ನಾವಿಂದು ನಮ್ಮ ಭಾರತವು ಸ್ವತಂತ್ಯ್ರವಾದ ದೇಶ ಎಂದು ಹೆಮ್ಮೆ ಪಟ್ಟುಕೊಳ್ಳುತ್ತೇವೆ. ಹಾಗೆ ಅಭಿಮಾನ ಪಡುವುದು ಸಹಜವಾಗಿದೆ. ನಾವು ಸ್ವತಂತ್ರರೆಂದು ತಲೆಯೆತ್ತಿ ನಡೆಯುವಂತೆ ಮಾಡಿದ ಮಹಾಪುರುಷರು, ಮಹಿಳೆಯರು ಹಲವರಿದ್ದಾರೆ. ಅಂತಹ ಧೀರರ, ತ್ಯಾಗಶೀಲರ, ಮೊದಲ ಪಂಕ್ತಿಗೆ ಸೇರುತ್ತಾಳೆ – ನಾಲ್ಕು ನೂರು ವರ್ಷಗಳ ಹಿಂದೆ ಬಾಳಿದ ಉಳ್ಳಾಲದ ರಾಣಿ ಅಬ್ಬಕ್ಕ.

ವಿಜಯನಗರದ ಅರಸರ ಮತ್ತು ಇಕ್ಕೇರಿ ನಾಯಕರ ಮಾಂಡಲಿಕರಾಗಿ, ತುಳುನಾಡಿನ ಅನೇಕ ಮನೆತನಗಳವರು ಅಲ್ಲಲ್ಲಿಯ ಸೀಮೆಗಳನ್ನು ಆಳಿರುತ್ತಾರೆ. ಇವರಲ್ಲಿ ಬಂಗರು, ಚೌಟರು, ಅಜಿಲರು, ಭೈರರಸೊಡೆಯರು, ಸಾವಂತ, ಬಲ್ಲಾಳರು, ಮೂಲರು ಮುಖ್ಯರು.

ಕರ್ನಾಟಕದ ರಾಜ್ಯದ ಪಶ್ಚಿಮ ಕರಾವಳಿಯನ್ನು ತುಳುನಾಡು ಎಂದು ಕರೆಯುವುದು ರೂಢಿ. ಅಬ್ಬಕ್ಕ ರಾಣಿಯನ್ನು “ಅಭಯ ರಾಣ”, “ತುಳುನಾಡ ರಾಣಿ” ಎಂಬುದಾಗಿಯೂ ಚರಿತ್ರಕಾರರು ಕರೆದಿರುತ್ತಾರೆ. ಅಬ್ಬಕ್ಕದೇವಿ ಮೂಡುಬಿದಿರೆಯಲ್ಲಿ ತಿರುಮಲರಾಯರ ಸೋದರಸೊಸೆ. ಉಳ್ಳಾಲದಲ್ಲಿ ಅವರಿಗೆ ಇನ್ನೊಂದು ಅರಮನೆ ಇತ್ತು. ಚೌಟ ಮನೆತನಕ್ಕೆ ಸೇರಿದ ಇವರ ಮನೆ ಮಾತು ತುಳು.

ಮೂಡುಬಿದಿರೆಯ ಬಸದಿ ದೇವರು ಮತ್ತು ಉಳ್ಳಾಲದ ಸೋಮನಾಥ ದೇವರೆಂದರೆ ತಿರುಮಲರಾಯರಿಗೆ ತುಂಬಾ ಭಕ್ತಿ. ಚಿಕ್ಕಂದಿನಲ್ಲಿಯೇ ತಂದೆ – ತಾಯಿಯರನ್ನು ಕಳೆದುಕೊಂಡ ಅಬ್ಬಕ್ಕನನ್ನು ತಿರುಮಲರಾಯರೇ ಬೆಳಸಿದರು. ತನ್ನ ಓರೆಗೆಯ ಗಂಡು ಮಕ್ಕಳೊಂದಿಗೆ ಅವರಂತೆ ಅಬ್ಬಕ್ಕ ಓಡಾಡುತ್ತಿದ್ದಳು. ಜಗಳವಾಡಿ ಸೋಲಿಸುತ್ತಿದ್ದಳು. ತಿರುಮಲರಾಯರೇ ಅವಳಿಗೆ ಯುದ್ಧ ವಿದ್ಯೆಗಳನ್ನು ಹೇಳಿಕೊಟ್ಟರು. ಸೋಮನಾಥನ ಮೇಲೆ ಭಕ್ತಿಯನ್ನೂ ಪ್ರಜೆಗಳ ಮೇಲೆ ಪ್ರೀತಿ, ವಿಶ್ವಾಸವನ್ನೂ ಬೆಳೆಸಿದರು. ಅಬ್ಬಕ್ಕ ಗುರುಗಳ ಮೂಲಕ ಶಾಸ್ತ್ರಗಳನ್ನು ಅಭ್ಯಾಸ ಮಾಡಿದಳು. ಸಂಗೀತ, ಸಾಹಿತ್ಯ, ಕಲೆಗಳಲ್ಲಿಯೂ ಆಕೆಗೆ ವಿಶೇಷ ಅಭಿರುಚಿ ಇದ್ದಿತು.

ನಮ್ಮ ದೌರ್ಭಾಗ್ಯ

ಒಂದು ದಿನ ಗುರುಗಳ ಅಬ್ಬಕ್ಕನಿಗೆ ನಾಡಿನ ರಾಜಕೀಯವನ್ನು ಕುರಿತು ಹೇಳುತ್ತಿದ್ದರು. ಅಬ್ಬಕ್ಕ ಮನಸ್ಸಿಟ್ಟು ಕೇಳುತ್ತಿದ್ದಳು. ಅಲ್ಲಿಗೆ ತಿರುಮಲರಾಯರು ಬಂದರು.

“ಮಾವಾಜಿ! ನಮ್ಮ ಜನರಿಗೆ ಅಭಿಮಾನ, ಗೌರವಗಳು ಕಡಿಮೆ. ಅದೇ ನಮ್ಮ ರಾಜ್ಯಗಳ ಅವನತಿಗೆ ಕಾರಣವಲ್ಲವೇ?” ಎಂದು ಮಾವನನ್ನು ನೇರವಾಗಿ ಪ್ರಶ್ನಿಸಿದಳು.

“ಈಗ ಈ ಪ್ರಶ್ನೆ ಯಾಕೆ”?

“ಪರಕೀಯರಾದ ಪೋರ್ಚುಗೀಸರಿಗೆ ನಮ್ಮವರು ಕಪ್ಪ ಸಲ್ಲಿಸುತ್ತಿರುವುದು ನಾಚಿಕೆಗೆಟ್ಟ ಕೆಲಸ”.

“ಅವರು ನಮಗಿಂತ ಬಲಿಷ್ಠರಲ್ಲವೇನಮ್ಮ? ಅವರಿಗೆ ಸುಂಕ ಕೊಡದೆ ಬೇರೆ ದಾರಿ ಏನು?” ಎಂದು ತಿರುಮಲರಾಯ ಕಾರಣವನ್ನು ತಿಳಿಸಿದರು.

“ಅವರು ನಮಗಿಂತ ಹೇಗೆ ಬಲಿಷ್ಠರು? ನಮ್ಮ ಜನರಲ್ಲಿ ಒಗ್ಗಟ್ಟಿಲ್ಲ. ನಮ್ಮ ಜನರೇ ನಮ್ಮವರಿಗೆ ಹಗೆಗಳಾಗಿ ಹೊರಗಿನವರಿಗೆ ಸ್ನೇಹಿತರಾಗಿರುತ್ತಾರೆ. ಇದು ನಮ್ಮ ದೌರ್ಭಾಗ್ಯ.”

“ಅದಕ್ಕೆ ನೀನನ್ನುವುದೇನು?”

“ನಮ್ಮ ನಮ್ಮೊಳಗೆ ಕಲಹಗಳಿದ್ದರೆ ಇರಲಿ. ಹೊರಗಿನವರೊಂದಿಗೆ ಕಲಹ ಬಂದಾಗ ನಾವೆಲ್ಲರೂ ಒಳಜಗಳವನ್ನು ಬಿಟ್ಟು ಒಂದಾಗಬೇಕು”.

ಇಂತಹ ಆದರ್ಶಗಳನ್ನು ಅಬ್ಬಕ್ಕ ಚಿಕ್ಕಂದಿನಲ್ಲಿಯೇ ರೂಢಿಸಿಕೊಂಡಳು.

ಅಬ್ಬಕ್ಕದೇವಿ ಬೆಳೆದು ದೊಡ್ಡವಳಾದ ಮೇಲೆ ಅವಳನ್ನು ವಿವಾಹವಾಗುವುದಕ್ಕೆ ಹಲವು ಮಂದಿ ಯುವಕರು ಮುಂದೆ ಬಂದರು. ಹಾಗೆ ಬಂದವರಲ್ಲಿ ಮಂಗಳೂರಿನ ಕಾಮರಾಯನೂ ಒಬ್ಬ. ಇವರಲ್ಲಿ ಯಾರೊಬ್ಬರನ್ನೂ ಅಬ್ಬಕ್ಕದೇವಿಯು ಒಪ್ಪಿಕೊಳ್ಳಲಿಲ್ಲ.

ಉತ್ಸವದ ಕರೆಯೋಲೆ

ಮಂಗಳೂರಿನಲ್ಲಿ ಆಗ ವೀರನರಸಿಂಹ ಬಂಗರಾಜರು ಆಳುತ್ತಿದ್ದರು. ಯುವರಾಜ ಲಕ್ಷ್ಮಪ್ಪರಸ ಬಂಗರಾಜರ ದೇಶಾಭಿಮಾನ, ಪರಾಕ್ರಮಗಳ ಸುದ್ಧಿ ಮೂಡುಬಿದರೆಯಲ್ಲಿ ಜನಜನಿತವಾಗಿತ್ತು. ತಿರುಮಲರಾಯರು ಅಬ್ಬಕ್ಕ ನನ್ನು ಲಕ್ಷ್ಮಪ್ಪರಸ ಬಂಗರಾಜರಿಗೆ ಮದುವೆ ಮಾಡಿ ಕೊಡುವ ಯೋಚನೆ ಮಾಡಿದರು. ಆದರೆ ಹಾಗೆಂದು ನೇರವಾಗಿ ಕೇಳುವುದು ಕಷ್ಟವಾಯಿತು. ಮೂಡುಬಿದರೆಯ ದೊಡ್ಡ ಬಸದಿಯಲ್ಲಿ ಜರಗುವ ಉತ್ಸವಕ್ಕೆ ಬರುವಂತೆ ಮಂಗಳೂರಿನ ಮಹಾರಾಜರು ಆಮಂತ್ರಿಸಿದರು. ಯುವರಾಜ ಲಕ್ಷ್ಮಪ್ಪರಸ ಬಂಗಾರಾಜರನ್ನು ಕರೆತರುವಂತೆ ಪ್ರಾರ್ಥಿಸಿದ್ದರು.

ಮಹಾರಾಜ ವೀರನರಸಿಂಹ ಬಂಗರಾಜರು, “ಮೂಡುಬಿದರೆ ಜೈನರಿಗೆ ಪವಿತ್ರ ಸ್ಥಳ. ಅಲ್ಲಿನ ಅರಸರು ನಮ್ಮೊಂದಿಗೆ ಮೊದಲಿನಿಂದಲೂ ಸ್ನೇಹವಾಗಿದ್ದಾರೆ ಈಗ ಉತ್ಸವಕ್ಕೆ ಬರುವಂತೆ ಕರೆಕಳುಹಿಸಿದ್ದಾರೆ. ಏನು ಉತ್ತರ ಬರೆಸಲಿ?” ಮಂತ್ರಿಗಳನ್ನು ಪ್ರಶ್ನಿಸಿದರು.

“ಪ್ರಭುಗಳೇ, ಕುಟುಂಬ ಪರಿವಾರ ಸಮೇತರಾಗಿ ಬರುವಂತೆ ತಿಳಿಸಿರುತ್ತಾರೆ. ಆದುದರಿಂದ ಲಕ್ಷ್ಮಪ್ಪರಸ ಬಂಗಾರಾಜರನ್ನೂ ಕರೆದೊಯ್ಯುವುದು ಸೂಕ್ತ” ಮಂತ್ರಿಗಳು ತಿಳಿಸಿದರು.

“ಮಾವಾಜಿ ನೀವು ಹೋಗಿಬನ್ನಿ. ಅಷ್ಟರತನಕ ನಾನು ಇಲ್ಲಿಯ ಭದ್ರತೆ ನೋಡಿಕೊಂಡಿರುತ್ತೇನೆ” ಲಕ್ಷ್ಮಪ್ಪರಸ ಬಂಗರಾಜ ಹೇಳಿದ.

