ಎಡ್ವಿನ ಮುಯಿರ್

ಪ್ರಪಂಚವನ್ನು ಚಿರನಿದ್ದೆಗೆ ತಳ್ಳಿದ
ಏಳು ದಿನಗಳ ಯುದ್ಧ ಕೊನೆಯಾಗಿ
ಇನ್ನೇನು ಒಂದುವರ್ಷಕಳಯುವುದರ ಒಳಗೆ
ಸಂಧ್ಯಾಕಾಲ ಕತ್ತಲಿಗೆ ಜಾರುತ್ತ ಇರುವ ಹೊತ್ತಲ್ಲದ
ಹೊತ್ತಿನಲ್ಲಿ
ಬಂದೇಬಿಟ್ಟವು ಅವು
ಅಪರೂಪದ ಕುದುರೆಗಳು

ಅಷ್ಟರಲ್ಲಿ ನಾವು ಮೌನಕ್ಕೆ ಶರಣಾಗಿದ್ದೆವು
ಮೊದಲ ಕೆಲದಿನಗಳು ಎಷ್ಟು ಬಿಕೋ ಎನ್ನಿಸುತ್ತ ಇತ್ತೆಂದರೆ
ನಮ್ಮ ಉಸಿರಾಟವೇ ನಮಗೆ ಕೇಳಿಸಿದಂತಾಗಿ ದಿಗಿಲಾಗುತ್ತ ಇತ್ತು
ಎರಡನೇ ದಿನ ರೇಡಿಯೋಗಳು ತೆಪ್ಪಗಾಗಿಬಿಟ್ಟವು
ಆನ್‌ ಮಾಡಲು ನೋಡಿದೆವು; ಸುದ್ದಿಯಿಲ್ಲ, ಸದ್ದೂ ಇಲ್ಲ.
ಮೂರನೇ ದಿನ ಯುದ್ಧನೌಕೆಯೊಂದು ನಮ್ಮೆದುರು ಉತ್ತರಕ್ಕೆ ಚಲಿಸಿತು
ಅದರ ಡೆಕ್ಕಿನ ಮೇಲೆ ಹೆಣಗಳ ರಾಶಿಯಿತ್ತು
ಆರನೇ ದಿನ ಒಂದು ವಿಮಾನ ತತ್ತರಿಸಿ ಸಮುದ್ರದೊಳಗೆ ಬಿದ್ದು ಕಣ್ಮರೆಯಾಯಿತು
ಆಮೇಲೆ ನೀರವ ಮೌನ.

ರೇಡಿಯೋಗಳು ತೆಪ್ಪಗೆ
ಕೂತಿವೆ ನಮ್ಮ ಅಡುಗೆ ಮನೆಗಳಲ್ಲಿ, ಅವು ಇರುವ ಜಾಗಗಳಲ್ಲಿ, ಎಂದಿನ ಹಾಗೆ
ಆನ್‌ ಆಗಿಯೇ, ಯಾವತ್ತಿನಂತೆ ಲಕ್ಷೋಪಲಕ್ಷ ಕೋಣೆಗಳಲ್ಲಿ
ಈ ಪೃಥಿವಿಯ ಮೇಲೆ ಎಲ್ಲೆಲ್ಲೂ ಈ ಬಡಾಯಿ ಡಬ್ಬಿಗಳು
ತಣ್ಣಗೆ ಕೂತಿವೆ.

ಈಗವು ಮಾತಾಡಬಲ್ಲವಾದರೆ.
ನಟ್ಟನಡು ಮಧ್ಯಾಹ್ನ ಥಟ್ಟನೇ ಏನಾದರೂ ಮಾತಾಡಿಬಿಟ್ಟರೆ
ಸಹಿಸಲಾರೆವು ನಾವು.
ಒಂದೇ ಒಂದು ಗುಟುಕಿಗೆ ಪ್ರಪಂಚದ ಮಕ್ಕಳನ್ನೆಲ್ಲ ಕಬಳಿಸಿಬಿಟ್ಟ ಹಿಂದಿನ ಆ ಲೋಕದ
ಸುದ್ದಿಯೇ ನಮಗೆ ಬೇಡ.
ಎಲ್ಲೆಲ್ಲೋ ಯಾವುಯಾವುದೋ ರಾಜ್ಯಗಳು ಮೊಣಕಾಲು ಮಡಚಿ ದಾರುಣವೇದನೆಯಲ್ಲಿ
ಮುದುರಿಕೊಂಡು ಮಲಗಿವೆ ಎಂದು ಅನ್ನಿಸುತ್ತೆ.
ಇಂಥ ವಿಲಕ್ಷಣವಿಚಾರ ಹೊಳೆಯಿತೆಂದೇ ಅಚ್ಚರಿಯಾಗುತ್ತೆ.

