ಮಿರುಗುತಿದೆ ನಿನ್ನ ಅಪರೂಪರಾಶಿ ನಿಬಿಡಾಂಧಕಾರದಲ್ಲಿ !
ನಿನ್ನನದರಿಂದಲೇ ನೆನೆವರೌ ಯೋಗಿಗಳು ಗಿರಿಗುಹೆಗಳಲ್ಲಿ !
ಅನಂತ ಅಂಧಕಾರದ ಮೇಲೆ ಮಹಾನಿರ್ವಾಣ ಹಿಲ್ಲೋಲದಲ್ಲಿ
ಹರಿಯುತಿದೆ ನಿರಂತರವು ಚಿರ ಶಾಂತಿ ಪರಿಮಳವ ಚೆಲ್ಲಿ !

ಕಗ್ಗತ್ತಲುಡಿಗೆಯನು ಧರಿಸಿ ಈ ಮಹಾಕಾಲ ರೂಪದಲ್ಲಿ
ನೀನಾರು ತಾಯಿ ಮಗ್ನಳಾಗಿರುವೆ ಮಹಾ ಸಮಾಧಿಯಲ್ಲಿ !
ನಿನ್ನಭಯ ಪದಕಮಲ ಪ್ರೇಮಕಾಂತಿಯ ಮಿಂಚು ಬೆಳಕಿನಲ್ಲಿ
ಅಟ್ಟಹಾಸದೊಳಿರುವ ನಿನ್ನ ಚಿನ್ಮಯ ವದನ ಕಾಣುತಿಹುದಿಲ್ಲಿ !