“ಯುವರಾಜರು ಯುವರಾಣಿಯೊಬ್ಬಳಿರುವಲ್ಲಿಗೆ ಹೋಗಿ ಬರುವುದಕ್ಕೆ ಸಂಕೋಚ ಪಟ್ಟುಕೊಳ್ಳುತ್ತಿದ್ದಾರೆ” ಎಂದು ಮಂತ್ರಿಗಳು ಮೃದುವಾಗಿ ಲಕ್ಷ್ಮಪ್ಪರಸನನ್ನು ಹಾಸ್ಯ ಮಾಡಿದರು.

“ಪ್ರಧಾನಿಗಳೇ, ನಿಮ್ಮ ಬುದ್ಧಿಯ ಸೂಕ್ಷ್ಮತೆ ಈಗ ತಿಳಿಯಿತು. ಲಕ್ಷ್ಮಪ್ಪರಸನನ್ನು ಅಗತ್ಯವಾಗಿ ಕರೆದುಕೊಂಡು ಹೋಗಬೇಕು. ಅವನಿಗೆ ಮದುವೆಯ ವಯಸ್ಸಾಯಿತು. ಸರಿಯಾದ ವಧುವನ್ನು ತಂದುಕೊಳ್ಳಬೇಕೆಂದು ಬಹುದಿನಗಳಿಂದ ಪ್ರಯತ್ನಿಸಿದೆ. ಆದರೆ ಒಂದೂ ಸರಿಕೊಡಿ ಬರಲಿಲ್ಲ. ಕೂಡಂಬದುದು ಅವನಿಗೆ ಒಪ್ಪಿಗೆಯಾಗಲಿಲ್ಲ” ಎಂದರು ಮಹಾರಾಜರು.

ಯುವರಾಜನೂ ಮಹಾರಾಜರೊಡನೆ ಹೋಗುವುದು ಎಂದು ತೀರ್ಮಾನವಾಯಿತು. ಮಹಾರಜರು ಯುವರಾಜ ಲಕ್ಷ್ಮಪ್ಪರಸ ಬಂಗಾರಾಜರನ್ನೂ ಮೂಡುಬಿದಿರೆಗೆ ಸಂಗಡ ಕರೆದುಕೊಂಡು ಹೋದರು.

ಸಾತ್ವಿಕ ತೇಜಸ್ಸಿನ ವೀರ

ಶೌರ್ಯ, ಪರಾಕ್ರಮಗಳಿದ್ದರೂ ಸೌಮ್ಯ ಪ್ರಕೃತಿಯ ಲಕ್ಷ್ಮಪ್ಪರಸ ಬಂಗರಾಜರ ಸ್ವಭಾವವು ತಿರುಮಲ ರಾಯರಿಗೆ ಒಪ್ಪಿಗೆಯಾಯಿತು.

ಮಂಗಳೂರಿನ ಬಂಗರಾಜರೆಂದರೆ ತುಳುನಾಡಿನಲ್ಲೆಲ್ಲ ದೊಡ್ಡವರು ಎಂದು ಗೌರವ ಪಡೆದವರು. ಅವರ ಮನೆಯ ಸೊಸೆಯಾಗುವುದು ಅಬ್ಬಕ್ಕನಿಗೂ ಇಷ್ಟ. ಯುವರಾಜನನ್ನು ಕಂಡ ನಂತರ ಅವಳೂ ಅವನ ಸಾತ್ವಿಕ ತೇಜಸ್ಸಿಗೆ ಮಾರುಹೋದಳು.

ಸಖಿ ಭಾಗೀರಥಿ ಯುವರಾಣಿಗೆ ಹೇಳಿದಳು: “ನೀವು ಯೋಚಿಸಿದಂತೆ ಯುವರಾಜರು ತುಂಬಾ ಸಾತ್ವಿಕರಾಗಿ ಕಾಣುತ್ತಾರೆ”.

“ಸಾತ್ವಿಕತನವು ಸತ್ವಹೀನತೆಯ ಲಕ್ಷಣವಲ್ಲ. ಅದು ಸೌಜನ್ಯದ ಪ್ರಕಾಶದಿಂದ ಕೂಡಿದ ಶಕ್ತಿಯ ಮಂದ ಪ್ರಕಾಶ”. – ಅಬ್ಬಕ್ಕ ಯುವರಾಜನಲ್ಲಿ ಗುರುತಿಸಿದ ಗುಣಗಳು.

“ಯುವರಾಣಿಯವರು ಪುರುಷರಿಗೆ ಸಮಾನರಾಗಿ ಪರಾಕ್ರಮಿಗಳಾಗಿರುವಾಗ ಅವರಿಗೆ ಅಡ್ಡಿ ಬರದಂತಹ ಪತಿಯನ್ನು ಆರಿಸಿಕೊಳ್ಳಬೇಡವೇ?”.

“ಪರಾಕ್ರಮಿ ಆದವನು ಮಾತ್ರ ನನ್ನ ಪತ್ನಿಯಲ್ಲಿರುವ ಪರಾಕ್ರಮವನ್ನು ಗುರುತಿಸಿ ಗೌರವಿಸಬಲ್ಲನು. ಉರಿಯುವ ಬೆಂಕಿಗೆ ಗಾಳಿ ಸೇರಿದರೆ ಅದು ಇನ್ನೂ ಪ್ರಕಾಶ ಬೀರುತ್ತದೆ. ಗಾಳಿ ಬೀಸದ ಸ್ಥಳದಲ್ಲಿ ಬೆಂಕಿಯೂ ಉರಿಯದು”. – ಅಬ್ಬಕ್ಕದೇವಿ ಎಂದಳು. ಲಕ್ಷ್ಮಪ್ಪರಸರಲ್ಲಿದ್ದ ಸರಳ ಸಾತ್ವಿಕ ಗುಣ ಅವಳ ಮನೆ ಸೆಳೆಯಿತು. ಲಕ್ಷ್ಮಪ್ಪನೂ ಅವಳಿಗೆ ಮನಸೋತರು.

ಮದುವೆಯಾಯಿತು

ಮೂಡುಬಿದಿರೆಯಿಂದ ಹಿಂತಿರುಗಿ ಬಂದ ಮೇಲೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನ ಮತ್ತು ಶರವು ಗಣಪತಿ ದೇವಸ್ಥಾನಗಳ ಜೀರ್ಣೋದ್ಧಾರ ಕೆಲಸ ಮುಗಿಸಿದರು. ವಿಶೇಷ ಉತ್ಸವ ಜರುಗಿಸಿ, ಊರ ಪರವೂರ ಬಂಧು ಮಿತ್ರರನ್ನು, ಅರಸು – ಅಧಿಕಾರಿಗಳನ್ನು ಬಂಗರಾಜರು ಆಮಂತ್ರಿಸಿದರು. ಮೂಡುಬಿದರೆಯಿಂದ ತಿರುಮಲ ರಾಯರು ಅಬ್ಬಕ್ಕದೇವಿ ಸಮೇತರಾಗಿ ಮಂಗಳೂರು ಬೀಡಿಗೆ ಬಂದು ಅತಿಥ್ಯ ಪಡೆದರು.

ಲಕ್ಷ್ಮಪ್ಪರಸ ಬಂಗರಾಜರ ವಿವಾಹ ಅಬ್ಬಕ್ಕದೇವಿಯೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಅಬ್ಬಕ್ಕದೇವಿ ಮಂಗಳೂರಿನ ಮಹಾರಾಣಿಯಾದಳು.

ಉಳ್ಳಾಲದ ರಾಣಿಯಾದುದು

೧೫೪೪ರಲ್ಲಿ ಅಬ್ಬಕ್ಕ ದೇವಿಗೆ ಉಳ್ಳಾಲದ ರಾಣಿಯಾಗಿ ಪಟ್ಟಾಭಿಷೇಕವಾಯಿತು. ಮಂಗಳೂರು ಮತ್ತು ಉಳ್ಳಾಲಗಳು ಹತ್ತಿರ – ಹತ್ತಿರವಿದ್ದುದರಿಂದ, ಅಬ್ಬಕ್ಕ ರಾಣಿ ಹೆಚ್ಚಾಗಿ ಮಂಗಳೂರಿನಲ್ಲಿಯೇ ಇರುತ್ತಿದ್ದಳು. ತನ್ನ ಗಂಡನಿಗೆ ಆಳ್ವಿಕೆಯಲ್ಲಿ ಬೇಕು – ಬೇಕಾದ ಸಲಹೆಗಳನ್ನು ಕೊಟ್ಟು ಸಹಾಯ ಮಾಢುತ್ತಿದ್ದಳು. ವೀರನರಸಿಂಹನ ಬಂಗರಾಜರು ಸ್ವರ್ಗಸ್ಥರಾದುದರಿಂದ ಅಳಿಯ ಕಾಮರಾಯನಿಗೆ ಯುವರಾಜ ಪಟ್ಟ ಕಟ್ಟಿದರು.

ಕಾಮರಾಯನಿಗೆ ಕೆಟ್ಟ ಜನರ ಗೆಳೆತನವಿತ್ತು. ಅವನಿಗೆ ಅಬ್ಬಕ್ಕ ರಾಣಿಯ ಮೇಲೆ ದ್ವೇಷ ಹೆಚ್ಚಿತಲ್ಲದೆ ಕಡಿಮೆಯಾಗಲಿಲ್ಲ. ಹೇಗಾದರೂ ಮಾಡಿ ಆಕೆಯನ್ನು ಮಂಗಳೂರಿನಿಂದ ಹೊರಡಿಸಬೇಕೆಂದು ಯೋಚಿಸುತ್ತಿದ್ದ. ಮಂಗಳೂರಿನ ಸಿಂಹಾಸನವನ್ನೇರಬೇಕೆಂಬ ಆಸೆಯೂ ಇತ್ತು. ಹೊಟ್ಟೆಯಲ್ಲಿರುವ ಬಯಕೆಯನ್ನು ಈಡೇರಿಸಿಕೊಳ್ಳುವ ಶಕ್ತಿ ರಟ್ಟೆಯಲ್ಲಿರಲಿಲ್ಲ, ಅಷ್ಟೆ.

ದಿನಗಳು ಉರುಳಿದವು.ಅಬ್ಬಕ್ಕ ರಾಣಿಗೆ ಮೊದಲೊಂದು ಹೆಣ್ಣು ಮಗು ಜನಿಸಿತು. ಅದಕ್ಕೆ ತಿರುಮಲಾದೇವಿಯೆಂದು ಹೆಸರಿಟ್ಟರು. ಎರಡನೆಯದಾಗಿ ಒಂದು ಗಂಡು ಮಗು ಹುಟ್ಟಿತು. ಅದಕ್ಕೆ ಚಂದ್ರಶೇಖರ ದೊಡ್ಡರಾಯನೆಂದು ನಾಮಕರಣ ಮಾಡಿದರು. ಆ ಮಕ್ಕಳ ಆಟ – ಪಾಠಗಳ ಸಂತೋಷದಲ್ಲಿ ವರ್ಷಗಳು ಕಳೆದುದೇ ತಿಳಿಯಲಿಲ್ಲ. ತಿರುಮಲಾದೇವಿ ಮತ್ತು ಚಂದ್ರಶೇಖರರಿಗೆ ಯುದ್ಧವಿದ್ಯೆಯನ್ನು ಆಟದ ಜೊತೆಯಾಗಿಯೇ ಅಬ್ಬಕ್ಕ ರಾಣಿ ಕಲಿಸಿದಳು.

ಕಪ್ಪುಕಾಣಿಕೆ ರದ್ದಾಯಿತು

ಮಂಗಳೂರಿನ ಲಕ್ಷ್ಮಪ್ಪರಸ ಬಂಗರಾಜರ ಹಿರಿಯರಾದ ಎರಡನೇ ಕಾಮರಾಯ ಬಂಗರಾಜರ ಕಾಲದಲ್ಲಿ, ಅವರು ಪೋರ್ಚುಗೀಸರೊಂದಿಗೆ ಯುದ್ಧ ಮಾಡಬೇಕಾಗಿ ಬಂತು. ಅದರಲ್ಲವರು ಸೋತು ಪೋರ್ಚುಗೀಸರಿಗೆ ಕಪ್ಪು – ಕಾಣಿಕೆ ಕೊಡಲು ಒಪ್ಪಿದರು. ಅವರ ತರುವಾಯ ಪಟ್ಟಕ್ಕೆ ಬಂದವರೂ ಪೋರ್ಚುಗೀಸರಿಗೆ ಕಪ್ಪ – ಕಾಣಿಕೆ ಕೊಡುತ್ತಾ ಬಂದರು.

