ತಿಪ್ಪೆಗೂ ಒಂದು ಹಬ್ಬ

ಪಟ್ಟಣದ ಜನ ತಿಪ್ಪೆ ನೋಡಿದ್ರೆ ಥೂ… ವಾಸನೆ ಅಂತಾ ಮೂಗು ಮುಚ್ಚಿಕೊಳ್ತಾರೆ. ಹಳ್ಳಿ ಜನ ಅದೇ ತಿಪ್ಪೆಗೆ ತಿಪ್ಪಮ್ಮ ದೇವರು ಅಂತಾ ಪೂಜೆ ಮಾಡ್ತಾರೆ. ಬಿಳಿ ಪಂಚೆ, ಬಿಳಿ ಶರ್ಟ್ ಹಾಕ್ಕೊಂಡು ಪೇಟೆಗೆ ಹೊರಟಿದ್ದ ಹಳ್ಳಿ ಹೈದ ಸಗಣಿ ತೊಪ್ಪೆ ಕಂಡ್ರೆ ಲಬಕ್ಕನೆ ಬಾಚಿಕೊಂಡು ತಿಪ್ಪೆಗೆ ಹಾಕಿ ಬಸ್ಸಿಗೆ ದೌಡಾಯಿಸ್ತಾನೆ. ಇಷ್ಟೆಲ್ಲ ಕಲ್ಲು- ಮಣ್ಣಿನ ಗಣಪತಿಗಳಿದ್ರೂ ಶುಭ ಕಾರ್ಯಗಳಲ್ಲಿ ಸಗಣಿ ಬೆನಕನಿಗೆ ಮೊದಲ ಪೂಜೆ. ಇಲ್ಲಿ ಶ್ರೇಷ್ಠವಾದುದು ಬೆನಕನೋ ಅಥವಾ ಸಗಣಿಯೋ ಎಂಬುದಕ್ಕಿಂತ ಸಗಣಿಗಿರುವ ಮಹತ್ವವನ್ನು ಅರಿಯಬೇಕಿದೆ. ಅದಕ್ಕೆ ಅಲ್ವಾ ದೊಡ್ಡವರು ಹೇಳಿರೋದು ಕಸದಿಂದ ರಸ ಅಂತಾ…

ದೀಪಾವಳಿ ಬಂತೆಂದರೆ ಎಲ್ಲೆಲ್ಲೂ ಸಂಭ್ರಮ, ಸಡಗರ. ಪಟ್ಟಣದ ಜನ ಹಬ್ಬವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಹಳ್ಳಿ ಜನ ಮಾವಿನ ತೋರಣ ಕಟ್ಟಿ, ದನ- ಕರುಗಳ ಮೈ ತೊಳೆದು ತಿಪ್ಪೆ ಮಗುಚಿ ಸಾಂಪ್ರದಾಯಿಕ ಹಬ್ಬ ಆಚರಿಸುತ್ತಾರೆ. ದೀಪಾವಳಿಯ ದಿನ ಕೆಲವು ಹಳ್ಳಿಗಳಲ್ಲಿ ಆಚರಣೆಯಲ್ಲಿರುವ ತಿಪ್ಪೆ ಹಬ್ಬ ಇಂತಹ ಅರ್ಥಪೂರ್ಣ ಆಚರಣೆಗಳೊಲ್ಲೊಂದು.

ಏನಿದು ತಿಪ್ಪೆ ಹಬ್ಬ?
ಇದು ಹಾಸನ ಸುತ್ತ- ಮುತ್ತ ಸೇರಿದಂತೆ ಮಲೆನಾಡಿನ ಕೆಲವು ಭಾಗಗಳಲ್ಲಿ ಪಾರಂಪರಿಕವಾಗಿ ಸಾಗಿ ಬಂದಿರುವ ಕೃಷಿ ಆಚರಣೆ. ದೀಪಾವಳಿಯ ದಿನದಂದು ಅನ್ನಕ್ಕೆ ಅನ್ನವಾದ ತಿಪ್ಪೆಗೆ ಭಕ್ತಿ ಸಮರ್ಪಿಸುವುದು ಇಲ್ಲಿನ ರೈತರ ವಾಡಿಕೆ. ಇದನ್ನು ಕೃಷಿ ಹಬ್ಬವಾಗಿ ಆಚರಿಸುವ ರೈತರು ಗೊಬ್ಬರವನ್ನು ಉತ್ಕೃಷ್ಟ ಮಾಡುವಲ್ಲಿ ವೈಜ್ಣಾನಿಕತೆಯನ್ನು ಕಂಡುಕೊಂಡಿದ್ದಾರೆ.

