(ಕ್ರಿ.ಶ. ೧೭೧೨-೧೭೮೯) (ಕಿವುಡ-ಮೂಗರ ಭಾಷೆ)

ಇಂದು ದೂರದರ್ಶನದಲ್ಲಿ ಕಿವುಡ-ಮೂಗರಿಗಾಗಿಯೇ ವಿಶೇಷ ಸಮಾಚಾರ ಬಿತ್ತರಿಸುತ್ತಾ ಇರುವುದನ್ನು ಎಲ್ಲರೂ ಕಂಡಿರಬೇಕು. ಅಷ್ಟು ಸಾರ್ವತ್ರಿಕ ಸ್ವರೂಪ ಪಡೆದಿದೆ ಈ ಸಂಕೇತ ಭಾಷೆ. ಈ ಸಂಕೇತ ಭಾಷೆಯ ಮೂಲರೂಪವನ್ನು ಕಂಡುಹಿಡಿದವರು, ಅಬ್ಬೆ ಚಾರ್ಲಸ್ ಮೈಕೇಲ್ ಎಪೀ.

ಅಬ್ಬೆ ಚಾರ್ಲಸ್ ಮೈಕೇಲ್ ಎಪೀ ೧೭೧೨ರಲ್ಲಿ ವರ್ಸೆಲೆಸ್(ಪ್ರಾನ್ಸ್)ನಲ್ಲಿ ಜನಿಸಿದರು. ಶಾಲೆಗೆ ಹೋಗುತ್ತಿದ್ದಾಗಲೇ ಕಿವುಡ-ಮೂಗರು ಪರಸ್ಪರ ಹೇಗೆ ಸಂಪರ್ಕ ಬೆಳೆಸುತ್ತಾರೆ, ಯಾವ ಬಗೆಯ ಸಂಕೇತಗಳ ಮೂಲಕ ತಾವು ಹೇಳಬೇಕಾದ್ದನ್ನು ಸ್ಪಷ್ಟಪಡಿಸಲು ಬಯಸುತ್ತಾರೆ ಎಂಬುದರ ಬಗ್ಗೆ ಇವರು ಅಧ್ಯಯನ ಮಾಡುತ್ತಲಿದ್ದರು.

ಶತಮಾನಗಳಿಂದ ಬೆಳೆದು ಬಂದಿದ್ದ ಸಂಕೇತ ಭಾಷೆಯನ್ನು ಚೆನ್ನಾಗಿ ತಿಳಿದುಕೊಂಡ ಅಬ್ಬೆ ಎಪೀ ಶಿಕ್ಷಣ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಅಳವಡಿಸಲು ಸಾಧ್ಯವಾಗುವಂತೆ ಅದಕ್ಕೆ ವ್ಯವಸ್ಥಿತವಾದ ರೂಪವನ್ನು ಕೊಟ್ಟರು. ಸಂಕೇತ ಭಾಷೆಯ ವಿಧಾನವನ್ನು ಅಬ್ಬೆ ಸಿಕಾರ್ಡ್ ಎಂಬುವರು ಮತ್ತಷ್ಟು ವಿಕಾಸಗೊಳಿಸಿದರು. ಪರಿಣಾಮವಾಗಿ ಅಕ್ಷರಗಳನ್ನು ಮತ್ತು ಇಡೀ ಶಬ್ದಗಳನ್ನು ಅಥವಾ ವಾಕ್ಯಾಂಗ ಭಾಗಗಳನ್ನು ಸೂಚಿಸುವಂಥ ಸಂಕೇತ ಸಂಹಿತೆಯೊಂದನ್ನು ರಚಿಸಲಾಯಿತು.

ಅಬ್ಬೆ ಎಪೀ ೧೭೮೯ರಲ್ಲಿ ನಿಧನರಾದರು.