ಲಕ್ಷ್ಮಪ್ಪರಸ ಬಂಗರಾಜರು ಪಟ್ಟಕ್ಕೆ ಬಂದ ಮೇಲೆ, ಆ ರೀತಿ ಪೋರ್ಚುಗೀಸರಿಗೆ ಕಪ್ಪ ಕಾಣಿಕೆ ಕೊಡುವುದು ನ್ಯಾಯವಲ್ಲವೆಂದು ಮೇಲ್ಪಂಕ್ತಿಯನ್ನು ಅನುಸರಿಸಿ ಕಲ್ಲಿಕೋಟೆ, ಬೇಕಲ, ಕುಂಬಳೆ, ಬಸರೂರುಗಳವರೂ ಪೋರ್ಚುಗೀಸರಿಗೆ ಕೊಡುತ್ತಿದ್ದ ಕಪ್ಪವನ್ನು ಬಸರೂರುಗಳವರೂ ಪೋರ್ಚುಗೀಸರಿಗೆ ಕೊಡುತ್ತಿದ್ದ ಕಪ್ಪವನ್ನ ನಿಲ್ಲಿಸಿಬಿಟ್ಟರು. ಇದರಿಂದ ಮಂಗಳೂರಿನ ರಾಜ್ಯ ಶಕ್ತಿ ಹೆಚ್ಚಾಯಿತು. ನೆರೆ – ಹೊರೆಯ ಸಾಮಂತರು, ಬಲ್ಲಾಳರು ಮಂಗಳೂರಿನ ಸ್ನೇಹಿತರಾದರು.

ಅಳಿಯ ಕಾಮರಾಯ ತನ್ನ ಕಾರ್ಯಸಾಧನೆಗಾಗಿ ಸಮಯ ಕಾಯುತ್ತಿದ್ದ.

ಪೋರ್ಚುಗೀಸರ ಓಲೆ ಬಂತು

ಮಂಗಳೂರಿನವರು ಕಪ್ಪ ಕೊಡದೆ ಇದ್ದುದರಿಂದ ಪೋರ್ಚುಗೀಸರಿಗೆ ಸಿಟ್ಟು ಬಂತು. ಗೋವೆಯಲ್ಲಿದ್ದ ಅವರ ಗವರ್ನರನು ಮಂಗಳೂರಿಗೆ ಒಂದು ಪತ್ರವನ್ನು ತನ್ನ ಪ್ರತಿನಿಧೀಯ ಮೂಲಕ ಕಳುಹಿಸಿದನು. ಮಂಗಳೂರಿನವರು ಕಪ್ಪ – ಕಾಣೀಕೆ ಕೊಟ್ಟುಕೊಂಡು ಬರಬೇಕು, ಇಲ್ಲವಾದರೆ ಮಂಗಳೂರನ್ನು ಸುಟ್ಟು ಬೂದಿ ಮಾಡುವುದಾಗಿ ಬೆದರಿಕೆ ಹಾಕಿದ್ದನು.

ಮಂಗಳೂರಿನಲ್ಲಿ ಸಭೆ ಸೇರಿತು. ಪೋರ್ಚುಗೀಸರಿಂದ ಬಂದ ಓಲೆಯನ್ನು ಮಂತ್ರಿಗಳು ಸಭೆಯ ಮುಂದೆ ಓದಿದರು.

ಪೋರ್ಚುಗೀಸರಿಗೆ ಕಪ್ಪ – ಕಾಣಿಕೆ ಕೊಡಬಾರದು. ನಾಡನ್ನು ನಾಡಿನ ಜನರನ್ನು ದಾಸ್ಯಕ್ಕೆ ಒಡ್ಡುವುದು ಸರಿಯಲ್ಲ. ನಾಡಿಗಾಗಿ ಹೋರಾಡಿ ಮಡಿದರೆ, ಅದೇ ಸ್ವರ್ಗ. ದಾಸ್ಯದ ಬದುಕೇ ನರಕ” ಎಂದು ಅಬ್ಬಕ್ಕ ರಾಣಿ ಪ್ರಜೆಗಳನ್ನು ಹುರಿದುಂಬಿಸಿದಳು.

ಆದರೆ ಕಾಮರಾಯನೂ ಆತನ ಬೆಂಬಲಿಗರೂ ಅವಳ ಮಾತನ್ನು ವಿರೋಧಿಸಿದರು. ಪೋರ್ಚುಗೀಸರ ವಿರುದ್ಧ ತಮ್ಮ ರಾಜ್ಯ ನಿಲ್ಲಲಾರದು. ಪೋರ್ಚುಗೀಸರೊಡನೆ ಹಗೆತನ ಬೆಳಸಿದರೆ ತಮಗೆ ವಿಪತ್ತೇ ಕಟ್ಟಿಟ್ಟದ್ದು ಎಂದು ವಾದಿಸಿದರು.

ಕೊನೆಗೆ ಪೋರ್ಚುಗೀಸರಿಗೆ ಕಪ್ಪ – ಕಾಣಿಕೆ ಕೊಡುವುದೆಂಬ ನಿರ್ಣಯಕ್ಕೆ ರಾಜಮುದ್ರೆಯಾಯಿತು.

ಸಿಂಹದ ಮರಿಗಳು

ಸ್ವಾಭಿಮಾನಿಯಾದ ಅಬ್ಬಕ್ಕದೇವಿಗೆ ಅದನ್ನು ಸಹಿಸುವುದಕ್ಕಾಗಲಿಲ್ಲ. ದಾಸ್ಯದ ಜೀವನದಲ್ಲಿ ತಾನಿರಲಾರನೆಂದು ಮಂಗಳೂರನ್ನು ಬಿಡುವ ನಿರ್ಧಾರವನ್ನು ಕೈಗೊಂಡಳು. ಉಳ್ಳಾಲವನ್ನಾದರೂ ಪೋರ್ಚುಗೀಸರ ದಾಸ್ಯದಿಂದ ರಕ್ಷಿಸಬೇಕೆಂಬುದಾಗಿ ನಿರ್ಣಯಿಸಿಕೊಂಡಳು. ಅವಳೊಂದಿಗೆ ಅವಳ ಇಬ್ಬರು ಮಕ್ಕಳು ಹೊರಟು ನಿಂತರು. ತಂದೆಯ ಕಾಲು ಮುಟ್ಟಿ ಆಶೀರ್ವಾದ ಬೇಡಿದರು. ಬಂಗರಾಜರಿಗೆ ಗಂಟಲು ಕಟ್ಟಿ ಬಂತು.

“ತುಳುನಾಡಿನ ಅಭಿಮಾನದಿಂದ ನಾನು ಅನೇಕ ಬಾಂಧವ್ಯಗಳನ್ನು ಕಡಿದುಕೊಂಡು ಉಳ್ಳಾಲಕ್ಕೆ ಹೋಗುತ್ತಿದ್ದೇನೆ. ನನ್ನನ್ನು ಕ್ಷಮಿಸಿ” ಎಂದು ಗಂಡನ ಪಾದಕ್ಕೆ ಅಬ್ಬಕ್ಕ ವಂದಿಸಿದಳು.

“ನೀನು ನನ್ನ ಪತ್ನಿಯಾದರೂ ಉಳ್ಳಾಲದ ಮಹಾರಾಣಿ. ನಾನು ನಿನ್ನ ಪತಿಯಾದರೂ ಮಂಗಳೂರಿನ ಮಹಾರಾಜ. ರಾಜ್ಯಗಳ ಕರ್ತವ್ಯಗಳಿವೆ. ನಮ್ಮ – ನಮ್ಮ ಹೊಣೆಗಾರಿಕೆಗಳನ್ನು ನಾವು ಪೂರೈಸಬೇಕು” ಮಹಾರಾಜರೆಂದರು.

“ಆ ಕರ್ತವ್ಯದ ಹೊರೆ ಹೊತ್ತೇ ನಾನು ಉಳ್ಳಾಲಕ್ಕೆ ಹೋಗುತ್ತಿದ್ದೇನೆ”.

ನಿನ್ನನ್ನು ಮತ್ತು ಮಕ್ಕಳನ್ನು ನಾನು ಪುನಃ ಕಾಣುವುದು ಯಾವಾಗ?”

“ಎಂದು ಮಂಗಳೂರು ಸ್ವತಂತ್ರವೆಂದು ಸ್ವಾಭಿಮಾನದಿಂದ ತಲೆಯೆತ್ತಿ ನಿಲ್ಲುವುದೋ ಅಂದು ನಿಮ್ಮನ್ನು ಕಾಣಲು ಮಕ್ಕಳೊಂದಿಗೆ ನಾನೇ ಬರುತ್ತೇನೆ” ಎಂದು ಅಬ್ಬಕ್ಕ ರಾಣಿ ಮಂಗಳೂರಿನ ಬೀಡಿನ ಮೆಟ್ಟಿಲಿಳಿದು ಉಳ್ಳಾಲಕ್ಕೆ ಹೊರಟೇ ಹೋದಳು.

ಮಹಾರಾಜರ ಕಣ್ಣುಗಳು ನೀರಿನಿಂದ ಮಂಜಾದವು. ಹೆಂಡತಿ – ಮಕ್ಕಳು ಹೊರಟು ಹೋದ ನಂತರವೂ ಮಹಾರಾಜರಿಗೆ ಅದೇ ಕೊರಗು.

 

ಎಂದು ಮಂಗಳೂರು ಸ್ವತಂತ್ರವೆಂದು ತಲೆಯೆತ್ತಿ ನಿಲ್ಲುವುದೋ ಅಂದು ಬರುತ್ತೇನೆ"

ಉಳ್ಳಾಲಕ್ಕೂ ವಿಪತ್ತು

 

ಪೋರ್ಚುಗೀಸ್ ನಾವಿಕರು ಮೀನು ಹಿಡಿಯಲು ಹೋದ ಮೋಗವೀರರಿಗೆ ಕಿರುಕುಳ ಕೊಡುತ್ತಿದ್ದರು. ವ್ಯಾಪಾರ ವ್ಯವಹಾರಕ್ಕೆ ಹೋದ ಜನರ ಸಾಮಾನು, ಸರಂಜಾಮುಗಳನ್ನು ಕೊಳ್ಳೆ ಹೊಡೆಯುತ್ತಿದ್ದರು. ಈ ವಿಚಾರವನ್ನು ತಿಳಿಸಿ “ಇದನ್ನು ತಪ್ಪಿಸಬೇಕು” ಎಂದು ಗೋವೆಯ ಪೋರ್ಚುಗೀಸ್ ಗವರ್ನರನಿಗೆ ಅಬ್ಬಕ್ಕ ರಾಣಿ ಓಲೆ ಬರೆಸಿದಳು.

ಗವರ್ನರ್ ಉತ್ತರ ಬರೆದ. “ಅರಬ್ಬೀ ಸಮುದ್ರದ ಮೀನು ಹಿಡಿಯಬೇಕಾಗಿದ್ದರೆ, ಸಮುದ್ರ ಮಾರ್ಗವಾಗಿ ವ್ಯಾಪಾರ ಮಾಡಬೇಕಾಗಿದ್ದರೆ ನಮ್ಮ ಅನುಮತಿ ಪಡೆದುಕೊಳ್ಳಬೇಕು. ನೀವು ನಮ್ಮ ಸರ್ಕಾರದ ಆಜ್ಞೆಯನ್ನು ಉಲ್ಲಂಘಿಸಿ ನಡೆದಿದ್ದೀರಿ. ಇದಕ್ಕಾಗಿ ನಾವು ವಿಧಿಸುವ ದಂಡವನ್ನು ನೀವು ಕೊಡಬೇಕಾಗುವುದು” ಎಂಬುದಾಗಿ ಆಜ್ಞಾಪಿಸಿದ.

ಪೋರ್ಚುಗೀಸರ ನೌಕೆಗಳು ಉಳ್ಳಾಲದ ಕರಾವಳಿಗೆ ಬರುತ್ತಿರುವುದನ್ನು ದೂತ ರಾಮಯ್ಯನು ತಿಳಿಸಿದನು.

ಸೋಮನಾಥ ದೇವಾಲಯದ ಒಳಗೋಪುರದಲ್ಲಿ ಊರ ಪ್ರಮುಖರು ಸೇರಿ ಮಂತ್ರಾಲೋಚನೆ ನಡೆಸಿದರು.

