ಭಾರತೀಯ ಸಂದರ್ಭದಲ್ಲಿ ದ್ವಿತೀಯ ಭಾಷೆ

ಮಾತೃ ಭಾಷೆಯಲ್ಲದ ಇತರ  ಭಾಷೆಗಳನ್ನು ಕಲಿಯುವುದು ಆದಿ ಯಿಂದಲೂ ಮಾನವ ಕುಲಕ್ಕೆ ಮುಖ್ಯವಾದ, ಅವಶ್ಯವಾದ ಚಟುವಟಿಕೆ. ಯಾವುದೇ ಎರಡು ಸಂಸ್ಕೃತಿಗಳು ಮುಖಾಮುಖಿಯಾದಾಗ ಅವುಗಳ ನಡುವಿನ ಕೊಡುಕೊಳೆ ಸಾಧ್ಯವಾಗಿರುವುದು ದುಭಾಷಿ ಅಥವಾ ದ್ವಿಭಾಷಿಕರ ಮೂಲಕವೇ. ಅದರಲ್ಲಿಯೂ ಭಾರತದಂತಹ ಬಹುಭಾಷಿಕ ಸಮಾಜದಲ್ಲಿ ಇತರ ಭಾಷೆಗಳ ಜ್ಞಾನ ಹಾಗೂ ಬಳಕೆ ಉಸಿರಾಟದಷ್ಟು ಸಹಜ. ಅಧಿಕೃತವಾಗಿಯೂ, ನಮ್ಮ ಸಾಮಾನ್ಯ ಶಿಕ್ಷಣ ತ್ರಿಭಾಷಾ ಸೂತ್ರವನ್ನು ಅನುಸರಿಸುತ್ತದೆ ಅಂದರೆ, ಶಿಕ್ಷಣ ಪಡೆದ ಪ್ರತಿಯೊಬ್ಬ ಪ್ರಜೆಯೂ ತನ್ನ ನಾಡಭಾಷೆ, ರಾಷ್ಟ್ರಭಾಷೆ ಹಿಂದಿ ಹಾಗೂ ಅಂತಾರಾಷ್ಟ್ರೀಯ ಭಾಷೆಯಾದ ಇಂಗ್ಲಿಶ್ ಈ ಮೂರನ್ನೂ ಕಲಿಯುವ ಅವಕಾಶವಿದೆ. ಸಂವಿಧಾನದ ಎಂಟನೇ ಅನುಚ್ಛೇದದ ಪ್ರಕಾರ ಭಾರತದ 22 ಭಾಷೆಗಳಿಗೆ ಮಾನ್ಯತೆ ಸಿಕ್ಕಿದ್ದರೂ, ನಮ್ಮ ದೇಶದಲ್ಲಿ ಬಳಕೆಯಲ್ಲಿರುವ ಭಾಷೆಗಳ ಸಂಖ್ಯೆ 1600ಕ್ಕೂ ಮೀರಿದೆ. ಅಲ್ಲದೆ, ನಮ್ಮಲ್ಲಿ ಎಷ್ಟೋ ಜನರಿಗೆ ಮನೆಮಾತು, ನಾಡುಮಾತು ಒಂದೆ ಆಗಿರುವುದಿಲ್ಲ. ಉದಾಹರಣೆಗೆ, ದಕ್ಷಿಣ ಕನ್ನಡ ಪ್ರದೇಶದಲ್ಲಿ ಅನೇಕರು ಕೊಡವ, ತುಳು, ಕೊಂಕಣಿ ಇವುಗಳನ್ನು ಮನೆಮಾತಾಗಿ ಬಳಸಿ, ನಾಡಭಾಷೆಯಾಗಿ ಕನ್ನಡ ಕಲಿಯುತ್ತಾರೆ. ಕಾಸರಗೋಡು, ಬೆಳಗಾವಿ, ಕೋಲಾರ, ಹೊಸೂರು ಮುಂತಾದ ಗಡಿನಾಡ ಪ್ರದೇಶದವರಿಗೆ, ಅವರು ವಾಸಿಸುವ ಪರಿಸರದಲ್ಲೆ ಎರಡು, ಮೂರು ಭಾಷೆಗಳ ಒಟನಾಟ ಇದ್ದೇ ಇರುತ್ತದೆ. ಆದ್ದರಿಂದ ನಾವು ದ್ವಿತೀಯ ಭಾಷೆ ಎಂಬ ಪಾರಿಭಾಷಿಕ ಪದವನ್ನು ಬಹುಭಾಷಿಕತೆಯ ಸಂಕೀರ್ಣ ವಿನ್ಯಾಸದ ಈ ಹಿನ್ನೆಲೆಯಲ್ಲಿಟ್ಟು ನೋಡಬೇಕಾಗುತ್ತದೆ.

ಹಾಗಾದರೆ ದ್ವಿತೀಯ ಭಾಷೆಯ ಪರಿಕಲ್ಪನೆ ಬಂದದ್ದು ಎಲ್ಲಿಂದ? ಅದು ಹುಟ್ಟಿ ಬಂದಿರುವುದು ಪ್ರಮುಖವಾಗಿ ಏಕಭಾಷಾ ಪರಿಸರ ಹೊಂದಿರುವ ಪಶ್ಚಿಮ ಯುರೋಪಿನ ಚಾರಿತ್ರಿಕ ಸಂದರ್ಭದಿಂದ. ಪಶ್ಚಿಮ ಯುರೋಪಿನ ದೇಶಗಳು ರಾಷ್ಟ್ರಗಳಾಗಿ ವಿಂಗಡ ವಾಗಿರುವುದೇ ಅವುಗಳ ಭಾಷಿಕ ವ್ಯತ್ಯಾಸಗಳಿಂದಾಗಿ. ಫ್ರೆಂಚ್, ಜರ್ಮನ್, ಸ್ಪ್ಯಾನಿಶ್, ಇಂಗ್ಲಿಶ್ ಹೀಗೆ ಈ ಭಾಷೆಗಳು ಆಯಾ ರಾಷ್ಟ್ರಗಳ ಗಡಿಯನ್ನು ಬೇರ್ಪಡಿಸಿವೆ. ಹಾಗೆ ಭಾರತಕ್ಕೆ ಭಾರತೀಯ ಎನ್ನಬಹುದಾದ ಯಾವುದೇ ಒಂದು ಭಾಷೆ ಇಲ್ಲ. ಸಂಸ್ಕೃತ  ಒಂದು ಕಾಲದಲ್ಲಿ ಪ್ರಮುಖ ಭಾಷೆಯಾಗಿದ್ದರೂ ಅದು ಕೇವಲ ರಾಜಕೀಯವಾಗಿ, ಹಾಗೂ ಬ್ರಾಹ್ಮಣ ಸಂಸ್ಕೃತಿಯ ಪ್ರಬಲ ಭಾಷೆಯಾಗಿತ್ತೇ ವಿನಾ ಭರತ ಖಂಡದ ಜನಮನದಲ್ಲಿ ನೆಲೆಸಿದ ಏಕೈಕ ಭಾಷೆಯಾಗಿರಲಿಲ್ಲ. ಅಲ್ಲದೆ, ದಕ್ಷಿಣ ಭಾರತದಲ್ಲಿ ದ್ರಾವಿಡ ಸಂಸ್ಕೃತಿಯ ಪ್ರಮುಖ ಭಾಷೆಯಾದ ತಮಿಳು ಬಹು ಹಿಂದಿನಿಂದಲೂ ಇದ್ದೇ ಇತ್ತು. ಇಂದಿನ ಸಂದರ್ಭದಲ್ಲಿ ನಮಗೆ ಸಂವಹನಕ್ಕೆ ಹಿಂದಿಯ ಜೊತೆ ಇಂಗ್ಲಿಶ್ ಲಭ್ಯವಿದೆ. ಹೀಗೆ ಅಂದಿನಿಂದ ಇಂದಿವರೆಗೂ ಭಾರತದ ಸಂಸ್ಕೃತಿ, ಚರಿತ್ರೆಯ ಮುಖ್ಯ ಲಕ್ಷಣವೆಂದರೆ ಅದರ ಬಹುಭಾಷಿಕತೆ. ಇಂತಹ ಪರಿಸರದಲ್ಲಿ ದ್ವಿತೀಯ ಭಾಷೆ ಎಂದರೆ ಯಾವುದು ಮತ್ತು ಅದನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ನಾವು ಸ್ಪಷ್ಟವಾಗಿ ಆಲೋಚಿಸಬೇಕು.

