ಉತ್ತ ರ ಕರ್ನಾಟಕದಲ್ಲಿ ಭಾವಗೀತಗಳಿಗೆ ಭಾವುಕೆ ಅನುರಾಧಾ ಎಂಬ ಹೆಸರು. ಅವರು ಆಕಾಶವಾಣಿಯಿಂದ ನಿವೃತ್ತಿ ಹೊಂದಿ ಐದಾರು ವರ್ಷಗಳಾಗಿರಬೇಕು.

ಆಕಾಶವಾಣಿಯ ಯಾವುದೇ ವಿಶೇಷ ಸಂಗೀತ ರೂಪಕ, ಬೇಂದ್ರೆ ಅವರ, ಅರ್ಥಾತ್‌ಭಾವಗೀತೆಗಳ ಪ್ರಸಾರ ಅನುರಾಧಾ ಅವರಿದ್ದರೇನೆ. ಅದು `a’ ಎಂಬ ಗುಣಾಂಕ ಗಳಿಸಬೇಕು. ವಿಶೇಷ ತಿಂಗಳ ಗೀತ, ಪಂಚಮಿ ಹಾಡು, ದೀಪಾವಳಿ ಹಾಡು ರಾಮೋತ್ಸವ ಗೀತೆಗಳು, ನವರಾತ್ರಿಯ ನಂದಾದೀಪೋತ್ಸವ ಗೀತೆಗಳು ಹೀಗೆಲ್ಲಾ ಕನ್ನಡ ಕಂಪಿನ ಸುಗಮ ಸಂಗೀತಕ್ಕೆ ಅನುರಾಧಾ ಎಂದರೆ ಆಕಾಶ ವಾಣಿ, ಆಕಾಶವಾಣಿ ಎಂದರೆ ಅನುರಾಧ ಎಂಬ ಅದ್ವೈತಾರ್ಥ.

‘ಹಾಲನು ಕುಡಿಯೊ ನಾಗಣ್ಣ ‘ತಲೆಯನು ತೂಗೋ ನಾಗಣ್ಣ’ ಎಂಬ ನಾಗರಪಂಚಮಿ ಹಬ್ಬದ ಹಾಡಿಗೆ ಮೊದಲಾಗಿ, ಗಣೇಶನ ಹಬ್ಬ ಎಂತೆಂದರೆ ತೀರಿತು. ಅನುರಾಧ ಅವರಿಗೆ ಉತ್ತರ ಕರ್ನಾಟಕದ, ‘ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ’ ಕರೆಗಳೇ ಕರೆಗಳು, ಆಮಂತ್ರಣಗಳೇ ಆಮಂತ್ರಣಗಳು. ‘ನಿಮಗೆ ಗಣೇಶನ ಹಬ್ಬವೆಂದರೆ ಹಣ-ಹಮ್ಮಿಣಿಗಳ ಧನೇಶನ ಹಬ್ಬ’ ಎಂದು ಆಪ್ತ ಜನರು ಆಪಸಾತಿನಲ್ಲಿ ನಗೆಯಾಡಬೇಕು.

ಆಕಾಶವಾಣಿಯ ಒಳಗೂ ಹೊರಗೂ ಅನುರಾಧಾ ಎಂದರೆ ಕಾವ್ಯ ಧಾರೆಯಾಗಿ ಈ ಧಾರೇಶ್ವರ ಹರಿದಾಡಿದ್ದುಂಟು.

