ರಕಟಿಸಿರುವೆವು. “ಈ ಹಾಡುಗಳು ಗ್ರಂಥಸ್ಥವಾಗಿಲ್ಲ. ಜನ ಪರಂಪರೆಯಿಂದ ಕರ್ಣಾಕರ್ಣಿಕೆಯಾಗಿ ಹೇಳುತ್ತಾ ಬಂದಿರುವವುಗಳನ್ನು ಸಂಗ್ರಹಿಸಿದೆ”  ಎಂದು ಸಂಗ್ರಾಹಕರಾದ ಶ್ರೀ ಕುಮಾಂಡೂರು ರಾಮಸ್ವಾಮಯ್ಯಂಗಾರ‍್ಯರು ಹೇಳಿರುತ್ತಾರೆ.

ಈ ಹಾಡುಗಳಲ್ಲಿ ಲಕ್ಷ್ಮೀಪತಿ, ದೇವಪುರ ಲಕ್ಷ್ಮೀಶ, ಸುರುಪುರ ಪತಿ, ಸುರಪುರ ಲಕ್ಷ್ಮೀಶ, ಶ್ರೀಲಕ್ಷ್ಮೀಶ ಮಂಗಲೋತ್ತುಂಗ, ಶ್ರೀ ಲಕ್ಷ್ಮೀಪತಿ, ವರಲಕ್ಷ್ಮೀ ಕಾಂತನ, ದೇವಪುರದ ಸಿರಿವರ, ಪಾಹಿ ಲಕ್ಷ್ಮೀಶ ಎಂಬ ಅಂಕಿತಗಳಿವೆ. ಈ ಹಾಡುಗಳು ಜನರ ಬಾಯಿಯಲ್ಲಿ ಓಡಾಡಿ ಕೆಲವೆಡೆ ಅಶುದ್ಧವಾಗಿವೆ. ಈ ಹಾಡುಗಳನ್ನುಳ್ಳ ತಾಳೆಯೋಲೆ ಗ್ರಂಥಗಳು ಸಿಕ್ಕಿದಹೊರತು ಇದರ ಶುದ್ಧ ಪಾಠವನ್ನು ನಾವು ಕಂಡುಹಿಡಿಯಲಾಗುವುದಿಲ್ಲ. ಈ ಹಾಡುಗಳ ಪ್ರಕಟನೆಯಿಂದ ಕನ್ನಡಿಗರಲ್ಲಿ ಮೂಲ ಗ್ರಂಥವನ್ನು ಹುಡುಕುವ ಪ್ರಚೋದನೆಯಾದೀತೆಂದು ನಂಬುತ್ತೇವೆ.

ಕವಿ ಲಕ್ಷ್ಮೀಶನು ಭಾಗವತನಾದುದರಿಂದಲೂ, ಸಂಗೀತ ಸುಕಲಾನಿಪುಣನಾದುದರಿಂದಲೂ, ಕವಿಯ ಕಾಲವು ಹರಿದಾಸರ ಅಭ್ಯುದಯ ಕಾಲವಾಗಿ ಹಾಡುಗಳ ರಚನೆಯ ಸುವರ್ಣಯುಗವಾದುದರಿಂದಲೂ, ಈ ಹಾಡುಗಳು ಲಕ್ಷ್ಮೀಶ ವಿರಚಿತಗಳಾಗಿರ ಬಹುದು. ಇವು ಒಳ್ಳೆಯ ಕವಿ ಬರೆದ ಹಾಡುಗಳಂತೆ ಕಾಣುತ್ತಿವೆ. ಕೊಂಚ ಶ್ರಮವಹಿಸಿ ಹುಡುಕಿದರೆ ತಾಳೆಯೋಲೆಯ ಸಂಗ್ರಹದಲ್ಲಿ ಕೂಡ ನಾವು ಈ ಹಾಡುಗಳನ್ನು ಕಾಣಬಹುದು ಎಂದು ನಮ್ಮ ನಂಬಿಕೆಯಿದೆ.

ಇಂತು

. ಶಿವಮೂರ್ತಿಶಾಸ್ತ್ರೀ.
ಬೆಂಗಳೂರು.
ತಾ. ೧೫-೬-೧೯೫೬