ಯಾವುದೇ ಭಾಷೆ ಹಾಗೂ ವ್ಯಕ್ತಿ ಭಾಷಿಕ ಸಮುದಾಯ ಇವುಗಳ ನಡುವಿನ ಹಲವು ರೀತಿಯ ಸಂಬಂಧಗಳನ್ನು ವಿವರಿಸಲು ದ್ವಿತೀಯ ಎಂಬ ಪದವನ್ನು ಬಳಸಲಾಗುತ್ತಿದೆ. ಅದಕ್ಕೆ ಪ್ರಥಮ ಭಾಷೆಗಿಂತ ಅಥವಾ ಭಾಷೆ 1 ಕ್ಕಿಂತ ಭಿನ್ನವಾದ್ದು ಎಂಬ ಅರ್ಥವಿದೆ. ಭಾಷೆ 1 ಕ್ಕೆ ಮೊದಲ ಭಾಷೆ, ಮಾತೃಭಾಷೆ, ದೇಶೀ ಭಾಷೆ, ಪ್ರಮುಖ ಭಾಷೆ, ಹೆಚ್ಚಿನ ಪ್ರಾವೀಣ್ಯವಿರುವ ಭಾಷೆ ಎಂಬ ಅರ್ಥವಿದ್ದರೆ ಭಾಷೆ 2 ಕ್ಕೆ ಅಥವಾ ದ್ವಿತೀಯ ಭಾಷೆಗೆ ಎರಡನೆಯ, ವಿದೇಶಿಯವಾದ, ಗೌಣ, ಸಶಕ್ತವಲ್ಲದ, ಹೆಚ್ಚಿನ ಪರಿಣತಿ ಇರದ ಭಾಷೆ ಎಂಬ ಹಲವು ಅರ್ಥ ಸಾಧ್ಯತೆಗಳಿವೆ. ಉದಾಹರಣೆಗೆ, ಈ ವಾಕ್ಯಗಳನ್ನು ಗಮನಿಸಬಹುದು.

1. ತಮಿಳು ನನ್ನ ತಾಯ್ನುಡಿ

2. ಅವನ ಪ್ರಥಮ ಭಾಷೆ ಬಂಗಾಳಿ

ಈ ಎರಡು ವಾಕ್ಯಗಳನ್ನು ಓದಿದಾಗ, ಸಾಮಾನ್ಯವಾಗಿ ನಾವು ಎರಡು ವಿಷಯಗಳನ್ನು ತಿಳಿಯುತ್ತೇವೆ ಒಂದು, ಈ ವ್ಯಕ್ತಿಗಳು ತಮ್ಮ ಚಿಕ್ಕ ವಯಸ್ಸಿನಲ್ಲೇ ಕುಟುಂಬದ ಪರಿಸರದಲ್ಲಿ ಆಯಾ ಭಾಷೆಗಳನ್ನು ಗಳಿಸಿದ್ದಾರೆ. ಎರಡು, ಅವರಿಗೆ ಆಯಾ ಭಾಷೆಯಲ್ಲಿ ಪರಿಪೂರ್ಣ ಪ್ರಾವೀಣ್ಯವಿದೆ. ಅನೇಕರ ವಿಷಯದಲ್ಲಿ ನಾವು ಮಾಡುವ ಈ ಎರಡೂ ಊಹೆಗಳು ನಿಜವಾಗಿರುತ್ತದೆ. ಕೂಡ. ಈಗ, ಇನ್ನೆರಡು ವಾಕ್ಯಗಳನ್ನು ಗಮನಿಸಿ

3. ನನ್ನ ತಾಯ್ನುಡಿ ತಮಿಳಾದರೂ, ಕನ್ನಡವೇ ನನ್ನ ಮೊದಲ ಭಾಷೆ.

4. ಮರಾಠಿ ನನ್ನ ಮಾತೃಭಾಷೆ, ಆದರೆ ಈಗದು ಮರೆಯುತ್ತಾ ಬಂದಿದೆ.

ಈ ಉದಾಹರಣೆಗಳ ಮೂಲಕ ನಾವು ತಿಳಿಯಬೇಕಾದದ್ದು ಇಷ್ಟು ಭಾಷೆ-1 ಎನ್ನುವುದಕ್ಕೆ ಸ್ಪಷ್ಟವಾದ ಎರಡು ಅರ್ಥಗಳಿವೆ. ಅ. ಚಿಕ್ಕಂದಿನಲ್ಲಿ ಅಪ್ರಜ್ಞಾ ಪೂರ್ವಕವಾಗಿ ಗಳಿಸಿದ ಮೊದಲ ಭಾಷೆ, ಹಾಗೂ ಆ ವ್ಯಕ್ತಿಯ ಆಯ್ಕೆಯ ಅಥವಾ ಪ್ರಾವೀಣ್ಯದ ಭಾಷೆ. ಎರಡನೆಯಕ್ಕೆ ಉದಾಹರಣೆಯಾಗಿ, ತಮಿಳು ಮನೆಮಾತಾಗಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರರು ಹಾಗೂ ಮರಾಠಿ ಮನೆಮಾತಾಗಿದ್ದ ದ.ರಾ. ಬೇಂದ್ರೆ ಇವರಿಬ್ಬರೂ ಲೇಖಕರಾಗಿ ಪ್ರಸಿದ್ದಿ ಪಡೆದದ್ದು ಕನ್ನಡ ಭಾಷೆಯಲ್ಲಿ ಎಂಬುದನ್ನು ಇಲ್ಲಿ ನೆನೆಯಬಹುದು.

ದ್ವಿತೀಯ ಭಾಷೆ ಅಥವಾ ಭಾಷೆ 2 ಕೂಡ ಹೀಗೆಯೇ ಎರಡು ಪ್ರಮುಖ ಅರ್ಥ ಸಾಧ್ಯತೆಗಳನ್ನು ಹೊಂದಿದೆ. ಅ. ಅದು ಆ ಭಾಷೆ ದತ್ತವಾದ ಬಗೆಯ ವಿವರಣೆಯಾಗಬಹುದು. ಉದಾಹರಣೆಗೆ ಈ ವಾಕ್ಯಗಳನ್ನು ನೋಡಿ

5. ನಾವು ಶಾಲೆಯಲ್ಲಿ ಹಿಂದಿ ಕಲಿಯುತ್ತೇವೆ.

6. ಅವಳು ಸ್ವಂತವಾಗಿ ತೆಲುಗು ಕಲಿಯಲು ಪ್ರಯತ್ನಿಸುತ್ತಿದ್ದಾಳೆ.

7. ಅವರು ಒಂದು ವರ್ಷ ಪಂಜಾಬಿಗೆ ಹೋಗಿ ಇದ್ದು, ಪಂಜಾಬಿ ಕಲಿತು ಬರಲಿದ್ದಾರೆ.

ವಾಕ್ಯ 5 ಶಾಲೆಯಂತಹ ಒಂದು ವ್ಯವಸ್ಥಿತ ಸನ್ನಿವೇಶದಲ್ಲಿ ಭಾಷೆ 2ರ ಪ್ರಜ್ಞಾಪೂರ್ವಕವಾದ ಕಲಿಕೆಯನ್ನು ಸೂಚಿಸಿದರೆ, ವಾಕ್ಯ 6 ಸ್ವ ಅಧ್ಯಯನದ ರೀತಿಯನ್ನೂ, ವಾಕ್ಯ 7 ಅನೌಪಚಾರಿಕವಾಗಿ ಭಾಷೆ 2ನ್ನು ಕಲಿಯುವ ರೀತಿ ಯನ್ನು ಸೂಚಿಸುತ್ತವೆ. ಆ. ದ್ವಿತೀಯ ಭಾಷೆ ಎಂಬುದು ಭಾಷಿಕರ ಕಡಿಮೆ ಪ್ರಾವೀಣ್ಯವನ್ನು ಕೂಡ ಅನೇಕ ಬಾರಿ ಸೂಚಿಸುತ್ತದೆ. ಉದಾಹರಣೆಗೆ,

8. ಅವರು ಅಸ್ಸಾಮಿನವರು. ಅವರಿಗೆ ಕನ್ನಡ ಚೆನ್ನಾಗಿ ಅರ್ಥವಾಗುತ್ತದೆ. ಆದರೆ ಸುಮಾರಾಗಿ ಮಾತನಾಡುತ್ತಾರೆ.

ಒಟ್ಟಿನಲ್ಲಿ ದ್ವಿತೀಯ ಭಾಷೆ ಎಂಬ ಪಾರಿಭಾಷಿಕ ಪದ, ಹೀಗೆ ಭಾಷೆ ಕಲಿತ ಅನುಕ್ರಮ ಹಾಗೂ ಆ ಭಾಷೆಯಲ್ಲಿ ಪಡೆದಿರುವ ಪ್ರಾವೀಣ್ಯ ಇವೆರಡನ್ನೂ ಸೂಚಿಸಬಲ್ಲದು.