ಹೊಲಗಳ ಮೇಲೆ ಟ್ರಾಕ್ಟರುಗಳು ಇಳಿಸಂಜೆಯಲ್ಲಿ
ಅನಾಥ ಪಿಶಾಚಿಗಳಂತೆ ಮುಗುಂ ಅಗಿ ಮುಸುಕುಹಾಕಿ ಕಾದಿರುವಂತೆ
ಭಾಸವಾಗುತ್ತವೆ.
ಅವುಗಳ  ಪಾಡಿಗೆ ಅವನ್ನು ಕ್ರಮೇಣ ತುಕ್ಕಾಗಿ, ಧೂಳಾಗಿ, ಮಣ್ಣಿಗುದುರಿ
ಕಸಕಡ್ಡಿಜೊತೆ ಗೊಬ್ಬರವಾಗಲು ಬಿಟ್ಟಿದ್ದೇವೆ.
ನಮ್ಮವೇ ಎತ್ತುಗಳನ್ನು ಮರೆತ ಇದ್ದ ಹಳೆಯ ನೇಗಿಲುಗಳಿಗೆ ಹೂಡಿ
ಉಳುತ್ತೇವೆ ಇನ್ನು.

ಪಿತೃಪಿತಾಮಹರು ಉತ್ತಿದ್ದ ಮಣ್ಣಿಗೆ ಮರಳಿದ್ದೇವೆ.

ಆಮೇಲೆ, ಬೇಸಿಗೆಯ ಒಂದು ಸಂಜೆ
ಬಂದೇಬಿಟ್ಟವು ಅವು
ಅಪರೂಪದ ಕುದುರೆಗಳು.

ಮೊದಲು ಎಲ್ಲೋ ದೂರದ ರಸ್ತೆಯಮೇಲೆ ಲಘುವಾಗಿ ತಟ್ಟಿದ ಸದ್ದು
ಆಮೇಲೆ ಮಂದ್ರವಾದ ತಮ್ಮಟೆ ಬಾರಿಸಿದ ಸದ್ದು
ಹಿಡಿದು, ಬಿಟ್ಟು, ಹಿಡಿದು, ಬಿಟ್ಟು ಕೇಳುವ ಈ ಸದ್ದೇ
ರಸ್ತೆಯ ತಿರುವಿನಲ್ಲಿ ಗಹಗಹದ ಗುಡುಗಿನ ಸದ್ದಾಗಿ ಕೇಳುತ್ತಿರುವಾಗ
ಒಮ್ಮೆಗೇ
ಪ್ರತ್ಯಕ್ಷವಾದವು ಅವುಗಳ ತಲೆಗಳು.
ಉನ್ಮತ್ತ ಅಲೆ ಎದ್ದು ಅಪ್ಪಳಿಸದಂತೆ
ಭೀತರಾದೆವು ನಾವು.

ನಮ್ಮ ತಂದೆಯರ ಕಾಲದಲ್ಲಿ ಹೊಸ ಟ್ರಾಕ್ಟರುಗಳನ್ನು ಕೊಳ್ಳಲೆಂದು ನಾವು
ಕುದುರೆಗಳನ್ನು ಮಾರಿಬಿಟ್ಟಿದ್ದೆವು.
ಈಗ ಕುದುರೆಗಳು ನಮಗೆ ವಿಲಕ್ಷಣ ಪ್ರಾಣಿಗಳು
ಪುರಾತನ ಗುರಾಣಿಗಳ ಅಂದ ಹೆಚ್ಚಿಸುವ ಕೆತ್ತನೆಗಳು
ಶೂರಾಧಿ ಶೂರರ ಕಥೆಗಳಲ್ಲಿ ಕಾಣುವ ಚಿತ್ರಗಳು.
ಅವುಗಳ ಹತ್ತಿರಹೋಗಿ ಥರಗುಡುವ ಅವುಗಳ ಶೋಭೆಯನ್ನು ಮುಟ್ಟಿ ಸವರಲಾಗದ
ಅಂಜಿಕೆ ನಮಗೆ  ಈಗ.

