ಅವಳಿಗೆ ಪ್ರಿಯವೆಂದು ನೆನಪಿರುವ ಮಿಡಿಮಾವಿನ ಮರದ ಬುಡದಲ್ಲಿ
ತಾನೇ ಮುಂದಾಗಿ ಬಂದು ಅವಳಿಗೆ ಕಾಯಬೇಕೆಂದುಕೊಂಡಿದ್ದ ತನಗಿಂತಲು
ಅವಳೇ ಮುಂದಾಗಿ ಬಂದು ಹೀಗೆ ಅವಳು ಕಾದಿರುವುದು
ಅದೇ ಹಿಂದಿನ ಸಲಿಗೆಯಿಂದಲೋ?

ಉತ್ತುವ ನೆನಪಿಗೆ ಫಲವತ್ತಾಗುತ್ತ ಗಮನಿಸಿದ:
ಅಲ್ಲಲ್ಲಿ ಬೆಳ್ಳಿಗೂದಲು;
ಕೋಮಲವಾದ, ಈಗ ಕೊಂಚ ಸುಕ್ಕಿದಂತೆ ಕಾಣುವ ಮುಖಭಾವಕ್ಕೆ ಸಲ್ಲುವಂಥೆ
ಸಡಿಲವಾದ ಓರೆ ಬೈತಲೆಯ ಜಡೆ;
ಲಂಗತೊಟ್ಟ ಅವಳ ಎರಡು ಜಡೆಗಳ ಕಾಲದ ಅವೇ ತುಂಟ ಕಣ್ಣುಗಳು.

ಆಸೆಯಿಂದ ಕಾದಿದ್ದ  ಈ ಮುಸ್ಸಂಜೆಯಲ್ಲೂ
ನೆಮ್ಮದಿ ತರುವಂತೆ ಆಕಾಶದಲ್ಲಿ ತೇಲುವ
ಸಾಲು ಸಾಲು ಬೆಳ್ಳಕ್ಕಿಗಳು;
ಅವೇ ರೋಮಾಂಚಿತ ಅವಸರದ ಅಳಿಲುಗಳು;
ಮೊದಲಸಾರಿ ಬೆಚ್ಚಿಸಿದ್ದ  ದೂರದ ರೈಲಿನ ಶಿಳ್ಳೆ;
ಪಾರ್ಕಿನ ಆಚೆ ಇನ್ನಷ್ಟು ಬೆಳ್ಳಗಾದ ಪೊದೆ ತಲೆಯ
ಅಮಲಿನಲ್ಲಿ ತೂರಾಡುವ ಈಗ ಹಣ್ಣಾದ ಮುದುಕ.

ಹತ್ತಿರವು ಅಲ್ಲ, ದೂರವು ಅಲ್ಲ;
ಕಣ್ಣಿಟ್ಟು ನೋಡಿದಂತೆಯು ಅಲ್ಲ, ನೋಡದಂತೆಯು ಅಲ್ಲ
ಯಾವ ಅವಸರವಿಲ್ಲ ಎನ್ನುವ ಹಾಗೆ

ಅವಳು ಕಾಲು ಮಡಚಿ ನೆಟ್ಟಗೆ
ನಿನ್ನೆ ಹೀಗೇ ಕೂತಿದ್ದವೇನೊ ಎನ್ನಿಸುವಂತೆ
ಕೂತಿರುವ ಪರಿ ಯಾವತ್ತಿನ ಅವಳ ತುಂಟಾಟವಿರಬಹುದು
ಎನ್ನುವ ಭರವಸೆಯಲ್ಲಿ ತಾನು ಮತ್ತೆ ಚಿಗುರಬಹುದೆಂದು
ಕಾಲು ಚಾಚಿ ಸುಖಾಸನದಲ್ಲಿ ಕೂತ ತನ್ನನ್ನು
ಹಗುರಗೊಳಿಸುವಂತೆ ಕೈಯಾಡಿಸಿ ಕಿತ್ತ ಧೂರ್ವೆಯ ಬೇರನ್ನು ಮೂಸುತ್ತ
ಕುಶಲೋಪಚಾರದ ಮಾತಿನಲ್ಲಿ ನಸುನಗುತ್ತ ತನ್ನ ಮಾತಿಗಾಗಿ ಕಾದಳು
ಅವಸರಪಡದವಳಂತೆ.

ಅವಳ ಕೋಮಲವಾದ ಸ್ನೇಹದ ಮುಖಭಾವದಲ್ಲಿ ಮತ್ತೆ ಪಡೆಯಲಾರದಂತೆ ತಾವು
ಕಳೆದುಕೊಂಡದನ್ನು
ಗಮನಿಸಿದ.
ಇದನ್ನು ಊಹಿಸಿದಂತೆ ಅವಳ ಬೆರಳುಗಳು ಹುಲ್ಲಿನ ಮೇಲೆ ಅಭಾವದಲ್ಲಿ ಆಡಿದವು.
ಹಸಿರು ಹುಲ್ಲಿನ ನಡುವೆ ನಾಚಿದಂತೆ ಇದ್ದ ತೆಳು ನೀಲಿಯ
ವಿಷ್ಣುಕ್ರಾಂತಿಯ ಹೂವನ್ನು ಕಿತ್ತು
ಈಗ ಒರಟಾದ ತನ್ನ ಅಂಗೈ ಮೇಲೆ ಇಟ್ಟು
ತನ್ನ ಮಾತಿಗೆ ಕಾಯದವಳಂತೆ
ಸುಮ್ಮನಾದಳು.