ರತ್ನಾಕರನ ಭರತೇಶವೈಭವದಲ್ಲಿ ಬರುವ ಒಂದ ಪ್ರಸಂಗದಲ್ಲಿನ ಎರಡು ಸಾಂಗತ್ಯಗಳು ಹೀಗಿವೆ:

ಇನ್ನೊಂದು ಕಾವ್ಯವನೆಂದನಾ ಪಾಡುವ

ಕನ್ನೆಯಾ ಹೊತ್ತಗೆ ವಿಡಿದು

ಕನ್ನಗೋಗಿಲೆ ತಾನೆ ಬಾಯ್ದೆರೆದುದೊಯೆಂಬ

ಬಿನ್ನಾಣವೆಸೆಯಲೋದಿದಳು

ಪಡಲಿಗೆ ಹೊತ್ತಗೆಯ ದಾರವನೊತ್ತಿ

ಸಡಲಿಸಿ ಕಿರಿದೋಲೆಗಳನು

ಎಡಗೈಯೊಳಾಂತೋದಿದಳು ಬಲಗೈಯಿಂದ

ಮಿಡಿವುತ ಭಾರಿ ದಂಡಿಗೆಯ

ರತ್ನಾಕರನ ಕಾವ್ಯದ ಈ ಕಾಲ್ಪನಿಕ ಗಮಕ ವಿದುಷಿ ಪುಸ್ತಕವನ್ನು (ಓಲೆಗರಿಯ ಗ್ರಂಥವನ್ನು) ಮುಂದಿಟ್ಟುಕೊಂಡು  ತಂಬೂರಿಯನ್ನು  ಮೀಟುತ್ತ ವಾಚನ ಮಾಡಿದಳು.

ಗೋವಿಂದ ವೈದ್ಯ  ತನ್ನ ‘ಕಂಠೀರವ ನರಸರಾಜ ವಿಜಯ’ದಲ್ಲಿ ಮೈಸೂರರಸರ ಮಹಾನವಮಿ ಒಡ್ಡೋಲಗದ ವರ್ಣನೆ ಮಾಡಿದ್ದಾನೆ. ಕಂಠೀರವನ ಆಸ್ಥಾನದಲ್ಲಿ ಗಂಡಸರಲ್ಲದೆ ಹೆಂಗಸರೂ ಕಾವ್ಯವಾಚನ ಮಾಡುತ್ತಿದ್ದರೆಂದು ಪ್ರಸ್ತಾಪಿಸುತ್ತ,

 

ಆ ಸಮಯದೊಳೊರ್ವ ನಾರಿ ಭಾಗವತ ವಿ

ಲಾಸದ ಪುಣ್ಯ ಕಥೆಗಳ

ಭಾಸುರ ಗಾನರಸದೊಳೋದಿ ಬಹು ಸಂ

ತೋಷವನಿತ್ತಳರಸನಿಗೆ

ಮತ್ತೋರ್ವಳು ಭಾರತದ ಕಥೆಯ ಬಲು

ಬಿತ್ತರದಲಿ ನಲವಿಂದ

ಬತ್ತೀಸರಾಗದೊಳೋದಿ ಭೂಪಾಲನ

ಚಿತ್ತಕ್ಕೆ ಬಂದಳೇವೇಳ್ವೆ

ಎಂದು ತಿಳಿಸುತ್ತಾನೆ.

ಕ್ರಿ.ಶ. ೧೯೩೩ರಲ್ಲಿ ಹಂಪೆಯ ರಾಜನಾಗಿದ್ದ ಅಚ್ಯುತರಾಯನ ಕಾಲದ ಒಂದು ಶಾಸನದಿಂದ ತಿರುಮಲಮ್ಮ ಎಂಬುವಳು ಸ್ವತಃ ಕವಿಯಾಗಿ ಇದ್ದುದಲ್ಲದೆ ಪ್ರಸಿದ್ಧ ಗಮಕಿಯೂ ಆಗಿದ್ದಳೆಂದು ತಿಳಿದು ಬರುತ್ತದೆ. ‘ಸುಕುಮಾರ ಚರಿತೆ’ಯಲ್ಲಿ ನಾಗಶ್ರೀ ಎಂಬುವಳು ಕೇಳುವವರ ಮನ್ಸಸಿಗೊಪ್ಪುವಂತೆಯೂ, ಅರ್ಥವಿಶದವಾಗುವಂತೆಯೂ ರಾಗರಂಜನೆಯುಂಟಾಗುವ ಹಾಗೆಯು ಸಮಸ್ತ ಸಭಿಕರು ‘ಭಾಪು, ಭಾಪು’, ಬಹಳ ಚೆನ್ನಗಿದೆ, ಚೆನ್ನಾಗಿದೆ ಎಂದು ಹೇಳುವಂತೆ ಅನೇಕರಾಗಗಳಲ್ಲಿ ಓದಿದಳೆಂದು ಹೇಳಿದೆ. ಇದರಿಂದ ಹಿಂದಿನ ಕಾಲದಲ್ಲಿ ಮಹಿಳೆಯರು ಕಾವ್ಯಗಳನ್ನು ಓದುತ್ತಿದ್ದರು, ಸ್ತ್ರೀ ಗಮಿಕಿಗಳೂ ಇದ್ದರು ಎಂದು ಗೊತ್ತಾಗುತ್ತದೆ.

ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಬೆಳಕಿಗೆ ಬಂದ ಕೆಲವು ಸ್ತ್ರೀ ಗಮಕಿಗಳನ್ನು ಹೆಸರಿಸಬಹುದು. ಅವರ್ಯಾರೆಂದರೆ, ಬಾಳಮ್ಮಪಾಟೀಲ, ಹಾಡಿನ ನಾಗಮ್ಮ, ಎಂ. ರಮಾಬಾಯಿ, ಭಾರತದ ಲಲಿತಮ್ಮನವರು, ಜಯಲಕ್ಷ್ಮಿ ಗಣೇಶ ಮೂರ್ತಿ, ರಾಜಮ್ಮ ಕಲ್ಲೋಳಿಮಠ, ಸರೋಜಮ್ಮ ಅನಂತರಾಮಯ್ಯು, ಶಕುಂತಳಾ ಬಾಯಿ ಪಾಂಡುರಂಗರಾವ್‌ ಮುಂತಾದವರು. ಈ ಸ್ತ್ರೀ ಗಮಕಿಗಳ ಪರಂಪರೆಯಲ್ಲಿ ಸೇರತಕ್ಕ  ಮತ್ತೊಬ್ಬ ಗಮಕಿಯೆಂದರೆ ಅನ್ನಪೂರ್ಣಮ್ಮ ರಘುಪತಿಶಾಸ್ತ್ರಿ.

