೨೫
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೆಯೆಂಬ
ಷಡುಚಕ್ರದೊಳಗಣ ದಳ, ವರ್ಣ, ಅಕ್ಷರ, ಅಧಿದೇವತೆ
ಕರ್ಮ ಸಾಧಾಕ್ಯಂಗಳ ದೇವರೆಂಬರು, ಅಲ್ಲಲ್ಲ ನೋಡಾ.
ವಾಚಾತೀತ, ಮನಾತೀತ, ವರ್ಣಾತೀತ, ಅಕ್ಷರಾತೀತವಾಗಿಹ
ಪರಶಿವತತ್ವ ತಾನೆಂದಱಿದಡೆ, ತಾನೇ ದೇವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೬
ಇಡೆಯಲ್ಲಿ ಸುಳಿವ ವಾಯುವ ಸ್ವೀಕರಿಸಿ ನಿಜವನಱಿಯದೆ
ಕೆಟ್ಟವರು ಕೋಟಾನುಕೋಟಿ.
ಪಿಂಗಳೆಯಲ್ಲಿ ಸುಳಿವ ವಾಯುವ ಸ್ವೀಕರಿಸಿ ನಿಜವನಱಿಯದೆ
ಕೆಟ್ಟವರು ಕೋಟಾನುಕೋಟಿ.
ಆಲ್ಲಿಂದತ್ತತ್ತಲಾದ ಮಹಾಘನಲಿಂಗವನಱಿಯದೆ
ಕೆಟ್ಟವರು ಕೋಟಾನುಕೋಟಿ.
ಅಪ್ರಮಾಣ ಕೂಡಲಸಂಗಮದೇವಯ್ಯನ ನಿಲವ ತಾನೆಂದಱಿಯದೆ
ಕೆಟ್ಟ ವೇಷ ಡಂಭಕರ ನಾನೇನೆಂಬೆನಯ್ಯಾ !

೨೭
ಹೃದಯ ಕಮಲ

[1]ಮಧ್ಯ[2]ದಲ್ಲಿ ಲಕ್ಷವಿಟ್ಟು
ನೋಡುವ ದೇವರು ದೇವರಲ್ಲ.
ಭ್ರೂಮಧ್ಯದಲ್ಲಿ ಲಕ್ಷವಿಟ್ಟು
ನೋಡುವ ದೇವರು ದೇವರಲ್ಲ.
ಬ್ರಹ್ಮರಂಧ್ರದಲ್ಲಿ ಲಕ್ಷವಿಟ್ಟು
ನೋಡುವ ದೇವರು ದೇವರಲ್ಲ.
ನಾಸಿಕಾಗ್ರದಲ್ಲಿ ಲಕ್ಷವಿಟ್ಟು
ನೋಡುವ ದೇವರು ದೇವರಲ್ಲ.
ಅಖಂಡ ಗೋಳಕಾಕಾರವಾಗಿಹ ಲಿಂಗವ
ತಾನೆಂದಱಿದಡೆ ತಾನೇ ದೇವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೮
ಭೂಚರಿಯ ಮುದ್ರೆಯ ದೇವರೆಂಬರು,
ಆ ಭೂಚರಿಯ ಮುದ್ರೆಯು ದೇವರಲ್ಲ.
ಖೇಚರಿಯ ಮುದ್ರೆಯು ದೇವರೆಂಬರು,
ಆ ಖೇಚರಿಯ ಮುದ್ರೆಯು ದೇವರಲ್ಲ.
ಶಾಂಭವ ಮುದ್ರೆಯು ದೇವರೆಂಬರು,
ಆ ಶಾಂಭವ ಮುದ್ರೆಯು ದೇವರಲ್ಲ ನೋಡಾ.
ಸ್ವಸ್ಥ ಪದ್ಮಾಸನದಲ್ಲಿ ಕುಳ್ಳಿರ್ದು
ಶ್ರೋತ್ರ ನೇತ್ರ ಜಿಹ್ವೆ ಘ್ರಾಣವೆಂಬ
ಸಪ್ತದ್ವಾರಂಗಳನೊತ್ತಿ ನೋಡಲು
ಆ ಒತ್ತಿದ ಪ್ರಭೆಯಿಂದ ಕುಂಬಾರನ ಚಕ್ರದ ಹಾಂಗೆ
ಶ್ವೇತ ಪೀತ ಕಪೋತ ಹರಿತ ಮಾಂಜಿಷ್ಟ ವರ್ಣವಾಗಿ
ತೋಱುವ ಷಣ್ಮುಖಿ ಮುದ್ರೆಯ ದೇವರೆಂಬರು,
ಅಲ್ಲಲ್ಲ ನೋಡಾ.