ಧಾರೇಶ್ವರ ಖ್ಯಾತರಾದುದಕ್ಕೆ ಮುಖ್ಯ ಕಾರಣವೆಂದರೆ ‘ಓ ನನ್ನ ದೇಶಬಾಂಧವರೆ ಕಂಬಳಳನೆರಡು ಚಿಮ್ಮಿ|

ಪ್ರಾಣಾಹುತಿ ನೀಡಿದ ಅವರ ಸಂಸ್ಮರಿಸಿರಿ ಆ ಬಲಿದಾನಾ|

ಎಂಬ ಕವಿ ರಾಘವೇಂಧ್ರ ಇಟಗಿ ಅವರ ಕನ್ನಡ ‘ಕುರ್ಬಾನೀ’ ಗೀತೆಯ ಜನಪ್ರಿಯತೆ. ಚೀನಾ ಆಕ್ರಮಣದ ಸಂದರ್ಭ, ಲತಾಮಂಗೇಶಕರ ಅವರ ‘ಏ ಮೇರೆ ವತನಕೇ ಲೋಗೋ ಜರಾ ಆಖೋಮೆ ಭರಲೋ ಪಾನೀ’ ಅಗ್ರಸ್ಥಾನದಲ್ಲಿ ಕುಳಿತಿದ್ದ ಪ್ರಧಾನಿ ನೆಹರೂ ಅವರ ಕಣ್ಣಲ್ಲಿ ನೀರಂತೆ! ಕನ್ನಡ ನಾಡಿನ ಎಡೆಎಡೆಗಳಲ್ಲಿ ಹಾಡಿದ ಅನುರಾಧಾ ಅವರಿಗೆ ಸಭೆ ಸಭೆಗಳಲ್ಲಿ ಅಶ್ರು ಧಾರೆಗಳ ಮಾಲೆ ಮಾಲೆ, ಯಾವುದೇ ಸಂಗೀತ ಸಭೆಯಲ್ಲಿ ಇವರ ಕಾರ್ಯಕ್ರಮದ ಮಧ್ಯದಲ್ಲಿ ಸಭಿಕರಿಂದ ಚೀಟಿಗಳು ‘ಓ ನನ್ನ ದೇಶ ಬಾಂಧವರೆ’ ಹಾಡಬೇಕೆಂದು.

ಕುಮಾರಿ ಶಾಂತಮತಿ ಗಂಗೊಳ್ಳಿ (ಅನುರಾಧಾ ಅವರ ಮದುವೆಗೆ ಮೊದಲಿನ ಹೆಸರು) ಚಿಕ್ಕಂದಿನಿಂದ ಅಡಚಣೆ, ಅನಾನುಕೂಲ ಪರಿಸ್ಥಿತಿಯಲ್ಲಿ ಬೆಳೆದರೂ ದೇಣಿಗೆಯಾಗಿಬಂದ ಸುಸ್ವರದ ಸಂಗೀತ ಕಂಠ ಇಂದು ಅವರನ್ನು ಸುಗಮ ಸಂಗೀತದ ‘ಕರ್ನಾಟಕ ಕಂಠ’ ಎಂಬಂತೆ ಮಾಡಿದೆ.

ತಂದೆಯನ್ನು ಕಳೆದುಕೊಂಡ ತಬ್ಬಲಿ ಶಾಂತಮತಿ, ಅಸಹಾಯಕ ತಾಯಿ, ಇಬ್ಬರು ಅಣ್ಣಂದಿರೊಡನೆ ತನ್ನ ಶಾಲಾಶಿಕ್ಷಣ, ಸಂಗೀತ ಶಿಕ್ಷಣ ಮುಂದುವರಿಸಲು ಬಂದರು. ಮಗಳನ್ನು ಗಂಡುಮಕ್ಕಳನ್ನು ಮುಂದೆ ತರಲು ತಾಯಿ ಒಂದು ತಪಶ್ಚರ್ಯೆಯನ್ನೇ ಮಾಡಿದರು. ಕಾಟ ಕೆಸರಿನಲ್ಲಿ ಕುಟುಂಬವನ್ನು ಮುನ್ನಡೆಸುವಲ್ಲಿ ಆ ತಾಯಿ ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ರಾಣೆಬೆನ್ನೂರಿನಿಂದ ಧಾರವಾಡಕ್ಕೆ ಸ್ಥಾನಾಂತರ ಮಾಡಿ ಅಲ್ಲಿ ಮನೆ ಮಾಡಿ, ಮನೆಯಲ್ಲೇ ಹೊಲಿಗೆ ಮೊದಲಾದ ಚಿಕ್ಕ ಪುಟ್ಟ ಉದ್ಯೋಗ ಮಾಡಿ ಆರ್ಜವದ ಆರ್ಜನೆ ಮಾಡಿ ಮಕ್ಕಳನ್ನು ಪೋಷಿಸುತ್ತ ಅವರ ವಿದ್ಯಾಭ್ಯಾಸದತ್ತ ಗಮನ ಹರಿಸಿದರು. ಕುಮಾರಿ ಶಾಂತಾದೈವದತ್ತವಾದ ಸಂಗೀತಕಂಠದಿಂದಾಗಿ, ಚುರುಕು ಬುದ್ಧಿಯಿಂದಾಗಿ ಕೆ.ಇ. ಬೋರ್ಡ್ ಹೈಸ್ಕೂಲ್‌ಪ್ರಾಚಾಯ ಎಸ್‌.ಜಿ. ನಾಡಗೀರ ಅವರ ಮೆಚ್ಚುಗೆಯನ್ನು ಸಂಪಾದಿಸಿದರು.

