ಒಂದು ಸಂಜೆ….

ಹಿಂದೂಸ್ತಾನಿ ಗಾಯಕನೊಬ್ಬನು ಹಾಡುತ್ತಿದ್ದಾನೆ. ತರುಣನೊಬ್ಬನು ಆ ಗಾಯಕನಿಗೆ ಸಾರಂಗಿ ಪಕ್ಕವಾದ್ಯವನ್ನು ನುಡಿಸುತ್ತಿದ್ದಾನೆ. ಗಾಯಕನು ಅತ್ಯಂತ ಉತ್ಸಾಹದಿಂದ ಹಾಡುತ್ತಿದ್ದಾನೆ. ಸಾರಂಗಿ ವಾದ್ಯಕಾರನೂ ಅಷ್ಟೇ ಉತ್ಸಾಹದಿಂದ ನುಡಿಸುತ್ತಿದ್ದಾನೆ. ರಸಿಕರು ತನ್ಮಯರಾಗಿದ್ದಾರೆ.

ಪ್ರತಿಜ್ಞೆ

ಇದಕ್ಕಿದ್ದಂತೆ ಗಾಯಕನು ಸಾರಂಗಿ ವಾದ್ಯಕಾರನನ್ನು ದುರುಗುಟ್ಟಿಕೊಂಡು ನೋಡಿದ. ವಾದ್ಯಕಾರನು ಆ ನೋಟಕ್ಕೆ ಹೆದರಲಿಲ್ಲ. ಗಾಯಕನು, ’ವಹವ್ವಾ, ಬಹಳ ಚೆನ್ನಾಗಿ ನುಡಿಸುತ್ತಿದ್ದೀ, ಆದರೇನು? ಹೇಳಿ ಕೇಳಿ ನೀನು ವಾದ್ಯಕಾರ. ನಮ್ಮ ಮಟ್ಟಕ್ಕೇರಲು ಸಾಧ್ಯವೇ?’ ಎಂದು ವ್ಯಂಗ್ಯ ನಗೆಯಿಂದ ಹೇಳಿದ.

ಸಾರಂಗಿ ವಾದ್ಯಕಾರನಿಗೆ ಮೈಯೆಲ್ಲಾ ಉರಿದು ಹೋಯಿತು. ಕಣ್ಣಗಳಿಂದ ಕಿಡಿಯನ್ನು ಕಾರುತ್ತ, ’ಹಾಡುವ ನಿನಗೆ ಇಷ್ಟು ಪೊಗರೆ? ಇದೋ ಈ ಸಾರಂಗಿಯನ್ನು ಕೆಳಗಿಡುತ್ತಿದ್ದೇನೆ. ಇಂದೇ ಕೊನೆ, ಮತ್ತೆ ವಾದ್ಯವನ್ನು ಮುಟ್ಟುವುದಿಲ್ಲ. ಇದಕ್ಕೆ ಅಲ್ಹಾನ ಆಣೆಯಿದೆ. ಇನ್ನು ಮೇಲೆ ಹಾಡುಗಾರನಾಗಿ ಒಂದಲ್ಲ ಒಂದು ದಿನ ನಿನ್ನನ್ನು ಮೀರಿಸುತ್ತೇನೆ. ಇದು ಖಂಡಿತ ’ ಎಂದು ನುಡಿದು ಸಾರಂಗಿಯನ್ನು ಕೆಳಗೆ ಇಟ್ಟು ಸುಮ್ಮನೆ ಕುಳಿತ.

ಆ ಕೆಚ್ಚೆದೆಯ ತರುಣನೇ ಹಿಂದೂಸ್ತಾನಿ. ಸಂಗೀತ ಪ್ರಪಂಚದಲ್ಲಿ ಅತಿ ಶ್ರೇಷ್ಠ ಗಾಯಕನಾಗಿ ವಿಜೃಂಭಿಸಿದ ಸಂಗೀತರತ್ನ ಉಸ್ತಾದ್ ಅಬ್ದುಲ್ ಕರೀಂ ಖಾನ್.

ಸಂಗೀತಕ್ಕೆ ಮುಡಿಪಾದ ಮನೆತನ

ಸಂಗೀತರತ್ನ ಉಸ್ತಾದ್ ಅಬ್ದುಲ್ ಕರಿಂ ಖಾನರ ತಂದೆ ಮತ್ತು ತಾಯಿ ಇಬ್ಬರ ಕಡೆಗಳಲ್ಲೂ ಸಂಗೀತವು ಪಾರಂಪರ್ಯವಾಗಿ ಹರಿದುಬಂದಿತ್ತು. ತಂದೆಯ ಪೂರ್ವಜರಲ್ಲಿ ನಾಯಕ ಧೊಂಡುಜ ಮತ್ತು ಮನ್ನು, ಸಾಬರಸ, ರಹಮಾನ್ ಬಕ್ಷ್, ಬಂದಿಯಲಿ ಖಾನ್, ರಹಿಮಲ್ಲಿ ಮುಂತಾದವರು ಹೆಸರಾದವರು. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಬಹು ಪ್ರಸಿದ್ಧವಾದ ಸಂಗೀತಗಾರ ನಾಯಕ ಧೊಂಡು ಮಹಾ ಕೃಷ್ಣಭಕ್ತ. ಬೃಂದಾವನದಲ್ಲಿ ತಪಸ್ಸು ಮಾಡಿ ಸಂಗೀತವನ್ನು ಒಲಿಸಿಕೊಂಡು ಶ್ರೀಕೃಷ್ಣನ ಸಾಕ್ಷಾತ್ಕಾರ ಪಡೆದವನು ಎಂದು ಹೇಳುತ್ತಾರೆ. ಧೊಂಡು ಹಾಡುತ್ತಿದ್ದರೆ ಬೃಂದಾವನದ ಹಸುಗಳು ಅವನ ಸಂಗೀತದಿಂದ ಆಕರ್ಷಿತವಾಗಿ ಅವನ ಬಳಿ ಬಂದು ನಿಲ್ಲುತ್ತಿದ್ದವಂತೆ.

’ಒಂದಲ್ಲ ಒಂದು ದಿನ ನಿನ್ನನ್ನು ಮೀರಿಸುತ್ತೇನೆ’

ಧೊಂಡುವಿನ ವಂಶದಲ್ಲಿ ಯಾವ ತಲೆಮಾರಿನವರೋ ಮುಸಲ್ಮಾನರಾದರು. ಅವರ ಪೀಳಿಗೆಯಲ್ಲಿ ಬಂದ ವಹೀದ್ ಖಾನರು ಅಪಾರ ಕೀರ್ತಿ ಗಳಿಸಿದ ಸಂಗೀತಗಾರರು. ಅವರ ಹತ್ತಿರದ ಸಂಬಂಧಿಯೇ ಅಬ್ದುಲ್ ಕರೀಂ ಖಾನರು. ತಾಯಿಯ ಕಡೆಯಲ್ಲಿಯೂ ಖ್ಯಾತ ಸಂಗೀತರಗಾರರಿದ್ದರು. ಹೀಗೆ ಎರಡು ಕಡೆಗಳಿಂದಲೂ ಬಂದ ಸಂಗೀತವು ಕರೀಂ ಖಾನರ ರಕ್ತದ ಪ್ರತಿಯೊಂದು ಕಣದಲ್ಲಿಯೂ ಊರಿದ್ದು ಆಶ್ಚರ್ಯವೇನಲ್ಲ.

ಅಬ್ದುಲ್ ಕರೀಂ ಖಾನರು ದೆಹಲಿಯ ಕುರುಕ್ಷೇತ್ರದ ಹತ್ತಿರದ ಕಿರಾನಾ ಎಂಬ ಹಳ್ಳಿಯಲ್ಲಿ ೧೮೭೨ರಲ್ಲಿ ನವೆಂಬರ್ ೧೧ ರಂದು ಹುಟ್ಟಿದರು. ತಂದೆ ಕಾಲೇ ಖಾನರಿಗೆ ಕರೀಮನಲ್ಲದೆ ಅಬ್ದುಲ್ ಲತೀಪ್ ಮತ್ತು ಅಬ್ದುಲ್ ಹಕ್ ಎಂಬ ಇನ್ನಿಬ್ಬರು ಗಂಡುಮಕ್ಕಳೂ ಒಬ್ಬ ಹೆಣ್ಣುಮಗಳೂ ಇದ್ದರು.

ಸಂಗೀತ ಶಿಕ್ಷಣ

ಮಗನಲ್ಲಿ ಹುದುಗಿದ್ದ ಪ್ರತಿಭೆಯನ್ನು ಗುರುತಿಸಿದ ಕಾಲೇ ಖಾನರು ತಾವೇ ಕರೀಂನ ಬಾಲ್ಯ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತರು. ದೊಡ್ಡಪ್ಪ ಅಬ್ದುಲ್ಲಾ ಖಾನ್ ಅದಕ್ಕೆ ಸಹಾಯಕರಾಗಿದ್ದರು. ಚಿಕ್ಕಪ್ಪ ಹೈದರ್ ಖಾನರು ಸಾರಂಗಿಯನ್ನು ಹೇಳಿಕೊಟ್ಟರು. ಕೆಲ ಕಾಲಾ ನಂತರ ಅಬ್ದುಲ್ಲಾ ಖಾನರ ಚಿಕ್ಕಪ್ಪನವರ ಮಗನನ್ನೇ ಖಾನರು ಹೈದರಾಬಾದಿನಲ್ಲಿ ನೌಕರಿಯಲ್ಲಿದ್ದು ದೀರ್ಘಕಾಲ ಸೇವೆ ಸಲ್ಲಿಸಿದ ನಂತರ ನಿವೃತ್ತಿ ಹೊಂದಿ ಅಬ್ದುಲ್ಲಾ ಖಾನರ ಮನೆಗೆ ಬಂದರು. ಇದು ಬಾಲಕ ಕರೀಮನಿಗೆ ಅನುಕೂಲವನ್ನು ಮಾಡಿತು. ಕರೀಮನು ಹರಿಯರಲ್ಲಿ ತೋರಿಸುತ್ತಿದ್ದ ಗೌರವ, ವಿನಯಗಳನ್ನು ಕಂಡ ನನ್ನೇ ಖಾನರು ಅವನಿಗೆ ಪ್ರೌಢಶಿಕ್ಷಣವನ್ನು ಕೊಡಲು ಆರಂಭಿಸಿದರು. ಅನೇಕ ಬೆಳಗಿನ ರಾಗಗಳ ಮರ್ಮಗಳನ್ನು ತಿಳಿಸಿ ಅವುಗಳನ್ನು ಖಚಿತವಾಗಿ ಮತ್ತು ಪರಿಣಾಮಕಾರಿಯಾಗಿ ಹಾಡುವ ಕ್ರಮವನ್ನು ಬಿಚ್ಚುಮನಸ್ಸಿನಿಂದ ಹೇಳಿಕೊಟ್ಟು ಕರೀಮನ ಮಾರ್ಗದರ್ಶಕರಾದರು.

ನಾನು ಮಾಡಿದ್ದು ತಪ್ಪೇ?