ಇವೆಲ್ಲಕ್ಕು ಉತ್ಪತ್ತಿ ಸ್ಥಿತಿ ಲಯ ಉಂಟಾಗಿ ದೇವರಲ್ಲ ನೋಡಾ,
ದೇವರಿಗೆ ಉತ್ಪತ್ತಿ ಸ್ಥಿತಿ ಲಯ ಉಂಟೆ ಹೇಳಾ?
ಈ ಉತ್ಪತ್ತಿ ಸ್ಥಿತಿ ಲಯ ಮತ್ತೆ ಇಲ್ಲದ ಪರತತ್ತ್ವ
ತಾನೆಂದಱಿದಡೆ, ತಾನೇ ದೇವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೨೯
ತಾನೆ ಚಿನ್ನಾದ, ತಾನೆ ಚಿದ್ಬಿಂದು, ತಾನೆ ಚಿತ್ಕಲೆ
ತಾನೆ ಚಿತ್ಕಲಾತೀತ ನೋಡಾ.
ತನ್ನಿಂದಧಿಕವಾದ ದೇವರಿಲ್ಲವಾಗಿ
ತಾನೆ ಚಿದಾನಂದ ಸ್ವರೂಪವಾಗಿಹ ಚಿಲ್ಲಿಂಗ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೦
ತಾನೆ ಚಿದಾಕಾಶ, ತಾನೆ ಚಿದಾನಂದಸ್ವರೂಪವಾಗಿಹ
ಚಿಲ್ಲಿಂಗ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೧
ತಾನೆ ಶಿವಪ್ರಣವ, ತಾನೆ ಶಕ್ತಿಪ್ರಣವ,
[3]ತಾನೆ ಶಿವಶಕ್ತಿರಹಿತವಾಗಿಹ ಮಹಾಪ್ರಣವ ನೋಡಾ.[4]
ತಾನೆ ಆದಿ ಪ್ರಣವ, [5]ತಾನೆ ಅನಾದಿ ಪ್ರಣವ[6],
ತಾನೆ ಕಲಾಪ್ರಣವ ನೋಡಾ.
ತಾನೆ ಅವಾಚ್ಯ ಪ್ರಣವ, ತಾನೆ ನಿರಂಜನ ಪ್ರಣವ,
ತಾನೆ ನಿರಾಮಯ ಪ್ರಣವ ನೋಡಾ.
ತನ್ನಿಂದಧಿಕವಾದ ಪ್ರಣವವೊಂದಿಲ್ಲವಾಗಿ
ತಾನೇ ನಿರಂಜನಾತೀತ ಪ್ರಣವ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

ಸ್ವಯಾನುಸಿದ್ಧಿಸ್ಥಲ ಸಮಾಪ್ತ ಮಂಗಳ ಮಹಾ ಶ್ರೀ ಶ್ರೀ.

೩೨
ಅನಾದಿ ಶಿವತತ್ತ್ವ, ಅನಾದಿ ಈಶ್ವರತತ್ತ್ವ, ಅನಾದಿ ಮಹೇಶ್ವರತತ್ತ್ವವೆಂಬ
ಅನಾದಿ ತ್ರಿತತ್ತ್ವಂಗಳು, ತಾನಲ್ಲ,[ಆದಿ]ಜೀವತತ್ತ್ವ ಆದಿ ಈಶ್ವರತತ್ತ್ವ, ಆದಿ ಮಹೇಶ್ವರತತ್ತ್ವವೆಂಬ
ಅನಾದಿ ತ್ರಿತತ್ತ್ವಂಗಳು ತಾನಲ್ಲ.
ಶಂಕರ, ಶಶಿಧರ, ಗಂಗಾಧರ, ಗೌರೀಶ, ಕಾಲಕಂಠ, ಕಾಪಾಲ, ಮಾಲಾಧರ,
ಕಾಲಾಗ್ನಿ ರುದ್ರ, ಏಕಪಾದ ರುದ್ರ, ಮಹಾಕಾಳ, ಮಹಾನಯನಪಾದ,
ಊರ್ಧ್ವಪಾದ ರುದ್ರ, ಬ್ರಹ್ಮ ಕಪಾಲ ವಿಷ್ಣು ಕಂಕಾಲ ದಂಡವ ಪಿಡಿದಾಡುವ
ಪ್ರಳಯಕಾಲ ರುದ್ರರು.
ಶೂನ್ಯಕಾಯನೆಂಬ ಮಹಾರುದ್ರ
ಅನೇಕ ಮುಖ ಒಂದು ಮುಖ ಒಂದು ಅನೇಕ ಮುಖವಾಗಿಹ
ವಿಶ್ವರೂಪ ರುದ್ರರು ವಿಶ್ವಾಧಿಕ ಮಹಾರುದ್ರ
ಅಂಬಿಕಾಪತಿ ಉಮಾಪತಿ ಪಶುಪತಿ ಮೊದಲಾದ ಗಣಾಧೀಶ್ವರರೆಂಬ
ಮಹಾಗಣಂಗಳು ತಾನಲ್ಲ.