ನಾನು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತ ‘ಗಿಳಿವಿಂಡು’ ಕಾರ್ಯಕ್ರಮ ನೋಡಿಕೊಳ್ಳುತ್ತಿದ್ದೆ. ಈ ತಾಯಿ ಮತ್ತು ಮಗಳು ಬಂದು ನನ್ನನ್ನು ಕಂಡರು. ‘ಗಿಳಿವಿಂಡಿ’ನಲ್ಲಿ ಭಾಗವಹಿಸುವುದಾಗಿ ಶಾಂತಮತಿ ಅರಿಕೆ ಮಾಡಿಕೊಂಡಳು. ಸರಿ ಒಂದು ಗಿಳಿಮರಿಯಾಗಿ ಪ್ರವೇಶಿಸಿದ ಶಾಂತಾ ಆಕಾಶವಾಣಿಯ ಕೋಗಿಲೆ ಮರಿಯಾಗಿ ಬೆಳೆದಳು.

ಶಾಂತಮತಿಯ ಹೈಸ್ಕೂಲ್‌ವಿದ್ಯಾಭ್ಯಾಸ ತಡೆಯಿಲ್ಲದೆ ಮುನ್ನಡೆಯಿತು. ಎಸ್‌.ಎಸ್‌.ಎಲ್‌.ಸಿ ಯಶಸ್ವಿಯಾಗಿ ಪಾಸಾದಳು. ಇತ್ತ ಈ ಹದಿವಯಲ್ಲಿ ಹಾಡುಗಾರಿಕೆಯಲ್ಲಿ ಎಷ್ಟೊಂದು ತಯಾರಿ ಎಂದರೆ ಹುಬ್ಬಳ್ಳಿ ಧಾರವಾಡ ಮಟ್ಟಿಗಂತೂ ಗಾನಗಂಗೊಳ್ಳಿ ಎಂಬ ಹೆಸರು ಕೇಳದವರೆ ಇಲ್ಲ. ಹುಬ್ಬಳ್ಳಿಯ ಖ್ಯಾತ, ಅಭಿಜಾತ ಸಂಗೀತಗಾರ (ಇವರು ಆಕಾಶವಾಣಿಯಲ್ಲಿ ಅಗ್ರಪಂಕ್ತಿಯ ಗಾಯಕರು) ಶಂಕರ ದೀಕ್ಷಿತ ಜಂತ್ರಿ ಅವರ ಚಿರಂಜೀವಿ ರಾಮಚಂದ್ರ ಜಂತ್ರಿ (ಇವರೂ ಆಕಾಶವಾಣಿಯ ಶಾಸ್ತ್ರೀಯ ಸಂಗೀತಗಾರರಲ್ಲಿ ಪ್ರಮುಖರು. ತಂದೆ ಶಂಕರ ದೀಕ್ಷಿತರು ಸ್ವರ್ಗಸ್ಥರಾದ ಮೇಲೆ ತಂದೆ ಹೆಸರು ಖ್ಯಾತಿಗಳನ್ನು ಮುಂದುವರೆಸಿಕೊಂಡು ಬಂದರು.) ಅವರ ಬಳಿ ಕುಮರಿ ಶಾಂತಮತಿಯ ಸುಗಮ ಸಂಗೀತದ ಅಭ್ಯಾಸಕ್ಕೆ ಶ್ರೀಕಾರವಾಯಿತು.

ಜಂತ್ರಿ ದಂಪತಿಗಳಿಬ್ಬರೂ ಶಾಂತಾ ತಮ್ಮ ತಂಗಿ ಎಂಬ ಆತ್ಮೀಯತೆಯ ಅಭಿಮಾನವಿಟ್ಟು ಕಲಿಸಿದರು. ಹುಡುಗಿ ಶಾಂತಾನ ಸ್ವಭಾವ ಗುಣ, ಕಂಠ ಗುಣ ಅಂತಹದು. ಸಂಗೀತ ಸರಿಗಮದೊಂದಿಗೆ ಭಾವಗೀತ ಗಾಯನಕ್ಕೂ ಸುರುವಾಯಿತು. ವರಕವಿ ಬೇಂದ್ರೆ, ಡಿ.ಎಸ್‌. ಕರ್ಕಿ, ಆನಂದಕಂದ, ಚೆನ್ನವೀರ ಕಣವಿ ಮೊದಲಾದ ಪ್ರಸಿದ್ಧ ಕವಿಗಳು ಕವಿತೆಗಳು ಕರತಲಾಮಲಕವಾದುದಷ್ಟೇ ಅಲ್ಲ, ಮರಾಠಿ, ಹಿಂದೀ, ಕೊಂಕಣಿ ರಚನೆಗಳನ್ನೂ ರಸವತ್ತಾಗಿ ಹಾಡತೊಡಗಿದರು. ಆಕಾಶವಾಣಿಯಲ್ಲಿ ಬೆಳಗಿನ ವಿಚಾರದೀಪ್ತಿಯಲ್ಲಿ ಅನುರಾಧಾ ಅವರ ರಾಮಾಯಣ, ಭಗವದ್ಗೀತಾದಿ ಶ್ಲೋಕಗಳು ಎನ್ಕೆ ಅವರ ವಿವರದೊಂದಿಗೆ ಜನಮನರಂಜಕವಾಗಿ ಪರಿಣಮಿಸಿದವು.

