ಸಣ್ಣಗೆ ಸೋನೆ ಸುರಿಯವ ಸಂಜೆ
ಬೆಳ್ಳಗೆ ಬಿಳಿಚಿದಾಕಾಶ, ಅದರಾಚೆ
ಎಲ್ಲೋ ಸುಸ್ತಾಗಿ ಮುಳುಗುವ ಸೂರ್ಯ.
ಮುಳುಗಿದನೊ ಸತ್ತನೊ, ವರದಿ ಒಪ್ಪಿಸುವ
ಒಂದು ಕಿರಣಕ್ಕಾದರೂ ಇಲ್ಲ ಅವಕಾಶ.
ತೆರೆದ ತೆಂಗಿನ ಗರಿ ಗರಿಯ ವಾದ್ಯದ ಮೇಲೆ
ಸರಿವ ಸೋನೆಯ ಬೆರಳು ಬಾಜಿಸುವ ಸೋಬಾನೆ.
ವೈವಿಧ್ಯವಿಲ್ಲದ, ಉಸಿರಿಲ್ಲದ ಬಜಾವಣೆ.
ಯಾವ ವಿರಹಧ್ವನಿಯ ಕೊರಗಿಗಿದು ಸಂಕೇತ
ಈ ವಿಲಕ್ಷಣ ರಾಗ, ಈ ಅಭಾವಗೀತ ?