ತಿಪ್ಪೆ ಹಬ್ಬ, ತಿಪ್ಪಮ್ಮನ ಹಬ್ಬ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಆಚರಣೆಯು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಪ್ರತೀ ಹಳ್ಳಿಯಲ್ಲೂ ಹಬ್ಬವಾಗಿ ಆಚರಣೆಯಾಗುತ್ತಿದೆ. ಯಾವುದೇ ಜಾತಿ, ಧರ್ಮ ಎನ್ನದಂತೆ ಗ್ರಾಮದ ಎಲ್ಲರೂ ಈ ಆಚರಣೆಯನ್ನು ಭಕ್ತಿ ಪೂರ್ವಕವಾಗಿ ಮಾಡುತ್ತಾರೆ.

ತಿಪ್ಪೆ ಏರಿದಂಗೆ ಧಾನ್ಯ ಏರಬೇಕು
ದೀಪಾವಳಿ ಸಮಯ. ಬಿರುಸಿನ ಮಳೆಗಳೆಲ್ಲವೂ ಮಗಿದು ರಣಬಿಸಿಲು ಆರಂಭವಾಗುತ್ತಿರುತ್ತದೆ. ಮೈ ಸುಡುವ ಬಿಸಿಲಿಗೆ ಹೆದರಿ ಮನುಷ್ಯ, ಪಶು- ಪಕ್ಷಿಗಳು ನೆರಳು ಸೇರುತ್ತವೆ. ಆದರೆ ತಿಪ್ಪೆಗಳಲ್ಲಿ ಜೀವನ ಸಾಗಿಸಿ ಸಗಣಿ, ಕಸ- ಕಡ್ಡಿಯನ್ನು ತಿಂದು ಸತ್ವಯುತ ಗೊಬ್ಬರ ಮಾಡುವ ಹುಳ- ಹುಪ್ಪಟೆಗಳೆಲ್ಲಿ ಹೋಗಬೇಕು? ತಿಪ್ಪೆಯು ಬಿಸಿಲಿನಿಂದ ಸುಟ್ಟು ಬೆಂಡಾದರೆ ಅದರಲ್ಲಿ ಯಾವ ಸತ್ವನೂ ಇರಲ್ಲ. ಅದಕ್ಕೆ ತಿಪ್ಪಮ್ಮನ ಹಬ್ಬ ಮಾಡ್ತೇವೆ.

ತಿಪ್ಪೆ ಮಗುಚಿ ಕಸ- ಕಡ್ಡಿ, ಸೊಪ್ಪುಗಳನ್ನು ತಂದು ಹಾಕಿ, ಮೇಲೆ ಮಣ್ಣು ಮುಚ್ಚಿದ್ರೆ ತಿಪ್ಪೆ ಎತ್ತರ ಆಗುತ್ತೆ. ಎದೆಯುದ್ಧ ಬೆಳೆದ ತಿಪ್ಪೆ ನೋಡಿದ್ರೆ ಧಾನ್ಯದ ರಾಶಿ ಕಂಡಂತೆ ಖುಷಿಯಾಗುತ್ತೆ. ತಿಪ್ಪೆ ಏರಿದ್ರೆನೇ ಧಾನ್ಯ ಹೆಚ್ಚಾಗೋದು ಎಂಬುದು ಗ್ರಾಮದ ಹಿರಿಯ ರೈತ ಬಾಲರಾಜು ಅವರ ಅಭಿಪ್ರಾಯ.

ಆಚರಣೆ ಹೇಗೆ?
ದೀಪಾವಳಿಯ ದಿನದಂದು ಎರಡು ದಿನ ನಡೆಯುವ ತಿಪ್ಪಮ್ಮನ ಹಬ್ಬವು ದೀಪಾವಳಿಗಿಂತ ವಿಶೇಷವಾಗಿರುತ್ತದೆ. ಚಿಕ್ಕವರಿಂದ ಹಿಡಿದು ಎಲ್ಲರೂ ಈ ಆಚರಣೆಯಲ್ಲಿ ಭಾಗಿಯಾಗುತ್ತಾರೆ. ಮಕ್ಕಳಿಗಂತೂ ಇದೊಂದು ಆಟ. ಜೊತೆಗೆ ಆಚರಣೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಪಾಠವೂ ಹೌದು.

