ಈ ದಿನ ಮತ್ತೆ ಬಿಸಿಲು. ಮೈ ಮೇಲೆ ಹಾಕಿಕೊಂಡ ಓವರ್‌ಕೋಟನ್ನು ಬಿಚ್ಚಿ ಕೈ ಮೇಲೆ ಹಾಕಿಕೊಂಡು, ನನ್ನ ಭಾಷಾ ಸಹಾಯಕನ ಜತೆಗೆ, ಮತ್ತೆ ಇನ್ಸ್‌ಸ್ಟಿಟ್ಯೂಟಿಗೆ ಹೋದೆ. ಈ ದಿನದ ಕಾರ್ಯಕ್ರಮದ ಪ್ರಕಾರ  ನಾನು ಒಂದು ತಮಿಳು ತರಗತಿಯಲ್ಲಿ ಕೂತು, ಬೋಧನೆಯ ವಿಧಾನವನ್ನು ನೋಡಬೇಕಾಯಿತು. ತಮಿಳನ್ನು ಬೋಧಿಸುವಾಕೆ ರಷ್ಯನ್ ಮಹಿಳೆ. ಇಲ್ಲಿರುವ  ಬಹು ಮಟ್ಟಿನ ಎಲ್ಲ ಅಧ್ಯಾಪಕರೂ ರಷ್ಯಾ ದೇಶದವರೇ. ಅವರನ್ನು ಆಯಾ ದೇಶಗಳಿಗೆ ಕಳುಹಿಸಿ ಅಲ್ಲಿನ ಭಾಷೆಯಲ್ಲಿ ಶಿಕ್ಷಣ ಪಡೆದು ಬರಲು ಅವಕಾಶ ಮಾಡಿಕೊಡುತ್ತಾರೆ. ಈ ತಮಿಳು ಅಧ್ಯಾಪಿಕೆಯೂ ಇಂಡಿಯಾಕ್ಕೆ ಹೋಗಿ ತಮಿಳು ಕಲಿತು ಬಂದವಳೇ. ಈಕೆಯ ಬಾಯಲ್ಲಿ ತಮಿಳು ಪದಗಳು ಉಚ್ಚಾರವಾಗುವುದು ವಿಲಕ್ಷಣವಾಗಿರುತ್ತದೆ. ನನ್ನ ದ್ವಿಭಾಷಿ ವೊಲೋಜ ಇದೇ ಸಂಸ್ಥೆಯಲ್ಲಿ ತಮಿಳು ಭಾಷೆಯ ವಿದ್ಯಾರ್ಥಿ. ನಾನು ಅವನನ್ನು ಕೇಳಿದೆ, ‘ನೀನು ಯಾಕೆ ತಮಿಳನ್ನು ಆರಿಸಿಕೊಂಡೆ’ ಎಂದು. ಆತ ‘ಅದು ನನಗೆ ಇಷ್ಟವಾಯಿತು, ಅದಕ್ಕೆ’ ಎಂದ. ‘ಅದಿರಲಿ, ತಮಿಳು ಕಲಿತು ಮುಂದೇನು ಮಾಡುತ್ತಿ’ ಎಂದೆ. ‘ಗೊತ್ತಿಲ್ಲ’ ಅಂದ; ಅನಂತರ ಕೊಂಚ ತಡೆದು ‘ಬಹುಶಃ ಹೆಚ್ಚಿನ ಕಲಿಕೆಗೆ ಇಂಡಿಯಾಕ್ಕೆ ಬರಬಹುದು ಅಥವಾ ಬಾರದಿರಬಹುದು’ – ಎಂದ.

