ದೇವ ದೇವನ ನಿಜವನರಿಯಲು
ಮನವು ತೊಳಲುತ ಬಳಲಿದೆ
ಬೀಗ ಮುದ್ರೆಯನಿಟ್ಟ ಕೋಣೆಯೊ-
ಳಲೆವ ಮರುಳನ ಹೋಲಿದೆ.
ದಿವ್ಯ ಪ್ರೇಮಕೆ ದೊರೆವನಾತನು,
ಶ್ರದ್ಧೆಗಲ್ಲದೆ ಒಲಿಯನು !
ವೇದ ಶಾಸ್ತ್ರ ಪುರಾಣ ದರ್ಶನ-
ದಾಚೆಗೇ ನಿಂತಾತನು !
ಭಕ್ತಿಗೊಲಿಯುವ ಹೃದಯದಮೃತಾ-
ನಂದರೂಪನು ಆತನು ;
ಇದನರಿತ ಆ ಯೋಗಿವರ್ಯರು
ಯುಗ ಯುಗವು ತಪಗೈವರು.
ಭಕ್ತಿಯೆಚ್ಚರಗೊಳಲು ಎದೆಯಲಿ
ಅವನೆ ನಿನ್ನನು ಸೆಳೆವನು.
ಈ ರಹಸ್ಯವ ಜಗದ ಸಂತೆಯ
ಜನದ ಜಂಗುಳಿಗೊರೆಯೆನು !
ಶ್ರೀಪ್ರಸಾದನು ನುಡಿವನೀ ತೆರ :
‘ಮಾತೃಭಾವದಿ ನೆನೆವೆನು,
ನನ್ನ ಸೂಚನೆಯರಿತು ನೀವೇ
ತಿಳಿಯಿರಾತನ ನಿಜವನು.’
Leave A Comment