ಆದರೂ ಅವು ಕಾದವು. ತಮ್ಮ ಪಟ್ಟುಬಿಡದ ಮೊಂಡಲ್ಲಿ, ಲಜ್ಜೆಯಲ್ಲಿ, ಸಂಕೋಚದಲ್ಲಿ
ಪುರಾತನರ ಅಪ್ಪಣೆ ಪಾಲಿಸಲು ನಮ್ಮ ಸ್ಥಿತಿ ಗತಿ ಕುಶಲ ಕೇಳಿ
ಗತಿಸಿದ ಕಾಲದ ನಮ್ಮ ಪ್ರಾಂಕ್ತನ ನಂಟನ್ನು ಕುದುರಿಸಲು ಬಂದವರಂತೆ
ಅವು ಕಾದವು: ತಮ್ಮ ಮೊಂಡಲ್ಲಿ ಲಜ್ಜೆಯಲ್ಲಿ ಸಂಕೋಚದಲ್ಲಿ.

ಮೊದಮೊದಲು ನಮಗೆ ಹೊಳೆಯಲೇ ಇಲ್ಲ
ನಮ್ಮ ಒಡೆತನಕ್ಕೆ, ಉಪಯೋಗಕ್ಕೆ ಸಲ್ಲುವ ಪ್ರಾಣಿಗಳು ಅವು ಎಂದು
ಅವುಗಳ ನಡುವೆ ಹೇಗೋ ಸಾಯದೇ ಉಳಿದ ಐದಾರು ಗಂಡುಮರಿಗಳೂ
ಇದ್ದವು, ನಮ್ಮ ಭಗ್ನ ಲೋಕದವೇ, ಯಾವುದೋ ಕಾಡಿಂದ ಬಂದ ಅವು
ಈಡನ್‌ ಸ್ವರ್ಗದ ಮರಿಗಳಂತೆ ಇದ್ದವು.

ಕುದುರೆಗಳು ನಮ್ಮನ್ನು ಈಗ ಹೊತ್ತು ಸಾಗುತ್ತವೆ, ನಮ್ಮ ಹೊರೆಗಳನ್ನು ಹೊರುತ್ತವೆ
ಗದ್ದೆಯನ್ನು ಉಳುತ್ತವೆ.
ಅವು ಮನಸಾರೆ ನಮಗೆ ಮಾಡುವ ಬಿಟ್ಟಿ ಚಾಕರಿ
ಹೃದಯವನ್ನು ತಿವಿಯುವಂಥದು
ನಮ್ಮ ಬಾಳು ಬದಲಾಗಿದೆ,