ನನ್ನೇ ಖಾನರಲ್ಲಿ ಶಿಷ್ಯವೃತ್ತಿ ಮಾಡುತ್ತಿದ್ದಾಗ ನಡೆದ ಒಂದು ಘಟನೆಯು ಕರೀಮನ ಸಾಮಾಜಿಕ ದೃಷ್ಟಿಯ ಮೇಲೆ ಬೆಳಕು ಚೆಲ್ಲುತ್ತದೆ. ಅದು ನಡೆದದ್ದು ೧೮೮೦ರಲ್ಲಿ ಆಗ ಕರೀಮನಿಗೆ ಎಂಟು ವರ್ಷ ವಯಸ್ಸು ಒಂದು ದಿವಸ ಕರೀಮನು ತನ್ನ ಕೇರಿಯ ಗೆಳೆಯರೊಂದಿಗೆ ಮನೆಯ ಮುಂದೆ ಆಡವಾಡುತ್ತಿದ್ದ. ದೂರದಲ್ಲಿ ನಾದಸ್ವರದ ಶಬ್ದ ಕೇಳಿಸಿತು. ಅದನ್ನು ಅನುಸರಿಸಿ ಹೋದ. ಹರಿಜನರ ಕೇರಿಯಲ್ಲಿ ಮದುವೆ ನಡೆಯುತ್ತಿತ್ತು. ನಾದಸ್ವರದ ನಾದಕ್ಕೆ ಮನಸೋತು ಮೆರವಣಿಗೆಯ ಹಿಂದೆಯೇ ಹೋದ. ಮೆರವಣಿಗೆ ಮುಗಿದ ನಂತರ ನಾದಸ್ವರವನ್ನು ಹಿಂಬಾಲಿಸಿ ಮದುವೆ ಮನೆಗೆ ಹೋದದ್ದಲ್ಲದೆ, ಅಲ್ಲಿ ಊಟವನ್ನೂ ಮಾಡಿ, ತಡವಾಗಿ ಹಿಂತಿರುಗಿದ ಕರೀಮನನ್ನು  ದೊಡ್ಡಪ್ಪ ಅಬ್ದುಲ್ಲಾ ಖಾನರು ಪ್ರಶ್ನಿಸಿದಾಗ ನಿಜಾಂಶ ಹೊರಬಿತ್ತು. ಹರಿಜನರ ಮನೆಯಲ್ಲಿ ಊಟ ಮಾಡಿದ ತಪ್ಪಿಗೆ ಬೈಗಳ ಜೊತೆಯಲ್ಲಿ ಏಟುಗಳೂ ಬಿದ್ದವು. ಮಾರನೆಯ ದಿನ ವಾಡಿಕೆಯಂತೆ ದೊಡ್ಡಪ್ಪನವರೊಂದಿಗೆ ಅಶ್ವತ್ಥಮರದ ಪ್ರದಕ್ಷಿಣೆಗೆ ಹೊರಟಾಗ, ದೊಡ್ಡಪ್ಪನವರ ಸಿಟ್ಟು ಇಳಿದಿದ್ದನ್ನು ಕಂಡ ಕರೀಮನು, ದೊಡ್ಡಪ್ಪ, ಎಷ್ಟೋ ಸಲ ನೀವೇ  ಮನುಷ್ಯರೂ, ಪಶುಪ್ರಾಣಿಗಳೂ ಮತ್ತು ಎಲ್ಲವೂ ದೇವರ ಸೃಷ್ಟಿ ಎಂದು ಹೇಳಿದ್ದೀರಿ. ಹಾಗಾದರೆ ಮನುಷ್ಯರಾದ ಹರಿಜನರೂ ದೇವರ ಸೃಷ್ಟಿಯಲ್ಲವೆ? ನಿನ್ನೆ ನಾನು ಮಾಡಿದ್ದು ತಪ್ಪೆ? ನನ್ನನ್ನು ಏತಕ್ಕೆ  ಹೊಡೆದದ್ದು? ಸರಿಯಾದ ಉತ್ತರವನ್ನು ಕೊಡುವವರೆಗೂ ನಾನು ಊಟ ಮಾಡುವುದಿಲ್ಲ’ ಎಂದ. ಅಬ್ದುಲ್ಲಾ ಖಾನರಿಗೆ ಈ ಪ್ರಶ್ನೆ ಸಿಡಿಲೆರಗಿದಂತೆ ಬಂದಿತು. ಉತ್ತರ ಹೊಳೆಯಲಿಲ್ಲ. ಅಂದಿನಿಂದ ತಮ್ಮ ಮೂಢನಂಬಿಕೆಯನ್ನು ಬಿಟ್ಟುಬಿಟ್ಟರು.

ಸಂಗೀತದ ಜೊತೆಯಲ್ಲಿ ಉರ್ದು ಶಾಲೆಯ ವಿದ್ಯಾಭ್ಯಾಸವೂ ಇದ್ದಿತು. ಹುಡುಗ ಪ್ರತಿ ಶುಕ್ರವಾರ ನಡೆಯುತ್ತಿದ್ದ ಬೈಠಕ್ ಗಳಲ್ಲಿ ಭಾಗವಹಿಸುತ್ತಿದ್ದ.

ಸಾರಂಗಿಯಿಂದ ಹಾಡಿಕೆಗೆ

ಕರೀಂ ಖಾನರು ಗಾಯನದಲ್ಲಿ ಪ್ರಸಿದ್ಧರಾಗಲು ಕಾರಣ ಆರಂಭದಲ್ಲಿ ತಿಳಿಸಿದಂತೆ ಹಿಂದೂಸ್ತಾನಿ ಬೈಠಕ್  ಒಂದರಲ್ಲಿ ನಡೆದ ಘಟನೆಯೇ. ಗಾಯಕನು ತನ್ನ ಪಾಡಿಗೆ ತಾನು ಹಾಡಿ ಬೈಠಕನ್ನು ಮುಗಿಸಿದ್ದರೆ ಕರೀಂ ಖಾನರು ಸಾರಂಗಿ ವಾದಕರಾಗಿಯೇ ಉಳಿಯುತ್ತಿದರೇನೋ! ಅಂದು ವೇದಿಕೆಯ ಮೇಲೆ ನಡೆದ ಘಟನೆಯು ಖಾನರ ಸ್ವಾಭಿಮಾನವನ್ನು ಕೆರಳಿಸಿತು. ಸಾರಂಗಿಯನ್ನು ಬಿಟ್ಟು ಕೊಟ್ಟು ಗಾಯಕರಾಗಲು ದೃಢಸಂಕಲ್ಪವನ್ನು ತೊಟ್ಟರು. ಗಂಟೆಗಟ್ಟಲೆ ಏಕಪ್ರಕಾರವಾಗಿ ಸಾಧನೆ ಮಾಡಿದರು. ತಮ್ಮ ಸೊಗಸಾದ ಕಂಠವನ್ನು ಸರಿಯಾದ ದಾರಿಯಲ್ಲಿ ಉಪಯೋಗಿಸಿಕೊಂಡರು. ಅದೂ ಅಲ್ಲದೆ ಸಾರಂಗಿ ವಾದ್ಯದ ಸುನಾದವು ಅವರ ಕಿವಿಗಳಲ್ಲಿ ತುಂಬಿದ್ದು ಕಾಲಕ್ರಮೇಣ ಅವರ ಹಾಡಿಕೆಯ ಮೇಲೆ ಅದು ಪ್ರಭಾವವನ್ನು ಬೀರಿತು.

ಒಮ್ಮೆ ಕಾಲೇ ಖಾನರು ಮೀರತ್ ನಲ್ಲಿ ನಡೆಯುತ್ತಿದ್ದ ಸಂಗೀತ ಕಛೇರಿಗಳನ್ನು ಕೇಳಲು ಕರೀಂಖಾನ್ ಮತ್ತು ಅಬ್ದುಲ್ ಲತೀಫರನ್ನು ಕರೆದುಕೊಂಡು ಹೋದರು. ಅಲ್ಲಿ ಸಹೋದರರಿಗೆ ಹಾಡಲು ಸಿಕ್ಕದ ಅವಕಾಶವನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡು ಸಭಿಕರ ಹೃದಯವನ್ನು ಗೆದ್ದರು.

ಕಿರಾನಾದ ಕಿರಣ

ನನ್ನೇ ಖಾನರಲ್ಲಿ ಶಿಷ್ಯವೃತ್ತಿಯನ್ನು ಮುಗಿಸಿದ ಕರೀಂ ಖಾನರು ಮೈಸೂರಿಗೆ ಹೋಗಿ ಮಹಾರಾಜ ಚಾಮರಾಜ ಒಡೆಯರವರ ಮುಂದೆ ಹಾಡಲು ಇಷ್ಟಪಟ್ಟು ಗುರುಗಳ ಆಶೀರ್ವಾದವನ್ನು ಬಯಸಿದರು. ಗುರುಗಳೂ ಮತ್ತು ತಂದೆಯವರೂ ಹದಿನೇಳು ವರ್ಷ ವಯಸ್ಸಿನ ಕರೀಂ ಖಾನರಿಗೆ ಮದುವೆ ಮಾಡುವ ಪ್ರಯತ್ನದಲ್ಲಿದರು. ಆದರೆ ಖಾನರು ಸಮ್ಮತಿಸದೆ ಮೈಸೂರಿಗೆ ಹೋಗಿ ಬರಲು ಅಪ್ಪಣೆ ಬೇಡಿದರು. ಖಾನರ ಉತ್ಸಾಹಕ್ಕೆ ತಣ್ಣೀರೆರಚಲು ಇಷ್ಟಪಡದೆ ಗುರುಗಳೂ ಮತ್ತು ತಂದೆಯೂ ಒಪ್ಪಿಗೆಯನ್ನಿತ್ತು ಆಶೀರ್ವದಿಸಿದರು. ಕರೀಂ ಖಾನರು ಮೈಸೂರಿಗೆ ಹೋದಾಗ ದಸರಾ ಉತ್ಸವವು ನಡೆಯುತ್ತಿತ್ತು. ವಿದ್ಯಾ ಪಕ್ಷಪಾತಿ ಹಾಗೂ ಸಂಗೀತಪ್ರಿಯರಾದ ಚಾಮರಾಜ ಒಡೆಯರ್ ರವರ ಆಸ್ಥಾನದಲ್ಲಿ ದಕ್ಷಿಣಾದಿ ಸಂಗೀತ ವಿದ್ವಾಂಸರಲ್ಲದೆ ಉತ್ತರಾದಿ ಸಂಗೀತದ ಬಹು ಹಿರಿಯ ಉಸ್ತಾದರೂ ಇದ್ದರು.

ಮೊದಲ ದಿನ ರಾಜಸಭೆಯಲ್ಲಿ ಕರೀಂ ಖಾನರು ತೋಡಿ ರಾಗವನ್ನು ಅತ್ಯುತ್ತಮವಾಗಿ ಹಾಡಿ ಜನರ ಕಣ್ಣುಗಳಲ್ಲಿ ಆನಂದಭಾಷ್ಪವನ್ನು ತರಿಸಿದರು. ಮಾರನೆಯ ದಿನ  ದೊರೆಗಳ ಅಪ್ಪಣೆಯಂತೆ ದರ್ಬಾರಿನಲ್ಲಿ ಕರೀಂ ಖಾನರು ಮತ್ತೆ ಹಾಡಿದರು. ಅವರ ಗಾಯನವನ್ನು ಕೇಳಿ ಮಹಾರಾಜರು ತುಂಬ ಸಂತೋಷಪಟ್ಟು  ಕಲಾಪತ್ತಿನ ಶಾಲನ್ನು ಹೊದಿಸಿ ಕೈಗಳಿಗೆ ಚಿನ್ನದ ತೋಡಾಗಳನ್ನು ತೊಡಿಸಿ ಗೌರವಿಸಿದರು. ಕರೀಂ ಖಾನರು ಕಿರಾನಾಕ್ಕೆ ಹಿಂತಿರುಗುವಾಗ ದಾರಿಯಲ್ಲಿ ಜಯಪುರದಲ್ಲಿ ತಂಗಿ ಅಲ್ಲಿಯೂ ಒಂದು ಕಛೇರಿಯನ್ನು ನಡೆಸಿ, ಬಹುಮಾನವನ್ನು ಗಳಿಸಿದರು.