ಸಹಸ್ರ ಶಿರ, ಸಹಸ್ರ ವಿಚಕ್ಷು, ಸಹಸ್ರ ಬಾಹು, ಸಹಸ್ರ ಪಾದವನುಳ್ಳ
ವಿರಾಟಪುರುಷ ದೇವರಲ್ಲ.
ವಿಶ್ವತೋಮುಖ, ವಿಶ್ವತೋಚಕ್ಷು, ವಿಶ್ವತೋ ಬಾಹು ವಿಶ್ವತೋ ಪಾದವನುಳ್ಳ,
ಮಹಾಪುರುಷ ತಾನಲ್ಲ,
ಪಶುಪಾಶಪತಿಯೆಂಬ ಸಿದ್ಧಾಂತಗಳು ತಾನಲ್ಲ,
ತ್ವಂ ಪದ ತತ್‌ಪದ ಅಸಿ ಪದವೆಂಬ ವೇದಾಂತ ವಾದತ್ರಯಂಗಳು ತಾನಲ್ಲ.
ಜೀವಹಂಸ, ಪರಮಹಂಸ ಪರಾಪರವೆಂಬ ಹಂಸತ್ರಯಂಗಳು ತಾನಲ್ಲ.
ಬ್ರಹ್ಮ, ವಿಷ್ಣು, ರುದ್ರ ಈಶ್ವರ ಸದಾಶಿವರೆಂಬ ಪಂಚಮೂರ್ತಿ ತಾನಲ್ಲ
ಸದಾಶಿವ ತತ್ವದಲ್ಲಿ ಉತ್ಪತ್ಯವಾದ ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ,
ಚಂದ್ರ ಸೂರ್ಯ ಆತ್ಮರೆಂಬ ಅಷ್ಟತನುರ್ಮೂರ್ತಿಗಳು ತಾನಲ್ಲ,
ಅಸ್ಥಿ, ಮಾಂಸ, ಚರ್ಮ, ನರ, ರೋಮ, ಇವು ಪೃಥ್ವಿಯಿಂದಾದವು,
ಮೇಧಸ್ಸು, ಶ್ಲೇಷ್ಮ, ಶುಕ್ಲ, ಶೋಣಿತ, ಮೂತ್ರ, ಇವು ಅಪ್ಪುವಿನಿಂದಾದವು.
ಕ್ಷುಧೆ, ತೃಷೆ, ನಿದ್ರೆ, ಆಲಸ್ಯ, ಸಂಗ ಇವು ಅಗ್ನಿಯಿಂದಾದವು.
ಪರಿವ, ಪಾರುವ, ಸುಳಿವ, ಕೂಡುವ, ಅಗಲುವ ಇವು ವಾಯುವಿನಿಂದಾದವು.
ವಿರೋಧಿಸುವ, ಅಂಜುವ, ನಾಚುವ, ಮೋಹಿಸುವ, ಅಹುದಾಗದೆನುವ
ಇವು ಆಕಾಶದಿಂದಾದವು.
ಇಂತೀ ಪಂಚಜಾತಿಕದ ಪಂಚವಿಂಶತಿ ಗುಣಂಗಳಿಂದಾದ ದೇಹವು ತಾನಲ್ಲ.
ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣವೆಂಬ ಜ್ಞಾನೇಂದ್ರಿಯಂಗಳು ತಾನಲ್ಲ.
ಶಬ್ದ, ಸ್ಪರ್ಶ, ರೂಪು, ರಸ, ಗಂಧವೆಂಬ ಪಂಚತನ್ಮಾತ್ರಯಂಗಳು ತಾನಲ್ಲ.
ವಚನ, ಗಮನ, ದನವಿ, ಸರಜ ಆನಂದವೆಂಬ ಕಮೇಂದ್ರಿಯಂಗಳು ತಾನಲ್ಲ.
ಮನ, ಬುದ್ಧಿ, ಚಿತ್ತ ಅಹಂಕಾರವೆಂಬ ಅಂತಃಕರಣಂಗಳು ತಾನಲ್ಲ.
ಇಡಾ, ಪಿಂಗಳ, ಸುಷುಮ್ನಾ, ಗಾಂಧಾರಿ, ಹಸ್ತಿಜಿಹ್ವಾ, ಪೂಷಾ, ಪಯಸ್ವಿನೀ,
ಅಲಂಬು, ಲಕುಹ, ಶಂಕಿನಿಯೆಂಬ ದಶನಾಡಿಗಳು ತಾನಲ್ಲ,
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ,
ಧನಂಜಯವೆಂಬ ದಶವಾಯುಗಳು ತಾನಲ್ಲ,
ಸ್ಥೂಲತನು, ಸೂಕ್ಷ್ಮತನು, ಕಾರಣತನು, ನಿರ್ಮಲತನು. ಆನಂದತನು, ಚಿನ್ಮಯತನು,
ಚಿದ್ರೂಪತನು, ಶುದ್ಧತನುವೆಂಬ ಅಷ್ಟತನುಗಳು ತಾನಲ್ಲ.
