ಪ್ರಾರಂಭ : [ಅಬ್ಬಿ ಅಂದರೆ ತಾಯಿ, ಅಮ್ಮ, ಅಬ್ಬ.  ನೀರಿನಲ್ಲಿ ಹುಟ್ಟಿದವ.  ನೀರಸೆಲೆ, ನೀರಿನ ಒರತೆ, ನೀರಿನ ಧಾರೆ, ನೀರು ಸೆಲೆಯಾಗಿ ನಿಲ್ಲುವ ಸ್ಥಳ.  ಭೂಮಿಯ ಮೇಲ್ಪದರದಲ್ಲೇ ನೀರು ಸಿಗುವ ತಾಣ, ಝರಿ, ಸಣ್ಣ ಜಲಪಾತ]

ಸಾಗರ ತಾಲ್ಲೂಕಿನ ಹಂಸಗಾರು ಕಣಿವೆಯ ಮಧ್ಯದಲ್ಲಿರುವ ಹಳ್ಳಿ.  ಊರಿನ ಸುತ್ತಲೂ ಗುಡ್ಡಬೆಟ್ಟಗಳ ಸರಮಾಲೆ.  ಗುಡ್ಡದ ತುದಿಯಲ್ಲಿ ನಿಂತರೆ ಕಾಣಿಸುವ ಶರಾವತಿಯ ಹಿನ್ನೀರು.  ಈಚೆ ನೋಡಿದರೆ ಕಣಿವೆಯಲ್ಲಿ ಕಾಣಿಸುವ ಅಡಿಕೆ ತೋಟಗಳು.  ಚಿಕ್ಕ ಚಿಕ್ಕ ಹೆಂಚಿನ ಮನೆಗಳು.  ಹೆಬ್ಬಾವಿನಂತೆ ಹರಿದುಹೋದ ಮಣ್ಣಿನ ರಸ್ತೆಗಳು.  ಹಾಗಂತ ದಟ್ಟಕಾಡು ಕಾಣಿಸದು.  ಅಕೇಶಿಯಾ, ನೀಲಗಿರಿಗಳ ತೋಪುಗಳು ಯಥೇಚ್ಛ.  ಕಾಡಿನಂತಿರುವ ಸೊಪ್ಪಿನಬೆಟ್ಟಗಳಲ್ಲಿ ಉಪ್ಪಾಗೆ, ಆರ್ಚಟಿ, ನಿಸಣಿ, ನೇರಲು, ನೀರಟ್ಟೆ, ಬನಾಟ್ಟೆ, ಗುಳಮಾವು, ಕಾಡಂಬಟೆ, ಗಣಪೆ, ಬಿರಡಿ ಹೀಗೆ ಮರಗಳು, ಬಳ್ಳಿಗಳು ಲೆಕ್ಕವಿಲ್ಲದಷ್ಟಿವೆ.  ಗುಡ್ಡ ಇಳಿಯುತ್ತಾ, ಇಳಿಯುತ್ತಾ ಬಂದರೆ ಸಿಗುವುದೇ ಉದ್ದೇಮನೆ.  ಪಕ್ಕದಲ್ಲೇ ಜುಳು ಜುಳು ಹರಿಯುವ ನೀರಿನ ಹರಿವು.  ಫಕ್ಕನೆ ಹದಿನೈದು ಅಡಿ ಕೆಳಗೆ ಧುಮುಕಿ ಸದ್ದಿಲ್ಲದೇ ತೋಟದ ಮಧ್ಯೆ ಓಡುತ್ತಾ ಮಾಯವಾಗುವ ಪುಟ್ಟ ಹೊಳೆ.  ಅದರಲ್ಲಿ ಉದ್ದೇಮನೆಯವರು ಪಾಲು ಮಾಡಿಕೊಂಡು ಸ್ವಲ್ಪ ನೀರು ಮನೆಯವರೆಗೂ ಬರುವಂತೆ ಒಗದಿ ಹಾಕಿಕೊಂಡಿದಾರೆ. [ಒಗದಿ=ಹರಿಣಿ=ಅಡಿಕೆಮರ ಅಥವಾ ಬೈನೆಮರವನ್ನು ಮಧ್ಯೆ ಸೀಳಿ ತಿರುಳು ತೆಗೆದು ನೀರನ್ನು ಬೇಕಾದಲ್ಲಿಗೆ ಒಯ್ಯಲು ಮಾಡಿಕೊಂಡ ವ್ಯವಸ್ಥೆ]  ಮನೆಯಲ್ಲಿರುವ ಜನ ೧೨.  ನೀರಿನ ಖರ್ಚು ಅಧಿಕ.  ಮನೆಯೊಳಗಿನ ತೆರೆದ ಬಾವಿ ೫೩ ಅಡಿ ಆಳವಿದ್ದರೂ ನೀರು ಕಡಿಮೆ.  ಮಳೆಗಾಲದಲ್ಲಿ ೧೦ ಅಡಿಗಳಷ್ಟು ನೀರು ಸಿಕ್ಕರೆ ಬೇಸಿಗೆಯಲ್ಲಿ ಮೂರು ಅಡಿಗಳು ಮಾತ್ರ.  ಹಾಗಾಗಿ ಮನೆಯ ಬಳಕೆಗೆ, ಕುಡಿಯಲು, ಏನೆಲ್ಲಾ ಕೆಲಸಗಳಿಗೂ ಅಬ್ಬಿ ನೀರೇ ಬೇಕು.

ಮಳೆಗಾಲದಲ್ಲಿ ಎಲ್ಲೆಲ್ಲೂ ನೀರು.  ನೀರಿನ ಕೊರತೆಯೇ ಕಾಣಿಸದು.  ಆದರೆ ಬೇಸಿಗೆ ಬಂತೆಂದರೆ ನೆಲಪೂರ್ತಿ ಒಣಗಿಹೋಗಿ ನೀರೇ ಇಲ್ಲದ ಸ್ಥಿತಿ.  ಆಗ ಗುಡ್ಡದ ಮೇಲಿಂದ ಇಳಿಯುವ ಅಬ್ಬಿನೀರೇ ಜೀವಸೆಲೆ.

ಇಸವಿ ೧೯೮೫ರಲ್ಲಿ ತೋಟವೆಲ್ಲಾ ನೀರಿನ ಬರದಿಂದ ಕೆಂಪಾಯಿತು.  ನಿತ್ರಾಣಮರಗಳಿಗೆ ಯಾವುದೋ ರೋಗ ಬಂತು.  ಮನೆಯ ಮುಂದಿನ ತೋಟ ಪೂರ್ತಿ ನಾಶವಾಯಿತು.  ಆಗ ಈ ಅಬ್ಬಿನೀರನ್ನು ಕೃಷಿಗೆ ಬಳಸುವ ತೀರ್ಮಾನ ಉದ್ದೇಮನೆ ಲಚ್ಚಣ್ಣನವರದು.  ತೋಟಕ್ಕೋಸ್ಕರ ಮತ್ತೊಂದು ಒಗದಿ ಹಾಕಿದರು.  ಹೊಸದಾಗಿ ಹಚ್ಚಿದ ಗಿಡಗಳು ಬೇಸಿಗೆಯಲ್ಲೂ ಹಸುರು ಉಳಿಸಿಕೊಂಡಿತು.  ಮಳೆಗಾಲದಲ್ಲಿ ಹೊಳೆಯಲ್ಲೇ ಹರಿದುಹೋಗುವ ನೀರು ಚಳಿಗಾಲ ಬರುತ್ತಿದ್ದಂತೆ ತೋಟವನ್ನೆಲ್ಲಾ ಸುತ್ತಾಡಿ ಮುಂದೆ ಹೋಗತೊಡಗಿತು.