ಮದ್ದು ಮಳೆ ಕೆಚ್ಚುವುದು
ದೀಪಾವಳಿಯ ಹಿಂದಿನ ದಿನ ಸಾಯಂಕಾಲ ಮಕ್ಕಳೆಲ್ಲರೂ ಊರ ಮುಂದಿನ ಬಸವಣ್ಣನ ಗುಡಿಯ ಮುಂದೆ ಸೇರುತ್ತಾರೆ. ಕೈಯ್ಯಲ್ಲೊಂದಿಷ್ಟು ಸೊಪ್ಪಿನ ಕಂತೆ. ಸೊಪ್ಪೆಂದರೆ ತೊಗರಿ, ಅವರೆ, ಹುರುಳಿ, ಹುಚ್ಚೆಳ್ಳು ಸೊಪ್ಪು, ಜೊತೆಗೆ ಭೀಮನ ಹುಲ್ಲು. ಗುಡಿಯ ಮುಂದೆ ಹಾಸಿರುವ ಕಲ್ಲುಗಳ ಮೇಲೆ ಕುಳಿತು ತೊಗರಿ, ಹುರುಳಿ ಮತ್ತು ಹುಚ್ಚೆಳ್ಳು ಸೊಪ್ಪುಗಳನ್ನು ಸಣ್ಣಗೆ ಕೊಚ್ಚುತ್ತಾರೆ. ಗೋಲಿ ಗಾತ್ರದ ಉಂಡೆ ಮಾಡಿ ಅವರೆ ಸೊಪ್ಪಿನ ಮೇಲಿಟ್ಟು ಮಡಿಸಿ ಭೀಮನ ಹುಲ್ಲಿನಿಂದ ಕಟ್ಟುತ್ತಾರೆ. ಇದನ್ನೆ ಮಳೆ ಮದ್ದು ಅಥವಾ ಮದ್ದು ಮಳೆ ಎನ್ನುವುದು. ಎಕರೆಗೆ ನಾಲ್ಕೈದರಂತೆ ಗೋಲಿ ಗಾತ್ರದ ಮದ್ದು ಮಳೆಗಳನ್ನು ಸಿದ್ಧಪಡಿಸಿ ಮೊದಲನೆಯದು ದೇವರಿಗೆಂದು ಗುಡಿಯ ಮೇಲೆ ಎಸೆಯುತ್ತಾರೆ.

ಕುಲುಮೆ ಬೂದಿ ಹಾಕಿ ಹೊಲ- ಜಮೀನು ಗಟ್ಟಿ ಮಾಡ್ಕೊ
ದೀಪಾವಳಿಯ ಹಿಂದಿನ ದಿನ ಅರಕಲಗೂಡಿನ ಕುಂಬಾರರ ಕೇರಿಯಲ್ಲಿ ಜನಜಂಗುಳಿ. ಅಲ್ಲಿ ಐದಾರು ಕುಂಬಾರರ ಮನೆಗಳಿವೆ. ಅವರ ಮನೆಗಳ ಮುಂದೆ ನಿಂತು ಬೂದಿ ಕೊಡು ಕುಂಬಾರಣ್ಣ, ನಂಗೊಂದಿಷ್ಟು ಜಾಸ್ತಿ ಕೊಡು ಅಂದುಕೊಂಡು ಜನ ಬರ್ತಿರ್ತಾರೆ. ಯಾರಿಗೂ ಇಲ್ಲ ಎನ್ನದೆ ಕೊಟ್ಟು ಕಳುಹಿಸುವ ಕುಂಬಾರರ ಒಲೆಯ ಬೂದಿಯ ಮಹತ್ವವನ್ನು ಅಲ್ಲಿಯ ಹಿರಿಯ ತಲೆ ಹನುಮಕ್ಕ ವಿವರಿಸಿದ್ದು ಹೀಗೆ;

