ಯಜಮಾನರಿಗೆ ಅಪಸ್ಮಾರ ಗಾಢನಿದ್ದೆಯಲ್ಲಿ ಇದ್ದಾಗ ಬರುತ್ತೆ. ಕೈ ಕಾಲು ಬಡಿಯುತ್ತಾರೆ ಹಾಗೂ ಒಂದು ತರಹ ಕೂಗು ಬರುತ್ತೆ. ಈ ರೋಗ ಶುರುವಾಗಿರುವುದು ಪಿ.ಯು.ಸಿ ನಲ್ಲಿ ಇದ್ದಾಗ. ಅದು ಕೂಡ ರಾತ್ರಿ ವೇಳೆಯಲ್ಲಿ ಶುರು ಆಗಿದೆಯಂತೆ. ಆದರೆ ಹಳ್ಳಿ ಮನೆ ಆಗಿದ್ದುದರಿಂದ ಎರಡು ವರ್ಷದ ಮೇಲೆ ಚಿಕಿತ್ಸೆ ಶುರುವಾಯಿತು. ತೊಂಬತ್ತೊಂದರಲ್ಲಿ ನನಗೆ ವಿಷಯ ತಿಳಿಯಿತು ಆದರೂ, ನನ್ನ ಕೈಲಿ ಸಾಧ್ಯವಿದ್ದದ್ದು ಮಾಡಿದೆ. ನಿಮ್ಹಾನ್ಸ್ನಲ್ಲಿ ತೋರಿಸಿದೆ. ಚಿಕಿತ್ಸೆ ನಡೆಯುತ್ತಾ ಇದೆ. ಆದರೂ ಎರಡು – ಮೂರು ತಿಂಗಳಿಗೊಮ್ಮೆ ಅಪಸ್ಮಾರ ಕಾಣಿಸಿಕೊಳ್ಳುತ್ತದೆ. ಅದು ಬರುವುದು ಕೂಡ ಮಧ್ಯಾಹ್ನ ಗಾಢವಾಗಿ ಮಲಗಿದಾಗ ಮತ್ತೆ ಎದ್ದಾಗ, ಅವರಿಗೆ ತಿಳಿದಿರುವುದಿಲ್ಲ. ಹಾಗೇ ಆ ದಿನ ರಾತ್ರಿ ಖಂಡಿತವಾಗಿ ಬಂದೇ ಬರುತ್ತೇ ಅದೂ ಗಾಢವಾಗಿ ಮಲಗಿದಾಗ ರಾತ್ರಿ ಸುಮಾರು ನಾಲ್ಕು -ಐದು ಸಲ ಬಂದೇ ಬರುತ್ತೆ. ವೈದ್ಯರು ಮತ್ತೆ ಮಾತ್ರೆ ಹೆಚ್ಚಿಸುತ್ತಾರೆ. ನನಗಂತೂ ಜೀವನವೇ ಬೇಸರವಾಗಿದೆ.

ಅಪಸ್ಮಾರದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಲೇಖನಗಳು ಬಂದಿರುತ್ತದೆ. ಇದರ ಬಗ್ಗೆ ಜನಸಾಮಾನ್ಯರಲ್ಲಿ ಇನ್ನೂ ಸಾಕಷ್ಟು ತಪ್ಪು ಅಭಿಪ್ರಾಯಗಳು, ಮೂಢನಂಬಿಕೆಗಳು, ಇರುವುದು ದುರ್ದೈವ. ಅಪಸ್ಮಾರದ ಬಗ್ಗೆ ಅಪಾರ ಸಂಶೋಧನೆ ನಡೆದು ವಿಫುಲ ಸಾಹಿತ್ಯ ನಿರ್ಮಾಣವಾಗಿದೆ. ಈ ಕಾಯಿಲೆಯಲ್ಲಿ ಖಂಡಿತವಾಗಿಯೂ ಹತೋಟಿಗೆ ತರಲು ಸಾಧ್ಯ. ನೀವು ನಿಮ್ಮ ಗಂಡನ ಅಟ್ಯಾಕ್‌ಗಳ ಬಗ್ಗೆ ನಿರಾಶಾಭಾವನೆ, ಅನಪೇಕ್ಷಿತ ಉದ್ವಿಗ್ನತೆ, ಖಿನ್ನತೆಗೆ ತೊಡಗಿದರೆ ಸಮಸ್ಯೆ ಇನ್ನೂ ಜಟಿಲವಾಗುವ ಸಾಧ್ಯತೆ ಉಂಟು. ಆದ್ದರಿಂದ ಕಾಯಿಲೆ ಬಗ್ಗೆ ಕೆಳಕಂಡ ವಿವರಣೆ ನಿಮಗೆ ಸಮಾಧಾನ ನೀಡಲು ಸಾಕು.