ಆದರೆ ಪರಿಸ್ಥಿತಿ ಹೀಗೇ ಉಳಿಯಲಿಲ್ಲ.  ೨೦೦೦ನೇ ಇಸವಿಯ ಹೊತ್ತಿಗೆ ಮೇಲಿನಿಂದಿಳಿವ ನೀರಿನ ಪ್ರಮಾಣ ಕಡಿಮೆಯಾಗತೊಡಗಿತು.  ಅಕ್ಕಪಕ್ಕದ ಗುಡ್ಡಗಳೆಲ್ಲಾ ಬೋಳಾದಂತೆ ನೀರು ಸಂಗ್ರಹ ಕಡಿಮೆಯಾಗಿರಬಹುದೇ ಎನ್ನುವ ಅನುಮಾನ.  ಹಿಂದಿನಂತೆ ಮಳೆಯಿಲ್ಲ ಎನ್ನುವ ವಾಸ್ತವ.  ಏನೆಲ್ಲಾ ಕಾರಣಗಳು ಅಡ್ಡಬಂದು ನೀರು ಕಮ್ಮಿಯಾಗತೊಡಗಿತು.

ಇತ್ತ ಬಾವಿಯಲ್ಲೂ ನೀರಿಲ್ಲ, ಅಬ್ಬಿಯ ನೀರೂ ಇಲ್ಲದಿದ್ದರೆ ಒಟ್ಟಾರೆ ನೀರಿಗೂ ತತ್ವಾರ.  ಭೂಮಿಯ ಅಡಿಯಲ್ಲಿ ನೀರಿಲ್ಲದಿರುವುದು ಖಚಿತ.  ಅಬ್ಬಿಯನ್ನೂ ಉಳಿಸಿಕೊಳ್ಳದಿದ್ದರೆ ನೀರಿಲ್ಲದೇ ಊರು ಬಿಡಬೇಕಾದ ಪರಿಸ್ಥಿತಿ.  ಅಡಿಕೆ, ವೆನಿಲ್ಲಾ, ಕಾಳುಮೆಣಸು, ಏಲಕ್ಕಿ ಎಲ್ಲಾ ಒಣಗಿಹೋಗುವುದರಲ್ಲಿ ಎರಡು ಮಾತಿಲ್ಲ.  ಉದ್ದೇಮನೆಯವರೆಲ್ಲಾ ಎಚ್ಚೆತ್ತರು.

ಆಗಲೇ ಹಂಸಗಾರಿನ ಯುವಕರೂ ಹಸುರು ಹಚ್ಚುವುದು, ಬೆಟ್ಟಗಳಲ್ಲಿ ಇಂಗುಗುಂಡಿ ತೋಡುವುದು, ಓಡುವ ನೀರನ್ನು ಅಡ್ಡಕಾಲುವೆ ತೋಡಿ ಅಲ್ಲಲ್ಲೇ ಇಂಗುವಂತೆ ಮಾಡುವುದೂ ಮಾಡುತ್ತಿದ್ದರು.  ಊರಿನಲ್ಲಿ ಜಲಜಾಗೃತಿ ಹೆಚ್ಚಿತ್ತು.  ಈ ಎಲ್ಲಾ ಕೆಲಸಗಳೊಂದಿಗೆ ಉದ್ದೇಮನೆಯವರೂ ತಮ್ಮ ಸೊಪ್ಪಿನಬೆಟ್ಟದಲ್ಲಿ ಇಂಗುಗುಂಡಿ ತೋಡಿದರು, ಅಡ್ಡಕಾಲುವೆ ಮಾಡಿದರು.

ಇಷ್ಟೆಲ್ಲಾ ಪ್ರಯತ್ನಗಳಿಂದಲೂ ನೀರಿನಹರಿವು ಹೆಚ್ಚೇನಾಗಲಿಲ್ಲ.  ಈಗಲೂ ಮಾರ್ಚ್‌ನಿಂದ ಮೇ ತಿಂಗಳುಗಳಲ್ಲಿ ನೀರು ಕಡಿಮೆಯಾಗುತ್ತಾ ಸುಮಾರು ಒಂದಿಂಚಿಗೆ ಒಸರತೊಡಗುತ್ತದೆ.  ಜೂನ್‌ನಲ್ಲಿ ಮಳೆ ಬಂದಾಗ ಹೆಚ್ಚುತ್ತದೆ.

ಉದ್ದೇಮನೆಯವರೀಗ ತಮ್ಮ ಉಪಾಯ ಬದಲಿಸಿದ್ದಾರೆ.  ಜಲಮೂಲದಿಂದ ಒಸರುವ ನೀರು, ಮರಗಿಡಗಳು ಇಂಗಿಸಿ ಬೇರಲ್ಲಿ ಹಿಡಿದಿಟ್ಟುಕೊಂಡಿದ್ದು ಅಂದರೆ ಸೊಪ್ಪಿನಬೆಟ್ಟದಲ್ಲಿ ನೀರನ್ನು ಬೇರಲ್ಲಿಟ್ಟುಕೊಳ್ಳುವ ಗಿಡಗಳು ಇವೆ.  ಅಂತಹ ಗಿಡಗಳ ಸಂಖ್ಯೆ ಹೆಚ್ಚಿಸುವುದು.  ಹಾಗೆಂದು ಕಾಡಲ್ಲಿ ಗಿಡ ನೆಟ್ಟು ಬದುಕಿಸುವುದು ಸಾಧ್ಯವಿಲ್ಲ.  ಬದಲು ಅಲ್ಲಿರುವ ಗಿಡಮರಗಳನ್ನು ಸೊಪ್ಪಿಗಾಗಿಯೂ ಕಡಿಯದೇ ಇರುವುದು.  ದರಕು [ತರಗೆಲೆ] ಆರಿಸದೇ ಉಳಿಸುವುದು, ಜಾನುವಾರು ಬರದಂತೆ ಬೇಲಿ ನಿರ್ಮಾಣ.

ಮತ್ತೊಂದು ಕೆಲಸವೆಂದರೆ, ಜಲಮೂಲಕ್ಕೇ ಪೈಪ್ ಹಾಕಿ ಕಲ್ಲಿನಿಂದ ನಿರ್ಮಿಸಿದ ಟ್ಯಾಂಕಿಗೆ ಬೀಳುವಂತೆ ವ್ಯವಸ್ಥೆ ಮಾಡಿದ್ದಾರೆ.  ಅಲ್ಲಿ ಸಂಗ್ರಹವಾದ ನೀರಿನ ಒಂದು ಪಾಲು ಮನೆಬಳಕೆಗೆ ಒಯ್ಯುತ್ತಾರೆ.  ಉಳಿದುದನ್ನು ಕೃಷಿಗೆ ಬಳಸುತ್ತಾರೆ.

