೧. ಮುನ್ನುಡಿ

(ದೇ.ಜ.ಗೌ. ಮುನ್ನುಡಿ)

ಕನ್ನಡ ಸಾಹಿತ್ಯಕ್ಕೆ ಸುಮಾರು ಒಂದೂವರೆ ಸಾವಿರ ವರ್ಷಗಳ ಇತಿಹಾಸವಿರು -ವುದಾದರೂ ನವೋದಯ ಕಾಲದ ತನಕ ಸ್ವತಂತ್ರ ಕಾವ್ಯಮೀಮಾಂಸೆಯಾಗಲಿ ವಿಮರ್ಶೆಯಾಗಲಿ ಕನ್ನಡ ಭಾಷೆಯಲ್ಲಿ ಸೃಷ್ಟಿಯಾಗಲಿಲ್ಲ. ವಚನಕಾರರು ಕನ್ನಡ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುವ ತನಕ ಪೂರ್ವ ಕವಿ ಸೂರಿಗಳು ಸಂಸ್ಕೃತಕ್ಕೆ ಜೋತು ಬಿದ್ದವರಾದ್ದರಿಂದ, ಸಂಸ್ಕೃತ ಕಾವ್ಯಮೀಮಾಂಸೆಗೆ ಸಂಪೂರ್ಣವಾಗಿ ಶರಣು ಹೋದವರಾದ್ದರಿಂದ, ಕಾವ್ಯ ಮೀಮಾಂಸೆಯ ಮಟ್ಟಿಗಾದರೂ ಪರೋಪಜೀವಿಗಳಂತೆ ಬದುಕಬೇಕಾಗಿದ್ದುದರಿಂದ, ಮಹಾವ್ಯಕ್ತಿಯ ನೆಳಲಲ್ಲಿ ಬೆಳೆಯುವವನ ಸ್ವತಂತ್ರ ವಿಚಾರ ಶಕ್ತಿ ಕುಂಠಿತವಾಗುವಂತೆ, ಕನ್ನಡದಲ್ಲಿ ಕಾವ್ಯಮೀಮಾಂಸೆ ವಿಕಾಸಗೊಳ್ಳಲು ಸಾಧ್ಯವಾಗಲಿಲ್ಲ. ಈ ಮಾತು ಭರತಖಂಡದ ಎಲ್ಲ ದೇಶ ಭಾಷೆಗಳಿಗೂ ಸಮುಚಿತವಾಗಿ ಅನ್ವಯವಾಗುತ್ತದೆ. ಕಾಶ್ಮೀರದಿಂದ ಹಿಡಿದು ಕೇರಳದವರೆಗಿನ ಸಂಸ್ಕೃತ ವಿದ್ವಾಂಸರು ಸಂಸ್ಕೃತ ಕಾವ್ಯಮೀಮಾಂಸೆಗೆ ಸ್ವತಂತ್ರವಾದ ಕಾಣಿಕೆ ನೀಡಿರುವುದರಿಂದ, ದೇಶ ಭಾಷೆಗಳ ವಿದ್ವಾಂಸರು ಸಂಸ್ಕೃತ ಕಾವ್ಯಮೀಮಾಂಸೆಯನ್ನೇ ತಮ್ಮದೆಂದು ಸ್ವೀಕರಿಸಿದ್ದರಿಂದ, ಸಂಸ್ಕೃತ ಕಾವ್ಯಮೀಮಾಂಸೆಯೇ ಭಾರತೀಯ ಕಾವ್ಯ ಮೀಮಾಂಸೆಯ ಹೆಸರಿನಲ್ಲಿ ಪ್ರಚುರವಾಯಿತು.

ಸಾಹಿತ್ಯ, ಕಾಮ್ಯಮೀಮಾಂಸೆ ಮತ್ತು ವಿಮರ್ಶೆಗಳು ತ್ರಿಕೋನದ ಭುಜಗಳಂತೆ ಪರಸ್ಪರಾವಲಂಬಿಗಳು, ಪರಸ್ಪರೋಪಜೀವಿಗಳು, ಪರಸ್ಪರ ಶಕ್ತಿ ಸೌಂದರ್ಯ ಸಂವರ್ಧಕಗಳು. ಸಾಹಿತ್ಯ ಮತ್ತೆರಡಕ್ಕೆ ಆಧಾರಭೂತ ಶಕ್ತಿಯಾಗಿದ್ದರೂ, ಅದರ ಪೂರ್ಣಾಸ್ವಾದನೆಗೆ ಮತ್ತು ಸಮಗ್ರ ಸಮೀಚೀನ ಸುಗ್ರಹಣಕ್ಕೆ ಕಾವ್ಯಮೀಮಾಂಸೆಯ ನೆರವು ಅತ್ಯಗತ್ಯ; ಅದರ ಸುಸ್ಥಿತಿ ಸಮಸ್ಥಿತಿ ಮತ್ತು ಸ್ವಾಸ್ಥ ಗಳಿಗೆ ವಿಮರ್ಶೆಯ ಸಹಾಯ ಅನಿವಾರ‍್ಯ. ಸಾಹಿತ್ಯಾಭ್ಯಾಸಕ್ಕೆ ಕಾವ್ಯಮೀಮಾಂಸೆ ಅತ್ಯಗತ್ಯವೆಂದು ಕಂಡು ಬಂದದ್ದರಿಂದ ಸಂಸ್ಕೃತದ ಅನುಕರಣವಾದರೂ ಒಂದು ಸಾವಿರ ವರ್ಷದಿಂದ – ಕವಿರಾಜಮಾರ್ಗದಿಂದ ತೊಟ್ಟು ಕರ್ಣಾಟಕ ಚಂದ್ರಾಲೋಕದವರೆಗೆ – ವಿರಳವಾಗಿಯಾದರೂ ಕಾವ್ಯಮೀಮಾಂಸೆಯ ಗ್ರಂಥಗಳು ಕನ್ನಡದಲ್ಲಿ ರಚನೆಗೊಂಡಿರುವುದು ಅದರ ಮಹತ್ವಕ್ಕೆ ಸಾಕ್ಷಿಯಾಗಿದೆ. ಪಂಪ ರನ್ನ ಲಕ್ಷ್ಮೀಶಾದಿ ಕವಿಗಳು ತಮ್ಮ ಕಾವ್ಯ ಪೀಠಿಕೆಗಳಲ್ಲಿ ಕಾವ್ಯಮೀಮಾಂಸೆ ಮತ್ತು ವಿಮರ್ಶೆಗಳಿಗೆ ಸಂಬಂಧಿಸಿದಂತೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ನೇರವಾಗಿಯೋ ಗೂಢವಾಗಿಯೋ, ಸರಸಕ್ಕಾಗಿಯೋ ವಿಡಂಬನೆಗಾಗಿಯೋ ನಾಲ್ಕಾರು ಉಕ್ತಿಗಳನ್ನು ಪೋಣಿಸುವುದುಂಟು. ಅವು ಮತ್ತೆ ಅನುಕರಣ ಇಲ್ಲವೆ ಚರ್ವಿತಚರ್ವಣ. ಶರಣ ಸಾಹಿತ್ಯದಲ್ಲಿ ಮಾತ್ರ ಸ್ವತಂತ್ರ ವಿಚಾರಪರತೆ ಇಣುಕುತ್ತದೆ.