ಊರಿಗೆ ಹಿಂತಿರುಗಿದ ಖಾನರು ಗುರು ನನ್ನೇ ಖಾನರಿಗೆ ನಮಸ್ಕರಿಸಿ ತಮಗೆ ದೊರೆತ ಖಿಲ್ಲತ್ತು, ಬಹುಮಾನಗಳನ್ನೆಲ್ಲ ಅವರ ಪಾದತಲದಲ್ಲಿಟ್ಟು ’ಗುರುಗಳೇ, ಇವುಗಳೆಲ್ಲವೂ ತಮ್ಮದೆ’ ಎಂದರು. ನನ್ನೇ ಖಾನರು ಸಂತೋಷದಿಂದ ಕುಣಿದಾಡಿ, ಶಿಷ್ಯನನ್ನು ಬಾಚಿ ತಬ್ಬಿಕೊಂಡು, ಎಲ್ಲರನ್ನೂ ಕರೆದು, ’ಇದೋ ನೋಡಿ, ಇದೇ ಕಿರನಾದ ಕಿರಣ’ ಎಂದು ಖಾನರನ್ನು ತೋರಿಸಿದರು. ರಮ್ ಜಾನ್ ಹಬ್ಬವು ಮುಗಿದ ಕೂಡಲೇ ಕರೀಂ ಖಾನರ ವಿವಾಹವು ಬಹಳ ಸಂಭ್ರಮದಿಂದ ನಡೆಯಿತು. ಲೋಹರೀ ಘರಾನೆಯ ಅಬ್ದುಲ್ ರಹೀಮರ ಮಗಳು ಖಾನರ ಬಾಳ ಗೆಳತಿಯಾಗಿ ಬಂದರು.

ಯಶೋದುಂದುಭಿ

ಮೈಸೂರಿನಲ್ಲಿ ದೊರೆತ ಯಶಸ್ಸು ಕರೀಂ ಖಾನರ ದಿಗ್ವಿಜಯಕ್ಕೆ ನಾಂದಿಯಾಯಿತು. ಸಹೋದರ ಲತೀಫ್ ಮತ್ತು ತಂದೆಯವರೊಂದಿಗೆ ಅವರು ಪ್ರವಾಸಕ್ಕೆ ಹೊರಟರು. ಕಾಥೇವಾಡದಲ್ಲಿ ಮೊಟ್ಟಮೊದಲನೆಯ ಬೈಠಕ್ ನಡೆಸಿ, ಮಾಳ್ವಾ, ಭಾವನಗರಗಳಲ್ಲಿ ಕಚೇರಿಗಳನ್ನು ಮಾಡಿ ಜುನಾಗಢಕ್ಕೆ ಬಂದರು. ಅಲ್ಲಿ ಕರೀಂಖಾನರು ಒಂದು ಪವಾಡವನ್ನೇ ನಡೆಸಿದರು. ನಿದ್ರೆಯಿಲ್ಲದೆ ಕಷ್ಟಪಡುತ್ತಿದ್ದ ಅಲ್ಲಿನ ನವಾಬನಿಗೆ ಯಾರೋ ’ಕರೀಂ ಖಾನರ ಸಂಗೀತವನ್ನು ಇಡೀ ರಾತ್ರಿ ಕೇಳಿದರೆ ನಿದ್ರಹೀನತೆ ರೋಗವು ವಾಸಿಯಾಗುತ್ತದೆ’ ಎಂದು ಸೂಚಿಸಿದರು. ಅದರಂತೆ ಕರೀಂ ಖಾನರಿಗೆ  ಕರೆ ಹೋಯಿತು. ನವಾಬನ ಪ್ರಾರ್ಥನೆಯನ್ನು ಮನ್ನಿಸಿ ಖಾನರು ಸರಿರಾತ್ರಿಯಲ್ಲಿ ಮಾಲ್ ಕೌಂಸ್ ರಾಗದಲ್ಲಿ ಖಯಾಲ್ ಒಂದನ್ನು ಭಾವಪೂರಿತವಾಗಿ ಹಾಡಿದರು. ಸುಸ್ವರ ಪೂರಿತವಾದ ಆ ದಿವ್ಯ ಸಂಗೀತವನ್ನು ಕೇಳಿ ನವಾಬನಿಗೆ ತನಗೆ ಅರಿವಿಲ್ಲದಂತೆಯೇ ನಿದ್ರೆ ಬಂದಿತು. ಕರೀಂ ಖಾನರ ಉಪಕಾರವನ್ನು ಸ್ಮರಿಸುತ್ತ ಅವರನ್ನು ಒಂದು ವರ್ಷಕಾಲ ತನ್ನ ಬಳಿ ಇಟ್ಟುಕೊಂಡು ಸನ್ಮಾನ ಸಂಭಾವನೆಗಳಿಂದ ಆದರಿಸಿದನು.

ಕರೀಂ ಖಾನರ ವಿಜಯ ಯಾತ್ರೆಯಲ್ಲಿ ಬರೋಡದ ಪಾತ್ರವು ಬಹು ಮುಖ್ಯವಾದದ್ದು. ಅಲ್ಲಿನ ದೊರೆ ಸಯ್ಯಾಜಿರಾವ್ ಗಾಯಕವಾಡರು ರಾತ್ರಿ ವೇಳೆ ಮಾರುವೇಷದಲ್ಲಿ ನಗರ ಸಂಚಾರ ಮಾಡುವ ಪದ್ಧತಿಯನ್ನಿಟ್ಟುಕೊಂಡಿದ್ದರು. ಒಂದು ರಾತ್ರಿ ಅವರಿಗೆ ಅಲ್ಲಾರಖಿಯ ಮನೆಯಿಂದ ಮನಮೋಹಕವಾದ ಸಂಗೀತವು ಕೇಳಿ ಬಂದಿತು. ಮಾರನೆಯ ದಿವಸ ಆಕೆಯ ಮನೆಗೆ ಹೇಳಿ ಕಳುಹಿಸಿ ಹಿಂದಿನ ರಾತ್ರಿ ಹಾಡಿದ ಕರೀಂಖಾನರನ್ನೂ ಅವರ ಸಹೋದರರನ್ನೂ ಅರಮನೆಗೆ ಕರೆಸಿಕೊಂಡು ಅವರಿಬ್ಬರ ಕಛೇರಿಯನ್ನು ಏರ್ಪಡಿಸಿದರು. ಸಹೋದರರ ಕಛೇರಿಯು ಗಾಯಕವಾಡರ ಮನಸ್ಸನ್ನು ಸೂರೆಗೊಂಡಿತು  ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಗಾಯಕವಾಡರು ಅವರನ್ನು ಸೂಕ್ತವಾಗಿ ಗೌರವಿಸಿ ತಮ್ಮ ಅಸ್ಥಾನ ವಿದ್ವಾಂಸರನ್ನಾಗಿ ನೇಮಿಸಿದರು.

ಹಿಂದೂಗಳ ಉತ್ಸವದಲ್ಲಿ

ಕರೀಂ ಖಾನರಿಗೆ ಶ್ರೀಕೃಷ್ಣನಲ್ಲಿ ಅಪಾರವಾದ ಭಕ್ತಿ ಇತ್ತು. ಅವರು ಕೃಷ್ಣನನ್ನು ಸ್ತುತಿಸುವ ಭಕ್ತಿಗೀತೆಗಳನ್ನು ಹಾಡುವುದು, ಭಜನೆಗಳನ್ನು ಮಾಡುವುದು, ಇವುಗಳನ್ನು ನೋಡಿದ ಹಿಂದೂಗಳಿಗೆ  ಆಶ್ಚರ್ಯವಾಗುತ್ತಿತ್ತು. ಅವರ ಕೃಷ್ಣಭಕ್ತಿಯನ್ನು ಕಂಡು ಮೆಚ್ಚಿಕೊಂಡ ಬರೋಡ ಗಾಯಕವಾಡರ ಸೇವೆಯಲ್ಲಿದ್ದ ಸರ್ದಾರ್ ಮಾರುತಿರಾವ್ ಮಾನೆಯವರು ತಮ್ಮ ಸಹೋದರಿ ರಾಜಮಾತೆ ಜಮುನಾ ಬಾಯಿಯವರಿಗೆ  ಈ ವಿಷಯವನ್ನು ತಿಳಿಸಿ, ಹಿಂದೂ ಜನರ ಉತ್ಸವಗಳಲ್ಲಿ ಕರೀಂ ಖಾನರ ಕಛೇರಿಯನ್ನು ಏರ್ಪಾಡು ಮಾಡುವುದಕ್ಕೆ ಕಾರಣರಾದರು. ಇದನ್ನು ಕಂಡು ಸಹಿಸದವರು ಖಾನರಿಗೆ ಕಿರುಕುಳವನ್ನು ಕೊಟ್ಟರು. ಒಂದೆರಡು ಸಲ ಅವರ ಪ್ರಾಣಾಪಹಾರ ಪ್ರಯತ್ನವೂ ನಡೆಯಿತು. ಇದು ಸಂಸ್ಥಾನದ ಹಿರಿಯ ಅಧಿಕಾರಿಗಳಿಗೆ ತಿಳಿದು ಮುಂದೆ ಖಾನರಿಗೂ ಮತ್ತು ಅವರ ಸಹೋದರರಿಗೂ ಸರಿಯಾದ ರಕ್ಷಣೆಯನ್ನು ಕೊಟ್ಟರು.

ಅಲ್ಲಾರಖಿಯ ನಿಧನದ ನಂತರ ಖಾನರು ತಮ್ಮ ವಸತಿಯನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸಿಕೊಂಡರು. ಅವರಲ್ಲಿ ಕಲಿಯಲು ಅನೇಕರು ಮುಂದೆ ಬಂದರು. ಸಂಪಾದನೆ ಚೆನ್ನಾಗಿತ್ತು. ಮಹಾರಾಣಿ ಚಿಮಣಾಬಾಯಿಯ ಪ್ರಾರ್ಥನೆಯಂತೆ ರಾಜಕುಮಾರನಿಗೆ ಜಲತರಂಗ್ ವಾದ್ಯವನ್ನು ಹೇಳಿಕೊಡಲಾರಂಭಿಸಿದರು. ಸರ್ದಾರ್ ಮಾರುತಿರಾವ್ ಮಾನೆಯವರ ಮಗಳು ತಾರಾ ಬಾಯಿಯು ಖಾನರ ಶಿಷ್ಯಳಾದಳು.

ತಾರಾಬಾಯಿಯವರ ಪ್ರಕರಣ

ಬರೋಡದಲ್ಲಿ ಕರೀಂ ಖಾನರು ನೆಲೆಸಿದರು. ಅವರ ಬಾಳ ನೌಕೆಯು ಒಂದು ವಿಧವಾಗಿ ಸ್ಥಿಮಿತಗೊಂಡು ಸುಸೂತ್ರವಾಗಿ ಸಾಗಲು ಆರಂಭಿಸಿದ ತರುಣದಲ್ಲಿ ಸಂಭವಿಸಿದ ಒಂದು ಘಟನೆಯು ಆ ನೌಕೆಯ ದಿಕ್ಕನ್ನು ಬದಲಾಯಿಸಿತು. ತಾರಾಬಾಯಿಯು ತಾಯಿ ಹೀರಾಬಾಯಿ ಕಾಲರಾ ಬೇನೆಗೆ ತುತ್ತಾದರು. ಮಾರುತಿರಾವ್ ಮಾನೆಯವರ ಜೀವನದಲ್ಲಿ ಏರುಪೇರುಂಟಾಯಿತು. ಯಾವಾಗಲೂ ಮದ್ಯಪಾನ ನಿರತರಾಗಿ ವಯಸ್ಸಿಗೆ ಬಂದ ಮಗಳನ್ನು ಪೂರ್ತಿಯಾಗಿ ನಿರ್ಲಕ್ಷಿಸಿದುದಲ್ಲದೆ ಆಕೆಗೆ ಹಿಂಸೆಯನ್ನೂ ಕೊಡಲಾರಂಭಿಸಿದರು. ಇದರಿಂದ ಮನನೊಂದ ತಾರಾ ಗುರು ಕರೀಂ ಖಾನರಲ್ಲಿ ತನ್ನ ಅಳಲನ್ನು ತೋಡಿಕೊಂಡು ತನ್ನನ್ನು ಆ ನರಕದಿಂದ ಪಾರು ಮಾಡುವಂತೆ ಕೇಳಿಕೊಂಡಳು. ಖಾನರಿಗೆ ಇದೊಂದು ಸಂದಿಗ್ಧವಾಯಿತು. ತಮಗೆ ಅನ್ನದಾತರಾದ ಅರಸನಿಗೆ ವಿರೋಧವಾಗಿ ಬಗೆಯುವುದೇ? ಇಲ್ಲ ಶಿಷ್ಯಳನ್ನು ಕೈ ಬಿಡುವುದೇ? ಏನು ಮಾಡುವುದಕ್ಕೂ ತೋರಲಿಲ್ಲ. ಮನಸ್ಸಿನಲ್ಲಿಯೇ ಅಳೆದೂ ಸುರಿದೂ ಕೊನೆಗೆ ಶಿಷ್ಯಳನ್ನು ಕಾಪಾಡುವುದಾಗಿ ನಿರ್ಧರಿಸಿ ತಾರಾಬಾಯಿಯನ್ನು ಕರೆದುಕೊಂಡು, ಸಹೋದರರೊಡನೆಯೂ ಮತ್ತು ಸೋನು ಎಂಬ ಮನೆಯ ಅಡಿಗೆಯವನೊಡನೆಯೂ ಯಾರಿಗೂ ತಿಳಿಸದೆ ಬರೋಡವನ್ನು ಬಿಟ್ಟು ಮುಂಬಯಿಗೆ ಬಂದರು.

