ನಮ್ಮ ಕಮ್ಯುನಿಸ್ಟರ ದೇಶದಲ್ಲಿ
ಗುಟ್ಟಾದ ದೇವರ ಗುಡಿ ಚೆಂದ

ಬಲರೆಪ್ಪೆ ಅದುರೀತೆಂದು ಭಯ ಬೀಳುವ
ಸುಶಿಕ್ಷಿತಳ ಬೆಡಗು ಚೆಂದ

ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ
ನೀತಿವಂತ ಸಭ್ಯರ ಘನತೆಗಿಂತ
ತಂಗಿಯ ಹೇನು ಹೆಕ್ಕುತ್ತ ಏಕಾಗ್ರವಾಗಿ ಕೂತವಳ
ಕಣ್ಣು ಮೂತಿ ಚೆಂದ

ಮೂಲಕ ಮಹಾಶಯರಾದ ಪತ್ರಕರ್ತರ ಹದ್ದುಗಣ್ಣಿಗೆ ಬಿದ್ದು
ಸುದ್ದಿಯಾಗದಂತೆ ಗುಟ್ಟಲ್ಲಿ ಅರಳುವ
ಖ್ಯಾತಿವಂತರ ಗುಪ್ತ ಪ್ರಣಯ ಚೆಂದ.