ಪ್ರಾಥಮಿಕ ತರಗತಿಯಲ್ಲಿ ಶಿಕ್ಷಕಿ ಒಂದು ಬಗೆಯ ಹೂವನ್ನು ತೋರಿಸಿ ಈ ಪ್ರಕಾರದ ಹೂವಿಗೆ ಐದು ಪಕಳೆಗಳಿರುತ್ತವೆೆ ಎಂದು ವಿವರಿಸಿದಳು. ಮರುದಿನ ಆ ತರಗತಿಯ ಓರ್ವ ಬಾಲಕ ಅದೇ ಪ್ರಕಾರದ ಹೂವಿಗೆ ಆರು ಪಕಳೆಗಳು ಇರುವುದನ್ನು ಹೂ ಸಮೇತ ಶಿಕ್ಷಕಿಗೆ ತೋರಿಸಿ ಇದಕ್ಕೇನು ಹೇಳುವಿರಿ ಎಂದು ಕೇಳಿದ. ಗಾಬರಿಗೊಂಡ ಶಿಕ್ಷಕಿ ಸಿಟ್ಟಿನಿಂದ ಬಾಲಕನ ಕಿವಿ ಹಿಂಡಿ ಎಳೆದಾಡಿದಳು. ಆಘಾತಗೊಂಡು ಬಾಲಕ ನೇರವಾಗಿ ಮನೆಗೆ ಹೋಗಿ ತಾನು ಇನ್ನು ಮೇಲೆ ಆ ಶಾಲೆಗೆ ಹೋಗುವುದಿಲ್ಲವೆಂದು ತಾಯಿಗೆ ಹೇಳಿದ. ತಾಯಿ ಮಗನಿಗಾದ ಅನ್ಯಾಯದ ವಿರುದ್ಧ ಶಾಲೆಯ ಆಡಳಿತ ಮಂಡಳಿಗೆ ದೂರು ನೀಡಿ ಬೇರೆ ಶಾಲೆಗೆ ಬಾಲಕನನ್ನು ಸೇರಿಸಲು ಯಶಸ್ವಿಯಾದಳು. ಏಕೆಂದರೆ ಅವಳೂ ಸಹ ಶಿಕ್ಷಕಿಯಾಗಿದ್ದಳು. ಬಾಲ್ಯದಲ್ಲಿಯೇ ಅನ್ಯಾಯವನ್ನು ಪ್ರತಿಭಟಿಸಿ ವ್ಯವಸ್ಥೆಯನ್ನು ವಿರೋಧಿಸಿದ ಬಾಲಕ ತನ್ನ ಜೀವನದುದ್ದಕ್ಕೂ ವ್ಯವಸ್ಥೆಯ ವಿರೋಧಿಯಾಗಿಯೇ ಉಳಿದ. ಆ ಬಾಲಕನೇ ಇಪ್ಪತ್ತನೆಯ ಶತಮಾನದ ಅಪ್ರತಿಮ ಖಭೌತ ವಿಜ್ಞಾನಿ ಫ್ರೆಡ್ ಹಾಯ್ಲ. ವಿಜ್ಞಾನಿಯಾದಾಗಲೂ ಸಹ ಅತ ಪರಂಪರಾಗತವಲ್ಲದ ವಿಚಾರಧಾರೆಯನ್ನು ಮುಂದಿಟ್ಟು ಭದ್ರವಾಗಿ ತಳವೂರಿದ ‘ಮಹಾಸ್ಫೋಟ’ಮತ್ತು ಡಾರ್ವಿನ್‌ನ ‘ಜೀವ ವಿಕಾಸ’ಸಿದ್ಧಾಂತಗಳನ್ನು ಅಲ್ಲಗಳೆದು ಪ್ರತಿಯಾಗಿ ತನ್ನ ‘ಸ್ಥಿರ ಸ್ಥಿತಿ ಸಿದ್ಧಾಂತ’ಮತ್ತು ‘ಬೀಜಕಣ ಸಂಶ್ಲೇಷಣ’ಸಿದ್ಧಾಂತಗಳನ್ನು ಮಂಡಿಸಿದ ಮೇಧಾವಿ. ಆ ಸಿದ್ಧಾಂತಗಳ ಪ್ರಸ್ತುತತೆ ಏನೇ ಆಗಿದ್ದರೂ ಅವು ಬೌದ್ದಿಕ ವಿಕಾಸದ ಉಚ್ಚತಮ ಬಿಂದುಗಳೆಂದು ಮನುಕುಲದ ಇತಿಹಾಸದಲ್ಲಿ ಸದಾ ಸ್ಥಾನ ಪಡೆಯುತ್ತವೆ. 2009ನ್ನು ಅಂತಾರಾಷ್ಟ್ರೀಯ ಖಗೋಲ ವಿಜ್ಞಾನ ವರ್ಷವೆಂದು ಅಚರಿಸುವ ಸಂದರ್ಭದಲ್ಲಿ ಈ ಮಹಾನ್ ಖಭೌತ ವಿಜ್ಞಾನಿಯನ್ನು ನೆನಪಿಸಿಕೊಳ್ಳುವುದು ತುಂಬಾ ಸಮಯೋಚಿತವಾಗಿದೆ.