ಆದರೆ ಬರೋಡದ ಗಾಯಕವಾಡರ ಆಗ್ರಹವು ಖಾನರನ್ನು ಮುಂಬಯಿಯನ್ನು ಬಿಡುವಂತೆ ಮಾಡಿತು. ಅಲ್ಲಿಂದ ಹುಬ್ಬಳ್ಳಿಗೆ ಬಂದರು. ಅಲ್ಲಿಗೆ ಬಂದಾಗ ಖಾನರಿಗೆ ಸರಿಯಾದ ಉಡುವ ಬಟ್ಟೆಗಳೂ ಇರಲಿಲ್ಲ. ಅವರ ಹೆಸರನ್ನು ಕೇಳಿದ್ದ ವೀಳ್ಯದೆಲೆ ವ್ಯಾಪಾರಿಯೊಬ್ಬನು ಮರುಕಗೊಂಡು ಖಾನರಿಗೆ ಒಂದು ಕುರ್ತಾವನ್ನು ಹೊಲಿಸಿಕೊಟ್ಟು ಸಿದ್ಧಾರೂಢಾಶ್ರಮಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವರ ಕಛೇರಿಯನ್ನು ಏರ್ಪಡಿಸಿದನು.

ಖಾನರು ಹಾಡುತ್ತಿದ್ದಾಗ ಭೂಗಂಧರ್ವವರೆಂದು ಪ್ರಸಿದ್ಧರಾಗಿದ್ದ ಉಸ್ತಾದ್ ರಹಮತ್ ಖಾನರು ಅಲ್ಲಿಗೆ ಬಂದರು. ಎರಡು ಗಂಟೆಗಳ ಕಾಲ ಖಾನರು ಹಾಡಿಕೆಯನ್ನು ಕೇಳಿ ’ಗಲಾ ಅಚ್ಛಾಹೈ (ಕಂಠವು ಚೆನ್ನಾಗಿದೆ) ಎಂದಷ್ಟು ಮಾತ್ರ ಹೇಳಿ ಸುಮ್ಮನಾದರು. ಅನಂತರ ರಹಮತ್ ಖಾನರು ಹಾಡಿದರು. ಅವರ ಭೂಪ್ ರಾಹವನ್ನು ಕೇಳಿದ ಕರೀಂ ಖಾನರು ತಮ್ಮ ಸಂಗೀತದ ಬಗ್ಗೆ ತಾವೇ ನಾಚಿಕೆಪಟ್ಟುಕೊಂಡರು. ಮುಂದೆ ಆರು ತಿಂಗಳು ತಂಬೂರಿ ಹಿಡಿಯಲಿಲ್ಲ. ತಾರಾಬಾಯಿಯು ಒತ್ತಾಯ ಮಾಡಿ ಕೊನೆಗೆ ಖಾನರು ತಂಬೂರಿ ಹಿಡಿದರು. ಅನಂತರ ಅವರ ಸಂಗೀತದ ಸ್ವರೂಪವೇ ಬದಲಾಯಿಸಿತು. ಸ್ವರ ಮಾಧುರ್ಯದಿಂದ ತುಳುಕಲಾರಂಭಿಸಿತು.

ತಾರಾಬಾಯಿಯ ಜೊತೆಗೆ ಮದುವೆ

ಹುಬ್ಬಳ್ಳಿಯಲ್ಲಿಯೂ ಸಹ ಖಾನರಿಗೆ ನೆಮ್ಮದಿಯಿರಲಿಲ್ಲ. ಬರೋಡದಿಂದ ಬಹಳ ದೂರವಿರಬೇಕೆಂದು ಯೋಚಿಸಿ  ಮೀರಜಿಗೆ ಬಂದರು. ಅಲ್ಲಿ ಅವರಿಗೆ ಭವ್ಯ ಸ್ವಾಗತವು ದೊರೆಯಿತು. ಸ್ಥಳೀಯ ಖ್ಯಾತ ಗಾಯಕಿ ಬೈಜಾಬಾಯಿಯ ಮನೆಯಲ್ಲಿ ಎಲ್ಲರೂ ಬಿಡಾರ ಹೂಡಿದರು. ಇದ್ದಕ್ಕಿದ್ದಂತೆ ಖಾನರಿಗೆ ಪ್ಲೇಗು ತಗುಲಿತು. ಯಾವ ಚಿಕಿತ್ಸೆಗೂ ಮಣಿಯಲಿಲ್ಲ. ಖಾನರ ಸ್ಥಿತಿಯು ಚಿಂತಾಜನಕವಾಗಿತ್ತು. ತಾರಾಬಾಯಿಯು ತನ್ನ ತನುಮನಗಳನ್ನು ಧಾರೆಯರೆದು ಖಾನರ ಸೇವೆ ಮಾಡಿದಳು. ಫಕೀರನೊಬ್ಬನ ಸಲಹೆಯಂತೆ ಖ್ವಾಜಾ ಸಾಹೇಬರ (ಪೀರ್ ಖ್ಯಾಜಾ ಶಮನಾ ಮೀರ್) ದರ್ಗಾ (ಸಮಾಧಿ)ವನ್ನು ಬಹು ಕಷ್ಟದಿಂದ ಸಂದರ್ಶಿಸಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ರೋಗವು ವಾಸಿಯಾಗಿ ಖಾನರು ಮೊದಲಿನಂತಾದರು. ಕಛೇರಿಗಳಿಗೆ ಆಹ್ವಾನಗಳು ಮೇಲಿಂದ ಮೇಲೆ ಬರಲಾರಂಭಿಸಿ ಆರ್ಥಿಕ ಸ್ಥಿತಿಯೂ ಉತ್ತಮಗೊಂಡಿತು. ಹಿರಿಯರ ಸಲಹೆಯಂತೆ ತಾರಾ ಬಾಯಿಯನ್ನು ವಿವಾಹ ಮಾಡಿಕೊಂಡರು. ಆಗ ಖಾನರಿಗೆ ೨೫ ವರ್ಷ ವಯಸ್ಸು. ಮೊದಲನೆಯ ಹೆಂಡತಿಯನ್ನು ಬಿಟ್ಟುಬಿಟ್ಟಿದ್ದರು. ಕಾಲಕ್ರಮೇಣ ತಾರಾಬಾಯಿಗೆ ಸುರೇಶ್ ಬಾಬು ಮಾನೆ, ಹೀರಾಬಾಯಿ, ಕಮಲಾಬಾಯಿ, ಸರಸ್ವತಿ ಮತ್ತು ಪಾಪಾ ಎಂಬ ಐದು ಮಕ್ಕಳು  ಹುಟ್ಟಿದ್ದವು. ಮುಂದೆ ಹೀರಾಬಾಯಿಯು ಸರಸ್ವತಿ ರಾಣಿ ಎಂದು ಪ್ರಸಿದ್ಧರಾದರು.

ಕರೀಂಖಾನರು ಗಾಂಧೀಜಿಯ ಸಮ್ಮುಖದಲ್ಲಿ ರಾಮಧುನ್ ಹಾಡಿದರು.

ಸಂಗೀತ ಎಲ್ಲಿದ್ದರೂ ಪೂಜಾರ್ಹವೆ!

ಕರೀಂ ಖಾನರು ಕರ್ನಾಟಕದಲ್ಲಿ ಹುಬ್ಬಳಿಯಲ್ಲದೆ ಧಾರವಾಡದಲ್ಲಿಯೂ ಕೆಲವು ವರ್ಷಗಳಿದ್ದರು. ಅಲ್ಲಿಂದ ಬೆಳಗಾವಿಗೆ ಕಛೇರಿಗಳಿಗೆ ಹೋಗುತ್ತಿದ್ದರು. ಬೆಳಗಾವಿಯಲ್ಲಿ ಕಚೇರಿಯೊಂದನ್ನು ಮುಗಿಸಿ ಮನೆಯ ಜಗಲಿಯ ಮೇಲೆ ಕುಳಿತು ಸ್ನೇಹಿತರೊಡನೆ ಮಾತನಾಡುತ್ತಿರುವಾಗ ಒಬ್ಬ ಭಿಕ್ಷುಕಿ ಕೈಯಲ್ಲಿ ಚೌಡಕಿ ವಾದ್ಯ (ವಿಶೇಷ ತಂತಿಯ ವಾದ್ಯ; ಜೊತೆಗೆ ಗೆಜ್ಜೆಯನ್ನೂ ಕಟ್ಟಿರುತ್ತದೆ) ವನ್ನು ಹಿಡಿದು ನುಡಿಸುತ್ತ, ಅದರೊಂದಿಗೆ ಎಲ್ಲಮ್ಮನ ಹಾಡುಗಳನ್ನು ಹಾಡುತ್ತ, ಆ ಮಾರ್ಗವಾಗಿ ಬಂದಳು. ಚೌಡಕಿ ವಾದ್ಯವು ಖಾನರನ್ನು ಆಕರ್ಷಿಸಿತು. ಅದರ ನಾದಕ್ಕೆ ಮನಸೋತು ಆಕೆಯು ಕೇಳಿದಷ್ಟು ಹಣವನ್ನು ಕೊಟ್ಟು ಆ ವಾದ್ಯವನ್ನು ಕೊಂಡುಕೊಂಡು ಅದನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ನುಡಿಸಿ ಅದರ ಆನಂದವನ್ನು ಅನುಭವಿಸಿದರು. ಹತ್ತಿರದಲ್ಲಿದ್ದ ಗವಾಯಿಯೊಬ್ಬರು. ’ತಮ್ಮಂತಹ ಘನ ವಿದ್ವಾಂಸರು ಇಂತಹ ಸಾಮಾನ್ಯ ವಾದ್ಯ ನುಡಿಸುವುದನ್ನು ಜನರು ಕಂಡರೆ ಹಾಸ್ಯ ಮಾಡುತ್ತಾರೆ’ ಎಂದರು. ಅದಕ್ಕೆ ಖಾನರು ನಕ್ಕು, ’ಸಂಗೀತವು ಭಿಕ್ಷುಕಿಯಲ್ಲಿರಲಿ, ಖಾನ್ ಸಹೇಬರ ಕಂಠದಲ್ಲಿರಲಿ, ಬೀನ್, ಸಿತಾರ್, ಸರೋಟ್, ಸಾರಂಗಿ ಯಾವುದೇ ವಾದ್ಯದಲ್ಲಿರಲಿ ಅದು ಪೂಜಾರ್ಹವೆ. ಅದಕ್ಕೆ ಸ್ಥಾನಗೌರವ ಗೊತ್ತಿಲ್ಲ. ನಾದ ಮಾಧುರ್ಯವೇ ಅದರ ಆಸ್ತಿ. ಎಂದು ಉತ್ತರಿಸಿದರು. ಇದರಿಂದ ಖಾನರು ಸಂಗೀತಕ್ಕೆ ಯಾವ ರೀತಿಯ ಮಹತ್ವವನ್ನು ಕೊಟ್ಟಿದ್ದರು ಎಂಬುದು ಗೊತ್ತಾಗುತ್ತದೆ.