“ಮಡಿಕೆ ಚೂರು ಗಟ್ಟಿ, ಅದು ಯಾವತ್ತಿಗೂ ಸವೆಯಲ್ಲ. ಅದೇ ರೀತಿ ಮಡಿಕೆ ಬೇಯಿಸಿದ ಬೂದಿಯನ್ನು ಹೊಲ- ಜಮೀನುಗಳಿಗೆ ಹಾಕಿ ಗಟ್ಟಿ ಮಾಡ್ಕೊ ಅಂತಾ ಕುಲುಮೆ ಬೂದಿ ಕೊಡ್ತೇವೆ. ಮಡಿಕೆ ಬೇಯಿಸೋಕೆ ನೀಲಗಿರಿ ಎಲೆ, ತೆಂಗಿನ ಮಟ್ಟೆ, ಗೋಣಿ ಚೀಲ, ಭತ್ತದ ಹೊಟ್ಟು ತರತೇವೆ. ಯಾಕಂದ್ರೆ ಮಡಿಕೆ ಬೇಯೋಕೆ ತುಂಬ ಕಾವು ಬೇಕು ಮತ್ತು ಹೆಚ್ಚು ಸೌದೆನೂ ಬೇಕು. ಇವೆಲ್ಲ ಇರೋದ್ರಿಂದನೇ ಕುಲುಮೆ ಬೂದಿ ಶ್ರೇಷ್ಠ ಅಂತಾ ಜನ ಬರೋದು”

ಮಳೆ ಮದ್ದು ಅರೆಯುವ ಸಂಭ್ರಮ..!

ಬೂದಿ ಬಿಟ್ಟು- ಮದ್ದು ಮಳೆ ಇಟ್ಟು ಬಾ
ಮರುದಿನ ಬೆಳಿಗ್ಗೆ ಕೋಳಿ ಕೂಗುವ ಮುನ್ನ ಮನೆಯ ಯಜಮಾನ ಎದ್ದು, ಮಕ್ಕಳನ್ನು ಎಬ್ಬಿಸಿ ಹೊಲ- ತೋಟಗಳಿಗೆ ಹೊರಡಲು ಸಿದ್ಧನಾಗುತ್ತಾನೆ. ಊರಿನ ಹಿರಿಯರು, ಪಡ್ಡೆ ಹುಡುಗರು ಮಣ್ಣಿನ ಮಡಿಕೆಗಳಲ್ಲಿ ಕುಲುಮೆ ಬೂದಿಯನ್ನು ತುಂಬಿ ಹಿಡಿದು, ಇನ್ನೊಂದು ಕೈಯಲ್ಲಿ ಮದ್ದು ಮಳೆ ಮತ್ತು ಕುಡುಗೋಲು ಹಿಡಿದು ಕೂಊಊ ಕೂಊಊ ಎಂದು ಜೋರಾಗಿ ಕೂಗುತ್ತಾ ಮನೆಯಿಂದ ಹೊರ ಬರುತ್ತಾರೆ.

ಮನೆಯ ಮುಂಭಾಗದಲ್ಲಿ ಮುದ್ರೆಯ ಆಕಾರದಲ್ಲಿ ಬೂದಿಯಿಂದ ಬರೆದು ಮಧ್ಯೆ ಮದ್ದು ಮಳೆಯನ್ನು ಇಡುತ್ತಾರೆ. ನಂತರ ಜೋರಾಗಿ ಕೂಊಊ ಎಂದು ಕೂಗುತ್ತಾ ಹೊಲ-ಜಮೀನುಗಳೆಡೆಗೆ ನಡೆಯುತ್ತಾರೆ. ಹೊಲ, ತೋಟ, ಗದ್ದೆಯ ಮೂಲೆ- ಮೂಲೆಗಳಲ್ಲಿ ಬೂದಿಯಿಂದ ಬರೆದು ಮಧ್ಯೆ ಮದ್ದು ಮಳೆಯನ್ನು ಇಡುತ್ತಾರೆ. ನಂತರ ಮನೆಗೆ ಬಂದು ಪಡಸಾಲೆಯ ಮತ್ತು ಕೊಟ್ಟಿಗೆಯ ಜಂತೆಗೆ ಒಂದೊಂದು ಮದ್ದನ್ನು ಕಟ್ಟುತ್ತಾರೆ.

ಈ ಮದ್ದು ಮಳೆಯು ಕೀಟನಾಶಕವಿದ್ದಂತೆ. ಹುಳು- ಉಪ್ಪಟೆ, ಕ್ರಿಮಿ- ಕೀಟಗಳು ಬಾರದಂತಿರಲೆಂದು ಎಲ್ಲಾ ಕಡೆಯಲ್ಲಿಯೂ ಮದ್ದು ಮಳೆಯನ್ನು ಇಡುತ್ತೇವೆ ಎಂದು ಗ್ರಾಮದ ಹಿರಿಯ ರಾಮಣ್ಣ ತಮ್ಮ ಪೂರ್ವಿಕರ ಜ್ಙಾನವನ್ನು ವಿವರಿಸುತ್ತಾರೆ.