ವಿಮರ್ಶೆ ಕನ್ನಡ ಸಾಹಿತ್ಯಕ್ಕೇಕೆ, ಇಡೀ ಭಾರತೀಯ ಸಾಹಿತ್ಯಗಳಿಗೆ ತೀರ ಹೊಸದು. ಪಾಶ್ಚಾತ್ಯ ಕಾವ್ಯ ಮೀಮಾಂಸೆ ಮತ್ತು ವಿಮರ್ಶೆಗಳ ಅಧ್ಯಯನದ ಫಲವಾಗಿ ಕನ್ನಡದಲ್ಲಿ ವಿಮರ್ಶೆ ಸುಸ್ಪಷ್ಟವಾಗಿ ವೈವಿಧ್ಯಯಮವಾಗಿ ಬೆಳೆಯುತ್ತಿದೆಯೆನ್ನಬಹುದು. ವೈಜ್ಞಾನಿಕದೃಷ್ಟಿ, ಮನೋವಿಜ್ಞಾನ ಮತ್ತು ಸೌಂದರ್ಯಮೀಮಾಂಸೆಗಳಂತು ವಿಮರ್ಶೆಗೆ ಹೊಸ ತಿರುವನ್ನು ನೀಡಿ, ಅದರ ಸಾಫಲ್ಯ, ಸಾರ್ಥಕತೆ ಮತ್ತು ಮಹತ್ವವನ್ನು ಬಹುಗುಣಗೊಳಿಸಿವೆ.

ಕನ್ನಡದಲ್ಲಿ ಸ್ವತಂತ್ರ ಕಾವ್ಯಮೀಮಾಂಸೆಯ ನೂತನ ಆಯಾಮಗಳು ಸೃಷ್ಟಿಯಾದದ್ದು ಇಪ್ಪತ್ತನೆಯ ಶತಮಾನದಲ್ಲಿಯೇ. ಅವು ಭಾರತೀಯ ಕಾವ್ಯಮೀಮಾಂಸೆಗೆ ಮಾತ್ರವಲ್ಲ. ಜಾಗತಿಕ ಕಾವ್ಯಮೀಮಾಂಸೆಗೂ ವಿಶಿಷ್ಟ ವಿನೂತನ ಕೊಡುಗೆಗಳೆಂದೇ ಹೇಳಬಹುದು. ಅಂಥ ಆಯಾಮಗಳನ್ನು ಸೃಷ್ಟಿಸಿದ ಒಬ್ಬಿಬ್ಬರು ಕವಿಗಳಲ್ಲಿ ಮಹಾಕವಿ ಕುವೆಂಪು ಅವರಿಗೆ ಅಗ್ರಪೂಜೆ ಸಲ್ಲಬೇಕಾಗಿದೆ. ಆಶ್ಚರ್ಯವೆಂದರೆ, ಮಹಾಕವಿ ಮಹಾಕಾವ್ಯಮೀಮಾಂಸಕಾರನಾದದ್ದು ಮಹಾ ವಿಮರ್ಶಕನಾದದ್ದು, ಕುವೆಂಪು ಅವರಂತೆ ಮಹಾಕವಿಯೊಬ್ಬ ಮಹಾಕಾವ್ಯ ಮೀಮಾಂಸಕಾರನಾದದ್ದು ಜಾಗತಿಕ ಸಾಹಿತದಲ್ಲಿ ವಿರಳ; ಇಲ್ಲವೆಂದರೂ ತಪ್ಪಾಗದು. ಪ್ರಾಚೀನ – ಅರ್ವಾಚೀನಗಳ, ಭಾರತೀಯ – ಪಾಶ್ಚಾತ್ಯ    ತತ್ತ ಶಾಸ್ತ್ರ ಮತ್ತು ಕಾವ್ಯ ಮೀಮಾಂಸೆಗಳ ಸಂಗಮದಂತಿರುವ ವೈಜ್ಞಾನಿಕ ದೃಷ್ಟಿಯನ್ನು ಬದುಕಿನಲ್ಲಿ ಸಮಾವೇಶಗೊಳಿಸಿಕೊಂಡಿರುವ, ಪ್ರಾಯೋಗಿಕ ಮನಶ್ಶಾಸ್ತ್ರವನ್ನು ಜೀರ್ಣಿಸಿಕೊಂಡಿರುವ, ಸರಸ್ವತೀ ಶಕ್ತಿಯೇ ಮೂರ್ತಿವೆತ್ತಂತಿರುವ ಕುವೆಂಪು ಅವರ ವಿಚಾರ ಮಂಥನದಿಂದ ಉದ್ಭವಿಸಿದ ಅಮೃತ ಬಿಂದುಗಳೇ ಅವರ ಕಾವ್ಯಮೀಮಾಂಸೆಯ ವಿನೂತನ ಸೂತ್ರಗಳು. ಅವರು ದಾರ್ಶನಿಕ ಮಹಾಕವಿಯಾದದ್ದರಿಂದಲೇ ಅವರು ಪ್ರತಿಪಾದಿಸಿರುವ ಸೂತ್ರಗಳು ಅಜರಾಮರವಾಗಿ, ಕಾಲದೇಶಗಳನ್ನು ಮೀರಿ ನಿಲ್ಲುತ್ತವೆ. ದರ್ಶನ ಧ್ವನಿ, ಪೂರ್ಣದೃಷ್ಟಿ ಮತ್ತು ಪ್ರತಿಮಾ ವಿಧಾನಗಳು ಅವರು ಕಾವ್ಯಮೀಮಾಂಸೆಗೆ ಜೋಡಿಸಿರುವ ಪ್ರಮುಖ ಹೊಸ ಆಯಾಮಗಳು. ಇವುಗಳ ಜತೆಗೆ ರಸಸಿದ್ಧಾಂತ, ಕವಿ ನಿರ್ಮಿತಿ, ಕವಿಕೃತಿಯ ಅನನ್ಯ ಪರತಂತ್ರತೆ, ಭೂಮಾನುಭೂತಿ ಮೊದಲಾದ ಕಾವ್ಯಮೀಮಾಂಸೆಯ ವಿಚಾರಗಳನ್ನು ತಮ್ಮ ವಿಚಾರಮತಿಯ ನಿಕಷದಲ್ಲಿ ಪರೀಕ್ಷಿಸಿ, ಅವುಗಳಿಗೆ ನೂತನ ವ್ಯಾಖ್ಯಾನವನ್ನು ನೀಡಿ, ಅವುಗಳ ಮಹತ್ವವನ್ನು ಅಧಿಕಗೊಳಿಸಿದ್ದಾರೆ. ಇವುಗಳಿಗಿಂತ ಮಿಗಿಲಾಗಿ ಪಾಶ್ಚಾತ್ಯ ಮಹಾಕಾವ್ಯಗಳಲ್ಲಿ ಮಾತ್ರವೇ ಕಾಣಬಹುದಾದ ಮಹೋಪಮೆಗಳ ವಿಶ್ಲೇಷಣೆಯನ್ನು ನಡಸಿರುವುದಲ್ಲದೆ, ಅವರೇ ಅನೇಕ ಸುಂದರ ಸ್ವತಂತ್ರ ಮಹೋಪಮೆಗಳನ್ನು ಸೃಷ್ಟಿಸಿದ್ದಾರೆ. ಇಡೀ ಕನ್ನಡ ಸಾಹಿತ್ಯದಲ್ಲಿ ಪ್ರಪ್ರಥಮವಾಗಿ ಮಹೋಪಮೆಗಳನ್ನು ತಮ್ಮ ಮಹಾಕಾವ್ಯದಲ್ಲಿ ಔಚಿತ್ಯಪೂರ್ಣವಾಗಿ, ಭವ್ಯ ಸುಂದರವಾಗಿ, ಧ್ವನಿಯುಕ್ತವಾಗಿ ಬಳಸಿರುವ ಏಕೈಕ ಮಹಾಕವಿಯೆಂದರೆ ಕುವೆಂಪು ಅವರು. ಅಷ್ಟೇ ಅಲ್ಲ, ಪಾಶ್ಚಾತ್ಯ ಕಾವ್ಯಮೀಮಾಂಸೆಯ ಮಹತ್ವವನ್ನೂ ನ್ಯೂನತೆಗಳನ್ನೂ ಸಹ ಅಲ್ಲಲ್ಲಿ ಎತ್ತಿ ತೋರಿಸಿದ್ದಾರೆ. ದಾರ್ಶನಿಕನಲ್ಲದವನು ಕಾವ್ಯಮೀಮಾಂಸಕಾರ -ನಾಗಲಾರನೆಂಬುದಕ್ಕೆ ಕುವೆಂಪು ಪ್ರಣೀತ ಸೂತ್ರಗಳೇ ನಿದರ್ಶನವಾಗುತ್ತವೆ.