ಸಂಸ್ಥಿತ, ತೃಣೀಕೃತ, ವರ್ತಿನಿ, ಕ್ರೋಧಿನಿ, ಮೋಹಿನಿ, ಅತಿಚಾರಿಣಿ, ಗಂಧಚಾರಿಣಿ,
ವಾಸಿನಿ ಎಂಬ ಅಂತರಂಗದ ಅಷ್ಟಮದಂಗಳು ತಾನಲ್ಲ.
ಕುಲ, ಛಲ, ಧನ, ಯೌವನ, ರೂಪು, ವಿದ್ಯ, ರಾಜ, ತಪವೆಂಬ ಬಹಿರಂಗದ
ಅಷ್ಟಮದಂಗಳು ತಾನಲ್ಲ.
ರಸ, ರುಧಿರ, ಮಾಂಸ, ಮೇಧಸ್ಸು, ಅಸ್ತಿ, ಮಜ್ಜೆ, ಶುಕ್ಲವೆಂಬ ಸಪ್ತಧಾತುಗಳು ತಾನಲ್ಲ.
ತನುವ್ಯಸನೆ, ಮನವ್ಯಸನ, ರಾಜ್ಯವ್ಯಸನ. ವಿಶ್ವವ್ಯಸನ, ಉತ್ಸಾಹವ್ಯಸನ,
ಸೇವಕವ್ಯಸನವೆಂಬ ಸಪ್ತವ್ಯಸನಂಗಳು ತಾನಲ್ಲ.
ಕ್ಷುತ, ಪಿಪಾಸೆ, ಶೋಕ, ಮೋಹ ಜನನ ಮರಣವೆಂಬ ಷಡೂರ್ಮಿಗಳು ತಾನಲ್ಲ.
ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವೆಂಬ
ಅರಿಷಡ್ವರ್ಗಂಗಳು ತಾನಲ್ಲ,
ಜಾತಿ, ವರ್ಣ, ಆಶ್ರಮ, ಕುಲ, ಗೋತ್ರ, ನಾಮ, ಭ್ರಮೆಗಳೆಂಬ
ಅಷ್ಟಭ್ರಮೆಗಳು ತಾನಲ್ಲ.
ಅಸ್ತಿ ಜಾಯತೆ, ವಿಪರಿಣತೆ, ವರ್ಧತೆ, ವಿನಮಶ್ಯತಿ ಎಂಬ
ಷಡ್ಭಾವ ವಿಕಾರಂಗಳು ತಾನಲ್ಲ.
ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯವೆಂಬ
ಪಂಚಕೋಶಂಗಳು ತಾನಲ್ಲ.
ಸತ್ವ ರಜ ತಮೋಗುಣತ್ರಯಂಗಳು ತಾನಲ್ಲ.
ಅಧ್ಯಾತ್ಮಿಕ, ಆದಿಭೌತಿಕ, ಆದಿದೈವಿಕವೆಂಬ ತಾಪತ್ರಯಂಗಳು ತಾನಲ್ಲ.
ಸುಖ ದುಃಖ ಪುಣ್ಯ ಪಾಪಂಗಳು ತಾನಲ್ಲ,
ಸಂಚಿತ, ಪ್ರಾರಬ್ಧ, ಆಗಾಮಿಯೆಂಬ ಕರ್ಮತ್ರಯಂಗಳು ತಾನಲ್ಲ.
ಅಗ್ನಿಮಂಡಲ, ಆದಿತ್ಯಮಂಡಲ, ಚಂದ್ರಮಂಡಲವೆಂಬ
ಮಂಡಲತ್ರಯಂಗಳು ತಾನಲ್ಲ.
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ ವಿಶುದ್ಧಿ, ಆಜ್ಞೆ ಎಂಬ
ಷಡುಚಕ್ರಂಗಳ ದಳ ವರ್ಣ ಅಕ್ಷರಂಗಳು ತಾನಲ್ಲ.
ಜಾಗ್ರತ, ಸ್ವಪ್ನ, ಸುಷುಪ್ತಿ, ತುರ್ಯ, ತುರ್ಯಾತೀತಗಳೆಂಬ ಪಂಚಾವಸ್ಥೆಗಳು ತಾನಲ್ಲ.
ಜ್ಞಾತೃ, ಜ್ಞಾನ ಜ್ಞೇಯವೆಂಬ ಜ್ಞಾನತ್ರಯಂಗಳು ತಾನಲ್ಲ.