ದ್ವಿತೀಯ ಭಾಷೆ ಎಂಬುದನ್ನು ವಿದೇಶೀ ಭಾಷೆಯ ಪರಿಕಲ್ಪನೆಯೊದಿಗೆ ಹೋಲಿಸಿ, ಅದರ ಮತ್ತೊಂದು ಮುಖದ ಪರಿಚಯ ಮಾಡಿಕೊಳ್ಳಬಹುದು. ಭಾರತೀಯ ಸಂದರ್ಭದಲ್ಲಿ, ಜರ್ಮನ್ ಅಥವಾ ಜಪಾನೀ ಭಾಷೆಗಳು ವಿದೇಶೀ ಭಾಷೆಯಾದರೂ, ಇಂಗ್ಲಿಶ್ ವಿದೇಶೀ ಭಾಷೆಯಲ್ಲ. ಮೂಲತಃ ಇಂಗ್ಲಿಶ್ ಪರದೇಶದಿಂದ ಬಂದಿದ್ದರೂ, ಚಾರಿತ್ರಿಕವಾಗಿ ಅದು ಇಲ್ಲಿ ಪಸರಿಸಿದೆ. ನಮ್ಮ ಸಂವಿಧಾನ ಕೂಡ ಅದನ್ನು ಒಂದು ಭಾರತೀಯ ಭಾಷೆಯೆಂದೇ ಪರಿಗಣಿಸಿದೆ. ಜತೆಗೆ ಅದು ಸಾಮಾಜಿಕ ಆರ್ಥಿಕ ಬೆಳವಣಿಗೆಗೆ ಅನಿವಾರ್ಯ ಭಾಷೆಯಾಗಿ, ಸಾಂಸ್ಕೃತಿಕ ಮೇಲ್ವರ್ಗಗಳ ಪ್ರಬಲ ಭಾಷೆಯಾಗಿ ಭಾರತದಲ್ಲಿ ನೆಲೆ ಗೊಂಡಿರುವುದರಿಂದ, ನಾವು ಇಂಗ್ಲಿಶನ್ನು ಒಂದು ವಿದೇಶೀ ಭಾಷೆಯೆಂದು ಪರಿಗಣಿಸದೆ, ನಮ್ಮ ಪರಿಸರದ ಒಂದು ಭಾಷೆಯೆಂದೇ ಕಾಣುತ್ತೇವೆ. ಈ ಕಾರಣದಿಂದಾಗಿಯೇ, ದಕ್ಷಿಣದ ಈ ತುದಿಯಲ್ಲಿರುವ ಒಬ್ಬ ಮಲೆಯಾಳಂ ಭಾಷಿಕರಿಗೆ ಉತ್ತರ ಕಾಶ್ಮೀರೀ ಅಥವಾ ಪೂರ್ವದ ಅಸ್ಸಾಮಿ ಭಾಷೆಯೇ ಇಂಗ್ಲಿಶಿಗಿಂತ ಹೆಚ್ಚು ಪರಕೀಯವಾಗಿ ತೋರಿದರೆ ಆಶ್ಚರ್ಯವಿಲ್ಲ. ಆದ್ದರಿಂದ ದ್ವಿತೀಯ ಎಂಬ ಪದವನ್ನು ಹೆಚ್ಚು ವಿಸ್ತೃತವಾಗಿ, ಈ ಎಲ್ಲ ಸಂಕೀರ್ಣತೆ ಯನ್ನೂ ಒಳಗೊಳ್ಳುವಂತೆ ನಿರ್ವಹಿಸಬೇಕಾಗುತ್ತದೆ.

ಬಹು ಭಾಷಿಕವಾದ ಭಾರತೀಯ ಸಮಾಜದಲ್ಲಿ ದ್ವಿತೀಯ ಎಂಬ ಪರಿಕಲ್ಪನೆಯನ್ನು ಎರಡನೆಯದು ಎಂದು ಮಾತ್ರ ಅರ್ಥೈಸದೆ, ಮಾತೃಭಾಷೆಯ ನಂತರ ಬಂದ ಭಾಷೆ  ಅಥವಾ ಭಾಷೆಗಳು ಎಂದು ಕರೆಯುವುದೇ ಹೆಚ್ಚು ಸೂಕ್ತ. ಏಕೆಂದರೆ ದ್ವಿತೀಯ ಎಂದು ಕಲಿಯುವ ಗಳಿಸುವ ಭಾಷೆ ನಮ್ಮಲ್ಲ ನೇಕರಿಗೆ ಮೂರನೆಯದೋ, ನಾಲ್ಕನೆಯದೋ ಭಾಷೆಯಾಗಿರುವ ಸಂಭವವೇ ಹೆಚ್ಚು.

ಆದರೆ ಪ್ರಥಮ ಹಾಗೂ ದ್ವಿತೀಯ ಭಾಷೆಗಳು ದತ್ತವಾಗುವ ಪ್ರಕ್ರಿಯೆ ಯಲ್ಲಿ ಒಂದು ಮುಖ್ಯ ವ್ಯತ್ಯಾಸವಿದೆ. ಭಾಷೆ 1 ಅಪ್ರಜ್ಞಾಪೂರ್ವಕವಾಗಿ ತಾನಾಗಿ ಕುಟುಂಬದ ಪರಿಸರದಲ್ಲಿ, ಹುಟ್ಟಿದ ಮೊದಲೆರಡು ವರ್ಷಗಳಲ್ಲಿ ಗಳಿಸುವ ಭಾಷೆಯಾದರೆ, ಕಾಲಕ್ರಮದಲ್ಲಿ ಪ್ರಥಮ ಭಾಷೆ ಗಳಿಸಿದ ನಂತರ ಬರುವ ಭಾಷೆ 2, ಅಪ್ರಜ್ಞಾಪೂರ್ವಕವಾಗಿ ನೆರೆಹೊರೆಯ ಭಾಷಿಕ ಪರಿಸರದಿಂದ ಗಳಿಸಿದ್ದಾಗಿರಬಹುದು ಅಥವಾ ಪ್ರಜ್ಞಾಪೂರ್ವಕವಾಗಿ ವ್ಯವಸ್ಥಿತ ಶಿಕ್ಷಣದ ಮೂಲಕ ಕಲಿತದ್ದಾಗಿರಬಹುದು. ಹೀಗೆ ಗಳಿಕೆ ಪ್ರಥಮ ಭಾಷೆಯ ಮೂಲ ಲಕ್ಷಣವಾದರೆ, ಗಳಿಕೆ ಅಥವಾ ಕಲಿಕೆ ಇವೆರಡೂ ದ್ವಿತೀಯ ಭಾಷೆ ದತ್ತವಾಗುವ ಮೂಲ ಪ್ರಕ್ರಿಯೆಗಳು.

ಭಾಷೆ 2ರ ವಿಪರ್ಯಾಸವೆಂದರೆ, ಅನೇಕ ಸಲ, ಅನುದ್ದಿಶ್ಯವಾಗಿಯೂ ಪರಿಸರದಲ್ಲಿರುವ ಭಾಷೆಯೊಂದು ಕಿವಿಯ ಮೇಲೆ ಬೀಳುತ್ತಿದ್ದರೆ, ಅದನ್ನು ಪ್ರಯತ್ನವಿಲ್ಲದೆಯೂ ಗಳಿಸಿಬಿಡುತ್ತೇವೆ. ಅದೇ ಕಲಿಯಬೇಕೆಂದು ಪ್ರಯತ್ನಿಸಿ, 15 ವರ್ಷ ಶಾಲೆಗೆ ಹೋದಾಗಲೂ, ಆ ಭಾಷೆ ದಕ್ಕದೇ ಹೋಗಬಹುದು. ಉದಾಹರಣೆಗೆ, ಬೆಂಗಳೂರಿನಲ್ಲಿರುವ ಒಬ್ಬ ಹುಡುಗ ಕೆಲವು ಬಡಾವಣೆಗಳಲ್ಲಿ ಪ್ರಬಲವಾಗಿರುವ ತಮಿಳು ಭಾಷೆಯನ್ನು ಸುಲಲಿತವಾಗಿ ಕೇಳಿ ಕಲಿತು, ಅದರಲ್ಲಿ ವ್ಯವಹರಿಸುವಷ್ಟು ಪರಿಣತಿ ಗಳಿಸಿಬಿಡಬಹುದು. ಆದರೆ 15 ವರ್ಷದ ವಿದ್ಯಾಭ್ಯಾಸದ ನಂತರವೂ ಇಂಗ್ಲಿಶಿನಲ್ಲಿ ಯಾವ ಪರಿಣತಿಯನ್ನೂ ಸಾಧಿಸದೆ ಇರಬಹುದು. ಈ ಅಂಶ ದ್ವಿತೀಯ ಭಾಷಾ ಬೋಧನೆ ಹಾಗೂ ಕಲಿಕೆಯ ಪ್ರಕ್ರಿಯೆಯ ಕಡೆಗೆ ನಮ್ಮ ಗಮನ ಸೆಳೆಯುತ್ತದೆ. ಇನ್ನು ಮುಂದೆ, ವ್ಯವಸ್ಥಿತ ಶಿಕ್ಷಣದ ಸಂದರ್ಭದಲ್ಲಿ ದ್ವಿತೀಯ ಭಾಷೆಯನ್ನು ಕಲಿಯುವ ಸನ್ನಿವೇಶವನ್ನು ವಿಶ್ಲೇಷಿಸಬಹುದು.