ತಾವು ಪ್ರತಿಪಾದಿಸಿರುವ ನೂತನ ಗಹನ ಸಾಹಿತ್ಯ ತತ್ತ ಗಳಿಗೆ ಈ ದಾರ್ಶನಿಕ ಮಹಾಕವಿಯೇ ಸುವಿಸ್ತಾರವೂ ಸರ್ವಗ್ರಾಹ್ಯವೂ ತಲಸ್ಪರ್ಶಿಯೂ ಕೂಲಂಕಷವೂ ಆದ ವ್ಯಾಖ್ಯಾನವನ್ನು ಬರೆದಿದ್ದಾರೆ. ಮಹಾವಿದ್ವಾಂಸರಾದ ಡಾ. ಕೆ. ಕೃಷ್ಣಮೂರ್ತಿಯವರು ಆ ವ್ಯಾಖ್ಯಾನದ ಬಗ್ಗೆ ಮಂಡಿಸಿರುವ ಅಮೂಲ್ಯವೂ ನಿಷ್ಕೃಷ್ಟವೂ ಆದ ಅಭಿಪ್ರಾಯ ಕುವೆಂಪು ಅವರ ಪಾರದರ್ಶಕ ವಿಚಾರ ಮಂಥನಕ್ಕೆ ಕನ್ನಡಿ ಹಿಡಿಯುತ್ತದೆ : ‘ಕುವೆಂಪು ಅವರ ಸೂಕ್ಷ್ಮ ಕಾವ್ಯ ಸಂವೇದನೆ, ನಿಸ್ಸಂದಿಗ್ಧ ತತ್ತ  ಪ್ರತಿಪಾದನೆ, ಔಚಿತ್ಯಪೂರ್ವ ದೃಷ್ಟಾಂತ ಸಂಯೋಜನೆಗಳು ಮೂರೂ ತ್ರಿವೇಣೀ ಸಂಗಮದಂತೆ ಕೂಡಿ ಸಾಹಿತ್ಯದ ಸಾರಸರ್ವಸ್ವವನ್ನು ಎತ್ತಿತೋರಿಸಲು, ಇತ್ತ ಪ್ರಾಚೀನ ಭಾರತೀಯ ಅಲಂಕಾರಶಾಸ್ತ್ರ, ಅತ್ತ ಅರ್ವಾಚೀನ ಪಾಶ್ಚಾತ್ಯ ಕಾವ್ಯ ಚಿಂತನೆ-ಎರಡನ್ನೂ ಸಮಪ್ರಮಾಣದಲ್ಲಿ ಮೈಗೂಡಿಸಿಕೊಂಡು, ವಿನೂತನ ವಿಚಾರ ಸರಣಿಯಿಂದ ಇವೆರಡಕ್ಕಿಂತಲೂ ಆಚಿನ ದರ್ಶನ ಧ್ವನಿಯ ದಿವ್ಯಸೂತ್ರವನ್ನು ಸಹೃದಯರು ಮೆಚ್ಚುವಂತೆ ಆವಿಷ್ಕರಿಸುವಲ್ಲಿ ಯಶಸ್ವಿಯಾಗಿದೆ. ಅದ್ಭುತವಾದ ಪ್ರತಿಭೆ, ಕಾವ್ಯಶಾಸ್ತ್ರ, ತತ್ತ ಶಾಸ್ತ್ರ, ಸಾಹಿತ್ಯ ವಿಮರ್ಶೆಗಳಲ್ಲಿ ನಿರಂತರ ವ್ಯುತ್ಪತ್ತಿ, ಸರ್ವತೋಮುಖವೂ ಸಾರಗ್ರಾಹಿಯೂ ಆದ ಕಾವ್ಯಾಭ್ಯಾಸ ಈ ಮೂರೂ ಈ ಪ್ರಮಾಣದಲ್ಲಿ ಕೂಡುವುದೇ ದುರ್ಲಭ. ಒಂದು ವೇಳೆ ಪ್ರಮಾಣಾಂತರದಿಂದ ಕೂಡಿತೆಂದರೂ ಸೃಜನ ಶೀಲವಾದ, ಸರಸಸುಂದರವಾದ ಶೈಲಿ ಸಿದ್ಧಿಸದು. ಇಲ್ಲಿ ಅತ್ಯಂತ ಕರ್ಕಶ ತರ್ಕ ಜಟಿಲವಾದ ಸೌಂದರ್ಯ ಶಾಸ್ತ್ರದ ಅಂತರಂಗ ರಹಸ್ಯವನ್ನೆಲ್ಲ ಹೃದಯಸ್ಪರ್ಶಿಯಾದ ಶೈಲಿಯಲ್ಲಿ ಕುವೆಂಪು ಅವರು ನಿರೂಪಿಸಿ ತಮ್ಮ ಅಸಾಧಾರಣ ಮಹತ್ವವನ್ನು ಮೆರೆದಿದ್ದಾರೆ. ಅದಕ್ಕೆ ವಿವರಣೆ, ವಿಸ್ತರಣೆಗಳ ಅಗತ್ಯವಿಲ್ಲ; ತೆರೆದ ಹೃದಯದಿಂದ ಓದುವ ಸಹೃದಯತೆ ಇದ್ದವರಿಗೆಲ್ಲ ಸುಲಿದ ಬಾಳೆಯ ಹಣ್ಣಿನ ಸವಿ ಅದರಲ್ಲಿದೆ. (ರಸೋವೈಸಃ ವಿವೇಚನೆ, ಡಾ. ಕೆ. ಕೃಷ್ಣಮೂರ್ತಿ : ಪು ೧-ಅರ್ಕಾವತಿ ಪ್ರಕಾಶನ, ಮೈಸೂರು) ಈ ಅವತರಣಿಕೆಯಲ್ಲಿ ಕುವೆಂಪು ಕಾವ್ಯಮೀಮಾಂಸೆಯ ಹಾಗೂ ಅವರ ವ್ಯಾಖ್ಯಾನದ ಸ್ವರೂಪ ಲಕ್ಷಣ ಮಹತ್ವಗಳು ಸಾಕಲ್ಯವಾಗಿ ಪ್ರತಿಬಿಂಬಗೊಂಡಿವೆಯೆಂದೇ ಹೇಳಬಹುದು.