“ಕಪ್ಪ ಕಳುಹಿಸಿ ಕೊಡುತ್ತೇವೆ. ಮೂರು ದಿವಸಗಳ ಅವಧಿ ಕೊಡಬೇಕು” ಎಂದು ಹೇಳಿಕಳುಹಿಸಿದರು. ಪೋರ್ಚುಗೀಸ್ ವೈಸರಾಯ್ ಮತ್ತು ಸೇನಾಪತಿಗೆ ಸಂತೋಷವಾಯಿತು. “ಅಬ್ಬಕ್ಕ ಈಗ ಸಾಧುವಾಗಿದ್ದಾಳೆ” ಎಂಬುದಾಗಿ ಕಾಮರಾಯ ತಿಳಿದುಕೊಂಡನು.

ಪೋರ್ಚುಗೀಸರ ತೇಜೋವಧೆ

ಈ ಕಡೆ ಪೋರ್ಚುಗೀಸರ ನೌಕೆಗಳಿಗೆ ಮುತ್ತಿಗೆ ಹಾಕುವ ಏರ್ಪಾಡಾಯಿತು. ಸೈನಿಕರೆಲ್ಲರು ಮೈ ಮೊರೆಗಳಿಗೆ ಮಸಿ ಬಳಿದುಕೊಂಡರು ಚಿಕ್ಕಪುಟ್ಟ ದೋಣಿಗಳಲ್ಲಿ ಎಣ್ಣೆ ಅದ್ದಿದ ದೊಂದಿಗಳು, ತೆಂಗಿನ ಸೋಗೆಯ ಸೂಟೆಗಳು ಸಂಗ್ರಹವಾದವು. ಕತ್ತಲಲ್ಲಿ ದೋಣಿಗಳೆಲ್ಲ ಹಡಗುಗಳ ಸಮೀಪಕ್ಕೆ ಬಂದು ಸೇರಿದವು. ತಿಮ್ಮಣ್ಣ ನಾಯಕನ ನಾಯಕತ್ವದಲ್ಲಿ ಮೊಗವೀರರ, ಬಿಲ್ಲವರ, ಬಂಡರ ಸೈನ್ಯಗಳು ಹಡಗುಗಳನ್ನು ಸುತ್ತುವರಿದು ಒಳನುಗ್ಗಿದವು.

ಕಾಮರಾಯ ಪೋರ್ಚುಗೀಸ್ ಪ್ರತಿನಿಧಿಯೊಡನೆ ಕುಡಿದು ನೃತ್ಯ, ಸಂಗೀತಗಳ ಮನೋರಂಜನೆಯಲ್ಲಿ ಮೈಮರೆತಿದ್ದನು.

ಕಾಮರಾಯನ ಹೆಗಲ ಮೇಲೆ ಕೈಹಾಕಿಕೊಂಡು, “ಸೊಕ್ಕಿನ ಹಕ್ಕಿ ಅಬ್ಬಕ್ಕ ರಾಣಿಯ ರೆಕ್ಕೆ ಪುಕ್ಕಗಳನ್ನು ಕಿತ್ತು ಅವಳ ಹಾರಾಟವನ್ನು ನಿಲ್ಲಿಸುತ್ತೇವೆ” ಎಂದು ಪೋರ್ಚುಗೀಸ್ ವೈಸ್ ರಾಯ್ ಹೇಳುತ್ತಿದ್ದ.

“ಅವಳಿಗೆ ಹಾಗೇ ಆಗಬೇಕು. ಆ ಜಂಬದ ಕೋಲಿಯ ಗರ್ವ ಇಳಿಯಬೇಕು. ನಾನು ಮಂಗಳೂರು ಮತ್ತು ಉಳ್ಳಾಲಗಳಿಗೆ ರಾಜನಾಗಬೇಕು” ಎಂದು ಕಾಮರಾಯ ದನಿಗೂಡಿಸುತ್ತಿದ್ದ. ಅಮಲಿನಲ್ಲಿ ಆಡುತ್ತಿದ್ದ ಮಾತುಗಳು ಮುಗಿದಿರಲಿಲ್ಲ.

ಉಳ್ಳಾಲದ ಸೈನಿಕರು ದೊಂದಿಗಳಿಗೆ ಬೆಂಕಿ ಕೊಟ್ಟು ಹಡಗುಗಳಿಗೆ ಎಸೆಯತೊಡಗಿದರು. ಬಾಣಗಳು ಸುಯ್ ಗುಟ್ಟುತ್ತ ಎಲ್ಲಿಂದಲೋ ಬಂದು ತಾಗುತ್ತಿದ್ದವು. ಗಾಬರಿಗೊಂಡ ಪೋರ್ಚುಗೀಸ್ ನಾವಿಕರು ಕಂಡ – ಕಂಡ ಕಡೆಗೆ ಕುರುಡರಂತೆ ಗುಂಡು ಹಾರಿಸುತ್ತಿದ್ದರು. ಅಬ್ಬಕ್ಕ ರಾಣಿ ಗಂಡುಡುಗೆಯಲ್ಲಿ ಮಿಂಚಿನ ವೇಗದಲ್ಲಿ ಸಂಚರಿಸಿ ಸೈನಿಕರಿಗೆ ನಿರ್ದೇಶನ ಕೊಡುತ್ತಿದ್ದಳು.

ಇಷ್ಟಾಗುವಾಗ ಪೋರ್ಚುಗೀಸ್ ನಾವಿಕರು ಜೀವದಾಸೆಯಿಂದ ಓಡತೊಡಗಿದರು. ಅಷ್ಟರಲ್ಲಿ ಅವರ ನಾಲ್ಕು ನೌಕೆಗಳಲ್ಲಿ ಎರಡು ಸಂಪೂರ್ಣ ಸುಟ್ಟುಹೋಗಿದ್ದವು. ತಮಗೆ ಎದುರಿಲ್ಲವೆಂದು ಮೆರೆಯುತ್ತಿದ್ದ ಪೋರ್ಚುಗೀಸರಿಗೆ ಉಳ್ಳಾಲದ ತುಳುವ ಸೇನೆ ಸರಿಯಾದ ಬುದ್ಧಿ ಕಲಿಸಿತು. ಕಾಮರಾಯ ಮತ್ತು ಪೋರ್ಚುಗೀಸ್ ವೈಸರಾಯರು ಸೆರೆಸಿಕ್ಕಿದರು.

ಹಾವಿಗೆ ಹಾಲೆರೆದರು

ಸೆರೆ ಸಿಕ್ಕಿಬಿದ್ದ ಕಾಮರಾಯನನ್ನು ಮತ್ತು ವೈಸರಾಯ್ ರನ್ನು ಬಿಡುಗಡೆ ಮಾಡುವಂತೆ ಗೋವೆಯ ಗವರ್ನರರು ಕೇಳಿಕೊಂಡಿದ್ದರು.

 

ಅಬ್ಬಕ್ಕ ರಾಣಿ ರಣಚಂಡಿಯಂತೆ ಹೋರಾಡಿದಳು

“ಇನ್ನು ಮುಂದೆ ನಾವು ಉಳ್ಳಾಲದವರಿಂದ ಕಪ್ಪ-ಕಾಣಿಕೆ ಕೇಳುವುದಿಲ್ಲ. ನಮ್ಮ ನೌಕೆಗಳು ನಿಮ್ಮ ಕರಾವಳಿಗೆ ಇನ್ನು ಮುಂದೆ ಬರದಂತೆ ನೋಡಿಕೊಳ್ಳುತ್ತೇವೆ”. ಎಂದು ತಿಳಿಸಿದ್ದರು.

“ವೈಸರಾಯರೇ! ಈಗಲಾದರೂ ತಿಳಿಯಿತೇ ನಿಮಗೆ ಭಾರತದ ಜನರಲ್ಲಿಯೂ ಕೆಚ್ಚು ಇದೆ ಎಂದು? ನೀವೀಗ ನಮ್ಮ ಖೈದಿಗಳಾಗಿದ್ದೀರಿ. ನಿಮ್ಮನ್ನು ಏನು ಬೇಕಾದರೂ ಮಾಡಬಹುದು. ನಿಮ್ಮ ಗವರ್ನರರ ಬೇಡಿಕೆಯಂತೆ ನಿಮ್ಮನ್ನು ಬಿಡುಗಡೆ ಮಾಡುತ್ತೇವೆ”.

“ಕಾಮರಾಯ ಮಂಗಳೂರಿನ ಯುವರಾಜ. ಅವನು ನಮ್ಮ ಅಳಿಯ. ಅವನನ್ನು ಅಷ್ಟು ಸುಲಭದಲ್ಲಿ ಬಿಡುವುದಕ್ಕಾಗುವುದಿಲ್ಲ. ಅವನು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು”.

“ಕ್ಷಮೆ ಕೇಳದಿದ್ದರೆ?” ಎಂದು ದಿಟ್ಟತನದಿಂದ ಪ್ರಶ್ನಿಸಿದ ಕಾಮರಾಯ.

“ದೇಶದ್ರೋಹಿಗಳಿಗಾಗುವ ಗಲ್ಲಿನ ಶಿಕ್ಷೆ ನಿಮಗೂ ಆಗುತ್ತದೆ” ಪ್ರಧಾನಮಂತ್ರಿ ನಾರ್ಣಪ್ಪಯ್ಯ ಹೇಳಿದರು.

“ಹುಟ್ಟಿದ ಪ್ರತಿಯೊಬ್ಬನೂ ಸಾಯಬೇಕೆನ್ನುವಾಗ, ನಾನದಕ್ಕೆ ಹೆದರುವುದಿಲ್ಲ. ಒಬ್ಬ ಹೆಂಗಸಿನಲ್ಲಿ ಕ್ಷಮೆ ಕೇಳಿ ಈ ಕಾಮರಾಯ ಬದುಕಬೇಕಾಗಿಲ್ಲ”.

“ನೀನು ತಿಳಿದುಕೊಂಡಿರುವುದು ತಪ್ಪು. ನಾನು ಹೆಂಗಸಾದರೂ ಉಳ್ಳಾಲದ ರಾಣಿ ಎಂಬುದನ್ನು ಮರೆಯಬೇಡ. ನಾನು ಅತ್ತೆ – ನೀನು ಅಳಿಯನಾದರೂ ಈಗ ನೀನು ಯುದ್ಧದಲ್ಲಿ ಬಂಧಿಸಲ್ಪಟ್ಟ ಸೆರೆಯಾಳು ಎಂಬುದು ನೆನಪಿರಲಿ”. ಎಂದು ಅಬ್ಬಕ್ಕ ರಾಣಿ ಎಚ್ಚರಿಸಿದಳು.

“ಮಹಾರಾಣಿ, ಕಾಮರಾಯ, ಕ್ಷಮಿಸಲಾರದ ತಪ್ಪು ಮಾಡಿದ್ದಾನೆ; ನಿಜ. ಹಾಗಿದ್ದರೂ ಇನ್ನಾದರೂ ಬುದ್ಧಿ ಕಲಿತು ಒಳ್ಳೆಯ ರೀತಿಯಲ್ಲಿ ಬಾಳುವುದಿದ್ದರೆ ಬಾಳಿಕೊಳ್ಳಲಿ. ಅವನಿಗೂ ಜೀವದಾನ ಮಾಡಿ ಬಿಟ್ಟುಬಿಡಿ” ಎಂದು ಹಿರಿಯರು ಸೂಚಿಸಿದರು.

“ಅವನು ಏನಿದ್ದರೂ ಹಾವು. ಹಾವಿಗೆ ಹಾಲೆರೆಯುವುದು ತಪ್ಪಾದೀತು” ಎಂದ ತಿಮ್ಮಣ್ಣನಾಯಕ.

ಈ ರೀತಿಯ ಭಿನ್ನಾಭಿಪ್ರಾಯಗಳಿದ್ದರೂ ಅಬ್ಬಕ್ಕ ರಣಿಯು ಕಾಮರಾಯನನ್ನೂ ಕ್ಷಮಿಸಿ ಬಿಟ್ಟುಬಿಟ್ಟಳು.

ಅಂತಹ ಬಿಡುಗಡೆಯಿಂದ ಕಾಮರಾಯನಿಗೆ ಮತ್ತಷ್ಟು ಅಪಮಾನವಾಯಿತು. ಸೇಡಿನ ಕಿಡಿ ಧಗಧಗನೆ ಉರಿಯಲಾರಂಭಿಸಿತು. ಪ್ರತೀಕಾರ ಮಾಡುವ ಯೋಚನೆಯಲ್ಲಿ ತಾನೇನು ಮಾಡುತ್ತಿರುವೆನೆಂಬುದೇ ಮರೆತುಹೋಯಿತು.