ಈ ಚಿತ್ರದಲ್ಲಿ ದ್ವಿತೀಯ ಭಾಷಾ ಕಲಿಕೆಯ ಐದು ಪ್ರಮುಖ ಅಂಶಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 1. ಸಾಮಾಜಿಕ ಸಂದರ್ಭ 2. ಕಲಿಯುವವರ ಗುಣಲಕ್ಷಣಗಳು ಹಾಗೂ 3. ಕಲಿಯುವ ಸನ್ನಿವೇಶಗಳ 4. ಕಲಿಯುವ ಪ್ರಕ್ರಿಯೆ ಹಾಗೂ 5. ಕಲಿಕೆಯ ಪರಿಣಾಮಗಳನ್ನು ನೇರವಾಗಿ ನಿಂಯತ್ರಿಸುವ ರೀತಿಯನ್ನು ಪ್ರತಿನಿಧಿಸಲಾಗಿದೆ. ಉದಾಹರಣೆಗೆ, ಸಾಮಾಜಿಕ ಸಂದರ್ಭ ಕಲಿಕೆಯ ಗುರಿಯನ್ನು, ಮೂಲೋದ್ದೇಶವನ್ನು ಹೇಗೆ ನಿಯಂತ್ರಿಸುತ್ತದೆ ಎಂದು ನೋಡೋಣ. ನಮ್ಮ ಸಾಮಾಜಿಕ ಸಂದರ್ಭದಲ್ಲಿ ಇಂಗ್ಲಿಶ್, ನಗರ ಜೀವನ ದಲ್ಲಿ, ಈಚೆಗೆ ಟಿ.ವಿ.ಯಿಂದಾಗಿ ಹಳ್ಳಿ, ಸಣ್ಣ ಊರುಗಳಲ್ಲೂ ಹೆಚ್ಚು ಚಾಲನೆ ಯಲ್ಲಿರುವ ಭಾಷೆ. ಭಾರತೀಯರು ತಮ್ಮದೇ ಆದ ರೀತಿಯಲ್ಲಿ ಈ ಭಾಷೆಯನ್ನು ರೂಢಿಸಿಕೊಂಡು ಮಾತು ಬರಹಗಳಲ್ಲಿ, ಬಳಸುತ್ತಿದ್ದಾರೆ. ಇಂಡಿಯನ್ ಇಂಗ್ಲಿಶ್‌ಗೆ ಈಗ ತನ್ನದೇ ಆದ, ಉಪಭಾಷೆಯ ಸ್ಥಾನಮಾನ ವಿದೆ. ಹೀಗಿರು ವಾಗ, ನಮ್ಮ ವಿದ್ಯಾರ್ಥಿಗಳು ಇಂಗ್ಲಿಶನ್ನು ಬ್ರಿಟಿಷ್ ಜನಗಳಂತೆಯೇ ಮಾತನಾಡಬೇಕು ಎಂದು ಗುರಿ ಹಮ್ಮಿಕೊಂಡರೆ, ಅದು ಅನವಶ್ಯಕವೂ ಹೌದು, ಅಸಾಧ್ಯವೂ ಹೌದು. ಅದರ ಬದಲು, ಇಂಗ್ಲಿಶನ್ನು ಓದಿ ಕೇಳಿ ಅರ್ಥಮಾಡಿ ಕೊಂಡು, ಸಂವಹನಕ್ಕೆ ಬೇಕಾದಷ್ಟು ಮಾತು ಬರಹ ಕಲಿಸುತ್ತೇವೆ ಎಂದು ಕೊಳ್ಳುವುದು ನಮ್ಮ ಸಾಮಾಜಿಕ ವಾಸ್ತವಕ್ಕೆ ಹೆಚ್ಚು ಸಮರ್ಪಕವಾದ ಗುರಿ ಯಾಗುತ್ತದೆ. ಆದ್ದರಿಂದ ಭಾಷೆ 2ನ್ನು ಕಲಿಸುವ ಉದ್ದೇಶದ ಹಿಂದಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಂಶಗಳ ಅರಿವು ನಮ್ಮ ಗುರಿಯ ನಿರ್ವಚನೆಗೆ ಬಹಳ ಮುಖ್ಯವಾಗುತ್ತದೆ. ಸಾಮಾಜಿಕ ಸಂದರ್ಭಕ್ಕೂ ಕಲಿಯುವವರ ಪ್ರಚೋದನೆ, ಪ್ರೋನೇರ ಸಂಬಂಧವಿದೆ. ನಮ್ಮ ಇಂದಿನ ಸಮಾಜದಲ್ಲಿ ಇಂಗ್ಲಿಶ್ ಭಾಷೆ ಸವಲತ್ತಿನ ಪ್ರಬಲ ಭಾಷೆಯಾಗಿರುವುದರಿಂದ, ಆರ್ಥಿಕ ಉನ್ನತಿಗೆ ಬೇಕಾದ ಪ್ರಯೋಜನಕ್ಕೆ ಬರುವ ಭಾಷೆಯಾದ್ದರಿಂದ ಅದನ್ನು ಮಕ್ಕಳು ಕಲಿಯಲೇಬೇಕು ಎಂಬ ಸಾಮಾಜಿಕ ಒತ್ತಡ ಪ್ರತಿ ತಂದೆ ತಾಯಂದರ ಮೇಲೂ ಇದೆ. ಆದ್ದರಿಂದ ಇಂಗ್ಲಿಶ್ ಕಲಿಯುವುದಕ್ಕೆ ಸಾಕಷ್ಟು ಪ್ರೋಅವಕಾಶ ಕಲ್ಪಿಸಿಕೊಡುತ್ತಾರೆ. ಅದೇ ಹಿಂದಿ ಭಾಷೆಯನ್ನು ಕಲಿಸುವುದರ ಬಗ್ಗೆ ಈ ರೀತಿಯ ಅತಿ ಉತ್ಸಾಹ ಕಾಣುವುದಿಲ್ಲ. ಇದು ಮಕ್ಕಳ ಕಲಿಯುವ ಆಸೆಯನ್ನು ನೇರವಾಗಿ ತಟ್ಟುವ ಅಂಶ.

ಪಿಟ್ ಕಾರ್ಡರ್ ಎಂಬ ಬ್ರಿಟಿಷ್ ಭಾಷಾಶಾಸ್ತ್ರಜ್ಞ ಹೇಳುವಂತೆ, ಕಲಿಯುವ ಪ್ರಚೋದನೆ, ಕಲಿಯಲು ಬೇಕಾದ ಭಾಷೆ-2ರ ಒಡನಾಟ ಹಾಗೂ ಕಲಿತ ಭಾಷೆಯನ್ನು ಬಳಸಲು ಬೇಕಾದ ಪರಿಸರ ಇದ್ದರೆ, ಯಾರೇ ಆದರೂ ದ್ವಿತೀಯ ಭಾಷೆಯನ್ನು ಕಲಿತು ಬಿಡುತ್ತಾರೆ. ಉದಾಹರಣೆಗೆ, ಚಿಕ್ಕನಾಯಕನ ಹಳ್ಳಿಯಲ್ಲಿ ಓದುವ ಮಗುವಿಗೆ, ಸಾಮಾಜಿಕ ಕೌಟುಂಬಿಕ ಪರಿಸರದಿಂದ ಒತ್ತಾಸೆ ಸಿಕ್ಕು ಇಂಗ್ಲಿಶ್ ಕಲಿಯಲು ಉತ್ಸಾಹಿತವಾಗಿದ್ದಾಗಲೂ, ಶಾಲೆಯಲ್ಲಿ, ಕಲಿಸುವ ಶಿಕ್ಷಕರು ಸಮರ್ಥರಲ್ಲದಿದ್ದರೆ, ಭಾಷೆ 2ನ್ನು ಬಳಸುವವರ ಒಡನಾಟ ಸಾಕಷ್ಟು ಸಿಗದಿದ್ದರೆ, ಆ ಭಾಷೆಯ ಮಾಹಿತಿ ಹೆಚ್ಚು ಪ್ರಮಾಣದಲ್ಲಿ ದೊರಕದಿದ್ದರೆ ಅವಳ ಕಲಿಕೆ ಅಪೂರ್ಣವಾಗಿಯೇ ಉಳಿದುಬಿಡುತ್ತದೆ. ಹಾಗೆಯೇ, ಹಳ್ಳಿಯ ಪರಿಸದಲ್ಲಿ ಇಂಗ್ಲಿಶ್ ಮಾತನಾಡುವುದು ಅನೇಕ ಸಲ ಕೃತಕವೆನಿಸಿ ಜನರ ಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ. ಆದ್ದರಿಂದ ನಮ್ಮಲ್ಲಿ ಅನೇಕರಿಗೆ ಭಾಷೆ-2 ಪೂರ್ತಿ ಅರ್ಥವಾದರೂ, ವಾಕ್ಯರಚನೆ, ಸಮರ್ಪಕ ಪ್ರತಿಕ್ರಿಯೆ ಇವೆಲ್ಲದರ ಪ್ರಭುತ್ವವಿದ್ದರೂ, ಬಾಯಿ ಬಿಟ್ಟು ಧೈರ್ಯವಾಗಿ ನಿರ್ಭಿತಿಯಿಂದ ಮಾತನಾಡುವ ಆತ್ಮವಿಶ್ವಾಸ ಇಲ್ಲದಿರುವುದನ್ನು ಎಲ್ಲೆಲ್ಲೂ ನೋಡುತ್ತೇವೆ. ತಪ್ಪು ಮಾಡಿಬಿಟ್ಟರೆ ಎನ್ನುವ ಭಯ ನಮ್ಮನ್ನು ಮೂಕರನ್ನಾಗಿಸುತ್ತದೆ. ಜತೆಗೆ ನಮ್ಮ ವ್ಯಕ್ತಿತ್ವದ ಸ್ವರೂಪ ಕೂಡ ನಮ್ಮ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ಧೈರ್ಯವಾಗಿ ತಪ್ಪಾದರೇನೀಗ ಎಂಬ ಭಂಡತನ ಪ್ರವೃತ್ತಿವುಳ್ಳವರು (ಹೊರಮುಖೀ) ಅಗಿದ್ದರೆ, ಭಾಷೆ ಕಲಿಯುವುದು ಬಹಳ ಸರಾಗವಾಗುತ್ತದೆ. ಸಂಕೋಚದ (ಒಳಮುಖೀ) ಸ್ವಭಾವದ ಜನರಿಗೆ ಹೆಚ್ಚಿನ ಪ್ರಯತ್ನ ಅಗತ್ಯ. ಇನ್ನು ಕಲಿಯುವ ಪ್ರಕ್ರಿಯೆಯ ಬಗ್ಗೆ ಹೇಳುವುದಾದರೆ, ಪ್ರತಿಯೊಬ್ಬ ವಿದ್ಯಾರ್ಥಿಗೂ ಅನನ್ಯವಾದ ವ್ಯಕ್ತಿತ್ವ ಇರುವುದರಿಂದ, ಅವರು ಭಾಷೆಗಳನ್ನು ಕಲಿಯುವ ಶೈಲಿ ಕೂಡ ವಿಭಿನ್ನವಾಗಿರುತ್ತದೆ. ಉರು ಹೊಡೆದು, ಮನೆಪಾಠ ಹೇಳುವುದು ಕಲಿಯುವವರಿಗೆ ಸಿದ್ಧೌಷಧವಾದರೆ, ಇನ್ನು ಕೆಲವರಿಗೆ ಹಾಡುತ್ತಾ ಹಾಡುತ್ತಾ ರಾಗ ಎಂಬಂತೆ ಭಾಷೆಯನ್ನು ಬಳಸಿ, ಬಳಸಿ ಅಭ್ಯಾಸದ ಮೂಲಕ ಕಲಿಯುವುದೇ ಸಹಜಗುಣವಾಗಿರುತ್ತದೆ. ಹಾಗೆಯೇ, ಭಾಷೆ ಕಲಿತವರಿಗೆ ಯಾವ ಬಗೆಯ ಸಾಮರ್ಥ್ಯ/ಪ್ರಾವೀಣ್ಯ ಬಂದಿದೆ ಎಂದು ನಿರ್ಧಾರ ಮಾಡಲು ನಾವು ಬಳಸುವ ಮಾನದಂಡ ಯಾವುದು ಎಂಬುದು ಕೂಡ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ. ಈಗ 15-20 ವರ್ಷಗಳವರೆಗೂ, ಭಾಷೆ-2ರ ಪ್ರಶ್ನೆಪತ್ರಿಕೆ ವಿದ್ಯಾರ್ಥಿಗಳಿಗೆ ಆ ಭಾಷೆಯ ಬಗ್ಗೆ ಎಷ್ಟು ಮಾಹಿತಿ ತಿಳಿದಿದೆ ಎನ್ನುವುದನ್ನು ಹೆಚ್ಚು ಪ್ರಮುಖವಾಗಿ ಪರೀಕ್ಷೆ ಮಾಡುತ್ತಿತ್ತು. ಉದಾಹರಣೆಗೆ, ಕರ್ತೃಪದ ಎಂದರೇನು ಕರ್ಮಣೀ/ ಕರ್ತೃರೀ ಪ್ರಯೋಗವನ್ನು ವಿವರಿಸಿ, ಇತ್ಯಾದಿ. ಇಂತಹ ಪರೀಕ್ಷೆ ಯಲ್ಲಿ ಶೇ. 100 ಗಳಿಸಿದ ವಿದ್ಯಾರ್ಥಿಗೆ ಎಷ್ಟೋ ಸಲ ಒಂದು ರೈಲು ಟಿಕೆಟ್ ಕೊಳ್ಳಲು ಭರ್ತಿ ಮಾಡಬೇಕಾದ ಅರ್ಜಿ ಬರೆಯಲೂ ಬರದಿದ್ದರೆ ಆಶ್ಚರ್ಯವಿಲ್ಲ.

