ಅನಂತಮೂರ್ತಿ ಅವರ ಈ ಸಂಕಲನ ಹಲವು ಕಾರಣಗಳಿಗಾಗಿ ಮುಖ್ಯವಾಗಿದೆ. ಬದುಕಿನ ಮಾಗುವಿಕೆ ಈ ಸಂಕಲನದ ಪ್ರಧಾನಧಾರೆಗಳಲ್ಲೊಂದು. ಇಂಥದೇ ಪ್ರಕ್ರಿಯೆಯನ್ನು ಅಡಿಗರ ‘ಬಾ ಇತ್ತ ಇತ್ತ’ ಸಂಕಲನದಲ್ಲಿಯೂ, ರಾಮಚಂದ್ರ ಶರ್ಮರ ‘ಸಪ್ತಪದಿ’ ಸಂಕಲನದಲ್ಲಿಯೂ ನೋಡಬಹುದು. ಮೊದಲು ಅನುಭವಗಳನ್ನು ‘Raw’ ಆಗಿಯೇ ಕಟ್ಟಿಕೊಟ್ಟ ಶರ್ಮರು, ಸಪ್ತಪದಿಯ ಕವಿತೆಗಳಲ್ಲಿ ಮಾಗಿದ, ವಿನಯವಂತಿಕೆಯಿಂದ ಒಪ್ಪಿಕೊಳ್ಳುವ, ಒಪ್ಪಿಸಿಕೊಳ್ಳುವ ನೆಲೆಯನ್ನು ಕಂಡುಕೊಳ್ಳುತ್ತಾರೆ. ಬಹುಶಃ ಬದುಕು ಕಲಿಸುವ ಪಾಠ ಇದಾಗಿರಬಹುದೇ?

ಈ ಸಂಕಲನ ಜರ್ಮನ್‌ ಭಾಷೆಯ ದೊಡ್ಡ ಕವಿ ರಿಲ್ಕೆಯ ಕವಿತೆಗಳ ಅನುವಾದಿತ ಕವಿತೆಗಳ ಸಂಗಡ ಪ್ರಕಟವಾಗುತ್ತಿದೆ. ಈ ಸಂಕಲನದ ಕವಿತೆಗಳನ್ನು ರಿಲ್ಕೆಯ ಕವಿತೆಗಳಿಗೆ ಪೂರಕವಾಗಿಯೂ, ಅಥವಾ ರಿಲ್ಕೆಯ ಕವಿತೆಗಳು ಇಲ್ಲಿಯ ಕವಿತೆಗಳಿಗೆ ಪ್ರೇರಕವಾಗಿಯಂತೆಯೂ ಓದಿಕೊಳ್ಳಬಹುದು.

ಅಭಿನವದ ಮೇಲಿನ ಅಭಿಮಾನದಿಂದ ಈ ಸಂಕಲನವನ್ನು ಪ್ರಕಟಿಸಲು ಅನುಮತಿ ನೀಡಿದ ಶ್ರೀ ಯು.ಆರ್. ಅನಂತಮೂರ್ತಿ ಅವರಿಗೆ, ಶ್ರೀಮತಿ ಎಸ್ತರ್ ಅವರಿಗೆ, ಮುಖಪುಟ ವಿನ್ಯಾಸ ಮಾಡಿಕೊಟ್ಟಿರುವ ಶ್ರೀ ಚನ್ನಕೇಶವ ಅವರಿಗೆ, ಅಕ್ಷರ ವಿನ್ಯಾಸ ಮಾಡಿಕೊಟ್ಟ ಶ್ರೀ ಶ್ರೀಧರ್ ಅವರಿಗೆ ಮತ್ತು ಮುದ್ರಿಸಿದ ಶ್ರೀ ಹೂವಪ್ಪ ಹಾಗು ಅವರ ಸಿಬ್ಬಂದಿ ವರ್ಗಕ್ಕೆ ಅಭಿನವ ಋಣಿಯಾಗಿದೆ.

. ರವಿಕುಮಾರ
ಅಭಿನವದ ಪರವಾಗಿ