ಜನನ: ೧೯೩೭-ಜನ್ಮನಾಮ ಶಾಂತಿಮತಿ ಗಂಗೊಳ್ಳಿ

ಮನೆತನ: ಸಂಗೀತಾಸಕ್ತರ ಮನೆತನ.

ಗುರುಪರಂಪರೆ: ಹುಬ್ಬಳ್ಳಿಯ ಖ್ಯಾತ ಗಾಯಕ ರಾಮಚಂದ್ರ ದೀಕ್ಷಿತ ಜಂತ್ರಿ ಅವರಲ್ಲಿ ಸಂಗೀತ ಶಿಕ್ಷಣ. ಕರ್ನಾಟಕ ವಿಶ್ವವಿದ್ಯಾನಿಲಯದ ಸಂಗೀತ ಪದವಿ.

ಸಾಧನೆ: ಚಿಕ್ಕಂದಿನಿಂದಲೇ ಸಂಗೀತದ ಗೀಳು ಹತ್ತಿಸಿಕೊಂಡ ಶಾಂತಿ ಶಾಸ್ತ್ರೀಯ ಸಂಗೀತದೊಂದಿಗೆ ಸುಗಮ ಸಂಗೀತದ ಗಾಯನದ ಕಡೆಗೂ ತಮ್ಮ ಗಮನ ಹರಿಸಿ ದ.ರಾ. ಬೇಂದ್ರೆ. ಡಿ.ಎಸ್.ಕರ್ಕಿ, ಆನಂದಕಂದ, ಕಣವಿ ಮುಂತಾದ ಕವಿಗಳ ಕವನವನ್ನು ಹಾಡಲು ಆರಂಭಿಸಿದರು. ಧಾರವಾಡ ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾಗಿದ್ದ ಎನ್.ಕೆ. ಕುಲಕರ್ಣಿಯವರು ಪುಟ್ಟ ಹುಡುಗಿ ಶಾಂತಿಮತಿಯನ್ನು ತಮ್ಮ ’ಗಿಳಿವಿಂಡು’ ಕಾರ್ಯಕ್ರಮದಲ್ಲಿ ಹಾಡುವಂತೆ ಪ್ರೇರೇಪಿಸಿದರು. ಅಂದಿನಿಂದ ಯಶಸ್ಸಿನ ಸೋಪಾನ ಏರುತ್ತಲೇ ಹೋದರು.

ಚೀನಾ ಆಕ್ರಮಣದ ಸಂದರ್ಭದಲ್ಲಿ ಹಿಂದಿ ಕವಿ ಪ್ರದೀಪ್ ಅವರು ರಚಿಸಿದ ಕುರ್ಬಾನಿ ಗೀತೆಯನ್ನು ಕನ್ನಡಕ್ಕೆ ಕವಿ ರಾಘವೇಂದ್ರ ಇಟಗಿಯವರು ಭಾಷಾಂತರಿಸಿದಾಗ ಅದನ್ನು ಹಾಡಿದವರು ಶಾಂತಿಮತಿ ಇದರಿಂದ ಅವರ ಕೀರ್ತಿ ಗಗನಕ್ಕೇರಿತು.

ಮುಂದೆ ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸೇರಿ ಕೆಲಕಾಲ ಮುಂಬಯಿಲ್ಲೂ ಸೇವೆಯಲ್ಲಿದ್ದರು. ಅಲ್ಲಿದ್ದಾಗಲೇ ಅಲ್ಲಿನ ರಂಗಕರ್ಮಿ ಧಾರೇಶ್ವರ ಅವರನ್ನು ವಿವಾಹವಾದರು. ಅಂದಿನಿಂದ ಅವರು ಅನುರಾಧಾ ಧಾರೇಶ್ವರ್ ಆದರು. ಕಿತ್ತೂರ ಕೇಸರಿಣಿ ಚೆನ್ನಮ್ಮನ, ಪಾತ್ರದಿಂದ ಇವರ ಹೆಸರು ಮತ್ತಷ್ಟು ಎತ್ತರಕೇರಿತು. ಧಾರವಾಡ, ಹುಬ್ಬಳ್ಳಿಗಳಲ್ಲಿ ಯಾವುದೇ ಸಭೆ-ಸಮಾರಂಭ ನಡೆದರೂ ಅಲ್ಲಿ ಅನುರಾಧಾರವರ ಗಾಯನ ಸುಧೆ ಹರಿಯುತ್ತಿತ್ತು. ಜನ ’ಓ ಎನ್ನ ದೇಶ ಬಾಂಧವರೇ’ ಗೀತೆಯನ್ನು ಹಾಡಿ ಎಂದು ಕೂಗುತ್ತಿದ್ದರೂ, ಅಂಥ ಜನಪ್ರಿಯತೆ ಗಳಿಸಿದ್ದರು. ಆಕಾಶವಾಣಿಯ ಅನೇಕ ಗೀತ ರೂಪಕಗಳಲ್ಲೂ ಇವರ ಗಾನವಾಹಿನಿ ಪ್ರವಹಿಸಿದೆ. ಆಕಾಶವಾಣಿ ಕೇಂದ್ರದ ಸೇವೆಯಿಂದ ೧೯೯೭ರಲ್ಲಿ ನಿವೃತ್ತಿ ಹೊಂದಿ ಈಗ ತಮ್ಮ ಆಯುಷ್ಯವನ್ನು ಸಂಗೀತಕ್ಕಾಗಿ ಮುಡಿಪಿಟ್ಟಿದ್ದಾರೆ. ರಾಜ್ಯ, ರಾಷ್ಟ್ರಾದ್ಯಂತ ಇವರ ಕಾರ್ಯಕ್ರಮಗಳು ನಡೆದಿದೆ.

ಪ್ರಶಸ್ತಿ-ಸನ್ಮಾನ: ಧಾರವಾಡದ ಅಖಿಲ ಕರ್ನಾಟಕ ಕೊಂಕಣಿ ಪ್ರಶಸ್ತಿ, ಧಾರವಾಡ ಕನ್ನಡ ಸಾರಸ್ವತ ಸಮಾಜ ಪ್ರಶಸ್ತಿ, ಮೈಸೂರಿನ ಸುಗಮ ಸಂಗೀತ ಅಕಾಡೆಮಿ ಪ್ರಶಸ್ತಿ, ೧೯೮೮-೮೯ರ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೯೫ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ೧೯೯೮ರಲ್ಲಿ ಸಂತ ಶಿಶುನಾಳ ಶರೀಫ ಪ್ರಶಸ್ತಿ ಇವರಿಗೆ ಸಂದಿದೆ. ಶರೀಫ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರಥಮ ಕಲಾವಿದೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ ಶಾಮತಿಮತಿ ಗಂಗೊಳ್ಳಿ ಉರುಫ್ ಅನುರಾಧ ಧಾರೇಶ್ವರ.