ತಾನೆ ಭಕ್ತ ತಾನೆ ಮಾಹೇಶ್ವರನು
ತಾನೆ ಪ್ರಸಾದಿ ತಾನೆ ಪ್ರಾಣಲಿಂಗಿ

[1]ತಾನೆ ಶರಣ[2] ತಾನೆ ಐಕ್ಯನೋಡಾ.
ತನ್ನಿಂದಧಿಕವಪ್ಪ ಘನವಿಲ್ಲವಾಗಿ ತಾನೆ ಷಟ್ಸ್ಥಲ ಬ್ರಹ್ಮ
ತಾನೆ ನಾದಬಿಂದು ಕಲಾತೀತ[3]ವಹ[4] ಮಹಾಘನಲಿಂಗೈಕ್ಯ
ತಾನಲ್ಲದೆ ಮತ್ತಾರುಂಟು ಹೇಳಾ,
ಅಪ್ರಮಾಣ ಕೂಡಲಸಂಗಮದೇವ.


ತಾನೆ ಇಷ್ಟಲಿಂಗ ತಾನೆ ಪ್ರಾಣಲಿಂಗ ತಾನೆ ಭಾವಲಿಂಗ ನೋಡಾ.
ತಾನೆ ಅಚಾರಲಿಂಗ ತಾನೆ ಗುರುಲಿಂಗ ತಾನೆ ಶಿವಲಿಂಗ ನೋಡಾ.
ತಾನೆ ಜಂಗಮಲಿಂಗ ತಾನೆ ಪ್ರಸಾದಲಿಂಗ ತಾನೆ ಮಹಾಲಿಂಗ ನೋಡಾ.
ತನ್ನಿಂದಧಿಕವಪ್ಪ ಲಿಂಗವಿಲ್ಲವಾಗಿ ತಾನೆ ಸ್ವಯಂಲಿಂಗಿ ನೋಡಾ.
ಅಪ್ರಮಾಣ ಕೂಡಲಸಂಗಮದೇವ.


ತನ್ನಲ್ಲಿ ಅನಂತಕೋಟಿ ಬ್ರಹ್ಮರುತ್ಪತ್ಯ ಸ್ಥಿತಿಲಯ ನೋಡಾ.
ತನ್ನಲ್ಲಿ ಅನಂತಕೋಟಿ ವಿಷ್ಣ್ವಾದಿಗಳುತ್ಪತ್ಯ ಸ್ಥಿತಿಲಯ ನೋಡಾ.
ತನ್ನಲ್ಲಿ ಅನಂತಕೋಟಿ ಇಂದ್ರಾದಿಗಳುತ್ಪತ್ಯ ಸ್ಥಿತಿಲಯ ನೋಡಾ.
ತನ್ನಲ್ಲಿ ಅನಂತಕೋಟಿ ದೇವರ್ಕಳುತ್ಪತ್ಯ ಸ್ಥಿತಿಲಯ ನೋಡಾ.
ತಾನೆ ಅಖಂಡ ಅಪ್ರಮೇಯ ಅಗಮ್ಯ ಅಗೋಚರಕ್ಕತ್ತತ್ತಲಾದ
ಮಹಾಘನ ಲಿಂಗನೋಡಾ,
ಅಪ್ರಮಾಣ ಕೂಡಲಸಂಗಮದೇವ.


ತಾನೆ ಗುರುತತ್ವ [5]ತಾನೆ ಶಿವತತ್ವ[6] ತಾನೆ ಪರತತ್ವ ತಾನೆ ಅಲ್ಲದೆ
ಬೇರೆ ಪರಬ್ರಹ್ಮವುಂಟೆಂಬ ಭ್ರಾಂತು ಭ್ರಮಿತರ ನಾನೇನೆಂಬೆನಯ್ಯಾ,
ಅಪ್ರಮಾಣ ಕೂಡಲಸಂಗಮದೇವ.


ಆದಿ ಅನಾದಿಯಿಲ್ಲದಂದು ತಾನೆ ಪ್ರಣವ ಸ್ವರೂಪನು
ಅಜಾಂಡ ಬ್ರಹ್ಮಾಂಡವಿಲ್ಲದಂದು ತಾನೆ ನಾದಬಿಂದು ಕಲಾತೀತನು.
ಜೀವ ಪರಮರಿಲ್ಲದಂದು ತಾನೆ ನಾಮರೂಪು ಕ್ರಿಯಾತೀತನು.
ಸಚರಾಚರಂಗಳೆಲ್ಲಾ ರಚನೆಗೆ ಬಾರದಂದು [7]ತಾನೆ[8] ಅಖಂಡ ಪರಿಪೂರ್ಣ,
ಅಪ್ರಮೇಯ ಅಗಮ್ಯ ಅಗೋಚರಕ್ಕತ್ತತ್ತ,
ಮಹಾಘನ ಚೈತನ್ಯಲಿಂಗ ನೋಡಾ,
ಅಪ್ರಮಾಣ ಕೂಡಲಸಂಗಮದೇವ.