ತಿಪ್ಪಮ್ಮನಿಗೆ ಶೃಂಗಾರ
ಹಬ್ಬದ ವಿಶೇಷವೇ ಈ ತಿಪ್ಪಮ್ಮನ ಶೃಂಗಾರ. ತಿಪ್ಪೆಯನ್ನೆಲ್ಲಾ ಒಮ್ಮೆ ಮಗುಚಿ, ಅಕ್ಕ- ಪಕ್ಕ ಬೆಳೆದಿರುವ ಹುಲ್ಲು ಸೊಪ್ಪು ಗಿಡ- ಗಂಟೆಗಳನ್ನು ಕೊಚ್ಚಿ ತಿಪ್ಪೆಗೆ ಹಾಕುತ್ತಾರೆ. ಇದಕ್ಕೆ ‘ಅಡೆ- ಪಡೆ’ ಸೊಪ್ಪು ಎನ್ನುವುದುಂಟು.ತಿಪ್ಪೆಗೆ ಗ್ಲಿರಿಸಿಡಿಯಾ, ಹೊಂಗೆ ಮತ್ತು ಇತರೆ ಸೊಪ್ಪುಗಳನ್ನು ತಂದು ಹಾಕುವುದು ಕೆಲವರ ಪದ್ಧತಿಯಾಗಿದೆ. ಅದರ ಮೇಲೆ ಮಣ್ಣನ್ನು ಮುಚ್ಚಿದ್ರೆ ತಿಪ್ಪಮ್ಮ ಪೂಜೆಗೆ ಸಿದ್ಧವಾಗುತ್ತಾಳೆ.

ಈಗ ತಿಪ್ಪೆಯು ಗುಂಡಗೆ ಮುದ್ದೆಯಂತೆ ಕಾಣುತ್ತಿರುತ್ತದೆ. ತಿಪ್ಪಮ್ಮನ ನೆತ್ತಿಗೆ ಬಾಳೆ ಕಂದು, ಹುಚ್ಚೆಳ್ಳು ಸೊಪ್ಪು, ಉತ್ತರಾಣಿಯನ್ನು ಸಿಕ್ಕಿಸಿ, ಅದಕ್ಕೆ ಚೆಂಡು ಹೂ, ಕುಂಬಳ ಮತ್ತು ಹುಚ್ಚೆಳ್ಳು ಹೂ ಮುಡಿಸುತ್ತಾರೆ. ಈ ಮೂರು ಹೂಗಳು ತಿಪ್ಪನ ಪೂಜೆಗೆ ಬಹಳ ಶ್ರೇಷ್ಠ ಎಂಬುದು ಅವರ ಅಭಿಪ್ರಾಯ.

ಈ ಪೂಜೆಗೆ ವಿಶೇಷ ಅಡುಗೆಗಳೇನಿಲ್ಲ. ತಿಪ್ಪಮ್ಮನಿಗೆ ಹಾಲು ಅನ್ನವೇ ನೈವೇದ್ಯ. ಮನೆಯ ಹೆಣ್ಣು ಮಗಳು ತಿಪ್ಪಮ್ಮನಿಗೆ ಪೂಜೆ ಸಲ್ಲಿಸಿ, ಹಾಲು- ಬಾನ ನೇವೇಧ್ಯ ಸಮರ್ಪಿಸುತ್ತಾಳೆ. ನಂತರ ತಿಪ್ಪಮ್ಮನಿಗೆ ಹಾಲು- ತುಪ್ಪ ತನಿ ಎರೆಯುತ್ತಾರೆ. ಪೂಜೆಯ ನಂತರ ಕೊಟ್ಟಿಗೆಯಿಂದ ಬರುವ ಕಸವನ್ನು ತಿಪ್ಪೆಯ ಪಕ್ಕಕ್ಕೆ ಹೊಂದಿಕೊಂಡಂತೆ ಹಾಕುತ್ತಾರೆ. ಯುಗಾದಿ ಕಳೆದು ಹೊಸ ಮಳೆಗಳು ಆರಂಭವಾಗುವವರೆಗೂ ತಿಪ್ಪೆಯನ್ನು ಮುಟ್ಟುವುದಿಲ್ಲ.