ಫ್ರೆಡ್ ಹಾಯ್ಲ ಇಂಗ್ಲೆಂಡಿನ ಪಶ್ಚಿಮ ಯಾರ್ಕ್‌ಶೈರದ ಬಿಂಗ್ಲೆ ನಗರದಲ್ಲಿ, 1915ರ ಜೂನ್ 24ರಂದು ಜನಿಸಿದ. ಆತ ಹುಟ್ಟಾ ಪ್ರತಿಭಾವಂತ. ಮೂರನೇ ವರ್ಷದವನಿದ್ದಾಗಲೇ ಗಡಿಯಾರ ನೋಡಿ ಸಮಯವನ್ನು ಹೇಳುತ್ತಿದ್ದ. ದೊಡ್ಡ ಅಂಕಿಗಳ ಮಗ್ಗಿಗಳನ್ನು ನಾಲ್ಕು ವರ್ಷದವನಿದ್ದಾಗ ಹೇಳುತ್ತಿದ್ದ. ಅವನ ತಾಯಿ ಮೇಬೆಲ್ ಸಂಗೀತದಲ್ಲಿ ತುಂಬಾ ಪರಿಣತಿಯನ್ನು ಹೊಂದಿದ್ದಳು. ಲಂಡನ್ನಿನ ‘ರಾಯಲ್ ಕಾಲೇಜ್ ಆಫ್ ಮ್ಯೂಜಿಕ್’ಸಂಸ್ಥೆಯಲ್ಲಿ ಸಂಗೀತ ಕಲಿತ ಮೇಬೆಲ್‌ಳು ಪಿಯಾನೋ ವಾದನದಲ್ಲಿ ಪ್ರಖ್ಯಾತಿ ಪಡೆದಿದ್ದಳು. ಫ್ರೆಡ್ ಹಾಯ್ಲ ಕೂಡಾ ಚಿಕ್ಕ ವಯಸ್ಸಿನಲ್ಲಿ ಪಿಯಾನೋ ವಾದನದಲ್ಲಿ ಪಳಗಿದ್ದ. ಅವನ ತಂದೆ ಜಾರ್ಜ್ ಹಾಯ್ಲ ಉಣ್ಣೆ ವ್ಯಾಪಾರಿಯಾಗಿದ್ದ.