ಸ್ವರ್ಗಲೋಕ ತಾನಿರ್ದಲ್ಲಿ ಮರ್ತ್ಯಲೋಕ ತಾನಿರ್ದಲ್ಲಿ
ಪಾತಾಳಲೋಕ ತಾನಿರ್ದಲ್ಲಿ ಬ್ರಹ್ಮಲೋಕ ತಾನಿರ್ದಲ್ಲಿ
ವಿಷ್ಣುಲೋಕ ತಾನಿರ್ದಲ್ಲಿ, ಜ್ಯೋತಿರ್ಮಯಲೋಕ ತಾನಿರ್ದಲ್ಲಿ
ರುದ್ರಲೋಕ ತಾನಿರ್ದಲ್ಲಿ, ಕೈಲಾಸ ತಾನಿರ್ದಲ್ಲಿ,
ಚರಾಚರಂಗಳೆಲ್ಲಾ ತಾನಿರ್ದಲ್ಲಿ, ತನ್ನಿಂದಧಿಕಮಪ್ಪ ದೈವವೊಂದಿಲ್ಲವಾಗಿ,
ಇವೆಲ್ಲಾ ತನ್ನಾಧೀನವಲ್ಲದೆ ಅವರಾಧೀನ ತಾನಲ್ಲ ನೋಡಾ,
ಅಪ್ರಮಾಣ ಕೂಡಲಸಂಗಮದೇವ.


ಅಂಗಾಲ ಕಣ್ಣವರು ಮೈಯ್ಯಲ್ಲಾ ಕಣ್ಣವರು ತಾನಿರ್ದಲ್ಲಿ.
ಗಂಗಾಧರ ಗೌರೀಶ್ವರರು ತಾನಿರ್ದಲ್ಲಿ
ಶಂಕರ ಶಶಿಧರ ನಂದಿವಾಹನರು ತಾನಿರ್ದಲ್ಲಿ
ತ್ರಿಶೂಲ ಖಟ್ಟಾಂಗಧರರು ತಾನಿರ್ದಲ್ಲಿ
ತನ್ನಿಂಧದಿಕರೊಬ್ಬರಿಲ್ಲವಾಗಿ ತಾನೆ ಸ್ವಯಂಭು ನೋಡಾ.
ಅಪ್ರಮಾಣ ಕೂಡಲಸಂಗಮದೇವ.


ಬ್ರಹ್ಮ ವಿಷ್ವಾದಿಗಳು ತಾನಿರ್ದಲ್ಲಿ. ರುದ್ರ ಈಶ್ವರರು ತಾನಿರ್ದಲ್ಲಿ,
ಪಂಚಮುಖ ದಶಭುಜವನುಳ್ಳ ಸದಾಶಿವ ಜನಕಲೋಕ ತಾನಿರ್ದಲ್ಲಿ,
ತಪೋಲೋಕ ತಾನಿರ್ದಲ್ಲಿ, ಸತ್ಯಲೋಕ ತಾನಿರ್ದಲ್ಲಿ,
ಗೋಲೋಕ ಕಾಳಾಂಧರಲೋಕ ತಾನಿರ್ದಲ್ಲಿ,
ಇಂತೀ ಲೋಕಾದಿಲೋಕಂಗಳೆಲ್ಲಾ ತನ್ನಲ್ಲಿ ಉತ್ಪತ್ತಿಸ್ಥಿತಿ ಲಯವಾದ ಕಾರಣ
ತಾನೆ ಪರಂಜ್ಯೋತಿರ್ಲಿಂಗ ನೋಡಾ,
ಅಪ್ರಮಾಣ ಕೂಡಲಸಂಗಮದೇವ,