ಹೀಗೆ ಚಿತ್ರದಲ್ಲಿ ಕಾಣಿಸಿರುವ ಪ್ರತಿಯೊಂದು ಅಂಶವೂ ಮತ್ತಿತರ ಅಂಶಗಳೊಂದಿಗೆ ಅವಿನಾ ಸಂಬಂಧ ಹೊಂದಿರುತ್ತದೆ. ಆದ್ದರಿಂದಲೇ ವ್ಯಕ್ತಿ ವ್ಯಕ್ತಿಗಳ ಭಾಷಾ ಸಾಮರ್ಥ್ಯದಲ್ಲಿ ಅಷ್ಟೊಂದು ವ್ಯತ್ಯಾಸವಿರುತ್ತದೆ. ಇಂತಹ ವ್ಯತ್ಯಾಸಗಳನ್ನು ಮೇಲೆ ಕೊಟ್ಟಿರುವ ಚೌಕಟ್ಟನ್ನು ಬಳಸಿಕೊಂಡು, ಅದರ ವಿವಿಧ ಅಂಶಗಳ ವಿಶ್ಲೇಷಣೆ ಮಾಡುವುದರ ಮೂಲಕ ನಾವು ವಿವರಿಸಬಹುದು. ಯಾವುದೇ ದ್ವಿತೀಯ ಭಾಷಾ ಬೋಧನೆಯ ಕಾರ್ಯಕ್ರಮ ಯೋಜಿಸುವಾಗಲೂ, ಮಹತ್ವದ ಅಂತರ್ ಸಂಬಂಧ ಹೊಂದಿರುವ ಈ ಅಂಶಗಳತ್ತ ಗಮನ ಹರಿಸುವುದು ಅತ್ಯಗತ್ಯ.

3. ದ್ವಿತೀಯ ಭಾಷಾ ಬೋಧನಾ ವಿಧಾನಗಳು ಒಂದು ಚಾರಿತ್ರಿಕ ನೋಟ

ಹಲವು ಶತಮಾನಗಳಿಂದ ಬೆಳೆಯುತ್ತ ಬಂದಿರುವ ಈ ಜ್ಞಾನಶಿಸ್ತಿನ ಪರಿಧಿಯೊಳಗೆ ವಿವಿಧ ತತ್ವಗಳು ವಿಧಿ ವಿಧಾನಗಳು ತಂತ್ರೋಪಾಯಗಳು ಬಂದು ಹೋಗಿವೆ. ಭಾಷೆ 1 ಹಾಗೂ ಭಾಷೆ 2ರ ನಡುವೆ ಇರುವ ಸಂಬಂಧ ಯಾವ ಸ್ವರೂಪದ್ದು ಎನ್ನುವ ಗ್ರಹಿಕೆಯನ್ನು ಅವಲಂಬಿಸಿ, ಮುಖ್ಯವಾಗಿ ಎರಡು ರೀತಿಯ ವಿಧಾನಗಳನ್ನು ಗುರುತಿಸಬಹುದು. ಪ್ರಥಮ ಹಾಗೂ ದ್ವಿತೀಯ ಭಾಷೆಗಳನ್ನು ಕಲಿಯುವ ರೀತಿನೀತಿಗಳಲ್ಲಿ ಯಾವುದೇ ಸಾಮ್ಯವಿಲ್ಲ ಎನ್ನುವುದು ಒಂದು ಗುಂಪಿನ ಮತವಾದರೆ, ಇವೆರಡೂ ಭಾಷೆಗಳನ್ನು ಕಲಿಯುವ, ಬಳಸುವ ಮನಸ್ಸು ಒಂದೇ. ಆದ್ದರಿಂದ ಭಾಷೆ 2ರ ಕಲಿಕೆ ಭಾಷೆ 1ರ ಕಲಿಕೆಗೆ ಬಹಳ ಹತ್ತಿರವಾದದ್ದು ಎಂಬುದು ಇನ್ನೊಂದರ ಅಭಿಮತ. ಮೊದಲ ಗುಂಪಿಗೆ ಸೇರಿದ ವಿಧಾನಗಳು ತರ್ಕ, ವಿಶ್ಲೇಷಣೆ ಮತ್ತು ಮಾಹಿತಿ ಇವು ಭಾಷಾ ಕಲಿಕೆಯಲ್ಲಿ ಮೌಲಿಕ ಎಂದು ವಾದಿಸಿದರೆ, ಎರಡನೆಯ ಗುಂಪಿನ ವಿಧಾನಗಳು ಮಾತೃಭಾಷೆಯನ್ನು ಕಲಿಸುವ ಸಹಜ ಸನ್ನಿವೇಶಗಳನ್ನು ಇಲ್ಲಿಯೂ ರೂಪಿಸಿ, ಭಾಷೆಯನ್ನು ಇಡಿಯಾಗಿ ಕಲಿಯಲು ಅವಕಾಶ ಕಲ್ಪಿಸ ಬೇಕು ಎಂದು ವಾದಿಸುತ್ತವೆ.

. ತಾರ್ಕಿಕ ವಿಧಾನಗಳು

ಅನ್ಯ ಭಾಷೆಯನ್ನು ಕಲಿಸುವ ಕೈಪಿಡಿಗಳು

. ಮೂವತ್ತು ದಿನಗಳಲ್ಲಿ ಹಿಂದಿ ಅಥವಾ ತಮಿಳು ಅಥವಾ ತೆಲುಗು ಕಲಿಯಿರಿ (ಪರಿಚಯ)ಸ್ವಯಂಬೋಧಿಸಿ.

. ಪ್ರವಾಸಿಗರಿಗೆ ಅವಶ್ಯವಾದಷ್ಟು ಭಾಷಾ ಪರಿಚಯ ನೀಡುವ ಪುಸ್ತಿಕೆಗಳು.