ಬಂಗರಾಜರ ಕೊಲೆ

ಕಾಮರಾಯನು ಪೋರ್ಚುಗೀಸರ ಕೈಗೊಂಬೆಯಾದನು. ಅವರು ಕೊಟ್ಟ ಸಮ್ಮಾನದ ಊಟವನ್ನು ಮಾಡಿ, ಕುಡಿದು ರಾಜ್ಯಾಡಳಿತದ ಗುಟ್ಟನ್ನೆಲ್ಲಾ ಅವರಿಗೆ ಹೇಳಿದನು. ಬಂಗಾಡಿಯ ಮೂಲರೆಂಬ ತುಂಡು ಪಾಳೆಯಗಾರರು ಮಂಗಳೂರಿನ ಗಡಿಯಲ್ಲಿ ಉಪದ್ರವ ಕೊಡುವಂತೆ ಪ್ರೇರೇಪಿಸಿದನು. ಅವರ ಮೇಲೆ ಯುದ್ಧ ಮಾಡುವುದಕ್ಕೆ ಲಕ್ಷ್ಮಪ್ಪರಸ ಬಂಗಾರಾಜರೇ ಹೊರಟರು. ಬಂಗಾಡಿಯ ಮೂಲರಿಗೆ ಪೋರ್ಚುಗೀಸರ ಸಹಾಯವೂ ಇತ್ತು. ಎದುರೆದುರು ನಿಂತು ಯುದ್ಧವಾಯಿತು.

ಮಂಗಳೂರಿನ ಸೈನಿಕರು ವೀರಾವೇಶದಿಂದ ಕಾದಾಡುತ್ತಿದ್ದರು. ಬಂಗಾರಾಜರು ಕಾಲ್ನಡಿಗೆಯಲ್ಲಿ ಮುಂದೊತ್ತಿಕೊಂಡು ಹೋಗಿ ಸೈನ್ಯದ ಮುಂಭಾಗದಲ್ಲಿದ್ದರು. ಅಷ್ಟರಲ್ಲಿ ಪೋರ್ಚುಗೀಸ್ ನಾವಿಕನೊಬ್ಬನು ಹಿಂಬದಿಯಿಂದ ಒಳನುಗ್ಗಿ ಬಂದು ಬಂಗಾರಾಜನನ್ನು ಇರಿದು ಓಡಿದನು.

ತಮ್ಮ ನಾಯಕನನ್ನು ಕಳಕೊಂಡರೂ ಮಂಗಳೂರಿನ ಸೈನ್ಯ ಹಿಮ್ಮಟ್ಟದೆ ಮುಂದುವರೆಯಿತು. ಬಂಗಾಡಿಯ ಸೈನ್ಯವನ್ನು ಹಿಂದೋಡಿಸಿತು.

ಸತ್ತ ಮಹಾರಾಜರ ಶವವನ್ನು ಸುಡುವ ಕೆಲಸ ಲಗುಬಗೆಯಿಂದ ನೆರವೇರಿತು. ಕಾಮರಾಯನು ಅಧಿಕಾರವನ್ನು ವಹಿಸಿಕೊಂಡು ಯಾರಿಗೂ ಅನುಮಾನ ಬರದಂತೆ ಎಲ್ಲವನ್ನೂ ಮಾಡಿಸಿದನು. ಮಹಾರಾಜರು ಕೊಲೆಯಾದ ವಿಚಾರವನ್ನು ಅಬ್ಬಕ್ಕ ರಾಣಿಗಾಗಲಿ ಅವರ ಮಕ್ಕಳಿಗಾಗಲಿ ತಿಳಿಸಲಿಲ್ಲ. ಸುದ್ದಿ ತಿಳಿಯುವಾಗ ಶವ ಸಂಸ್ಕಾರವೂ ಆಗಿತ್ತು.

ಕಾಮರಾಯನೇ ಪೋರ್ಚುಗೀಸ್ ನಾವಿಕನ ವೇಷದಲ್ಲಿ ಬಂದು, ಲಕ್ಷ್ಮಪ್ಪರಸ ಬಂಗರಾಜರ ಕೊಲೆ ಮಾಡಿರುತ್ತಾನೆಂದು ಜನರು ಮಾತಾಡಿಕೊಳ್ಳುತ್ತಿದ್ದರು. ಆದರೂ ಎದುರು ಹೇಳುವ ಧೈರ್ಯ ಯಾರಿಗೂ ಬರಲಿಲ್ಲ.

ಸುದ್ಧಿಯನ್ನು ಕೇಳಿ ಅಬ್ಬಕ್ಕನಿಗೆ ದುಃಖ ಒತ್ತಿರಿಸಿಕೊಂಡು ಬಂದಿತು. ಆದರೆ ಅವಳು ಅಧೀರಳಾಗಿ ಕುಳಿತುಕೊಳ್ಳಲಿಲ್ಲ. ಗಂಡ ತೀರಿದ ಮೇಲೆ ತನಗಿನ್ನೂ ಅಪಾಯಗಳು ಕಾದಿವೆ ಎಂದು ಅರ್ಥಮಾಡಿಕೊಂಡಳು.

“ನಾಡಿನ ಕೀರ್ತಿಗಾಗಿ ಹೋರಾಡಿ ಎಷ್ಟೋ ಮಂದಿ ವೀರರು ಮಡಿದಿರುತ್ತಾರೆ. ಅವರ ಪತ್ನಿಯರೆಲ್ಲರೂ ಮಾಂಗಲ್ಯವನ್ನು ಕಳೆದುಕೊಂಡಿರುತ್ತಾರೆ. ನಾನು ಈ ಸಂದರ್ಭದಲ್ಲಿ ಅಳುತ್ತ ಕುಳಿತರೆ ಅವರಿಗೆ ಧೈರ್ಯ ಹೇಳುವವರು ಯಾರು?”.

ಹೀಗೆ ಯೋಚಿಸಿಕೊಂಡು ಅಬ್ಬಕ್ಕ ರಾಣಿ ತನಗೆ ಒದಗಿ ಬಂದ ದುಃಖವನ್ನು ನುಂಗಿಕೊಂಡಳು. ಕೋಟೆಯನ್ನು ಬಲಪಡಿಸುವಂತೆ ಆಜ್ಞಾಪಿಸಿದಳು. ಸೈನಿಕರಿಗೆ ತಿಮ್ಮಣ್ಣನಾಯಕನ ನೇತೃತ್ವದಲ್ಲಿ ತರಬೇತಿ ಕೊಡಿಸಿದಳು. ಬರುವ ವಿಪತ್ತುಗಳನ್ನೆದುರಿಸಲು ಸಿದ್ಧಳಾದಳು.

ಮಳಿಗೆಗಳನ್ನು ಸುಟ್ಟರು

ಅಬ್ಬಕ್ಕ ರಾಣಿ ಪುರಜನ ಪ್ರಮುಖರ ಸಭೆ ಕರೆದಳು.

“ನಗರದ ಪ್ರಮುಖರೇ, ಅಧಿಕಾರಿಗಳೇ, ಪೋರ್ಚುಗೀಸರ ಕೋಟೆಗಳು ಮಂಗಳೂರಿನಲ್ಲಿ ಭದ್ರವಾಗುತ್ತಿವೆ. ಅವರ ವ್ಯಾಪಾರದ ಮಳಿಗೆಗಳು ಹೆಚ್ಚುತ್ತಿವೆ. ಹೀಗೆ ಅವರನ್ನು ಬಿಟ್ಟರೆ ಉಳ್ಳಾಲದಲ್ಲಿ ನಾವು ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲ. ನಾವೀಗ ನಮ್ಮ ಮಿತ್ರರನ್ನು ಹೆಚ್ಚಿಸಿಕೊಳ್ಳಬೇಕು” ಎಂದು ಹೇಳಿದಳು.

“ಮಹಾರಾಣಿ, ತಮ್ಮ ಸೂಚನೆ ಸರಿಯಾದುದು. ಕಲ್ಲಿಕೋಟೆಯ ಜಾಮೋರಿನ ರಾಜನು ಪೋರ್ಚುಗೀಸರ ಬದ್ಧವೈರಿ/ ಅವರ ಸಹಾಯವನ್ನು ನಾವು ಪಡೆಯಬಹುದು. ಕುಂಬಳೆ, ಮಂಜೇಶ್ವರ, ಭಟ್ಕಳ, ಬಸರೂರುಗಳವರಿಂದಲೂ ಪ್ರಯತ್ನಪಟ್ಟರೆ ಸಹಾಯ ಸಿಗಬಹುದು” ಎಂದು ನಾರ್ಣಪ್ಪಯ್ಯ ತಿಳಿಸಿದರು.

“ಜಾಮೋರಿನನ ನೌಕಾ ಸೇನಾಪತಿ ಕುಟ್ಟಪೋಕರೆಗೆ ಪೋರ್ಚುಗೀಸರ ಮೇಲೆ ಸೇಡಿದೆ. ತಮ್ಮ ಸ್ತ್ರೀಯರನ್ನು ಅವರು ಪೀಡಿಸುತ್ತಿದ್ದಾರೆಂಬುದಾಗಿ ಅವನು ಕುಡಿಯುತ್ತಿದ್ದಾನೆ” ಎಂದು ತಿಮ್ಮಣ್ಣನಾಯಕ ತಿಳಿಸಿದ.

ಅಬ್ಬಕ್ಕ ರಾಣಿಯಿಂದ ಪತ್ರವನ್ನು ಕಂಡು ಕುಟ್ಟಿಪೋಕರೆಗೆ ಸಂತೋಷವಾಯಿತು. ತಾನು ತನ್ನ ನೌಕಾಪಡೆಯೊಂದಿಗೆ ಬಂದು ಮಂಗಳೂರಿನಲ್ಲಿರುವ ಪೋರ್ಚುಗೀಸರ ಕೋಟೆ ಮತ್ತು ಮಳಿಗೆಗಳನ್ನು ಸುಟ್ಟು ಹಾಕುವುದಾಗಿ ತಿಳಿಸಿದ.

ಒಂದು ರಾತ್ರಿ ಕಲ್ಲಿಕೋಟೆಯ ಆರು ನೌಕೆಗಳು ಮಂಗಳೂರಿನ ಕರಾವಳಿ ಸೇರಿದವು. ಪೋರ್ಚುಗೀಸರ ಕೋಟೆಗಳನ್ನು, ಮಳಿಗೆಗಳನ್ನು ಸುಟ್ಟು ಪರಾರಿಯಾದವು. ಉಳ್ಳಾಲದ ಸೈನ್ಯವು ಅವರ ನೆರವಿಗಿತ್ತು.

ಬೆಟ್ಟದಂತಹ ಶೋಕ ಕವಿಯಿತು

“ಶತ್ರುಗಳನ್ನು ಸೋಲಿಸಿ ರಾಜ್ಯವನ್ನು ರಕ್ಷಿಸಿದೆ” ಎಂದು ಅಬ್ಬಕ್ಕ ಸಮಾಧಾನದ ಉಸಿರು ಬಿಡುವ ಹೊತ್ತಿಗೆ ಬೆಟ್ಟದಂತಹ ದುಃಖ ಅವಳನ್ನು ಕವಿಯಿತು.

ಚಂದ್ರಶೇಖರ ದೊಡ್ಡ ರಾಯನನ್ನು ಮತ್ತು ತಿರುಮಲಾದೇವಿಯನ್ನು ಅಬ್ಬಕ್ಕ ರಾಣಿಯು ತನ್ನ  ಆಪ್ತ ಸೇವಕಿ ಭಾಗೀರಥಿಯ ರಕ್ಷಣೆಗೆ ಒಪ್ಪಿಸಿದಳು. ಒಂದು ದಿನ ಚಂದ್ರಶೇಖರ ಮತ್ತು ತಿರುಮಲಾದೇವಿ ಬಯಲಲ್ಲಿ ಆಟವಾಡುತ್ತಿದ್ದರು. ಕಾಮರಾಯನ ಸ್ನೇಹಿತ ಚಂದ್ರಯ್ಯ ಶೆಟ್ಟಿ ಎಂಬುವನು ಕಳ್ಳತನದಿಂದ ಬಂದು ಬಾಲಕ ಚಂದ್ರಶೇಖರನನ್ನು ಇರಿದು ಓಡಿದ. ಭಾಗೀರಥಿ ಒಡನೆ ಚಂದ್ರಯ್ಯ ಮೇಲೆ ಬಿದ್ದು ಅವನನ್ನು ಕೊಂದುಹಾಕಿದಳು. ಆದರೆ ಹುಡುಗ ಚಂದ್ರಶೇಖರ ಸತ್ತುಹೋದ.

ಮಹಾರಾಣಿ ಅಬ್ಬಕ್ಕದೇವಿ ಒಂದರ ಮೇಲೊಂದು ದುಃಖ ಪರಂಪರೆಯ ಬಂದೊದಗಿದವು. ರಾಜಕುಮಾರನ ಕೊಲೆಯಾದುದಕ್ಕೆ ದಾಸ, ದಾಸಿಯರು ಎಲ್ಲರೂ ಮರುಗಿದರು. ಅಧಿಕಾರಿಗಳು, ಸೇನಾಪತಿಗಳು ಅಸಹಾಯಕರಾಗಿ ಕೊರಗಿದರು. ಭಾಗೀರಥಿಯ ದುಃಖವನ್ನು ಹೇಳತೀರದು.