ತೋಟಗಳಿಗೆ ನಿರು ಬೇಕಾಗುವುದೇ ಬೇಸಿಗೆಯಲ್ಲಿ.  ಸಣ್ಣಗೆ ಒಸರುವ ನೀರನ್ನು ಟ್ಯಾಂಕಿಯಲ್ಲಿ ತುಂಬಿ ಕೆಳಗಿನ ತೋಟಕ್ಕೆ ದಿವಸಕ್ಕೆ ಎರಡು ಸಾರಿ, ಮೇಲಿನ ತೋಟಕ್ಕೆ ವಾರಕ್ಕೆರಡು ಸಾರಿ ಬಿಡುತ್ತಾರೆ.  ಅದಕ್ಕಾಗಿ ಎರಡು ಟ್ಯಾಂಕಿಗಳನ್ನು ಮಾಡಿಕೊಂಡಿದ್ದಾರೆ. ಹಿಂದೆ ಒಗದಿಯ ಮೂಲಕ ತೋಟದ ಕಾಲುವೆಗಳಲ್ಲಿ ನೀರು ನಿಲ್ಲಿಸಿ ನೀರುಣಿಸಲಾಗುತ್ತಿತ್ತು.  ಈಗ ನೀರು ಕಡಿಮೆ ಇರುವ ಕಾರಣ ತೋಟಕ್ಕೆಲ್ಲಾ ಸ್ಪ್ರಿಂಕ್ಲರ್ ಅಳವಡಿಸಿದ್ದಾರೆ.  ಸುಮಾರು ಮೂವತ್ತು ಅಡಿ ಮೇಲಿನಿಂದ ನೀರು ಬರುವ ಕಾರಣ ನೀರಿನ ಒತ್ತಡದಿಂದಲೇ ಸ್ಪ್ರಿಂಕ್ಲರ್ ಕೆಲಸ ಮಾಡುತ್ತಿದೆ.  ಆರರಿಂದ ಎಂಟು ಅಡಿಗಳಷ್ಟು ಎತ್ತರ-ಅಗಲ ನೀರು ಹಾರುತ್ತದೆ.  ನೀರು ಕಡಿಮೆಯಾದರೂ ತೋಟಕ್ಕೆ ಕೊರತೆ ಎನಿಸಿಲ್ಲ.  ಮನೆಬಳಕೆಗೂ, ಕುಡಿಯುವುದಕ್ಕೂ ಕಡಿಮೆಯಾಗಿಲ್ಲ.

ಇದನ್ನು ದಾಖಲಿಸುತ್ತಿರುವಾಗಲೇ ಹೊಸನಗರ ತಾಲ್ಲೂಕಿನ ಹನಿಯ ಗ್ರಾಮದಲ್ಲಿ ಅಬ್ಬಿ ನೀರನ್ನು ನಾಲ್ಕಾರು ಮನೆಯವರು ಹಂಚಿಕೊಂಡಿದ್ದಾರೆ ಎನ್ನುವ ಸುದ್ದಿ ಸಿಕ್ಕಿತು.  ತಕ್ಷಣ ಹನಿಯದ ಪರಿಸರ ಕಾರ್ಯಕರ್ತ ರವಿಯವರ ಭೇಟಿ.  ಅಬ್ಬಿ ಕುರಿತಾಗಿ ವಿಚಾರ ಮಾಡಿದಾಗ ಅವರು ಅಬ್ಬಿಯ ಮೂಲಕ್ಕೆ ಕರೆದುಕೊಂಡು ಹೋದರು.  ದಾರಿಯಲ್ಲಿ ಬೀಗ ಹಾಕಿದ ನೀರಿನ ಟ್ಯಾಂಕಿ ಕಾಣಿಸಿತು.  ಏಕಿದು ಎನ್ನುವ ಪ್ರಶ್ನೆ.  ಅದಕ್ಕೆ ಜೋಡಿಸಿದ ಒಗದಿ ಹಿಡಿದು ಇನ್ನೂ ಮುಂದುವರೆದೆವು.  ಅಲ್ಲೊಂದು ಜಲಪಾತ.  ಅಂಗೈ ಅಗಲ ನೀರು.  ಜಲಪಾತ ಸಾಕಷ್ಟು ಎತ್ತರವಾಗಿಯೂ ಇಳಿಜಾರಾಗಿಯೂ ಇತ್ತು.  ಆದರೆ ಒಂದು ಮಾರಿನಷ್ಟು ಮಾತ್ರ ಕಾಣಿಸುತ್ತಿತ್ತು.  ಉಳಿದ ಜಾಗಪೂರ್ತಿ ಝರಿಗಿಡಗಳು, ಸಣ್ಣಪುಟ್ಟ ಇತರ ಮರಗಳು ತುಂಬಿದ್ದವು.

ಜಲಪಾತದ ನೀರು ಬೀಳಲು ಚಿಕ್ಕಹೊಂಡ ನಿರ್ಮಿಸಿದ್ದರು.  ಅಲ್ಲಿ ಸಂಗ್ರಹವಾದ ನೀರು ಒಗದಿಯ ಮೂಲಕ ಬೀಗ ಹಾಕಿದ ಟ್ಯಾಂಕಿಗೆ ಹರಿಯುತ್ತಿತ್ತು.

ಬೀಗ ಹಾಕಿದ ಟ್ಯಾಂಕಿನಿಂದ ಎಡ ಕವಲು ಪ್ರಶಾಂತನ ಮನೆ, ಶಿವಮೂರ್ತಿ ಮೇಷ್ಟ್ರ ಮನೆ ಹಾಗೂ ಶಾಲೆಗೆ ಪಯಣ.  ಮತ್ತೊಂದು ಕವಲು ವಿನಾಯಕ ಭಟ್ರು, ಗಜಾನನ ಭಟ್ರು, ನಾಗಭೂಷಣ ಮಂಜ್ರೆಯವರುಗಳ ಮನೆಗೆ ಹರಿಯುತ್ತಿತ್ತು.

ಇದು ೩೨ ವರ್ಷಗಳ[ಇಸವಿ೧೯೭೦] ಹಿಂದೆ ನಾನು ಶಾಲೆಗೆ ಹೋಗುತ್ತಿದ್ದಾಗಲೂ ಇದ್ದ ವ್ಯವಸ್ಥೆ.  ನಾವೆಲ್ಲಾ ನೀರಿನ ಮೂಲ ಹುಡುಕುತ್ತಾ ಬೆಟ್ಟದ ತುದಿಯವರೆಗೂ ಹೋಗುತ್ತಿದ್ದೆವು.  ಅಲ್ಲೊಂದು ಪುಟ್ಟ ಕೆರೆಯೂ ಇದೆ.  ಅದರಿಂದಲೇ ನೀರು ಹರಿಯುತ್ತದೆ ಎನ್ನುವ ವಿವರಣೆ ಚೀಟಿಮನೆ ಗಣಪತಣ್ಣನವರದು.