ಫ್ರೆಡ್ ಹಾಯ್ಲ

ಬಿಂಗ್ಲೆಯ ಮಾರ್ನಿಂಗ್ ರೋಡ್ ಸ್ಕೂಲಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ, ಹಾಯ್ಲ ಉನ್ನತ ವ್ಯಾಸಂಗವನ್ನು ಕೇಂಬ್ರಿಜ್‌ನ ಇಮಾನ್ಯುಯಲ್ ಕಾಲೇಜಿನಲ್ಲಿ ಕೈಗೊಂಡ. ಅಲ್ಲಿ ಅತಿ ಪ್ರಖ್ಯಾತ ವಿಜ್ಞಾನಿಗಳಾದ ಮಾಕ್ಸ್ ಬಾರ್ನ್, ಆರ್ಥರ್ ಎಡಿಂಗ್ಟನ್ ಮತ್ತು ಪಾಲ್ ಡಿರಾಕ್ ಅವರುಗಳು ಫ್ರೆಡ್ ಹಾಯ್ಲನಿಗೆ ಪ್ರಾಧ್ಯಾಪಕರಾಗಿದ್ದರು. 1936ರಲ್ಲಿ ಗಣಿತದ ಟ್ರೈಪಾಸ್ ಪರೀಕ್ಷೆಯಲ್ಲಿ ಫ್ರೆಡ್ ಹಾಯ್ಲ ಉತ್ತೀರ್ಣನಾದ. ಆ ವರ್ಷ ಉಚ್ಚಸ್ಥಾನ ಪಡೆದ ಹತ್ತು ವಿದ್ಯಾರ್ಥಿಗಳಲ್ಲಿ ಒಬ್ಬನಾದ. ಫ್ರೆಡ್ ಹಾಯ್ಲ ಆನ್ವಯಿಕ ಗಣಿತದಲ್ಲಿ ಉತ್ತಮ ವಿದ್ಯಾರ್ಥಿಯೆಂಬ ಹೆಗ್ಗಳಿಕೆಯೊಂದಿಗೆ ‘ಮ್ಯಾಥ್ಯೂ’ಪ್ರಶಸ್ತಿ ಪಡೆದ. ಕೇಂಬ್ರಿಜ್‌ನಲ್ಲಿ ಆನ್ವಯಿಕ ಗಣಿತದಲ್ಲಿ ಸಂಶೋಧನೆ ಮುಂದುವರಿಸಿ ಅತ್ಯುತ್ತಮ ಸಾಧನೆಗಾಗಿ 1938ರಲ್ಲಿ ಸ್ಮಿತ್ ಪ್ರಶಸ್ತಿ ಬಾಚಿಕೊಂಡನು. 1939ರಲ್ಲಿ ಕ್ವಾಂಟಂ ಎಲೆಕ್ಟ್ರೋಡೈನಮಿಕ್ಸ್‌ದಲ್ಲಿ ಪ್ರಮುಖ ಸಂಶೋಧನಾ ಲೇಖನವನ್ನು ಕೇಂಬ್ರಿಜ್‌ನ ಪ್ರತಿಷ್ಠಿತ ಜರ್ನ್‌ಲ್ ಒಂದರಲ್ಲಿ ಪ್ರಕಟಿಸಿದ. ಅದೇ ವರ್ಷ ಸೆಂಟ್ ಜಾನ್ ಫೆಲೋಶಿಪ್‌ಗೆ ಆಯ್ಕೆಯಾದ. ಈ ಎಲ್ಲ ಬೆಳವಣಿಗೆಗಳಿಂದ ಆತ ತುಂಬಾ ಯಶಸ್ವೀ ಸಂಶೋಧಕನಾದ. ಆದರೆ ಆ ವೇಳೆಗೆ ವಿಶ್ವದ ಎರಡನೆಯ ಮಹಾಯುದ್ಧ ಪ್ರಾರಂಭವಾದದ್ದರಿಂದ, ಫ್ರೆಡ್ ಹಾಯ್ಲನ ಪ್ರಗತಿಗೆ ಅಡಚಣೆಯುಂಟಾಯಿತು. ಯುದ್ಧದ ಕೆಲಸಗಳಲ್ಲಿ ಆತ ತೊಡಗಬೇಕಾಯಿತು. ಹರ್ಮಾನ್ ಬೊಂಡಿ ಮತ್ತು ಥಾಮಸ್ ಗೋಲ್ಡ್‌ರೊಡಗೂಡಿ ‘ರಾಡಾರ್’ವಿಕಸನ ಯೋಜನೆಯಲ್ಲಿ ತೊಡಗಿದ. ಬಿಡುವು ದೊರೆತಾಗ ಖಗೋಲ ವಿಜ್ಞಾನ ಕುರಿತಾಗಿ ಚರ್ಚೆ ಮಾಡುತ್ತಿದ್ದ. ರಾಡಾರ್ ಸಂಬಂಧ ಕೆಲಸಕ್ಕಾಗಿ ಹಾಯ್ಲ 1944ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ. ಇಲ್ಲಿ ಆತನಿಗೆ ಪರಮಾಣು ಬಾಂಬ್ ಯೋಜನೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ಇಲ್ಲಿಯೇ ಆತ ಬೀಜಕಣ ಸಂಶ್ಲೇಷಣೆ ಸಿದ್ಧಾಂತದತ್ತ ಅಸಕ್ತಿ ಬೆಳೆಸಿಕೊಂಡ. ಮಹಾಯುದ್ಧ ಕೊನೆಗೊಂಡ ನಂತರ ಹಾಯ್ಲ ಕೇಂಬ್ರಿಜ್‌ಗೆ ಮರಳಿ ಖಗೋಲ ವಿಜ್ಞಾನದಲ್ಲಿ ಸಂಶೋಧನೆ ಪ್ರಾರಂಭಿಸಿದ.