ಶಾಂತಮತಿ ಕೆ.ಇ. ಬೋರ್ಡ ಹೈಸ್ಕೂಲ್‌ನಿಂದ ಎಸ್‌.ಎಸ್‌.ಎಲ್‌.ಸಿ. ಪಾಸಾದ ಕೂಡಲೇ ಸುಗಮ ಸಂಗೀತದಲ್ಲಿ ಹೆಸರು ಮಾಡಿದಾಗ ಬಾಸಲ್‌ಮಿಶನ್‌ಗರ್ಲ್ಸ್‌ಸ್ಕೂಲ್‌ನ ಹೆಡ್‌ಮಾಸ್ತರ್ ಅಮ್ಮಣ್ಣ ಅವರು ತಮ್ಮ ಸ್ಕೂಲಿಗೆ ಸಂಗೀತ ಶಿಕ್ಷಕಿಯೆಂದು ನೇಮಕ ಮಾಡಿಕೊಂಡರು. ಈ ಪುಟ್ಟ ಸಂಗೀತ ಶಿಕ್ಷಕಿ ಕಲಿಸಲೆಂದು ಕ್ಲಾಸ್‌ರೂಂನಲ್ಲಿ ಕಾಲಿಟ್ಟಾಗ ಎಷ್ಟೊ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿನಿಯಂತೇ ಕಾಣುವ ಮೇಡಂನ್ನು ಕಂಡು ಅಚ್ಚರಿ ಪಟ್ಟರು. ಇತ್ತ ತಾಯಿಗೆ ತನ್ನ ಕಿರಿಯ ಮಗಳು ಸಂಸಾರ ನೌಕೆಯನ್ನು ಮುನ್ನಡೆಯಿಸಲು ಸಮರ್ಥಳಾದಳಲ್ಲ ಎಂದು ಸಮಾಧಾನ, ಅಭಿಮಾನ. ಇನ್ನೇನು ತನ್ನ ಸಂಸಾರ ತಾಪತ್ರಯ ಕಡಿಮೆಯಾಯಿತಲ್ಲ ಎಂಬ ಬಿಡುಗಡೆಯ ನಿಟ್ಟುಸಿರು. ನಾಲ್ಕು ಬಾಯಿಗಳು ಉಣ್ಣುವಷ್ಟು, ಹೊಟ್ಟೆಗಳು ತುಂಬುವಷ್ಟು ಅನ್ನದ ಮಾರ್ಗ ಮಾಡಿಕೊಟ್ಟ ಅಮ್ಮಣ್ಣ ಮಾಸ್ತರರನ್ನು ‘ಅನ್ನದಾತಾ’ ಎಂದು ಶಾಂತಮ್ಮ ಕೃತಜ್ಞತೆಯಿಂದ ಸ್ಮರಿಸಿದಾಗ ಮಾನವೀಯ ಅಮ್ಮಣ್ಣ ‘ಹಾಗೆ ಹೇಳಬೇಡ ಮಗೂ’ ಎಂದು ಸಂತೈಸುತ್ತ ‘ನಿನ್ನಿಂದ ನಮ್ಮ ಶಾಲೆಗೂ ಒಂದು ಲಾಭಾ ಇದೆ. ಇದರಲ್ಲಿ ನಮ್ಮ ಸ್ವಾರ್ಥವೂ ಇದೆ’ ಎಂದು ಹಿರಿಯ ಮಾಸ್ತರರು ತಮ್ಮ ದೊಡ್ಡ ಮನಸ್ಸು, ದೊಡ್ಡ ಗುಣಗಳನ್ನೇ ತೋರಿದ್ದರು.