ಮುಲಕನಾಡು ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಅನ್ನಪೂರ್ಣಮ್ಮನವರು. ಗೌತಮೀ ಪುತ್ರ ಶಾತಕರ್ಣಿ ಜಯಿಸಿದ ರಾಜ್ಯಗಳಲ್ಲಿ ಒಂದು ಪ್ರದೇಶವಾದ ಮುಲಕನಾಡು ಎಂಬ ಹೆಸರು ಕಡಪ ಜಿಲ್ಲೆಯ ಕೆಲಭಾಗಕ್ಕೆ ಬಹಳ  ಹಿಂದಿನಿಂದ ಸಲ್ಲುತ್ತ ಬಂದಿದೆ. ಈ ಭಾಗದಲ್ಲಿ ವಾಸಿಸುವ ಆಂಧ್ರ ವೈದಿಕ ಬ್ರಾಹ್ಮಣ ಶಾಖೆಯವರು  ಮುಲಕನಾಡವರು. ಈ ಬ್ರಾಹ್ಮಣ ಸಮುದಾಯವನ್ನು ರೂಢಿಯಲ್ಲಿ ಮುಲಕನಾಡು, ಮುಲಿಕಿನಾಡು, ಮುರಿಕಿನಾಡು ಎಂಬುದಾಗಿ ವ್ಯವಹರಿಸಲಾಗುತ್ತದೆ. ಮುಲಕನಾಡು ಪ್ರಾಂತದಿಂದ ಮೈಸೂರು ದೇಶಕ್ಕೆ ವಲಸೆ ಬಂದ ಕುಟುಂಬವೊಂದರ ಎಂ.ಆರ್. ನರಸಿಂಹಯ್ಯ-ರುಕ್ಮಿಣಮ್ಮ ದಂಪತಿಗಳಲ್ಲಿ ೧೯೨೩ನೇ ಇಸವಿ ಏಪ್ರಿಲ್‌ ತಿಂಗಳಲ್ಲಿ ಬೆಂಗಳೂರಿನಲ್ಲಿ ಅನ್ನಪೂರ್ಣಮ್ಮ ಜನಿಸಿದರು.

ಪುರಾಣಪ್ರವಚನ, ಕಥಾಕಾಲಕ್ಷೇಪ, ಶ್ಲೋಕ ದಂಡಕಗಳ ಪಠನ ಅವೆಲ್ಲ ಇವರ ಮನೆತನದಲ್ಲಿ ರೂಢವಾದವು. ತಂದೆ, ವರದಾಚಾರ್ಯರ ಕಂಪನಿಯಲ್ಲಿ ನಟರಾಗಿದ್ದರು. ಬಾಲ್ಯದಲ್ಲೇ ಅನ್ನಪೂರ್ಣಮ್ಮ ತಂದೆಯೊಡನೆ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು. ಇವರ ಸೋದರಮಾವ ಗೋವಿಂದಯ್ಯ ಎಂಬುವರು ಪುಸ್ತಕ ಪ್ರೇಮಿಗಳು ಹಾಗೂ ಮಾರಾಟಗಾರರಾಗಿದ್ದರು. ಇವರ ಸಂಪರ್ಕದಿಂದ ಅನ್ನಪೂರ್ಣಮ್ಮನವರಿಗೆ ಸಾಹಿತ್ಯದಲ್ಲೂ ಆಸಕ್ತಿ ಉಂಟಾಯಿತು. ಹೀಗಾಗಿ ಚಿಕ್ಕಂದಿನಿಂದ ನಾಟಕ, ಸಂಗೀತ, ಸಾಹಿತ್ಯ, ಗಮಕ ಕಲೆಗಳಲ್ಲಿ ಅಸ್ತೆ ಉಂಟಾಗುವುದಕ್ಕೆ ಕಾರಣವಾಯ್ತು.

ಬಾಲ್ಯದಲ್ಲೇ, ಆರ್.ಗೋಪಾಲ ಎಂಬುವರು ಮನೆಗೆ ಬಂದು ಅನ್ನಪೂರ್ಣಮ್ಮನಿಗೆ ಸಂಗೀತ ಪಾಠಗಳನ್ನು ಹೇಳಿಕೊಡುತ್ತಿದ್ದರುಇ. ಇದರಿಂದ ದಿನದಿನಕ್ಕೆ, ಸಂಗೀತವನ್ನು ಆಳವಾಗಿ ಅಭ್ಯಾಸಮಾಡಬೇಕೆಂಬ ಬಯಕೆ ಉಂಟಾಗಿ ಆಸ್ಥಾನವಿದ್ವಾಂಸರಾಗಿದ್ದ ವಿದ್ವಾನ್‌ ಎನ್‌. ಚನ್ನಕೇಶವಯ್ಯನವರಲ್ಲಿ ಸತತವಗಿ ಅಭ್ಯಾಸಮಾಡಿ ಸಂಗೀತದಲ್ಲಿ ಸಾಕಷ್ಟು ಪರಿಣತಿಯನ್ನು ಪಡೆದರು. ಅನ್ನಪೂರ್ಣಮ್ಮ ಅವರ ಎರಡನೆಯ ಮಗ ಚಿಕ್ಕವಯಸ್ಸಿನಲ್ಲಿಯೇ ಸಂಗೀತ ಆಸಕ್ತಿ ಉಳ್ಳವನಾಗಿ, ರಾಗ-ತಾಳಗಳನ್ನು ಗುರುತಿಸುತ್ತಿದ್ದು, ೧೦ ವರ್ಷದವನಿದ್ದಾಗಲೇ ಅಕಾಲಮೃತ್ಯುವಿಗೆ ಒಳಗಾದಾಗ, ಅನ್ನಪೂರ್ಣಮ್ಮನಿಗೆ ಸಂಗೀತವನ್ನು  ಮುಂದುವರಿಸುವ ಆಸಕ್ತಿ ಅಷ್ಟಾಗಿ ಉಳಿಯಲಿಲ್ಲ.