ಸಾಧು ಸಂತರೊಡನೆ

ಸಾಧು ಸಂತರೆಂದರೆ ಕರೀಂ ಖಾನರಿಗೆ ತುಂಬ ಗೌರವ. ಅವರು ತಮ್ಮ ಜೀವಮಾನದಲ್ಲಿ ಭೇಟಿ ಮಾಡಿದ ರಾಜಮಹಾರಾಜರುಗಳಿಗೆಲ್ಲರಿಗಿಂತಲೂ ತಾವು ಸಂದರ್ಶಿಸಿದ ಶಿರ್ಡಿ ಸಾಯಿಬಾಬಾ ಮತ್ತು ನಾಗಪುರದ ಮಹಾಸಂತ ತಾಜುದ್ದೀನ್ ಬಾಬಾ – ಇವರುಗಳ ಬಗ್ಗೆ ಯಾವಾಗಲೂ ಹೇಳುತ್ತಲೇ ಇದ್ದರು. ಒಮ್ಮೆ ಶಿರ್ಡಿಗೆ ಹೋಗಿ ಸಾಯಿಬಾಬಾರವರನ್ನು ಕಾಣಲು ಬಹಳ ಹೊತ್ತು ಕಾದರು. ಸಾಯಂಕಾಲದ ಹೊತ್ತಿಗೆ ಖಾನರು ಸಾಯಿ ಬಾಬಾರವರ ದರ್ಶನವು ಲಭಿಸಿತು. ಬಾಬಾರವರ ಅಪ್ಪಣೆಯಂತೆ ಹಾಡಿದರು. ಮೊದಲು ತಂಬೂರಿ ಇಲ್ಲವೆಂದು ಮುಜುಗರ ಪಟ್ಟುಕೊಂಡರು.  ಆದರೆ ಬಾಬಾರವರು, “ಖಾನ್ ಸಾಹೇಬರೇ, ನಮಗೆ ಬೇಕಾದ್ದು ನಿಮ್ಮ ಸಂಗೀತವೇ ಹೊರತು ತಂಬೂರಿಯಲ್ಲ, ಹಾಗೆ ಹಾಡಿ ಪರವಾಗಿಲ್ಲ’ ಎಂದರು. ಖಾನರ ಮರಾಠಿ ಹಾಡನ್ನು ಕೇಳಿ ಬಾಬಾರವರು ಪರವಶರಾಗಿ, ’ಜಾತಿ ಎಂಬುದೇ ಎಲ್ಲಿದೆ? ಒಬ್ಬ ಮುಸಲ್ಮಾನ ಗಾಯಕರು ಹಿಂದು ದೇವರನ್ನು ಕುರಿತು ಎಷ್ಟು ಭಕ್ತಿಯಿಂದ ಹಾಡಿದರಲ್ಲ! ಹಿಂದೂ ಮುಸಲ್ಮಾನರಲ್ಲಿ ಭೇದವಿಲ್ಲ ಎಂಬುದನ್ನು ತೋರಿಸಿದ ಮಹಾನುಭವರು ನೀವು ’ ಎಂದು ಖಾನರನ್ನು  ಕೊಂಡಾಡಿದರು. ಅಂದು ರಾತ್ರಿ ಕರೀಂ ಖಾನರ ಭಜನಾ ಕಾರ್ಯಕ್ರಮವು ನಡೆಯಿತು. ಸುಪ್ರೀತರಾದ ಸಾಯಿಬಾಬಾರವರು ಖಾನರಿಗೆ ಒಂದು ರೂಪಾಯಿ ನಾಣ್ಯವನ್ನು ಕೊಟ್ಟು ಯಾವಾಗಲೂ ಇಟ್ಟುಕೊಂಡಿರುವಂತೆ ಹೇಳಿದರು. ಖಾನರು ಆ ನಾಣ್ಯವನ್ನು ತಮ್ಮ ಕೊನೆಯ ಗಳಿಗೆಯವರೆಗೂ ಜೋಪಾನವಾಗಿ ಇಟ್ಟುಕೊಂಡಿದ್ದರು.

ನಾಗಪುರದ ಸಂತ ತಾಜುದ್ದೀನ್ ಬಾಬಾರವರು ಮಹಾಮಹಿಮರೆಂದು ಪ್ರಸಿದ್ಧರಾಗಿದ್ದರು. ಕರೀಂ ಖಾನರಿಗೆ ಅವರನ್ನು ಸಂದರ್ಶಿಸುವ ಇಚ್ಛೆಯಾಗಿ ನಾಗಪುರಕ್ಕೆ ಹೋದರು. ಆದರೆ ಬಾಬಾರವರು ಯಾರಿಗೂ ದರ್ಶನವನ್ನು ಕೊಡುತ್ತಿರಲಿಲ್ಲ. ಬೆಳಗಿನ ಜಾವ ವಾಯುಸೇವನೆಗೆಂದು ಹೊರಗೆ ಹೋಗುತ್ತಿದ್ದ ವಿಷಯವನ್ನು ಕರೀಂಖಾನರು ತಿಳಿದುಕೊಂಡು ಒಂದು ನಸುಕಿನಲ್ಲಿ ಬಾಬಾರವರನ್ನು ಹಿಂಬಾಲಿಸಿದರು. ಬಾಬಾರವರು ಹಿಂತಿರುಗಿ ನೋಡಿ, ’ಯಾರು ನೀನು?’ ನನ್ನ ಹಿಂದೆ ಏಕೆ ಬರುತ್ತಿದ್ದೀ? ವಾಪಸ್ಸು ಹೋಗು’ ಎಂದು ಗದರಿದರು. ಖಾನರು ಕೇಳಲಿಲ್ಲ. ಮತ್ತೆ ಅವರನ್ನು ಹಿಂಬಾಲಿಸಿದರು. ಮೂರು ನಾಲ್ಕು ಮೈಲಿಗಳು ನಡೆದ ಮೇಲೆ  ಮಲಿನ ಪ್ರದೇಶವೊಂದನ್ನು ತಲುಪಿ, ’ನನ್ನ ಮುಂದೆ ಹಾಡಬೇಕೆಂದಿದ್ದೀಯಾ? ಹಾಗಾದರೆ ಇಲ್ಲಿ ಕುಳಿತು ಹಾಡು’ ಎಂದರು. ಖಾನರು ಅಲ್ಲಿಯೇ ಕುಳಿತು ಕಬೀರದಾಸರ ಒಂದು ರಚನೆಯನ್ನೇ ಹಾಡಿದರು. ತಾಜುದ್ದೀನ್ ಬಾಬಾರವರು ಕಣ್ಣು ಮುಚ್ಚಿಕೊಂಡು ಆ ದಿವ್ಯ ಸಂಗೀತವನ್ನು ಕೇಳಿ, ಆನಂತರ ಕಣ್ತೆರೆದು ’ಆಯಿತು ಇನ್ನು ಹೊರಡು’ ಎಂದರು. ಖಾನರು ನಮ್ರರಾಗಿ ಕೈಜೋಡಿಸಿ ’ತಮ್ಮ ಅನುಗ್ರಹಕ್ಕೆ ಕಾಯುತ್ತಿದ್ದೇನೆ’ ಎಂದರು. ಬಾಬಾರವರು ’ಅದು ಆಗಲೇ ಆಯಿತು. ಆಶೀರ್ವಾದ ಮಾಡಿದ್ದೇನೆ, ಹೊರಡು’ ಎಂದರು. ಹಾಗೆ ಹೇಳಿ ಸರಸರನೆ ಹೆಜ್ಜೆ ಹಾಕುತ್ತ ಸ್ವಲ್ಪ ದೂರ ಹೋಗಿ ಅದೃಶ್ಯರಾದರಂತೆ.

ಮುಂದೆ ಕರೀಂ ಖಾನರು ನಾಗಪುರದಲ್ಲಿ ಒಂದು ತಿಂಗಳಿದ್ದರು. ತಾಜುದ್ದೀನ್ ಬಾಬಾರವರು ಆಗಾಗ್ಗೆ ಬಂದು ಅವರ ಸಂಗೀತವನ್ನು ಕೇಳಿ ಆನಂದಿಸುತ್ತಿದ್ದರು.

ಗಾಂಧೀಜಿಯವರ ಬಳಿ

ಒಮ್ಮೆ ಕವಯಿತ್ರಿ ಸರೋಜಿನಿ ನಾಯ್ಡುರವರು ಅಬ್ದುಲ್ ಕರೀಂ ಖಾನರನ್ನು ಗಾಂಧೀಜಿಯವರ ಬಳಿಗೆ ಕರೆದುಕೊಂಡು ಹೋದರು. ಬಾಪೂಜಿ ಖಾನರನ್ನು ಸ್ವಾಗತಿಸಿ ಹಾಡುವಂತೆ ಹೇಳಿದರು. ಕರೀಂ ಖಾನರು ’ವಕ್ರತುಂಡ ಮಹಾಕಾಯ’ ಮತ್ತು ವೈಷ್ಣವ ಜನತೋ’ ಗೀತೆಗಳನ್ನು ಹಾಡಿ, ಕೊನೆಯಲ್ಲಿ ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾದ ’ರಘುಪತಿ ರಾಘವ ರಾಜರಾಂ’ ಎಂಬ ರಾಮ್ ಧುನ್ ಹಾಡಿದರು. ಖಾನರ ಮನಕರಗುವಂತಹ ಗಾಯನವನ್ನು ಕೇಳಿ ಗಾಂಧೀಜಿಯವರು ’ಇಂತಹ ಒಬ್ಬ ವ್ಯಕ್ತಿ ಭಾರತದ ಮೂಲೆ ಮೂಲೆಯಲ್ಲೂ ಈ ರಾಮದ್ ಧುನ್ ಹಾಡಿದರೆ ಸಾಕು, ಜಾತಿ ದ್ವೇಷವು ಮಾಯವಾಗಿ ವಿಷವು ಅಮೃತವಾಗುತ್ತದೆ’ ಎಂದು ಹೇಳಿದರು.

ಪಂಡಿತ್ ವಿಷ್ಣು ದಿಗಂಬರ ಪಲುಸ್ಕರ್ ರವರು ಖಾನರನ್ನೊಮ್ಮೆ ಕಂಡು ಅವರಿಂದ ಮಾಲ್ ಕೌಂಸ್ ರಾಗದಲ್ಲಿ ಓಂ ತತ್ಸತ್, ಜೋಗಿಯಾ ರಾಗದಲ್ಲಿ ಓಂ ನಮಃ ಶಿವಾಯ, ಓಂ ಶಾಂತಿಃ ಶಾಂತಿಃ ಮಂತ್ರಗಳನ್ನು ಹಾಡಿಸಿ ಸಂತೋಷದಿಂದ ಕಣ್ಣೀರು ಸುರಿಸಿದರು.

ವಿಪತ್ತು ಪರಿಹಾರ

ಕಲಾವಿದನಿಗೆ, ಅದರಲ್ಲಿಯೂ ಹಾಡುವವನಿಗೆ, ಅವನ ಶಾರೀರವು ಅತ್ಯುಮೂಲ್ಯವಾದ ವಸ್ತು. ಅದನ್ನು ಬಹಳ ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕು. ಕರೀಂ ಖಾನರಿಗೆ ಇದ್ದಕ್ಕಿದ್ದಂತೆ ಶಾರೀರ ಹೋಯಿತು. ಹಾಡುವುದಿರಲಿ, ಮಾತನಾಡಲು ಸಹ ಆಗುತ್ತಿರಲಿಲ್ಲ. ಕಛೇರಿಗಳು ನಿಂತು ಹೋದವು. ಸಂಪಾದನೆ ಇಲ್ಲವಾಯಿತು. ಶಿಷ್ಯರ ಪೋಷಣೆಯ ಭಾರವನ್ನು ವಹಿಸಿದ್ದ ಖಾನರಿಗೆ ದಿಕ್ಕು ತೋಚದಂತಾಯಿತು. ’ಶಿಷ್ಯರನ್ನು ಸದ್ಯಕ್ಕೆ ಅವರವರ ಮನೆಗೆ ಕಳುಹಿಸೋಣ’ ಎಂಬ ತಾರಾಬಾಯಿಯ ಸೂಚನೆಯನ್ನು ಒಪ್ಪಲಿಲ್ಲ. ತಾವು ತಿನ್ನುತ್ತಿದ್ದ ರೊಟ್ಟಿಯನ್ನು ಶಿಷ್ಯರೊಂದಿಗೆ ಹಂಚಿಕೊಳ್ಳುವ ಔದಾರ್ಯವನ್ನು ತೋರಿಸಿದರು.