೧೯೬೬-೬೭ರ ಹೊತ್ತಿಗೆ ಧಾರವಾಡ ಆಕಾಶವಾಣಿಯ ಉದೋಷಿಕೆ ಎಂದು ಕಾರ್ಯ ನಿರ್ವಹಿಸುವ ಮುನ್ನ, ಮುಂಬಯಿಯಲ್ಲಿ ಕೆಲ ದಿನ ವಾಸವಾಗಿದ್ದರು. ಅಲ್ಲಿಯೆ ವಿವಾಹವಾಗಿ ಧಾರವಾಡ ಆಕಾಶವಾಣಿಯ ‘ಕಿತ್ತೂಫರ ಕೇಸರಿಣೀ’ ಎಂಬ ಐತಿಹಾಸಿಕ ಗೀತರೂಪಕದಲ್ಲಿ ರಾಣಿ ಚೆನ್ನಮ್ಮನಾಗಿ ಪಾತ್ರವಹಿಸಲು ಮುಂಬಯಿಯಿಂದ ಆಮಂತ್ರಿತರಾಗಿದ್ದರು. ಶ್ರೀಮತಿ ಧಾರೇಶ್ವರ ರಂಗಭೂಮಿಯ ನಾಟಕದಲ್ಲೂ ಭಾಗವಹಿಸಿ ಅಭಿನಯದ ಅನುಭವ ಪಡೆದಿದ್ದರು. ಮಹಾಂತೇಶ ಶಾಸ್ತ್ರಿಗಳು (ಅವರೂ ಆಕಾಶವಾಣಿಯ ಉದ್ಘೋಷಕತೆ ಆಗಿದ್ದರು.) ಬರೆದ ‘ಬಿಡುಗಡೆ’ ಎಂಬ ನಾಟಕದಲ್ಲಿಯ ಅವರ ಪಾತ್ರ ಬಹು ಜನರ ಮೆಚ್ಚುಗೆ ಗಳಿಸಿತ್ತು.

ಶ್ರೀಮತಿ ಅನುರಾಧಾ ಧಾರೇಶ್ವರ ಆಕಾಶವಾಣಿಯ ಉದ್ಘೋಷಕಿಯಾಗಿದ್ದರೂ ಅವರ ಪಾತ್ರ ಹೆಚ್ಚಾಗಿ ಸಂಗೀತ ಕಾರ್ಯಕ್ರಮಗಳಿಗಾಗಿಯೇ ವಿನಿಯೋಗಿಸಲ್ಪಡುತ್ತಿತ್ತು. ಅವರು ಹಾಡಿದ ಒಂದೊಂದು ಭಕ್ತಿ ಪರ ಗೀತೆ ಬೆಳಗಿನ ವಂದನಾ ಕಾರ್ಯಕ್ರಮದಲ್ಲಿ ಇವರು ಹಾಡಿದ ‘ಹೊಸ ಬಾಳಿನ ಹೊಸತಿಲಿನಲಿ ಝಗಝಗಿಸುವ ಬೆಳಕು’, ‘ನಾವು ನಾಡಾಗುವ ರಸದ ಬೀಢಾಗುವ’, ‘ಶ್ರೀಕೃಷ್ಣ ಶ್ರೀಪಾದಾ ಶ್ರೀವರದ ಶೌರೆ’, ಶ್ರೀಮತಿ ನೀಲಮ್ಮ ಕೊಡ್ಲಿ ಅವರೊಂದಿಗೆ ಹಾಡಿದ ‘ರೇಣುಕಾ ಚರಿತ್ರ’, ‘ತಾಳಲಯದಲಿ ಬಾಳನಡೆಸು’ ಇವೇ ಮೊದಲಾದ ಗೀತೆಗಳು ಇನ್ನೂ ಶ್ರೋತೃಗಳ  ಬಾಯಲ್ಲಿವೆ. ಇದೂ ಅಲ್ಲದೆ, ‘ಕರ್ನಾಟಕ ರಂಗ ವೈಭವ’ ಎಂಬ ಮಾಲಿಕೆಯಲ್ಲಿ ‘ಇವನೇ ಗಿರಿಜಾರಮಣನೇ’ (ಮಹನಂದಾ ನಾಟಕ), ‘ಪೋಗು ಪರಾಕ್ರಮಿಯೇ’(ವೀರ ಅಭಿಮನ್ಯು) ಎಂಬ ವಾಮನರಾವ್‌ಮಾಸ್ತರರ ರಂಗ ಗೀತೆಗಳನ್ನು ಡಾ. ಮಲ್ಲಿಕಾರ್ಜುನ ಮನ್ಸೂರ್ ಅವರ ನಿರ್ದೇಶನದಲ್ಲಿ ಪ್ರಸಾರ ಮಾಡಿದ ಗೀತಗಳೂ ಇನ್ನೂ ಬಹುಜನರ ಬೇಡಿಕೆಗಳಾಗಿವೆ.