ಅನ್ನಪೂರ್ಣಮ್ಮನವರ ತಂದೆ, ಸೋದರತ್ತೆ ಇವರುಗಳು ಕುಮಾರವ್ಯಾಸ, ಲಕ್ಷ್ಮೀಶ, ರಾಘವಾಂಕ ಮುಂತಾದ ಪ್ರಾಚೀನ ಕವಿಗಳ ಕಾವ್ಯಗಳನ್ನು ಸುಶ್ರಾವ್ಯವಾಗಿ ಓದುತ್ತಿದ್ದರು. ಇದರ ಪರಿಣಾಮ ಎಳೆಯ ವಯಸ್ಸಿನ ಅನ್ನಪೂರ್ಣಳ ಮೇಲೆ ಉಂಟಾಗಿ ಗಮಕ ಕಲೆಯ ಕಡೆಗೆ ಆಸಕ್ತಿ ಉಂಟಾಯಿತು. ಆ ಸಮಯಕ್ಕೆ ಸರಿಯಾಗಿ ನೌಕರಿಯಲ್ಲಿದ್ದ ತಂದೆಯವರಿಗೆ ಮೈಸೂರಿಗೆ ವರ್ಗವಾಗಿ ಕೆಲವು ವರ್ಷ ಅಲ್ಲೇ ಇರಬೇಕಾದ ಸಂದರ್ಭ ಒದಗಿತು. ಇವರು ವಾಸಿಸುತ್ತಿದ್ದ ಮನೆಗೆ ಸಮೀಪವೇ ‘ವನಿತಾಸದನ’ ಎಂಬ ಸಂಸ್ಥೆ ಸ್ಥಾಪನೆಯಾಗಿ ಕೆಲವು ವರ್ಷಗಳು ಮಾತ್ರ ಆಗಿತ್ತು. ಸಂಸ್ಥೆಯ ಸ್ಥಾಪಕರಾಗಿದ್ದ ನಾಗೇಶರಾವ್‌ ಮತ್ತು ಸುಶೀಲಾಬಾಯಿ ಅವರಿಗೆ ಗಮಕಕಲೆಯಲ್ಲಿ ಬಹು ಆಸಕ್ತಿ ಇದ್ದು, ಪ್ರಖ್ಯಾತ ಗಮಕ ವಿದ್ವಾಂಸರಾಗಿದ್ದ ಕೃಷ್ಣಗಿರಿ ಕೃಷ್ಣರಾಯರಿಂದ ಸದನದಲ್ಲಿ ಗಮಕ ತರಗತಿಗಳು ನಡೆಯುವಂತೆ ಮಾಡಿದ್ದರು. ಇದನ್ನು ತಿಳಿದ ನರಸಿಂಹಯ್ಯ  ಮಗಳು ಅನ್ನಪೂರ್ಣಳನ್ನು ಗಮಕ ಗಮಕ ತರಗತಿಗೆ ಸೇರಿಸಿದರು. ಗುರು ಕೃಷ್ಣರಾಯರ ವಾತ್ಸಲ್ಯಭಾವ ಬಾಲಿ ಅನ್ನಪೂರ್ಣಗಳಿಗೆ ಆಕರ್ಷಣ ಉಂಟಾಗಿ ಗಮಕ ಕಲಿಯಲು ಉತ್ಸಾಹ, ಶ್ರದ್ಧೆ ಮೂಡಿತು. ಕೆಲವೇ ವರ್ಷಗಳು ಕೃಷ್ಣರಾಯರಲ್ಲಿ ಕಲಿತರೂ, ಗುರುವೆಂಬ ಪೂಜ್ಯಭಾವನೆ ಅನ್ನಪೂರ್ಣಮ್ಮ ಹೊಂದಿದ್ದರಿಂದ ಆ ಕಲೆಯಲ್ಲಿ ಔನ್ನತ್ಯಕ್ಕೆ ಏರುವುದಕ್ಕೆ ದಾರಿಯಾಯಿತು.

 