ತಮಿಳು ತರಗತಿಯ ಬೋಧನೆಯಲ್ಲಿ ನನಗೆ ಅಂತಹ ವಿಶೇಷವೇನೂ ತೋರಲಿಲ್ಲ; ಭಾಷೆಯನ್ನು ಕಲಿಸುವ ಆಧುನಿಕ ವೈಜ್ಞಾನಿಕ ಉಪಕರಣಗಳನ್ನು ಎಲ್ಲ ಕಡೆಯ ಹಾಗೆ ಇಲ್ಲೂ ಬಳಸುತ್ತಾರೆ. ತಮಿಳು ತರಗತಿಯಲ್ಲಿ ಕೂತ ನನಗೆ ಒಂದೇ ಕೊರಗು: ‘ತಮಿಳಿನ ಹಾಗೆ ಕನ್ನಡವನ್ನೂ ಈ ಸಂಸ್ಥೆಯಲ್ಲಿ ಈ ಜನ ಕಲಿಸುವುದು  ಯಾವಾಗ? ಈ ಜನ ಯಾಕೆ ಇನ್ನೂ ಅದನ್ನು ಕಲಿಸುವ ಏರ್ಪಾಡನ್ನು ಮಾಡಿಲ್ಲ?’

ಒಂದೂವರೆಗೆ ಇನ್‌ಸ್ಟಿಟ್ಯೂಟ್‌ನಿಂದ  ಹೊರಬಿದ್ದು ಹತ್ತಿರದಲ್ಲೇ ಇದ್ದ ‘ನ್ಯಾಷನಲ್ ಕೆಫೆ’ಗೆ ಹೋದೆವು. ಆಗಲೆ ಬಾಗಿಲಲ್ಲಿ ಒಂದು ಡಜನ್ ಜನ ಕ್ಯೂ ನಿಂತಿದ್ದರು. ನಾವೂ ಅದನ್ನು ಸೇರಿದೆವು. ಶುಭ್ರ ವಸ್ತ್ರಗಳನ್ನು ಹೊದಿಸಿ, ಹೂವಿನ ಕುಂಡಗಳನ್ನಿರಿಸಿದ ಪ್ರತಿಯೊಂದು ಟೇಬಲ್ಲಿನ ಸುತ್ತಲೂ ಜನ ಆರಾಮವಾಗಿ ತಿನ್ನುತ್ತ ಕುಡಿಯುತ್ತ ಮಾತಾಡುತ್ತಿದ್ದರು. ಯಾವ ಮೇಜು ಖಾಲಿಯಾದೀತೆಂದು ಕಣ್ಣುಗಳು ಹುಡುಕುನೋಟ ಬೀರುತ್ತಿದ್ದುವು. ಅರ್ಧ ಗಂಟೆಯ ನಂತರ, ಒಂದು ಮೂಲೆಯ ಗಾಜಿನ ಪರದೆಯ ಬಳಿ ಎರಡು ಕುರ್ಚಿಗಳು ಖಾಲಿಯಾದಾಗ ನಾವು  ಹೋಗಿ ಕೂತೆವು. ಎದುರಿಗೇ  ಕಾಣುತ್ತಿತ್ತು ಕೆಂಪು ಚೌಕದ  ಪ್ರವೇಶದ್ವಾರ – ಗಾಜಿನ ದೊಡ್ಡ ಹಾಳೆಯ ಆಚೆಗೆ. ಬೀದಿಯಲ್ಲಿನ ವಾಹನಗಳು, ಬದಿಯ ರಸ್ತೆಯಂಚಿನಲ್ಲಿ ಓಡಾಡುವ ಜನರು – ಇವುಗಳನ್ನು ನೋಡುತ್ತ, ನಮ್ಮ ಟೇಬಲ್ಲಿಗೆ ಸಂಬಂಧಿಸಿದ ಪರಿಚಾರಕ ಮಹಿಳೆಗಾಗಿ ಕಾದೆವು. ಕಡೆಗೂ ಇಪ್ಪತ್ತು ನಿಮಿಷದ ನಂತರ ಬಂದಳು ಒಬ್ಬಾಕೆ. ಬಂದು ಪುಸ್ತಕವನ್ನು  ಮುಂದೆ ಇರಿಸಿ ಕಾಣೆಯಾದಳು. ವೊಲೋಜ ಆ ಪುಸ್ತಕವನ್ನು ತಿರುವಿಹಾಕಿ ತರಿಸಬೇಕಾದ ಖಾದ್ಯ ವಸ್ತುಗಳ ಪಟ್ಟಿಯನ್ನು ಪರಿಶೀಲಿಸುತ್ತ ‘ನಿಮಗೆ?’ ಎಂದ. ‘ನನಗೆ ! ಗೊತ್ತೇ ಇದೆಯಲ್ಲ. ನಾನು ತಿನ್ನುವುದೇನಾದರೂ ಇದೆಯೋ ನೋಡಪ್ಪ’ ಎಂದೆ. ನಾನು ತಿನ್ನುವುದೇನು? ಅದೇ ರೀಸ್ (ಅನ್ನ), ಸ್ಮಿತಾನ (ಹಾಲಿನ ಕೆನೆ), ಕೀಫಿರ್ (ಮೊಸರು), ತೂಮತೊ ಸಲಾದ್ (ಟೊಮ್ಯಾಟೋ ಸಲಾಡ್), ಜಲ್ಯೋನಿಗರಶೋಕ್ (ಬೇಯಿಸಿದ ಬಟಾಣಿ ಕಾಳು). ಈ ಪಟ್ಟಿಯನ್ನು ಬಾಯಿಪಾಠ ಮಾಡಿದ್ದೆ ! ವೊಲೋಜ ನಕ್ಕು ಸುಮ್ಮನಾದ. ಸುಮಾರು ಇಪ್ಪತ್ತು ನಿಮಿಷವಾದ ಮೇಲೆ ಮತ್ತೆ ಆ ಅನ್ನಪೂರ್ಣೆ ಬಂದಳು. ಸಣ್ಣ ಹಾಳೆಗಳಲ್ಲಿ ನಮಗೆ ಒದಗಿಸುವ ಆಹಾರ ಪದಾರ್ಥಗಳನ್ನು ಬರೆದುಕೊಂಡಳು. ಬರೆದುಕೊಳ್ಳುತ್ತಿದ್ದ ಆಕೆ ಪ್ರಶ್ನಾರ್ಥಕವಾಗಿ  ವೊಲೋಜನನ್ನು ಕುರಿತು ಏನೇನೋ ಮಾತಾಡತೊಡಗಿದಳು. ‘ಏನು ಸಮಾಚಾರ’ ಎಂದೆ ವೊಲೋಜನಿಗೆ, ‘ಏನೂ ಇಲ್ಲ, ನಿಮಗೆ, ಶಾಖಾಹಾರಿಗೆ, ಬರೀ ಅನ್ನ ಇತ್ಯಾದಿ ಬೇಕು ಎಂದೆ. ಆದರೆ ಆಕೆ ‘ಅನ್ನವನ್ನು ಮಾಂಸದ ಜತೆಯಲ್ಲೇ ಕೊಡುವುದು; ಬರೀ ಅನ್ನ ಕೊಟ್ಟರೆ ನಾನು ಹೇಗೆ ಬಿಲ್ ಮಾಡಲಿ’, ಅನ್ನುತ್ತಾಳೆ’ ಎಂದ. ನನಗೆ ಗಾಬರಿಯಾಯಿತು. ‘ಮಹಾರಾಯ, ಹಾಗಾದರೆ ನನಗೆ ಅನ್ನವೇ ಬೇಡ’ – ಎಂದೆ. ಕಡೆಗೆ ಇನ್ನೇನನ್ನು ಮಾತನಾಡಿದನೋ ಆಕೆ ಒಪ್ಪಿಕೊಂಡಂತೆ ತೋರಿತು; ತಲೆ ಅಲ್ಲಾಡಿಸಿ ಒಳಗೆ ಹೋದಳು.

ವೊಲೋಜ ಮತ್ತೆ ಕೇಳಿದ: ‘ನೀವು  ಮಾಂಸ ತಿನ್ನುವುದಿಲ್ಲವಲ್ಲ ಯಾಕೆ?’

‘ಯಾಕೆಂದರೆ ? ನನಗೆ ಸೇರುವುದಿಲ್ಲ.’

‘ಬಹುಶಃ ನೀವು ತುಂಬಾ ರಿಲಿಜಿಯಸ್ ಎಂದು ಕಾಣುತ್ತದೆ. ಅದಕ್ಕಾಗಿ ತಿನ್ನುವುದಿಲ್ಲ ಅಲ್ಲವೆ ?’