ಅರ್ಚಕರಾದ ಗಜಾನನ ಭಟ್ಟರು ಇನ್ನೂ ಹಿಂದಿನ ದಿನಗಳನ್ನು[ಇಸವಿ೧೯೪೦] ನೆನೆಯುತ್ತಾರೆ.  ಅವರ ಮನೆ ಈಗಿನ ಜಲಪಾತದಿಂದ ೧೦೦ ಅಡಿಗಳಷ್ಟು ತಗ್ಗಿನಲ್ಲಿದೆ.  ಹಿಂದೆಲ್ಲಾ ಜಲಪಾತ ಅವರ ಮನೆಯ ಹಿತ್ತಲಿಗೇ ಬಂದು ಬೀಳುತ್ತಿತ್ತಂತೆ.  ಆಗಲೇ ಹೊಸನಗರ-ಉಡುಪಿ ಹೆದ್ದಾರಿ ಕೆಲಸ ಪ್ರಾರಂಭವಾಯಿತು.  ರಸ್ತೆ ಅಡ್ಡಬಂದು ಜಲಪಾತ ೫೦ ಅಡಿ ಹಿಂದೆ ಸರಿಯಿತು.  ಆಗ ರಸ್ತೆ ಅಡಿಯಿಂದ ಕಬ್ಬಿಣದ ಪೈಪ್ ಬಳಸಿ ನೀರನ್ನು ಮನೆಯವರೆಗೂ ತಂದರು.  ಮುಂದೆ ಊರಿನಲ್ಲಿ ಮನೆಗಳು ಪಾಲಾದವು.  ನೀರಿನ ಬಳಕೆದಾರರು ಹೆಚ್ಚಿದರು.  ಗುಡ್ಡದ ಮೇಲಿನ ಕಾಡು ಕಡಿಮೆಯಾಯಿತು.  ಜಲಪಾತದ ಅಕ್ಕಪಕ್ಕದಲ್ಲಿ ಮನೆಗಳು ಹೆಚ್ಚಾದವು.  ಜಲಪಾತ ಇನ್ನೂ ಹಿಂದೆ ಸರಿಯಿತು.  ಮಾರಗಲ ಬೀಳುತ್ತಿದ್ದ ನೀರು ಅಂಗೈ ಅಗಲಕ್ಕೆ ಇಳಿಯಿತು.  ಇದರಿಂದ ಎಲ್ಲರಿಗೂ ದಿನವಿಡೀ ನೀರು ಸಿಗುವುದು ಕಷ್ಟವಾಗತೊಡಗಿತು.

ದಿನವಿಡೀ ನೀರಿನ ಅವಶ್ಯಕತೆ ಯಾರಿಗೂ ಇರಲಿಲ್ಲ. ಕಾರಣ ಎಲ್ಲರ ಮನೆಯಲ್ಲೂ ಬಾವಿ ಇತ್ತು.  ತೋಟದ ಮಧ್ಯೆ ಹಳ್ಳವಿತ್ತು.  ನೀರು ಬೇಕಾಗಿರುವುದು ಕೇವಲ ಬಚ್ಚಲಮನೆಗೆ, ಪಾತ್ರೆ ತೊಳೆಯಲು ಹಾಗೂ ಜಾನುವಾರುಗಳಿಗೆ ಮಾತ್ರ.  ಹಾಗಂತ ಕಡಿಮೆ ಸಾಕು ಎಂದು ಭಾವಿಸಬೇಕಾಗಿಲ್ಲ.  ಮಲೆನಾಡಿನಲ್ಲಿ ಈಗಲೂ ನಾಲ್ಕು ಜನ, ನಾಲ್ಕು ಜಾನುವಾರುಗಳಿರುವ ಮನೆಯಲ್ಲಿ ದಿನವೊಂದಕ್ಕೆ ಉಪಯೋಗಿಸುವ ನೀರಿನ ಪ್ರಮಾಣ ಕೇವಲ ೨೦೦೦ ಲೀಟರ್ ಮಾತ್ರ.

ಊರಿನವರೆಲ್ಲಾ ಸೇರಿ ಜಲಪಾತದ ಬಳಿಯೇ ಚಿಕ್ಕ ಕೆರೆ ನಿರ್ಮಿಸಿದರು.  ಅಲ್ಲಿಂದ ಬೀಗವಿರುವ ಟ್ಯಾಂಕಿಗೆ ನೀರು.  ಶಾಲೆಯ ಬಳಿಯಲ್ಲಿರುವ ಕಾರಣ ಮಕ್ಕಳು ನೀರನ್ನು ವ್ಯರ್ಥ ಮಾಡದಿರಲಿ ಎಂದು ಟ್ಯಾಂಕಿಗೆ ಬೀಗ ಹಾಕಿದರು. ಮನೆ ಮನೆಗಳಲ್ಲಿ ಟ್ಯಾಂಕ್ ನಿರ್ಮಿಸಿಕೊಂಡರು.  ಒಬ್ಬಿಬ್ಬರೇ ಸರದಿಯಂತೆ ಟ್ಯಾಂಕ್ ತುಂಬಿಸಿಟ್ಟುಕೊಳ್ಳತೊಡಗಿದರು.

ಸದ್ಯ ಎಲ್ಲರಿಗೂ ನೀರು ಸಿಗುತ್ತಿದೆ.  ಮುಂದಿನ ದಿನಗಳಲ್ಲಿ ಇದೇ ರೀತಿ ಕಾಡು ನಿರ್ನಾಮವಾದರೆ ನೆಲದಡಿಯ ನೀರೂ ಬತ್ತಬಹುದು ಎನ್ನುವ ಚಿಂತೆ ಹನಿಯ ರವಿಯವರದು.

ಇಲ್ಲಿನ ಮಣ್ಣಿಗೆ ನೀರನ್ನು ಇಂಗಿಸುವ ಶಕ್ತಿ ಕಡಿಮೆ.  ಮೇಲ್ಪದರದಲ್ಲಿ ಮಾತ್ರ ನೀರಿದೆ.  ಆಳದ ಬಾವಿಗಳಲ್ಲಿ ನೀರಿನ ಪ್ರಮಾಣ ತೀರಾ ಕಡಿಮೆ.  ಗುಡ್ಡದ ತುದಿಯಿಂದ ನೋಡಿದರೆ ಕಾಣುವುದು ಬರೀ ಅಕೇಸಿಯಾ, ನೀಲಗಿರಿ ತೋಪುಗಳು ಮಾತ್ರ. ನೀರಿಂಗಿಸುವ ಗಿಡಗಳು ಯಾವುದಾಗಿತ್ತು ಎನ್ನುವ ಬಗ್ಗೆ ಊರಿನಲ್ಲಿ ಯಾರಿಗೂ ಗೊತ್ತಿಲ್ಲ.  ಗುಡ್ಡದ ಮೇಲಿನ ಕೆರೆ ಬತ್ತಿಹೋದರೆ ಏನು ಮಾಡಬೇಕೆಂದೂ ಗೊತ್ತಿಲ್ಲ.  ಊರಿನಲ್ಲಿ ಹಳ್ಳ, ಮನೆಯಲ್ಲಿ ಬಾವಿಯಿರುವ ಕಾರಣ ಅಬ್ಬಿಯ ಬಗ್ಗೆ ತೀರಾ ಕಾಳಜಿ ಯಾರಿಗೂ ಇಲ್ಲ.