ಯಮ, ನಿಯಮ, ಆಸನ, ಪ್ರಾಣಾಯಮ, ಪ್ರತ್ಯಾಹಾರ, ಧ್ಯಾನ, ಧಾರಣ,
ಸಮಾಧಿಯೆಂಬ ಅಷ್ಟಾಂಗಯೋಗಂಗಳು ತಾನಲ್ಲ.
ಪ್ರಕೃತಿ, ಪುರುಷ, ನಾದ ಬಿಂದು, ಕಳೆಗಳು ತಾನಲ್ಲ.
ಊರ್ಧ್ವಶೂನ್ಯ, ಮಧ್ಯಶೂನ್ಯ ಸರ್ವಶೂನ್ಯವಾಗಿಹ
ಸಹಜ ನಿರಾಲಂಬವೇ ತಾನೆಂದಱಿದಡೆ
ಮಹಾಶರಣಂಗೆ ನಾಮ ರೂಪು ಕ್ರಿಯಾತೀತವಾಗಿಹ ಮಹಾಘನವೇ ತನ್ನ ಶಿರಸ್ಸು,
ನುಡಿವ ದಿವ್ಯಜ್ಞಾನವೇ ತನ್ನ ಚಕ್ಷು, ಆ ಚಿಲ್ಲ ಪದವೇ ತನ್ನ ಹುಋ.
ಆ ಚಿಲ್ಲಾತೀತವೇ ತನ್ನ ಹಣೆ ನೋಡಾ.
ನಿರಾಮಯವೇ ತನ್ನ ಕರ್ಣ, ನಿರಾಮಯಾತೀತವೇ ತನ್ನ ಕರ್ಣದ್ವಾರ ನೋಡಾ.
ಅಮಲ ನಿರ್ಮಲವೇ ತನ್ನ ಗಲ್ಲ,
ಅಮಲಾತೀತವೇ ತನ್ನ ಗಡ್ಡ ಮೀಸೆ ಕೊರೆದಾಡೆ ನೋಡಾ,
ನಾದಬಿಂದುಕಳಾತೀತವೇ ತನ್ನ ತಾಳೋಷ್ಟ ಸಂಪುಟ ನೋಡಾ,
ಅಕಾರ, ಉಕಾರ, ಮಕಾರ ನಾದಬಿಂದು ಅರ್ಧಚಂದ್ರ ನಿರಾವಿನಾಗತ ಶಕ್ತಿ ವ್ಯಾಪಿನಿ
ವ್ಯೋಮರೂಪಿಣಿ ಆನಂದ ಅನಾಶ್ರಿತ ಸುಮನೆ ಉನ್ಮನಿ,
ಇಂತಿಲ್ಲಿ ಪ್ರಣಮದಲ್ಲಿ ಉತ್ಪತ್ಯವಾದ ಷೋಡಶ ಕಳೆ ತನ್ನ ಷೋಡಶ ದಂತಗಳು ನೋಡಾ,
ಆ ದಂತಗಳ ಕಾಂತಿ ಅನೇಕ ಕೋಟಿ ಸಿಡಿಲು ಹೊಡೆದ ಬಯಲ ಪ್ರಕಾಶವಾಗಿಹುದು ನೋಡಾ,
ತನ್ನ ಕೊರಳೆ ನಿರಾಕೊರಳೆ ತನ್ನ ಭುಜಂಗಳೆ ಅಪ್ರಮಾಣ ಅಗೋಚರ ನೋಡಾ,
ತನ್ನ ಹಸ್ತಂಗಳು ನಖಂಗಳೆ ಪರತತ್ವ, ಗುರುತತ್ವ, ಲಿಂಗತತ್ವಂಗಳು ನೋಡಾ.