‘ಕುವೆಂಪು ಅಭಿನವ ಆನಂದವರ್ಧನನಂತೆ ಕಾವ್ಯಮೀಮಾಂಸಕರಷ್ಟೆ ಅಲ್ಲ, ಬ್ರ್ಯಾಡ್ಲೆಯಂತೆ ಶ್ರೇಷ್ಠ ವಿಮರ್ಶಕರೂ ಹೌದು. ಕನ್ನಡದ ಅಥವಾ ಭಾರತೀಯ ಪ್ರಾಚೀನ ಕಾವ್ಯಗಳ ಅರ್ಥಗ್ರಹಣದಲ್ಲಿ ಹಾಗೂ ಆಧುನಿಕ ದೃಷ್ಟಿಯ ಪುನರ್ಮೌಲ್ಯ ನಿರ್ಣಯದಲ್ಲಿ ಕುವೆಂಪು ಅವರ ಸಾಹಿತ್ಯತತ್ತ ಗಳೂ ವಿಮರ್ಶನ ಪದ್ಧತಿಯೂ ಅಭೂತಪೂರ್ವವೂ ನಿರ್ದುಷ್ಟವೂ ಅಲಭ್ಯ ಲಾಭಪ್ರದಾಯಕವೂ ಆದ ಕೀಲಿಕೈಗಳನ್ನೊದಗಿಸಿವೆ. ವಿಮರ್ಶೆಯಲ್ಲಿ ಸಂಶೋಧನಾತ್ಮಕ, ವರ್ಣನಾತ್ಮಕ ಮತ್ತು ದರ್ಶನಾತ್ಮಕ ಪ್ರಭೇದತ್ರಯಗಳನ್ನು ಮೊಟ್ಟಮೊದಲು ಕಲ್ಪಿಸಿದವರೂ ಅವರೇ. ಅವರ ವಿಮರ್ಶೆಯೆಲ್ಲ ವಿಶೇಷವಾಗಿ ದರ್ಶನಾತ್ಮಕ ವಿಮರ್ಶೆಯ ಪರಿಧಿಯಲ್ಲಿ ಬರುತ್ತದೆ. ಅವರ ದರ್ಶನ ವಿಮರ್ಶೆಯಿಂದ ಕಾವ್ಯಾನುಭವಕ್ಕೆ ಹೊಸ ದಾರಿಗಳು, ದ್ವಾರಗಳು ತೆರೆದುಕೊಂಡಂತಾಯಿತು; ಕವಿ-ಕಾವ್ಯಾವಲೋಕನಕ್ಕೆ ಅವರು ಹೊಸ ಕಣ್ಣು ಕೊಟ್ಟರು’ ಎಂಬ ಪ್ರೊ. ಸಿ.ಪಿ.ಕೆ.ಯವರ ಮಾತು ಅಕ್ಷರಶಃ ನಿಜ. (ಕುವೆಂಪು ಕಾವ್ಯ ಮೀಮಾಂಸೆ, ಪು. ೨-ಚಿತ್ರಭಾನು ಪ್ರಕಾಶನ, ಮೈಸೂರು-೧೨.) ದಾರ್ಶನಿಕ ಪ್ರತಿಭೆಯ ಜತೆಗೆ ವೈಜ್ಞಾನಿಕ ದೃಷ್ಟಿ, ವೈಚಾರಿಕ ಮನೋಧರ್ಮ ಮತ್ತು ಪ್ರಾಯೋಗಿಕ ಮನೋವಿಜ್ಞಾನದ ಸತತಾಭ್ಯಾಸ ಇವು ಅವರ ವಿಮರ್ಶೆಯನ್ನು ಪೋಷಿಸಿವೆ, ರೂಪಿಸಿವೆ, ಪರಿಪಕ್ವಗೊಳಿಸಿವೆ.

ಕಾವ್ಯ ಮೀಮಾಂಸೆಯ ತತ್ತ ಗಳನ್ನು ಬಿತ್ತರಿಸುವಾಗ ಕುವೆಂಪು ಅವರ ಭಾಷೆ ಸಹಜವಾಗಿಯೇ ಸೂತ್ರಪ್ರಾಯವಾಗುತ್ತದೆ; ಅನೇಕ ವೇಳೆ ಒಂದೊಂದು ವಾಕ್ಯವೂ ಬಂಧುರ ಸೂಕ್ತಿಯಾಗುತ್ತದೆ. ಉಪಮಾರೂಪಕಗಳಂತು ಮಾಲೆ ಮಾಲೆಯಾಗಿ ಮೂಡಿ ದಾರ್ಶನಿಕ ತತ್ತ ಗಳ ತಾತ್ಪರ್ಯವನ್ನು ಸ್ಪಷ್ಟಪಡಿಸುತ್ತವೆ. ಕಾವ್ಯ ಮೀಮಾಂಸೆಯ ಗಹನ ತತ್ತ ಗಳ ಪ್ರತಿಪಾದನೆಗೆ ಅವರು ಅನುಕೂಲವಾದ ಅತ್ಯವಶ್ಯವಾದ ನೂತನ ಭಾಷೆ ಪರಿಭಾಷೆಗಳನ್ನು ಸೃಷ್ಟಿಸಿ, ಕನ್ನಡ ಭಾಷೆಗೆ ನವಕಾಂತಿಯನ್ನೂ ಮಹದೂರ್ಜೆಯನ್ನೂ ಸಮಾವೇಶಗೊಳಿಸಿದ್ದಾರೆ.

ಪ್ರಬಂಧಗಳ ಮೂಲಕವಲ್ಲದೆ ಪಾಠ ಪ್ರವಚನಗಳ ಮೂಲಕವೂ ಕುವೆಂಪು ಸ್ವಯಂಪ್ರಣೀತ ಕಾವ್ಯ ಮೀಮಾಂಸೆಯ ತತ್ತ ಗಳನ್ನು ಹಲವು ಪೀಳಿಗೆಗಳ ವಿದ್ಯಾರ್ಥಿವೃಂದಕ್ಕೆ ಬೋಧಿಸಿದ ಫಲವಾಗಿ ‘ದರ್ಶನ ಧ್ವನಿ’, ‘ಪೂರ್ಣದೃಷ್ಟಿ’, ‘ಭೂಮಾನುಭೂತಿ’ ಮೊದಲಾದ ಪದಗುಂಫನಗಳು ಲೀಲಾಜಾಲವಾಗಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲೀಗ ಬಳಕೆಯಾಗುತ್ತಿವೆ. ಪ್ರಕಟಿತ ಪ್ರಬಂಧಗಳಲ್ಲಿ ಕಾಣಸಿಗದ ಅನೇಕ ಸಂಗತಿಗಳು ಅವರ ಪಾಠ ಪ್ರವಚನಗಳಲ್ಲಿ ಅನೈಚ್ಛಿಕವಾಗಿ ತಲೆದೋರಿದ್ದುಂಟು; ಅಷ್ಟೇ ಅಲ್ಲ, ಅವರ ಶಿಷ್ಯರ ಲೇಖನ ಭಾಷಣಗಳಲ್ಲಿ ಹೊಳಲುಗೊಟ್ಟದ್ದುಂಟು. ಅವರ ಪಾಠಗಳ ಟಿಪ್ಪಣಿಗಳನ್ನು ಶಿಷ್ಯರು ಪರಿಷ್ಕರಿಸಿ, ಪ್ರಕಟಿಸಿದ್ದರೂ ಪ್ರಬಂಧಗಳಲ್ಲಿಲ್ಲದ ಅನೇಕ ಅಮೂಲ್ಯ ಸಂಗತಿಗಳು ಸಾಹಿತ್ಯಾಭ್ಯಾಸಿಗಳಿಗೆ ದೊರಕುತ್ತಿದ್ದುದರಲ್ಲಿ ಅನುಮಾನವಿಲ್ಲ.