ಕೃಷ್ಣರಾಯರ ಶಿಷ್ಯ ವಾತ್ಸಲ್ಯವನ್ನು ಆಗಿಂದಾಗ್ಗೆ ಸ್ಮರಿಸಿಕೊಳ್ಳುತ್ತಿದ್ದ ಅನ್ನಪೂರ್ಣಮ್ಮನವರು ನಡೆದ ಒಂದು ಪ್ರಸಂಗವನ್ನು ನೆನಪಿಸಿಕೊಳ್ಳುತ್ತಿದ್ದರು. ಕೃಷ್ಣರಾಯರು, ಅವರ ಮಿತ್ರರಾದ ವಿ.ಎಸ್‌.ಮೂರ್ತಿ ಎಂಬುವರ ಮನೆಯಲ್ಲಿ ಪ್ರಥಮ ಏಕಾದಶಿ ಪ್ರಯುಕ್ತ ಭಾರತವಾಚನ ಮಾಡಲು ಒಪ್ಪಿಕೊಂಡಿದ್ದರು. ಅವರ ಮನೆ, ನರಸಿಂಹಯ್ಯನವರ ಮನೆಯ ಸಮೀಪದಲ್ಲೇ ಇದ್ದುದರಿಂದ ಮಗಳು ಅನ್ನಪೂರ್ಣಳನ್ನು ಕರೆದುಕೊಂಡು ಕಾರ್ಯಕ್ರಮಕ್ಕೆ ಹೋದರು. ಗದುಗಿನ ಭಾರತದಿಂದ “ಅಕ್ಷಯ ವಸ್ತ್ರ ಪ್ರದಾನ” ಭಾಗವನ್ನು ವಾಚನಕ್ಕೆ ಆರಿಸಿಕೊಂಡ ಕೃಷ್ಣರಾಯರು ತಮ್ಮ ಎಂದಿನ ಶೈಲಿಯಲ್ಲಿ ಬಹು ಸುಶ್ರಾವ್ಯವಾಗಿ, ರಸಭರಿತವಾಗಿ, ವಾಚನಮಾಡಿ ಸೇರಿದ ಶ್ರೋತೃಗಳನ್ನು ಮೆಚ್ಚಿಸಿದರು. ವಾಚನದ ಪ್ರಾರಂಭದಲ್ಲಿ ನಾಂದಿ ಪದ್ಯಗಳನ್ನು ಮತ್ತು ಮಧ್ಯೆ ಮಧ್ಯೆ ಕೆಲವು ಪದ್ಯಗಳನ್ನು ಶಿಷ್ಯೆ ಅನ್ನಪೂರ್ಣಳ ಮೂಲಕ ಹಾಡಿಸಿ ಪ್ರೋತ್ಸಾಹಿಸಿದರು. ಜಾಗರಣೆ ಪ್ರಯುಕ್ತದ ಕಾರ್ಯಕ್ರಮ ಅದಾದ್ದರಿಂದ, ನಾಲ್ಕೈದು ಗಂಟೆಗಳು ಸತತವಾಗಿ ಭಾರತವಾಚನ ನಡೆದು ಕೃಷ್ಣರಾಯರು ತಮ್ಮ ಪದ್ಧತಿಯಂತೆ “ರಾಮ ಮಂಗಳನಾಮ…” ಪದ್ಯ ಹಾಡಿ ಮುಕ್ತಾಯ ಮಾಡುವ ಹೊತ್ತಿಗೆ ಅನ್ನಪೂರ್ಣಳಿಗೆ ನಿದ್ರೆ ಬಂದು ಮನೆಗೆ ನೇರ ಹೋಗಿ ಮಲಗಿಬಿಟ್ಟಳು. ಆದರೆ, ಗುರುಗಳು ನರಸಿಂಹಯ್ಯನವರ ಮನೆಗೆ ಬಂದು ತಮಗೆ ಕೊಟ್ಟಿದ್ದ ಬಾದಾಮಿ ಹಾಲನ್ನು ಶಿಷ್ಯೆ ಅನ್ನಪೂರ್ಣಳನ್ನು ಎಬ್ಬಿಸಿ ನೀಡಿದ್ದಲ್ಲದೆ, ವಾತ್ಸಲ್ಯದಿಂದ ಅನುಗ್ರಹಿಸಿದ್ದುಇ, ಅನ್ನಪೂರ್ಣಮ್ಮನವರಿಗೆ ಜೀವನದಲ್ಲಿ ಮರೆಯಲಾರದ ನೆನಪಾಗಿ ಉಳಿಯಿತು.

ಮುಂದೊಮ್ಮೆ, ಅನ್ನಪೂರ್ಣಮ್ಮನವರ ಭಾರತ ವಾಚನ ತುರುವೇಕೆರೆ ತಾಲ್ಲೂಕಿನ ಹೊಸಹಳ್ಳಿ ಎಂಬ ಗ್ರಾಮದಲ್ಲಿ ಏರ್ಪಾಡಾಗಿತ್ತು. ಬೆಂಗಳೂರಿನ ಕಣ್ಣಿನ ವೈದ್ಯರಾಗಿದ್ದ ಶ್ರೀ ಪುಟ್ಟಣ್ಣ ಎಂಬುವರ ಉಪನ್ಯಾಸವೂ ಇತ್ತು. ಅಂದು ಅನ್ನಪೂರ್ಣ ಉದ್ಯೋಗ ಪರ್ವದಿಂದ ಕೃಷ್ಣ-ಕರ್ಣ ಸಮಾಗಮ ಪ್ರಸಂಗವನ್ನು ಸುಶ್ರಾವ್ಯವಾಗಿ ವಾಚನ ಮಾಡಿದಾಗ, ಡಾ. ಪುಟ್ಟಣ್ಣನವರು ತನ್ಮಯತೆಯಿಂದ ಕೇಳಿ, ಕಾರ್ಯಕ್ರಮ ಮುಗಿದ ನಂತರ “ಏನಮ್ಮ, ನೀವು ಕೃಷ್ಣಗಿರಿ ಕೃಷ್ಣರಾಯರ ಬಳಿ ಅಭ್ಯಾಸ ಮಾಡಿದ್ದೀರಾ?” ಎಂದು ಕೇಳಿದರು. ಅನ್ನಪೂರ್ಣಮ್ಮನವರು, “ಹೌದು, ಅದು ನಿಮಗೆ ಹೇಗೆ ತಿಳಿಯಿತು?” ಎಂದಾಗ, ಡಾಕ್ಟರು, “ಇನ್ಯಾವ ಭೂಪ ಈ ಪದ್ಯಗಳಿಗೆ ಹೊಂದುವ ರಾಗ ಹಾಕಿ ಹಾಡಬಲ್ಲನಮ್ಮಾ! ನಾನು ಅವರಿಂದಲೇ ಈ ಭಾಗವನ್ನು ಕೇಳಿದ್ದೆ, ಅದರಿಂದ ಗುರುತಿಸಿದೆ” ಎಂದರು. ಈ ವಿಷಯವನ್ನು ಮೈಸೂರಿನಲ್ಲಿ ಗುರುಗಳ ಮುಂದೆ ಪ್ರಸ್ತಾಪಿಸಿದಾಗ, ಕೃಷ್ಣರಾಯರು ಅನ್ನಪೂರ್ಣಮ್ಮನನ್ನು ಕುರಿತು “ದ್ರೋಣಾಚಾರ್ಯರು ಅರ್ಜುನನಿಗೆ ಏನು ಹೇಳಿದರು ಗೊತ್ತಾ?  ಅರ್ಜುನಾ, ದೇಹಸಂಬಂಧದಿಂದ ಅಶ್ವತ್ಥಾಮನು ಮಗನಾಗಿ ಕೀರ್ತಿ ತಂದರೆ ಹೆಚ್ಚೇನಲ್ಲ. ಮೂರು ಲೋಕಗಳಲ್ಲಿ ನನ್ನ ಕೀರ್ತಿಯನ್ನು ಹರಡುತ್ತಿರುವ ನೀನು ಅವನಿಗಿಂತ ಮೇಲುಗೈ ಎಂದರು. ಆ ಮಾತು ನಿನಗೆ ಅನ್ವಯವಾಗುತ್ತಮ್ಮ” ಎಂದು ಪ್ರಶಂಸಿಸಿ, ಗುರುಗಳು ಪಟ್ಟ ಆನಂದಕ್ಕೆ ಪಾರವೇ ಇಲ್ಲ! ಎಂದು ಅನ್ನಪೂರ್ಣಮ್ಮನವರು ಮೇಲಿಂದ ಮೇಲೆ ಸ್ಮರಿಸಿಕೊಳ್ಳುತ್ತಿದ್ದರು.