ಜೋರಾಗಿ ಮಳೆಬಂದು ನಿಮ್ಮ ಮನೆಯಲ್ಲಿ ಗೋಡೆಯಲ್ಲಿ ನೀರಿನ ತೇವ ಆವರಿಸಿಕೊಳ್ಳುತ್ತದೆ ಎಂದು ಊಹಿಸಿಕೊಳ್ಳಿ, ಆ ಸನ್ನಿವೇಶದಲ್ಲಿ ಲೈಟನ್ನು ಹಾಕಲು ನೀವು ಸ್ವಿಚ್ಚನ್ನು ಮುಟ್ಟಿದಾಗ, ವಿದ್ಯುಚ್ಛಕ್ತಿ ಶಾರ್ಟ್‌ ಸರ್ಕೀಟ್ ಆಗಿ ಶಾಕ್ ಹೊಡೆಸಿಕೊಳ್ಳುತ್ತೀರಿ. ಅದೇ ರೀತಿ ಮೆದುಳಿನ ಅಸಂಖ್ಯಾತ ಮಿಲಿಯ ಜೀವಾಣುಗಳಲ್ಲಿ ಅಲ್ಪ ಪ್ರಮಾಣದ ವಿದ್ಯುಚ್ಛಕ್ತಿ ಇದ್ದು ಅದು ಮೆದುಳಿನಲ್ಲೆಲ್ಲಾ ಸಂಚರಿಸುತ್ತಲೇ ಇರುತ್ತದೆ. ಅದರ ಗತಿಯಲ್ಲಿ ಅಘಾತಗೊಂಡ ಮೆದುಳಿನ ಜೀವಾಣು ಬಂದಾಗ ವಿದ್ಯುಚ್ಛಕ್ತಿ ಏರುಪೇರಾಗುತ್ತದೆ. ಆಗ ವ್ಯಕ್ತಿಯಲ್ಲಿ ಅಪಸ್ಮಾರ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಚಿಕಿತ್ಸೆ ನೀಡಲೇಬೇಕಾದ ಅವಶ್ಯಕತೆ ಇದೆ. ಹೇಗೆ ಮನೆಯಲ್ಲಿನ ವಿದ್ಯುಚ್ಛಕ್ತಿ ಶಾರ್ಟ್‌ ಆದಾಗ ಮನೆಯಲ್ಲಿನ ಫ್ಯೂಸ್‌ ಕೆಟ್ಟು ದೀಪಗಳು ಆರಿಹೋಗುತ್ತದೆಯೋ ಅದೇ ರೀತಿ ಅಪಸ್ಮಾರದ ಅಟ್ಯಾಕ್ ಆಗುವಷ್ಟು ಹೊತ್ತು ಮೆದುಳಿನ ರಕ್ತ ಸಂಚಾರದಲ್ಲಿ ಏರುಪೇರಾಗಿ ಮೆದುಳಿನ ಜೀವಾಣುಗಳಿಗೆ ಆಘಾತವಾಗಿ ಹಲವು ಸಹಸ್ರ ಜೀವಾಣುಗಳು ಗತಿಸುತ್ತವೆ. ಈ ಗತಿಸಿದ ಭಾಗಕ್ಕೆ ಮತ್ತೆ ವಿದ್ಯುತ್ ಸಂಚಲನೆ ಬಂದಾಗ ಮತ್ತೆ ಶಾರ್ಟ್‌ ಆಗಿ ಅಟ್ಯಾಕ್ ಕಾಣಿಸಿಕೊಳ್ಳುತ್ತದೆ. ಹೀಗೆ ಅದು ಸುಳಿ ಚಕ್ರವಾಗಿ ಮುಂದುವರೆಯುತ್ತದೆ. ನಿಮ್ಮ ಪ್ರಶ್ನೆಗಳಿಗೆ ಉತ್ತರ ಈ ರೀತಿ ಇದೆ.