ಮಲೆನಾಡಿನ ಎಲ್ಲಾ ಪ್ರದೇಶಗಳಲ್ಲೂ ಅಬ್ಬಿ ಸಿಗುವುದಿಲ್ಲ.  ದಟ್ಟ ಕಾಡು, ಎತ್ತರದ ಗುಡ್ಡಗಳು.  ಇವುಗಳ ಮಧ್ಯೆ ಶತಮಾನಗಳ ಹಿಂದೆ ಕೃಷಿ ಮಾಡುತ್ತಾ ಯಥೇಚ್ಛ ನೀರು ಇರುವಲ್ಲಿಯೇ ನಮ್ಮ ಪೂರ್ವಜರು ಬಂದು ನೆಲೆಸಿದರು ಎಂಬುದಕ್ಕೆ ಶಿರಸಿ ತಾಲ್ಲೂಕಿನ ಮತ್ತಿಘಟ್ಟದ ೧೮೬೫ರ ನೀರಾವರಿ ದಾಖಲೆ ಹೇಳುತ್ತದೆ.

ಅಂದಿನ ದಿನಗಳಲ್ಲೇ ಹಸೆ ಹಳ್ಳಕ್ಕೆ ಅಡ್ಡಕಟ್ಟೆ ಕಟ್ಟಿ, ಕಾಲುವೆ ಮೂಲಕ ಹರಿಸಿ ಹನ್ನೆರಡು ತಿಂಗಳುಗಳ ಕಾಲವೂ ಮನೆಯವರೆಗೂ ನೀರು ಬರುವಂತೆ ಮಾಡಿಕೊಂಡಿದ್ದರು.  ಕಾಲುವೆ ರಿಪೇರಿಗಾಗಿ ವರ್ಷಕ್ಕೆ ಮೂರಾಣೆ ಖರ್ಚು ಬರುತ್ತಿತ್ತು.  ಎಲ್ಲರಿಗೂ ಬೇಕಾದಷ್ಟು ನೀರು ಸಿಗುತ್ತಿತ್ತು.  ನೀರು ಕಡಿಮೆಯಾದ ಸರದಿಯಂತೆ ಉಪಯೋಗಿಸಬಹುದು ಎನ್ನುವ ಸಲಹೆಯೂ ಇತ್ತು.  ಈಗ್ಗೆ ೩೦ ವರ್ಷಗಳಿಂದ ಈ ಸಲಹೆ ಜಾರಿಯಲ್ಲಿದೆ.  ಸರದಿಯಲ್ಲಿ ನೀರಿನ ಬಳಕೆ ಪ್ರಾರಂಭವಾಗಿದೆ.  ನೀರಿಗಾಗಿ ಜನರ ದಾಹದೊಂದಿಗೆ ನೆಲದ ದಾಹವೂ ಹೆಚ್ಚುತ್ತಿದೆ.

ಮತ್ತಿಘಟ್ಟ, ದೇವನಮನೆ, ಮುಂಡಗನಮನೆ, ಕೆಳಗಿನ ಕೇರಿಗಳು ಸೇರಿ ೧,೦೦೦ ಜನಸಂಖ್ಯೆ [ಇಸವಿ೧೯೯೮]ಇರುವ ಗ್ರಾಮ.  ಇಲ್ಲಿ ನೀರ ನೆಮ್ಮದಿ ಬಿಟ್ಟರೆ ಇಳಿಜಾರಿನಲ್ಲಿಯೇ ಕಲ್ಲುಗೊಚ್ಚಿನ ಮಧ್ಯೆ ಕೃಷಿ ಮಾಡಬೇಕಾದ ಸಾಹಸ.  ಆಧುನಿಕತೆ ಇತ್ತೀಚೆಗೆ ಕಾಲಿಡುತ್ತಿದೆ.

ಸುಮಾರು ೨೩೦ ಎಕರೆ ಅಡಿಕೆ ತೋಟದ ಕೃಷಿಗಾಗಲೀ ಅಥವಾ ಸುಮಾರು ೨೦೦ ಮನೆಗಳಿಗಾಗಲೀ ನೀರಿನ ಮೂಲ ಅಬ್ಬಿ ಮಾತ್ರ.  ಮತ್ತಿಘಟ್ಟದ ದತ್ತಾತ್ರೇಯ ದೀಕ್ಷಿತರ ಪ್ರಕಾರ ಮೇಲಿನ ಕೇರಿಯಲ್ಲಿರುವ ೮೦ ಮನೆಗಳ ಪೈಕಿ ಆರು ಮನೆಗಳಲ್ಲಿ ಬಾವಿಗಳಿದ್ದರೂ ಬಳಕೆಯಲ್ಲಿಲ್ಲ.  ಕೆಳಗಿನಕೇರಿಯಲ್ಲಿ ೪೦ ಮನೆಗಳಲ್ಲಿ ಒಂದೂ ಬಾವಿಯಿಲ್ಲ.  ಕೆರೆ-ಹೊಂಡಗಳೂ ಇಲ್ಲ.  ಪಂಪ್‌ಸೆಟ್ ಅಂತೂ ಕೇಳುವುದೇ ಬೇಡ.  ಬರೀ ಅಬ್ಬಿನೀರು ಎನ್ನುತ್ತಾರೆ.   ಒಂದೊಮ್ಮೆ ಈ ಊರಲ್ಲಿ ಬಾವಿ ತೋಡಿಸುವ ಸುದ್ದಿ ಕೇಳಿದರೂ ಆತಂಕ ಪ್ರಾರಂಭ.  ಕಾರಣ ಅಬ್ಬಿನೀರಿನ ಕೊರತೆಯಾಗಿದೆಯೆಂದರೆ ಅಂತರ್ಜಲವೂ ಇಲ್ಲಿ ಕಷ್ಟ.  ಒಟ್ಟಾರೆ ನೀರಿಗೇ ಕಷ್ಟ ಎನ್ನುವುದು ಊರವರ ಅಭಿಪ್ರಾಯ.

ಹಸೆಹಳ್ಳ-ಹಿಸುಕಿನ ಹಳ್ಳಗಳೇ ದೊಡ್ಡ ಮೂಲಗಳು.  ಇದಕ್ಕೆ ಆಸರೆ ದಟ್ಟಕಾಡು.  ಈ ಹರಿವಿನಿಂದ ಮನೆಮನೆಗಳಿಗೆ ನೀರ ಕಾಲುವೆಗಳ ನಿರ್ಮಾಣ.  ಅಲ್ಲಲ್ಲಿ ತಡೆಗಟ್ಟೆಗಳು.  ಹಿಂದೆಲ್ಲಾ ಮಣ್ಣಿನ ಕಾಲುವೆ ಅಥವಾ ಹರಿಣಿಗಳು ಇದ್ದವು.  ಈಗ ಪಿವಿಸಿ ಪೈಪ್ ಬಂದಿವೆ ಎನ್ನುತ್ತಾರೆ ಗುರುನಾಥ ಹೆಗಡೆ ಉಮ್ರಕೇರಿ.  ಜೊತೆಗೆ ಜೆಟ್, ಸ್ಪ್ರಿಂಕ್ಲರ್, ಡ್ರಿಪ್ ಇವೆಲ್ಲಾ ಕೃಷಿಗೆ ನೀರುಣಿಸುವ ಹೊಸ ವಿಧಾನಗಳು.

ನೀರು ಬಳಕೆಯಲ್ಲಿ ಇದೇ ಊರು ಸಹಕಾರ ತತ್ವಗಳಿಗೆ ಮಾದರಿ.  ಕುಡಿಯುವ ನೀರಿಗೆ ಪಾಳಿಯಿಲ್ಲ.  ಕೃಷಿಗೆ ಮಾತ್ರ ಪಾಳಿ.  ಜಮೀನು ಭಾಗವಾದರೂ, ಹಿಸ್ಸೆ ಏರುಪೇರಾಗಿ ವೈಮನಸ್ಸು ಆದರೂ ಯಾರದೋ ಜಮೀನಿನ ಮೂಲಕ ನೀರು ತರುವುದಕ್ಕೆ ತಕರಾರಿಲ್ಲ.