‘ಛೇ ಛೇ ಹಾಗೇನಿಲ್ಲ. ನಾನು ರಿಲಿಜಿಯಸ್ ಅಲ್ಲವೇ ಅಲ್ಲ ; ನನಗೆ ಅಭ್ಯಾಸವಿಲ್ಲ; ಅದಕ್ಕೆ ತಿನ್ನುವುದಿಲ್ಲ.’

‘ನಾನು ತಿನ್ನುವುದನ್ನು ಕಂಡರೆ ನಿಮಗೆ ಸೇರುತ್ತದೆಯೆ ?’

‘ಖಂಡಿತ. ಇತರರು ತಿನ್ನುವುದರ ಬಗ್ಗೆ ನನಗೇನೂ ಆಕ್ಷೇಪಣೆಯಿಲ್ಲ. ಅದು ಅವರವರ ವಯ್ಯಕ್ತಿಕ ರುಚಿಗೆ ಸಂಬಂಧಿಸಿದ್ದು.’

‘ನಿಮ್ಮ ಮನೆಯಲ್ಲೆ ಯಾರಾದರೂ ತಿನ್ನುತ್ತೇವೆ ಅಂದರೆ; ಒಂದು ವೇಳೆ ನಿಮ್ಮ ಮಕ್ಕಳೇ ತಿನ್ನುತ್ತೇವೆ ಅಂದರೆ ?’

‘ತಿನ್ನಲಿ’ ನನ್ನ ಆಕ್ಷೇಪಣೆಯೇನಿಲ್ಲ. ಹಾಗೆಂದು ನಾನು ಮನೆಯಲ್ಲಿ ಅಡುಗೆ ಮಾಡಿ ಬಡಿಸಿ ಎನ್ನಲಾರೆ.’

‘ಹಾಗಾದರೆ, ನಿಮ್ಮ ಮತ – ಧರ್ಮವೇ ಇದಕ್ಕೆ ಕಾರಣವಿರಬೇಕು.’

‘ಹೇಳಿದೆನಲ್ಲ, ಈ ಬಗ್ಗೆ ನಾನು ‘ರಿಲಿಜಿಯಸ್’ ಅಲ್ಲ ; ಬೇರೆ ವಯ್ಯಕ್ತಿಕ ಕಾರಣಕ್ಕಾಗಿ ಎಂದು.’

‘ಇದು ತುಂಬಾ ವಿಲಕ್ಷಣವಪ್ಪ; ನೀವೆಲ್ಲ ಬಹಳ ವಿರೋಧಾಭಾಸದ ಜನ’

‘ನಿಜ; ಭಾರತೀಯರಾದ ನಾವು ನಿಮಗೆ ತುಂಬಾ ವಿರೋಧಾಭಾಸದ ಜನವೇ.’

ವೊಲೋಜನ ಮಾತು ನಿಜ. ನಾನು ಮಾಂಸ ತಿನ್ನುವುದಿಲ್ಲ ಎನ್ನುವುದಕ್ಕೆ ನಿಜವಾದ ಕಾರಣ ನಾನು ಹುಟ್ಟಿ ಬೆಳೆದ ಧಾರ್ಮಿಕ ಪರಂಪರೆಯೆ ಇರಬೇಕು. ನಾನು ಬುದ್ಧಿ ಪೂರ್ವಕವಾಗಿ ಅದನ್ನು ನಿರಾಕರಿಸಿದರೂ, ನಾನು ಮಾಂಸ ತಿನ್ನದೆ ಇರಲು ಮುಖ್ಯ ಕಾರಣ, ಈ ಧಾರ್ಮಿಕ ಸಂಸ್ಕಾರವಲ್ಲದೆ ಬೇರೇನೂ ಇರಲಾರದು. ಆದರೆ ಇದೆಲ್ಲಕ್ಕೂ ಮುಖ್ಯವಾದದ್ದು, ಪ್ರಬಲವಾದದ್ದು ವಯ್ಯಕ್ತಿಕವಾದ ಒಂದು ನಿಲುವು ಕೂಡ.