ಯಾವುದೇ ಮಹತ್ವದ ಕಾರ್ಯಕ್ರಮವಿರಲಿ ಅದಕ್ಕೆ ಅನುರಾಧಾ ಗೀತದ ಸವಿರಾಗವಿರಲೇಬೇಕು. ಆಕಾಶವಾಣಿ ಸ್ಟೂಡಿಯೊದೊಳಗಾಗಲಿ, ಹೊರಗಾಗಲಿ, ಹೊರ ಊರುಗಳೆಂದರೆ ಗಣೇಶ ಚತುರ್ಥಿಗೆ ಗದಗ, ಹಾವೇರಿ, ಧಾರವಾಡವಂತೂ ಸೈ ಅದರಲ್ಲೂ ಜಗದ್ಗುರು ಪೀಠಗಳು, ಆಶ್ರಮಗಳ ಸಮಾರಂಭಗಳು ವಿಶೇಷ ಸಹಕಾರೀ ಕ್ಷೇತ್ರದ ವಿಶೇಷ ಸಮಾರಂಭ, ಮಲಪ್ರಭಾ ಆಣೆಕಟ್ಟಿನ ಉದ್ಘಾಟನೆ, ಮುಖ್ಯಮಂತ್ರಿಗಳಿಂದ ಪುಸ್ತಕ ಬಿಡುಗಡೆ, ಆಲೂರ ವೆಂಕಟರಾವ್‌, ದ.ರಾ. ಬೇಂದ್ರೆ ಅವರ ಶತಮಾನೋತ್ಸವಗಳು, ಬಸವ ಜಯಂತಿಯ ಕೂಡಲಸಂಗಮ ಕ್ಷೇತ್ರದ ಇನ್ನೂ ಯಾವುದೆ ಕಾರ್ಯಕ್ರಮವಿರಲಿ ಅಂಥಹ ಸಾಂಸ್ಕೃತಿಕ ಕಾರ್ಯಕ್ರಮಗಳು ಧಾರೇಶ್ವರಳ ಗೀತಧಾರೆಯಿಲ್ಲದೆ ಕಳೆ ಕಟ್ಟುವಂತೆಯೆ ಇಲ್ಲ. ಇದಕ್ಕೆ ಸಂಗೀತ ರಚನೆ ಹೆಚ್ಚಾಗಿ ನಾನಿಕಾಕಾನದೆ, ಕೂಡಲ ಸಂಗಮದಲ್ಲಿ ಬಸವ ಜಯಂತಿ. ಮುರುಘಾ ಮಠದಲ್ಲಿ ಮೃತ್ಯುಂಜಯಪ್ಪಗಳ ಪುಣ್ಯತಿಥಿ, ಕೇರಳದಲ್ಲಿ ಕೊಂಕಣಿ ಸಮ್ಮೇಳನ, ಮಂಗಳೂರಲ್ಲಿ ವಿಶ್ವ ಕೊಂಕಣಿಗೆ ಹಾಗೂ ಕನ್ನಡ ಸುಗಮ ಸಂಗೀತೋತ್ಸವ, ಸಾಹಿತ್ಯ ಸಮ್ಮೇಳನಗಳು, ವಿದ್ಯಾವರ್ಧಕ ಸಂಘದ ವಾರ್ಷಿಕೋತ್ಸವ, ಬೆಂಗಳೂರಿನಲ್ಲಿ ಸಂಗೀತ ಅಕಾಡಮಿ ಉತ್ಸವ, ಬೇಲೂರು, ಸೋಮನಾಥಗಳಲ್ಲಿ ಭಾವಗೀತೋತ್ಸವ, ಎಲ್ಲೆಡೆಗೂ ಉತ್ತರ ಕರ್ನಾಟಕದ ಜಾನಪದ ಜೇನಿನ ಈ ದುಂಬಿಯ ಝೇಂಕಾರ ತಪ್ಪುವಂತಿಲ್ಲ. ಕಾಲವು ವರುಷಗಳ ಹಿಂದೆ ಬೆಂಗಳೂರಿನ ಸುಗಮ ಸಂಗೀತೋತ್ಸವದಲ್ಲಿ ಇವರ ‘ಬೆಳದಿಂಗಳ ನೋಡ ಬೆಳಂದಿಂಗಳ ನೋಡು’ ಬೇಂದ್ರೆ ಗೀತೆ ಕೇಳುಗರಿಗೆ ಹುಚ್ಚು ಹಿಡಿಸಿತು. ‘ಮೇಡಂ ನಮಗ ಧಾರವಾಡದ ಉಚ್ಚಾರಣೇಯ ಹಾಡುಗಾರಿಕೆಯ ಗತ್ತು ಧಾಟಿ ಹೇಳಿ ಕೊಡಿಪ್ಲೀಜ್‌’ ಎಂದು ತರುಣ ಕಲಾವಿದೆಯರು ಅನುರಾಧಾ ಅವರನ್ನು ಅನುಸರಿಸಿಯೆ ಬಂದರು.