ಹೀಗೆ ಕೃಷ್ಣರಾಯರ ಪೂರ್ಣ ಅನುಗ್ರಹ ಶಿಷ್ಯೆ ಅನ್ನಪೂರ್ಣಮ್ಮಳ ಮೇಲೆ ಉಂಟಾಗಿ, ಆಕೆ ಜೀವನದಲ್ಲಿ ಗಮಕಕಲೆಯನ್ನೇ ತನ್ನ ಉಸಿರನ್ನಾಗಿಸಿಕೊಂಡು ಆ ಕಲೆಯಲ್ಲಿ ಬೆಳೆದು ಖ್ಯಾತಿ ಪಡೆಯಲು ಕಾರಣವಾಯ್ತು.

ಅನ್ನಪೂರ್ಣಮ್ಮನವರ ಮಾವನವರು (ರಘುಪತಿ ಶಾಸ್ತ್ರಿಗಳ ತಂದೆ) ಎಸ್‌.ಜಿ. ನರಸಿಂಹಯ್ಯನವರು ಮೈಸೂರು ಸರ್ಕಾರದಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ಕೆಲಸ ಮಾಡಿ ನಿವೃತ್ತರಾದವರು. ವೈದಿಕ ಧರ್ಮದ ಪ್ರಚಾರ ಪ್ರಭಾವಗಳ ಬೆಳವಣಿಗೆಗೆ ನರಸಿಂಹಯ್ಯನವರು ಬಹುಕಾಲ ಬೇರೆ ಬೇರೆ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ದುಡಿದವರು. “ಗುರುಸೇವಾ ಪರಾಯಣ” ಎಂಬ ಪ್ರಶಸ್ತಿ ಅವರಿಗೆ ಶೃಂಗೇರಿ ಮಠದಿಂದ ಪ್ರಾಪ್ತವಾಯಿತು. ಇದಲ್ಲದೆ, ಅವರು ಸಾಹಿತಿಯೂ ಆಗಿದ್ದು,ಗಣಪತಿ ತತ್ತ್ವವಿಚಾರ, ಏಳು ಕೀರ್ತನೆಗಳು, ಭಾರತೀಯ ಬಾವುಟ, ದೇಶೀಯ ರಂಗಮಂಟಪ, ಸಂಖ್ಯೆಗಳಿಂದ ಸ್ಪೂರ್ತಿ ಇತ್ಯಾದಿ ೨೦ ಕೃತಿಗಳನ್ನು ಕನ್ನಡದಲ್ಲಿ ರಚಿಸಿದವರು. ಇದರಿಂದ ಅನ್ನಪೂರ್ಣಮ್ಮನವರು ಸೇರಿದ ಮನೆಯಿಂದಲೂ ಕಲಾಭ್ಯಾಸದಲ್ಲಿ ಪ್ರೋತ್ಸಾಹವನ್ನು ಪಡೆದು ಬೆಂಗಳೂರಿನಲ್ಲಿ ಗಮಕ ಕಲೆಯನ್ನು ಮುಂದುವರಿಸಲು ಅನುಕೂಲವಾಯ್ತು. ೧೯೪೧ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಗಮಕ ಪರೀಕ್ಷೆಯಲ್ಲಿ ಮೊದಲನೆಯ ದರ್ಜೆಯಲ್ಲಿ ಉತ್ತೀರ್ಣರಾದರು.

ಬೆಂಗಳೂರಿನಲ್ಲಿ, ದೇವುಡು ಅವರ ಬಳಿ ಸಂಸ್ಕೃತ ಅಭ್ಯಾಸ ಮಾಡಿದ ಅನ್ನಪೂರ್ಣಮ್ಮ ಅವರಿಗೆ ಸಾಹಿತ್ಯದಲ್ಲಿ ಮತ್ತಷ್ಟು ಪ್ರೌಢಿಮೆ ಪಡೆಯಲು ಸಾಧ್ಯವಾಯಿತು. ಗಾಂಧಿನಗರದ ಆರ್ಯ ವಿದ್ಯಾಶಾಲೆಯಲ್ಲಿ ಅಧ್ಯಾಪಕರಾಗಿದ್ದ ಗಮಕಿ ನಂದಗುಡಿ ಶ್ರೀನಿವಾಸರಾಯರಲ್ಲಿ ಗಮಕ ಅಭ್ಯಾಸವನ್ನು ಮುಂದುವರೆಸಿ, ತೈತ್ತಿರೀಯೋಪನಿಷತ್ತಿನಲ್ಲಿ ಹೇಳುವಂತೆ ಸ್ವಾಧ್ಯಾಯ ಪ್ರವಚನಗಳನ್ನು ನಿರಂತರ ಜೀವನದಲ್ಲಿ ನಡೆಸಿಕೊಂಡು ಬಂದವರು ಅನ್ನಪೂರ್ಣಮ್ಮನವರು.