ಹಿಂದಿನ ಮಳೆಗಾಲದ ಛವಿಯನ್ನು ನೆನೆಯುವ ಅಜ್ಜಂದಿರಿಗೆ ಈಗಿನ ಮಳೆಯು ಆತಂಕ ಹೆಚ್ಚಿಸಿದೆ.  ದತ್ತಾತ್ರೇಯ ದೀಕ್ಷಿತರು ತೆಗೆಸಿದ ಕೆರೆಯಲ್ಲಿ ನೀರು ನಿಲ್ಲುತ್ತಲೇ ಇಲ್ಲ.  ಮೂರು ಕೆರೆಗಳೂ ಆಳದ ಜಲ ಸಿಗದೇ ಸೋತಿವೆ.  ಮೇಲ್ಪದರದಲ್ಲಿ ಒಸರುವ ನೀರು ಕೆರೆಗೆ ಇಳಿದು ನಾಪತ್ತೆಯಾಗುತ್ತಿದೆ.  ಕೆಳಗಿನಕೇರಿಯ ಶ್ರೀಪಾದ ಹೆಗಡೆ, ಗಣಪತಿ ಹೆಗಡೆಯವರು ೧೦ ಅಡಿಗಳಷ್ಟು ತೆಗೆಸಿದ ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ.

ಸರ್ಕಾರ ಕುಡಿಯುವ ನೀರು ಯೋಜನೆಯಲ್ಲಿ ಮೇಲಿನಕೇರಿಯಲ್ಲಿ ಕೊಳವೆಬಾವಿ ತೆಗೆಯತೊಡಗಿತು.  ಮೂರು ಕಡೆ ೨೦೦ ಅಡಿಗಳ ಆಳ ತೆಗೆದರೂ ನೀರು ಸಿಗಲಿಲ್ಲ.  ಕೊನೆಗೂ ಒಂದು ಕೊಳವೆಬಾವಿ ಸಫಲವಾಯಿತು.  ಇಲ್ಲಿಯ ಭೂಮಿ ಇಳಿಜಾರಾಗಿರುವ ಕಾರಣ ಮಳೆ ಹೊಯ್ದರೂ ಸಹ ನೀರು ಬಸಿದು ಬೆಂಗಾಡಾಗಿ ಹೋಗುತ್ತದೆ.  ಕೇವಲ ಮರಗಿಡಗಳು ಮಾತ್ರ ನೀರು ಹಿಡಿದಿಟ್ಟುಕೊಳ್ಳಬಲ್ಲವು.  ಮಳೆಗಾಲ ಮುಗಿಯುತ್ತಿದ್ದಂತೆ ನಾಲ್ಕು ದಿನಗಳಿಗೊಮ್ಮೆ ತೋಟಕ್ಕೆ ನೀರು ನೀಡಲೇಬೇಕು ಎನ್ನುತ್ತಾರೆ ನಾರಾಯಣ ವೈದ್ಯ.

ಅದಕ್ಕಾಗಿಯೇ ಸುಣಜೋಗಿನ ಕೇರಿಯಲ್ಲಿ ಎಲ್ಲರೂ ಚಿಕ್ಕ ಚಿಕ್ಕ ಟ್ಯಾಂಕ್ ಮಾದರಿಯ ಜಂಬಿಟ್ಟಿಗೆ ಕಲ್ಲಿನ ಕೆರೆ ನಿರ್ಮಿಸಿಕೊಂಡಿದ್ದಾರೆ.  ಇದರಲ್ಲಿ ನೀರು ತುಂಬಿಸಿಕೊಂಡು ಬೇಕಾದಾಗ ಮನೆಬಳಕೆಗೆ ಹಾಗೂ ಕೃಷಿಗೆ ಉಪಯೋಗಿಸುತ್ತಾರೆ.  ಹಾಗೇ ಹರಿವ ನೀರಿಗೆ ಅಲ್ಲಲ್ಲಿ ಒಡ್ಡು ಕಟ್ಟಿದ್ದಾರೆ. ಇದೆಲ್ಲಾ ಭೂಮಿಗೆ ನೀರಿಂಗಿಸುತ್ತಲೇ ಇರುತ್ತದೆ.

ಆದರೆ ಸಿದ್ದಾಪುರದ ಕೊಟಸರ-ಮುಠ್ಠಳ್ಳಿ ಗ್ರಾಮದಲ್ಲಿ ಅಬ್ಬಿ ಇಂದಿಗೂ ಸಮೃದ್ಧ.  ಬಕ್ಕೆಮನೆ ಶ್ರೀಪಾದ ಹೆಗಡೆಯವರ ಮನೆಯ ಬಚ್ಚಲಿನಲ್ಲಿ ವರ್ಷಾವಧಿ ದಿನಪೂರ್ತಿ ಒಂದಿಂಚು ಪೈಪಿನಲ್ಲಿ ನೀರು ಬೀಳುತ್ತಲೇ ಇರುತ್ತದೆ.  ಅಲ್ಲಿರುವ ಆರೇಳು ಮನೆಗಳಲ್ಲೂ ಇದೇ ನೋಟ.  ವೆನಿಲ್ಲಾ ಬಂದಮೇಲೆ ತೋಟಕ್ಕೆ ನೀರು ಹಾಯಿಸುವಿಕೆ ಹೆಚ್ಚಿದೆ.  ಅದಕ್ಕೂ ಮೊದಲು ನೀರುಕಟ್ಟು ಹಾಕುವ ಪದ್ಧತಿ ಇತ್ತು.  ಹಾಲ್ಕಣಿಯಲ್ಲಿ ಈಗಲೂ ಊರವರೆಲ್ಲಾ ಸೇರಿ ಕಟ್ಟುಹಾಕಿ ನೀರು ಹಂಚಿಕೊಳ್ಳುತ್ತಾರೆ.

ನೇರಲಮನೆ, ಹೊಲಗದ್ದೆ, ಹೊಂಡಗಾಶಿ, ಹೊಸಮನೆ, ಕಲ್ಲಬ್ಬೆ, ಎಲೆಮನೆ ಹೀಗೆ ಎಷ್ಟೆಲ್ಲಾ ಊರುಗಳಿಗೆ ಊರಿನ ಮಧ್ಯದಲ್ಲಿದಲ್ಲಿರುವ ಗೆರಣೆ ಗುಡ್ಡದ್ದೇ ನೀರು.  ಕಲ್ಚಾರಿ ಆಣಿಗುಡ್ಡದಲ್ಲಂತೂ ಬರೀ ಕಲ್ಲು. ಆದರೂ ವಿಪರೀತ ಜಲ ಎನ್ನುತ್ತಾರೆ ಕುಂಬಾರಕುಳಿಯ ರಾಮಚಂದ್ರ ಹೆಗಡೆ.