ಋಗ್ವೇದ ಯಜುರ್ವೇದ ತಾನಿರ್ದಲ್ಲಿ, ಸಾಮವೇದ ಅಥರ್ವಣವೇದ ತಾನಿರ್ದಲ್ಲಿ,
ಉದಾತ್ತ ಅನುದಾತ್ತ ಸ್ವರಿತ ಪ್ರಚೆಯಂಗಳೆಂಬ ಸ್ವರಂಗಳು [9]ತಾನಿರ್ದಲ್ಲಿ[10],
ಅನಂತ [11]ಕೋಟಿ[12] [13]ವೇದಂಗಳು[14] ತಾನಿರ್ದಲ್ಲಿ
ಅಜಪೆ ಗಾಯತ್ರಿ ತಾನಿರ್ದಲ್ಲಿ, ಛಂದಸ್ಸು ನಿಘಂಟು ಶಾಸ್ತ್ರಂಗಳೆಲ್ಲ ತಾನಿರ್ದಲ್ಲಿ,
ಅಷ್ಟಾದಶ ಪುರಾಣಂಗಳು ತಾನಿರ್ದಲ್ಲಿ,
ಅಷ್ಟವಿಂಶತಿ ದಿವ್ಯಾಗಮಂಗಳು ತಾನಿರ್ದಲ್ಲಿ,
[15]ಇವೆಲ್ಲ ತನ್ನಲ್ಲಿ ಉತ್ಪತ್ತಿಸ್ಥಿತಿಲಯವಲ್ಲದೆ ಮತ್ತೇನುಂಟು ಹೇಳಾ
ತನ್ನಿಂದಧಿಕವಹ ಪರಬ್ರಹ್ಮವಿಲ್ಲವಾಗಿ,
ತಾನೇ ಸಹಜ ನಿರಾಲಂಬವಾಗಿಹ ಸ್ವಯಂಭುಲಿಂಗ ನೋಡಾ;[16]
[17]ಅನಂತ[18] ಅಪ್ರಮಾಣ ಕೂಡಲಸಂಗಮದೇವಾ.

೧೦
ಇವು ತನ್ನಲ್ಲಿ ಉತ್ಪತ್ತಿಸ್ಥಿತಿಲಯವಲ್ಲದೆ ಮತ್ತಾರುಂಟು ಹೇಳಾ
ತನ್ನಿಂದಧಿಕವಪ್ಪ ಪರಬ್ರಹ್ಮವಿಲ್ಲವಾಗಿ,
ತಾನೆ ಸಹಜ ನಿರಾಲಂಬವಾಗಿಹ ಸ್ವಯಂಭು ನೋಡಾ !
ಆ ಸಪ್ತಕೋಟಿ ಮಹಾಮಂತ್ರಂಗಳು ತಾನಿರ್ದಲ್ಲಿ
ತೊಂಭತ್ತುನಾಲ್ಕು ವ್ಯೊಮವ್ಯಾಪಿ ಪದಂಗಳು ತಾನಿರ್ದಲ್ಲಿ
ಅಕಾರಾದಿ ಕ್ಷಕಾರಾಂತವಾದ ಅಯಿವತ್ತೆರಡು ಅಕ್ಷರಂಗಳು ತಾನಿರ್ದಲ್ಲಿ
ಇನ್ನೂರ ಇಪ್ಪತ್ತು ನಾಲ್ಕು ಭುವನಂಗಳು ತಾನಿರ್ದಲ್ಲಿ
ಮೂವತ್ತಾಱು ತತ್ವಂಗಳು ತಾನಿರ್ದಲ್ಲಿ
ಷಟ್ಕಲೆ ದ್ವಾದಶಕಲೆ ಷೋಡಶಕಲೆಗಳು ತಾನಿರ್ದಲ್ಲಿ
ಅಱುವತ್ತುನಾಲ್ಕು ಕಲೆಯ ಜ್ಞಾನಂಗಳು ತಾನಿರ್ದಲ್ಲಿ
ಇವೆಲ್ಲವು ತನ್ನಲ್ಲಿ ಉತ್ಪತ್ತಿ ಸ್ಥಿತಿಲಯವಾದ ಕಾರಣ
ತನ್ನಿಂದಧಿಕವಪ್ಪ ಘನವೊಂದಿಲ್ಲವಾಗಿ ತಾನೆ ಪರಬ್ರಹ್ಮ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೧
ಮೃತ್ಯುಲೋಕದ ಮಹಾಗಣಂಗಳೆಲ್ಲಾ ತಾನಿರ್ದಲ್ಲಿ, ಶಿವನು ತಾನಿರ್ದಲ್ಲಿ,
ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ತಾನಿರ್ದಲ್ಲಿ,
ಸಹಸ್ರಪಾದವನುಳ್ಳ ಪರಮಪುರುಷರು ತಾನಿರ್ದಲ್ಲಿ,
ವಿಶ್ವತೋಮುಖ ವಿಶ್ವತೋಚಕ್ಷು ವಿಶ್ವತೋ ಬಾಹು
ವಿಶ್ವತೋ ಪಾದವನುಳ್ಳ ಮಹಾಪುರುಷರು ತಾನಿರ್ದಲ್ಲಿ,
ನಾಲ್ವತ್ತೆಂಟು ಸಾವಿರ ಮುನಿಗಳು ತಾನಿರ್ದಲ್ಲಿ,
ಮೂವತ್ತುಮೂಱು ಕೋಟಿ ದೇವರ್ಕಳು ತಾನಿರ್ದಲ್ಲಿ,
ತಾನೆ ಅಖಂಡ ಪರಿಪೂರ್ಣವಾಗಿಹ ಘನವಲ್ಲದೆ
ತನ್ನಿಂದಧಿಕವಪ್ಪವರಾರು ಇಲ್ಲ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೨
ಪೃಥ್ವಿ ಅಪ್ಪು ತೇಜ ವಾಯುವಾಕಾಶ ಚಂದ್ರ ಸೂರ್ಯ ಆತ್ಮರೆಂಬಿ-
ಅಷ್ಟತನು ಮೂರ್ತಿಗಳು ತಾನಿರ್ದಲ್ಲಿ.
ಮಲಯ ಶುಕ್ತಿ ವಿಂಧ್ಯ ಮಹೇಂದ್ರ [19]ವೃಕ್ಷ[20]ವಂತು ಸಹ್ಯವೆಂಬ
ಸಪ್ತಕುಲ ಪರ್ವಂತುಗಳು ತಾನಿರ್ದಲ್ಲಿ
ಲವಣ ಇಕ್ಷು ಸುರೆ ಅಮೃತ ದಧಿ ಕ್ಷೀರ
ಶುದ್ಧ ಜಲವೆಂಬ[21] ಸಮುದ್ರಂಗಳು ತಾನಿರ್ದಲ್ಲಿ,
[22]ಜಂಬುದ್ವೀಪ ಪ್ಲಕ್ಷದ್ವೀಪ ಕುಶದ್ವೀಪ ಶಾಖದ್ವೀಪ ಶಾಲ್ಮಲೀದ್ವೀಪ
ಪುಷ್ಕರದ್ವೀಪ ಕ್ರೌಂಚದ್ವೀಪವೆಂಬ ಸಪ್ತದ್ವೀಪಂಗಳು ತಾನಿರ್ದಲ್ಲಿ[23]
ಪಿಂಡ ಬ್ರಹ್ಮಾಂಡಂಗಳು ತನ್ನಲ್ಲಿಯೆ ಉತ್ಪತ್ತಿ ಸ್ಥಿತಿಲಯವಲ್ಲದೆ
ಮತ್ತಾರುಂಟು ಹೇಳಾ? ಅಪ್ರಮಾಣ ಕೂಡಲಸಂಗಮದೇವ.