ಆಳು ಮಗನಿಗೆ ಹಾಲು ಬಾನವನಿಟ್ಟು…
ತಿಪ್ಪಮ್ಮನ ಶೃಂಗಾರವೆಲ್ಲ ಆಳು ಮಗನಿಂದಲೇ ಜರುಗುವುದು. ತಿಪ್ಪೆ ಮಗುಚಿ, ಅಡೆಪಡೆ ಸೊಪ್ಪನ್ನು ಕೊಚ್ಚಿ ತಿಪ್ಪೆಗೆ ಹಾಕಿ ಮಣ್ಣು ಮುಚ್ಚುವುದು ಆಳು ಮಗನ ಕೆಲಸ. ತಿಪ್ಪಮ್ಮನ ಪೂಜೆ ಮುಗಿದ ಮೇಲೆ ಹಾಲು- ಬಾನವನ್ನು ಆಳು ಮಗನಿಗಿಡುತ್ತಾರೆ. ಅವನು ಹೊಟ್ಟೆತುಂಬಾ ತಿಂದು ಅನ್ನ ಹಾಕಿದ ಮನೆಗೆ ಒಳ್ಳೆಯದಾಗಲಿ ಎಂದು ಹರಸುತ್ತಾ ಹೊರಟರೆ ಆ ಮನೆಗೆ ಒಳ್ಳೆಯದಾಗುವುದು ಎಂಬುದು ಹಿರಿಯರ ಅಭಿಪ್ರಾಯ.

ಅಂಗಡಿ ಗೊಬ್ರಕ್ಕಿಂತಲೂ ಮೇಲು
ಪೇಟೆಮಾಚಗೊಂಡನಹಳ್ಳಿಯ ಆಸಕ್ತ ರೈತ ತುಳಸಿರಾಮ ಬರೀ ತಿಪ್ಪೆ ಗೊಬ್ಬರ ಹಾಕಿ ಜೋಳ ಬೆಳೆದ ಅನುಭವ ಕೇಳಿ; “ಈ ವರ್ಷ ಮುಂಗಾರಿನಲ್ಲಿ ಮುಸುಕಿನ ಜೋಳ ಹಾಕಿದ ಅರ್ಧ ಜಮೀನಿಗೆ ತಿಪ್ಪೆ ಗೊಬ್ರ ಹಾಕಿದ್ದೆ. ಇನ್ನರ್ಧಕ್ಕೆ ಗೊಬ್ರ ಸಾಲಲಿಲ್ಲ ಹಾಗಾಗಿ ಅಂಗಡಿ ಗೊಬ್ರ ಹಾಕಿದ್ವಿ. ಇದರಿಂದ ಜೋಳದ ಬೆಳವಣಿಗೆಯಲ್ಲಿ ಬಾರಿ ವ್ಯತ್ಯಾಸ ಆಯ್ತು. ತಿಪ್ಪೆ ಗೊಬ್ರ ಹಾಕಿದ್ದ ಜೋಳ ಅರ್ಧ ಅಡಿ ಎತ್ರ ಬೆಳೆದಿತ್ತು, ಮತ್ತೆ ಎಲೆ ಅಗಲ ಜಾಸ್ತಿಯಿತ್ತು. ತೆನೆ ಕೂಡ ಜೋರಾಗಿ ಬಂತು. ಹೊಲ ನೋಡಿದ ಜನ ಆ ಜೋಳಕ್ಕೆ ಏನ್ ಗೊಬ್ರ ಹಾಕಿದ್ದೆ ಅಂತಾ ಕೇಳ್ತಿದ್ರು. ಎಲ್ಲರಿಗೂ ತಿಪ್ಪೆ ಗೊಬ್ರ ಹೊಲಕ್ಕೆ ಹೊಡಿರಿ ಅಂತಾ ಕಿವಿಮಾತು ಹೇಳ್ತೇನೆ. ತಿಪ್ಪೆ ಗೊಬ್ರ ಹಾಕಿದ ಜಮೀನಿನಲ್ಲಿ ಹಿಂಗಾರು ಬೆಳೆಗಳು ಇನ್ನೂ ಜೋರಾಗಿ ಬರ್ತಾವೆ”