ಅನ್ನಪೂರ್ಣಮ್ಮನವರಿಗೆ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿಷಯಗಳನ್ನು ತಿಳಿದುಕೊಳ್ಳುವ, ಮಾಹಿತಿ ಸಂಗ್ರಹಿಸುವ ಅತೀವ ಆಸಕ್ತಿ ಇದ್ದು ಸದಾ ಅಧ್ಯಯನ ಶೀಲೆಯಾಗಿದ್ದರು. ಅವರು ತಮ್ಮ ಸಂಸಾರದ ಜಂಜಾಟದಲ್ಲಿಯೂ ಸಂಗೀತ ಮತ್ತು ಸಾಹಿತ್ಯದ ಅಭ್ಯಾಸವನ್ನು ತಪ್ಪದೇ ಮಾಡುತ್ತಿದ್ದರು. ಅಧ್ಯಯನದಲ್ಲಿ ತಮಗೆ ಸಂದೇಹ, ಸಂಶಯಗಳುಂಟಾದರೆ ತಿಳಿದವರಿಂದ ನಿವಾರಣೆ ಮಾಡಿಕೊಳ್ಳುವವರೆಗೆ ಸುಮ್ಮನಿರುತ್ತಿರಲಿಲ್ಲ. ‘ವಿದುರನೀತಿ’ಗೆ ಸಂಬಂಧಿಸಿದ ಒಂದು ಪದ್ಯದ ಅರ್ಥ ಅವರಿಗೆ ತಿಳಿಯದಿದ್ದಾಗ ಕುಮಾರವ್ಯಾಸ ಭಾರತದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಉತ್ತಮ ವ್ಯಾಕ್ಯಾನಕಾರರೆನಿಸಿದ್ದ ಚಿತ್ರದುರ್ಗದ ಬಳಿಯ ಭರಮ ಸಾಗರದ ಖ್ಯಾತ ಸಾಹಿತಿ ಅ.ರಾ.ಸೇ ಅವರಿಗೆ ಪತ್ರ ಬರೆದು ಸಂಶಯವನ್ನು ನಿವಾರಿಸಿಕೊಂಡರಂತೆ. ಇದು, ಅವರ ಉತ್ಸಾಹ, ಪರಿಶ್ರಮ, ಶ್ರದ್ಧೆ, ಯಥಾರ್ಥ ಜ್ಞಾನ ಪಡೆಯಬೇಕೆಂಬ ಹಂಬಲ ಮೊದಲಾದ ಸದ್ಗುಣಗಳ ಒಂದು ಉದಾಹರಣೆಯಷ್ಟೆ!

ಅನ್ನಪೂರ್ಣಮ್ಮನವರಿಗೆ ಸಾಹಿತ್ಯಕ್ಕೆ ಸಂಬಂಧಿಸಿದಂಥೆ ವಿಷಯಗಳನ್ನು ತಿಳಿದುಕೊಳ್ಳುವ, ಮಾಹಿತಿ ಸಂಗ್ರಹಿಸುವ ಅತೀವ ಆಸಕ್ತಿ ಇದ್ದು ಸದಾ ಅಧ್ಯಯನ ಶೀಲೆಯಾಗಿದ್ದರು. ಅವರು ತಮ್ಮ ಸಂಸಾರದ ಜಂಜಾಟದಲ್ಲಿಯೂ ಸಂಗೀತ ಮತ್ತು ಸಾಹಿತ್ಯದ ಅಭ್ಯಾಸವನ್ನು ತಪ್ಪದೇ ಮಾಡುತ್ತಿದ್ದರು. ಅಧ್ಯಯನದಲ್ಲಿ ತಮಗೆ ಸಂಧೇಹ, ಸಂಶಯಗಳುಂಟಾದರೆ ತಿಳಿದವರಿಂದ ನಿವಾರಣೆ ಮಾಡಿಕೊಳ್ಳುವವರೆಗೆ ಸುಮ್ಮನಿರುತ್ತಿರಲಿಲ್ಲ. ‘ವಿದುರನೀತಿ’ಗೆ ಸಂಬಂಧಿಸಿದ ಒಂದು ಪದ್ಯದ ಅರ್ಥ ಅವರಿಗೆ ತಿಳಿಯದಿದ್ದಾಗ ಕುಮಾರವ್ಯಾಸ ಭಾರತದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಉತ್ತಮ ವ್ಯಾಖ್ಯಾನಕಾರರೆನಿಸಿದ್ದ ಚಿತ್ರದುರ್ಗದ ಬಳಿಯ ಭರಮ ಸಾಗರದ ಖ್ಯಾತ ಸಾಹಿತಿ ಅ.ರಾ.ಸೇ ಅವರಿಗೆ ಪತ್ರ ಬರೆದು ಸಂಶಯವನ್ನು ನಿವಾರಿಸಿಕೊಂಡರಂತೆ. ಇದು, ಅವರ ಉತ್ಸಾಹ, ಪರಿಶ್ರಮ, ಶ್ರದ್ಧೆ, ಯಥಾರ್ಥ ಜ್ಞಾನ ಪಡೆಯಬೇಕೆಂಬ ಹಂಬಲ ಮೊದಲಾದ ಸದ್ಗುಣಗಳ ಒಂದು ಉದಾಹರಣೆಯಷ್ಟೆ!

ಅನ್ನಪೂರ್ಣಮ್ಮ ರಘುಪತಿ ಶಾಸ್ತ್ರಿಯವರು ಸುಮಾರು  ಎರಡು ದಶಕಗಳ ಕಾಲ ಕನ್ನಡ ಸಾಹಿತ್ಯ ಪರಿಷತ್ತು ನಡೆಸುತ್ತಿದ್ದ ಗಮಕ ಪರೀಕ್ಷೆಗಳಿಗೆ ಗಮಕ ತರಗತಿಗಳನ್ನು ನಡೆಸಿ ಹಲವಾರು ಶಿಷ್ಯರನ್ನು ತರಬೇತಿಗೊಳಿಸಿದರು. ತನ್ನ ಗುರುವಿನಂತೆಯೆ ತಾನು ಶಿಷ್ಯರಿಗೆ ಪ್ರೋತ್ಸಾಹ ನೀಡುತ್ತಾ ಶಿಷ್ಯವಾತ್ಸಲ್ಯವನ್ನು ಪಡೆದರು. ಮತ್ತೊಬ್ಬರ ಪ್ರತಿಭೆಯನ್ನು ಕಂಡಾಗ ಮತ್ಸರಿಸದೆ, ಅವರನ್ನು ಮುಂದೆ ತರುವುದರಲ್ಲಿ ಬಹಳ ಉತ್ಸಾಹ ತೋರುತ್ತಿದ್ದರು. ಈ ರೀತಿಯಲ್ಲಿ ಎಷ್ಟೋ ಪ್ರತಿಭಾವಂತರನ್ನು ಸಮಾಜಕ್ಕೆ ಪರಿಚಯ ಮಾಡಿಕೊಟ್ಟರು . ಅಂತಹವರಲ್ಲಿ ಒಬ್ಬರು  ರಾಜಾಜಿನಗರದಲ್ಲಿ ವಾಸವಾಗಿದ್ದ ಶಾರದಮ್ಮ ಎಂಬುವವರು . ಆಕೆ ಆಶುಕವಿಯಿತ್ರಿ, ಸ್ಫುರಣೆಗೊಂಡ ದೇವರ ಕೃತಿಗಳನ್ನು ಆಗಿಂದಾಗಲೇ ಮನೆಯ ಬಾಗಿಲ ಮೇಲೆ ಬರೆದುಬಿಡುತ್ತಿದ್ದರು. ಇದನ್ನು ಕಂಡು, ಆಕೆಯ ಕೃತಿಗಳನ್ನು ತನ್ನ ಖರ್ಚಿನಲ್ಲಿ ಪ್ರಕಟಗೊಳಿಸಿದುದಲ್ಲದೇ, ಹೋದ ಕಡೆಯಲ್ಲಿ ಅವರ ಪರಿಚಯ ಹಾಗೂ ಅವರ ಕೃತಿಗಳ ಪ್ರಚಾರ ಮಾಡುತ್ತಿದ್ದರು. ಇಂಥಹ ಉದಾರ ಮನಸ್ಸನ್ನು ಕಾಣುವುದು ಅತಿ ವಿರಳ.

