ಆಹಾ, ಅದೆಷ್ಟು ಮಾದಕ ಜುಲುಮೆಯ ಗಂಧವತಿ ಪುಷ್ಪ!

ಆಸೆಯಾಗಿ ಹತ್ತಿರದಿಂದ ಮೂಸಿದರೆ
ಉಸಿರ ಬಿಸಿಗೇ ಬಾಡಿ ಉದುರೀತಲ್ಲವೇ?

ದಮ್ಮಿನ ವಸಂತದಲ್ಲಿ ಸೂಕ್ಷ್ಮ ಮೂಗಿಗೂ ಅದರ ಘಾಟು
ಹಿತವಲ್ಲವೆನ್ನುವರು, ಬಲ್ಲವರು, ಅಲ್ಲವೆ?

ಎಂದು ಅದರ ಅಲ್ಪಾಯುವಾದ ಚೆಲುವಿನ ಚಂಚಲತೆಯನ್ನು
ಕನಿಕರಿಸಿ
ಆದರೂ ದೂರದಿಂದಲೇ ಸುಖಿಸಿ
ಸಭ್ಯ ವಿಲಾಸಿ
ಮುಂದೆ ನಡೆದು
ತಿರುಗಿ ನೋಡಿದರೆ

ಅರೆ!

ಎಗ್ಗಿಲ್ಲದಂತೆ ಬಿಸಿಲು ಕಾಯುತ್ತ
ಅನೂಹ್ಯಕ್ಕೆ ಅಳುಕದಂತೆ, ಸತತ ಆಹ್ವಾನಿಸುವಂತೆ
ತೊಟ್ಟಲ್ಲಿ ಅನಾಯಾಸ ನೀಡಿಕೊಂಡ

ಅದರ ಖದೀಮ
ಬಿರಿದ ದಳಗಳ ಗುಹ್ಯದಲ್ಲಿ
ಯಾವುದೋ ಹಡಬೆ ದುಂಬಿ
ಉನ್ಮತ್ತ.
ಇನ್ನು
ಬೆಡಗಿನಲ್ಲಿ ತೋರುವ ಗಂಧ ಚೆಂದಗಳ ಚೆಲ್ಲು ತೊರೆದು
ಹದವಾಗಿ ಮಾಸಿ
ಹಗುರಾಗಿ
ದಳ ದಳ ಕಳಚಿ
ಅದು ಯಾವ ಕಾಡು ಪಕ್ಷಿಗೋ ಹಣ್ಣಾಗಲು
ಕಾ ಯು ವು ದು