ವೈಜ್ಣಾನಿಕ ಹಿನ್ನೆಲೆ
ತಿಪ್ಪೆಯನ್ನು ಮಗುಚಿ, ಬೂದಿ ಹಾಕಿ, ಮಣ್ಣಿನಿಂದ ಮುಚ್ಚಿ, ಹಾಲು- ತುಪ್ಪ ತೊಳೆದು, ವಿವಿಧ ಸೊಪ್ಪುಗಳಿಂದ ಹೊದಿಕೆ ಮಾಡುವುದು ಕೇವಲ ಆಚರಣೆಯಾಗಿರದೆ, ಇದರಲ್ಲಿ ವೈಜ್ಣಾನಿಕತೆಯೂ ಅಡಗಿದೆ. ಈ ಎಲ್ಲ ಚಟುವಟಿಕೆಗಳಿಂದ ಜೀವರಾಶಿಗಳು ಹೆಚ್ಚಾಗಿ ಉತ್ಕೃಷ್ಟ ಗೊಬ್ಬರ ಉತ್ಪಾದನೆಯಾಗುವುದರಲ್ಲಿ ಸಂದೇಹವಿಲ್ಲ. ಜೊತೆಗೆ ಬೇಸಿಗೆಯಲ್ಲಿ ಗೊಬ್ಬರ ಒಣಗದಂತೆ, ತೇವಾಂಶ ಸಂರಕ್ಷಿಸುವ ಜಾಣ್ಮೆಯೂ ಹೌದು.

ಡಾ. ದೇವಕುಮಾರ್ ವರದಿ
ಇದಕ್ಕೆ ಪೂರಕವಾಗಿ ಶಿವಮೊಗ್ಗದ ಹೊನ್ನವಿಲೆ ಸಾವಯವ ಕೃಷಿ ಸಂಶೋಧನಾ ಕೇಂದ್ರದ ವಿಜ್ಙಾನಿಯಾಗಿದ್ದ ಡಾ. ದೇವಕುಮಾರ್ ಅವರು ತಿಪ್ಪಮ್ಮನ ಹಬ್ಬದ ಮುಂಚೆ ಮತ್ತು ನಂತರದ ೨೦ ದಿನಗಳ ಅವಧಿಯ ಗೊಬ್ಬರದ ಮಾದರಿಗಳಲ್ಲಿ ಜೀವಾಣುಗಳ ಅಭಿವೃದ್ಧಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿ ವರದಿ ನೀಡಿದ್ದಾರೆ.

ಗೊಬ್ಬರದಲ್ಲಿ ಬ್ಯಾಕ್ಟೀರಿಯಾ ಹಾಗೂ ಫಂಗೈಗಳು ಕಡಿಮೆಯಾಗಿ, ಆಕ್ಟಿನೋಮೈಸೈಟ್ಸ್, ರಂಜಕ ಕರಗಿಸುವ ಮತ್ತು ಸಾರಜನಕ ಸ್ಥಿರೀಕರಿಸುವ ಜೀವಾಣುಗಳ ಸಂಖ್ಯೆ ತಿಪ್ಪೆ ಹಬ್ಬದ ನಂತರದ ಅಧಿಕವಾಗಿರುವುದನ್ನು ಅವರ ಅಧ್ಯಯನ ದೃಢಪಡಿಸಿದೆ.

ಸಕಲೇಶಪುರದಲ್ಲಿ ತಿಪ್ಪೆ ಪೂಜೆ
ಇಲ್ಲಿ ಅರಕಲಗೂಡು ಭಾಗಕ್ಕಿಂತ ಸ್ವಲ್ಪ ವಿಭಿನ್ನವಾಗಿ, ಸಾಂಪ್ರದಾಯಿಕವಾದ ಆಚರಣೆಯಿದೆ. ದೀಪಾವಳಿ ಹಬ್ಬದ ದಿನ ಬೆಳಿಗ್ಗೆ ತಿಪ್ಪೆಯ ಅಡೆಪಡೆಯಲ್ಲಿರುವ ಹುಲ್ಲು, ಕಸ- ಕಡ್ಡಿ, ಗಿಡ- ಗಂಟೆಗಳನ್ನು ಕೊಚ್ಚಿ ತಿಪ್ಪೆಯ ಮೇಲೆ ಹಾಕಿ ಮಣ್ಣು ಮುಚ್ಚುತ್ತಾರೆ. ತಿಪ್ಪೆಯ ಮೇಲೆ ಅಂದಿನ ಹಸಿ ಸಗಣಿಯಿಂದ ತಿಪ್ಪಮ್ಮನನ್ನು ಮಾಡಿ ಅದರ ನೆತ್ತಿಗೆ ಜೋಡಿ ಚಾಜಿಗೆಯನ್ನು ನೆಡುತ್ತಾರೆ. ಇದು ಇಲ್ಲಿನ ಸಂಪ್ರದಾಯ.

