ಕಂಡ ಕಂಡ ಹೆಣ್ಣ್ಣಮೊಗದಿ
ನಿನ್ನ ಮೊಗವನರಸಿದೆ,
ಏನಾದರು ಕಾಣಲಿಲ್ಲ
ನಿಡುಸುಯ್ಲೊಳು ಮುಳುಗಿದೆ.

ಎಳೆಯ ತನದಿ ಕಂಡ ನೆನಪು
ಮಸಕು ಮಸಕು ಮನದಲಿ
ಕರುಣೆಯಿಂದ ಕಂಡ ಕಣ್ಣು
ಮುತ್ತನಿಟ್ಟ ತುಟಿಯ ಚಿತ್ರ
ಇಷ್ಟು ಮಾತ್ರ ಉಳಿದಿರುವುದು
ಸವಿನೆನಪಿನ ಪುಟದಲಿ !

ಒಬ್ಬಿಬ್ಬರ ಮೊಗದಿ ನಿನ್ನ
ಬಿಂಬ ಮೂಡಿದಂತೆ ಭಾಸ-
ವಾಯಿತೊಮ್ಮೆ ಅಂದು ನಾನು
ರೋಮಾಂಚನಗೊಳ್ಳಲು ;
ಎಂತಿದ್ದೆಯೊ ತಾಯಿ ನೀನು,
ನಾನು ಚಿತ್ರಗಾರನೇನು
ನಿನ್ನ ಚಿತ್ರ ಬರೆಯಲು ?
ಇಂತು ಕಾಲ ಕಳೆದುದಾಯ್ತು,
ಎಲ್ಲ ಹೆಣ್ಣ ಮೊಗದಿ ನಿನ್ನ
ಬಿಂಬ ಕಾಣುವಾಸೆಯೊಂದೆ
ನನ್ನ ಸುತ್ತ ಮುತ್ತಿತು.

ಮದುವೆಯಾಯ್ತು, ಮಕ್ಕಳಾಯ್ತು
ಬಾಳ ನೂಲು ಬಿಗಿಯಿತು.
ಕಡೆಗೆ ಇಲ್ಲಿ ನನ್ನ ಮಡದಿ
ಮಗುವಿಗೆ ಮುತ್ತಿಡುವ ಹೊತ್ತು
ನಿನ್ನ ಚಿತ್ರ ಮೂಡಿತು
ಬೆರಗು-ಹರ್ಷ ಕವಿಯಿತು !