ಈ ದಿಶೆಯಲ್ಲಿ ಕುವೆಂಪು ಅವರ ಪರಮ ಶಿಷ್ಯರಲ್ಲೊಬ್ಬರೂ, ಸ್ವಯಂ ವರಕವಿಗಳೂ, ನಾಡಿನ ಶ್ರೇಷ್ಠ ವಿಮರ್ಶಕರೂ, ಮಹಾ ವಿದ್ವಾಂಸರೂ ಆದ ಡಾ. ಜಿ.ಎಸ್. ಶಿವರುದ್ರಪ್ಪನವರು ಸಾಹಿತ್ಯ ಲೋಕಕ್ಕೊಂದು ಅತ್ಯಮೂಲ್ಯವೂ ಅತ್ಯಪೂರ್ವವೂ ಆದ ಕಾಣಿಕೆಯನ್ನು ನೀಡಿದ್ದಾರೆ. ಕುವೆಂಪು ಅವರು ತರಗತಿಯಲ್ಲಿ ಕಾವ್ಯ ಮೀಮಾಂಸೆಯನ್ನು ಬೋಧಿಸುವಾಗ ತಾವು ಮಾಡಿಕೊಂಡಿದ್ದ ಟಿಪ್ಪಣಿಗಳ ಆಧಾರದ ಮೇಲೆ ಅವುಗಳ ಸಾರಸಂಗ್ರಹವೆನ್ನಬಹುದಾದ ತತ್ತ ಗಳನ್ನು ಸೂತ್ರರೂಪದಲ್ಲಿ ಶಿವರುದ್ರಪ್ಪನವರು ಸಂಗ್ರಹಿಸಿಕೊಟ್ಟಿದ್ದಾರೆ. ಈ ಒಂದೊಂದು ಸೂತ್ರವೂ ಎಷ್ಟು ಅಡಕವಾಗಿವೆಯೆಂದರೆ, ಅವುಗಳನ್ನು ಮೆಲುಕು ಹಾಕಿದಂತೆಲ್ಲ ಹೊಸ ಹೊಸ ಅರ್ಥಗಳು ಸ್ಫುರಿಸುತ್ತವೆ; ಒಂದೊಂದು ಕಾರಿಕೆಯೂ ದೀರ್ಘ ವ್ಯಾಖ್ಯಾನವನ್ನಪೇಕ್ಷಿಸುತ್ತವೆ.

ಕೇವಲ ನಿದರ್ಶನಾರ್ಥವಾಗಿ ಒಂದೆರಡು ಸೂತ್ರಗಳಿಗೆ ಅತ್ಯಂತ ಸಂಕ್ಷೇಪವಾಗಿ ವ್ಯಾಖ್ಯಾನವನ್ನು ಬರೆದು ತೋರಿಸಬಹುದು :

೧. ಕವಿ ಅಸಾಧಾರಣ ಅಸಾಮಾನ್ಯ ಸ್ಥಿತಿಗಳನ್ನು ಪಡೆಯಲು ಅರ್ಹನಾದ ವ್ಯಕ್ತಿ. ಭಾವಗಳೇ ಅವನ ಆಹಾರ. ಆಲೋಚನೆಗಿಂತ ಎಷ್ಟೋ ಕೋಟ್ಯಂತರ ಭಾವಗಳು ಚಿದ್ರೂಪಗಳು ಮನುಷ್ಯ ಚೇತನದಲ್ಲಿ ಸಂಚರಿಸುತ್ತವೆ. ಅವುಗಳನ್ನು ಗ್ರಹಿಸಿ ಸಾಕಾರಗೊಳಿಸುವವರು ಕವಿಗಳು.

ಜಗತ್ತಿನಲ್ಲಿ ಎಷ್ಟು ಕೋಟಿ ಜನ ಆಗಿಹೋಗಿಲ್ಲ? ಆದರೆ ಹೋಮರ್, ವರ್ಜಿಲ್, ವಾಲ್ಮೀಕಿ, ಕಾಳಿದಾಸ, ಮಿಲ್ಟನ್, ವರ್ಡ್ಸ್‌ವರ್ತ್ ಇಂಥ ಕೆಲವೇ ಕೆಲವರು ಮಾತ್ರ ಮಹಾಕವಿಗಳೆಂದೋ ವರಕವಿಗಳೆಂದೋ ಆರಾಧನೀಯರಾಗಿದ್ದಾರೆ. ಕೋಟಿಗೊಬ್ಬ ವರಕವಿ, ಯುಗಕ್ಕೊಬ್ಬ ಮಹಾ ಕವಿ ಲಭಿಸಿದರೆ ಅದೇ ಲೋಕದ ಪುಣ್ಯ. ಇಂಥ ಸಾಮಾನ್ಯ ಅಸಮಾನ ಸ್ಥಿತಿಗೇನು ಕಾರಣ? ಆಯಾ ವ್ಯಕ್ತಿಯ ಸಂಸ್ಕಾರವೇ ಈ ಅಸಮಾನತೆಗೆ ಆದ್ಯ ಕಾರಣವೆನ್ನಬಹುದು. ಅಂತಃಪ್ರೇರಣೆ, ವಿಭೂತಿಶಕ್ತಿಗಳ ಸಂಪರ್ಕ ಸಾನ್ನಿಧ್ಯ – ಆರಾಧನೆ, ಸತತ ಶಾಸ್ತ್ರಾಭ್ಯಾಸದಿಂದ ಸಂಲಬ್ಧವಾದ ಜ್ಞಾನ, ಬೌದ್ಧಿಕ ಪ್ರಭೆ, ಲೋಕಾನುಭವ, ಆಲೋಚನೆ ಮತ್ತು ನಿರಂತರ ಧ್ಯಾನಗಳ ಸಾಮೂಹಿಕ ಕ್ರಿಯೆಯಿಂದಾಗಿ ಸಂಸ್ಕಾರ ಸಂಪ್ರಾಪ್ತವಾಗುತ್ತದೆ. ಅನಾದಿ ಕಾಲದಿಂದ ಅವಿಚ್ಛಿನ್ನವಾಗಿ ಮಾನವನ ಅಂತರಂಗದಲ್ಲಿ ಹರಿದುಬರುತ್ತಿರುವ ಅಗೋಚರ ಸತ್ವವೇ ಅಂತಃಪ್ರೇರಣೆ ಅಥವಾ ಪ್ರತಿಭೆಯೆನ್ನಬಹುದು. ಸಂಸ್ಕಾರದ ಪ್ರಮಾಣಾಂತರವೇ ಲೋಕದ ಜನರ ನಡುವಣ ಭೇದವನ್ನು  ನಿರ್ಣಯಿಸುತ್ತದೆ. ವಿಶಿಷ್ಟ ಸಂಸ್ಕಾರದ ಸೌಭಾಗ್ಯಕ್ಕೆ ಭಾಜನನಾದ ಕವಿಯ ಚೇತನ ಅಸಾಮಾನ್ಯವಾದದ್ದರಿಂದ ಸಾಮಾನ್ಯ ಚೇತನಕ್ಕೆ ಗ್ರಾಹ್ಯವಾಗದ ಅಸಾಧಾರಣ ಸಂಗತಿಗಳು, ವಿಶ್ವದ ರಹಸ್ಯಗಳು ಕವಿ ಚೇತನಕ್ಕೆ ಗೋಚರವಾಗುತ್ತವೆ.