ಹಾಲು- ತುಪ್ಪದ ತನಿ ತಿಪ್ಪಮ್ಮಗೆ..!

ಚಾಜಿಗೆಯು ಕಾಡು ಬಾಳೆಯಂತಿದ್ದು, ಎರಡ್ಮೂರು ಅಡಿ ಅಗಲ ಐದಾರು ಅಡಿ ಉದ್ದದ ಎಲೆಗಳನ್ನು ಬುಡದಿಂದ ತುದಿಯವರೆಗೂ ಹೊಂದಿರುತ್ತದೆ. ಇದು ಸಾಮಾನ್ಯವಾಗಿ ಮಲೆನಾಡಿನ ಹೊಳೆ, ಹಳ್ಳದ ಅಡೆಪಡೆಗಳಲ್ಲಿ ದಟ್ಟವಾಗಿ ಬೆಳೆದಿರುತ್ತದೆ. ಹಳ್ಳದ ದಡವು ಕೊಚ್ಚಿ ಹೋಗದಂತೆ ನಿಸರ್ಗವು ನಿರ್ಮಿಸಿರುವ ಶಾಶ್ವತ ಗೋಡೆಯಿದು. ಇದರ ಬೇರುಗಳು ಜಾಲರಿಯಂತೆ ಮಣ್ಣಿನೊಳಗೆ ಹೆಣೆದುಕೊಳ್ಳುತ್ತವೆ. ಕೊರಕಲಿರುವ ಭಾಗದಲ್ಲಿ ಚಾಜಿಗೆಯನ್ನು ನೆಡುವುದರಿಂದ ಮಣ್ಣಿನ ಸವಕಳಿಯನ್ನು ತಪ್ಪಿಸಿ ಸಂರಕ್ಷಿಸುತ್ತದೆ. ತಿಪ್ಪೆಯ ಮೇಲೆ ಚಾಜಿಗೆಯನ್ನು ನೆಡುವುದರಿಂದ ಈ ಗೊಬ್ಬರ ಹಾಕಿದ ಜಮೀನುಗಳು ಭದ್ರವಾಗಿರುತ್ತವೆ ಎಂಬುದು ಇಲ್ಲಿನ ರೈತರ ಅಭಿಪ್ರಾಯ.

ಹಾಸನ ಸುತ್ತಲಿನ ಕೆಲವು ಭಾಗಗಳಲ್ಲಿ ಪಾರಂಪರಿಕವಾಗಿ ಸಾಗಿ ಬಂದಿರುವ ತಿಪ್ಪಮ್ಮನ ಹಬ್ಬವು ಇಂದಿಗೂ ಜೀವಂತವಾಗಿದೆ. ದೀಪಾವಳಿಯ ದಿನದಂದು ಅನ್ನಕ್ಕೆ ಅನ್ನವಾದ ತಿಪ್ಪೆಗೆ ಭಕ್ತಿ ಸಮರ್ಪಿಸುವುದು ಇಲ್ಲಿನ ರೈತರ ವಾಡಿಕೆ. ಇದನ್ನು ಕೃಷಿ ಹಬ್ಬವಾಗಿ ಆಚರಿಸುವ ರೈತರು ಗೊಬ್ಬರವನ್ನು ಉತ್ಕೃಷ್ಟ ಮಾಡುವಲ್ಲಿ ವೈಜ್ಣಾನಿಕತೆಯನ್ನು ಕಂಡುಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾಗತಿಕರಣದ ಗಾಳಿ ಹಳ್ಳಿಗಳೆಡೆಗೂ ಬೀಸುತ್ತಿರುವುದರಿಂದ ಸ್ವಲ್ಪ ಬದಲಾವಣೆಯಾಗಿದೆ. ಇದರ ಮಹತ್ವವನ್ನು ತಿಳಿಸುವ ಕಾರ್ಯ ದೊಡ್ಡಮಟ್ಟದಲ್ಲಿ ಆಗಬೇಕಿದೆ.