ಫ್ರೆಡ್ ಹಾಯ್ಲನ ಸಿದ್ಧಾಂತಗಳು

ವಿಶ್ವವಿಕಾಸ ಕುರಿತಾದ ‘ಸ್ಥಿರ ಸ್ಥಿತಿ ಸಿದ್ಧಾಂತ’(Steady State Theory)ಮತ್ತು ಜೀವ ವಿಕಾಸ ಕುರಿತಾದ ‘ಬೀಜ ಕಣ ಸಂಶ್ಲೇಷಣಾ ಸಿದ್ಧಾಂತ’ (Nucleosynthesis)ಎಂಬ ಫ್ರೆಡ್ ಹಾಯ್ಲನ ಎರಡು ಸಿದ್ಧಾಂತಗಳು ತುಂಬಾ ಪ್ರಸಿದ್ದಿಯನ್ನು ಪಡೆದವು.

ಸ್ಥಿರ ಸ್ಥಿತಿ ಸಿದ್ಧಾಂತ (Steady State theory):

ವಿಶ್ವದ ಉತ್ಪತ್ತಿಯನ್ನು ವಿವರಿಸಿಲು ‘ಮಹಾಸ್ಫೋಟ’ಸಿದ್ಧಾಂತಕ್ಕೆ ಪ್ರತಿಯಾಗಿ  ಫ್ರೆಡ್ ಹಾಯ್ಲನು ಥಾಮಸ್ ಗೋಲ್ಡ್ ಮತ್ತು ಹರ್ಮಾನ್ ಬಾಂಡಿಯವರೊಡಗೂಡಿ ತನ್ನ ‘ಸ್ಥಿರ ಸ್ಥಿತಿ ಸಿದ್ಧಾಂತ’ವನ್ನು ಪ್ರತಿಪಾದಿಸಿದ. ಈ ಸಿದ್ಧಾಂತದ ಪ್ರಕಾರ ವಿಶ್ವಕ್ಕೆ ಆದಿಯೂ ಇಲ್ಲ, ಅಂತ್ಯವೂ ಇಲ್ಲ. ಕಾಲ ಗತಿಯಲ್ಲಿ ಅದು ಪರಿವರ್ತನೆ ಹೊಂದದೆ ಇದ್ದಂತೆ ಇರುತ್ತದೆ. ಈ ಸಿದ್ಧಾಂತವು ಎರಡು ಪೂರ್ವ ಕಲ್ಪನೆಗಳನ್ನು ಆಧರಿಸಿದೆ. ಅಂದರೆ ಯಾವುದೇ ಸ್ಥಳ ಅಥವಾ ದಿಕ್ಕನ್ನು ಅದು ಅವಲಂಬಿಸಿರುವುದಿಲ್ಲ. ಎರಡನೇ ಪೂರ್ವ ಕಲ್ಪನೆಯ ಪ್ರಕಾರ ಯಾವುದೇ ವೀಕ್ಷಕನಿಗೂ ಅದು ಎಲ್ಲ ಕಾಲದಲ್ಲೂ ಒಂದೇ ತೆರನಾಗಿರುತ್ತದೆ. ಈ ಸಮಾಂಗತ್ವ (Symmetry),ಸಮದಿಶಿತ್ವ ಮತ್ತು ಸಾರ್ವಕಾಲಿಕ (Eternal)ತೆಯನ್ನು ‘ವಿಶ್ವತತ್ವ’ಎಂದು ಕರೆಯಲಾಗುತ್ತದೆ. ಆದರೆ ಹಬಲ್‌ನ ಕೆಂಪು ಪಲ್ಲಟ (Red Shift)ಶೋಧನೆಯ ಪ್ರಕಾರ ವಿಶ್ವ ಹಿಗ್ಗುತ್ತಲಿದೆ. ಅಂದರೆ ಗ್ರಹ, ನಕ್ಷತ್ರ, ಆಕಾಶಗಂಗೆಗಳು ಪರಸ್ಪರ ದೂರ ಸರಿಯುತ್ತವೆ. ಆದ್ದರಿಂದ ವಿಶ್ವದ ಸರಾಸರಿ ದ್ರವ್ಯರಾಶಿ ಮತ್ತು ಚೈತನ್ಯಗಳು ಬದಲಾವಣೆ ಹೊಂದುತ್ತವೆ. ಇದು ವಿಶ್ವತತ್ವಕ್ಕೆ ವಿರುದ್ಧವಾದ್ದರಿಂದ ಫ್ರೆಡ್ ಹಾಯ್ಲ ಮತ್ತು ಅವನ ಸಂಗಡಿಗರ ಸ್ಥಿರ ಸ್ಥಿತಿ ಸಿದ್ಧಾಂತ ಗಟ್ಟಿಯಾಗಿ ನಿಲ್ಲಲಿಲ್ಲ. ಈ ಸಿದ್ಧಾಂತದಲ್ಲಿದ್ದ ನ್ಯೂನತೆಗಳನ್ನು ಸರಿಪಡಿಸಿ ಬಲವಾದ ಕೆಲವೊಂದು ಅಂಶಗಳನ್ನು ಸೇರಿಸಿ 1993ರಲ್ಲಿ ಹೊಸ ರೂಪದ ‘ಭಾಗಶಃ ಸ್ಥಿರ ಸ್ಥಿತಿ ಸಿದ್ಧಾಂತ’ (Quasi Steady State Theory)ವನ್ನು ಹಾಯ್ಲ ಭಾರತೀಯ ಖಗೋಲ ವಿಜ್ಞಾನಿ ಜಯಂತ್ ನಾರ್ಲೀಕರ್ ಅವರೊಡಗೂಡಿ ಮಂಡಿಸಿದನು.

ಸಂಶ್ಲೇಷಣಾ ಸಿದ್ಧಾಂತ

ಜೈವಿಕ ಕ್ರಿಯೆ (Nuclear reaction)ಗಳಿಂದ ಮೂಲ ವಸ್ತುಗಳು ಉತ್ಪತ್ತಿಯಾಗುವ ವಿಧಾನವನ್ನು ಈ ಸಿದ್ಧಾಂತವು ವಿವರಿಸುತ್ತದೆ. ವಿಶ್ವದಲ್ಲಿ ಕಾರ್ಬನ್ನಿನ ದೊಡ್ಡ ಪ್ರಮಾಣಕ್ಕೆ ನಕ್ಷತ್ರಗಳಲ್ಲಿ ಜರುಗುವ ಬೈಜಿಕ ಕ್ರಿಯೆಯೇ ಕಾರಣವೆಂದು ಫ್ರೆಡ್ ಹಾಯ್ಲ ಅಭಿಪ್ರಾಯ ಪಡುತ್ತಾರೆ. ಪ್ರೋಬೀಜಕಣಗಳ ಸಂಯೋಗದಿಂದ ಇಲ್ಲವೆ ಕಾರ್ಬನ್-ನೈಟ್ರೊಜನ್ ಚಕ್ರ (Carbon-Nitrogen cycle)ದಿಂದ ಹೈಡ್ರೊಜನ್ (Hydrogen)ಹೀಲಿಯಂ ಆಗಿ ಮಾರ್ಪಡುತ್ತದೆ. ಪ್ರೋ-ಪ್ರೋಸಂಯೋಗ ಕ್ರಿಯೆಯಲ್ಲಿ ನಾಲ್ಕು ಹೈಡ್ರೊಜನ್ ಬೀಜಗಳು (Hydrogen