೧೩
ಅತಳಲೋಕ ಸುತಳಲೋಕ ತಾನಿರ್ದಲ್ಲಿ
ವಿತಳಲೋಕ ತಳಾತಳಲೋಕ ತಾನಿರ್ದಲ್ಲಿ
ರಸಾತಳಲೋಕ ಸ್ವಸ್ಥಲಲೋಕ ತಾನಿರ್ದಲ್ಲಿ
ಪಾತಳಲೋಕ ತಾನಿರ್ದಲ್ಲಿ ಭೂಲೋಕ ಭುವರ್ಲೋಕ ತಾನಿರ್ದಲ್ಲಿ,
ಮಹಲೋಕ ಸುವರ್ಲೋಕ ತಾನಿರ್ದಲ್ಲಿ
ಜನಲೋಕ ತಪೋರ್ಲೋಕ ತಾನಿರ್ದಲ್ಲಿ.
ಸತ್ಯಲೋಕ ತಾನಿರ್ದಲ್ಲಿ,
[24]ಇಹಲೋಕ ಪರಲೋಕ ಕಾಳಾಂಧರಲೋಕ ತಾನಿರ್ದಲ್ಲಿ
ಇಂತೀ ಲೋಕಾದಿ ಲೋಕಂಗಳೆಲ್ಲಾ ತಾನಲ್ಲ
ಉತ್ಪತ್ಯ ಸ್ಥಿತಿಲಯವಾದಕಾರಣ ತಾನೇ ಪರಂಜ್ಯೋತಿಲಿಂಗ, ನೋಡಾ[25]
ತಾನೆ ಪರತತ್ವ ತನ್ನಿಂದಧಿಕವಪ್ಪ ಘನವೊಂದಿಲ್ಲವಾಗಿ ತಾನೆ ನಿರಾಳನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೪
ನಿವೃತ್ತಿಕಲೆ ಪ್ರತಿಷ್ಠಾಕಲೆ ತಾನಿರ್ದಲ್ಲಿ,
ವಿದ್ಯಾಕಲೆ ಶಾಂತಿಕಲೆ ತಾನಿರ್ದಲ್ಲಿ,
ಶಾಂತಾತೀತ ಕಲೆ ಶಾಂತ್ಯತೀತೋತ್ತರ ಕಲೆ ತಾನಿರ್ದಲ್ಲಿ,
ಕರ್ಮಸಾದಾಖ್ಯ ಕರ್ತೃ ಸಾದಾಖ್ಯ ತಾನಿರ್ದಲ್ಲಿ
ಮೂರ್ತಿಸಾದಾಖ್ಯ ಅಮೂರ್ತಿ ಸಾದಾಖ್ಯ ತಾನಿರ್ದಲ್ಲಿ
ಶಿವಸಾದಾಖ್ಯ ತಾನಿರ್ದಲ್ಲಿ ಮಹಾಸಾದಾಖ್ಯ ತಾನಿರ್ದಲ್ಲಿ,
ಇವೆಲ್ಲಾ ತನ್ನ ಮೂರ್ತಿಯಿಂದಾದುದಲ್ಲದೆ
ಮತ್ತೊಂದು ಮೂರ್ತಿಯಿಂದಾದುದಿಲ್ಲ
ತಾನೆ ಶಿವತತ್ವ ತಾನೆ ಪರತತ್ವ ತಾನೆ ಪರಾತ್ಪರನು ನೋಡಾ.
ತನ್ನಿಂದಧಿಕವಪ್ಪ ಘನವೊಂದಿಲ್ಲವಾಗಿ ತಾನೆ ನಿರಾಳ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೫
ಇಡಾ ಪಿಂಗಳ ಸುಷುಮ್ನ ಗಾಂಧಾರಿ ಹಸ್ತಿಜಿಂಹ್ವೆ
ಪೂಷ ಪಯಶ್ವಿನಿ ಅಲಂಬು ಲಕುಹ ಶಂಕಿನಿಯೆಂಬ
ದಶನಾಳಂಗಳು ತಾನಿರ್ದಲ್ಲಿ.
ಇಡಾ ಪಿಂಗಳ ಸುಷುಮ್ನನಾಳ ಮೊದಲಾದ
ದಶನಾಳಂಗಳೊಳಾಡುವ ವಾಯು ಪ್ರಾಣ ಅಪಾನ ಉದಾನ
ವ್ಯಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ
ಧನಂಜಯನೆಂಬ ದಶವಾಯುಗಳು ತಾನಿರ್ದಲ್ಲಿ.
ಅಗ್ನಿ ಮಂಡಲ ಆದಿತ್ಯ ಮಂಡಲ ಚಂದ್ರಮಂಡಲವೆಂಬ
ಮಂಡಲತ್ರಯಂಗಳು ತಾನಿರ್ದಲ್ಲಿ.