ಗಂಟೆ ಎರಡೂವರೆಯಾಗಿತ್ತು. ವೊಲೋಜ ತನ್ನೆದುರು ಪ್ರತ್ಯಕ್ಷವಾದ ಕೋಳಿಯ ಸಾರನ್ನು ಚಪ್ಪರಿಸುತ್ತಿದ್ದ. ಅದರಿಂದ ಹೊರಟ ವಾಸನೆ ಸೊಗಸಾಗಿಯೇ ಇತ್ತು. ನಾನು ನನ್ನ ಅನ್ನ ಬರುವುದನ್ನು ಕಾಯುತ್ತಿದ್ದೆ. ಕೆಫೆಯ ಬಾಗಿಲಲ್ಲಿ ಇನ್ನೂ ಕ್ಯೂ ನಿಂತಿತ್ತು. ಬಾಗಿಲಲ್ಲಿ ಜನ ನಿಂತಿದ್ದಾರಲ್ಲ; ನಾವಾದರೂ ಬೇಗ ಮುಗಿಸಿ ಕಾಯುವವರಿಗೆ ಸ್ಥಳ ಕೊಡೋಣ ಎಂಬ ಕನಿಕರ ಕಾತರ ಯಾರ ಮುಖದಲ್ಲೂ ಮೂಡಿದಂತೆ ತೋರಲಿಲ್ಲ. ಟೇಬಲ್ಲಿನ ಮೇಲೆ, ನಾನೆಂದೂ ಕಾಣದ ಬಗೆಬಗೆಯ ಆಹಾರ ಪದಾರ್ಥಗಳು  ಜಮಾಯಿಸುತ್ತಲೇ ಇದ್ದವು. ಮಾರುದ್ದದ ಮೀನನ್ನು ಪ್ಯಾಕ್ ಮಾಡಿಸಿ ಚೀಲಕ್ಕೆ ತುರುಕುತ್ತಿದ್ದಳು ಒಬ್ಬಾಕೆ. ತಟ್ಟೆಯ ಮೇಲೆ ಕೈಕಾಲು ಸೆಟೆದ, ಬೇಯಿಸಿದ ಬಾತುಕೋಳಿಯನ್ನು ಚಾಕಿನಿಂದ ಕೊಯ್ದು ಬಾಯೊಳಗೆ ತೂರಿಸುತ್ತಿದ್ದ ಮತ್ತೊಬ್ಬ. ಲೋಳೆಲೋಳೆಯಾದ ಏನನ್ನೋ ಪೋರ್ಕುಗಳಿಂದ ಜೋತಾಡಿಸುತ್ತ ನುಂಗುತ್ತಿದ್ದರು ಇನ್ನೊಂದು  ಮೇಜಿನ ಮೇಲೆ. ಈ ಎಲ್ಲವನ್ನು ಕಣ್ಣಾಡಿಸುವ ವೇಳೆಗೆ ನನಗೆ ಬಂತು ಒಂದು ಪ್ಲೇಟಿನ ತುಂಬ ಅನ್ನ ಇತ್ಯಾದಿ. ವೊಲೋಜ ಒಂದು ಸುತ್ತು ಮುಗಿಸಿ ಎರಡನೆಯ ಸುತ್ತಿಗೆ ಕಾಯುತ್ತಿದ್ದ.

ಅಂತೂ ನಮ್ಮ ಊಟ ಮುಗಿಯುವ ವೇಳೆಗೆ ಮೂರು ಗಂಟೆ ದಾಟಿತ್ತು. ಒಂದೂವರೆ ಗಂಟೆಗೂ ಮೀರಿದ ಕಾಲವನ್ನು ನುಂಗಿತ್ತು ನಮ್ಮ ಊಟ. ಊಟ ಮುಗಿದ ಮೇಲೆ ಬಿಲ್ ಕೊಡಲು ಮತ್ತೆ ಹದಿನೈದು ನಿಮಿಷ.