ತನ್ನನ್ನು ನಂಬಿ ರಾಣಿ ಮಕ್ಕಳನ್ನು ಒಪ್ಪಿಸಿದಳು; ರಾಣಿಯ ಮಗ ಸತ್ತುಹೋದ ಎಂದು ಅವಳಿಗೆ ತನ್ನ ವಿಷಯದಲ್ಲಿಯೇ ಕೋಪ ಬಂದಿತು, ದುಃಖವಾಯಿತು. ರಾಣಿಯೇ ಅವಳನ್ನು ಸಮಾಧಾನ ಮಾಡಿದಳು.

“ಭಾಗೀರಥಿ, ನೀನು ಅಳಬೇಡ. ಹುಟ್ಟಿದವನು ಸಾಯಲೇಬೇಕು. ನನ್ನ ಮಗನು ಬೆಳೆದು ದೊಡ್ಡವನಾಗಿ ಯುದ್ಧಭೂಮಿಯಲ್ಲಿ ಮಡಿದಿದ್ದರೆ ಚೆನ್ನಾಗಿತ್ತು. ಅವನ ತಂದೆಯನ್ನು ಮೋಸದಿಂದ ಕೊಂದವರು, ನನ್ನ ಹಸುಳೆಯನ್ನೂ ಚಿಗುರಿನಲ್ಲಿಯೇ ಚಿವುಟಿದರು. ಭಾಗೀ, ನೀನು ಅದಕ್ಕಾಗಿ ದುಃಖಿಸುತ್ತಾ ಕುಳಿತಿರಬೇಡ. ನಿನ್ನ ಮುಂದಿನ ಕರ್ತವ್ಯವನ್ನು ಯೋಚಿಸು. ತಿರುಮಲಾದೇವಿಯನ್ನು ಗುಪ್ತವಾದ ಸ್ಥಳಕ್ಕೆ ಕೊಂಡು ಹೋಗಿ ರಕ್ಷಿಸುವ ಕೆಲಸ ನಿನ್ನದು” ಎಂದು ಸಮಾಧಾನ ಹೇಳಿ, ಕರ್ತವ್ಯವನ್ನು ತಿಳಿಸಿದಳು.

ಅಬ್ಬಕ್ಕ ತಲೆ ಮರೆಸಿಕೊಂಡಳು

ಮತ್ತೆ ಯುದ್ಧಕ್ಕೆ ತಯಾರಿಯಾಗುತ್ತಿತ್ತು. ಕಲ್ಲಿಕೋಟೆಯಿಂದ ಸಹಾಯ ಸಿಕ್ಕುವ ಭರವಸೆಯಿತ್ತು. ಅರಬರೊಂದಿಗೆ ವ್ಯಾಪಾರ ಮಾಡಲು ಅಲ್ಲಿ ಪೋರ್ಚುಗೀಸರಿಂದ ತೊಂದರೆಯಾಗುತ್ತಿತ್ತು. ಅಬ್ಬಕ್ಕ ರಾಣಿಯ ಸಹಾಯವನ್ನು ಅವರೂ ಅಪೇಕ್ಷಿಸಿದರು. ಉಳ್ಳಾಲದಲ್ಲಿ ಯುದ್ಧವಾಗುವಾಗ ತಾನು ಸಹಾಯ ಮಾಡುವುದಾಗಿ ಕುಟ್ಟಿಪೋಕರೆ ಸೇನಾನಿಯು ಪತ್ರ ಬರೆದಿದ್ದನು. ಬೇಕಲ, ಬಸರೂರುಗಳಿಂದಲೂ ನೆರವು ಸಿಗುವಂತಿತ್ತು. ಅವೆಲ್ಲ ಬಂದು ಸೇರುವ ತನಕ, ಸ್ವಲ್ಪ ದೂರದ ತಲಪಾಡಿ ಕೋಟೆಯಲ್ಲಿ ಮರೆಯಾಗಿರುವುದು ಒಳ್ಳೆಯದೆಂದು ಮಂತ್ರಿಗಳು ಅಬ್ಬಕ್ಕ ರಾಣೀಗೆ ತಿಳಿಸಿದರು.

“ನನ್ನ ಮಕ್ಕಳಂತಿರುವ ಪ್ರಜೆಗಳನ್ನು ಅನಾಥರನ್ನಾಗಿ ಮಾಡಿ ನಾನು ತಲೆ ಮರೆಸಿಕೊಂಡಿರಲೇ? ಸಾಧ್ಯವಿಲ್ಲ. ಉಳಿದರೂ ಅಳಿದರೂ ನಿಮ್ಮೊಂದಿಗೆ ಇರುತ್ತೇನೆ” ಎಂದು ಹೇಳಿ ಎಲ್ಲಿಗೂ ಹೋಗದೆ ನಿಂತಳು.

“ತಾಯಿ ಈ ಸಂದರ್ಭದಲ್ಲಿ ನೀವು ಹಟ ಮಾಡಬಾರದು. ನಮ್ಮ ಮುಂದಿನ ಹೋರಾಟಕ್ಕಾಗಿ ನೀವು ಈಗ ತಲೆ ಮರೆಸಿಕೊಳ್ಳಬೇಕು. ನೀವು ಇದ್ದರೆ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ತಿಮ್ಮಣ್ಣ ನಾಯಕನು ಆಕೆಯನ್ನು ಒಪ್ಪಿಸಿದನು. ಯುವರಾಣಿ ತಿರುಮಲಾದೇವಿಯನ್ನು ಇನ್ನೊಂದೆಡೆಗೆ ಕಳುಹಿಸಿಕೊಟ್ಟರು.

ಮತ್ತೆ ಯುದ್ಧ ಪ್ರಾರಂಭವಾಯಿತು

ಅಬ್ಬಕ್ಕ ರಾಣಿಯನ್ನು ಬಂಧಿಸುವುದಕ್ಕಾಗಿ ಪೋರ್ಚುಗೀಸರ ಸೇನೆ ಉಳ್ಳಾಲಕ್ಕೆ ಮತ್ತೊಮ್ಮೆ ಮುತ್ತಿಗೆ ಹಾಕಿತು. ಕೋಟೆ ಸುಟ್ಟು ಬೂದಿಯಾಯಿತು. ಮೊಗವೀರರ ಪಡೆ ಹಿಮ್ಮಟ್ಟದೆ ಹೋರಾಡಿತು. ಆದರೆ ಪೋರ್ಚುಗೀಸರ ದೊಡ್ಡ ಸೈನ್ಯದ ಮುಂದೆ ಕೈ ಸಾಗಲಿಲ್ಲ. ಈ ಸುದ್ಧಿಯನ್ನು ಕೇಳಿದ ಅಬ್ಬಕ್ಕ ರಾಣಿ ಕತ್ತಿ ಹಿಡಿದು ಯುದ್ಧಭೂಮಿಗೆ ನುಗ್ಗಿದಳು. ತುಳುವರ ಸೈನ್ಯ ಹುರುಪುಗೊಂಡು ಮತ್ತೊಮ್ಮೆ ಭೀಕರವಾಗಿ ಹೋರಾಡಿತು.

ಅಬ್ಬಕ್ಕ ರಣಚಂಡಿಯಾದಳು

ಅಬ್ಬಕ್ಕ ರಾಣಿ ಭೈರವಿಯಂತೆ, ಮಹಾಕಾಳಿಯಂತೆ, ರಣಚಂಡಿಯಂತೆ ವೈರಿಗಳ ತಲೆಗಳನ್ನು ಕತ್ತಿರಿಸಿ ಹಾಕಿದಳು. ತನ್ನ ಸೈನಿಕರಿಗೆ ಧೈರ್ಯ ಹೇಳುತ್ತ ಮುಂದುವರಿದಳು. ರಣಭೂಮಿಯಲ್ಲಿ ಅಬ್ಬಕ್ಕ ಇಲ್ಲದ ಸ್ಥಳವೇ ಇಲ್ಲ ಎನ್ನುವಂತೆ ಮಿಂಚಿನಂತೆ ಸಾಗುತ್ತಿದ್ದಳು. ಅಪಾಯವನ್ನೂ ಲಕ್ಷಿಸದೆ ನುಗ್ಗುತ್ತಿದ್ದಳು.

ತಿಮ್ಮಣ್ಣನಾಯಕನು, “ಮಹಾರಾಣಿ, ನೀವು ಈಗ ಹಿಂದೆ ಸರಿಯದಿದ್ದರೆ ತೊಂದರೆಗೆ ಈಡಾಗುತ್ತೇವೆ. ಫಿರಂಗಿ ಗುಂಡುಗಳನ್ನು ನಮ್ಮೆಡೆಗೆ ಗುರಿಯಿಡುತ್ತಿದ್ದಾರೆ” ಎಂದು ಅಪಾಯವನ್ನು ಸೂಚಿಸಿ ಎಚ್ಚರಿಸಿದ.

“ನಾಯಕರೇ! ನನಗೆ ಜೀವದಾಸೆಯಿಲ್ಲ. ನನ್ನ ಸೌಭಾಗ್ಯ ಮುತ್ತೈದೆತನವನ್ನು ಕಳೆದುಕೊಂಡ ಮೇಲೆ ನಾನು ಯಾವ ಸುಖಕ್ಕಾಗಿ ಬಾಳಬೇಕು? ಮುದ್ದಿನ ಮಗನನ್ನು, ಪ್ರಜಾಜನರನ್ನು ಬಲಿಕೊಟ್ಟು ನಾನು ಬದುಕಿ ಉಳಿಯಲೇ? ಇಲ್ಲ. ರಕ್ತಕ್ಕೆ ರಕ್ತ, ದ್ರೋಹಿಗಳ ಸರ್ವನಾಶವೇ ನನ್ನ ಗುರಿ. ನಾಡಿನ ಮರ್ಯಾದೆಗಾಗಿ ಕೊನೆಯ ಉಸಿರಿರುವತನಕ ಹಿಂದಡಿಯಿಡಲಾರೆ” ಎಂದು ಅಬ್ಬಕ್ಕ ಮುಂದುವರಿಯುತ್ತಿದ್ದಳು.

ಅಷ್ಟರಲ್ಲಿ ಅವಳ ಎದೆಗೊಂದು ಗುಂಡು ನಾಟಿತು. ಕುಸಿದುಬಿದ್ದ ಮಹಾರಾಣಿಯನ್ನು ಅರಮನೆಗೆ ಸಾಗಿಸಿದರು. ಕ್ಷೀಣವಾದ ದನಿಯಲ್ಲಿ ಯುದ್ಧವನ್ನು ನಿಲ್ಲಿಸಬೇಡಿರೆಂದು ಹೇಳುತ್ತಲೇ ಇದ್ದಳು.

ಮಹಾರಾಣಿಯು ಅಂತಿಮ ಸಮಯವು ಸಮೀಪಿಸಿತೆಂದು ಬಂಧುಗಳು, ಅಧಿಕಾರಿಗಳು ಬಂದು ನೆರೆದರು.

“ಮಹಾಪ್ರಧಾನರೇ! ನನ್ನ ಸಮಯವು ಹತ್ತಿರ ಬಂತು. ಕೊನೆಯದಾಗಿ ನನ್ನ ಮಗಳನ್ನೊಮ್ಮೆ ನನಗೆ ತೋರಿಸಿರಿ” ಎಂದು ಅಬ್ಬಕ್ಕ ರಾನಿ ಯಾಚಿಸಿದಳು.

“ಯುವರಾಣಿಯನ್ನು ಈ ಅಪಾಯದ ಪರಿಸ್ಥಿತಿಯಲ್ಲಿ ತಾವು ನೋಡಲು ಬಯಸಬಾರದು. ಮುಂದಿನ ಹೋರಾಟಕ್ಕೆ ಯುವರಾಣಿಯ ರಕ್ಷಣೆಯು ಅಗತ್ಯ. ಸುತ್ತಮುತ್ತ ವೈರಿಗಳು ತುಂಬಿರುವಾಗ ಯುವರಾಣಿಯನ್ನು ಇಲ್ಲಿಗೆ ಕರೆತರಲಾರೆವು” ಎಂದು ಪ್ರಧಾನ ಮಂತ್ರಿ ನಾರ್ಣಪ್ಪಯ್ಯ ಬಿನ್ನವಿಸಿಕೊಂಡನು.