. ಅಂಚೆ ಮೂಲಕ ಕಲಿಸುವ ಕೋರ್ಸ್ಗಳು

. ರೇಡಿಯೋ ಪಾಠಗಳು

. ವಿಶೇಷ ತರಬೇತಿ ತರಗತಿಗಳು. ಫ್ರೆಂಚ್, ಜರ್ಮನ್,

. ನಿಘಂಟುಗಳು /ವ್ಯಾಕರಣಗಳು / ಸಾಮಾನ್ಯ ದೋಷಗಳ ಪಟ್ಟಿಗಳು)

2. ಸಾಮಗ್ರಿಗಳು

. ಲಿಖಿತ ಪಾಠಗಳು

. ಸನ್ನಿವೇಶಗಳು ಚಿತ್ರಗಳು

. ಧ್ವನಿ ಸುರುಳಿಗಳು

. ದೃಕ್ ಶ್ರವಣ ಸಾಧನಗಳು

3. ಅನ್ಯ ಭಾಷೆ ಕಲಿಕೆಯ ಉದ್ದೇಶ

. ಸೀಮಿತ ತಾತ್ಕಾಲಿಕವಾದ ಉದ್ದೇಶಗಳಿಗಾಗಿ : ಪ್ರವಾಸ, ನಿರ್ದಿಷ್ಟ ಭಾಷಾ ಸನ್ನಿವೇಶದಲ್ಲಿ ಪಾಲ್ಗೊಳ್ಳುವುದು

. ವಿಸ್ತೃತ : ನಿಡುಗಾಲದ ಬಳಕೆಗಾಗಿ

ಈ ವಿಧಾನಗಳ ಪ್ರಕಾರ ಭಾಷೆ 1ನ್ನು ಕಲಿಯುವ ಪ್ರಕ್ರಿಯೆಗೂ ಭಾಷೆ 2ನ್ನು ಕಲಿಯುವ ಪ್ರಕ್ರಿಯೆಗೂ ಅಜಗಜಾಂತರ ವ್ಯತ್ಯಾಸವಿದೆ. ಮೊದಲ ಭಾಷೆಯನ್ನು ಅಪ್ರಜ್ಞಾಪೂರ್ವಕವಾಗಿ ಚಿಕ್ಕ ವಯಸ್ಸಿನಲ್ಲೇ ಆ ಭಾಷಿಕ ಪರಿಸದಲ್ಲೇ ಇಡಿಯಾಗಿ ಮುಳುಗಿ ಕಲಿಯುತ್ತೇವೆ. ಆದರೆ ಔಪಚಾರಿಕವಾಗಿ ದ್ವಿತೀಯ ಭಾಷೆಯನ್ನು ಕಲಿಯುವ ವೇಳೆಗೆ ಅಲ್ಲಿಯ ಭಾಷಿಕ ಪರಿಸರ, ಪ್ರಚೋದನೆ, ವಯಸ್ಸು ಮುಂತಾದ ಎಲ್ಲ ಅಂಶಗಳು ಭಿನ್ನವಾಗಿರುತ್ತವೆ. ಆದ್ದರಿಂದ ಮಾತೃಭಾಷಾ ಕಲಿಕೆಯ ಸಹಜವಿಧಾನ ದ್ವಿತೀಯ ಭಾಷಾಕಲಿಕೆಗೆ ಸೂಕ್ತವಲ್ಲ. ಬದಲಿಗೆ, ವಿದ್ಯಾರ್ಥಿಯು ಸ್ವಲ್ಪ ಪ್ರಬುದ್ಧವಾಗಿರುವುದರಿಂದ ಆ ಬೌದ್ದಿಕತೆ, ಮಾನಸಿಕ, ತಾರ್ಕಿಕ ಬೆಳವಣಿಗೆಯನ್ನು ಭಾಷಾ ಕಲಿಕೆಗೆ ಬಳಸಿಕೊಳ್ಳಬೇಕು ಎಂಬುದು ಇಲ್ಲಿಯ ಪೂರ್ವ ಗ್ರಹಿಕೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಗ್ರೀಕ್ ಹಾಗೂ ಲ್ಯಾಟಿನ್‌ನಂತಹ ಭಾಷೆಗಳ ಬೋಧನಾ ವಿಧಾನವೇ ಮಿಕ್ಕೆಲ್ಲ ಭಾಷಾ ಬೋಧನೆಗೂ ಮಾದರಿಯಾದಂತೆ, ಭಾರತೀಯ ಸಂದರ್ಭದಲ್ಲಿ ಸಂಸ್ಕೃತ ಭಾಷಾ ಬೋಧನೆಯ ವಿಧಾನವೇ ಪ್ರಥಮ ಹಾಗೂ ದ್ವಿತೀಯ ಭಾಷೆಗಳನ್ನು ಬೋಧಿಸಲು ಮಾರ್ಗ ಹಾಕಿ ಕೊಟ್ಟಿತು. ಕಾವ್ಯ, ತರ್ಕ, ವ್ಯಾಕರಣ ಈ ಮೂರು ವಿಷಯಗಳನ್ನೂ ಒಟ್ಟಾಗಿ ಕಲಿಸಲಾಗುತ್ತಿತ್ತು. ದೇವಭಾಷೆ ಎನಿಸಿ, ಆಡುಮಾತಿನ ಪರಿಸರಕ್ಕೆ ಹೊಂದದೆ ಕೇವಲ ಬರವಣಿಗೆಯಲ್ಲಿ ಮಾತ್ರ ಪ್ರಚಲಿತವಿದ್ದ ಸಂಸ್ಕೃತದ ಬೋಧನೆಗೆ ಈ ಮಾರ್ಗ ಸಮರ್ಪಕವಾಗಿದ್ದಿರಬಹುದು. ಆದರೆ ಜನಭಾಷೆಯಾದ ಕನ್ನಡ, ಹಿಂದಿ ಇತ್ಯಾದಿ ಭಾರತೀಯ ಭಾಷೆಗಳನ್ನು ಬೋಧಿಸುವುದಕ್ಕೂ ಇದೇ ಮಾರ್ಗ ವನ್ನು ಕುರುಡಾಗಿ ಅನುಸರಣೆ ಮಾಡುವುದು ಪ್ರಶ್ನಾರ್ಹ. ಏಕೆಂದರೆ ಯಾವುದೇ ಭಾಷೆಯ ವ್ಯಾಕರಣ ಕಲಿಕೆ ಆ ಭಾಷೆಗೆ ಸಂಬಂಧಿಸಿದ ಮಾಹಿತಿಗಾಗಿ ಸಹಾಯಕವಾಗಬಹುದೇ ಹೊರತು, ಜೀವಂತವಾಗಿರುವ ಭಾಷೆಯಲ್ಲಿ ಮಾತಾಡಿ, ಓದಿ, ಬರೆಯುವ ಕೌಶಲವನ್ನು ನೀಡುತ್ತದೆಯೇ ಎಂಬ ಸಂಶಯವಿದೆ. ಈ ತಾರ್ಕಿಕ ಮಾದರಿಯ ಬಗ್ಗೆ ವಿದ್ವಾಂಸರು ಎತ್ತಿರುವ ತಗಾದೆ. ಎರಡನೆಯದಾಗಿ ಈ ವಿಧಾನ ಬರಹದ ಸಂದರ್ಭದ ಭಾಷಾ ಬಳಕೆಯ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು, ಮೌಖಿಕ ಕೌಶಲಗಳಾದ ಆಲಿಸಿ ಅರ್ಥಮಾಡಿ ಕೊಳ್ಳುವುದನ್ನು ಹಾಗೂ ಮಾತನಾಡುವುದನ್ನು ಗೌಣವಾಗಿಸಿ ಬಿಡುತ್ತದೆ ಎಂಬ ಇನ್ನೊಂದು ಆಕ್ಷೇಪವಿದೆ. ಜೊತೆಗೆ, ವಿದ್ಯಾರ್ಥಿಯ ಉರು ಹೊಡೆಯುವ, ನೆನಪಿಡುವ ಶಕ್ತಿಯ ಮೇಲೆಯೇ ಪ್ರಮುಖವಾಗಿ ಒತ್ತು ಕೊಡುವ ಈ ವಿಧಾನ ಕಷ್ಟಕರವಾದ್ದು ಎಂಬ ಅಭಿಪ್ರಾಯವೂ ಇದೆ. ಈ ವಿಧಾನದ ಪರವಾಗಿ ಹೇಳುವುದಾದರೆ, ಅಮೂರ್ತವಾದ ತಾರ್ಕಿಕ ನೆಲೆಯ ವ್ಯಾಕರಣದ ಒಲವಿರುವ ವಿದ್ಯಾರ್ಥಿಗಳಿದ್ದರೆ ಅವರಿಗೆ ಈ ಪಾಂಡಿತ್ಯಪೂರ್ಣ ವಿಧಾನ ಸೂಕ್ತ ಎಂದು ವಾದಿಸಬಹುದು. ಅಲ್ಲದೆ ಇಡಿಯಾಗಿ ಒಂದು ಭಾಷೆಯನ್ನು ಅದರ ಒಟ್ಟೂ ಬಳಕೆಯಲ್ಲಿ ಹೇಳಿಕೊಡುವುದು ಅಸಾಧ್ಯವೆಂದು ಒಪ್ಪಿದರೆ, ಸೂತ್ರ ರೂಪದಲ್ಲಿ, ವ್ಯಾಕರಣದ ಮೂಲಕ ನಿಯಮಗಳ ಮೂಲಕ ಕಲಿಸಿದರೆ ತಪ್ಪೇನೂ ಇಲ್ಲ ಎಂದೂ ಸಮರ್ಥಿಸಿಕೊಳ್ಳಬಹುದು.