ಕೆಫೆಯಿಂದ ಹೊರಟು, ವಿಸ್ತಾರವಾದ ರಸ್ತೆಯನ್ನು ಕೆಳಗಿನ ಸುರಂಗ ಮಾರ್ಗದ ಮೂಲಕ ದಾಟಿ, ಮೆಟ್ರೋ ಸ್ಟೇಷನ್ ಒಂದರಿಂದ, ಯಥಾ ಪ್ರಕಾರ ಚಲಿಸುವ ಮೆಟ್ಟಿಲ ಮೇಲೆ ನಿಂತು, ಐನೂರು ಅಡಿ ಪಾತಾಳ ಪ್ರವೇಶ ಮಾಡಿ ಮೆಟ್ರೋದಲ್ಲಿ ಕೂತೆವು. ಇಪ್ಪತ್ತು ನಿಮಿಷದಲ್ಲಿ ಮಾಸ್ಕೋ ವಿಶ್ವವಿದ್ಯಾಲಯದ ನಿಲ್ದಾಣದಲ್ಲಿ ಇಳಿದು, ಮತ್ತೆ ಮೇಲಕ್ಕೇರಿ ರಸ್ತೆಯನ್ನು ದಾಟಿ, ವಿಶ್ವವಿದ್ಯಾಲಯದ ಸುತ್ತ ಚಾಚಿಕೊಂಡ ಉದ್ಯಾನದಲ್ಲಿ ನಡೆದೆವು. ಹಚ್ಚ ಹಸುರಿನ ದಟ್ಟವಾದ ಮರಗಳ ದಾರಿಯಲ್ಲಿ ನಡೆದು, ವಿಶ್ವವಿದ್ಯಾಲಯಕ್ಕೆ ಸಮೀಪದಲ್ಲಿ ಅರ್ಧ ಚಂದ್ರಾಕಾರವಾಗಿ ಹರಿಯುವ ಮಾಸ್ಕ್ವಾ ನದಿಯ ದಂಡೆಯ ಮೇಲೆ ನಿಂತೆವು. ಹಸುರು ಮರಗಳ ಕಾಡಿನಿಂದ ಅಂಚಿತವಾದ ಮಾಸ್ಕ್ವಾ ನದಿ ಕೆಳಗೆಲ್ಲೋ ಪ್ರವಹಿಸುತ್ತಿತ್ತು. ಅದರಾಚೆಯ ದಡದ ಹಸುರಿನ ಏರುವೆಯ ನಂತರ ಚಕ್ರಾಕಾರವಾದ ಸ್ಟೇಡಿಯಂ, ಅದರಾಚೆಗೆ ತೆಳ್ಳನೆಯ ಮಬ್ಬಿನಲ್ಲಿ ಮೈಚಾಚಿದ ಮಹಾ ನಗರ ಮಾಸ್ಕೋ.