ಭಾವಭಾವನೆಗಳೇ ಮೂರ್ತೀಕರಣಗೊಂಡ ವಸ್ತು ಅಥವಾ ವಸ್ತುಗಳು, ಅನುಭವದ ಮೂಲಕ ಭಾವಭಾವನೆಯಾಗಿ, ಅನಂತರ ಆಲೋಚನೆ ಅಥವಾ ಬುದ್ಧಿಯ ಮೂಲಕ ವಸ್ತುರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತವೆನ್ನುವುದಕ್ಕೆ ವಾಸ್ತುಶಿಲ್ಪಿಯ ಕೃತಿಗಳೇ ಸಾಕ್ಷಿ. ಭಾವಗಳು ಅನಂತ. ವಿವೇಕಾನಂದ, ಯೂಂಗ್ ಮೊದಲಾದ ಋಷಿಮನೀಷಿಗಳ ಪ್ರಕಾರ ಅದು ಅನಂತ ಕಾಲದಿಂದ ಅಲೆಯಲೆಯಾಗಿ ಆಕಾಶದಲ್ಲಿ ಸಂಚರಿಸುತ್ತಿದ್ದು, ಹದವಾದ ಚಿದಾಕಾಶದಲ್ಲಿ ಅವತರಿಸುತ್ತವೆ. ಜಗತ್ತಿನ ನಾನಾ ಆಕಾಶವಾಣಿ ಕೇಂದ್ರಗಳ ಮೂಲಕ ಸಂಗೀತ ಭಾಷಣಗಳು ಪ್ರಸಾರವಾಗುವುದುಂಟಷ್ಟೆ. ಅವುಗಳ ಧ್ವನಿತರಂಗಗಳು ಆಕಾಶದಲ್ಲಿ ಸರ್ವತ್ರ ಸಂಚರಿಸುತ್ತಿರುತ್ತವೆ; ಧ್ವನಿಗ್ರಾಹಕ ಯಂತ್ರಗಳು ಅವನ್ನು ಆಕರ್ಷಿಸುತ್ತವೆ. ಅವುಗಳ ಆಕರ್ಷಕ ಶಕ್ತಿ ಯಂತ್ರಶಕ್ತಿಯನ್ನವಲಂಬಿಸಿರುತ್ತದೆ. ಮಾನವನ ಮನಸ್ಸು ಅಂಥದೊಂದು ಯಂತ್ರ; ಆಕಾಶದಲ್ಲಿ ಸದಾ ಸಂಚರಿಸುತ್ತಿರುವ ವಿಶ್ವಚಿತ್ ರೂಪದ ಭಾವಗಳನ್ನು ಗ್ರಹಿಸಿ, ಅವುಗಳಿಗೆ ಆಕಾರವನ್ನು ಕೊಡುವ ಕಲ್ಪನಾ ಸಾಮರ್ಥ್ಯ ಕವಿಗೆ ಮಾತ್ರ ಮೀಸಲು. ಆದ್ದರಿಂದ ಆಲೋಚನೆ ಬುದ್ಧಿಯೇ ಮೊದಲಾದ ಚಿತ್ ವ್ಯಾಪಾರಗಳು ಭಾವಾತ್ಮಕವಾಗಿ ಹೊರಹೊಮ್ಮಿದಾಗ ಮಾತ್ರ ಕಾವ್ಯಾವತಾರ ಅಥವಾ ಕಲಾವತಾರ ಸಾಧ್ಯ. ಬದುಕೇ ಕಲೆಯಾಗಿ, ಕಲೆಯೇ ಬದುಕಾಗಿ, ಅದ್ವೆ ತ ಸಿದ್ಧಿಸಿದಾಗ ಮಹಾಕಾವ್ಯ ಮಹಾಕಲೆ ಆವಿರ್ಭವಿಸುತ್ತವೆ.

೨. ಯಾವುದು ಭವಿಷ್ಯತ್ತಿನಲ್ಲಿ ಸಂಭವನೀಯವೋ ಅದು ಈಗಲೂ ಚಿದ್ರೂಪದಲ್ಲಿ ಅವ್ಯಕ್ತವಾಗಿ ಇದ್ದೇ ಇರಬೇಕು. ಬೀಜದಲ್ಲಿ ವೃಕ್ಷ ಬ್ರಹ್ಮ ಸಂಕಲ್ಪರೂಪವಾಗಿರುವಂತೆ.

ಚಿತ್ ಎನ್ನುವ ಪದಕ್ಕೆ ಬುದ್ಧಿ, ಮನಸ್ಸು, ಹೃದಯ, ಆತ್ಮ, ಚೈತನ್ಯ, ಬ್ರಹ್ಮ ಮೊದಲಾದ ಅರ್ಥಗಳುಂಟು. ವಿಶ್ವದ ಸರ್ವ ವ್ಯಾಪಾರಗಳ ಕೇಂದ್ರ ವಿಶ್ವಚಿತ್; ಮಾನವ ಲೋಕದ ಸರ್ವ ವ್ಯಾಪಾರಗಳ ಉಗಮಸ್ಥಾನ ಮನುಷ್ಯಚಿತ್. ಮನುಷ್ಯಚಿತ್  ವಿಶ್ವಚಿತ್ತಿನ ಒಂದು ತರಂಗ ಅಥವಾ ತರಂಗ ಸಮೂಹ. ಅಂದ ಮೇಲೆ ವಿಶ್ವಚಿತ್ತಿನಲ್ಲಿಲ್ಲದ್ದು ಬೇರೆಲ್ಲಿಯೂ ಕಾಣಸಿಗದು; ಅಲ್ಲಿದ್ದದ್ದೇ ಆಗಾಗ್ಗೆ ನಿಸರ್ಗದ ಮೂಲಕ, ಮನುಷ್ಯನ ಮೂಲಕ ಮೈದೋರುತ್ತದೆ.

ಕಾಲ ಅಖಂಡ, ಅನಂತ, ಅಮೇಯ. ಭೂತ ವರ್ತಮಾನ ಭವಿಷ್ಯತ್ ಎಂಬ ವಿಭಜನೆ, ಕೃತಕ, ಅಸಂಗತ, ದೋಷಯುಕ್ತ. ಆಕಾಶ ಕಾಲ ಅಪ್ರತ್ಯೇಕ. ವಿಶ್ವಚಿತ್ ಎನ್ನುವುದು ಇವುಗಳಿಂದ ಬೇರೆಯಲ್ಲ, ವಿಶ್ವಶಕ್ತಿಯ ಚಿದ್ರೂಪಗಳಿಗೆ ಆದಿಯಿಲ್ಲ, ಅಂತ್ಯವಿಲ್ಲ; ಅವು ಶಾಶ್ವತ, ಅಕ್ಷಯ. ಅವು ಆಗಾಗ್ಗೆ ಹೋಮರ್, ದಾಂತೆ, ವಾಲ್ಮೀಕಿ, ಕಾಳಿದಾಸ, ಮಿಲ್ಟನ್, ಮೈಕೇಲ್ ಆಂಜಿಲೊ, ಐನ್‌ಸ್ಟೀನ್ ಮೊದಲಾದ ಮಹರ್ಷಿಗಳ ಚಿತ್ಕೋಶದ ಮೂಲಕ ಜಗತ್ತಿಗೆ ಕಾಣಿಸಿಕೊಳ್ಳುತ್ತವೆ. ಹಿಂದೆ ಮಾತ್ರವಲ್ಲ, ಮುಂದೆಯೂ ಅಷ್ಟೇ, ಇದ್ದದ್ದೇ ಆಗುತ್ತದೆ; ಇಲ್ಲದ್ದರಿಂದ ಆಗುವಿಕೆ ಇಲ್ಲ; ಅಮೂರ್ತವಾದದ್ದೇ ಮೂರ್ತ ಸ್ವರೂಪ ತಾಳುತ್ತದೆ; ಅರೂಪವೇ ಸುರೂಪವಾಗುತ್ತದೆ. ಮೊದಲೇ ಬೀಜದಲ್ಲಿ ವೃಕ್ಷವಿರುವಂತೆ, ಕಾಷ್ಠದಲ್ಲಿ ಅಗ್ನಿಯಿರುವಂತೆ, ಕ್ಷೀರದಲ್ಲಿ ಘೃತವಿರುವಂತೆ, ವಿಶ್ವಚಿತ್ತಿನಲ್ಲಿ ಭಾವಸಂಕಲ್ಪಗಳಿರುತ್ತವೆ. ಅವ್ಯಕ್ತ ಸ್ಥಿತಿಯಲ್ಲಿರುವ ಅವೇ ಕಾಲ ಕಾಲಕ್ಕೆ ವ್ಯಕ್ತ ಸ್ವರೂಪದಲ್ಲಿ ಪರಿಣಾಮಗೊಳ್ಳುತ್ತವೆ.