ಪರಬ್ರಹ್ಮವೇ ತನ್ನ ಎದೆ, ಆ ಪರಬ್ರಹ್ಮವೆಂಬ ಎದೆಯಲ್ಲಿ ನಿರಂಜನ ಪ್ರಣಮ
ಅವಾಚ್ಯ ಪ್ರಣವವೆಂಬ ಸಣ್ಣ ಕುಚಂಗಳು ನೋಡಾ,
ಚಿತ್ತಾಕಾಶ ಭೇದಾಕಾಶವೆ ತನ್ನ ದಕ್ಷಿಣ ವಾಮ ಪಾರ್ಶ್ವಂಗಳು
ಬಿಂದಾಕಾಶವೇ ತನ್ನ ಬೆನ್ನು ಮಹಾಕಾಶವೇ ತನ್ನ ನೆಟ್ಟೆಲವು ನೋಡಾ,
ಪಂಚ ಸಂಜ್ಞೆಯನುಳ್ಳ ಅಖಂಡ ಗೋಳಾಕಾರ ಲಿಂಗವೆ ತನ್ನ ಗರ್ಭ ನೋಡಾ,
ಆ ಗರ್ಭ ಅನೇಕಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ,
ಆ ಗರ್ಭದಲ್ಲಿ ಅನೇಕ ಕೋಟಿ ತತ್ವಂಗಳು ಅನೇಕ ಕೋಟಿ ಸದಾಶಿವರು
ಅನೇಕ ಕೋಟಿ ಮಹೇಶ್ವರರು ಅಡಗಿಹರು. ಅನೇಕ ಕೋಟಿ ರುದ್ರರು
ಅನೇಕ ಕೋಟಿ ವಿಷ್ಣ್ವಾದಿಗಳಡಗಿಹರು ನೋಡಾ,
ಆ ಗರ್ಭದಲ್ಲಿ ಅನೇಕ ಕೋಟಿ ಬ್ರಹ್ಮರು, ಅನೇಕ ಕೋಟಿ ಋಷಿಗಳು
ಅನೇಕ ಕೋಟಿ ರುದ್ರಾದಿತ್ಯರು ಅಡಗಿಹರು ನೋಡಾ,
ಆ ಗರ್ಭದಲ್ಲಿ ಅನೇಕ ಕೋಟಿ ಇಂದ್ರರು ಅನೇಕ ದೇವರ್ಕಗಳು
ಅನೇಕ ಕೋಟಿ ಬ್ರಹ್ಮ ಮಂಡ[ಲ] ವಡಗಿಹುದು ನೋಡಾ,
ತನ್ನ ನಡುವೆ ವ್ಯೋಮಾತೀತ ತನ್ನ ಕಟಿಸ್ಥಾನವೇ ಕಲಾಪ್ರಣವ
ತನ್ನ ಪಚ್ಟಳವೆ ಅನಾದಿ ಪ್ರಣವ ಆದಿ ಪ್ರಣವ ನೋಡಾ,
ತನ್ನ ಉಪಸ್ಥ ಬ್ರಹ್ಮ, ವಿಷ್ಣು ರುದ್ರ, ಈಶ್ವರ, ಸದಾಶಿವ ಮೊದಲಾದ ಸಮಸ್ತ
ದೇವರ್ಕಗಳಿಗೂ ಜನನ ಸ್ಥಳವಾಗಿಹ ನಿರ್ವಾಹಪದ ನೋಡಾ,
ಶಿವಸಂಬಂಧ, ಶಕ್ತಿ ಸಂಬಂಧವಾಗಿಹ ಓಂಕಾರವೆ ತನ್ನ ಒಳದೊಡೆ,
ಸಚ್ಚಿದಾನಂದ ಪರಮಾನಂದವೆ ತನ್ನ ಮೊ[ಒ]ಳಪಾದ ಕಂಬಗಳು ನೋಡಾ.
ಜೀವಾತ್ಮ ಪರಮಾತ್ಮನೆ ತನ್ನ ಹರಡು ಅತಿ ಸೂಕ್ಷ್ಮ ಪಂಚಾಕ್ಷರವೆ ಪ್ರಣವ
ಪಂಚಾಕ್ಷರವೆ ತನ್ನ ಪಾದಾಂಗುಷ್ಠ, ಅಂಗುಲಿಗಳೆಂಬ ಸಾಯುಜ್ಯ ಪದ ನೋಡಾ.
ತನ್ನ ಸ್ವರವೆ ಪರಾಪರ, ತನ್ನ ಮಾತೆ ಮಹಾಜ್ಯೋತಿರ್ಮಯಲಿಂಗ
ಚಿನ್ಮಯ ಚಿದ್ರೂಪ ಚಿತ್ಪ್ರಕಾಶವೆ ತನ್ನ ಷೋಡಶ ನೋಡಾ.
ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ. ಆಚಾರಲಿಂಗ, ಗುರುಲಿಂಗ,
ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಮೊದಲಾಗಿ
ಇನ್ನೂಱ ಹದಿನಾಱು ಷಡುಸ್ಥಲ ಲಿಂಗವ ತನ್ನಂತಃಸ್ಥಾನದಲ್ಲಿ ಧರಿಸಿ,
ಆಭೂಷಣಂಗಳ ನೋಡಾ.
ಮಹಾಜ್ಞಾನವೆ ತುರುಬು. ಶಿವಜ್ಞಾನವೆ ಶೃಂಗಾರವಾಗಿಹ
ತನ್ನ ತಾನಱಿದು ಅಂತ್ಯಶೂನ್ಯ, ಸರ್ವಶೂನ್ಯ ನಿರಾಕಾರವಾಗಿಹ
ತನ್ನ ಅಂಗ ಪ್ರತ್ಯಂಗ ಸ್ವರೂಪ ಭಾವಂಗವ ತಿಳಿದು
ಮಹಾಶರಣನು ತಾನೆ ಗುರು, ತಾನೆ ಲಿಂಗ, ತಾನೆ ಜಂಗಮ
ತಾನೆ ಪರಮ ಪಾದೋದಕ ಪ್ರಸಾದ ನೋಡಾ.