ಈ ನದಿಯ ದಡದ ಕಟಕಟೆಯ ಮೇಲೆ ನಿಂತು, ಪಶ್ಚಿಮ ದಿಗಂತದ ಬಾನಲ್ಲಿ ಕೆತ್ತಿದ ಮಹಾ ಶಿಲ್ಪದಂತೆ ಕಾಣುವ ಮಾಸ್ಕೋ ವಿಶ್ವವಿದ್ಯಾಲಯದ ಭವ್ಯವಾದ ಕಟ್ಟಡವನ್ನು ನೋಡುತ್ತ ನಿಂತೆವು. ಸಂಜೆಯಾದಂತೆ ಜನ ಬಂದು ಸೇರತೊಡಗಿದರು. ಇದ್ದಕ್ಕಿದ್ದ ಹಾಗೆ ಒಂದಾದ ಮೇಲೊಂದು ಮದುವೆಯ ಕಾರುಗಳು ಬರತೊಡಗಿದವು. ಕಾರಿನ ಮುಂದೆ ಕಟ್ಟಿದ ಮುದ್ದಾದ ಬೊಂಬೆ; ಕಾರಿನ ಮೇಲೆ ಬಣ್ಣದ ಟೇಪುಗಳು. ಕಾರಿನ ಬಾಗಿಲು ತೆರೆದು ಅಚ್ಚ ಬಿಳಿಯ ವಧುವಿನುಡುಗೆಯುಟ್ಟ ಕೆಂಪನೆ ಹೆಣ್ಣು; ಅವಳ ಕೈಯಲ್ಲಿ ಕೈಹಾಕಿ ನಡೆಯುವ ಲಕ್ಷಣವಾದ ಗಂಡು. ಮದುವೆಗೆಂದು ಬಂದ ಇಷ್ಟ ಮಿತ್ರರು. ವಧೂವರರು ಮಾಸ್ಕ್ವಾ ನದಿಯ ದಂಡೆಯ ವಿಸ್ತಾರವಾದ ಕಟಕಟೆಯನ್ನೊರಗಿ ನಿಲ್ಲುತ್ತಾರೆ. ನದಿಯ ಕಡೆಗೆ ವಧೂವರರು ನೋಡುತ್ತಾರೆ. ಅವರ ಇಷ್ಟ ಮಿತ್ರರೋ, ಬಂಧು ಬಳಗದವರೋ ಕ್ಯಾಮರಾದಲ್ಲಿ ಫೋಟೋ ತೆಗೆಯುತ್ತಾರೆ. ಇದೇನು ಮದುವೆಯ ಒಂದು ಧಾರ್ಮಿಕ ವಿಧಿಯೋ, ಅಥವಾ ಸಂಪ್ರದಾಯವೋ ತಿಳಿಯಲಿಲ್ಲ.  ವೊಲೋಜನನ್ನು ಕೇಳಿದರೆ, ತನಗೆ ಗೊತ್ತಿಲ್ಲ ಎಂದ. ಇಪ್ಪತ್ತು ನಿಮಿಷಗಳಲ್ಲಿ, ಹದಿನೈದು ಇಂಥ ಮದುವೆಯ ಕಾರುಗಳು ಬಂದು ಹೋದವು. ಎಲ್ಲರದೂ ಒಂದೇ ಥರ : ಶುಭ್ರ ಶ್ವೇತವಸನದಲ್ಲಿ ಕಿತ್ತಲೆ ಬಣ್ಣದ ಮುದ್ದಾದ ಮದುವೆಯ ಹೆಣ್ಣು ; ಅವಳ ಕೈ ಹಿಡಿದ ಉತ್ಸಾಹದ ಗಂಡು. ಅವರನ್ನು ಮದುವೆ ಆದವರು, ಆಗಲಿರುವವರು, ಆಗದವರು, ಕುತೂಹಲದಿಂದ, ವಾತ್ಸಲ್ಯದಿಂದ ನೋಡುತ್ತಾರೆ. ನದಿಯ ದಡದಲ್ಲಿ ನಿಂತು, ಕೆಳಗೆ ಪ್ರವಹಿಸುವ ನದಿಯನ್ನು ಸ್ವಲ್ಪ ಹೊತ್ತು ನೋಡಿ ಗಂಡನ ಕೈಯಲ್ಲಿ ಕೈ ಹಾಕಿಕೊಂಡು ಕಾರೊಳಗೆ ಹೋಗುತ್ತಾಳೆ ಮದುವೆಯ ಹೆಣ್ಣು. ನಾಲ್ಕು ಗಾಲಿಗಳೂ ಉರುಳುತ್ತವೆ ಸಲೀಸಾಗಿ.

‘ಇದೇನು ಇಷ್ಟೊಂದು ಮದುವೆಗಳು ಈ ದಿನ ? ಇದೇನು ಮದುವೆಗೆ ಶುಭ ದಿನವೇ’ – ಎಂದೆ. ‘ಶುಭ – ಅಶುಭ ಎಂಬುದೇನೂ ಗೊತ್ತಿಲ್ಲ. ಈ ದಿನ ಶನಿವಾರ. ಶನಿವಾರ – ಭಾನುವಾರಗಳೆರಡೂ ಇಲ್ಲಿ ರಜಾ ದಿನಗಳು ತಾನೆ. ರಜಾ ದಿನವಾದ್ದರಿಂದ ಮದುವೆಗೆ ಅನುಕೂಲ’ – ಎಂದ ವೊಲೋಜ.