ಈ ಕಿರುಹೊತ್ತಿಗೆಯಲ್ಲಿ ಇಂಥವು ಎಂಬತ್ತು ಸೂತ್ರಗಳಿವೆ. ಒಂದೊಂದಕ್ಕೂ ವ್ಯಾಖ್ಯಾನ ಬರೆಯುವುದಾದರೆ ಇದೊಂದು ಮಹಾ ಹೊತ್ತಗೆಯಾಗುತ್ತದೆ. ಇವನ್ನು ಸಂಗ್ರಹಿಸಿರುವ ಶಿವರುದ್ರಪ್ಪನವರು ತಾವು ಲಿಪಿಕಾರರೆಂದೇ ಕರೆದುಕೊಂಡು, ತಮ್ಮ ವಿನಯಶ್ರೀಯನ್ನು ಮೆರೆದಿದ್ದಾರೆ. ಅಂದ ಮೇಲೆ ಇವು ಕುವೆಂಪು ಅವರ ಮುಖದಿಂದ ನೇರವಾಗಿ ಹೊರಹೊಮ್ಮಿದ ವಾಣಿಗಳೆಂದೇ ಹೇಳಬಹುದು.

ಈ ಸೂತ್ರಗಳಲ್ಲಿ ಅಡಕಗೊಂಡಿರುವ ತತ್ತ ಗಳ, ಆಲೋಚನೆಗಳ ಹಾಗೂ ಅನುಭವಗಳ ಅಪಾರತೆಯನ್ನೂ ಮಹತ್ವವನ್ನೂ ವಿನೂತನತೆಯನ್ನೂ ಸಹೃದಯರ ಗಮನಕ್ಕೆ ತರುವ ಸಲುವಾಗಿ ಅಲ್ಲಿ ಬರುವ ಸಂಗತಿಗಳನ್ನಿಲ್ಲಿ ಉಲ್ಲೇಖಿಸಲಾಗಿದೆ : ಕವಿಯ ಆವಶ್ಯಕತೆ, ಅವನ ಹಿರಿಮೆ, ಅವನ ಭಾವಾನುಭವ ಆಲೋಚನೆ ತತ್ತ ಜಿಜ್ಞಾಸೆ; ಭಾವಾನುಭವ ಬುದ್ಧಿ ಆಲೋಚನೆಗಳ ಪರಸ್ಪರ ಸಂಬಂಧ; ಧ್ಯಾನದ ಅಗತ್ಯತೆ; ಕಾವ್ಯದ ಉಗಮ ಪ್ರಯೋಜನ; ಲೋಕಾನುಭವವನ್ನು ಪ್ರತಿಮಿಸುವುದೇ ಕಾವ್ಯದ ಉದ್ದೇಶ; ರಸಾನುಭವ; ಕಲ್ಪನಾ ಶಕ್ತಿಯೊಂದೇ ಅತೀಂದ್ರಿಯ ಸತ್ಯಗಳನ್ನು ಗ್ರಹಿಸುವ ಸಾಧನ. ಆತ್ಮ ಶ್ರೀ ಪರವಾದ ದಾರ್ಶನಿಕ ದೃಷ್ಟಿಯಿಂದ, ಆಧ್ಯಾತ್ಮಕ ನಿಷ್ಠೆಯಿಂದ ಮಾತ್ರ ಮಹಾಕಾವ್ಯದ ಆವತರಣ ಸಾಧ್ಯ; ಅನುಭವ ನಾವೀನ್ಯದಿಂದ ಉತ್ತಮ ಕಾವ್ಯದ ಸೃಷ್ಟಿ; ಕವಿ ಕೃತಿಯೊಂದು ಸೃಷ್ಟಿ ಕಾರ್ಯ, ಗುಪ್ತವೂ ಅನೈಚ್ಛಿಕವೂ ಆದ ಕ್ರಿಯೆ; ಛಂದಸ್ಸು ರೀತಿ ಭಾವ ಭಾಷೆ; ಕವಿಭಾವದ ಅಭಿವ್ಯಕ್ತಿಯೇ ಪ್ರತಿಮೆ; ಕಲೆಯ ಮೂಲ ಸಮಷ್ಟಿ ಮನಸ್ಸಿನಲ್ಲಿದೆ; ಸಮಷ್ಟಿಚಿತ್ ಯುಗದ ಮಹಾ ಪುರುಷರಲ್ಲಿ ಮೈದೋರುತ್ತದೆ; ಲೋಕಕೃತಿ – ಕಲಾಕೃತಿ ಭೇದ; ಕವಿ – ಸಹೃದಯ; ರಸಾನುಭವವೊಂದು ಅಖಂಡ ಕ್ರಿಯೆ; ಕಲಾ ಕೃತಿ ಅಂಶದಲ್ಲೂ ಪೂರ್ಣ, ಪೂರ್ಣದಲ್ಲೂ ಪೂರ್ಣ; ಮನಶ್ಶಾಸ್ತ್ರ ಕಲೆಗಳ ಸಂಬಂಧ; ಕಲಾವಿದನಲ್ಲಿ ದ್ವಂದ್ವ ವ್ಯಕ್ತಿತ್ವ; ಮಹಾಕಾವ್ಯ – ಪುರಾಣ – ಇತಿಹಾಸಗಳ ಸ್ವರೂಪ; ಮಹಾಕಾವ್ಯ ಸಮಷ್ಟಿ ಕೃತಿ; ಸೌಂದರ್ಯ – ಭಾವ – ರೂಪ – ವಸ್ತು – ಅನುಭವ – ಬುದ್ಧಿ – ಸುಜ್ಞಾನಗಳ ಅವಿನಾಭಾವದ ಏಕಾಖಂಡವಾದ ಸಮ್ಮಿಲನವೇ ಕಾವ್ಯ.