ಇವರು ಗೆರಣಿಗುಡ್ಡದ ನೀರನ್ನು ಮತ್ತೊಂದು ಗುಡ್ಡ ಬಳಸಿ ಅರ್ಧಮೈಲು ಪೈಪಿನ ಮೂಲಕ ಮನೆಯವರೆಗೂ ತಂದಿದ್ದಾರೆ.  ಹಿಂದೆ ನಮ್ಮಲ್ಲೂ ಹರಿಣಿ ಇತ್ತು.  ಹರಿಣಿ ಮೇಲೆ ಕೂತು ಕಾಗೆ ಮಲ ಮಾಡುತ್ತಿರೋದನ್ನು ನೋಡಿ ಪೈಪ್ ಹಾಕಿದೆವು ಎನ್ನುತ್ತಾರೆ ಶ್ರೀಪಾದ ಹೆಗಡೆ.

ಊರಿನಲ್ಲಿ ಎಲ್ಲರ ಮನೆಯಲ್ಲೂ ಟ್ಯಾಂಕುಗಳಿವೆ.  ಟ್ಯಾಂಕ್ ತುಂಬಿದ ಮೇಲೆ ಹರಿದುಹೋಗುತ್ತದೆ.  ಕಾಗದಾಳಿ ಮಣ್ಣಿನ ತೋಟ.  ಅತಿಯಾಗಿ ನೀರು ಬಯಸುವುದಿಲ್ಲ.  ಹಾಯಿನೀರು ಸಾಕು.  ಹೆಚ್ಚಾಗಿದ್ದದ್ದು ಬಸಿಗಾಲುವೆಗಳ ಮೂಲಕ ಹೊರಕ್ಕೆ ಹೋಗುತ್ತದೆ.  ಪಕ್ಕದ ಹೊಲಗದ್ದೆಯಲ್ಲೂ ಇದೇ ನೀರಿಗೆ ಟ್ಯಾಂಕ್ ನಿರ್ಮಿಸಿಕೊಂಡಿದ್ದಾರೆ.  ಅಲ್ಲಿಂದ ನಾಲ್ಕೈದು ಮನೆಗಳಿಗೆ ಒಂದೇ ಪೈಪಿನಲ್ಲಿ ನೀರು ಸರಬರಾಜು.

ಗೆರಣೆಗುಡ್ಡದಲ್ಲಿ ಗಿಡಮರಗಳು ದಟ್ಟವಾಗಿಲ್ಲ.  ಕರಡದ ಕಾವಲ್.  [ಕರಡ=ಒಂದು ಜಾತಿಯ ಸಣ್ಣ, ನುಣ್ಣನೆ ಹುಲ್ಲು].  ಸೊಪ್ಪಿಗಾಗಿ ಮರ ಕಡಿಯುವುದು ಇದೆ.  ಆದರೂ ನೀರು ಮಾತ್ರ ಸ್ವಲ್ಪವೂ ಕಡಿಮೆ ಆಗಿಲ್ಲ.  ಹಾಗಂತ ಮುಂದಿನ ದಿನಗಳಲ್ಲಿ ಕಡಿಮೆ ಆಗಲಾರದೆಂದೇನಿಲ್ಲ.  ಅದಕ್ಕಾಗಿಯೇ ಶ್ರೀಪಾದ ಹೆಗಡೆಯವರು ಅಲ್ಲಲ್ಲಿ ಚೆಕ್‌ಡ್ಯಾಂಗಳನ್ನು ಮಾಡಿದ್ದಾರೆ.  ಒಂದು ಚಿಕ್ಕ ಕೆರೆ, ಸಾಕಷ್ಟು ದೊಡ್ಡದಾದ ಇಂಗುಗುಂಡಿಗಳನ್ನು ನಿರ್ಮಿಸಿದ್ದಾರೆ.  ಸೊಪ್ಪಿಗಾಗಿ ಮರ ಬೋಳಿಸುತ್ತಿಲ್ಲ.  ದರಕುಗಳನ್ನು ಹೆಕ್ಕುತ್ತಿಲ್ಲ.  ಇದೆಲ್ಲಾ ಇವರೊಬ್ಬರದೇ ಕೆಲಸವಾಗಿದೆ.  ನೀರಿನ ಕೊರತೆ ಮಾತ್ರ ಊರವರನ್ನು ಪ್ರೇರೇಪಿಸಬಹುದು.

ಇವರ ಮನೆಯ ಅಬ್ಬಿ ನೀರು ರುಚಿಯಾಗಿಯೂ ಇದೆ.  ಎರಡೆರಡು ಬಾರಿ ನೆಲದಡಿಯಿಂದಲೇ ಶುದ್ಧಗೊಂಡು ಬರುವ ವ್ಯವಸ್ಥೆ.  ಮೊದಲು ಸೊಪ್ಪಿನಬೆಟ್ಟದಿಂದ ಜಿನುಗಿದ ನೀರು.  ಅಲ್ಲಿರುವ ಟ್ಯಾಂಕಿಗೆ ತುಂಬಿ ತೋಟಕ್ಕಿಳಿಯುತ್ತದೆ.  ಅಲ್ಲಿಂದ ಕೆಳಗಿನ ತೋಟದಲ್ಲಿ ಮತ್ತೆ ಒರತೆಯಾಗಿ ಏಳುತ್ತದೆ.  ಇದು ನೇರ ಮನೆಬಾಗಿಲಿಗೆ ಬರುತ್ತದೆ. ಹೀಗೆ ಭೂಮಿಯೇ ಫಿಲ್ಟರ್.  ಈ ನೀರು ಸಾಕಷ್ಟು ಎತ್ತರದಿಂದ ಇಳಿಯುವ ಕಾರಣ ಒತ್ತಡ ಹೆಚ್ಚಾಗಿಯೇ ಇದೆ.  ಸುಮಾರು ೩೦ ಅಡಿಗಳಷ್ಟು ಎತ್ತರದವರೆಗೂ ಪೈಪ್ ಮೂಲಕ ಒಯ್ಯಬಹುದು.  ಇದನ್ನು ನೋಡಿಯೇ ಟೈಡ್‌ನವರು ಇಲ್ಲಿಗೆ ಬಂದು ಸಮೀಕ್ಷೆ ನಡೆಸಿದ್ದಾರೆ.

ಇಲ್ಲಿ ಮನೆ ಉಪಯೋಗಕ್ಕೆಂದು ೨ ಕೆ.ವಿ. ವಿದ್ಯುತ್ ಉತ್ಪಾದಿಸಬಹುದೆಂದೂ, ಸುಮಾರು ೪೦ ಸಾವಿರ ರೂಪಾಯಿಗಳನ್ನು ತೊಡಗಿಸಬೇಕೆಂದೂ ಯೋಜನೆಯ ಅಂದಾಜುವೆಚ್ಚವನ್ನು ಶ್ರೀಪಾದ ಹೆಗಡೆಯವರಿಗೆ ತಿಳಿಸಿದ್ದಾರೆ.  ಶ್ರೀಪಾದ ಹೆಗಡೆಯವರೂ ಇದೂ ಒಂದು ಪ್ರಯೋಗ ನಡೆದೇ ಹೋಗಲಿ ಎಂದು ತಯಾರಾಗಿದ್ದಾರೆ.  ಆದರೆ ಟೈಡ್‌ನವರು ಮತ್ತೆ ತಿರುಗಿ ಬಂದೇ ಇಲ್ಲ.

