ಅಣುಬಾಂಬಿನಾಸ್ಫೋಟನೆಗೆ ಹುಡಿಯಾಯ್ತು
ಹಿರೋಷಿಮಾ. ಲೋಕದ ಕರುಳು ಕಣ್ಣೀರಿಟ್ಟು
ಗಾಯದಲ್ಲಿ ನರಳಿತೊಂದೈದಾರು ವರ್ಷ.
ಯುದ್ಧ ಮುಗಿಯಿತು ; ಸತ್ತವರ ಹುಗಿದು
ಸ್ಮಾರಕ ಕಟ್ಟಿ, ಗೆದ್ದವರನಭಿನಂದಿಸಿ
ಬಿರುದು-ಬಾವಲಿ ಕೊಟ್ಟು, ಗಾಯಗೊಂಡುಳಿ-
ದವರ ನರಳು ನಾಲ್ಕು ದಿನ ಆಸ್ಪತ್ರೆ ಗೋಡೆಗೆ
ಬಡಿದು, ಸಾಹಸವೋ, ಕ್ರೌಯವೋ, ಕಷ್ಟನಷ್ಟವೋ,
ಹಗಲಿರುಳ ಮನದ ಮೆಲುಕಾಗಿ, ಕಡೆಗೆ ನೆನಪಾಗಿ,
ಮುರಿದ ಕಟ್ಟಡವೆಲ್ಲ ರಿಪೇರಿಯಾಗಿ, ಮತ್ತೆ
ಯಥಾಪ್ರಕಾರ ಸಾಗಿದೆ ಬದುಕು. ನನಗೂ
ನಿನಗೂ ಆಗಿರುವ ಈ ‘ಅನ್ಯಾಯ’ ಅವರಿವರ
ತುಟಿಮರುಕದಲ್ಲೆರಡು ದಿನ ತಂಗಿ, ಕಡೆಗೆ
ಮರೆವಿನ ಮರಳುಗಾಡಲ್ಲಿಂಗಿ ಮರೆಯಾಗುವುದು.
ಕಾಡು ಬೇಗೆಗೆ ಸುಟ್ಟು ಕರುಕಾದ ಬೆಟ್ಟದ ಮುಡಿಗೆ
ಮಳೆ ಹೊಯ್ದು ಮತ್ತೆ ಹೊಸ ಹಸಿರು ಮೂಡುವುದು.