ಕೊನೆಯ ಬಯಕೆ

“ಮುತ್ತೈದೆಯಾಗಿ ಸಾಯುವ ಭಾಗ್ಯ ನನಗೆ ಬರಲಿಲ್ಲ. ಹೊಟ್ಟೆಯಲ್ಲಿ ಹುಟ್ಟಿದ ಮಗನನ್ನು ನಾಡಿಗಾಗಿ ಬಲಿಕೊಟ್ಟೆ. ಸಾಯುವ ಕಾಲಕ್ಕೆ ಮಗಳನ್ನೊಮ್ಮೆ ನೋಡುವ ಭಾಗ್ಯವನ್ನೂ ನಾನು ಪಡೆದುಕೊಂಡು ಬರಲಿಲ್ಲ. ಚಿಂತೆ ಇಲ್ಲ. ಕೊನೆಯದಾಗಿ ಒಂದೇ ಒಂದು ಆಸೆ ಇದೆ. ಅದನ್ನು ನಡೆಯಿಸಿಕೊಡುತ್ತೇನೆಂದು ನೀವು ಭರವಸೆ ಕೊಟ್ಟರೆ ನಾನು ನಿಶ್ಚಿಂತೆಯಿಂದ ಪ್ರಾಣ ಬಿಡುತ್ತೇನೆ”.

“ಆಗಲಿ ತಾಯಿ, ನಾವು ಸಾಧಿಸಿ ಕೊಡುತ್ತೇವೆ”. ಎಂದು ಒಕ್ಕೂರಲಿನಿಂದ ಎಲ್ಲರೂ ನುಡಿದರು.

“ತಿರುಮಲಾದೇವಿ ನನ್ನ ಮಗಳಲ್ಲ. ನಿಮ್ಮ ಮಗಳು. ಈ ಮಣ್ಣಿನ ಮಗಳು. ಯುವರಾಣಿಯನ್ನು ರಕ್ಷಿಸಿಕೊಳ್ಳಿ. ಪೋರ್ಚುಗೀಸರಿಗೆ ಶರಣಾಗಬೇಡಿ. ಸೋಮನಾಥನ ತ್ರಿಶೂಲ, ಡಮರುಗಳಿರುವ ಕೀರ್ತಿ ಧ್ವಜವನ್ನು ಎತ್ತಿ ಹಿಡಿಯಿರಿ, ಎತ್ತಿ ಹಿಡಿಯಿರಿ……….” ಎಂದು ಹೇಳುತ್ತಾ ಕಣ್ಣು ಮುಚ್ಚಿದಳು.

ದ್ರೋಹಿಯ ಕಣ್ಣೀರು

ಅಬ್ಬಕ್ಕ ರಾಣಿಯನ್ನು ಬಂಧಿಸುವುದಕ್ಕಾಗಿ ಕಾಮರಾಯನ ಪೋರ್ಚುಗೀಸ್ ದಳಪತಿಯೊಂದಿಗೆ ಒಳಕ್ಕೆ ನುಗ್ಗಿಬಂದನು.

ಅವನು ಕಂಡದ್ದು ಆ ಧೀರ ರಾಣಿಯ ಹೆಣವನ್ನು. ಅವಳ ಆತ್ಮ ಪಕ್ಷಿಯು ಬಂಧಿಸಲಾರದಷ್ಟು ದೂರ ಹಾರಿಹೋಗಿತ್ತು.

ಕಾಮರಾಯನು ಕಲ್ಲಾದಂತೆ ನಿಂತುಬಿಟ್ಟ.

“ಇದ್ದಷ್ಟು ದಿನ ನನ್ನ ಅತ್ತೆಯಲ್ಲಿ ದ್ವೇಷ ಕಟ್ಟಿಕೊಂಡು ದೇಶಕ್ಕೆ ದ್ರೋಹ ಮಾಡಿದೆ. ಅಬ್ಬಕ್ಕ ರಾಣಿ ತುಳುನಾಡಿನ ಮಗಳಾಗಿ, ಭಾರತದ ವೀರ ಪರಂಪರೆಯ ಗೋಪುರಕ್ಕೆ ಕಳಸವಾದ ಕೀರ್ತಿಯನ್ನು ಪಡೆದಳು. ನಾನು ದೇಶದ್ರೋಹಿಯಾದೆ. ಇಂತಹ ವೀರ ರಾಣಿಯನ್ನು ಕೊಂದೆ” ಎನಿಸಿತು ಅವನಿಗೆ.

ತಾನು ನಾಡಿಗೆ, ಅಬ್ಬಕ್ಕ ರಾಣೀಗೆ ಮಾಡಿದ ದ್ರೋಹವನ್ನು ಸ್ಮರಿಸಿಕೊಂಡು ಪಶ್ಚಾತ್ತಾಪ ಪಟ್ಟನು. ಶವದ ಕಾಲು ಮುಟ್ಟಿ ಕಣ್ಣೀರು ಸುರಿಸಿದನು. ಹಿಂದಿನ ಘಟನೆಗಳೆಲ್ಲಾ ಒಂದೊಂದಾಗಿ ಕಣ್ಣ ಮುಂದೆ ಬಂದು ಮಾಯವಾದವು.

 

ಪೋರ್ಚುಗೀಸರಿಗೆ ಶರಣಾಗಬೇಡಿ

ಕಾಮರಾಯನು ಅಬ್ಬಕ್ಕದೇವಿಯ ರೂಪವನ್ನು ನೋಡಿ ಅವಳನ್ನು ಪ್ರೀತಿಸಿದನು. ಮದುವೆಯಾಗಬೇಕೆಂದು ಗ್ರಹಿಸಿದನು. ವಯಸ್ಸಿನಲ್ಲಿ ಹಿರಿಯಳಾದ ಅವಳನ್ನು ಮದುವೆಯಾಗಲು ಸಾಧ್ಯವಾಗಲಿಲ್ಲ. ಅವಳು ತನ್ನ ಮಾವನ ಮಡದಿಯಾಗಿ ಮಂಗಳೂರಿಗೆ ಬಂದಾಗ, ಮೊದಲಿದ್ದ ಪ್ರೀತಿಯು ಸೇಡಾಗಿ ಪರಿಣಮಿಸಿತು.

ಕಾಮರಾಯನಿಗೆ ಸುಖದ ಆಸೆ, ಅಷ್ಟೆ. ಕೆಟ್ಟ ಸ್ನೇಹಿತರ ಸಹವಾಸದಿಂದ ಇನ್ನಷ್ಟು ಕೆಟ್ಟುಹೋದನು. ಅಬ್ಬಕ್ಕ ರಾಣಿಯೇ ಅವನಿಗೆ ಹೆಣ್ಣು ನೋಡಿ ಮದುವೆ ಮಾಡಿಸಿದವಳು. ಯುವರಾಜ ಪಟ್ಟ ಕಟ್ಟಿಸಿ, ಆಡಳಿತದಲ್ಲಿ ಎಡೆಮಾಡಿ ಕೊಟ್ಟವಳು. ಆದರೆ ಒಮ್ಮೆ ದುಷ್ಟ ಚಟಗಳಿಗೆ ಬಲಿಯಾದ ಕಾಮರಾಯ ಮತ್ತೆ ಸರಿದಾರಿ ಹಿಡಿಯಲಿಲ್ಲ. ಪೋರ್ಚುಗೀಸರು ಅವನ ದುಷ್ಟತನದ ಉಪಯೋಗ ಪಡೆದುಕೊಂಡರು. ರಾಜ್ಯದ ಆಸೆ ತೋರಿಸಿ, ತಮ್ಮ ಕೈಗೊಂಬೆಯಾಗಿಸಿಕೊಂಡರು.

ಪ್ರತಿಜ್ಞೆ

ತಿರುಮಲಾದೇವಿಯ ಹೆಸರಿನಲ್ಲಿ ನೀರು ಬಿಟ್ಟು ಭಾಗೀರಥಿ ಪ್ರತಿಜ್ಞೆ ಮಾಡಿದಳು:

“ಸುಟ್ಟುಹೋದ ಕರಿಮರದ ಕೋಟೆಯ ಜಾಗದಲ್ಲಿ ಕಗ್ಗಲ್ಲಿನ ಕೋಟೆಯನ್ನು ಮತ್ತೆ ಕಟ್ಟಿಸುತ್ತೇವೆ. ಊರಿನ ಮರ್ಯಾದೆಯನ್ನು ಪರವೊರವರಿಗೆ ಮಾರುವವರ ಕೈಯಿಂದ ಈ ಸೀಮೆಯನ್ನು ರಕ್ಷಿಸುತ್ತೇವೆ”.

“ಸೋಮನಾಥ ದೇವರ ಕೀರ್ತಿಪತಾಕೆಯು ಸದಾ ಉಳ್ಳಾಲದಲ್ಲಿ ಮೆರೆಯುತ್ತಿರುವಂತೆ ಮಾಡುತ್ತೇವೆ. ಈ ನಾಡಿಗಾಗಿ ತಾವು ಮಾಡಿದ ತ್ಯಾಗದ ಕಥೆಯನ್ನು ನಮ್ಮ ಪೀಳಿಗೆ ಅಭಿಮಾನದಿಂದ ಕೊಂಡಾಡುವಂತೆ ಮಾಡುತ್ತೇವೆ”.

ಅಲ್ಲಿದ್ದವರೆಲ್ಲ ಈ ವೀರ ಪ್ರತಿಜ್ಞೆಗೆ, ಅಂತಃಕರಣದ ಹಾರೈಕೆಗೆ ತಲೆಬಾಗಿದರು.

ಚಪಲದ ದಾಸ

ಅಬ್ಬಕ್ಕ ರಾಣಿಯ ಶವವನ್ನು ಹೊತ್ತು ಜನ ಮೆರವಣಿಗೆ ಹೊರಟಿತು. ಕಾಮರಾಯನಿಗೆ ತನ್ನ ಅತ್ತೆಯ ಚಟ್ಟಕ್ಕೆ ಹೆಗಲು ಕೊಡಬೇಕೆಂದು ಆಸೆಯಾಯಿತು. ಆದರೆ ಪೋರ್ಚುಗೀಸರ ಭಯವೂ ಆಯಿತು. ಹಾಗಾಗಿ ತನ್ನ ಮನಸ್ಸಿನಲ್ಲಾದ ಬದಲಾವಣೆಯನ್ನು ತೋರಗೊಡದೆ ಮಂಗಳೂರಿನ ಅರಮನೆ ಸೇರಿಕೊಂಡನು.

“ವೇಷ ಮರೆಸಿ ಮಾವನನ್ನು ಕೊಂದೆ. ಆ ವಿಚಾರವನ್ನು ಹೊರಗೆ ಹಾಕಬಹುದೆಂದು ಶಂಕಿಸಿ ಪ್ರಧಾನಿ ಸಂಕಪ್ಪಯ್ಯನನ್ನು ಮುಗಿಸಿದೆ. ಅಬ್ಬಕ್ಕ ರಾಣಿ ಮಂಗಳೂರಿನಿಂದ ಹೊರಡುವಂತೆ ಮಾಡಲು ಬಣ ಕಟ್ಟಿ ವಾದಿಸಿದೆ. ರಾಜ್ಯಕ್ಕೆ ಹಕ್ಕುದಾರರು ಉಳಿಯಬಾರದೆಂದು ಯೋಚಿಸಿ ರಾಜಕುಮಾರ ಚಂದ್ರಶೇಖರ ದೊಡ್ಡರಾಯನನ್ನು ಕೊಲ್ಲಿಸಿದೆ. ಕಾವಲುಗಾರರನ್ನು ಅಧಿಕಾರಿಗಳನ್ನು ಲಂಚಕೊಟ್ಟು ತಿರುಗಿಸಿ ಉಳ್ಳಾಲದ ಕೋಟೆಬಾಗಿಲು ತೆರೆದಿಡುವಂತೆ ಮಾಡಿದೆ. ಇಷ್ಟೆಲ್ಲಾ ಮಾಡಿದರೂ ಮುಂದೆ ಏನಾಗಬಹುದೆಂಬುದನ್ನು ಊಹಿಸುವುದು ಸಾಧ್ಯವಿಲ್ಲ.