ಚಿಕ್ಕಮಗಳೂರಿನ ಅನೇಕ ಹಳ್ಳಿಗಳಲ್ಲಿ ಈ ರೀತಿಯ ಅಬ್ಬಿಗೆ ಜನರೇಟರ್ ಜೋಡಿಸಿ ಮನೆಗಾಗಿ ಕರೆಂಟ್ ಉತ್ಪಾದನೆಯನ್ನು ಅನೇಕರು ಮಾಡಿಕೊಳ್ಳುತ್ತಿದ್ದಾರೆ. ಶೃಂಗೇರಿ ಬಳಿಯ ಜಯಪುರದ ರತ್ನಾಕರರವರು ಟರ್ಬೋ ರತ್ನಾಕರ ಎಂದೇ ಪ್ರಖ್ಯಾತ.  ಇವರು ಚಿಕ್ಕ ಚಿಕ್ಕ ಅಬ್ಬಿಗಳಿಗೂ ಟರ್ಬೈನ್ ಜೋಡಿಸಿ, ಜನರೇಟರ್ ತಿರುಗಿಸಿ, ವಿದ್ಯುತ್ ಉತ್ಪಾದನೆ ಮಾಡಿ ತೋರಿಸಿದ್ದಾರೆ.  ಈಗಾಗಲೇ ೬೦ಕ್ಕೂ ಹೆಚ್ಚು ಕಡೆಗಳಲ್ಲಿ ಅಬ್ಬಿನೀರು ವಿದ್ಯುತ್ ಉತ್ಪಾದನಾ ಮೂಲವಾಗಿದೆ.  ಅನೇಕ ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ.

ಬೆಳ್ತಂಗಡಿ ತಾಲ್ಲೂಕಿನ ಎಳನೀರು ಗ್ರಾಮ ಅಬ್ಬಿಯಲ್ಲಿ ಸಮುದಾಯ ವಿದ್ಯುತ್ ಯೋಜನೆ ರೂಪಿಸಿ ೨೦ ಕೆ.ವಿ. ವಿದ್ಯುತ್ ಉತ್ಪಾದಿಸುತ್ತಿದೆ.  ಟೈಡ್ ಸಹಯೋಗದೊಂದಿಗೆ ಊರಿನ ಜನರು ೨ ಲಕ್ಷ ರೂಪಾಯಿಗಳನ್ನು ಸೇರಿಸಿ ಸ್ವತಃ ದುಡಿದು ಊರಿನಲ್ಲಿ ಹರಿವ ಮಾವಿನಸಸಿ ಹೊಳೆ ಎನ್ನುವ ಅಬ್ಬಿಗೆ ಟರ್ಬೈನ್ ಜೋಡಿಸಿ ಜನರೇಟರ್ ತಿರುಗಿಸುತ್ತಿದ್ದಾರೆ.  ವರ್ಷಾವಧಿ ಇಪ್ಪತ್ನಾಲ್ಕು ಗಂಟೆಗಳ ಕಾಲ ೪೦ ಮನೆಗಳಿಗೆ ಸತತ ವಿದ್ಯುತ್ ಸಿಗುತ್ತಿದೆ.ಇಸವಿ ೨೦೦೯ರಲ್ಲಾದ ಭೂಕುಸಿತದಿಂದಾಗಿ ವಿದ್ಯುತ್ ಉತ್ಪಾದನೆ ನಿಂತಿದೆ.

ಇಲ್ಲಿನ ಅಬ್ಬಿಯು ಗಿಡಮೂಲಿಕೆಗಳ ಮೂಲಕ ಹರಿದುಬರುವ ಕಾರಣ ಶುದ್ಧ ಹಾಗೂ ಔಷಧಿಯುಕ್ತ ಎಂದು [ಐಐಎಸ್‌ಸಿ] ಭಾರತೀಯ ವಿಜ್ಞಾನಕೇಂದ್ರದಲ್ಲಿ ಪರೀಕ್ಷೆಗೊಳಪಟ್ಟು ಸಾಬೀತಾಗಿದೆ.  ಊರಿನವರು ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಅಬ್ಬಿಯನ್ನು ಮಿನರಲ್ ವಾಟರ್‌ನಂತೆ ರೂಪಿಸಿದ್ದರು.  ಬಾಟಲಿಗೆ ತುಂಬಿ ಮಾರಾಟ ಮಾಡುವ ಯೋಜನೆಯನ್ನು ರೂಪಿಸಿದ್ದರು.  ಆದರೆ ಮಾರಾಟದ ಮಾರುಕಟ್ಟೆಯ ಹಿಡಿತ ಸುಲಭವಲ್ಲ ಎಂಬ ಕಾರಣಕ್ಕೆ ಸುಮ್ಮನುಳಿದಿದ್ದಾರೆ.

ಮುಂದಿನ ದಿನಗಳಲ್ಲಿ ಅಬ್ಬಿ ಕುಡಿಯಲು, ಮನೆಬಳಕೆಗೆ, ಕೃಷಿಗೆ, ವಿದ್ಯುತ್‌ಗೆ ಹಾಗೂ ಏನೆಲ್ಲಾ ಕಾರಣಗಳಿಗೆ ಮೂಲವಸ್ತುವಾಗುತ್ತದೆಯೋ ಊಹಿಸಲೂ ಸಾಧ್ಯವಿಲ್ಲ.  ನೀರಿನ ಕೊರತೆ, ಹಕ್ಕೊತ್ತಾಯ ಹೆಚ್ಚಿದಂತೆ ನೀರಿನ ಮೂಲಗಳೂ ಅಪಾಯಕ್ಕೆ ಈಡಾಗಬಹುದು ಅಥವಾ ಅತಿಯಾದ ಬಳಕೆಯೇ ವಿನಾಶಕ್ಕೆ ಕಾರಣವಾಗಬಹುದು.  ಸದ್ಯದಲ್ಲಿ ಮಲೆನಾಡಿನ ಅಬ್ಬಿ ಆಧರಿಸಿದ ಜನ ನೆಮ್ಮದಿಯಲ್ಲೇ ಇದ್ದಾರೆ.  ೩೦ ವರ್ಷಗಳಿಂದೀಚೆಗೆ ನೀರು ಕಡಿಮೆ ಆಗುತ್ತಿರುವ ಸೂಚನೆಯೂ ಇಲ್ಲೆಲ್ಲಾ ಸಿಕ್ಕಿದೆ.  ಆದರೆ ಮರುಪೂರಣದ ಬಗ್ಗೆ ಸೂಕ್ತ ಎಚ್ಚರಿಕೆಯನ್ನು ಸಮುದಾಯಗಳು ತೆಗೆದುಕೊಂಡಿಲ್ಲ.  ಅಭ್ಯುದಯಕ್ಕಿಂತ ಹಿನ್ನಡೆಯ ವೇಗ ಹತ್ತುಪಟ್ಟು ಹೆಚ್ಚು.  ನೆಮ್ಮದಿ ನೀರು ಪಾಲಾಗಲು ಅಬ್ಬಿಯ ಒಡಲಿನ ಮಕ್ಕಳು ಬಿಡಲಿಕ್ಕಿಲ್ಲ ಎಂಬ ನಂಬುಗೆಯು ಇಲ್ಲಿನ ಸಮುದಾಯದ ಕೆಲಸಗಳನ್ನು ಆಧರಿಸಿದೆ.