ಏನೋ ಸಾವೆನ್ನುವ
‘ಅದು’ ನಿರೀಕ್ಷಿಸುತ್ತಾ ಇರೋದು
ಎಲ್ಲೋ, ಮುಂದೆಂದೋ
ಈಗಂತೂ ಅಲ್ಲ:

ಎನ್ನಿಸುವಂತೆ ಆಪ್ತರ ಲೋಕಾಭಿರಾಮದ ಮಾತು,
ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ
ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ
ಒಣಗುವ ನಾಲಗೆಗೆ ಹಿತವಾಗಲೆಂದು ಗೆಳೆಯ ತಂದ ಕಿತ್ತಲೆ ಬುಟ್ಟಿ

‘ಅದು’ ನಿರೀಕ್ಷಿಸುತ್ತಾ ಇದೆ ಎಂದು ತಿಳಿಯೋದು
ಅಹಮಿನ ಭ್ರಮೆ
‘ಅದು’ ಇದೆ
ಸುಮ್ಮನೇ, ಬಯಸದೆ, ಬೇಡದೆ ,
ಅದರ ಉದಾಸೀನಕ್ಕೆ ತಾನು ಸಲ್ಲುವ ಕ್ಷಣ
ಈಗಾದರೇನು, ನಾಳೆಯಾದರೇನು,
ನಿನ್ನೆಯು ಅದು ಹೀಗೆ ನಿರ್ಲಕ್ಷ್ಯದಲ್ಲಿ ಇತ್ತಲ್ಲ
ಎಂದು ತನ್ನ ಪಾಡಿಗೆ ಗುಲಾಬಿಯಂತೆ ಇವನೂ
ಇನ್ನೂ ಕೊಂಚ ಅರಳುತ್ತ ಇರುವಾಗ

ಕಿಟಕಿಯಾಚೆ ಕಾಮರೂಪಿ ಮೋಡಗಳ ಆಕಾಶ,
ಹುಳ ಕುಕ್ಕಿ ಹುಡುಕುವ ಆತುರದ ಹಸಿರು ಕೊಕ್ಕಿನ ಪುಟಾಣಿ ಹಕ್ಕಿ
ರೋಮಾಂಚಿತ ಕಚಕುಳಿಯ ಗುಬ್ಬಿ,
ಸೋರುವ ಸಿಂಬಳದ ಎಗ್ಗಿಲ್ಲದೆ ಚೆಂಡಾಡುವ ಚಡ್ಡಿಯ ಹುಡುಗ
ಕೂದಲನ್ನು ಕಟ್ಟುತ್ತಾ ಬಿಚ್ಚುತ್ತಾ ಗಂಡನಿಗೆ ಕಾಯುತ್ತ
ಹೊಸಿಲಿನ ಮೇಲೆ ನಿಂತ ಸೇಳೆಯ ಸೊಸೆ

ತನ್ನದೆನ್ನಿಸಿದ್ದ ಈ ಎಲ್ಲವಕ್ಕೂ
ಸಾವಕಾಶದ ಕಾಲದಲ್ಲಿ ತಾನು ಅನಗತ್ಯ ಎನ್ನುವುದು
ಹೊಳೆದು
ತೊಟ್ಟು ಕಳಚಿ
ಹೋದ.