ಹೀಗೆ ಕಾಮರಾಯ ಮೆಲುಕು ಹಾಕುತ್ತಿರುವಾಗ ಪೋರ್ಚುಗೀಸ್ ಠಾಣೆಯಿಂದ ಅವನಿಗೆ ಕರೆಬಂತು. ಈಗ ಅವನು ಪೋರ್ಚುಗೀಸರಿಗೆ ಸುಂಕ ಕೊಡುವವನಾದುದರಿಂದ ಹೋಗಲೇಬೇಕಾಯಿತು. ಅವನಿಗಿದ್ದುದು ಅದೊಂದೇ ದಾರಿ. ತನಗೇನಾಗುತ್ತದೋ ಎಂಬ ಭಯದೊಂದಿಗೆ ಮಂಗಳೂರು, ಉಳ್ಳಾಲಗಳೆರಡಕ್ಕೂ ರಾಜನಾಗುವ ಆಸೆಯನ್ನಿಟ್ಟುಕೊಂಡು ಹೋದನು. ಕಾಮರಾಯನಲ್ಲಾದ ಬದಲಾವಣೆಯಿಂದ ಪೋರ್ಚುಗೀಸ್ ದಳಪತಿಗೆ ಅತೃಪ್ತಿಯಾಯಿತು. ಅದನ್ನು ತೋರಿಸದೆ ಎಂದಿನಂತೆಯೇ ಅವನನ್ನು ಸ್ವಾಗತಿಸಿದ. ಕಾಮರಾಯನಿಗೆ ಭಯವು ದೂರವಾಗಿ ರಾಜನಾಗುವ ಚಮಪ ಹೆಚ್ಚಾಯಿತು.

ಕಾಮರಾಯನ ಸತ್ಕಾರ

“ನಿಮ್ಮ ಪ್ರಯತ್ನದಿಂದ ಉಳ್ಳಾಲ ಸುಟ್ಟು ಬೂದಿಯಾಯಿತು. ಜಂಬದ ಕೋಳಿ ಅಬ್ಬಕ್ಕ ರಾಣಿಯ ಸರ್ವನಾಶವಾಯಿತು. ನೀವು ಮಾಡಿದ ಉಪಕಾರವನ್ನು ಹೇಗೆ ಕೊಂಡಾಡುವುದೆಂದೇ ತಿಳಿಯುವುದಿಲ್ಲ” ಎಂದು ಕಾಮರಾಯ ಪೋರ್ಚುಗೀಸರ ದಳಪತಿಯ ಮುಖಸ್ತುತಿ ಮಾಡಿದನು.

ಅದಾವುದೂ ಅವರಿಗೆ ಬೇಕಾಗಿರಲಿಲ್ಲ. ಆದರೂ ಯಾವುದನ್ನೂ ತೋರಗೊಡದೆ ಮದ್ಯ, ಮಾಂಸಗಳ ಸತ್ಕಾರವಾಯಿತು. ಕಟುಕನ ಕೈಯ ಕತ್ತಿಗೆ ಕೊರಳು ಕೊಡುವ ಕುರಿಯಂತೆ ಕಾಮರಾಯ ತಿಂದು, ಕುಡಿದು ತೃಪ್ತಿಗೊಂಡನು.

“ಕಾಮ್ ರಾಯ! ಅಬ್ಬ ಅಕ್ಕ ನಮ್ಮ ವೈರಿ ಮಾತ್ರವಲ್ಲ. ಪೋರ್ಚುಗೀಸ್ ಸಾಮ್ರಾಜ್ಯದ ಏಳಿಗೆಗೇ ಒಂದು ಮುಳ್ಳಾಗಿದ್ದರು. ಅದನ್ನು ಕಿತ್ತೊಗೆದುದಾಯಿತು. ಆದರೂ ಅವಳು ತೋರಿದ ಧೈರ್ಯ, ರಾಷ್ಟ್ರ ಪ್ರೇಮಕ್ಕೆ ನಾವು ಮಾರು ಹೋಗಿದ್ದೇವೆ. ಸತ್ತ ಅಬ್ಬ ಅಕ್ಕನಿಗಾಗಿ ಅವಳ ಆತ್ಮಶಾಂತಿಗಾಗಿ ನಾವು ಪ್ರಾರ್ಥನೆ ಮಾಡುತ್ತೇವೆ”

“ಇನ್ನು ನಿಮ್ಮ ವಿಷಯ………….”

ಕಾಮರಾಯನಿಗೆ ಮನಸ್ಸಿನಲ್ಲಿ ಆಸೆ, ಆತಂಕ, ಕೋಲಾಹಲ, ತನಗೇನಾದೀತು? ದಳಪತಿಯ ಮುಖವನ್ನು ನೋಡಿದರೆ ಏನೂ ತಿಳಿಯುವಂತಿರಲಿಲ್ಲ.

ಪೋರ್ಚುಗೀಸರ ದಳಪತಿ ಮಾತನ್ನು ಮುಂದುವರಿಸಿದ:

“ನೀವು ನಮ್ಮ ಸ್ನೇಹಿತರು. ನಮಗೆ ಜಯ ದೊರಕುವುದಕ್ಕೆ ಬೇಕು ಬೇಕಾದ ಒಳಗುಟ್ಟನ್ನು ಹೇಳಿದ ಮಿತ್ರರು. ಇನ್ನೂ ನಿಮ್ಮಿಂದ ನಮಗೆ ತುಂಬಾ ಸಹಾಯ ಸಿಕ್ಕಬಹುದು. ಎರಡು ಸಾವಿರನ ನಾನ್ನೂರು ಮುಡಿ ಅಕ್ಕಿ, ಸಾವಿರ ಬುದ್ದಲಿ ಎಣ್ಣೆ ಸುಂಕ ಬೇರೆ ಕೊಡುತ್ತಿದ್ದೀರಿ. ಆದರೂ ನಾವು ನಿಮ್ಮನ್ನು ಪ್ರೀತಿಸುವುದಿಲ್ಲ. ಗೌರವವಾಗಿ ಕಾಣುವುದಿಲ್ಲ. ನೀವು ಒಳ್ಳೆಯವರ ಹಾಗೆ ನಟಿಸಿದರೂ ನಿಮ್ಮವರಿಗೇ ಮೋಸ ಮಾಡಿದ ನೀವು ನಮಗೆ ಮೋಸ ಮಾಡದೆ ಬಿಡುತ್ತೀರಾ?” ವೈಸರಾಯರು ಪ್ರಶ್ನಿಸಿದರು.

“ಕನಸು ಮನಸ್ಸಿನಲ್ಲಿಯೂ ನಿಮಗೆ ಹಾಗೆ ಎಣಿಸುವುದಿಲ್ಲ” ಕಾಮರಾಯ ಕೇಳಿಕೊಂಡ.

“ನಿಮ್ಮಂತಹ ರಾಷ್ಟ್ರ ದ್ರೋಹಿಗಳಿಂದ ಪೋರ್ಚುಗೀಸ್ ಸಾಮ್ರಾಜ್ಯದ ರಾಜತಂತ್ರ ಸುಗಮವಾಗಲಾರದು. ಸ್ವಾರ್ಥಿಯಾದವನು ತನ್ನ ಲಾಭಕ್ಕಾಗಿ ಇತರರನ್ನು ಬಲಿ ಕೊಡಲು ಖಂಡಿತ ಹೇಸುವುದಿಲ್ಲ. ನಿಮ್ಮಿಂದ ನಮಗೆ ತೊಂದೆರೆಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ”.

ಈ ಮಾತುಗಳನ್ನು ಕೇಳಿ ಕಾಮರಾಯ ದಿಕ್ಕು ಕಾಣದಾದ. ಅವನ ಮೈ ಬೆವರಿತು, ನಾಲಿಗೆ ಒಣಗಿತು.

ಸೇನಾಪತಿಯು ಕಾವಲಿನ ಸೈನಿಕನಿಗೆ ಸೂಚನೆ ಕೊಟ್ಟ. ಅವನು ಕೋವಿಯನ್ನೆತ್ತಿ ಕಾಮರಾಯನ ಎದೆಗೆ ಗುರಿಹಿಡಿದ.

“ಇಲ್ಲ ನನ್ನನ್ನು ಕೊಲ್ಲಬೇಡಿ. ನಾನು ನೀವು ಹೇಳಿದಂತೆ ಕೇಳಿಕೊಂಡು ನಡೆಯುತ್ತೇನೆ”. ಕಾಮರಾಯ ಕೈಯೊಡ್ಡಿ ಬೇಡಿಕೊಂಡ.

“ನೀನು ಸತ್ತರೆ ಯಾರಿಗೂ ನಷ್ಟವಿಲ್ಲ. ಆದರೆ, ನಿನ್ನಂತಹವರಿಂದ ನಿಮ್ಮ ನಾಡಿಗೆ ತೊಂದರೆಯಾಗಿರುವಂತೆ, ನಮ್ಮ ನಾಡಿಗೂ ಕೇಡಾಗಬಹುದು. ಅದಕ್ಕಾಗಿ ….”.

ಗುಂಡುಹಾರಿಸಲು ಆಜ್ಞೆಯಾಯಿತು. ಕಾಮರಾಯ ಸತ್ತುಬಿದ್ದ. ರಕ್ಷಕರಿಲ್ಲದ ಒಬ್ಬಂಟಿಗನಾಗಿ ಗುಟ್ಟಾಗಿ ಬಂದ ಅವನ ಮರಣ ಗುಟ್ಟಾಗಿಯೇ ಉಳಿಯಿತು. ಶವವೂ ಪತ್ತೆಯಾಗದಂತೆ ಸುಟ್ಟು ಬೂದಿ ಮಾಡಿದರು.

ಅಬ್ಬಕ್ಕರಾಣಿ ನಾಡಿಗಾಗಿ, ಸ್ವಾತಂತ್ಯ್ರಕ್ಕಾಗಿ ಹೋರಾಡುತ್ತಲೇ ಪ್ರಾಣವನ್ನರ್ಪಿಸಿದಳು. ಅವಳ ಶವದ ಮುಂದೆ ಭಾಗೀರಥಿ ಮಾಡಿದ ಪ್ರತಿಜ್ಞೆ ಸುಳ್ಳಾಗಲಿಲ್ಲ. ಅಬ್ಬಕ್ಕ ರಾನಿಯ ಬಾಳು, ಸಾವು ಜನರಿಗೆ ಸ್ಫೂರ್ತಿಯಾಯಿತು. ಅವಳ ಧೀರ ಜೀವನವನ್ನು ಕುರಿತಯ ಜನ ಹಾಡುಗಳನ್ನು ಕಟ್ಟಿದರು. ಹಾಡುಗಳನ್ನು ಹಳ್ಳ ಹಳ್ಳಿಗಳಲ್ಲಿ ಹಾಡಿದರು. ತಿರುಮಲಾದೇವಿಯ ಹೆಸರಿನಲ್ಲಿ ಯುದ್ಧವು ಮುಂದುವರೆಯಿತು.

ನಮ್ಮ ಜನರೇ ನಮಗೆ ಹಗೆಗಳಾಗಿ ಹೊರಗಿನವರಿಗೆ ಸ್ನೇಹಿತರಾಗುತ್ತಾರೆ. ಇದು ನಮ್ಮ ದೌರ್ಭಾಗ್ಯ.”

ಚಿಕ್ಕ ಹುಡುಗಿಯಾಗಿದ್ದಾಗಲೇ ಅಬ್ಬಕ್ಕ ಈ ಮಾತುಗಳನ್ನು ಹೇಳಿದ್ದಳು. ಅವಳ ಬಾಳಿನಲ್ಲಿಯೂ ಈ ದೌರ್ಭಾಗ್ಯ ಕತ್ತಲನ್ನು ತುಂಬಿತು. ಭಾರತದ ಇತಿಹಾಸದುದ್ದಕ್ಕೂ ಕಾಣುವುದು ಈ ಕರುಣೆಯ ಕಥೆಯನ್ನೇ. ಭಾರತೀಯರನ್ನು ಸೋಲಿಸಿರುವವರು, ಅವರನ್ನು ಗುಲಾಮಗಿರಿಗೆ ತಳ್ಳಿರುವವರು, ಭಾರತಿಯರೇ. ಒಗ್ಗಟ್ಟಿಲ್ಲದ ನಾಡು ಸುಲಭವಾಗಿ ಇತರರ ಕೈಸೇರಿತು.

ಸ್ವತಂತ್ರ ಭಾರತದ ಮಕ್ಕಳಾದ ನಾವು ನೆನಪಿಟ್ಟು ಕೊಳ್ಳಬೇಕಾಗಿರುವುದು ಈ ಪಾಠವನ್ನೇ.

ಅಬ್ಬಕ್ಕ ರಾನಿಯ ಜೀವನ ಭಾರತದ ಚರಿತ್ರೆಯ ವಿಷಯವಾಯಿತು. ಅವಳ ವ್ಯಕ್ತಿತ್ವ ಕಲಿಗಳಿಗೆ, ಕವಿಗಳಿಗೆ, ಕಲಾವಿದರುಗಳಿಗೆ ವಸ್ತುವಾಗಿ, ಸ್ಫೂರ್ತಿಯಾಗಿ ಬಹುಕಾಲ ಉಳಿಯಲಿ.