ಅಪಸ್ಮಾರವನ್ನು ಖಂಡಿತ ನಿಯಂತ್ರಿಸಿ ಮೆದುಳಿನ ಆಘಾತವನ್ನು ತಪ್ಪಿಸಬಹುದು. ಆದರೆ ಅದಕ್ಕೆ ಅತ್ಯಂತ ನಿಖರವಾಗಿ ನೀಡಿದ ನಿರ್ದಿಷ್ಟ ಔಷಧಿಯ ಪ್ರಮಾಣವನ್ನು ಹಲವು ವರ್ಷಗಳೇ ಕೊಡಬೇಕಾಗುತ್ತದೆ. ಒಮ್ಮೆ ಮಾತ್ರ ತಪ್ಪಿದರೂ ಅಟ್ಯಾಕ್ ಮರುಕಳಿಸಬಹುದು. ಮತ್ತೆ ಚಿಕಿತ್ಸೆಯ ಪುನರಾವರ್ತನೆಯಾಗಬೇಕಾಗುತ್ತದೆ. ರೋಗಿಗೆ ಮೆದುಳಿನ ಆಘಾತದಿಂದ ಉಂಟಾಗುವ ಮರೆವಿನಿಂದ ಆತನಿಗೆ ಇತರರು ಕಟ್ಟುನಿಟ್ಟಾಗಿ ಔಷಧಿಯನ್ನು ನೀಡುವ ವ್ಯವಸ್ಥೆ ಮಾಡಿದರೆ ಉಚಿತ.

ಅವರು ಮಧ್ಯಾಹ್ನ ಮಲಗುವುದರ ಬಗ್ಗೆ ಬರೆದಿದ್ದೀರಿ. ಅಪಸ್ಮಾರದಲ್ಲಿ ಮಧ್ಯಾಹ್ನ ಮಲಗುವುದನ್ನು ತಪ್ಪಿಸಿದರೆ ಉಚಿತ. ಅದೇ ರೀತಿ ರಾತ್ರಿ ಅವರು ನಿದ್ದೆಗೆಡಬಾರದು.

ಒಂದು ರೀತಿಯ ಅಪಸ್ಮಾರ, ರೋಗಿ ನಿದ್ರೆ ಹೋದ ಪೂರ್ವದಲ್ಲಿ ಅಥವಾ ಮುಂಜಾನೆ ಏಳುವ ಸಮಯ ನಿದ್ರೆಯಲ್ಲಿಯೇ ಕಾಣಿಸಿಕೊಳ್ಳುವುದು.

ಅಪಸ್ಮಾರಕ್ಕೂ ಲೈಂಗಿಕ ಚಟುವಟಿಕೆಗಳಿಗೂ ಖಚಿತವಾದ ಸಂಬಂಧವಿಲ್ಲ. ಆದರೆ ಲೈಂಗಿಕ ನಿಷ್ಕ್ರಿಯತೆ ನರಮಂಡಲದ ಆಘಾತದಿಂದಾಗಲಿ, ಹೆಚ್ಚಿನ ಪ್ರಮಾಣದ ಔಷಧಿಯ ಸೇವನೆಯಿಂದಾಗಲೀ ಅಥವಾ ಅತಿರೇಕ ಆತಂಕದ ಸ್ಥಿತಿಯಿಂದಾಗಲೀ ಆಗಬಹುದು. ಎರಡಕ್ಕೂ ನೇರ ಸಂಪರ್ಕ ಇಲ್ಲ. ಅಪಸ್ಮಾರದ ಚಿತ್ತವಿಕಲತೆಯಲ್ಲೂ ಸಹ ಲೈಂಗಿಕ ನಿಷ್ಕ್ರಿಯತೆ ಸಾಧ್ಯ. ನಿಮ್ಮ ವೈದ್ಯರೊಂದಿಗೆ ಈ ಬಗ್ಗೆ ಚರ್ಚಿಸಿದರೆ ಪರಿಹಾರ ಖಂಡಿತ ಇದೆ.