ಅವುಗಳ ಆಗಮನ
ನಮ್ಮ ಆರಂಭ

*

(೧೯೫೮ರಲ್ಲಿ ಎಡ್ವಿನ್‌ ಮುಯಿರ್ ಎಂಬ ಸ್ಕಾಟ್‌ ಲ್ಯಾಂಡಿನ ಕವಿ ಬರೆದ ಪದ್ಯ. ಎಲಿಯಟ್‌ ತನ್ನ ಗರಿಮೆಯಕಾಲದಲ್ಲಿ ತಾನು ನಿರ್ಲಕ್ಷಿಸಿದ ಮೇಜರ್ ಕವಿ ಇವನೆಂದೂ, ಈ ಪದ್ಯ terrifying ಎಂದೂ ಕರೆಯುತ್ತಾನೆ. ಎಲಿಯಟ್‌ನ ವೇಸ್ಟ್‌ ಲ್ಯಾಂಡ್‌ ಪದ್ಯದ ವಸ್ತುವೂ ಇದೇ. ಅಣುಬಾಂಬಿನ ಯುದ್ಧದ ಭೀಕರತೆಯನ್ನೂ, ಅರ್ಥಹೀನತೆಯನ್ನೂ, ಆಧುನಿಕ ನಾಗರಿಕತೆಯ ಪೂರ್ವದಲ್ಲಿ, ಆಗಲೂ ಸ್ವಾರ್ಥಿಯಾಗಿದ್ದ ಮಾನವನಿಗೂ ಮೃಗಲೋಕಕ್ಕೂ ಇದ್ದಸಂಬಂಧವನ್ನೂ, ತಮ್ಮ ಇಚ್ಛೆಯಿಂದಲೇ ಎನ್ನಿಸುವ ನಿಸ್ಪೃಹತೆಯಲ್ಲಿ ಅವು ಕೃತಘ್ನನಾದ ಮಾನವನಿಗೆ ಮಾಡಿದ ಸೇವೆಯನ್ನೂ ದಾರ್ಶನಿಕ ಎನ್ನಿಸುವ ಬೀಸಿನಲ್ಲೂ, ತೀವ್ರತೆಯಲ್ಲೂ ಈ ಕವನ ಸೃಷ್ಟಿಸುತ್ತದೆ, ಸ್ವತಹ ಕವಿಯೇ ಈ ಪದ್ಯದ ಕುದುರೆಗಳ ಬಗ್ಗೆ-ಸ್ವಾರ್ಥಿಯಾದ ಮನುಷ್ಯಮರೆತರೂ, ಪುರಾತನ ನಂಟನ್ನು ಮರೆಯದ ಕುದುರೆಗಳ ಬಗ್ಗೆ-ಹೇಳುವ ಮಾತುಗಳನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ. ಒಬ್ಬ ವಿದ್ಯಾರ್ಥಿಗೆ ಎಡ್ವಿನ್‌ ಮುಯಿರ್ ಬರೆದ ಮಾತುಗಳು ಇವು: ‘The horses are seeking the long lost archaic relationship, accepted by men in former times as an obvious right, so that it never occured to them that there was anything surprising in using and owning horses. It is the surprise of the return that makes them realize the beauty of that free servitude.’

ಸ್ವಇಚ್ಛೆಯಿಂದಲೇ ಎಂಬಂತೆ, ಕೃಪೆ ಎನ್ನಿಸುವಂತೆ ಕೈಗೊಂಡ ಕುದುರೆಗಳ ಕೈಂಕರ್ಯದ ಘನತೆ ಮತ್ತು ವಿಸ್ಮಯ ಮಾನವನಿಗೆ ಅರ್ಥವಾಗುವುದು ಅವು ತಾವಾಗಿಯೇ ಮಾನವನನ್ನು ಹುಡುಕಿಕೊಂಡು ಮರಳಿದಾಗ.

ಬಹಳ ಕಾಲ ಎಡ್ವಿ ನ್‌ ಮುಯಿರ್ ಎಷ್ಟುದೊಡ್ಡ ಕವಿ ಎಂಬುದು ಆ ಕಾಲದ ಫ್ಯಾಷನ್ನಿನಲ್ಲಿ ಯಾವ ದೊಡ್ಡ ವಿಮರ್ಶಕನಿಗೂ ಹೊಳೆದಿರಲಿಲ್ಲ. ನಾನು ಎಂ.ಎ. ಓದುವಾಗ ಇವನನ್ನು ಓದಿರಲಿಲ್ಲ. ಈಚಿಗೆ ಎಡ್ವಿನ್‌ ಮುಯಿರ್ ತನ್ನ ಪಾಡಿಗೆ ತಾನು ಬರೆದುಕೊಂಡಿದ್ದ ಹಿರಿತನದ ಲೇಖಕನಕೆಂದೂ ಇಂಗ್ಲಿಷ್‌ ವಾಙ್ಮಯಕ್ಕೆ ಕಾಪ್ಕಾನನ್ನು ತನ್ನ ಹೆಂಡತಿಯ ಜೊತೆ ಅನುವಾದಿಸಿ ಕೊಟ್ಟವನೆಂದೂ ಪ್ರಸಿದ್ಧನಾಗಿದ್ದಾನೆ

ಪ್ರಸಿದ್ಧನಾಗಿದ್ದಾನೆ ನಾನು ಈ ಪದ್ಯವನ್ನು ಅನುಸರಿಸುವವನಂತೆ ಅನುವಾದಿಸಿದ್ದೇನೆ. ಅಂದರೆ ಆಧಾರ ಮೂಲದ ಪದ್ಯಮಾತ್ರವಲ್ಲ; ಅದು ನನಗೆ ಕೊಟ್ಟ ಸಂತೋಷ).