ನೀಲ್‌ಆರ್ಮ್‌ಸ್ಟ್ರಾಂಗ್‌ಮತ್ತು ಆತನ ಸಂಗಡಿಗರು ಚಂದ್ರನ ಮೇಲೆ ತಮ್ಮ ಪ್ರಥಮ ವಾಮನ ಪಾದವಿರಿಸಿದ ತ್ರಿವಿಕ್ರಮ ವಿಕ್ರಮದ ಸನ್ನಿವೇಶ. ಜುಲೈ ೨೧, ೧೯೬೯, ನಾನು ಬರೆದ ‘ತಿಂಗಳ ಲೋಕದ ಅಂಗಳದಲ್ಲಿ’ ಎಂಬ ವಿಶೇಷ ಗೀತ ರೂಪಕ ಧಾರೇಶ್ವರದ ಸ್ವರಧಾರೆಯಿಂದ ಎಷ್ಟು ರೋಮಂಚಕವಾಯಿತೆಂದರೆ ಅದೊಂದು ರೋಮಾಂಚನಕಾರಿ ದಾಖಲೆ.

ಇಂದಿಗೂ ಧಾರವಾಡ ರೇಲ್ವೆ ಸ್ಟೇಶನ್‌ದ ಒಂದು ಅಂಕಣ ‘ಟಾಘೋರ ಕಾರ್ನರ್’ ಎಂದು ಪ್ರಸಿದ್ಧ. ರವೀಂದ್ರರ ದೊಡ್ಡ ಫೋಟೋ, ಅವರ ‘ಗೀತಾಂಜಲಿ’ ಪುಸ್ತಕ ಬಾಡದ ಕೊರಳ ಹಾರದ ಆ ಮೂಲೆ ಮಂಟಪ ಒಂದು ಪ್ರವಾಸಿಗರ ಆಕರ್ಷಣೇ. ಈ ಅಂಕಣ ಸ್ಥಾಪನೆ ನಡೆದುದು ಅನುರಾಧಾ ಧಾರೇಶ್ವರ‍ಅವರು ಮೂಲ ಬಂಗಾಲಿ ಗೀತಾಂಜಲಿ ಗೀತವೊಂದನ್ನು ಹಾಡುವುದರಿಂದ ನೆರವೇರಿದ್ದು ಎಂದು ಸಾರಿ ಹೇಳುತ್ತದೆ. ೧೯೨೯ರಲ್ಲಿ ಕವಿ ರವೀಂದ್ರರು ಕಲಕತ್ತಾಯಿಂದ ಧಾರವಾಡದ ಮೂಲಕ ಕಾರವಾರಕ್ಕೆ ಹೋಗುವಾಗ ಧಾರವಾಡ ನಿಲ್ದಾಣದಲ್ಲಿ ಇಳಿದು ಇಲ್ಲಿ ತಂಗಿ ಮುಂದೆ ಕಾರಿನಲ್ಲಿ ಹೋಗುವಾಗ ಧಾರವಾಡ ನಿಲ್ದಾಣದಲ್ಲಿ ಇಳಿದು ಇಲ್ಲಿ ತಂಗಿ ಮುಂದೆ ಕಾರಿನಲ್ಲಿ ಕಾರವಾರಕ್ಕೆ ತೆರಳಿದರು. ಅದರ ೪೦ನೇ ವಾರ್ಷಿಕೋತ್ಸವದ ಅಂಗವಾಗಿ ರವೀಂದ್ರರ ಶಿಷ್ಯ ಪ್ರಲ್ಹಾದ ನರೇಗಲ್‌(ಬೇಂದ್ರೆ ಗೆಳೆಯರ ಗುಂಪಿನವರು) ಒಂದು ಕಾರ್ಯಕ್ರಮ ಧಾರವಾಡದಲ್ಲಿ ನೆರವೇರಿಸಿದರು. ಆ ಸಂಧರ್ಭದಲ್ಲಿ ಅನುರಾಧಾ ಧಾರೇಶ್ವರರು ಬಂಗಾಲಿ ಗೀತಾಂಜಲಿಯ ಗೀತೆಗಳನ್ನು ನರೇಗಲ್‌ಅವರಿಂದ ಕಲಿತು ಮೂಲ ಶುದ್ಧ ಬಂಗಾಲಿ ಉಚ್ಚಾರಣೆಯೊಂದಿಗೆ ಹಾಡಿದರು. ಇದೇ ರೀತಿ ಹುಬ್ಬಳ್ಳಿಯ ಆಂಧ್ರ ಸಮಾಜದಲ್ಲು ಒಂದು ತೆಲುಗು ಗೀತೆಯನ್ನು ಹಾಡಿದಾಗ ಇವರಿಗೆ ಬಹು ಭಾಷಾ ಗಾಯಕಿ ಎಂದು ಹೆಸರು ಬಂತು.