ತಾನೆ ಯಂತ್ರವಾಹಕನಾಗಿ ನಾಗಲೋಕದ ನಾಗಗಣಂಗಳೆಲ್ಲ ತಾನಿರ್ದಲ್ಲಿ,
ದೇವಲೋಕದ ದೇವಗಣಂಗಳೆಲ್ಲ ತಾನಿರ್ದಲ್ಲಿ
ರುದ್ರಲೋಕದ ರುದ್ರಗಣಂಗಳೆಲ್ಲ ತಾನಿರ್ದಲ್ಲಿ
ಭೃಂಗಿ ವಿರೇಶ್ವರ ನಂದಿ ಮಹಾಕಾಳರೆಂಬ ಮಹಾಗಣಂಗಳು ತಾನಿರ್ದಲ್ಲಿ
ತನ್ನಿಂದಧಿಕಮಪ್ಪ ಪರತತ್ವವಿಲ್ಲವಾಗಿ ತಾನೆ ಸ್ವಯಂಭುನಿರಾಳ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೬
ಏವೋ ರುದ್ರ ಮಹೇಶ್ವರಾ ಎಂಬ ಮಹೇಶ್ವರ ತತ್ವ ತಾನಿರ್ದಲ್ಲಿ
[26]ವಿಶ್ವಾಧಿಕ ಮಹಾ[27]ರುದ್ರರು ತಾನಿರ್ದಲ್ಲಿ
[28]ಕೋಟಿ ಶತಕೋಟಿ ಸಾವಿರ ಜಡೆಮುಡಿ ಗಂಗೆ ಗೌರಿಯರು ತಾನಿರ್ದಲ್ಲಿ
ಕೋಟ್ಯಾನುಕೋಟಿ ಕಾಲರುದ್ರರು ತಾನಿರ್ದಲ್ಲಿ[29]
ಅಸಂಖ್ಯಾತ ಪ್ರಳಯಕಾಲರುದ್ರರು ತಾನಿರ್ದಲ್ಲಿ,
ಶತಕೋಟಿ ಸಾವಿರ ಬ್ರಹ್ಮ ಕಪಾಲ ವಿಷ್ಣು ಕಂಕಾಳ
ದಂಡವ ಧರಿಸಿದ ಕಾಲಭೈರವರು ತಾನಿರ್ದಲ್ಲಿ,
ತನ್ನಿಂದಧಿಕವಾದ ವಸ್ತುವಂದೂ ಇಲ್ಲವಾಗಿ
ತಾನೆ ಸದಾನಂದ ನಿತ್ಯ ಪರಿಪೂರ್ಣವಾಗಿಹ ಪರಶಿವತತ್ವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೭
ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣವೆಂಬ
ಜ್ಞಾನೇಂದ್ರಿಯಂಗಳು ತಾನಿರ್ದಲ್ಲಿ.
ವಾಕ್, ಪಾಣಿ, ಪಾದ, ಪಾಯು, ಗುಹ್ಯವೆಂಬ
ಕರಣೇಂದ್ರಿಯಂಗಳು ತಾನಿರ್ದಲ್ಲಿ.
ಶಬ್ದ, ಸ್ಪರ್ಶ, ರೂಪು, ರಸ, ಗಂಧವೆಂಬ
ವಿಷಯಂಗಳು ತಾನಿರ್ದಲ್ಲಿ.
ವಚನ, ಗಮನ, ಆದಾನ, ವಿಸರ್ಜನ. ಆನಂದವೆಂಬ
ಕರ್ಮೇಂದ್ರಿಯಂಗಳ ತನ್ಮಾತ್ರಯಂಗಳು ತಾನಿರ್ದಲ್ಲಿ.
ಮನ, ಬುದ್ಧಿ, ಚಿತ್ತ, ಅಹಂಕಾರ, ಜೀವನೆಂಬ
ಜೀವ ಪಂಚಕಂಗಳು ತಾನಿರ್ದಲ್ಲಿ.
ಇವೆಲ್ಲವೂ [30]ತನ್ನ ಮೂರ್ತಿಯಿಂದಾದುದಲ್ಲದೆ
ಮತ್ತೊಂದು ಮೂರ್ತಿಯಿಂದಾದುದಲ್ಲ,
ತಾನೆ ಶಿವತತ್ತ್ವ, ತಾನೆ ಪರತತ್ವ, ತಾನೆ ಪರಾಪರ
ಇವೆಲ್ಲವ ತನ್ನ ಲೀಲಾಸೂತ್ರಮಾತ್ರದಲ್ಲಿಯೇ
ಆಡಿಸುತ್ತಿಹನಲ್ಲದೆ[31] ತಾನಾಡನು ನೋಡಾ,
ನಮ್ಮ ಅಪ್ರಮಾಣ ಕೂಡಲಸಂಗಮದೇವ.

೧೮
ಕಲ್ಲದೇವರು ದೇವರಲ್ಲ, ಮಣ್ಣದೇವರು ದೇವರಲ್ಲ
ಮರದ ದೇವರು ದೇವರಲ್ಲ, ಪಂಚಲೋಹದಲ್ಲಿ ಮಾಡಿದ ದೇವರು ದೇವರಲ್ಲ.
ಸೇತುರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ
ಅಷ್ಟಾಷಷ್ಟಿಕೋಟಿ ಪುಣ್ಯಕ್ಷೇತ್ರಂಗಳಲ್ಲಿಹ ದೇವರು ದೇವರಲ್ಲ.
ತನ್ನ ತಾನಱಿದು ತಾನಾರೆಂದು ತಿಳಿದಡೆ ತಾನೇ ದೇವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೧೯
ಬ್ರಹ್ಮ ದೇವರಲ್ಲ, ವಿಷ್ಣು ದೇವರಲ್ಲ, ರುದ್ರ ದೇವರಲ್ಲ
ಈಶ್ವರ ದೇವರಲ್ಲ, ಸದಾಶಿವ ದೇವರಲ್ಲ
ಸಹಸ್ರ ಶಿರ, ಸಹಸ್ರಾಕ್ಷ, ಸಹಸ್ರಪಾದವನುಳ್ಳ ವಿರಾಟಪುರುಷ ದೇವರಲ್ಲ.
ವಿಶ್ವತೋಮುಖ, ವಿಶ್ವತೋಚಕ್ಷು, ವಿಶ್ವತೋಬಾಹು
ವಿಶ್ವತೋ ಪಾದವನುಳ್ಳ ಮಹಾಪುರುಷ ದೇವರಲ್ಲ.
ಸಹಜ ನಿರಾಲಂಬವೇ ತಾನೆಂದಱಿದ ಮಹಾಶರಣ
ತಾನೇ ದೇವ ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೦
ಗಂಗಾಧರ ಗೌರೀಶ ದೇವರಲ್ಲ, [32]ಶಂಕರ ಶಶಿಧರ ದೇವನಲ್ಲ[33]
ಪಂಚಮುಖ, ದಶಭುಜವನುಳ್ಳ ನಂದಿವಾಹನರು ದೇವರಲ್ಲ,
ತ್ರಿಶೂಲ, ಖಟ್ವಾಂಗಧರರು ದೇವರಲ್ಲ,
ಬ್ರಹ್ಮಕಪಾಲ, ವಿಷ್ಣುಕಂಕಾಳ ದಂಡವ ಹಿಡಿದ
ಪ್ರಳಯಕಾಲರುದ್ರ ದೇವರಲ್ಲ,
ನಿರಾಳ ಸ್ವಯಂಭು ಲಿಂಗವ ತಾನೆಂದಡೆ
ತಾನೇ ದೇವ ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೧
ನಾಸಿಕದ ತುದಿಯಲ್ಲಿ ಆಡುವ ಪ್ರಾಣವಾಯುವ
ದೇವರೆಂಬರು, ಅಲ್ಲಲ್ಲ ನೋಡಾ !
ಅದೆಂತೆಂದಡೆ :
ಆ ಪ್ರಾಣವಾಯು ನಾಸಿಕದಿಂದ ಹನ್ನೆರಡಂಗುಲ ಪ್ರಮಾಣ
ಹೊಱಹೊಂಟು, ಎಂಟಂಗುಲ ಪ್ರಮಾಣ ತಿರುಗಿ,
ನಾಲ್ಕಂಗುಲ ಪ್ರಮಾಣು ಖಂಡಿಸಿ ಹೋಹುದು ನೋಡಾ,
ಇಂತು ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆಱುನೂಱು
ಶ್ವಾಸಂಗಳು ಹೊಱಹೊಂಟು ಹದಿನಾಲ್ಕು ಸಾವಿರದ ನಾನೂಱು
ಶ್ವಾಸಂಗಳು ತಿರುಗಿ, ಏಳು ಸಾವಿರದ ಇನ್ನೂಱು
ಶ್ವಾಸಂಗಳು ಖಂಡಿಸಿ ಮೃತವಾಗಿ ಹೋಹ ಪ್ರಾಣವಾಯುವ
ದೇವರೆಂಬ ಶಿವದ್ರೋಹಿಗಳ ಎನಗೊಮ್ಮೆ ತೋಱದಿರಯ್ಯಾ,
ಅಪ್ರಮಾಣ ಕೂಡಲಸಂಗಮದೇವ.