ಪಂಡಿತ ಹು.ಮಾ. ರಾಮಾರಾಧ್ಯರು ಒಬ್ಬ ಪ್ರಸಿದ್ಧ ಗಮಕಿ ಆಗಿದ್ದುದಲ್ಲದೆ,; ಅನೇಕ ಗಮಕರೂಪಕಗಳನ್ನು ಸಿದ್ಧಪಡಿಸಿ ತಮ್ಮ ಶಿಷ್ಯರಿಂದ ಆಗಿಂದಾಗ್ಗೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು . ಅವರ ಗಮಕರೂಪಕಗಳಲ್ಲಿ ಭಾಗವಹಿಸುತ್ತಿದ್ದ ಕಲಾವಿದರಲ್ಲಿ ಅನ್ನಪೂರ್ಣಮ್ಮ ರಘುಪತಿಶಾಸ್ತ್ರಿಯವರು ಒಬ್ಬರು. ಅದರಲ್ಲಿಯೂ ಹರಿಶ್ಚಂದ್ರ ಕಾವ್ಯ ಗಮಕ ರೂಪಕದಲ್ಲಿ ಅನ್ನಪೂರ್ಣಮ್ಮನವರು ಚಂದ್ರಮತಿ ಪಾತ್ರವನ್ನು ಬಹು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು ಸಹೃದಯ ಶ್ರೋತೃಗಳ ಮೆಚ್ಚುಗೆ ಪಡೆದದ್ದಲ್ಲದೆ, ಹು.ಮ.ರಾಮಾರಾಧ್ಯರ ಪ್ರಶಂಸೆಗೂ ಪಾತ್ರರಾಗಿದ್ದರು.

ಅನ್ನಪೂರ್ಣಮ್ಮನ ಮತ್ತೊಂದು ವೈಶಿಷ್ಟ್ಯವನ್ನು ತಿಳಿಸಲೇಬೇಕು. ತಾವೇ ಸ್ವತಹ ತಮ್ಮ ವಾಚನಕ್ಕೆ ಪೂರಕ ಹಾಗೂ ಸಮರ್ಥವಾಗಿ ವ್ಯಾಖ್ಯಾನ ಮಾಡುವ ಪರಿಪಾಟವನ್ನು ಹೊಂದಿದ್ದರು. ಅವರ ನಿರರ್ಗಳ ಸ್ಪಷ್ಟ ಮಾತುಗಾರಿಕೆಯೇ ಇದಕ್ಕೆ ಸಹಾಯವಾಗಿತ್ತು . ವಾಚನ ವ್ಯಾಖ್ಯಾನವೆರಡನ್ನೂ ನಿರ್ವಹಿಸಿದ ಮೊದಲ ಮಹಿಳಾ ಗಮಕಿ ಅನ್ನಪೂರ್ಣಮ್ಮ ರಘುಪತಿ ಶಾಸ್ತ್ರಿ ಅಂತ ಕಾಣುತ್ತದೆ.

ಕುಮಾರವ್ಯಾಸಭಾರತ, ಜೈಮಿನಿಭಾರತ, ಹರಿಶ್ಚಂದ್ರ ಕಾವ್ಯ ಮೊದಲಾದ ಅನೇಕ ಪ್ರಾಚೀನ ಕಾವ್ಯಗಳನ್ನು ವಾಚನಮಾಡುತ್ತಿದ್ದರು. ಬೆಂಗಳೂರು, ತುಮಕೂರು, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಅನೇಕ ಕಡೆ ಸಂಸ್ಕೃತಿ ಪ್ರಸಾರ ಕಾರ್ಯಕ್ರಮದ ಅಂಗವಾಗಿ ಕಾವ್ಯವಾಚನ ಮಾಡಿದ್ದಾರೆ. ಮೂರು ದಶಕಕ್ಕೂ ಮೀರಿ ಇವರ ಕಾವ್ಯವಾಚನ ಕಾರ್ಯಕ್ರಮಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ದೇವಾಲಯ, ಗುರುಪೀಠ, ಸಂಘ ಸಂಸ್ಥೆಗಳಲು ಇವರ ಕಾವ್ಯವಾಚನ ಕಾರ್ಯಕ್ರಮ ಏರ್ಪಡಿಸಿದುದಲ್ಲದೆ ಇವರನ್ನು ಗೌರವಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಕುಮಾರವ್ಯಾಸ ಭಾರತವನ್ನು ಬಿಡುಗಡೆ ಮಾಡಲು ನಡೆಸಿದ ಸಮಾರಂಭವೊಂದರಲ್ಲಿ ಇವರು ಭಾಗವಹಿಸಿ ಪ್ರಶಂಸಾ ಪತ್ರ ಪಡೆದಿದ್ದಾರೆ. ಇವರನ್ನು ಕರ್ನಾಟಕ ಗಮಕ ಕಲಾ ಪರಿಷತ್ತು ಏರ್ಪಡಿಸಿದ್ದ ರಾಜ್ಯ ಮಟ್ಟದ ಎರಡನೆಯ ಗಮಕ ಕಲಾಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.