ಗಾಂಧೀಜಿ ಶತಮಾನೋತ್ಸವದಲ್ಲೂ (೧೯೬೯) ಗಾಂಧೀಜಿಯವರ ಚರಿತ್ರೆಯನ್ನು ಗೀತಮಾಲಿಕೆಯಲ್ಲಿ ನಿರೂಪಿಸುವ ಕಾರ್ಯಕ್ರಮದ ಎನ್ಕೆ ಕೃಷ್ಣ ಗೀತೆಗಳು ಕೇಳುಗರ ನಾಲಗೆಯ ಮೇಲೆ ಕುಣಿದಾಡುತ್ತಿರುವುದು.

ಅನುರಾಧಾ ಧಾರೇಶ್ವರರ ಸುಗಮ ಸಂಗೀತದ ತಪೋವೃಕ್ಷ ಈಗೀಗ ಫಲ ಬಿಡುತ್ತಿದೆ. ೧೯೮೮-೮೯ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ, ೧೯೯೦-೯೧ರಲ್ಲಿ ಧಾರವಾಡ ಕನ್ನಡ ಸಾರಸ್ವತ ಸಮಾಜದ ಪ್ರಶಸ್ತಿ ಮತ್ತು ಅಖಿಲ ಕರ್ನಾಟಕ ಕೊಂಕಣಿ ಪ್ರಶಸ್ತಿ, ೧೯೯೫ರಲ್ಲಿ ಸುಗಮ ಸಂಗೀತ ಅಕಾಡಮಿ ಮೈಸೂರು ಅವರಿಂದ ಸನ್ಮಾನ ಮತ್ತು ಸಾಧನಾ ಮ್ಯೂಸಿಕ್‌ಸ್ಕೂಲ್‌ಬೆಂಗಳೂರು ಅವರಿಂದ ಪುರಸ್ಕಾರ ಹಾಗೂ ೧೯೯೫ರ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿಗಳು ಇವರ ಪ್ರತಿಭೆಯನ್ನಲಂಕರಿಸಿದೆ. ಇವೆಲ್ಲಕ್ಕೂ ಕಲಶವಿಟ್ಟಂತೆ ೧೯೯೮-೯೯ರ ಶಿಶುನಾಳ ಶರೀಫ ಪ್ರಶಸ್ತಿ, ವೈಭವದ ಬನವಾಸಿ ಸಮಾರಂಭದಲ್ಲಿ ಮುಖ್ಯಮಂತ್ರಿಗಳಿಂದ ಗೌರವಿಸಲಾಯಿತು. ಈ ಪ್ರಶಸ್ತಿ ಪ್ರಪ್ರಥಮವಾಗಿ ಕರ್ನಾಟಕದಲ್ಲಿ ಅನುರಾಧಾ ಅವರಿಗೆ ಸಂದಿದೆ. ಕರ್ನಾಟಕದ ಅಭಿಮಾನಧನ ಅನುರಾಧಾ ಅವರು.

ಅನುರಾಧಾ ಧಾರೇಶ್ವರರು ಬದುಕಿನಲ್ಲಿ ನೊಂದು ಬೆಂದು ತಮ್ಮ ಕಲೆಯೊಡನೆ ಬೆಳೆದು ಬಂದವರು. ಆರು ವರ್ಷಗಳ ಹಿಂದೆ ಆಕಾಶವಾಣಿಯಿಂದ ನಿವೃತ್ತಿ ಹೊಂದಿದ ಇವರು ನೆಮ್ಮದಿ ನೆಲೆ ಕಂಡುಕೊಂಡಿದ್ದಾರೆ. ತನ್ನ ಸ್ವಂತ ಮನೆಯಲ್ಲಿ ಧಾರೇಶ್ವರ ದಂಪತಿಗಳ ಪುತ್ರ ವಿನಯ, ಆತನ ಪತ್ನಿ ಅಪರ್ಣ, ಮೊಮ್ಮಕ್ಕಳೊಂದಿಗೆ ಈಗ ಜೀವನದಲ್ಲಿ ಸುಖದ ದಿನಗಳನ್ನು ಕಳೆಯುತ್ತಿದ್ದಾರೆ.