೨೨
ಪೃಥ್ವಿ. ಅಪ್ಪು, ತೇಜ, ವಾಯು, ಆಕಾಶವೆಂಬ
ಪಂಚಭೌತಿಕದ ಪಂಚವಿಂಶತಿ ಗುಣಂಗಳಿಂದಾದ
ದೇಹವ ದೇವರೆಂಬರು, ಆ ದೇಹವು ದೇವರಲ್ಲ ನೋಡಾ,
ಸಕಲೇಂದ್ರಿಯಕ್ಕು ಒಡೆಯನಾಗಿಹ ಮನವ,
ದೇವರೆಂಬರು, ಆ ಮನ ದೇವರಲ್ಲ ನೋಡಾ,
ಆ ಮನದಿಂದಾದ ಬುದ್ಧಿಯ ದೇವರೆಂಬರು,
ಆ ಬುದ್ಧಿ ದೇವರಲ್ಲ ನೋಡಾ.
ಆ ಬುದ್ಧಿಯಿಂದಾದ ಚಿತ್ತವ ದೇವರೆಂಬರು,
ಆ ಚಿತ್ತ ದೇವರಲ್ಲ ನೋಡಾ.
ಆ ಚಿತ್ತದಿಂದಾದ ಅಹಂಕಾರವ ದೇವರೆಂಬರು
ಆ ಅಹಂಕಾರ ದೇವರಲ್ಲ ನೋಡಾ.
ಆ ಅಹಂಕಾರದಿಂದಾದ ಜೀವನಾಗಿ ಅಳಿವ
ಜೀವವ ದೇವರೆಂಬರು
ಆ ಜೀವ ದೇವರಲ್ಲ ನೋಡಾ.
ಇವೆಲ್ಲ ಅಳಿವವಲ್ಲದೆ ಉಳಿವವಲ್ಲ
ದೇವರಿಗೆ ಅಳಿವುಂಟೆ?
ಅಳಿವಿಲ್ಲದ ಪರಶಿವ ತತ್ವವ ತಾನೆಂದಱಿದಡೆ,
ತಾನೇ ದೇವ ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೩
ಪಿಂಗಳನಾಳದಲ್ಲಿ ಆಡುವ ಸೂರ್ಯನ ದೇವರೆಂಬರು,
ಆ ಸೂರ್ಯ ದೇವರಲ್ಲ ನೋಡಾ.
ಇಡಾನಾಳದಲ್ಲಿ ಆಡುವ ಚಂದ್ರನ ದೇವರೆಂಬರು,
ಆ ಚಂದ್ರನು ದೇವರಲ್ಲ ನೋಡಾ.
ಸುಷುಮ್ನಾನಾಳದಲ್ಲಿ ಆಡುವ ಜೀವಾತ್ಮನ ದೇವರೆಂಬರು
ಆ ಜೀವಾತ್ಮನು ದೇವರಲ್ಲ ನೋಡಾ.
ಆ ಇಡಾ ಪಿಂಗಳ ಸುಷುಮ್ನ ನಾಳದೊಳಾಡುವ
ಚಂದ್ರ ಸೂರ್ಯ ಜೀವಾತ್ಮರಿಗೆ
[34]ಪರಬ್ರಹ್ಮವೇ ಜನಕನೆಂದಱಿದು.
ಆ ಪರಬ್ರಹ್ಮವೇ ತಾನೆಂದಱಿದಡೆ
ತಾನೇ ದೇವ ನೋಡಾ, ಅಪ್ರಮಾಣ ಕೂಡಲಸಂಗಮದೇವ.