ವೈದ್ಯಕೀಯ ಚಿಕಿತ್ಸೆಗೆ ಖಾನರ ಶಾರೀರವು ಒಗ್ಗಲಿಲ್ಲ. ಖಾನರ ಆತ್ಮೀಯ ತಬಲ ವಾದ್ಯಗಾರರಾದ ರಾಜಣ್ಣ, ಖಾನರ ಬಳಿಗೆ ಬಂದು ಅವರನ್ನು ಒಪ್ಪಿಸಿ ಬಿಜಾಪುರದ ಬಳಿ ಇದ್ದ ಒಂದು ಗುಡ್ಡಕ್ಕೆ ಕರೆದುಕೊಂಡು ಹೋದರು. ಅಲ್ಲಿದ್ದ ಸಂತರೊಬ್ಬರ ಸಮಾಧಿಯ ಮುಂದೆ ಕುಳಿತು ಖಾನರು ಕ್ಷೀಣ ಸ್ವರದಿಂದ ಪ್ರಾರ್ಥಿಸಿದರು. ಪ್ರತಿದಿನವೂ ಒಬ್ಬ ಕುರುಬನು ಅವರ ಪ್ರಾರ್ಥನಾ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬರುತ್ತಿದ್ದ. ಒಂದು ದಿನ ಅವನು ಖಾನರ ಬಳಿ ಬಂದು ಆ ಗುಡ್ಡದಲ್ಲಿ ಎಲ್ಲಿಯೋ ಮರೆಯಲ್ಲಿದ್ದ ಒಂದು ಗಿಡಮೂಲಿಕೆಯನ್ನು ಕೊಟ್ಟು ಅದನ್ನು ಭಕ್ತಿಯಿಂದ ಸೇವಿಸುವಂತೆ ಹೇಳಿದನು. ಖಾನರು ಅದರಂತೆಯೇ ಮಾಡಿದರು. ಕೆಲವು ದಿವಸಗಳ ನಂತರ ಅವರ ಶಾರೀರವು ಸರಿಹೋದುದು ಮಾತ್ರವೇ ಅಲ್ಲ ಪುಟಕ್ಕೆ ಹಾಕಿದ ಚಿನ್ನದಂತೆ ಆಯಿತು. ಮತ್ತೆ ಕಛೇರಿಗಳಿಂದ ಹಣ ಗಳಿಸಿದರು.

ಸಂಗೀತರತ್ನ

ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ‍್ರವರು ೧೯೧೫ರ ದಸರಾ ಸಮಾರಂಭಕ್ಕೆ ಅಬ್ದುಲ್ ಕರೀಂ ಖಾನರನ್ನು ಆಹ್ವಾನಿಸಿದರು. ಹಿಂದೆ ಆ ಪ್ರಭುವಿನ ವರ್ಧಂತಿಗೆ ಕರೀಂ ಖಾನರು ಮೈಸೂರಿಗೆ ಬಂದು ಮಹಾರಾಜರು ಸಂತೋಷ ಪಟ್ಟು  ತಮ್ಮ ವರ್ಧಂತಿಯ ಸವಿನೆನಪಿಗೆ ಎರಡು ಸಾವಿರ ರೂಪಾಯಿಗಳನ್ನು ಕೊಟ್ಟು ಗೌರವಿಸಿದ್ದರು. ದಸರಾ ಆಹ್ವಾನವನ್ನು ಮನ್ನಿಸಿ ಮೈಸೂರಿಗೆ ಬಂದ ಕರೀಂ ಖಾನರಿಗೆ ಒಂದು ಸಂದಿಗ್ಧ ಪರಿಸ್ಥಿತಿ ಕಾದಿತ್ತು. ಬರೋಡದ ಗಾಯಕವಾಡರೂ ಆಹ್ವಾನಿತರಾಗಿ  ಮೈಸೂರಿಗೆ ಬಂದಿದ್ದರು.  ಆ ಸಮಾಚಾರವನ್ನು ಕೇಳಿ ಖಾನರಿಗೆ ಅಳುಕುಂಟಾಯಿತು. ತಾರಾಬಾಯಿಯ ಪ್ರಕರಣದಿಂದ ಗಾಯಕವಾಡರಿಗೆ ಉಂಟಾಗಿದ್ದ ಅವಮಾನಕ್ಕೆ ಈಗ ಸೇಡು ತೀರಿಸಿಕೊಳ್ಳುವರೋ ಎಂಬ ಹೆದರಿಕೆಯುಂಟಾಯಿತು. ಆದರೆ ಗಾಯಕವಾಡರು ಹಿಂದಿನ ಕಹಿ ಪ್ರಕರಣವನ್ನು ಮರೆತು, ಏನೂ ಆಗದಿದ್ದವರಂತೆ ನಡೆದುಕೊಂಡದ್ದು ಖಾನರಿಗೆ ಆಶ್ಚರ್ಯವನ್ನುಂಟು ಮಾಡಿತು. ಗಾಯಕವಾಡರ ವಿಷಯದಲ್ಲಿ ಅವರಿಗೆ ಗೌರವ ಮೂಡಿತು.

ಮತ್ತೆ ೧೯೧೯ರ  ಡಿಸೆಂಬರ್ ತಿಂಗಳಲ್ಲಿ ಕರೀಂ ಖಾನರು ಮೈಸೂರಿಗೆ ಬಂದರು. ಆ ಸಂದರ್ಭದಲ್ಲಿ ಮೈಸೂರಿನ ಪುರಭವನದಲ್ಲಿ ಕರೀಂ ಖಾನರಿಗೆ ಭಾರೀ ಸನ್ಮಾನ ಸಮಾರಂಭವು ನಡೆದು ಮೈಸೂರಿನ ಮಹಾವೈಣಿಕರಾದ ವೈಣೀಕ ಶಿಖಾಮಣಿ ಶೇಷಣ್ಣನವರು ಅಬ್ದುಲ್ ಕರೀಂ ಖಾನರಿಗೆ ’ಸಂಗೀತರತ್ನ’ ಎಂಬ ಬಿರುದನ್ನು ಕೊಟ್ಟು ಅವರ ಕೊರಳಿಗೆ ರತ್ನಹಾರವನ್ನು ಹಾಕಿ ಗೌರವಿಸಿದರು.

ಇದಕ್ಕೂ ಮುಂಚೆ ಮದರಾಸಿನ ರಸಿಕರು ಕರೀಂಖಾನರನ್ನು ಕರೆಸಿಕೊಂಡು ಅವರ ಬೈಠಕ್ ಏರ್ಪಡಿಸಿದರು. ಅಂದು ಅವರು ಹಾಡಿದ ಅಡಾಣಾ ರಾಘದ ’ಜೋ ತೇರೀ ರಾಜಾ’ ಎಂಬ ಚೀಜ್ ರಚನೆಯಾದ ಸನ್ನಿವೇಶವನ್ನು ವಿವರಿಸಿ, ಅದರ ಅರ್ಥವನ್ನು ತಿಳಿಸಿ ಹಾಡಿದರು. ಬಾಗೇಶ್ರೀಯಲ್ಲಿ ಓಂ ನಮಃ ಶಿವಾಯಃ ಮಂತ್ರವನ್ನು ಹಾಡಿ ಸಭಿಕರನ್ನು ಬೇರೊಂದು ಪ್ರಪಂಚಕ್ಕೆ ಕೊಂಡೊಯ್ದರು. ಸಭೆಯ ಕಾರ್ಯಕರ್ತರು ಖಾನರಿಗೆ ಸಂಗೀತರತ್ನ ಬಿರುದನ್ನು ಕೊಟ್ಟು ಆದರಿಸಿದರು.

೧೯೨೩ರಲ್ಲಿ ಕಾಕಿನಾಡದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಸಂಗೀತ ಪರಿಷತ್ತಿನ ಅಧ್ಯಕ್ಷರಾಗಿ ಆರಿಸಲ್ಪಟ್ಟರು.

ಆಘಾತ

ಕರೀಂ ಖಾನರು ಬೆಳಗಾವಿಯಲ್ಲಿದ್ದಾಗ ೧೯೧೦ ಮೇ ೧೦ ರಂದು ಆರ್ಯ ಸಂಗೀತ ವಿದ್ಯಾಲಯ ಎಂಬ ಸಂಗೀತ ಶಾಲೆಯನ್ನು ಪ್ರಾರಂಭಿಸಿದರು. ಅದು ಗುರುಕುಲದ ಮಾದರಿಯಲ್ಲಿದ್ದಿತು. ವಿದ್ಯಾರ್ಥಿಗಳು ಅರ್ಧದಲ್ಲಿ ಬಿಟ್ಟು ಹೋಗಿ ತಾವು ಕಲಿತ ಅರೆವಿದ್ಯೆಯನ್ನು ಪ್ರದರ್ಶಿಸಿ ವಿದ್ಯಾಲಯಕ್ಕೆ ಕಳಂಕ ತರದಿರುವಂತೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಪಕ್ಷ ಎಂಟು ವರ್ಷಗಳ ಕಾಲ ವಿದ್ಯಾಲಯದಲ್ಲಿ ಕಲಿಯತಕ್ಕದ್ದು ಎಂಬ ಕರಾರು ಪತ್ರವನ್ನು ಬರೆದುಕೊಡುವ ವ್ಯವಸ್ಥೆಯನ್ನು ಖಾನರು ಮಾಡಿದ್ದರು. ಕಾಲ ಕ್ರಮೇಣ ಖಾನರು ವಿದ್ಯಾಲಯವನ್ನು ಮುಂಬಯಿಗೆ ವರ್ಗಾಯಿಸಿದರು. ಪುಣೆಯಲ್ಲಿಯೂ ಒಂದು ಶಾಖೆಯನ್ನು ತೆರೆದರು.

ಬಾಲಕೃಷ್ಣ, ಕಪಿಲೇಶ್ವರಿ ಎಂಬ ಶಿಷ್ಯರು ನೃತ್ಯಗಾರರೂ ಆಗಿದ್ದರು. ಆದರೆ ಒಮ್ಮೆ ನೃತ್ಯದಲ್ಲಿ ಭಾಗವಹಿಸಲು ನಿರಾಕರಿಸಿದರು. ತಾರಾಬಾಯಿಯು ಕೋಪಗೊಂಡು ಅವರನ್ನು ಹೊಡೆದು  ವಿದ್ಯಾಲಯದಿಂದ ಹೊರಗೆ ಹಾಕಿದರು. ಮತ್ತೊಮ್ಮೆ ದಶರಥ ಮುಳೆ ಎಂಬ ಇನ್ನೊಬ್ಬ ವಿದ್ಯಾರ್ಥಿಯೂ ತಾರಾಬಾಯಿಯ ಕೋಪಕ್ಕೆ ಬಲಿಯಾದ. ಅವನನ್ನೂ ತಾರಾಬಾಯಿಯು ಶಾಲೆಯಿಂದ ಅಟ್ಟಿದಳು. ಹೀಗೆ ತಮ್ಮ ಪ್ರತಿಭಾಶಾಲಿ ವಿದ್ಯಾರ್ಥಿಗಳು ತಮ್ಮ ಕಣ್ಣು ಮುಂದೆಯೇ ಅವಮಾನಿತರಾಗಿ ವಿದ್ಯಾಲಯವನ್ನು ಬಿಟ್ಟುದು ಕರೀಂ ಖಾನರಿಗೆ ವೇದನೆಯನ್ನುಂಟು ಮಾಡಿತು. ಆದರೆ ತಾರಾಬಾಯಿಯನ್ನು ಎದುರು ಹಾಕಿಕೊಳ್ಳುವ ಧೈರ್ಯವಿಲ್ಲದೆ ಸುಮ್ಮನಾಗಬೇಕಾಯಿತು.