. ಸಹಜ ವಿಧಿವಿಧಾನಗಳು

ಮಾತೃಭಾಷಾ ಕಲಿಕೆಯ ಸಂದರ್ಭವನ್ನೇ ದ್ವಿತೀಯ ಭಾಷಾ ಬೋಧನಾ ಸನ್ನಿವೇಶಕ್ಕೂ ಅಳವಡಿಸಿಕೊಂಡು, ಆ ಸಂದರ್ಭದ ಅಂಶಗಳನ್ನು ಭಾಷೆ 2ರ ತರಗತಿಯಲ್ಲಿ ಸೃಷ್ಟಿಸಲು ವಿವಿಧ ರೀತಿಯ ಪ್ರಯತ್ನಗಳು ನಡೆದಿವೆ. ಇವು ಭಾರತಕ್ಕಿಂತ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿವೆ. ಉದಾಹರಣೆಗೆ “ಫ್ರೆಂಚನ್ನು ಸಾಧ್ಯವಿದ್ದಷ್ಟು ಫ್ರೆಂಚ್‌ನಂತೆಯೇ ಕಲಿಸಿ” ಎಂಬ ಘೋಷಣೆ ಹುಟ್ಟು ಹಾಕಿದ ದ್ವಿತೀಯ ಭಾಷೆಯನ್ನು ಪ್ರಥಮ ಭಾಷೆಯ ಜತೆ ತಳುಕು ಹಾಕಿಕೊಳ್ಳದೆ, ಸ್ವತಂತ್ರವಾಗಿ ಕಲಿಸಬೇಕು ಎಂಬ ತತ್ತ್ವವನ್ನು ಸ್ಥಾಪಿಸಿತು. ಈ ವಾದವನ್ನು ಒಂದು ಅತಿಗೆ ಕೊಂಡೊಯ್ದು, ದ್ವಿತೀಯಾ ಭಾಷಾ ಬೋಧನೆ ಯಲ್ಲಿ ಪ್ರಥಮ ಭಾಷೆಯ ಸೋಂಕೂ ಇರಬಾರದು ಎಂದು ಕೂಡ ವಾದಿಸಿ ದವರಿದ್ದಾರೆ. ಎರಡನೆಯದಾಗಿ, ಈ ವಿಧಾನಗಳು ಆಡು ಮಾತಿಗೆ ಮೊದಲ ಸ್ಥಾನ ಕೊಟ್ಟು, ಬರವಣಿಗೆಯೂ ಕಲಿಕೆ ಕಾರ್ಯಕ್ರಮದಲ್ಲಿ ಬರುವಂತೆ ಯೋಜಿಸಿದವು. ಆಡುಮಾತಿಗೆ ಸಿಕ್ಕಿದ ಈ ಕುಮ್ಮಕ್ಕು ದ್ವಿತೀಯ ಭಾಷೆಯನ್ನು ಹೆಚ್ಚು ಕಗ್ಗಂಟು ಮಾಡಿಕೊಳ್ಳದೆ, ಒಂದು ಜೀವಂತ ಭಾಷೆಯಾಗಿ ಕಲಿಯಲು ಹೆಚ್ಚಿನ ಅವಕಾಶ ಮಾಡಿಕೊಟ್ಟಿತು. ಭಾಷೆಯ ನೇರ ಬಳಕೆಯ ಅಭ್ಯಾಸದ ಮೂಲಕ ಭಾಷೆ ಕಲಿಯುವ ಅವಕಾಶ ಮಾಡಿಕೊಡಲಾಯಿತು. ವ್ಯಾಕರಣದಲ್ಲಿ ಮೂಲತಃ ನಂಬಿಕೆಯಿದ್ದ ಈ ವಿಧಾನ ಅದನ್ನು ನೇರವಾಗಿ, ನಿಯಮಗಳ ಮೂಲಕವಾಗಿ ಹೇಳಿಕೊಡುವ ಬದಲು ಆಗಿ ವಿದ್ಯಾರ್ಥಿಗಳೇ ಭಾಷೆಯ ಒಡನಾಟದ ಮೂಲಕ ಆ ನಿಯಮಗಳನ್ನು ಪರೋಕ್ಷವಾಗಿ ಅರಿಯಬೇಕು ಎಂದು ನಂಬಿತ್ತು. ಈಚೆಗೆ ಹೆಚ್ಚು ಜನಪ್ರಿಯವಾಗಿರುವ ಸಂವಹನಶೀಲ ಬೋಧನಾ ವಿಧಾನಗಳೂ ಈ ಸ್ವಾಭಾವಿಕ ಮಾರ್ಗವನ್ನು ಅನುಸರಿಸುತ್ತವೆ.

ಭಾಷಾ ಕಲಿಕೆ : ಸಂವಹನ ವಿಧಾನ

ಪ್ರಚಲಿತ ವಿಧಾನಗಳು ಭಾಷೆಯ ರಚನೆ, ವ್ಯಾಕರಣ ಬದ್ಧತೆ, ಮುಖ್ಯ ಕೌಶಲಗಳ ಅಭಿವೃದ್ದಿ ಇತ್ಯಾದಿಗಳಿಗೆ ಒತ್ತು ನೀಡಿವೆ. ಅನ್ಯ ಭಾಷೆಯನ್ನು ಕಲಿತ ವ್ಯಕ್ತಿ ಭಾಷೆಯನ್ನು ಸಾಮಾಜಿಕ ಸನ್ನಿವೇಶಗಳಲ್ಲಿ ಹೇಗೆ ಬಳಸ ಬೇಕೆಂದು ಕಲಿತಿರುವುದಿಲ್ಲ. ಆಗ ಅನ್ಯ ಭಾಷೆಯ ತಿಳುವಳಿಕೆ ಇದ್ದರೂ ಅದನ್ನು ಬಳಸಲು ಹೊರಟಾಗ ಸೋಲು ಖಂಡಿತ. ಇದನ್ನು ತಪ್ಪಿಸಲು ಅನ್ಯ ಭಾಷೆಗಳಲ್ಲಿ ಕಲಿಸುವ/ ಕಲಿಯುವ ವಿಧಾನದಲ್ಲಿ ಮೂಲಭೂತ ಬದಲಾವಣೆ ಅವಶ್ಯವೆಂದು ವಾದಿಸಿದ್ದಾರೆ. ಪರ್ಯಾಯವಾಗಿ ಅನ್ಯ ಭಾಷಾ ಕಲಿಕೆಗೆ ಸಂವಹನ ವಿಧಾನವೆಂಬ ಮಾದರಿಯೊಂದನ್ನು ರೂಪಿಸಿದ್ದಾರೆ. ಮಾದರಿಯ ಹಿಂದೆ ಒಂದು ತಾತ್ತ್ವಿಕ ನೆಲೆಯಿದೆ. ಅನ್ಯ ಭಾಷೆಯನ್ನು ಕಲಿಯುವವರು ಅದನ್ನು ಎಲ್ಲ ಸಂದರ್ಭದಲ್ಲೂ, ಹಾಗಾಗದಿದ್ದಲ್ಲಿ ಬಹುಪಾಲು ಸಂದರ್ಭಗಳಲ್ಲಿ ಬಳಸಲು ಶಕ್ತರಾಗ ಬೇಕು. ಅದಕ್ಕಾಗಿ ಭಾಷೆಯ ಬಳಕೆಯ ವಿಧಾನಗಳನ್ನು, ಭಾಷೆಯನ್ನಾಡುವವರ ಲೋಕಗ್ರಹಿಕೆಯನ್ನು ತಿಳಿಯಬೇಕಾಗುತ್ತದೆ. ಬಳಕೆಯ ವಿಧಾನಗಳಲ್ಲಿ ಸಾಮಾಜಿಕ ಸಂಬಂಧಗಳ ನಿರ್ವಹಣೆ, ವಿವಿಧ ಭಾವನೆಗಳನ್ನು ಒಳಗೊಂಡ ಸನ್ನಿವೇಶಗಳ ನಿರ್ವಹಣೆ, ಸಂಭಾಷಣೆಗಳ ಹಿಂದಿರುವ ನಿಯಮಗಳು ಮುಂತಾದವು ಸೇರುತ್ತವೆ. ಲೋಕಗ್ರಹಿಕೆಯಲ್ಲಿ ದೇಶಕಾಲಗಳ ಸೂಚನೆ, ಪರಿಮಾಣಗಳನ್ನು ಹೇಳುವುದು ಮುಂತಾದವು ಬರುತ್ತವೆ. ಇವು ಪ್ರತಿ ಭಾಷಾ ಸಮುದಾಯಕ್ಕೂ ವಿಶಿಷ್ಟವಾಗಿರುತ್ತವೆ. ಆದ್ದರಿಂದ ಅವುಗಳ ಪರಿಚಯವಿಲ್ಲದೆ ಆಯಾ ಭಾಷೆಗಳನ್ನು ಸಹಜವಾಗಿ ಬಳಸುವುದು ಕಷ್ಟ.

ಸಂವಹನವಿಧಾನದಲ್ಲಿ ಭಾಷೆಯನ್ನು ಕಲಿಸಬೇಕೆಂದು ವಾದಿಸುವವರು ಕಲಿಕೆಯ ಸಾಮಗ್ರಿಗಳನ್ನೂ ಅದಕ್ಕನುಗುಣವಾಗಿಯೇ ರೂಪಿಸುತ್ತಾರೆ. ಕಲಿಯುವವರು ಭಾಷೆಯನ್ನು ಬಳಸಲು ಅನುಕೂಲವಾಗುವಂತೆ ನಿರ್ದಿಷ್ಟ ಸಂದರ್ಭಗಳನ್ನು ಆಧಾರವಾಗಿಟ್ಟುಕೊಂಡು ಪಾಠಗಳನ್ನು ರಚಿಸುತ್ತಾರೆ.