೨೪
ಅಣುಚಕ್ರ ದೇವರಲ್ಲ, ಕೋದಂಡ ಚಕ್ರ ದೇವರಲ್ಲ,
ನಾದಚಕ್ರ ದೇವರಲ್ಲ, ಬಿಂದುಚಕ್ರ ದೇವರಲ್ಲ, ಕಲಾಚಕ್ರ ದೇವರಲ್ಲ.
ನಾದ ಬಿಂದು ಕಲಾತೀತವಾಗಿಹ ಮಹಾಘನ ಲಿಂಗೈಕ್ಯವ
ತಾನೆಂದಱಿದಡೆ, ತಾನೆ ದೇವ ನೋಡಾ.
ಅಪ್ರಮಾಣ ಕೂಡಲಸಂಗಮದೇವ.


[1]      x (ತಾ.ಪ್ರ. ೨೯)

[2]

[3]     ವಾಗಿಹ (ಕಾ.ಪ್ರ. ೧೩)

[4]

[5]      x (ತಾ.ಪ್ರ. ೨೯)

[6]

[7]      x (ಕಾ. ಪ್ರ. ೧೩)

[8]

[9]     ಮೊದಲಾಗಿ (ತಾ.ಪ್ರ. ೨೯)

[11]     x (ಕಾ.ಪ್ರ. ೧೩)

[13]     ಸ್ವರಂಗಳು (ತಾ.ಪ್ರ. ೧೩)

[15]    x (ತಾ.ಪ್ರ. ೨೯)

[17]     x (ತಾ.ಪ್ರ. ೧೨)

[19]    ಶುಕ್ಲ (ಕಾ.ಪ್ರ. ೧೩)

[21]     + ಸಪ್ತ ಸಮುದ್ರಂಗಳು (ಕಾ. ಪ್ರ. ೧೩)

[22] x (ತಾ. ಪ್ರ. ೨೯)

[24]    x (ಕಾ. ಪ್ರ. ೧೩)

[26]    ವಿಶ್ವರೂಪು (ತಾ.ಪ್ರ. ೨೯)

[29]    x (ತಾ.ಪ್ರ. ೨೯)