nuclei)ಸೇರಿ ಹೀಲಿಯಂ ಉತ್ಪನ್ನವಾಗುತ್ತದೆ. ಇದಲ್ಲದೆ ಬೇರಿಯಂ ಮತ್ತು ಬೋರಾನ್‌ಗಳು ಉತ್ಪತ್ತಿಯಾಗುತ್ತವೆ. ಕಾರ್ಬನ್-ನೈಟ್ರೊಜನ್ ಚಕ್ರವು ಹೈಡ್ರೊಜನ್ ಅನ್ನು ಹೀಲಿಯಂ ಆಗಿ ಪರಿವರ್ತಿಸುತ್ತದೆ. ಜೊತೆಗೆ ಬೈಜಿಕ ಶಕ್ತಿಯ ಬಿಡುಗಡೆಯಾಗುತ್ತದೆ. ಉಷ್ಣತೆ 180ಲಕ್ಷ ಕೆಲ್ವಿನ್‌ಗಿಂತ ಕಡಿಮೆ ಇದ್ದರೆ ಪ್ರೋ-ಪ್ರೋಸಂಯೋಗಕ್ರಿಯೆ  ಕಾರ್ಬನ್-ನೈಟ್ರೊಜನ್ ಚಕ್ರಕ್ಕಿಂತ ಹೆಚ್ಚಾಗಿರುತ್ತದೆ. ಒಂದು ವೇಳೆ ಉಷ್ಣತೆ 180ಲಕ್ಷ ಕೆಲ್ವಿನ್‌ಗಿಂತ ಹೆಚ್ಚಿದ್ದರೆ ತದ್ವಿರುದ್ಧ ಕ್ರಿಯೆ ನಡೆಯುತ್ತದೆ. ಹೀಗೆ ಉಷ್ಣತೆಯನ್ನು ಅವಲಂಬಿಸಿ ಪದಾರ್ಥ ವಿಕಾಸವಾಗಿದೆ ಎಂದು ಹಾಯ್ಲ ವಿವರಿಸುತ್ತಾರೆ.

ಜೀವದ ಉತ್ಪತ್ತಿಗೆ ಸಂಬಂದಿಸಿದ ಫ್ರೆಡ್ ಹಾಯ್ಲರ ವಿಚಾರ ಸರಣಿ ಅವರಿಗೆ ಖ್ಯಾತಿಯನ್ನು ಕೊಟ್ಟಿದೆ. ಡಾರ್ವಿನ್ ಜೀವವಿಕಾಸವಾದವನ್ನು ಅವರು ಒಪ್ಪುವುದಿಲ್ಲ. ಡಾರ್ವಿನ್‌ನ ಜೀವವಿಕಾಸದಲ್ಲಿ ಹೇಳಿರುವಂತೆ ಭೂಮಿಯ ಮೇಲೆ ಜೀವಿಗಳ ಉತ್ಪತ್ತಿಯಾಗಿಲ್ಲವೆಂದೂ ಸರ್ವಶುಕ್ಲ (Pansperia)ಗಳ ಮೂಲಕ ಅದು ಅಂತರಿಕ್ಷದಲ್ಲಿ ಆಗಿದೆ. ಹಾಗೂ ಧೂಮಕೇತುಗಳಿಂದ ಧಾರಾಕಾರವಾಗಿ ಬಂದ ವೈರಸ್‌ಗಳಿಂದ ಜೀವವಿಕಾಸವಾಗಿದೆ ಎಂದು ಫ್ರೆಡ್ ಹಾಯ್ಲ ವಾದಿಸುತ್ತಾರೆ. ‘Evolution from space’ಎಂಬ ಅವರ ಗ್ರಂಥದಲ್ಲಿತುಂಬಾ ಸ್ವಾರಸ್ಯಕರವಾಗಿ ಜೀವ ವಿಕಾಸವನ್ನು ವರ್ಣಿಸಿದ್ದಾರೆ.

