ಮನೆಯ ತಲೆಬಾಗಿಲಲಿ ನಿಂತಿರುವ ದೊರೆಯೆ
ಒಳಗೆ ದಯಮಾಡೆನಲು ದನಿಯಿಲ್ಲವೆನಗೆ
ನನ್ನ ಕೋಣೆಯ ತುಂಬ ಯುಗಯುಗದ ಕಸ ತುಂಬಿ
ನಾನೆ ನಾಚುವ ಹಾಗೆ ಬಿದ್ದಿರುವುದು.

ನನ್ನ ಪುಣ್ಯೋದಯದ ಫಲವಾಗಿ ನೀನಿಂದು
ನನ್ನ ಮನೆಬಾಗಿಲಿಗೆ ದಯಮಾಡಿಸಿರುವೆ.
ಮನೆಯ ಗುಡಿಸದೆ ನಾನು ಮುಸುಕೆಳೆದು ಮಲಗಿದ್ದೆ
ಕಸದಲ್ಲಿ ನಾನೊಂದು ಕಸವಾಗುತ.

ಇಂದು ನೀ ಬಂದಿರುವೆ, ಗುಡಿಸಲೂ ಹೊತ್ತಿಲ್ಲ
ಯಾವ ಮಂಕೋ ಏನೊ ಕವಿದಿತ್ತು ನನಗೆ
ಕಣ್ಣೀರು ಹರಿಯುತಿದೆ, ತಪ್ಪೆನ್ನದೈ ದೊರೆಯೆ
ಆಲಸ್ಯವನು ಕ್ಷಮಿಸು, ಕರುಣಿಸೆನಗೆ.