ಇವರಿಗೆ ದೈವದತ್ತವಾದ ಮಧುರಕಂಠ, ಮೇಲಾಗಿ ಅವಿರತ ಸಾಧನೆ, ಅಲ್ಲದೆ ಸಂಗೀತ ಸಾಹಿತ್ಯವೆರಡನ್ನು ಸಮನ್ವಯಗೊಳಿಸಿ ಸುಶ್ರಾವ್ಯವಾಗಿ ಶೋತೃಗಳ ಮನರಂಜಿಸುವ ವಾಚನದ ವೈಖರಿ, ಜೊತೆಜೊತೆಯಲ್ಲಿ ಆಕರ್ಷಿಸುವ ವ್ಯಾಖ್ಯಾನದ ಮಾತುಗಾರಿಕೆ, ಇವುಗಳಿಂದ ಗಮಕ ವಿದುಷಿ ಅನ್ನಪೂರ್ಣಮ್ಮ ರಘುಪತಿ ಶಾಸ್ತ್ರಿ ಅವರು ಕನ್ನಡ ಜನತೆಯ ಮನಗೆದ್ದು ಕಲಾ ಸೇವೆ ಸಲ್ಲಿಸಿ ರಸಿಕರ ಮೆಚ್ಚುಗೆಗೆ ಪಾತ್ರರಾದರು.

ಇವರ ಯಜಮಾನರು ರಘುಪತಿಶಾಸ್ತ್ರಿ ಸೆಕ್ರೆಟರಿಯಟ್‌ನಲ್ಲಿ ವೃತ್ತಿ ಮಾಡುತ್ತಿದ್ದು, ಹೆಚ್ಚುಕಾಲ ಬದುಕದೆ ಉಂಟಾದ ಪತಿಯ ಅಗಲಿಕೆ, ಪಡೆದ ಮಕ್ಕಳ ಪೈಕಿ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡ ಪುತ್ರಶೋಕ ಈ ಎಲ್ಲ ನೋವನ್ನು ಸಹಿಸಿಕೊಂಡು ಜೀವನದಲ್ಲಿ ತನ್ನ ಜವಾಬ್ದಾರಿಯ ಕರ್ತವ್ಯಗಳನ್ನು ಅನ್ನಪೂರ್ಣಮ್ಮನವರಿಗೆ ನಡೆಸಲು ಸಾಧ್ಯವಾಗುವಂತೆ ಅವರಿಗೆ ಧೈರ್ಯ ಸ್ಥೈರ್ಯಗಳನ್ನು ತಂದು ಕೊಟ್ಟದ್ದು ಗಮಕಕಲೆಯೇ ಎಂದರೆ ತಪ್ಪಲ್ಲ!

ಇವರ ಹಿರಿಯಮಗ ರಾಮದಾಸ್‌ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪ್ರಾಧ್ಯಾಪಕನಾಗಿರುವುದಲ್ಲದೆ, ನಾಟಕ, ಕಿರುತೆರೆ, ಚಲನಚಿತ್ರಗಳಲ್ಲಿ ಅಭಿನಯಿಸುತ್ತ ಪ್ರಖ್ಯಾತನಾಗಿದ್ದಾನೆ. ಕಿರಿಯಮಗ ರಾಮನಾಥ ಖಾಸಗಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ಮಗಳು ಶಾರದ ತಾಯಿಯಿಂದ ಕಲಿತ ಗಮಕ ಕಲೆಯನ್ನು ಮುಂದುವರೆಸಿಕೊಂಡು ಬರುತ್ತಿದ್ದಾಳೆ. ಅಳಿಯ ಯೋಗಾನರಸಿಂಹ ಅವರು ಉತ್ತಮ ಸಂಗೀತಗಾರರು, ಬರಹಗಾರರು ಹಾಗೂ ವ್ಯಾಖ್ಯಾನಕಾರರು.

ಜೀವನದ ಎಡರು ತೊಡರುಗಳನ್ನು ಎದುರಿಸಿ,ಗಮಕಕಲೆಯನ್ನು ಎಡೆಬಿಡದೆ ಆಶ್ರಯಿಸಿ, ನಿಸ್ಪೃಹಳಾಗಿ ಕಲಾ ಸೇವೆ ಸಲ್ಲಿಸಿ, ದೀರ್ಘಕಾಲ ನರಳಿ ೧೯೯೭ರ ವಿಜಯ ದಶಮಿ ದಿನ ಇಹಲೋಕದ ಜೀವನ ಮುಗಿಸಿದರು ಅನ್ನಪೂರ್ಣಮ್ಮನವರು.

ಗಮಕ ಕಲಾ ಪ್ರಪಂಚದಲ್ಲಿ ಕಳೆದ ಶತಮಾನದಲ್ಲಿ ಪ್ರಖ್ಯಾತಗೊಂಡ ಗಮಕ ವಿದುಷಿಯರ ಪರಂಪರೆಯಲ್ಲಿ ಸೇರಿ ಎಂದೆಂದಿಗೂ ಚಿರಸ್ಮರಣೀಯರಾಗಿರುವವರು ಗಮಕವಿದುಷಿ ಅನ್ನಪೂರ್ಣಮ್ಮ ರಘುಪತಿ ಶಾಸ್ತ್ರಿ ಅವರು! ಅವರ ಸರಳ, ಸೌಜನ್ಯದ ನಡೆನುಡಿ, ಔದಾರ್ಯ, ವಿಶ್ವಾಸ, ಆತ್ಮೀಯತೆ, ವಾತ್ಯಲ್ಯದ ನಡೆವಳಿಕೆ ಎಂದಿಗೂ ಮರೆಯುವಂತಹುದಲ್ಲ!

ಗ್ರಂಥ ಋಣ: ಗಮಕ ಕಲೆ-ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣೆ, ಮುಲಕನಾಡು ಬ್ರಾಹ್ಮಣರು-ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ

ಭಾರತದ ಕೃಷ್ಣರಾಯರು- (ಜನ್ಮಶತಾಬ್ದಿ ಪ್ರಕಟಣೆ)