ತಾನೆ ನಾದಬಿಂದುಕಳಾತೀತ ನೋಡಾ,
ತಾನೆ ಶೂನ್ಯ ನಿಶ್ಶೂನ್ಯನು, ತಾನೆ ಘನಶೂನ್ಯ, ಮಹಾಘನಶೂನ್ಯ ನೋಡಾ.
ತಾ ಬಯಲು, ನಿರ್ಬಯಲು, ತಾನೆ ನಿರುಪಮ ನಿರಾಕಾರ
ತಾನೆ ನಿರಾಳ, ನಿರಾಲಂಬ ನೋಡಾ.
ತಾನೆ ಸಚ್ಚಿದಾನಂದ ನಿತ್ಯ ಪರಿಪೂರ್ಣನು,
ತನ್ನಿಂದಧಿಕವಪ್ಪ ಪರಬ್ರಹ್ಮವೊಂದಿಲ್ಲವಾಗಿ
ತಾನೆ ಸ್ವಯಂಜ್ಯೋತಿರ್ಲಿಂಗ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೩
ಸಪ್ತಕೋಟಿ ಮಹಾಮಂತ್ರಂಗಳು ತಾನಿರ್ದಲ್ಲಿ
ತೊಂಬತ್ತುನಾಲ್ಕು ವ್ಯೋಮ ವ್ಯಾಪ್ತಿಪದಂಗಳು ತಾನಿರ್ದಲ್ಲಿ
ಅಕಾರಾದಿ ಕ್ಷಕಾರಾಂತ್ಯವಾದ ಮೂವತ್ತೆರಡಕ್ಷರಂಗಳು ತಾನಿರ್ದಲ್ಲಿ
ಇನ್ನೂರ ಇಪ್ಪತ್ತುನಾಲ್ಕು ಭುವನಂಗಳು ತಾನಿರ್ದಲ್ಲಿ
ಮೂವತ್ತಾಱು ತತ್ವಂಗಳು ತಾನಿರ್ದಲ್ಲಿ
ಷಟ್‌ಕಳೆ, ದ್ದಾದಶಕಳೆ, ಷೋಡಷಕಳೆಗಳು ತಾನಿರ್ದಲ್ಲಿ
ಅಱುವತ್ತುನಾಲ್ಕು ಕಳೆ ಜ್ಞಾನಂಗಳು ತಾನಿರ್ದಲ್ಲಿ
ಇವೆಲ್ಲವೂ ತಾನಿರ್ದಲ್ಲಿ ಉತ್ಪತ್ತಿ ಸ್ಥಿತಿ ಲಯವಾದ ಕಾರಣ
ತನ್ನಿಂದಧಿಕವಾದ ಜ್ಞಾನವೊಂದಿಲ್ಲವಾಗಿ
ತಾನೇ ಪರಬ್ರಹ್ಮ ನೋಡಾ, ಅಪ್ರಮಾಣ ಕೂಡಲಸಂಗಮದೇವ.

೩೪
ಮರ್ತ್ಯಲೋಕ ಮಹಾಗಣಂಗಳೆಲ್ಲಾ ತಾನಿರ್ದಲ್ಲಿ,
ದೇವಲೋಕದ ದೇವಗಣಂಗಳೆಲ್ಲಾ ತಾನಿರ್ದಲ್ಲಿ,
ರುದ್ರಲೋಕದ ರುದ್ರಗಣಂಗಳೆಲ್ಲಾ ತಾನಿರ್ದಲ್ಲಿ.
ಭ್ರಂಗಿ ವೀರೇಶ್ವರ ನಂದಿ ಮಹಾಕಾಳರೆಂಬ ಮಹಾಗಣಂಗಳೆಲ್ಲ ತಾನಿರ್ದಲ್ಲಿ.
ತನಿಂದಧಿಕವಪ್ಪ ಪರತತ್ವವಿಲ್ಲವಾಗಿ ತಾನೆ ಸ್ವಯಂಭು ನಿರಾಳ ನೋಡಾ,
ಅಪ್ರಮಾಣ ಕೂಡಲಸಂಗಮದೇವ.

