(ಕ್ರಿ.ಶ. ೧೯೨೬) (ಪರಮಾಣುವಿನಲ್ಲಿ ಕ್ಷೀಣಬಲದ ಪಾತ್ರ)

ಪಾಕಿಸ್ತಾನೀ ವಿಜ್ಞಾನಿ ಅಬ್ದುರಸ್ ಸಲಾಮ್ ೧೯೨೬, ಜನವರಿ ೨೯ರಂದು ಪಂಜಾಬದ ರಾಜಧಾನಿ ಲಾಹೋರ್‌ಗೆ ೨೦೦ ಕಿ.ಮೀ. ದೂರದಲ್ಲಿರುವ ಝಾಂಗ್ ಎಂಬಲ್ಲಿ ಜನಿಸಿದರು. ಷವರು ತಮ್ಮ ಕಾಲೇಜು-ಪೂರ್ವ ಶಿಕ್ಷಯವನ್ನು ಲಾಹೋರಿನಲ್ಲಿ ಮುಗಿಸಿಕೊಂಡರು. ೧೯೪೬ರಲ್ಲಿ ಎಂ.ಎ. ಪದವಿ ಪಡೆದು ಹೆಚ್ಚಿನ ವ್ಯಾಸಂಗಕ್ಕಾಗಿ ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ಹೋದರು. ಮೊದಲು ಗಣಿತಶಾಸ್ತ್ರವನ್ನು ಆಯ್ದುಕೊಂಡಿದ್ದ ಅವರು ತರುವಾಯ ಭೌತಶಾಸ್ತ್ರವನ್ನು ಇಷ್ಟಪಟ್ಟರು. ಹೀಗೆ ತಮ್ಮ ವ್ಯಾಸಂಗದ ವಿಷಯವನ್ನು ಭೌತಶಾಸ್ತ್ರಕ್ಕೆ ಬದಲಾಯಿಸಕೊ,ಡು ೧೯೫೨ರಲ್ಲಿ ತಾತ್ವಿಕ ಭೌತವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದರು. ತರುವಾಯ ಲಂಡನ್ನಿನ ಇಂಪೀರಿಯಲ್ ಕಾಲೇಜ ಆಫ್ ಸಯನ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಅವರ ವೃತ್ತಿ ಆರಂಭವಾಯಿತು.

ಪರಮಾಣು ಬೀಜದಲ್ಲಿ ಪ್ರೋಟಾನುಗಳು ಮತ್ತು ನ್ಯೂಟ್ರಾನುಗಳನ್ನು ಬಂಧಿಸಿರುವ ತೀಕ್ಷ್ಣ ಬಲ (ಸ್ಟ್ರಾಂಗ್ ಇಂಟರ್ ಆಕ್ಷನ್) ಮತ್ತು ಕ್ಷೀಣ ಬಲ (ವೀಕ್ ಇಂಟರ್ ಆಕ್ಷನ್) ವಹಿಸುವ ಪಾತ್ರದ ಬಗ್ಗೆ ಅಬ್ದುಸ್ ಸಲಾಮ್ ವಿಶೇಷ ಸಂಶೋಧನೆ ಮಾಡಿದ್ದಾರೆ. ಕಿಣ ಬಲ ಮತ್ತು ವಿದ್ಯುತ್ಕಾಂತ ಬಲಗಳನ್ನು ಒಂದುಗೂಡಿಸಿದುದು ಅಬ್ದುಸ್ ಸಲಾಮ್ ಅವರ ಮಹತ್ವದ ಸಾಧನೆ. ಈ ಸಾಧನೆಯಲ್ಲಿ ಅವರಿಗೆ ವೈನ್‌ಬರ್ಗ್ ಮತ್ತು ಗ್ಲ್ಯಾಷೊ ಸಹಭಾಗಿಗಳು. ಅಂತಲೇ ನೊಬೆಲ್ ಪಾರಿತೋಷಕವನ್ನು ಮೂವರೂ ಹಂಚಿಕೊಂಡಿದ್ದಾರೆ. ಅಲ್ಲದೆ ಭಾರತೀಯ ಭೌತವಿಜ್ಞಾನಿ ಜೋಗೇಶ್ ಪತಿ ಅವರ ಜೊತೆಗೂಡಿ, ಸಂಶೋಧನೆ ನಡೆಸಿ ಕ್ಷೀಣ ಬಲ ಮತ್ತು ತೀಕ್ಷ್ಣ ಬಲಗಳೆರಡನ್ನೂ ಒಂದುಗೂಡಿಸುವುರಲ್ಲಿ ಅವರು ಸಫಲರಾಗಿದ್ದಾರೆ.