೧೯೧೮ರ ಏಪ್ರಿಲ್ ತಿಂಗಳಿನಲ್ಲಿ ಶಾಲೆಯು ಮುಂಬಯಿಗೆ ವರ್ಗವಾದ ಮೇಲೆ ಖಾನರಿಗೂ ತಾರಾ ಬಾಯಿಗೂ ಹಣಕಾಸಿನ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿದವು. ವಿದ್ಯಾರ್ಥಿಗಳ ಸಂಖ್ಯೆ ಕಡಮೆಯಾದರೂ ಸರಿ, ಶಿಕ್ಷಣದ ಮಟ್ಟವು ಕೆಳಗಿಳಿಯಕೂಡದು ಎಂಬುದು ಕರೀಂ ಖಾನರ ಅಭಿಮತ. ತಾರಾಬಾಯಿಯ ಅಭಿಪ್ರಾಯವು ಇದಕ್ಕೆ ವಿರುದ್ಧ. ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಹಣ ಗಳಿಸುವುದೇ ಆಕೆಯ ಧ್ಯೇಯ.  ಕೊನೆಗೆ ಅವಳ ಹಠವೇ ಗೆದ್ದಿತು. ವಿದ್ಯಾರ್ಥಿಗಳ ಸಂಖ್ಯೆ ಏರಿದಂತೆ ವರಮಾನವೂ ಏರತೊಡಗಿತು. ಖಾನರು ಮೈಸೂರಿಗೆ ಹೋಗಿರುವಾಗ ತಾರಾಬಾಯಿಯು ಶೇಖರಿಸಿದ ಹಣವನ್ನೆಲ್ಲ ದೋಚಿಕೊಂಡು ಪರಾರಿಯಾದಳು.

ಮೈಸೂರಿನಿಂದ ಹಿಂತಿರುಗಿದ ಖಾನರಿಗೆ ಇದು ಬಲವಾದ ಏಟು. ಯಾವ ವ್ಯಕ್ತಿಗಾಗಿ ತಾವು ಎಲ್ಲವನ್ನೂ ತ್ಯಜಿಸಿ ಆಶ್ರಯದಾತರ ಕೋಪಕ್ಕೂ ಗುರಿಯಾಗಿ ಕೈಹಿಡಿದು ಎತ್ತಿದರೋ ಅವಳೇ ಅವರನ್ನು ವಂಚಿಸುವಳೆಂದು ಯಾರೂ ಯೋಚಿಸಿರಲಿಲ್ಲ. ಖಾನರಿಗಂತೂ ಏನೂ ಬೇಕಾಗಿರಲಿಲ್ಲ. ನಡೆದ ಸಂಗತಿಯನ್ನೆಲ್ಲವನ್ನೂ ಬೆಳಗಾವಿಯಲ್ಲಿದ್ದ ಬಾಲಕೃಷ್ಣ ಕಪಿಲೇಶ್ವರಿಯವರಿಗೆ ತಿಳಿಸಿ ಅವರನ್ನು ಮುಂಬಯಿಗೆ ಬರಮಾಡಿಕೊಂಡು ತಮ್ಮ ವಿದ್ಯಾಲಯವನ್ನು ಅವರಿಗೆ ವಹಿಸಿಕೊಟ್ಟರು. ಜೀವನದಲ್ಲಿ ಜುಗುಪ್ಸೆ ಹುಟ್ಟಿ ಆತ್ಮಹತ್ಯೆ ಪ್ರಯತ್ನವನ್ನೂ ಮಾಡಿದರು. ಅದೂ ಸಾಗಲಿಲ್ಲ. ಕನಸಿನಲ್ಲಿ ನರಸೋಬನ ವಾಡಿಯ ವಜೀರ್ ಬಾಬಾ ಕಾಣಿಸಿಕೊಂಡು ’ದೇವರ ಇಚ್ಛೆಯ ಮುಂದೆ ನಿನ್ನಾಟವು ನಡೆಯುವುದಿಲ್ಲ. ನೀನು ತಿಂದ ವಜ್ರವು ನಿನ್ನನ್ನು ಏನೂ ಮಾಡಲಿಲ್ಲ ಒಂದು ಹೆಣ್ಣಿಗಾಗಿ ಪ್ರಾಣವನ್ನು ಬಿಡಲು ಯೋಚಿಸಿರುವ ನೀನು ಹೇಡಿ. ನಿನ್ನ ಪ್ರಯತ್ನವನ್ನು ನಿಲ್ಲಿಸು’ ಎಂದು ಹೇಳಿದಂತಾಯಿತು. ಮಾರನೆಯ ದಿನ ನರಸೋಬನ ವಾಡಿಗೆ ಹೋಗಿ ವಜೀರ್ ಬಾಬಾನ ದರ್ಶನವನ್ನು ಮಾಡಿ ಬಂದರು. ಸ್ವಲ್ಪ ಮನಸ್ಸಿಗೆ ನೆಮ್ಮದಿ ಸಿಕ್ಕಿತು. ಆದರೂ ಮನಸ್ಸಿಗಾದ ಗಾಯವು ಮಾಯಲಿಲ್ಲ. ಅದನ್ನು ಮರೆಯಲು ಮತ್ತೆ ಸಂಚಾರ ಹೊರಟು ಬಾಗಲಕೊಟೆ, ಬಿಜಾಪುರ, ಶೋಲಾಪುರ ಮುಂತಾದ ಕಡೆಗಳಲ್ಲಿ ಕಛೇರಿಗಳನ್ನು ಮಾಡಿ ಬಂದರು.

ಒಂದು ಆಶ್ಚರ್ಯಕರ ಸಂಗತಿ

ಸಾಮಾನ್ಯವಾಗಿ ಮಹಾಪುರುಷರ ಸುತ್ತಲೂ ದಂತ ಕಥೆಗಳು ಹೆಣೆಯಲ್ಪಡುತ್ತವೆ. ಅವರನ್ನು ಪವಾಡ ಪುರುಷರು ಎಂದು ಕರೆದು ಅದನ್ನು ಸಮರ್ಥಿಸುವ ಕೆಲವು ಸನ್ನಿವೇಶಗಳನ್ನು ಕೊಡುವ ವಾಡಿಕೆಯಿದೆ. ಅಬ್ದುಲ್ ಕರಿಂ ಖಾನರ  ಬಗ್ಗೆಯೂ ಕೆಲವು ಪವಾಡಗಳ ಕಥೆಗಳಿವೆ. ಅವುಗಳಲ್ಲಿ ಒಂದನ್ನು ತಾವೇ ನೋಡಿದೆವು ಎಂದು ಹೇಳುವವರು ಇನ್ನೂ ಜೀವಂತವಾಗಿ ಇದ್ದಾರೆ.

ಮೈಸೂರಿನಿಂದ ಹಿಂತಿರುಗುವಾಗ ಖಾನರು ಬಾಗಲ ಕೋಟೆಯಲ್ಲಿ ಬಿಡಾರ ಮಾಡಿದ್ದರು. ಅಲ್ಲಿ ಅವರ ಸ್ನೇಹಿತರೊಬ್ಬರು ಅವರಿಗೆ ಒಂದು ನಾಯಿಯನ್ನು ಕೊಟ್ಟರು. ಮೊದಮೊದಲು ಆ ನಾಯಿಯು ಆಹಾರವನ್ನು  ತಿನ್ನುವುದಿರಲಿ, ಅದನ್ನು ಮೂಸಿ ನೋಡುತ್ತಲೂ ಇರಲಿಲ್ಲ. ಇದು ಖಾನರಿಗೆ ಕಳವಳವನ್ನುಂಟು ಮಾಡಿತು. ಆಮೇಲೆ ನಾಯಿಗೆ ಸಂಗೀತದ ಮೇಲೆ ಒಲವು ಇದೆ ಎನ್ನುವುದು ತಿಳಿಯಿತು. ಖಾನರು ಶಿಷ್ಯರಿಗೆ ಪಾಠ ಹೇಳುವಾಗ ನಾಯಿಯೂ ಬಂದು ಕುಳಿತುಕೊಂಡು ಏಕಾಗ್ರಚಿತ್ತತೆಯಿಂದ ಸಂಗೀತವನ್ನು ಕೇಳುತ್ತಿತ್ತು. ಕರೀಂ ಖಾನರು ನಾಯಿಗೆ ಸರಿಗಮಪದನಿಸ ಹೇಳಿಕೊಟ್ಟರಂತೆ. ನಾಯಿ ಯಜಮಾನನ ಧ್ವನಿಯಂತೆ ಪ್ರತಿಧ್ವನಿ ಮಾಡುವುದನ್ನು ಕಲಿಯಿತಂತೆ. ಸತಾರೆಯಲ್ಲಿ ಖಾನರು ಹಾಡಿದ ಸ್ವರಗಳನ್ನು ನಾಯಿಯು ಪ್ರತಿಧ್ವನಿಸಿತಂತೆ. ಮುಂಬಯಿಯ ಕಛೇರಿಯಲ್ಲಿ ಸರೋಜಿನಿ ನಾಯ್ದು, ಆನಿ ಬೆಸೆಂಟ್ ಮೊದಲಾದ ರಾಷ್ಟ್ರದ ಹಿರಿಯರು ಇದನ್ನು ಕಂಡು ಬೆರಗಾದರಂತೆ.

ತ್ಯಾಗರಾಜರ ಕೃತಿಗಳು

ಅಬ್ದುಲ್ ಕರೀಂ ಖಾನರು ಹಿಂದುಸ್ತಾನಿ ಸಂಗೀತದಲ್ಲಿ ಎಷ್ಟು ಪರಿಣಿತರೋ ಅಷ್ಟೇ ಮಟ್ಟದಲ್ಲಿ ಕರ್ನಾಟಕ ಸಂಗೀತ ಪದ್ಧತಿಯ ಸೂಕ್ಷ್ಮಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಖರಹರಪ್ರಿಯ, ಹಂಸಧ್ವನಿ, ಅಭೋಗಿ, ಶುದ್ಧಸಾವೇರಿ, ಸಾವೇರಿ ರಾಗಗಳನ್ನು ಲೀಲಾಜಾಲವಾಗಿ ಹಾಡುತ್ತಿದ್ದರು. ಕರ್ನಾಟಕ ಸಂಗೀತದ ಆಭೋಗಿಯನ್ನು ಹಿಂದೂಸ್ತಾನಿ ಕರ್ನಾಟಕ ಸಂಗೀತಕ್ಕೆ ಪರಿಚಯ ಮಾಡಿಸಿದವರು ಖಾನರು. ಕರ್ನಾಟಕ ಸಂಗೀತದ ರಾಗಗಳನ್ನು ಗ್ರಾಮ ಫೋನ್ ಕಂಪನಿಯವರು ಬಿಡುಗಡೆ ಮಾಡಿದ್ದಾರೆ. ಖರಹರಪ್ರಿಯ ರಾಗದಲ್ಲಿ ಅವರು ಹಾಡಿರುವ ತ್ಯಾಗರಾಜರ ’ರಾಮ ನೀ ಸಮಾನಮೆವರು’ ಕೃತಿಯು ಪ್ರಸಿದ್ಧವಾಗಿದೆ. ೧೯೨೪ರ ಸುಮಾರಿನಲ್ಲಿ ಬೆಂಗಳೂರು ದೇಶೀಯ ವಿದ್ಯಾಶಾಲೆಯಲ್ಲಿ ಕರೀಂ ಖಾನರ ಕಛೇರಿಯು ನಡೆಯಿತು. ಕರೀಂ ಖಾನರು ಖರಹರಪ್ರಿಯ ರಾಗದ ’ರಾಮ ನೀ ಸಮಾನಮೆವರು’ ಮತ್ತು ಶುದ್ಧಸಾವೇರಿ ರಾಗದ ’ ಕಾಲಹರಣಮೇಲರಾ ಹರೇ’ ಕೃತಿಗಳನ್ನೂ ಹಾಡಿದರು.