೩೫
ಬ್ರಹ್ಮಚಕ್ರದ ಸಹಸ್ರದಳ ಪದ್ಮದೊಳು ದೇವರಿಹುದು,
ಆ ದೇವರ ಕಂಡಿಹೆನೆಂದು ಸ್ವರ್ಗ ಮೋಕ್ಷಂಗಳಿಗೆ ಹೇತುವಾಗಿಹ
ಅನ್ನಪಾನಾದಿಗಳಂ ಬಿಟ್ಟು ತನುವ ದಂಡಿಸಿ,
ಸ್ವಸ್ತ ಪದ್ಮಾಸನದಲ್ಲಿ ಕುಳ್ಳಿರ್ದು, ಮಹಾವಾಯುವಂ ಪಿಡಿದು ಬಹ
ಮೂಲ ಜ್ಯೋತಿಯನೆಬ್ಬಿಸಿ, ಸುಷುಮ್ನನಾಳದ ತುದಿಯನಡರಿಸಿ
ಆ ಮಹಾ ಮೋಕ್ಷದ್ವಾರದೊಳು ಜಿಹ್ವೆಯನೇರಿಸಿ ಅಮೃತವನುಂಡು
ಅಲ್ಲಿಹ ದೇವರ ಕಂಡಿಹೆನೆಂದು ಕಾಣದೆ
ವಾತ ಪಿತ್ಥ ಶ್ಲೇಷ್ಮಾಂಗಗಳಂ ಕುಡಿದು
ಸತ್ತ ಕರ್ಮಯೋಗಿಗಳು ಕೋಟಾನುಕೋಟಿ.
ಅಲ್ಲಿಂದ ಮೇಲೆ ಶಿಖಾಚಕ್ರ ದಶದಳ ಪದ್ಮದೊಳು ದೇವರಿಹುದು,
ಆ ದೇವರ ಕಂಡೆಹೆನೆಂದು ಇಡಾ ಪಿಂಗಳ ಸುಷುಮ್ನ ನಾಳದಲ್ಲಿ
ವಾಯುವ ಸೂಸಲೀಯದೆ ಕುಂಬಾರನ ಚಕ್ರ
ಒಂದು ಸುತ್ತು ಬಹುನಾ[ಆ]ತ್ಮಕ್ಕೆ ಸಾವಿರ ಸುತ್ತು
ಬಹು ಮನವ ನಿಲಿಸಿ ಆ ಮನದ ಸಂಯೋಗದಿಂದ
ಏಕಾಗ್ರಚಿತ್ತನಾಗಿ ಶಿಖಾಚಕ್ರದ ತ್ರಿದಳ ಪದ್ಮದ
ಕರಣಿಕಾಮಧ್ಯದಲ್ಲಿಹ ದೇವರ ಧ್ಯಾನಿಸಿ
ಕಂಡೆಹೆನೆಂದು ಆ ದೇವರ ಕಾಣದೆ ಸತ್ತ
ಧ್ಯಾನ ಯೋಗಿಗಳು ಕೋಟಾನುಕೋಟಿ,
ಅಲ್ಲಿಂದತ್ತ ಮೇಲೆ ಪಶ್ಚಿಮ ಚಕ್ರದೊಳು
ಅಪ್ರವರ್ತನ ವರ್ಣವಾಗಿಹ ಏಕದಳ ಪದ್ಮ
ಸಿಂಹಾಸನದ ಮೇಲೆ ದೇವರ ಲಕ್ಷವಿಟ್ಟು ನೋಡಿ
ಕಂಡಿಹೆನೆಂದು ದೇವರಕಾಣದೆ ಸತ್ತ
ಭ್ರಾಂತಯೋಗಿಗಳು ಕೋಟಾನುಕೋಟಿ.
ಇಂತೀ ಕರ್ಮಯೋಗಿ, ಲಂಬಿಕಾಯೋಗ, ಧ್ಯಾನಯೋಗಗಳೆಂಬ
ಯೋಗಂಗಳ ಸಾಧಿಸಿ ದೇವರ ಕಡಿಹೆನೆಂದು
ಕಾಣದೆ ಸತ್ತ ಭ್ರಾಂತಿಯೋಗಿಗಳಿಗೆ ಕಡೆಯಿಲ್ಲ.
ತನ್ನ ತಾನರಿದು ತಾನಾರೆಂದು ತಿಳಿದಡೆ
ತಾನೆ ದೇವ ನೋಡಾ ಅಪ್ರಮಾಣ ಕೂಡಲಸಂಗಮದೇವ.

೩೬
ತಾನೇ ಚಿತ್ಪ್ರಕಾಶ ತಾನೆ ಬಿಂದ್ವಾಕಾಶ ನೋಡಾ.
ತಾನೇ ಮಹದಾಕಾಶ ತಾನೇ ಪರಾಕಾಶ ನೋಡಾ.
ತನ್ನಿಂದಧಿಕವಾದ ಪರಶಿವತತ್ವವಿಲ್ಲವಾಗಿ
ತಾನೇ ಪರಬ್ರಹ್ಮನೋಡಾ, ಅಪ್ರಮಾಣ ಕೂಡಲಸಂಗಮದೇವ.


[1]     x (ಕಾ.ಪ್ರ. ೧೩)

[2]

[3]     x (ಕಾ.ಪ್ರ. ೧೩.)

[4]

[5] x (ಕಾ.ಪ್ರ. ೧೩)

[6]