ಹಾಯ್ಲ ಕೇವಲ ವಿಜ್ಞಾನಿಯಷ್ಟೇ ಅಲ್ಲ. ಅವರು ವಿಜ್ಞಾನವನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಜನಪ್ರಿಯ ವಿಜ್ಞಾನ ಸಾಹಿತ್ಯ ಪ್ರಚಾರಕರು (Science Populariser)ಕೂಡಾ ಆಗಿದ್ದರು. ಅದೂ ಖಗೋಲ ವಿಜ್ಞಾನ ಕುರಿತಾಗಿ ಬರೆದ ಅವರ ಜನಪ್ರಿಯ ವಿಜ್ಞಾನ ಸಾಹಿತ್ಯದ ಭಾಷೆ ಮತ್ತು ಶೈಲಿ ತುಂಬಾ ಮೆಚ್ಚುಗೆ ಪಡೆದವು. ವೈಜ್ಞಾನಿಕ ಕಲ್ಪನಾ ಸಾಹಿತ್ಯದ ನಲವತ್ತು ಪುಸ್ತಕಗಳನ್ನು ಅವರು ಬರೆದಿದ್ದಾರೆ. ಇವರ ಜನಪ್ರಿಯ ವಿಜ್ಞಾನ ಸಾಹಿತ್ಯವನ್ನು ಕೊಂಡಾಡಿದ ರಾಯಲ್ ಸೊಸೈಟಿ ‘ರಾಯಲ್ ಮೆಡಲ್’ನೀಡಿ ಗೌರವಿಸಿತು. ದೇಶ ವಿದೇಶಗಳ ವಿಜ್ಞಾನ ಅಕಾಡೆಮಿಗಳು, ವಿಶ್ವವಿದ್ಯಾಲಯಗಳು ಅವರಿಗೆ ಪದವಿ, ಪ್ರಶಸ್ತಿಗಳನ್ನು ನೀಡಿ ತಮ್ಮ ಗೌರವವನ್ನು ಹೆಚ್ಚಿಸಿಕೊಂಡಿವೆ. ಇವೆಲ್ಲವುಗಳಿಗೆ ಕಳಸವಿಟ್ಟಂತೆ ಸ್ವೀಡಿಶ್ ಅಕಾಡೆಮಿಯು ಅವರಿಗೆ ‘ಕ್ರಾಫರ್ಡ್’ಪುರಸ್ಕಾರ ನೀಡಿ ಗೌರವಿಸಿತು. ಇದು ನೊಬೆಲ್ ಪುರಸ್ಕಾರಕ್ಕೆ ಸಮನಾದದ್ದು. ನೊಬೆಲ್ ಪುರಸ್ಕಾರ ನೀಡುವ ಕ್ಷೇತ್ರಗಳನ್ನು ಹೊರತು ಪಡಿಸಿದ ಕ್ಷೇತ್ರದಲ್ಲಿಯ ಅಪೂರ್ವ ಸಂಶೋಧನೆಗೆ ಈ ಪುರಸ್ಕಾರ ನೀಡಲಾಗುತ್ತದೆ. ಫ್ರೆಡ್ ಹಾಯ್ಲರ ಗೌರವಾರ್ಥ Asteroid 8077’ಎಂದು ಒಂದು ಉಲ್ಕೆಗೆ ಅವರ ಹೆಸರನ್ನಿಡಲಾಗಿದೆ.

2007ರ ಆಗಸ್ಟ್ 25ರಂದು ಇಂಗ್ಲೆಂಡಿನಲ್ಲಿ ಫ್ರೆಡ್ ಹಾಯ್ಲ ನಿಧನರಾದರು. ತನ್ನ ಕಾಲದ ಸುಭದ್ರ ಸಿದ್ಧಾಂತಗಳಿಗೆ ಸವಾಲೆಸೆದ ಅಸಾಧಾರಣ ಬುದ್ದಿಮತ್ತೆ ಮತ್ತು ಪ್ರತಿಭಾವಂತಿಕೆಗಳಿಂದ ಫ್ರೆಡ್ ಹಾಯ್ಲ ಅಪ್ರತಿಮ ವಿಜ್ಞಾನಿಯಾಗಿ ಚಿರನೂತನರಾಗಿದ್ದಾರೆ ಎನ್ನಬಹುದು.