ವ್ಯಕ್ತಿತ್ವ ಮತ್ತು ಸಂಗೀತದ ವೈಶಿಷ್ಟ್ಯ

ಶಾಸ್ತ್ರೀಯ ಹಿಂದೂಸ್ತಾನಿ ಸಂಗೀತವನ್ನು ಸುಮಧುರವಾಗಿ ಖಾನರು ಹಾಡಿ ಅತ್ಯುತ್ತಮ ಕಲಾವಿದರ ಪಂಕ್ತಿಗೆ ಸೇರಿದರು. ಹೇಳಿಕೊಳ್ಳುವಂತಹ ಸ್ವರೂಪವೇನಲ್ಲ. ಖಾನರು ತೆಳ್ಳಗೆ ಇದ್ದರು. ಬಣ್ಣವೂ ಕಪ್ಪು. ಆದರೆ ಕಣ್ಣುಗಳು  ತೇಜಃಪುಂಜವಾಗಿದ್ದವು. ಅಚ್ಚ ಬಿಳಿಯ ಪೈಜಾಮ, ಮೇಲೊಂದು ಕರಿಯ ಷರವಾನಿ, ತಲೆಗೆ ಅಚ್ಚುಕಟ್ಟಾಗಿ ಸುತ್ತಿದ್ದ ಪಟಗಾ, ಮಿತಾಹಾರಿ, ಜೀವನದಲ್ಲಿ ಕಷ್ಟಕಾರ್ಪಣ್ಯ, ಕಹಿ, ಕಣ್ಣೀರು ಇವುಗಳನ್ನು ಹೆಚ್ಚಾಗಿಯೇ ಕಂಡು, ಉಂಡು, ಸುರಿಸಿದ್ದರಿಂದ ಸ್ವಲ್ಪ ಸಿಡುಕು ಸ್ವಭಾವವಿದ್ದುದು ಆಶ್ಷರ್ಯವೇನಲ್ಲ. ಆತ್ಮಗೌರವಕ್ಕೆ ಧಕ್ಕೆ ತಗುಲಿದರೆ ಸಹಿಸುತ್ತಿರಲಿಲ್ಲ.

ಖಾನರ ಸಂಗೀತವನ್ನು ಮೆಚ್ಚದವರಿಲ್ಲ, ಅವರ ಸಮಕಾಲೀನ ವಿದ್ವನ್ಮಣಿಗಳು ಅವರನ್ನು ’ಶುದ್ಧ ಸ್ವರದ ದೇವತೆ’ ಎಂದು ಕರೆಯುತ್ತಿದ್ದರು. ಶುದ್ಧ ಶಾಸ್ತ್ರೀಯ ಸಂಗೀತವನ್ನು ಹಾಡುತ್ತಿದ್ದ ಅವರು ರಾಗವನ್ನು ಹಾಡಿದಾಗ ಅದರ ಸುಂದರ ಚಿತ್ರವು ಕಣ್ಣು ಮುಂದೆ ಬಂದು ನಿಲ್ಲುತ್ತಿತ್ತು. ಸಾಧನೆಯನ್ನು ಮಾಡಿ ತಮ್ಮ ಶಾರೀರವನ್ನು ಯಾವಾಗಲೂ ಹತೋಟಿಯಲ್ಲಿಟ್ಟುಕೊಳ್ಳುತ್ತಿದ್ದರು. ಅದರಲ್ಲಿಯೂ ಅವರಂತೆ ಮಂದ್ರಸ್ಥಾಯಿಯಲ್ಲಿ ಎಷ್ಟು ಹೊತ್ತು ಬೇಕಾದರೂ ಹಾಡುವ ಸಾಮರ್ಥ್ಯವು ಯಾರಿಗೂ ಇರಲಿಲ್ಲ.

ಶಿಷ್ಯ ಪರಂಪರೆ

ಕಿರಾನಾ ಘರಾನಾದ ಜೀವನಾಡಿಯಂತಿದ್ದ ಕರೀಂ ಖಾನರು ತಯಾರು ಮಾಡಿದ್ದ ಶಿಷ್ಯ ಸಮೂಹವು ದೊಡ್ಡದು. ಅದರಲ್ಲಿ ಎರಡು ಹೆಸರುಗಳು ಬಹಳ ಮುಖ್ಯವಾದವು. ಸವಾಯಿಗಂಧರ್ವ ಎಂದು ಪ್ರಸಿದ್ಧರಾದ ಕುಂದಗೋಳದ ರಾಮಭಾವು ಮತ್ತು ರೋಷನಾರಾ ಬೇಗಂ. ಪದ್ಮಶ್ರೀ ಗಂಗೂಬಾಯಿ ಹಾನಗಲ್ ಮತ್ತು ಪದ್ಮಶ್ರೀ ಭೀಮ್ ಸೇನ್ ಜೋಶಿ ಇವರುಗಳು ಸವಾಯಿಗಂಧರ್ವರ ಶಿಷ್ಯರು. ಕರೀಂ ಖಾನರ ಮಗ ಸುರೇಶ್ ಬಾಬು ಮಾನೆ ಒಳ್ಳೆಯ ಗಾಯಕರಾಗಿದ್ದರು. ಆದರೆ ಅವರು ಚಿಕ್ಕ ವಯಸ್ಸಿನಲ್ಲೇ ನಿಧನರಾದರು. ಭಾರತದಲ್ಲಿ ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಖ್ಯಾತರಾದ ಎಷ್ಟೋ ಮಂದಿ ಕರೀಂ ಖಾನರ ಶಿಷ್ಯರು – ಶಿಷ್ಯೆಯರು

ದೀಪವಾರಿತು

ಅಬ್ದುಲ್ ಕರೀಂ ಖಾನರು ೧೯೨೭ರಿಂದ ಮೀರಜಿನಲ್ಲಿ ನೆಲೆಸಿದರು. ಕಛೇರಿಗಳಿಗೆ ಆಹ್ವಾನಗಳು ಬರುತ್ತಲೇ ಇದ್ದವು. ಮೀರಜಿನಲ್ಲಿ ನೆಲೆಸುವುದಕ್ಕೆ ಮೊದಲು ೧೯೨೪ರಲ್ಲಿ ಕಲ್ಕತ್ತೆಗೆ ಹೋಗಿ ದಿಲೀಪ್ ಕುಮಾರ್ ರಾಯ್ ಮತ್ತು ಹರೀಂದ್ರನಾಥ ಚಟ್ಟೋಪಾಧ್ಯಾಯರ ಸಮ್ಮುಖದಲ್ಲಿ ಹಾಡಿ ಅವರಿಂದ ಪ್ರಶಂಸೆ ಪಡೆದರು. ಮದರಾಸಿನ ಸಂಗೀತ ಅಕಾಡೆಮಿಯಲ್ಲಿ ಕರೀಂ ಖಾನರು ಹಾಡುತ್ತಿರುವಾಗ ಪ್ರಖ್ಯಾತ ವೀಣಾವಾದಕರಾದ ವೀಣಾವಾದನಂ ಅವರು ಬಂದು, ಕಛೇರಿ ಮುಗಿಯುವವರೆಗೆ ಇದ್ದು ಖಾನರ ಸಂಗೀತದಿಂದ ಅಮಿತಾನಂದವನ್ನು ಪಡೆದರು.

೧೯೩೭ರಲ್ಲಿ ಕರೀಂ ಖಾನರಿಗೆ ಪುದುಚೇರಿಯ ಅರವಿಂದರಿಂದ ಆಹ್ವಾನವು ಬಂದಿತು. ಅವರ ದರ್ಶನಕ್ಕಾಗಿ ಹಾತೊರೆಯುತ್ತಿದ್ದ ಖಾನರಿಗೆ ಬಹಳ ಸಂತೋಷವಾಯಿತು. ಸ್ವಲ್ಪ ದೇಹಾಲಸ್ಯವಿದ್ದರೂ ಲೆಕ್ಕಿಸದೆ ಕರೀಂ ಖಾನರು ಹೊರಟರು.

ತಮ್ಮ ಅಂತಿಮ ಪ್ರಾರ್ಥನೆಯನ್ನು ಸಲ್ಲಿಸಿದರು.

೧೯೩೭ರ ಅಕ್ಟೋಬರ್ ೨೭ ರಂದು ಉಸ್ತಾದ್ ಅಬ್ದುಲ್ ಕರೀಂ ಖಾನರು ಪುದುಚೇರಿಗೆ ರೈಲು ಹತ್ತಿದರು. ಮದರಾಸನ್ನು ಬಿಟ್ಟು ಕೆಲವು ಗಂಟೆಗಳಲ್ಲಿ ರೈಲು ಸಿಂಗಪೆರುಮಾಳ್ ಕೋಯಿಲ್ ಎಂಬ ಚಿಕ್ಕ ನಿಲ್ದಾಣದಲ್ಲಿ ನಿಂತಿತು. ಆಗ ಮಧ್ಯರಾತ್ರಿಯಾಗಿತ್ತು. ಕರೀಂ ಖಾನರಿಗೆ ಹಠಾತ್ತಾಗಿ ಅಸ್ವಸ್ಥತೆಯುಂಟಾಗಿ, ಪ್ರಯಾಣವನ್ನು  ಮುಂದುವರಿಸಲು ಸಾಧ್ಯವಾಗದೆ ತಮ್ಮ ಮೇಳದವರೊಂದಿಗೆ ಅಲ್ಲಿಯೇ ಇಳಿದುಬಿಟ್ಟರು. ತಮ್ಮ ಅಂತ್ಯಕಾಲವು ಸಮೀಪಿಸಿತು ಎಂಬುದು ಅವರಿಗೆ ಖಚಿತವಾಯಿತು. ಶಿ‌ಷ್ಯರಿಗೆ ನಿಲ್ದಾಣದಲ್ಲಿಯೇ ಜಮಖಾನವನ್ನು ಹಾಸುವಂತೆ ಹೇಳಿದರು. ಅದರ ಮೇಲೆ ಕುಳಿತು ಮೊದಲು ನಮಾಜು ಮಾಡಿದರು. ಅನಂತರ ತಂಬೂರಿಗಳನ್ನು ಶ್ರುತಿ ಮಾಡಿ ದರ್ಬಾರಿ ಕಾನಡಾ ರಾಗದಲ್ಲಿ ’ಕರೀಮ ರಹೀಮ ಹಕೀಮ ಪಾರ ಪರವರದಿಗಾರ’ ಎಂದು ತಮ್ಮ ಅಂತಿಮ ಪ್ರಾರ್ಥನೆಯನ್ನು ಸಲ್ಲಿಸಿ ಕಣ್ಣು ಮುಚ್ಚಿದವರು ಮತ್ತೆ ಕಣ್ಣು ತೆರೆಯಲಿಲ್ಲ. ಖಾನರ ಜ್ಯೋತಿಯು ಭಗವಂತನಲ್ಲಿ ಐಕ್ಯವಾಗಿ ಹೋಯಿತು.

ಕರೀಂ ಖಾನರು ಭಾರತದ ಸಂಗೀತದ ಜಗತ್ತಿನಲ್ಲಿ ಅಪೂರ್ವ ಭಕ್ತಿ. ಸಂಗೀತವಾದ್ಯದ ಮೇಲೆ ಪ್ರಭುತ್ವ ಪಡೆದು ಅನಂತರ ಛಲದಿಂದ ಬಾಯಿ ಹಾಡುಗಾರಿಕೆಯನ್ನು ಅಭ್ಯಾಸ ಮಾಡಿ ಇಡೀ ಭಾರತದಲ್ಲಿ ಖ್ಯಾತಿ ಪಡೆದರು. ಅರ್ಹರಾದ ಶಿಷ್ಯರಿಗೆ ತಮ್ಮ ವಿದ್ವತ್ತು ಲಭ್ಯವಾಗಬೇಕೆಂದು ಶ್ರದ್ಧೆಯಿಂದ ಶ್ರಮಿಸಿದರು. ಹಿಂದೂ – ಮು‌ಸ್ಲಿಂ ಸ್ನೇಹದ ಪ್ರತೀಕವಾಗಿ ಬಾಳಿದರು.