ಚಿಕ್ಕದಾದರೂ ಚೊಕ್ಕವಾಗಿರುವ ಈ ಸೂತ್ರ ಸಂಕಲನ ಕುವೆಂಪು ಕಾವ್ಯ ಮೀಮಾಂಸೆಗೆ ಅಮೂಲ್ಯವಾದ ಕೊಡುಗೆಯಾದರೆ, ಕುವೆಂಪು ಸಾಹಿತ್ಯಾಭ್ಯಾಸಿಗಳಿಗೆ ಮಾರ್ಗದರ್ಶಕ ವಿದ್ಯುದ್ದೀಪವಾಗಲಿದೆ. ಲಿಪಿಕಾರರು ಈ ಸಂಕಲನಕ್ಕಿಟ್ಟಿರುವ ಹೆಸರೂ ಅರ್ಥಪೂರ್ಣವಾಗಿದೆ.  ಇದನ್ನು  ಆಸ್ಥೆಯಿಂದ ಸಿದ್ಧಗೊಳಿಸಿಕೊಟ್ಟಿರುವ ಡಾ. ಜಿ.ಎಸ್. ಶಿವರುದ್ರಪ್ಪನವರ ಉಪಕಾರವನ್ನು ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಎಂದೆಂದಿಗೂ ಮರೆಯದು. ಈ ಸೂತ್ರಗಳಿಗೆ ಯಾರಾದರೂ ವ್ಯಾಖ್ಯಾನ ಬರೆಯುವುದಾದರೆ ಅದೊಂದು ಉದ್ಘ ಕೃತಿಯಾಗುತ್ತದೆಂದೂ ಕಾವ್ಯಾಭ್ಯಾಸಿಗಳಿಗೆ ಇದರ ಪ್ರಯೋಜನ ಪರಿಣಾಮಕಾರಿಯಾಗಿ ಹೆಚ್ಚುತ್ತದೆಂದೂ ಈ ಸಂದರ್ಭದಲ್ಲಿ ಹೇಳಬಹುದಾಗಿದೆ.

೨೫-೫-೧೯೮೭ರಂದು ಪ್ರೊ. ಜಿ.ಎಸ್. ಶಿವರುದ್ರಪ್ಪನವರು ನನಗೆ ಬರೆದ ಕಾಗದದಿಂದ ಶ್ರೀ ಕುವೆಂಪು ಅವರ ಬೋಧನ ಕೌಶಲ ಸಾಕಲ್ಯವಾಗಿ ವ್ಯಕ್ತವಾಗುವುದರಿಂದ ಅದನ್ನು ಈ ಹೊತ್ತಿಗೆಯ ಕೊನೆಯಲ್ಲಿ ಸೇರಿಸಿದೆ.

ಇದನ್ನು ಬೇಗನೆ ಮುದ್ರಿಸಿಕೊಟ್ಟಿರುವ ಕವಿಶೈಲ ಮುದ್ರಣಾಲಯದ ಸಿಬ್ಬಂದಿ ವರ್ಗಕ್ಕೆ, ಮುಖ್ಯವಾಗಿ ಶ್ರೀ ಎಂ.ಡಿ. ರಾಜಣ್ಣನವರಿಗೆ ನನ್ನ ಧನ್ಯವಾದಗಳು.

ದೇಜಗೌ
ಮೈಸೂರು-೧೨
೬-೯-೧೯೮೭

೨. ನನ್ನ ಪತ್ರ

ಪ್ರಿಯ ಶ್ರೀ ದೇ ಜವರೇಗೌಡ ಅವರಲ್ಲಿ :

ನಾನು ೧೯೫೨-೧೯೫೩ನೇ ಸಾಲಿನಲ್ಲಿ ಮೈಸೂರು ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಎಂ.ಎ. ವಿದ್ಯಾರ್ಥಿಯಾಗಿದ್ದಾಗ, ಶ್ರೀ ಕುವೆಂಪು ಅವರ ತರಗತಿಯಲ್ಲಿ ಮಾಡಿಕೊಂಡ ‘ಕಾವ್ಯ ಮೀಮಾಂಸೆ’ಯ ಟಿಪ್ಪಣಿಯಿಂದ ಸಂಗ್ರಹಿಸಿ ಒಂದು ಅನುಕ್ರಮದಲ್ಲಿ ಜೋಡಿಸಿದ ಕೆಲವು ಚಿಂತನೆಗಳು ಇಲ್ಲಿವೆ. ಇವುಗಳನ್ನು ‘ರಸಚಿಂತನೆಯ ಮಿಂಚುಗಳು’ ಎಂದು ಲಿಪಿಕಾರನಾದ ನಾನು ಕರೆದಿದ್ದೇನೆ. ಸುಮಾರು ಮೂವತ್ತೈದು ವರ್ಷಗಳ ಹಿಂದೆ ನಾನು ಬರೆದುಕೊಂಡ ಈ ಚಿಂತನೆಗಳು ಇಂದಿಗೂ ಎಷ್ಟೊಂದು ಪ್ರಸ್ತುತವೂ, ಮೌಲಿಕವೂ, ನವೀನವೂ ಆಗಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ನನ್ನಂತೆಯೇ ಬಹುಶಃ ನೀವೂ ಕುವೆಂಪು ಅವರ ವಿದ್ಯಾರ್ಥಿಯಾಗಿ ಪಾಠ ಕೇಳುವ ಸುಯೋಗಕ್ಕೆ ಪಾತ್ರರಾಗಿದ್ದಿರಿ ಎಂದು ನಾನು ತಿಳಿದಿದ್ದೇನೆ. ಕುವೆಂಪು ಅವರ ತರಗತಿಯ ಪಾಠ ಕೇಳುವುದು ಅಂದರೆ ಮುಂಗಾರಿನ ಆಕಾಶದ ಕೆಳಗೆ ನಿಂತ ಹಾಗೆ! ಎತ್ತಣಿಂದಲೋ ಮೋಡಗಳನ್ನು ತರುಬಿಕೊಂಡು ಬರುವ ಗಾಳಿ; ಅಸ್ತವ್ಯಸ್ತವಾಗಿ ಬಾನ್ ತುಂಬ ಹಬ್ಬಿಕೊಳ್ಳುವ ಮೇಘರಾಶಿ; ಅದರೊಳಗಿಂದ ಹೊಮ್ಮುವ ಮಿಂಚುಗಳು, ಮೊಳಗುಗಳು; ಧೋ ಎಂದು ಸುರಿಯುವ ಮಳೆ, ಮಳೆ; ನಿಂತ ಮೇಲೆ ನಗುವ ಆಕಾಶ; ಮಳೆ ತೊಳೆದ ಹಸುರಿನ ಮೇಲೆ ಹೊಳೆಯುವ ಬಿಸಿಲು, ಇತ್ಯಾದಿ ಇತ್ಯಾದಿ. ಅದೊಂದು ವಿಶೇಷ ಅನುಭವ, ಮತ್ತು ಧನ್ಯತೆಯ ಭಾವ. ನಿಮಗಾಗಿ, ಈ ಚಿಂತನೆಗಳನ್ನು ಸಂಗ್ರಹಿಸಲೆಂದು ಕುವೆಂಪು ಅವರ ತರಗತಿಯ ಟಿಪ್ಪಣಿಗಳನ್ನು ಪ್ರವೇಶಿಸಿದಾಗ, ನಾನು ಮತ್ತೆ ಅದೇ ಭಾವವನ್ನು ಪುನರನುಭವಿಸಿದ್ದೇನೆ. ಇದಕ್ಕಾಗಿ ನಿಮಗೆ ನನ್ನ ವಂದನೆಗಳು.

ಜಿ.ಎಸ್. ಶಿವರುದ್ರಪ್ಪ
ಮೇ, ೧೯೮೭