 

 

ಭಾಷಾ ಕೌಶಲಗಳ ಗಳಿಕೆ ಮೌಲ್ಯಮಾಪನ

ಎಲ್ಲ ಬೋಧನೆಕಲಿಕೆಗಳನ್ನೂ ಮೌಲ್ಯಮಾಪನ ಮಾಡುವುದು ಶಿಕ್ಷಣ ಪದ್ಧತಿ ಯಲ್ಲಿ ರೂಢವಾಗಿದೆ. ಕಲಿಯುವವರು ಎಷ್ಟು ಪ್ರಮಾದಲ್ಲಿ ಕಲಿತಿದ್ದಾರೆಂದು ತಿಳಿಯಲು ವಿವಿಧ ಬಗೆಯ ಪರೀಕ್ಷೆಗಳನ್ನು ನಡೆಸುತ್ತಾರೆ. ಅವುಗಳಲ್ಲಿ ಕೆಲವು ಹೀಗಿರುತ್ತವೆ.

. ಸಾಮರ್ಥ್ಯ ಪರೀಕ್ಷೆ. ಅನ್ಯ ಭಾಷೆಯನ್ನು ಕಲಿತವರ ಭಾಷಾ ಸಾಮರ್ಥ್ಯ ವನ್ನು ಸಾರ್ವತ್ರಿಕವಾಗಿ ಪರೀಕ್ಷೆಗೆ ಗುರಿಪಡಿಸುವುದು. ಯಾವುದೇ ಕಲಿಕೆಯ ಕಾರ್ಯಕ್ರಮದ ಕೊನೆಯಲ್ಲಿ ನಡೆಯುವ ಪರೀಕ್ಷೆ ಇದಲ್ಲ. ಜಗತ್ತಿನಾದ್ಯಂತ TEFOL (Testing of English as a Foriegn Language) ನಡೆಯುವ ಪರೀಕ್ಷೆ ಇದಕ್ಕೊಂದು ಮಾದರಿ. ಪರೀಕ್ಷೆಯನ್ನು ತೆಗೆದುಕೊಳ್ಳುವವರು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ಇಂಗ್ಲಿಶನ್ನು ಕಲಿತಿರುತ್ತಾರೆ. ಆದರೆ ಪರೀಕ್ಷಾ ಸಾಮಗ್ರಿ ಮಾತ್ರ ಎಲ್ಲರಿಗೂ ಒಂದೇ ಆಗಿರುತ್ತದೆ. ಹಾಗೆ ನೋಡಿದರೆ ಇಂಥ ಪರೀಕ್ಷೆಗಳನ್ನು ಹೇಗೆ ಎದುರಿಸ ಬೇಕೆಂದು ಹೇಳಿಕೊಡುವ ಕೈಪಿಡಿಗಳು, ತರಬೇತಿ ಕಾರ್ಯಕ್ರಮಗಳು ಸಾಕಷ್ಟಿವೆ.

. ಸಾಧನೆಯ ಪರೀಕ್ಷೆ. ಅನ್ಯ ಭಾಷಾ ಬೋಧನೆಯ ತರಗತಿಗಳ ಸರಣಿಯ ಕೊನೆಗೆ ಎಷ್ಟು ಪ್ರಮಾಣದಲ್ಲಿ ಕಲಿಕೆ ಯಶಸ್ವಿಯಾಗಿದೆಯೆಂದು ತಿಳಿಯಲು ನಡೆಸುವ ಪರೀಕ್ಷೆಗಳು. ಆಯಾ ಕಲಿಕೆಯ ಕಾರ್ಯಕ್ರಮದ ಪಠ್ಯಕ್ರಮ, ಪಾಠ್ಯ ಸಾಮಗ್ರಿಗಳಿಗೆ ಸೀಮಿತಗೊಂಡು ಇಂಥ ಪರೀಕ್ಷೆಯನ್ನು ರೂಪಿಸುತ್ತಾರೆ. ಪಠ್ಯಕ್ರಮದಲ್ಲಿ ಕಲಿಕೆಯ ಉದ್ದೇಶ ಮತ್ತು ಗುರಿಗಳನ್ನು ಸ್ಪಷ್ಟವಾಗಿ ನಿರೂಪಿ ಸಿದ್ದರೆ ಅದಕ್ಕನುಗುಣವಾಗಿ ಪರೀಕ್ಷೆಗಳನ್ನು ರೂಪಿಸುವುದು ಸಾಧ್ಯವಾಗುತ್ತದೆ.

ನಮ್ಮ ಸಾಮಾನ್ಯ ಶಿಕ್ಷಣದಲ್ಲಿ ಆಗುತ್ತಿರುವ, ಆಗಬೇಕಾದ ಬಹಳ ದೊಡ್ಡ ಪಲ್ಲಟವೆಂದರೆ ಕಲಿಯುವಿಕೆಯ ಕೇಂದ್ರದಲ್ಲಿ ಇರುವುದು ವಿದ್ಯಾರ್ಥಿ ಗಳೇ ಹೊರತು ಶಿಕ್ಷಕರಲ್ಲ ಎಂಬ ಅರಿವು. ಆದ್ದರಿಂದ ಬೋಧನೆಗಿಂತ ಕಲಿಕೆಯೇ ನಮ್ಮ ಆಸಕ್ತಿಯ ಕೇಂದ್ರವಾಗಿ ಬೋಧನೆ ಅದರ ಒಂದು ಅಂಶವಾಗಿ ಮಾತ್ರ ಬರಬೇಕು. ಅದರಲ್ಲೂ ಭಾಷಾ ಕಲಿಕೆಯಂತ ಕೌಶಲ ಪ್ರಧಾನವಾದ ವಿದ್ಯೆ ಕಲಿಯಲು, ಕಲಿಯುವವರು ಆಡಿ / ಮಾಡಿಯೇ ಕಲಿಯಬೇಕು. ಈಜು ಕಲಿಯಲು ಇಚ್ಛಿಸುವರು, ನೀರಲ್ಲಿಳಿಯದೆ ಈಜು ಕಲಿಯಲು ಸಾಧ್ಯವೇ? ದ್ವಿತೀಯ ಭಾಷಾ ಬೋಧನೆಯಲ್ಲಿ ಕಲಿಕೆಯ ಸಂದರ್ಭವೂ ಇದಕ್ಕೆ ಹೊರತಲ್ಲ.

ದ್ವಿತೀಯ ಭಾಷಾ ಬೋಧನೆ ಹಾಗೂ ಕಲಿಕೆಯ ತತ್ತ್ವಗಳು ವಿಧಾನಗಳು, ಸಮಸ್ಯೆಗಳಿಗೆ ಸಂಬಂಧಿಸಿದ ವಾದವಿವಾದಗಳನ್ನು ಇಷ್ಟು ಪದರ ಪದರವಾಗಿ ಬಿಚ್ಚಿ ತೋರಿಸಿದ ನಂತರವೂ ಒಂದು ಮಟ್ಟದಲ್ಲಿ ಅವು ನಿಗೂಢವಾಗಿಯೇ ಉಳಿಯುತ್ತವೆ. ಇದರಲ್ಲಿ ಯಾವುದೇ ಒಂದು ವಿಧಾನವನ್ನು ತತ್ತ್ವವನ್ನು ಅತ್ಯುತ್ತಮ ಎಂದು ವಸ್ತುನಿಷ್ಠವಾಗಿ ತೀರ್ಮಾನಿಸಿ ಹೇಳುವುದು ಸಾಧ್ಯವಿಲ್ಲ. ಏಕೆಂದರೆ ಇನ್ನಾವುದೇ ಮಾನಸಿಕ ಚಟುವಟಿಕೆಯಂತೆ ಬೋಧನೆ ಕಲಿಕೆಗಳು ಒಂದು ಜೈವಿಕ ಕ್ರಿಯೆ. ಪ್ರತಿಯೊಂದು ತರಗತಿಯೂ ತನ್ನದೇ ಆದ ಕಾಲ ದೇಶಗಳ ಪರಿಸರ, ಪರಿಮಿತಿಯಲ್ಲಿ ನಡೆಯುವ ಸಂಕೀರ್ಣ ಜೀವಂತ ವ್ಯವಹಾರ. ಇದನ್ನು ಯಶಸ್ವಿಯಾಗಿಸಲು ಬೇಕಾದ ಪರಿಕರ, ಹದ, ವಾತಾವರಣ ಇವುಗಳನ್ನು ರೂಪಿಸಿಕೊಳ್ಳುವುದು ಆಯಾ ಸನ್ನಿವೇಶಗಳಲ್ಲಿ ಪಾಲ್ಗೊಳ್ಳುವ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿ. ಆದ್ದರಿಂದ ಯಾವುದೇ ವಿಧಾನವನ್ನು “ಇದು ಅತ್ಯುತ್ತಮ” ಎಂದು ಸಾರಿದರೆ “ತಲೆಗೆಲ್ಲ ಒಂದೇ ಮಂತ್ರ” ಎಂಬ ಮಾತನ್ನು ನಿಜ ಮಾಡಿದಂತೆ. ಅಲ್ಲದೆ ಈ ಜವಾಬ್ದಾರಿ ಮತ್ತು ಸ್ವಾತಂತ್ರ್ಯ ಎರಡೂ ಕಲಿಸುವವರ, ಕಲಿಯುವವರ ಹಕ್ಕು.